ಕೃಷ್ಣ ತುಂಬು ಮನುಷ್ಯ ಆನಂದ ಆಶ್ಚರ್ಯಗಳ ಮಂದಹಾಸ ಅವನ ಮುಖ ಬಿಟ್ಟಿದ್ದಿಲ್ಲ. ದಾಷ್ಕಾಲದಲ್ಲಿ ಕೂಡ ಮಹಾ ವಿಪತ್ತೇ ದಾರಿಕಾಯುವಾಗ ಕೂಡ ಅವನ ಕಣ್ಣುಗಳಲ್ಲಾದರೂ ಆ ಮಂದಹಾಸ ಬೆಳಗುತ್ತಿತ್ತು. ಪ್ರಬುದ್ಧನಾದ ಮೇಲೆ ಯಾವುದೇ ಪ್ರಾಮಾಣಿಕ ಮನುಷ್ಯ ಇಡೀ ಜೀವಿತದಲ್ಲಿ ಒಂದೆರಡು ಸಲಕ್ಕಿಂತ ಹೆಚ್ಚು ಅಳುವುದಿಲ್ಲ, ಬಹಿರಂಗವಾಗಿಯಂತೂ ಖಂಡಿತ ಇಲ್ಲ. ರಾಮ ತನ್ನ ಪ್ರಬುದ್ಧ ಜೀವಿತದಲ್ಲಿ ಅತ್ತದ್ದು ಪ್ರಾಯಶಃ ಎರಡು ಬಾರಿ ಅಥವಾ ಧಾರೆ ಹರಿದೀತು ಎಂಬಂತಿರುವ ಜನರೇ ರಾಮ, ಕೃಷ್ಣರ ಈ ನೆಲವನ್ನು ಮುತ್ತಿಕೊಂಡಿದ್ದಾರೆ, ಮತ್ತು ವಿವಂಚಿತರಾದ ಹಿಂಡು ಹಿಂಡು ಜನ ಅಂಥವರನ್ನು ತೀವ್ರ ಅನುಭಾವಿಗಳೆಂದು ಭ್ರಾಂತಿಗೊಳುತ್ತಾರೆ. ಇಂಥ ವಂಚಕತನ ಕೃಷ್ಣನಲ್ಲಿ ಭಾಗಶಃ ಆದರೂ ಇತ್ತು. ಅವನು ಅತ್ತದ್ದಿಲ್ಲ. ಆದರೆ ಲಕ್ಷೋಪಲಕ್ಷ ಜನ ಈ ದಿನಕ್ಕೂ ಅಳುತ್ತಿರುವಂತೆ ಮಾಡಿದ್ದಾನೆ ಅವನು. ಅವನ ಜೀವಿತ ಕಾಲದಲ್ಲೇ ವೃಂದಾವನದ ಹಾಲುಹುಡುಗಿಯರು ಪ್ರಲಾಪಿಸುತ್ತಿದ್ದರು-“ಇಡೀ ಹಗಲು ಇಡೀ ರಾತ್ರಿ