ಉತ್ತರ ಕರ್ನಾಟಕದಲ್ಲಿ ಡಾ.ಬಿ.ಎಸ್.ಗದ್ದಿಗೀಮಠ ಅವರು, ದಕ್ಷಿಣ ಕರ್ನಾಟಕದಲ್ಲಿ ಕರಾಕೃ ಅವರು, ದಟ್ಟವಾದ ಕ್ಷೇತಕಾರ್ಯವನ್ನು ಮಾಡಿದುದರ ಪರಿಣಾಮವಾಗಿ ಕನ್ನಡ ಜಾನಪದದ ಉದ್ಧ-ಅಗಲಗಳು, ಆಳ-ಎತ್ತರಗಳು ವಿದ್ವಾಂಸರ ಗಮನವನ್ನು ಈ ಕಡೆಗೆ ಸೆಳೆಯಲು ಕಾರಣವಾದವು ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ತ್ರಿಪದಿಯ ರೂಪದಲ್ಲೇ ಕಾಣಿಸಿಕೊಳ್ಳುತ್ತಿದ್ದ ಗರತಿಯ ಹಾಡಿನ ಜಾಡಿನಿಂದ ಜಾನಪದ ತ್ರಿವಿಕ್ರಮನಾಗಿ ಕಾಣಿಸಿಕೊಳ್ಳಲು ಸಾಧ್ಯವಾಯಿತು. ಅಲ್ಲದೆ ಮೈಸೂರು ವಿಶ್ವವಿದ್ಯಾನಿಲಯ ಕಲ್ಪಿಸಿಕೊಟ್ಟ ಅವಕಾಶದಿಂದ ಕಾಲಡಿಯಲ್ಲಿ ಹೊರಳುತ್ತಿದ್ದ ಕನ್ನಡ ಜಾನಪದ ಕನಕ ಸಿಂಹಾಸನವನ್ನೇರುವಂತಾಯಿತು. ಪ್ರೊ.ಜೀಶಂಪ ಹಾಗೂ ಪಿ.ಆರ್.ತಿಪ್ಪೇಸ್ವಾಮಿಯವರ ಕೈಂಕರ್ಯದಿಂದ ಕನ್ನಡ ಜಾನಪದವನ್ನು ಪೂರ್ಣದೃಷ್ಟಿಯಿಂದ ನೋಡವ ಸಾಧ್ಯತೆ ಉಂಟಾಯಿತು. ಈ ಪರ್ವಕಾಲದಲ್ಲೇ ವೃತ್ತಗಾಯಕರ ಶೋಧನೆ ಕನ್ನಡ ಜನಪದ ಕಾವ್ಯಗಳ ಅಕ್ಷಯ ಭಂಡಾರವನ್ನೇ ಸೂರೆಮಾಡಿದ ಮಹತ್ಸಾಧನೆಯೂ ಆಯಿತು.

ವೃತ್ತಿಗಾಯಕರ ಕಂಠಶ್ರೀ ಹೊತ್ತು ತಂದ ಜನಪದ ಮಹಾಕಾವ್ಯಗಳಲ್ಲಿ ದೇವರ ಗುಡ್ಡರ ಮಲೆಯ ಮಾದೇಶ್ವರ, ನೀಲಗಾರರ ಮಂಟೇಸ್ವಾಮಿ ಮಹಾಕಾವ್ಯ, ಚೌಡಿಕೆಯವರು, ನೀಲಗಾರರು ಹಾಗೂ ಗೊಂದಲಿಗರೂ ಹಾಡುವ ಎಲ್ಲಮ್ಮದೇವಿಕಾವ್ಯ, ಗಣೆಯವರು ಹಾಡುವ ಜುಂಜಪ್ಪನ ಕಾವ್ಯ, ಒಗ್ಗರವರು ಹಾಡುವ ಮೈಲಾರಲಿಂಗನಕಾವ್ಯ, ದೇವರಗುಡ್ಡರು, ನೀಲಗಾರರು, ತಂಬೂರಿಯವರು ಹಾಗೂ ಕರಪಾಲದವರು ಹಾಡುವ ಜನಪದ ಬಸವಪುರಾಣ, ದಕ್ಷಿಣ ಕನ್ನಡದ ಸಿರಿ, ಕೊಡಗಿನ ಬಾಯಿನ ಇವಲ್ಲದೆ ವಿವಿಧ ವೃತ್ತಿಗಾಯಕರಲ್ಲಿ ಹಾಗೂ ಹೆಂಗಸರ ಹಾಡ್ಗತೆಗಳಲ್ಲಿ ಸಿಗುವ ಜನಪದರಾಮಾಯಣ, ಜನಪದ ಮಹಾಭಾರತಗಳು ಸಧ್ಯಕ್ಕೆ ಗುರುತಿಸಲಾಗಿರುವ ಜನಪದ ಮಹಾಕಾವ್ಯಗಳು. ಆದರೆ ವ್ಯಾಪಕವಾದ ಕ್ಷೇತ್ರಕಾರ್ಯದ ಕೊರತೆಯಿಂದ ಮಹಾಕಾವ್ಯಗಳ ಅಧ್ಯಯನ ಇನ್ನೂ ಅಪೂರ್ಣವಾಗಿಯೇ ಉಳಿದಿದೆ ಎನ್ನದೆ ವಿಧಿಯಿಲ್ಲ.

ರಾಮಾಯಣ ಮಹಾಭಾರತಗಳು ಅವುಗಳ ಕರ್ತೃಗಳನ್ನು ಮರೆಸುವಷ್ಟರ ಮಟ್ಟಿಗೆ ಬೆಳೆದಿವೆಯೆಂಬುದು ಸಾಮಾನ್ಯರಿಗೆ ವಾಲ್ಮೀಕಿ ವ್ಯಾಸರು ಗೊತ್ತಿಲ್ಲದಿದ್ದರೂ ಅವರ ಕಥೆಗಳು ತಿಳಿದಿವೆಯೆಂಬುದು ಒಂದು ವಾದವಾದರೆ, ಜನಪದ ಮೂಲದಿಂದಲೇ ಶಿಷ್ಟಕವಿಗಳು ಕಥಾವಸ್ತುವನ್ನು ತೆಗೆದುಕೊಂಡು ತಮ್ಮ ಬುದ್ದಿ ಸಾಮಾರ್ಥ್ಯ, ಪ್ರತಿಭಾ ಶಕ್ತಿ, ಮನೋಧರ್ಮ ಗಳಿಗೆ ತಕ್ಕಂತೆ ಒಂದು ಸ್ಪಷ್ಟರೂಪವನ್ನು ಕೊಟ್ಟಿರುವರೆಂಬುದು ಇನ್ನೊಂದುವಾದ. ಈ ಎರಡೂ ವಾದಗಳು ಪರಸ್ಪರ ಪೂರಕವಾಗಿದ್ದು ಎರಡನ್ನೂ ತಳ್ಳಿಹಾಕುವಂತಿಲ್ಲ. ಅಲ್ಲದೆ ಜಾನಪದ ಮತ್ತು ಗ್ರಂಥಪದಗಳು ಪರಸ್ಪರ ಕೊಡುಗೆಗಳುಂಟಾಗಿ ಎರಡು ಪ್ರಕಾರಗಳೂ ನಿರಂತರವಾಗಿ ಬೆಳೆಯುತ್ತಾ ಹೋಗುತ್ತವೆ. ಈ ಕಾರಣದಿಂದ ಲಿಖಿತ ರೂಪಕ್ಕಿಳಿದ ಮೇಲೂ ರಾಮಾಯಣ-ಮಹಾಭಾರತಗಳು ಪ್ರಕ್ಷೇಪಗಳಿಂದ ಬೆಳೆಯುತ್ತ ವಿಕಾಸಶೀಲ ಮಹಾಕಾವ್ಯಗಳು ಎಂಬ ಪ್ರಕಾರಕ್ಕೆ ಸೇರ್ಪಡೆಯಾಗಿವೆ.

ಜನಪದ ಮಹಾಕಾವ್ಯಗಳು ಎಲ್ಲೆಲ್ಲಿಯೋ ಹೇಗೆ ಹೇಗೆಯೋ ಚಲ್ಲಾಪಿಲ್ಲಾಯಾಗಿರುವುದನ್ನು ಗುರುತಿಸಿ ಇವುಗಳು ಒಂದು ಸುಬದ್ಧರೂಪದಲ್ಲಿ ಉಳಿಯಬೇಕೆಂದು ಶ್ರಮಿಸಿದ ಒಂದು ಪರಂಪರೆಯನ್ನು ಸಂಸ್ಕೃತದಲ್ಲಿ ‘ವ್ಯಾಸಪರಂಪರೆ’ ಎಂದು ಕರೆಯುವುದನ್ನು ಗಮನಿಸಿದರೆ ಕಂಠಸ್ಥ ಸಂಪ್ರದಾಯದಲ್ಲಿ ಹಾರಾಡುತ್ತಿದ್ದ ಮಹಾಭಾರತದ ಕಥೆ, ಅಷ್ಟಾದಶ ಮಹಾಪುರಾಣಗಳು, ಅಷ್ಟಾದಶ ಉಪಪುರಾಣಗಳು, ನೂರಾರು ಉಪಪುರಾಣಗಳನ್ನೆಲ್ಲ ಸಂಗ್ರಹಿಸಿ ಸಂಪಾದಿಸಿದ ವ್ಯಾಸರು ಸಂಸ್ಕೃತ ಜಾನಪದದ ಮೊದಲ ಸಂಗ್ರಹಕಾರರೆನಿಸುತ್ತಾರೆ. ಇಂಥ ಸಂಗ್ರಹಕಾರರಿಂದ ಅಕ್ಷರದ ಹಿಡಿತಕ್ಕೊಳಗಾದದ್ದು ಎಷ್ಟೋ? ಸ್ವತಂತ್ರವಾಗಿ ಓಡಾಡಿಕೊಂಡು ತಪ್ಪಿಸಿಕೊಂಡದ್ದೆಷ್ಟೋ! ಅದನ್ನೆಲ್ಲ ಹೇಳಲು ನಮಗೆ ಯಾವ ಆಧಾರಗಳೂ ಇಲ್ಲದಿದ್ದರೂ ಅಂದಿನಿಂದ ತಲೆಮಾರಿನಿಂದ ತಲೆಮಾರಿಗೆ ಸಾಗಿಬರುತ್ತಿರುವ ಈ ಕಥಾಸಾಮಾಗ್ರಿ ಆಗಾಗ ಹಿಗ್ಗುತ್ತ ಹಾಗೆಯೇ ಕುಗ್ಗತ್ತ, ಕೆಲವೊಮ್ಮೆ ಸ್ಮೃತಿಯಿಂದ ಜಾರಿಹೋದ ಭಾಗಗಳಿಗೆ ಬದಲಾಗಿ ಪುನರ್ ಸೃಷ್ಟಿಗೊಳ್ಳತ್ತ ಅಂತೆಯೇ ವ್ಯಕ್ತಿಯಿಂದ ವ್ಯಕ್ತಿಗೆ, ಊರಿನಿಂದ ಊರಿಗೆ, ಭಾಷೆಯಿಂದ ಭಾಷೆಗೆ ಅನೇಕ ಪಾಠಾಂತರಗಳನ್ನು ಹೊಂದುತ್ತ ಕಥೆಯ ಕಡಲಾಗಿದೆ. ಶಿಷ್ಟ ಕವಿಗಳ ವೈದಿಕ, ಬೌದ್ಧ, ಜೈನ ಸಂಪ್ರದಾಯಗಳಲ್ಲೇ ಅನೇಕ ಬಗೆಯ ಕಥಾ ಭೇದಗಳನ್ನು ಹೇಳುವ ರಾಮಾಯಣ ಮಹಾಭಾರತಗಳಿವೆ. ಅದರಲ್ಲೂ ಬಹುಭಾಷೆಗಳ ದೇಶವಾರು ನಮ್ಮ ಭಾರತದಲ್ಲಿ ಲಿಪಿಯನ್ನೇ ಕಾಣದ ಅನೇಕ ಭಾಷೆಗಳಿದ್ದು ಅವುಗಳಲ್ಲೆಲ್ಲ ರಾಮಾಯಣದ ಮಹಾಭಾರತಗಳಿದ್ದು ಅವುಗಳು ಶಿಷ್ಟ ಪರಂಪರೆಯಿಂದ ಬಂದ ಕಥಾವಸ್ತುಗಳಿಗಿಂತ ಭಿನ್ನ ಸ್ವರೂಪದವುಗಳಾಗಿವೆ. ಇಂಥ ಸ್ವತಂತ್ರಕಾವ್ಯಗಳು ಅನಕ್ಷರಸ್ಥ ಅನಾಮಧೇಯ ಅಮರಕವಿಗಳು ಮೆದುಳಿನ ಮಾಳಿಗೆಯಲ್ಲಿ ಹೃದಯದ ನಾಲಿಗೆಯಲ್ಲಿ ಉಳಿದು ಬಂದಿವೆ. ಹೆಸರಿಲ್ಲದ ಹಸಿರುಕವಿಗಳ ಈ ಬೃಹದ್ಗಾತ್ರದ ಮಹತ್ವಪೂರ್ಣ ಕಾವ್ಯಗಳೇ ನಮ್ಮ ಜನಪದ ಮಹಾಕಾವ್ಯಗಳು.

ವ್ಯಾಸ-ವಾಲ್ಮೀಕಿಗಳ ಕಥಾ ಚೌಕಟ್ಟಿಗೆ ಬದ್ಧರಾದ ಅಕ್ಷರಸ್ಥರನ್ನು ಅನುಲಕ್ಷಿಸದೆ ಬೆಳೆದ ಜನಪದ ಮಹಾಭಾರತ ಹಾಗೂ ರಾಮಾಯಣಗಳು ಭಾರತದಾದ್ಯಂತ ಇರುವ ಎಲ್ಲ ಭಾಷೆಗಳಲ್ಲೂ ಸಹಸ್ರ ಸಹಸ್ರ ಪಾಠಗಳಿಂದ, ಪಾಠಾಂತರಗಳಿಂದ ಲಭ್ಯವಾಗುತ್ತಿವೆ. ಕರ್ನಾಟಕದ ಪರಿಮಿತಿಯಲ್ಲಿ ಇವುಗಳು ಇನ್ನುಳಿದ ಮಲೆಯ ಮಾದೇಶ್ವರ, ಮಂಟೇಸ್ವಾಮಿ, ಮೈಲಾರಲಿಂಗ, ಎಲ್ಲಮ್ಮದೇವಿ, ಜುಂಜಪ್ಪರಂತೆ ಒಂದು ಧಾರ್ಮಿಕ ವೃತ್ತಿಗಾಯಕರ ಹಿಡಿತಕ್ಕೆ ಸಿಕ್ಕಿಲ್ಲದಿರುವುದೇ ಇವು ಎಲ್ಲೆಲ್ಲೂ ಕಾಣಿಸಿಕೊಳ್ಳಲು ಕಾರಣವಾಗಿದೆ. ಹೀಗಾಗಿ ಇವುಗಳ ಕಥಾರೇಖೆಗಳು, ಘಟನಾವಳಿಗಳು, ಭಾಷೆ, ಛಂದಸ್ಸುಗಳು ವೈವಿಧ್ಯಮಯವಾಗಿರುವುದನ್ನು ಕಾಣುತ್ತೇವೆ.

ರಾಮಾಯಣ-ಮಹಾಭಾರತಗಳು ಈಗಿನ ಸ್ಥಿತಿಯಲ್ಲಿ ಪುರಾಣಗಳೆನಿಸಿವೆ. ಜಾನಪದದಲ್ಲಿ ಈ ಬಗೆಯ ಕಥೆಗಳಿಗೆ ವಿಕಾಸದ ಮೂರು ಮಜಲುಗಳಿವೆ ಎನಿಸುತ್ತದೆ. ಇಂದಿನ ಪ್ರತಿಯೊಂದು ಪುರಾಣಕಥೆಗೂ ಚರಿತ್ರಾಧಾರವೊಂದು ಇರುವಂತೆ ಭಾಸವಾಗುತ್ತದೆ. ಆದರೆ ಅದು ಯಾವ ರೂಪದ್ದೆಂದು ಹೇಳಲು ಬರುವುದಿಲ್ಲ. ಒಂದು ಮೂಲದ ಘಟನೆ ಅಥವಾ ವ್ಯಕ್ತಿಯನ್ನು ಅತಿಶಯಗೊಳಿಸಲು ಅಥವಾ ಉತ್ಕರ್ಷಗೊಳಿಸಲು ಅದರ ಅಥವಾ ವ್ಯಕ್ತಿಯ ಸುತ್ತ ಅನೇಕ ಕಥೆಗಳು, ಆಚರಣೆಗಳು ನಂಬಿಕೆಗಳು ಬೆಳೆದುಕೊಂಡು ಅತಿಮಾನುಷ ಅದ್ಭುತ ವಾತವರಣವನ್ನು ಸೃಷ್ಟಿಕೊಂಡು ವಿಕಾಸಗೊಂಡಾಗ ಐತಿಹ್ಯಗಳೆನಿಸುತ್ತವೆ. ಇದರಲ್ಲಿ ಅಸಂಭಾವ್ಯ ವಿಷಯಗಳು ಇರುವಂತೆ ಸಂಭಾವ್ಯ ಸಂಗತಿಗಳು ಕಂಡು ಬರುವುದರಿಂದ ಈ ಸ್ಥಿತಿಯನ್ನು ‘ಅರ್ಧ ಚಾರಿತ್ರಿಕ’ ಎಂದು ಕರೆಯಬಹುದಾಗಿದೆ. ಇದನ್ನು ಮತ್ತು ಅತಿಶಯಗೊಳಿಸುವ ಸಲುವಾಗಿ ಜನಪದ ಇದಕ್ಕೆ ದೈವಿಕ ಆವರಣದ ದೈವಿಕ ಪಾತ್ರವನ್ನೂ ಜೋಡಿಸಿದಾಗ ಮಾರ್ಪಟ್ಟನ್ನೂ ಕಥೆ ಪುರಾಣರೂಪ ತಾಳುತ್ತದೆ. ಇದರಲ್ಲಿ ಈ ಹಿಂದೆ ಇದ್ದ ಅಲ್ಪಸ್ವಲ್ಪ ಇತಿಹಾಸದ ವಾಸನೆಯೂ ಕಳೆದು ಹೋಗುತ್ತದೆ. ಆದರೆ ಇತಿಹಾಸದ ತಿಳಿವನ್ನು ಕೆಲಮಟ್ಟಿಗೆ ಸಂಗ್ರಹವಾಗಿ ಇದು ಸಂರಕ್ಷಿಸಿಕೊಂಡಿರಬಹುದಾದರೂ ಇದರಿಂದ ನೇರ ಚಾರಿತ್ರಿಕ ಘಟನೆ ಅಥವಾ ವಿಷಯದ ಸೂಚನೆಯನ್ನು ಹೊರಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಅರ್ಥವಾಗುತ್ತದೆ. ಈ ಎಲ್ಲ ವಿಷಯಗಳಿಗೆ ರಾಮಾಯಣ ಮಹಾಭಾರತಗಳು ಹೊರತಾಗಿಲ್ಲ. ಇವು ಈ ಮೂರು ಮಜಲುಗಳನ್ನು ದಾಟಿಯೇ ಬಂದಿರಬೇಕು. ಆದ್ದರಿಂದ ಇವುಗಳನ್ನು ಪುರಾಣಗಳಾಗಿ ಪರಿವರ್ತಿತವಾದ ಇತಿಹಾಸಗಳೆಂದು ಕರೆಯುವುದರಲ್ಲಿ ಅರ್ಥವಿದೆ.

ನಮಗೆ ದೊರೆಯುವ ಈ ಮಹಾಕಾವ್ಯಗಳ ಕ್ಷೇತ್ರಕಾರ್ಯದಲ್ಲೂ ನಾವು ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಭಾರತದಾದ್ಯಂತ ಎಲ್ಲ ಭಾಷೆಗಳಲ್ಲೂ ಕಂಠಸ್ಥ ಸಂಪ್ರದಾಯಗಳಲ್ಲಿ ಲಭ್ಯವಾಗುವ ಈ ಕಾವ್ಯಗಳ ಹಲವಾರು ಪಾಠಗಳನ್ನು ಒಂದೆಡೆ ಕಲೆಹಾಕಿಕೊಂಡು ಒಂದು ಉತ್ತಮ ಪಾಠವನ್ನು ಸಿದ್ಧಪಡಿಸುವುದು ಸಾಧ್ಯವೂ ಇಲ್ಲ; ಸಾಧುವೂ ಅಲ್ಲ. ಆದ್ದರಿಂದ ಒಂದೊಂದು ಗಾಯನ ಸಂಪ್ರದಾಯದಲ್ಲೂ ದೊರೆಯುವ ಹಲವಾರು ಪಾಠಗಳನ್ನು ಸಂಗ್ರಹಿಸಿಕೊಂಡು ಆಯಾ ಸಂಪ್ರದಾಯಗಳ ಒಂದು ಶುದ್ಧಪಾಠವನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಉದಾ: ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿರುವ ತಂಬೂರಿಯವರು ಹಾಡುವ ರಾಮಾಯಣಕ್ಕೆ ಸಂಬಂಧಿಸಿದ ಹಲವಾರು ಪಾಠಗಳನ್ನಿಟ್ಟುಕೊಂಡು ಒಂದು ಶುದ್ಧಪಾಠವನ್ನು ಸಿದ್ಧಪಡಿಸುತ್ತ ಉಳಿದ ಪಾಠಗಳಲ್ಲಿ ಬರುವ ವ್ಯತ್ಯಾಸಗಳನ್ನು ಪಾಠಾಂತರಗಳಾಗಿ ಅನುಬಂಧದಲ್ಲಿ ಉಳಿಸಿಕೊಳ್ಳಬೇಕು. ಹೀಗೆಯೇ ಬೇರೆ ಬೇರೆ ಪ್ರದೇಶಗಳ, ಬೇರೆ ಬೇರೆ ಸಂಪ್ರದಾಯಗಳ, ಬೇರೆ ಬೇರೆ ಭಾಷೆಗಳ ರಾಮಾಯಣ ಮಹಾಭಾರತಗಳನ್ನು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಬೇಕಾದ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ. ಹೀಗೆ ಸಮಗ್ರ ಸರ್ವೇಕ್ಷಣ ಕಾರ್ಯದಿಂದ ಭಿನ್ನಭಿನ್ನ ಸಂಪ್ರದಾಯದ ಕಥಾವಸ್ತುಗಳನ್ನು ಉಳಿದ ಸಾಂಸ್ಕೃತಿಕ ವಿಚಾರಗಳನ್ನು ತೌಲನಿಕವಾಗಿ ವಿಶ್ಲೇಷಣೆ ಮಾಡಲು ಸಹಾಯಕವಾಗುತ್ತದೆ. ಪ್ರದರ್ಶನಸಿದ್ಧಾಂತವೊಂದೇ ಪರಮಗಂತವ್ಯವಲ್ಲದಿರುವುದರಿಂದ ತೀವ್ರಗತಿಯಲ್ಲಿ ಕ್ಷೇತ್ರಕಾರ್ಯ ನಡೆಸಿ ಎಷ್ಟೆಲ್ಲ ಸಾಧ್ಯೆವೋ ಅಷ್ಟನ್ನೂ ದಕ್ಕಿಸಿಕೊಳ್ಳಬೇಕಾಗಿದೆ.

ರಾಮಾಯಣ-ಮಹಾಭಾರತಗಳ ಕಥೆಯೋ ಕಥೆಗಳ ಪಾತ್ರವೋ ನಮ್ಮ ಬದುಕಿಗೆ ಆದರ್ಶವನ್ನೋ ನೀತಿಯನ್ನೋ ಇನ್ನಿತರ ತಿಳುವಳಿಕೆಗಳನ್ನೋ ಹೇಳುತ್ತಿರುವುದರ ದ್ಯೋತಕವಾಗಿ ವ್ಯಕ್ತಿನಾಮಗಳು, ಸ್ಥಳನಾಮಗಳು, ನಂಬಿಕೆಗಳು, ಆಚರಣೆಗಳು, ಬೈಗುಳಗಳು, ಗಾದೆಗಳು, ಒಗಟುಗಳು, ನುಡಿಕಟ್ಟುಗಳು, ವಿವರಣಾತ್ಮಕ ಕಥೆಗಳು, ಜನಪದ ನಿರುಕ್ತಿಗಳು, ಹರಿಕಥೆ ಯಕ್ಷಗಾನಬಯಲಾಟಗಳಲ್ಲೆಲ್ಲ ಅವುಗಳು ಹಾಸುಹೊಕ್ಕಾಗಿ ಬೆರೆತು ಹೋಗಿವೆ. ಹೀಗೆ ಭಾರತೀಯ ಜನಜೀವನದ ಮೇಲೆ ಈ ಎರಡು ಮಹಾಕಾವ್ಯಗಳು ಬೀರಿರುವಷ್ಟು ಗಾಢವಾದ ಪರಿಣಾಮಗಳು ಬಹುಶಃ ಬೇರೆ ಯಾವ ಕಾವ್ಯಗಳೂ ಬೀರಿಲ್ಲವೆಂದೇ ಹೇಳಬಹುದು. ಹೀಗೆ ಜಾನಪದದ ವಿವಿಧ ಪ್ರಕಾರಗಳೆಲ್ಲೆಲ್ಲ ಲಭ್ಯವಾಗುವ ಮಾಹಿತಿಗಳನ್ನೆಲ್ಲ ಸಂಗ್ರಹಿಸಿಕೊಂಡು ಈ ಕಾವ್ಯವನ್ನು ಅಧ್ಯಯನ ಮಾಡಬೇಕಾದ ಅಗತ್ಯವೂ ಇದೆ.

ಕರ್ನಾಟಕದಲ್ಲಿ ನಡೆದಿರುವ ಜನಪದರಾಮಾಯಣ ಮತ್ತು ಮಹಾಭಾರತಗಳ ಸಂಗ್ರಹ ಕಾರ್ಯವನ್ನು ನೋಡಿದರೆ ಏನು ಆಗಿಲ್ಲ ಎನ್ನುವುದಕ್ಕಿಂತ ಇಷ್ಟಾದರೂ ನಡೆದಿದೆಯಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕಾಗಿದೆ. ಹಾಗೆ ಹೇಳುವುದಾದರೆ ರಾಮಾಯಣಕ್ಕಿಂತ ಮಹಾಭಾರತದ ಸಂಗ್ರಹಕಾರ್ಯ ವ್ಯಾಪಕವಾಗಿ ನಡೆದಿರುವುದು ಕಂಡುಬರುತ್ತದೆ.

ನಮ್ಮ ಬಹಳಷ್ಟು ಗ್ರಾಮಗಳಲ್ಲಿ ರಾಮ ಮಂದಿರಗಳಿವೆ. ಈ ರಾಮಮಂದಿರಗಳು ಮದುವೆಗಳಲ್ಲಿ ಗಂಡಿನಕಡೆಯವರಿಗೆ ‘ಬಿಡದಿ’ ಉಳಿದ ದಿನಗಳಲ್ಲಿ ವ್ಯವಸಾಯಾದಿ ಕೆಲಸ ಮಾಡಿ ದುಡಿದು ಬಂದ ಜನಗಳಿಗೆ ನಾಟಕ ಕಲಿಯುವುದು, ಭಜನೆ ಮಾಡುವುದು, ಹಾಡಿಕುಣಿಯುವುದು ಮುಂತಾದ ಸಾಂಸ್ಕೃತಿಕ ಕಾರ್ಯಗಳ ಕೇಂದ್ರಸ್ಥಾನ. ರಾಮನ ಪಿತೃವಾಕ್ಯಪರಿಪಾಲನೆ, ಏಕಪತ್ನಿತ್ವವ್ರತ, ಆದರ್ಶಬ್ರಾತೃತ್ವ, ಧೀರವ್ಯಕ್ತಿತ್ವಗಳು ಗ್ರಾಮೀಣ ಜನರ ಹೃದಯವನ್ನು ಸೂರೆಗೊಂಡಿವೆ. ಈ ಕಾರಣದಿಂದ ಅವರ ಅನೇಕ ಯಕ್ಷಗಾನ ಪ್ರಸಂಗಗಳು ರಾಮಾಯಣದ ಕಥೆಯನ್ನೇ ಅವಲಂಬಿಸಿವೆ. ಗ್ರಾಮೀಣರು ತಮ್ಮ ಮಕ್ಕಳಿಗೆ ಅದರಲ್ಲೂ ಅವಳಿಗಂಡುಮಕ್ಕಳಿಗೆ ರಾಮಲಕ್ಷ್ಮಣರೆಂದು ಹೆಸರಿಡುವುದು, ಹೆಣ್ಣುಮಕ್ಕಳಾದರೆ ಸೀತಾ ಎಂದು ಕರೆಯುವುದು ರೂಢಿಯಲ್ಲಿದೆ. ಇದು ನಮ್ಮ ಜನ ಈ ವ್ಯಕ್ತಿಗಳ ಬಗೆಗೆ ಇಟ್ಟಿರುವ ಪ್ರೀತಿ ಅಭಿಮಾನ ಭಯಭಕ್ತಿಗಳ ಪ್ರತೀಕಗಳಾಗಿವೆ. ಅವರ ಸುತ್ತ ಮುತ್ತಲ ಪ್ರಕೃತಿ ವಿಶೇಷಗಳಿಗೆಲ್ಲ ರಾಮನಾಮದ ಲೇಪವಿದೆ. ಅಳಿಲಿನ ಮೈಮೇಲಿರುವ ಗುರುತುಗಳು ರಾಮ ಇಟ್ಟ ನಾಮವಾಗುತ್ತದೆ. ಅವರು ಕಂಡ ಹಣ್ಣಗಳು ರಾಮಾಫಲ ಸೀತಾಫಲಗಳಾಗುತ್ತವೆ. ಅವರು ಕುಡಿಯುವ ಪಾನೀಯ ರಾಮರಸವಾಗಿರುತ್ತದೆ. ಹರಿಯುವ ನದಿ ಲಕ್ಷ್ಮಣ ತೀರ್ಥವಾಗುತ್ತದೆ. ಸೀತೆ ಮಿಂದಮಡು ಸೀತೆಮಡುವಾಗುತ್ತದೆ. ರಾಮ ಶರವನ್ನು ಪ್ರಯೋಗಿಸಿದಾಗ ಉದ್ದವಾದ ನದಿಶರಾವತಿಯಾಗುತ್ತದೆ. ಊರವರ ಮೇಲೆಲ್ಲ ದರ್ಪದೌರ್ಜನ್ಯಗಳನ್ನು ನಡೆಸುವವನು ‘ರಾವಳ’ನಾಗುತ್ತಾನೆ. ನಿಷ್ಠಾವಂತ ಆಂಜನೇಯ ವ್ಯಕ್ತಿನಾಮಕ್ಕೆ ಅರ್ಹನಾಗುತ್ತಾನೆ. ಮನೆಮುರುಕ ಬೆಡಗಿಯರು ಶೂರ್ಪನಖಿಯೋ ಲಂಕಣಿಯೋ ಆಗಿಬಿಡುತ್ತಾರೆ; ಹೆಣ್ಣುಮಕ್ಕಳುಗಳನ್ನು ಬೈಯುವುದಕ್ಕೂ ಇವರು ಬೇಕಾಗುತ್ತಾರೆ; ನುಡಿಕಟ್ಟು ಆಗುತ್ತಾರೆ. ಅತಿಯಾಗಿ ನಿದ್ದೆಮಾಡುವವನು ಕುಂಭಕರ್ಣನಾಗುತ್ತಾನೆ. ಒಕ್ಕಲಿಗರನ್ನು ವಂಚಿಸಿ ಬ್ರಾಹ್ಮಣರ ಕಡೆಗೆ ಓಲುಕೊಂಡ ಬೂದುಗುಂಬಳಕಾಯಿಯೂ ರಾಮನ ರಾಜಕೀಯ ತಂತ್ರದ ಕಥೆಗೆ ಮೂಲವಾಗುತ್ತದೆ. ಅಯ್ಯಂಗಾರ್ ಎಂಬ ಜನಾಂಗದ ಹುಟ್ಟು ರಾಮ-ರಾವಣರ ಕದನದ ಕಾಲಕ್ಕೆ ಓಡುತ್ತದೆ. ಲಕ್ಷ್ಮಣ ಬಾಣ ಹೊರಲಾರದ ಸ್ಥಳ ಬಾಣಾವರವಾಗುತ್ತದೆ. ಲಕ್ಷ್ಮಣ ಜೇನು ಅಸಿಯಲೋಗಿ ಜೇನುನೊಣಗಳು ಮೇಲೆದ್ದಾಗ ಅವುಗಳು ಅತ್ತಿಗೆ ಸೀತೆಯನ್ನು ಎಲ್ಲಿ ಮುತ್ತಿ ಕೊಳ್ಳುತ್ತವೋ ಎಂದು ಬೆದರಿ ‘ಅತ್ತಿಗೆ ಓಡು!’ ‘ಅತ್ತಿಗೆ ಓಡು!’ ಎಂದು ಲಕ್ಷ್ಣಣನು ಕೂಗಿದ ಸ್ಥಳವೇ ‘ಅತ್ತಿಗೋಡು’ ಎಂಬ ಹೆಸರಿನ ಊರಾಗುತ್ತದೆ. ದಶರಥ ತೀರಿಕೊಂಡನೆಂಬ ಸುದ್ದಿ ತಿಳಿದು ಶೋಕಿಸುತ್ತಿದ್ದ ಶ್ರೀರಾಮನನ್ನು ಸುತ್ತುವರಿದಕೊಂಡವರು ಸಮಾಧಾನ ಪಡಿಸಿ ತಿಥಿ ಮಾಡಲು ಮತಿ ತೋರಿಸಿದ ಸ್ಥಳ ‘ತಿತ್ತಿ ಮತ್ತಿ’ ಎಂಬ ಹೆಸರಿನ ಊರಾಗುತ್ತದೆ. ಲಕ್ಷ್ಮಣ ಸಂಗ್ರಹಿಸಿಟ್ಟಿದ್ದ ಬಿದಿರಕ್ಕಿಯನ್ನು ತರಲು ಮರೆತು ಬಂದ ಸ್ಥಳ ‘ಮರೂರು’ ಎಂಬ ಊರಾಗುತ್ತದೆ. ಆಹಾರದ ವ್ಯತ್ಯಯದಿಂದ ರಾಮನ ಮೈತುಂಬ ಕಜ್ಜಿಗಳೆದ್ದು ಕೀವು ಸುರಿಯುತ್ತಿದ್ದಾಗ ಕಾವೇರಿನದಿಯಲ್ಲಿ ಮಿಂದರೆ ಕಜ್ಜಿಗಳು ವಾಸಿಯಾಗುತ್ತವೆ ಎಂದು ಯಾರೋ ಹೇಳುತ್ತಾರೆ. ಹಾಗೆ ಮೀಯಲು ಬಂದ ರಾಮ ಅಲ್ಲಿಯ ಜನಗಳಿಗೆ ನಾತ (ಕೆಟ್ಟವಾಸನೆ) ಹೊಡೆದುದರಿಂದ ರಾಮನಾಥ ಹೊಡೆದ ಸ್ಥಳ ರಾಮನಾಥಪುರ ಎಂಬ ಹೆಸರಿನ ಊರಾಗುತ್ತದೆ. ಭಾಗವಂತಿಕೆ ಮೇಳದ ದೀಪಾವಳಿದಂಡಿಗೂ ರಾಮನ ಕಥೆಯ ಹಾಡುಗಳೇ ಬೇಕಾಗುತ್ತವೆ. ಯಾರ ಆಡಳಿತ ಬಂದರೂ ದುಡಿಯುವುದು ತಪ್ಪುವುದಿಲ್ಲ ಎನ್ನುವಾಗ ‘ರಾಮ ರಾಜ್ಯವಾದ್ರೂ ರಾಗೀ ಬೀಸೋದ್ ತಪ್ಪಿಲ್ಲ’, ‘ಅಳಿಲುಭಕ್ತಿ ಮಳಲ ಸೇವೆ’ ಮುಂತಾದ ಗಾದೆಗಳಿಗೂ ರಾಮಾಯಣವೇ ಮೂಲ. ಹೀಗೆ ‘ಕೃಷ್ಣನ ಹೆಸರೇ ಲೋಕಪ್ರಿಯ’ ಎಂದೇನಿಲ್ಲ. ಇಲ್ಲೆಲ್ಲ ರಾಮನ ಹೆಸರೇ ಲೋಕಪ್ರಿಯ!

ಹೀಗೆ ನಮ್ಮ ಜನಪದರ ಜೀವನದ ತುಂಬೆಲ್ಲ ಸೇರಿಕೊಂಡಿರುವ ರಾಮಾಯಣವನ್ನು ಕುರಿತು ನಮ್ಮ ಗಾಯಕರು ಬಿಡಿ ಹಾಡುಗಳಲ್ಲದೆ ಸಮಗ್ರಕಾವ್ಯಗಳನ್ನು ಹಾಡಿ ಮನರಂಜನೆಯ ಜೊತೆಗೆ ಜೀವನ ಪಾಠಗಳನ್ನು ಬೋಧಿಸಿ ನೈತಿಕ ನೆಲೆಗಟ್ಟನ್ನು ಭದ್ರಗೊಳಿಸುತ್ತಾ ಬಂದಿದ್ದಾರೆ. ರಾಮಾಯಣಕ್ಕೆ ಸಂಬಂಧಿಸಿದ ಕೆಲವು ತ್ರಿಪದಿಗಳು, ಬಿಡಿಹಾಡುಗಳು ಆದ್ಯರ ಸಂಕಲನಗಳಲ್ಲಿದ್ದರೂ ಭಾಗವಂತಿಕೆಯ ಪದಗಳು ಬಹಳ ಹಿಂದೆಯೇ ಪ್ರಕಟವಾಗಿದ್ದು ಅವುಗಳು ಜೀಶಂಪ ಅವರ ಭಾಗವಂತಿಕೆಮೇಳ ಮತ್ತು ಮೇಟಿಕೆರೆ ಹಿರಿಯಣ್ಣನವರ ಭಾಗವಂತಿಕೆ ಪದಗಳು ಸಂಕಲನಗಳಲ್ಲಿ ಮತ್ತೆ ಕಾಣಿಸಿಕೊಂಡಿವೆ. ಆದ್ಯರ ಸಂಕಲನಗಳಲ್ಲಿ ಹನುಮಂತನನ್ನು ಕುರಿತ ಒಂದು ಕೋಲುಪದ ಕರೀಂಖಾನ ಅವರ ಸಂಕಲನದಿಂದ;

ಬಾರ್ ಹನುಮ ಮುದ್ದು ಧೀರ್ ಹನುಮ
ಲಂಕೇಯ ಸುಟ್ಟ ಕಲಿಹನುಮ| ಸೊಲ್ಲು |

ಲಂಕೇಯ ಹನುಮಯ್ನ ಸಂಪತ್ತು ನೋಡಿರಿ
ಸಂಪೀಗೆ ಮರವ ಒರಗ್ಯವ್ನೆ| ನಡೆಸೊಲ್ಲು |

ಉದ್ದಾನಿ ಹನುಮಯ ಬುದ್ದೀಲಿ ಸಮನಾರು
ಎದ್ದು ಹಾದನು ಗಗನಕ್ಕೆ|ಲಂಕೆಸುಟ್ಟು
ಬಂದು ರಾಮಾರಿಗೆ ಶರಣೆಂದ |

ಮಾಳಿಗೆ ಮನೆಸುಟ್ಟ ಅಂಗಡಂಗಡಿ ಸುಟ್ಟ
ಅಂದರಕೆ ರಾಮಣನ ಎಳೆಮೀಸೆಗಡ್ಡಸುಟ್ಟ
ಬಂದು ರಾಮಾರಿಗೆ ಶರಣೆಂದ |

ಹನುಮ ಹಗ್ಗಾವ ತಂದ ಗರುಡಾಳ ಪಿಲ್ಲಿತಂದ
ನಿಂಗೆ ವನದಲ್ಲಿ ಸೆರೆಯಿರುವಸೀತಮ್ಗೆ
ಉಂಗುರ ತಂದ ಹನುಮಯ್ಯ |

ಆನೆತೋರ ಕೆಂಡ ಅಪ್ಪಳಿಸಿ ಬರುವಾಗ
ಆಗ ಯಾರು ಲಂಕೆ ಸುಡುವೋರುರಾಮಾರ
ನೆಚ್ಚಿನ ಭಂಟ ಹನುಮಯ್ಯ |

ಇಂಥ ಅನೇಕ ಬಿಡಿಗೀತೆಗಳು ಬೇರೆ ಬೇರೆ ಸಂಕಲನಗಳಲ್ಲಿ ಪ್ರಕಟವಾಗಿವೆ.

ಕೆ.ಶಿವರಾಮ ಐತಾಳರ ದಕ್ಷಿಣ ಕನ್ನಡದ ಜನಪದ ಸಾಹಿತ್ಯ ೧೯೭೧ ಸಂಕಲನದಲ್ಲಿ ಬ್ರಾಹ್ಮಣ ಸಂಪ್ರದಾಯದ ಒಂದು ಸ್ತೋತ್ರ ಕಾವ್ಯವಿದೆ. ಇದು ರಾಮಾಯಣದ ಪ್ರತಿಯೊಂದು ಘಟನೆಯನ್ನೂ ಒಂದೊಂದೇ ಸಾಲಿನಲ್ಲಿ ಹೇಳುತ್ತ ರಾಮನ ಹಿರಿಮೆ ಗರಿಮೆಗಳನ್ನು ಸಾರುತ್ತದೆ. ನಾಲ್ಕುಪಾದಗಳ ೩೯ಪದ್ಯಗಳಲ್ಲಿ ಇದು ಒಂದು ಪದ್ಯ.

ಧರಣೀ ಸುತೆಯನೇ ವರಿಸಿದ ರಾಮ
ಧರಣೀ ಪತಿ ರಾಮ
gಶುಧರನ ಗುರುದರ್ಪವ ಭಂಗಿಸಿ
ಪುರಿಗೈದನು ರಾಮ

ನಿಯತ ಆದಿಪ್ರಾಸ ಹಾಗೂ ಭಾಷೆಗಳು ಶಿಷ್ಟವಾಗಿರುವ ಈ ಗೀತೆ ‘ಸಂಪ್ರದಾಯದ ಹಾಡು’ ಎಂಬ ಪ್ರಕಾರಕ್ಕೆ ಸೇರಿದ್ದಾಗಿದೆ.

ರಾಗೌ, ಪಿ.ಕೆ.ರಾಜಶೇಖರ, ಎಸ್.ಬಸವಯ್ಯ-ಈ ಮೂವರು ಸಂಗ್ರಹಿಸಿಕೊಟ್ಟಿರುವ ಜನಪದ ರಾಮಾಯಣ (೧೯೭೩)ದಲ್ಲಿ ಹೊನ್ನಾಜಮ್ಮ ಹೇಳಿರುವ ತ್ರಿಪದಿಕಾವ್ಯದಲ್ಲಿ ಸೀತೆಯ ಜನನ ಹಾಗೂ ಸೀತೆಯ ಅಗ್ನಿಪರೀಕ್ಷೆಗಳ ವಿವರಗಳಿವೆ. ಸೀತೆ ತನ್ನ ಪಾತಿವ್ರತ್ಯ ಪರೀಕ್ಷೆಗಾಗಿ ಮರಳಿನ ಹರವಿಯಲ್ಲಿ ನೀರನ್ನು ತುಂಬಿಕೊಂಡು ಸರ್ಪನ ಸಿಂಬೆಯನ್ನು ತಲೆಯಮೇಲಿಟ್ಟುಕೊಂಡು ಹೊತ್ತುತರಬೇಕೆನ್ನುವುದು ರೇಣುಕಾ-ಜಮದಗ್ನಿಯರ ಕಥೆಯ ಆಶಯವನ್ನು ನೆನಪಿಗೆ ತರುತ್ತದೆ. ಕೊಂಡ ಮೀಯುವ ಪ್ರಸಂಗ ಜನಜನಿತವೇ ಸರಿ.

ಈ ಸಂಕಲನದ ಎರಡನೇ ಭಾಗದಲ್ಲಿರುವ ಲವಕುಶರ ಕಥೆ ದೇವರಗುಡ್ಡರ, ನೀಲಗಾರರ, ಹೆಂಗಸರ ಹಾಡ್ಗತೆಗಳಲ್ಲಿ ದೊರೆಯುತ್ತಿದ್ದು ಈ ಕಥೆಯ ಒಂದು ಸ್ವಾರಸ್ಯಕರ ‘ಘಟನೆಯೆಂದರೆ ಕುಶ್ಚಲವುಲು’ ಮೀನುಗಳ ಕಥೆ. ಸೀತೆಯನ್ನು ಕಾಡಿಗೆ ಕಳಿಸಿದ ಕಡುದುಃಖದಿಂದ ರಾಮನು ಸುರಿಸಿದ ಕಣ್ಣೀರು ಹೊಳೆಯಾಗಿ ಹರಿಯತೊಡಗಿತು. ದುಃಖದ ಭಾರದಲ್ಲಿ ಅವನ ಮೂಗಿನ ಎರಡು ಹೊಳ್ಳೆಗಳಿಂದಲೂ ಉತ್ಪತ್ತಿಯಾದ ಗೊಣ್ಣೆಯನ್ನು ತೆಗೆದು ಎಸೆದಾಗ ಅದು ಕಣ್ಣೀರಿನ ಹೊಳೆಯಲ್ಲಿ ಬಿದ್ದು ‘ಕುಚ್ಚಲು’, ‘ಅವುಲು’ ಎಂಬ ಎರಡು ಮೀನುಗಳಾಗುತ್ತವೆ. ಅದೇ ಹೊಳೆಯಲ್ಲಿ ಬಿದ್ದು ಪ್ರಾಣಕಳೆದುಕೊಳ್ಳಲು ಯತ್ನಿಸಿದ ಸೀತೆಯನ್ನು ಆ ಮೀನುಗಳು ರಕ್ಷಿಸುತ್ತವೆ. ಅವುಗಳ ಉಪಕಾರ ಸ್ಮರಣೆಯ ಕುರುಹಾಗಿ ಅವುಗಳ ಹೆಸರನ್ನೇ ಸೀತೆ ಅವಳ ಮಕ್ಕಳಿಗಿಡುತ್ತಾಳೆ. ಶೇಷ ರಾಮಾಯಣ ಮೂಲದಿಂದ ಲವಕುಶ ಕಥೆ ಜನಪದವನ್ನು ಪ್ರವೇಶಿಸಿದೆ ಎಂದು ಭಾವಿಸಿದರೂ ‘ಕುಶಲವುಲು’ಗಳ ಕಥೆಯಂತು ಶುದ್ಧಾಂಗವಾಗಿ ಜನಪದ ಮೂಲದ್ದೆ. ಈ ಕಲ್ಪನೆ ತನಗೆ ತಾನೆ ಸುಂದರವಾಗಿದ್ದು ಪ್ರಧಾನ ಕ್ರಿಯೆಯೊಂದಿಗೆ ಹೊಂದಾಣಿಕೆ ಪಡೆದುಕೊಂಡಿದೆ. ಅಲ್ಲದೆ ಇದೊಂದು ಸಾಂಕೇತಿಕ ಚಿತ್ರವೂ ಆಗಿರುವಂತೆ ಕಾಣುತ್ತದೆ. ಲವಕುಶರಿಂದ ಸೀತೆಯ ದುಃಖ ಶಮನವಾಯಿತೆಂಬ ಆಶಯ ಇಲ್ಲಿರುವಂತೆ ಆಂತರ್ಯದಲ್ಲಿ ರಾಮನ ಅಸಹಾಯಕತೆ ಜೊತೆಗೆ ಪ್ರೀತ್ಯಭಿಮಾನದ ಶ್ರೋತ ಧ್ವನಿತವಾಗುತ್ತದೆ.

ಈವರೆಗೆ ಪ್ರಕಟವಾಗಿರುವ ರಾಮಾಯಣಕ್ಕೆ ಸಂಬಧಿಸಿದ ಜನಪದ ಕಾವ್ಯಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ತಂಬೂರಿ ಸಂಪ್ರದಾಯದ ಗಾಯಕ ಶಿಲ್ಪ ಹಾಡಿರುವ ಕಾವ್ಯವೇ ಒಂದರ್ಥದಲ್ಲಿ ಸಮಗ್ರರಾಮಾಯಣ ಎಂದು ಹೇಳಬಹುದು. ಅಂಶಗಣಗಳ ರಗಳೆ ಛಂದಸ್ಸಿನಲ್ಲಿ ಮೂಡಿ ಬಂದಿರುವ ಈ ‘ಸಂಪೂರ್ಣರಾಮಾಯಣ’ ಒಂದು ಸುದೀರ್ಘಕಾವ್ಯ. ಇದು ಶಿಷ್ಟರಾಮಾಯಣದ ಕಥೆಯನ್ನು ಅನುಸರಿಸದೆ ಭಿನ್ನಹಾದಿಯನ್ನು ಹಿಡಿದಿರುವುದು ಇಲ್ಲಿ ಎತ್ತಿ ಹೇಳಬೇಕಾದ ವಿಷಯ. ಸೀತಾಪಾತ್ರ ಪ್ರಾಧಾನ್ಯತೆಯ ಈ ಕಾವ್ಯವನ್ನು ‘ಸೀತಾಯಣ’ ಎಂದೇ ಕರೆಯಬಹುದು. ಕಾವ್ಯವು ಸೀತೆಯ ಜನನದಿಂದಲೆ ಪ್ರಾರಂಭವಾಗುತ್ತದೆ. ಸೀತೆಯ ಜನನವೃತ್ತಾಂತವೂ ಕುತೂಹಲಕಾರಿಯಾಗಿಯೇ ಇದೆ. ಇದರಲ್ಲಿ ಸೀತೆಯು ರಾವಣನ ಮಗಳು ಎಂದು ಹೇಳುವುದರಲ್ಲೇ ಸೀತೆಯ ಬದುಕಿನ ದಾರುಣ ದುರಂತವನ್ನು ಹೇಳುವ ಉದ್ದೇಶವಿರುವಂತೆ ಕಾಣುತ್ತದೆ. ಮಕ್ಕಳಿಲ್ಲವೆಂದು ಪರಿತಪಿಸುತ್ತಿದ್ದ ಮಂಡೋದರಿಯ ಮನಸ್ಸಮಾಧಾನಪಡಿಸಲೆಂದೇ ಶಿವನನ್ನು ಕುರಿತು ತಪಸ್ಸುಮಾಡಿ ಪಡೆದ ಮಕ್ಕಳ ಫಲದ ಮಾವಿನ ಹಣ್ಣನ್ನು ಮಾರ್ಗದಲ್ಲೆ ಹಸಿವು ಬಾಯಾರಿಕೆಗಳನ್ನು ತಾಳಲಾರದೆ ತಿಂದ ರಾವಣ ಗರ್ಭಧರಿಸುತ್ತಾನೆ. ನಡೆದ ವಿದ್ಯಮಾನವನ್ನೂ ಆದ ಅಚಾತುರ್ಯವನ್ನು ಮಂಡೋದರಿಗೆ ಹೇಳುತ್ತಾನೆ. ಮಕ್ಕಳಿಲ್ಲವಲ್ಲ ಎಂದು ನೋಯುತ್ತಿದ್ದ ಮಂಡೋದರಿಯ ನೋವಿಗಿಂತ ರಾವಣನ ಹೆರಿಗೆ ಬೇನೆ ಸಹಿಸಲಶಕ್ಯವಾಗುತ್ತದೆ. ಯಮಯಾತನೆಯನ್ನು ತಾಳಲಾರದೆ ಮಿಳ್ಗೆರಿಯುತ್ತಿದ್ದ ರಾವಣನಿಗೆ ಇದ್ದಕಿದ್ದಂತೆ ಒಂದು ‘ಮಾರಿಸೀನು’ ಬಂದು ಜೋರಾಗಿ ಸೀನುತ್ತಾನೆ. ಹೀಗೆ ಸೀತಾಗ ಅವನ ಮೂಗಿನಿಂದ ಸೀತೆ ಹುಟ್ಟುತ್ತಾಳೆ. ಈ ಘಟನೆ ಇಡೀ ರಾಮಾಯಣದ ಕಥಾಕಟ್ಟಡವನ್ನೇ ತನ್ನಲ್ಲಿ ಹುದುಗಿಸಿಕೊಂಡಿದೆ. ಸೀತೆಯ ಈ ಅಮಾನುಷ ಜನನ ಅನಿಷ್ಟಕಾರಕವೆಂದು ಆ ಮಗುವನ್ನು ಪೆಟ್ಟಿಗೆಯಲ್ಲಿಟ್ಟು ಗಂಗೆಯಲ್ಲಿ ತೇಲಿಬಿಡುವುದು ಕರ್ಣನ ಕಥೆಯ ಸಾದೃಶ್ಯದಿಂದ ಹುಟ್ಟಿಕೊಂಡಿರಬಹುದು ಅಥವಾ ಸ್ವತಂತ್ರವೂ ಆಗಿರಬಹುದು. ಹೀಗೆ ಬೆಳೆದುಕೊಂಡು ಹೋಗುವ ರಾಮಾಯಣದಲ್ಲಿ ಜನಕನಲ್ಲಿರುವ ಧನಸ್ಸೆತ್ತಿ ಕಬ್ಬಿಣದ ಕಾಗೆಯನ್ನು ಹೊಡೆದು ಕೊಲ್ಲುವವರಿಗೆ ಸೀತೆಯನ್ನು ಕೊಡುತ್ತೇನೆಂಬ ಜನಕನ ಘೋಷಣೆ ಒಂದು ಹೊಸ ಜೋಡಣೆ. ಇಷ್ಟಾದರೂ ಈ ಕಥೆಯ ಕೊನೆಗೆ ಬರುವ ಲವಕುಶರ ಕಥೆ ದೇವರಗುಡ್ಡರು ಹೇಳಿರುವ ಕಥೆಯ ಮುಂದೆ ಪೇಲವವಾಗುತ್ತದೆ.

ಇದೇ ಸಂಕಲನದಲ್ಲಿರುವ ‘ಸುಣ್ಕುಮಾರನಕಥೆ’ ಶಿಷ್ಟ ರಾಮಾಯಣದ ಶಂಬೂಕನ ಕಥೆಯೇ ಆಗಿದೆ. ಕೊಡಗು ಜಿಲ್ಲೆಯ ಕೂಡಿಗೆ ಗ್ರಾಮದ ಹತ್ತಿರವಿರುವ ಸುಣ್ನುಮಾರನ ಗುಡ್ಡದ ಸುತ್ತಿನ ಗ್ರಾಮಗಳಲ್ಲಿ ಪ್ರಚಲಿತವಿರುವ ಈ ಕಾವ್ಯದ ವಿವರಗಳು ಹೀಗಿವೆ: ಪಾತಾಳಲೋಕದ ಬ್ಯಾತಾಳಪುರದ ಹಲ್ಲೂರನೆಂಬುವವನು ರಾವಣನ ತಂಗಿಶೂರ್ಪನಖಿಯ ಗಂಡ ಮೂಲೋಕವನ್ನು ಗೆದ್ದು ಬಂದ ರಾವಣ ಹಲ್ಲೂರನನ್ನೂ ತನಗೆ ತಲೆಬಾಗಲು ಹೇಳಿದ. ಅದನ್ನು ಧಿಕ್ಕರಿಸಿದ ಕಾರಣದಿಂದ ತಂಗಿ ವಿಧವೆಯಾದರೂ ಚಿಂತೆಯಿಲ್ಲಯೆಂದು ರಾವಣನು ಹಲ್ಲೂರನನ್ನು ಕೊಂದ. ಈ ಹಲ್ಲೂರ-ಶೂರ್ಪನಖಿಯರ ಮಗನೇ ಸುಣ್ಕುಮಾರ. ತಂದೆಯನ್ನು ಕೊಂದ ಸೋದರ ಮಾವನ ಮೇಲೆ ಸೇಡುತೀರಿಸಿಕೊಳ್ಳಲು ದೇವತೆಗಳಿಂದ ಚಂದ್ರಾಯುಧವನ್ನು ಪಡೆಯಲು ತಪಸ್ಸು ಮಾಡುತ್ತಿದ್ದ ಸುಣ್ಕುಮಾರನ ಮೇಲೆ ಮೂಗ್ಹುತ್ತ ಬೆಳೆಯುತ್ತದೆ. ವನವಾಸದಲ್ಲಿದ್ದ ರಾಮ ಲಕ್ಷ್ಮಣರು ಆ ಸುತ್ತಿನಲ್ಲೇ ವಾಸಿಸುತ್ತಿದ್ದು ಲಕ್ಷ್ಮಣನು ಆಕಸ್ಮಿಕವಾಗಿ ಆ ದಾರಿಯಲ್ಲಿ ಬರುತ್ತಿರುವಾಗ ಆಕಾಶಮಾರ್ಗದಿಂದ ಚಂದ್ರಾಯುಧ ಇಳಿದುಬರುತ್ತಿರುವುದನ್ನು ಕಂಡು ಕೈಯೊಡ್ಡುತ್ತಾನೆ. ಕತ್ತಿ ಸುಣ್ಕುಮಾರನ ಕೈ ಸೇರುವ ಬದಲು ಲಕ್ಷ್ಮಣನ ಕೈಗೆ ಬರುತ್ತದೆ. ಅದರ ಹಂತವನ್ನು ಪರೀಕ್ಷಿಸಲು ಬೀಸಿದ ಕತ್ತಿ ಮೂಗ್ಹುತ್ತಕ್ಕೆ ತಗುಲಿ ಅದರೊಳಗಿದ್ದ ಸುಣ್ಕುಮಾರನನ್ನು ಬಲಿತೆಗೆದುಕೊಳ್ಳುತ್ತದೆ. ತನ್ನ ಮಗನ ತಪ:ಫಲವನ್ನು ಕಣ್ಣಾರೆ ಕಾಣಬೇಕೆಂದು ಬಂದ ತಾಯಿ ಶೂರ್ಪನಖಿಯು ಮಗನು ಕತ್ತರಿಸಿ ಬಿದ್ದಿರುವುದನ್ನು ಕಂಡು ಕಡುದುಃಖದಿಂದ ಪ್ರಲಾಪಿಸುತ್ತಾಳೆ. ಕೊಂದವರು ಯಾರಿರಬಹುದೆಂದು ಹುಡುಕುತ್ತ ಬಂದ ಅವಳ ಕಣ್ಣಿಗೆ ಲಕ್ಷ್ಮಣ ಬಿದ್ದಾಗ ಅವಳು ಮಗನ ಮರಣವನ್ನು ಮರೆತು ಲಕ್ಷ್ಮಣನಲ್ಲಿ ಮೋಹಪರವಶಳಾಗುತ್ತಾಳೆ. ಅಲ್ಲದೆ ತನ್ನನ್ನು ನಿರಾಕರಿಸಿದ ರಾಮಲಕ್ಷ್ಮಣರ ಮೇಲೆ ಸೇಡು ತೀರಿಸಿಕೊಳ್ಳಲೆಂದು ರಾವಣನಿಗೆ ಸುಂದರಿ ಸೀತೆಯ ವಿಚಾರಗಳನ್ನು ತಿಳಿಸಿ ಅವನ ದುರಂತಕ್ಕೂ ಕಾರಣಳಾಗುತ್ತಾಳೆ. ಸುಣ್ಕುಮಾರನ ಕಥೆ ಕೆಲವಂಶದಲ್ಲಿ ಪಂಪರಾಮಾಯಣದ ಶಂಭೂಕನ ಕಥೆಯನ್ನು ಹೋಲುತ್ತದೆಯಾದರೂ ಇದು ಒಂದು ಸ್ಥಳೀಯ ಐತಿಹ್ಯವೂ ಆಗಿದ್ದು ಸುವ್ವಲಾಲಿ ಛಂದಸ್ಸಿನ ಸುಮಧುರ ಶೈಲಿಯಲ್ಲಿ ನಿರೂಪಿತವಾಗಿದೆ.

ಕಾಳೇಗೌಡ ನಾಗವಾರ ಅವರ ಬಯಲು ಸೀಮೆಯ ಲಾವಣಿಗಳು (೧೯೭೩) ಸಂಗ್ರಹದಲ್ಲಿರುವ ಲವಕುಶರ ಕಥೆ ಸುವ್ವಿಲಾಲಿ ಚಂದಸ್ಸಿನಲ್ಲಿದ್ದು, ಕುದುರೆ ನಡಿಗೆಯಲ್ಲಿ ಕಥೆ ಸಾಗುತ್ತದೆಯಾದರೂ ವೃತ್ತಿಗಾಯಕರ ಲವಕುಶರ ಕಾಳಗದ ಸಿದ್ದಿ ಇಲ್ಲಿಲ್ಲವೆಂದೇ ಹೇಳಬೇಕು. ಮೇಟಿಕೆರೆ ಹಿರಿಯಣ್ಣನವರ ಭಾಗವಂತಿಕೆ ಪದಗಳು (೧೯೭೪) ಹಾಗೂ ಜೀಶಂಪ ಅವರ ಭಾಗವಂತಿಕೆ ಮೇಳ (೧೯೭೪) ಈ ಸಂಕಲನಗಳೆಲ್ಲ ವಿಷ್ಣುಪಾರಮ್ಯವನ್ನು ಕೊಂಡಾಡುವ ರಾಮಾಯಣಕ್ಕೆ ಸಂಬಂಧಿಸಿದ ಅನೇಕ ಪದ್ಯಭಾಗಗಳಿವೆ. ಇವೆಲ್ಲ ಶಿಷ್ಟಕಥಾ ಚೌಕಟ್ಟಿನಲ್ಲೇ ಸಾಗಿದ್ದು ನಾಲ್ಕುಪಾದಗಳ ಸಣ್ಣಪುಟ್ಟ ಪದ್ಯಗಳಾಗಿವೆ.

ಉದಾಹರಣೆಗೆ ಒಂದು ಪದ್ಯ-

ಕ್ಷೀರ ಸಾಗರದೊಳಿರಲು ಶ್ರೀ ಹರಿಯು
ಮೊರೆಯನಿಟ್ಟರು ದೇವತೆಗಳೆಲ್ಲ
ಹರಿನಿಮ್ಮ ಹಿರಿಮೆಯ ಕರುಣಿಸಿ ಎನಲು
ನಗುತ ವರವನು ಕೊಟ್ಟನು ರಾಮ

ಹೀಗೆ ರಾಮಾಯಣವನ್ನೆಲ್ಲ ಸಂಕ್ಷಿಪ್ತವಾಗಿ ಹಾಡುವ ಕಲೆ ಭಾಗವಂತಿಕೆ ಸಂಪ್ರದಾಯದ ದೀವಳಿಗೆ ದಂಡಿಗೆ ಕರತಲಾಮಲಕವಾಗಿದೆ.

ಮತಿಘಟ್ಟ ಕೃಷ್ಣಮೂರ್ತಿಯವರ ಕನ್ನಡ ಜನಪದಸಾಹಿತ್ಯ ಭಂಡಾರ (೧೯೭೫)ದಲ್ಲಿ ‘ರಾಮಾಯಣದ ಕತೆಗಳು’ ಎಂಬ ಭಾಗದಲ್ಲಿ ೭ ಕಥನಕಾವ್ಯಗಳಿವೆ. ಮೊದಲನೆಯದು ‘ರಾಮನಿಗೆ ಪ್ರಾಣಲಿಂಗಕೊಟ್ಟದ್ದು’. ಇದರ ಕಥಾವಸ್ತು ಭೂಕೈಲಾಸ ಪ್ರಕರಣವೆಂದೇ ಪ್ರಸಿದ್ಧವಾಗಿದೆ. ತಾಯಿ ಕೈಕಸಾದೇವಿಗಾಗಿ ರಾವಣನು ಪರಮೇಶ್ವರನನ್ನು ಮೆಚ್ಚಿಸಿ ಪ್ರಾಣಲಿಂಗವನ್ನು ತರಲು ಹೋಗಿ ಪಾರ್ವತಿಯನ್ನೇ ಕೇಳಿ ಪಡೆದು ಮತ್ತೆ ನಾರದರ ತಂತ್ರದಿಂದ ಪಾರ್ವತಿಯನ್ನು ಹಿಂದಕ್ಕೆ ಕೊಟ್ಟು ಮಂಡೋದರಿಯನ್ನು ತಂದುಕೊಂಡುದಲ್ಲದೆ ಮತ್ತೆ ತಪಸ್ಸುಮಾಡಿ ಪ್ರಾಣಲಿಂಗವನ್ನು ಪಡೆದುಕೊಂಡು ಬರುತ್ತಿರುವಾಗ ಗಣಪತಿಯ ತಂತ್ರದಿಂದ ಪ್ರಾಣಲಿಂಗ ಗೋಕರ್ಣದಲ್ಲಿ ನೆಲಕ್ಕಿಳಿದ ಕಥೆಯನ್ನು ಹೇಳುತ್ತದೆ. ಮಂದಾನಿಲ ರಗಳೆಯನ್ನು ಹೋಲುವ ,ಧನುಸ್ಸಿನಲ್ಲಿರುವ ಈ ಕಾವ್ಯ ಶಿಷ್ಟಭಾಷೆಯಲ್ಲಿದೆ. ಸಂಪ್ರದಾಯದ ಹಾಡುಗಳ ಪ್ರಕಾರಕ್ಕೆ ಸೇರುವ ಈ ಸಂಗ್ರಹದಲ್ಲಿ ಧನುಸ್ಸು ಎತ್ತಿದ್ದು, ಅಡಿ ಅರಸಿದ್ದು (ಸಾಂಗತ್ಯ ಛಂದಸ್ಸಿನಲ್ಲಿದೆ), ಸೇತುವೆಕಟ್ಟಿಸಿದ್ದು (ಸಾಂಗತ್ಯ ಛಂದಸ್ಸಿನಲ್ಲಿದೆ), ತಿತ್ತದ ಸಂಧಿ, ಸೇತುವೆಸಂಧಿ ಮತ್ತು ಅರುಂಧತಿ ಎಂಬ ಕಾವ್ಯಗಳು ವಿವಿಧ ಚಂದಸ್ಸಿನಲ್ಲಿವೆ.

ಪ್ರೊ.ಟಿ.ಕೇಶವಭಟ್ಟರ ಹವ್ಯಕರ ಶೋಭಾನೆಗಳು (೧೯೮೬) ಒಂದು ಬೃಹದ ಗ್ರಂಥ. ರಾಮಾಯಣಕ್ಕೆ ಸಂಬಂಧಿಸಿದಂತೆ ‘ರಾವಣ ಮಂಡೋದರಿ ಸಂವಾದ’ ಎಂಬ ಒಂದು ಕಾವ್ಯಭಾಗ ಇಲ್ಲಿದೆ. ಸೀತೆಯನ್ನು ರಾಮನಲ್ಲಿಗೆ ಕಳಿಸಿಕೊಡುವ ವಿಚಾರದಲ್ಲಿ ಈ ಸಂವಾದ ನಡೆಯುತ್ತದೆ. ಮಂಡೋದರಿ ಬಗೆ ಬಗೆಯಾಗಿ ಹೇಳಿದರೂ

ಹಾನಿಯೆಂಬುದಿಲ್ಲಎನಗೆ
ನೀರೊಳಾಡುವಂಥ
ಮೀನ ಮೊಸಳೆ ಹಿಡಿವುದುಂಟೆ
ನೀ ನೋಡೆ ಕಾಂತೆ ನೀ ನೋಡೆ ಕಾಂತೆ |

ಎನ್ನುತ್ತಾನೆ. ಅದಕ್ಕೆ ಮಂಡೋದರಿ

ಗಿಡದೊಳಗಾಡುವ ಅಳಿಲ
ಹುಲಿಯು ಬಂದು ಹಿಡಿಯುವುದುಂಟೆ
ದುರುಳತನದ ಮಾತು ಎನಗೆ
ತರವಲ್ಲ ಕಾಂತ ತರವಲ್ಲ ಕಾಂತ |

ಎನ್ನುತ್ತಾಳೆ. ಇಲ್ಲಿ ತರ್ಕ ಚಾತುರ್ಯ ಮೆಚ್ಚುವಂತೆ ಮೂಡಿ ಬಂದಿದೆ.

ಯಕ್ಷಗಾನ, ಹರಿಕಥೆಗಳಲ್ಲೂ ಶಿಷ್ಟರಾಮಾಯಣದಲ್ಲಿ ಸಿಗದಂಥ ಅನೇಕ ಪ್ರಸಂಗಗಳು ಉಳಿದು ಬಂದಿವೆ. ಇವುಗಳ ಪ್ರಸ್ತಾಪ ಈ ಲೇಖನದ ಉದ್ದೇಶವಲ್ಲದಿದ್ದರೂ ಅವುಗಳಿಂದೆಲ್ಲ ಜನಪದ ರಾಮಾಯಣದ ಕಥಾಭಂಡಾರ ಶ್ರೀಮಂತವಾಗಿದೆಯೆಂದು ಹೇಳಬಹುದು.

ಜನಪದ ರಾಮಾಯಣಕ್ಕಿಂತಲೂ ಜನಪದ ಮಹಾಭಾರತ ಅತ್ಯಂತ ಸಮೃದ್ಧವಾಗಿದೆ. ದಕ್ಷಿಣ ಕರ್ನಾಟಕದ ಮಟ್ಟಿಗೆ ಹೆಳುವುದಾದರೆ ಕುಂತೀಪೂಜೆಯೇ ಮಹಾಭಾರತದ ಕಥೆ ದಟ್ಟವಾಗಿ ಬೆಳೆಯಲು ಕಾರಣವಾಯಿತೆಂದು ಹೇಳಬಹುದು. ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳ ಪ್ರದೇಶವನ್ನು ಕುಂತಲರಾಜ್ಯವೆಂದು ಭಾವಿಸಿರುವ ಜನಪದರು, ಕುಂತಿಯ ತಂದೆ ಕುತೀಭೋಜನ ರಾಜ್ಯವೇ ಈ ಕುಂತಲರಾಜ್ಯವೆಂದೂ, ಕುಂತಿ ಫಲದೇವತೆಯೆಂದೂ ಭಾವಿಸಿ ಅವರೆ ಗಿಡ ಹೂಕಚ್ಚುವ ಸಂಕ್ರಾಂತಿ ತಿಂಗಳಿನಲ್ಲಿ ಕುಂತಿಪೂಜೆ ಮಾಡುತ್ತಾರೆ. ಕುಂತಿಗುಡಿಯಲ್ಲಿ ಪ್ರತಿನಿತ್ಯ ಕುಂತಿಗೆ ಸಂಬಂಧಸಿದ ಬಿಡಿಹಾಡುಗಳನ್ನು ಹೇಳುವುದಲ್ಲದೆ ಅರ್ಜುನ ಜೋಗಿಯ ಹಾಡನ್ನೂ ಹಾಡಿಸಲಾಗುತ್ತದೆ. ಪ್ರಧಾನಗಾಯಕ ಕಥೆಯನ್ನು ನಿರೂಪಿಸುತ್ತಿರುವಾಗ ಸೊಲ್ಲುಕೊಡುವ ಬಾಲಕರು ವಿವಿಧ ಭಂಗಿಗಳಲ್ಲಿ ನರ್ತಿಸುತ್ತ ರಂಜನೆಯನ್ನುಂಟುಮಾಡುತ್ತಾರೆ. ಅಲ್ಪಸ್ವಲ್ಪ ಓದು ಬಲ್ಲವರು ಜೋಗಿಹಾಡಿನ ಮಾರುಕಟ್ಟೆ ಪ್ರತಿಗಳನ್ನಿಟ್ಟುಕೊಂಡು ಬಿಡುವಿನ ದಿನಗಳಲ್ಲೂ ಹಾಡುವ ಸಂಪ್ರದಾಯವಿದೆ. ಜೋಗಿಯ ಹಾಡು ಅತ್ಯಂತ ಜನಪ್ರಿಯಕಾವ್ಯವಾದ್ದರಿಂದ ಕೆಲವು ಪಂಡಿತರೂ ಈ ಜನಪದ ಕಾವ್ಯವನ್ನು ತಮ್ಮ ಕೈಗೆತ್ತಿಕೊಂಡು ಅದಕ್ಕೊಂದು ಸುಬದ್ಧರೂಪವನ್ನು ಕೊಡಲು ಪ್ರಯತ್ನಿಸಿರುವುದರಿಂದ ಜೋಗಿಹಾಡಿನ ಅನೇಕ ಹಸ್ತಪ್ರತಿಗಳು ಲಭ್ಯವಾಗುತ್ತಿವೆ. ಇಂಥ ಜನಪದ ಪಂಡಿತರಿಂದ ಪ್ರಕಟವಾದ ಅನೇಕ ಜನಪ್ರಿಯ ಆವೃತ್ತಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಜೋಗಿಯಹಾಡು ಚಿತ್ರಾಂಗದೆ ಕುಸುಮಾಲೆಯರು ತಮ್ಮನ್ನು ಪ್ರೀತಿಸಿಹೋದ ಅರ್ಜುನ ಮತ್ತೆ ಬರಲಿಲ್ಲವೆಂದು ವಿರಹತಾಪದಿಂದ ನೋಯುತ್ತಿರುವಾಗ ಈಶ್ವರ ಪಾರ್ವತಿಯರಿಗೆ ಅವರ ವಿರಹಯಾತನೆ ಅರಿವಾಗಿ ಇದನ್ನು ಪರಿಹರಿಸುವ ಉದ್ದೇಶದಿಂದ ಎರಡು ಗಿಳಿಗಳನ್ನು ಅರ್ಜುನನಲ್ಲಿಗೆ ಕಳಿಸಿಕೊಡುತ್ತಾರೆ. ಆ ಗಿಳಿಗಳು ಹೇಳಿದ ವೃತ್ತಾಂತದಿಂದ ಅರ್ಜುನನಿಗೆ ತನ್ನ ಪ್ರಿಯತಮೆಯರ ನೆನಪಾಗುತ್ತದೆ. ತಾನು ಅವರಲ್ಲಿಗೆ ಹೋಗಿ ಬರುವುದಾಗಿ ದ್ರೌಪದಿಗೆ ತಿಳಿಸಿದಾಗ ಅವಳು ಸವತೀ ಮಾತ್ಸರ್ಯದಿಂದ ಕುದಿಯುತ್ತಾಳೆ. ಅವನನ್ನು ಹೇಗಾದರೂ ಮಾಡಿ ಹೋಗದಂತೆ ತಡೆಯಲು ಪಗಡೆಯಾಟಕ್ಕೆ ಆಹ್ವಾನಿಸುತ್ತಾಳೆ. ಆಟದಲ್ಲಿ ಅರ್ಜುನನೇನಾದರೂ ಸೋತರೆ ರಾಜಕುಮಾರನಂತೆ ಹೋಗದೆ ಜೋಗಿಯ ವೇಷದಲ್ಲಿ ಹೋಗಬೇಕೆಂದು ಹೇಳುತ್ತಾಳೆ. ತಾನೇ ಆಟದಲ್ಲಿ ಗೆಲ್ಲಬೇಕೆಂದು ಶ್ರೀಕೃಷ್ಣನಲ್ಲಿ ಮೊರೆಯಿಟ್ಟುದ್ದರಿಂದ ಆಟವನ್ನು ಗೆದ್ದುಕೊಳ್ಳುತ್ತಾಳೆ. ಕೊಟ್ಟಮಾತಿನಂತೆ ಅರ್ಜುನ ಜೋಗಿವೇಷವನ್ನು ಹಾಕಿಕೊಂಡು ಪರ್ಯಟನ ಮಾಡಿದ ಅನೇಕ ಸನ್ನಿವೇಶಗಳನ್ನೊಳಗೊಂಡ ಈ ಜೋಗಿಹಾಡು ಒಂದು ರೀತಿಯಲ್ಲಿ ಸಂಕ್ಷಿಪ್ತ ಮಹಾಭಾರತದಂತಿದೆ. ಇದರ ಹಾಡುವಿಕೆಯೇ ಚಿತ್ತಾಕರ್ಷಕವಾಗಿರುವುದರಿಂದ ಇದೊಂದು ಜನಪ್ರಿಯ ಕಾವ್ಯವಾಗಿ ದಕ್ಷಿಣ ಕರ್ನಾಟಕದಾದ್ಯಂತ ಉಳಿದು ಬಂದಿದೆ. ಕಿನ್ನರಿ ಜೋಗಿಗಳು ಎಂಬ ವೃತ್ತಿಗಾಯಕರು ಜೋಗಿಹಾಡನ್ನೇ ಪ್ರಧಾನ ಕಾವ್ಯವನ್ನಾಗಿ ಹಾಡುತ್ತಾರಾದರೂ ಈ ಸಂಪ್ರದಾಯದ ಮಹಾಭಾರತವೊಂದು ಇನ್ನೂ ಪ್ರಕಟವಾಗಬೇಕಿದೆ. ರೈತಾಪಿಜನರಲ್ಲಿ ಅದರಲ್ಲೂ ವಿಶೇಷವಾಗಿ ಒಕ್ಕಲಿಗರು ತಮ್ಮ ಜನಕ್ಕೆ ಅರ್ಜುನನಿಂದ ‘ಒಕ್ಕಲಿಗರು’ ಎಂಬ ಹೆಸರು ಬಂತೆಂದು ಹೇಳಿಕೊಳ್ಳುವುದಲ್ಲದೆ ಈ ಕಥೆಯನ್ನು ಅತ್ಯಂತ ಭಕ್ತಿಯಿಂದ ಆದರಿಸಿ ಕೇಳುವ ಹಾಡುವ ಹಾಡಿಸುವ ಸಂಪ್ರದಾಯವೂ ರೂಢಿಯಲ್ಲಿದೆ.

ಮಹಾಭಾರತಕ್ಕೆ ಸಂಬಂಧಿಸಿದ ತ್ರಿಪದಿಕಾವ್ಯಗಳನ್ನು ಮೊದಲಿಗೆ ಪ್ರಕಟಿಸಿದವರೆಂದರೆ ಕರಾಕೃ ಅವರು. ೧೯೬೩ರಲ್ಲಿ ಪ್ರಕಟವಾದ ಜನಪದಗೀತೆಗಳಲ್ಲಿ ಮಹಾಭಾರತ ಎಂಬ ಸಂಕಲನ ಬಿಡಿಕಥನಗಳ ಚಿತ್ರಣದಿಂದ ಕೂಡಿದ್ದು, ಮಹಾಭಾರತದ ಕಥೆಗೆ ಬೇಕಾದ ಕೆಲವು ಘಟನಾವಳಿಗಳನ್ನು ಮಾತ್ರ ಒಳಗೊಂಡಿದೆ. ಇದೆ ಹೊತ್ತಿಗೆ ಪ್ರಕಟವಾದ ಡಾ.ಬಿ.ಎಸ್.ಗದ್ದಿಗೀಮಠ ಅವರ ಡಾಕ್ಟರೇಟ್ ಮಹಾಪ್ರಬಂಧ ಕನ್ನಡ ಜಾನಪದ ಗೀತೆಗಳು (೧೯೬೩) ಗ್ರಂಥದ ಅನುಬಂಧದಲ್ಲಿರುವ ‘ಜೋಗಿಹಾಡು’ ಉತ್ತರದ ಕಡೆಯ ಪಾಠವಾಗಿದ್ದು, ಚಂದೋಬಂಧದಲ್ಲಿಯೂ ದಕ್ಷಿಣದ ಪಾಠಕ್ಕಿಂತ ಭಿನ್ನವಾಗಿದೆ. ಸುಮಾರು ೭೫೫ ತ್ರಿಪದಿಗಳಲ್ಲಿರುವ ಈ ಹಾಡುಗಳನ್ನು ಹಾಡಿದವರು ಗುರುತಾಯಿಶಿವಗಂಗ, ಜೋಳದ ಸಿದ್ದವ್ವ, ಸೆಲವಡಿರುದ್ರವ್ವ, ಹಾಡುಗಾರ್ತಿ ಬಸಲಿಂಗವ್ವ ಎಂಬುದಾಗಿ ಒಂದು ತ್ರಿಪದಿಯಲ್ಲಿ ಹೇಳಲಾಗಿದೆ. ಇದರಲ್ಲಿ ಕಥೆಗಿಂತಲೂ ವರ್ಣನೆಗಳೇ ದೀರ್ಘವಾಗಿದ್ದು ಓದುಗರ ಸಹನೆಯನ್ನು ಕೇಳುತ್ತದೆ.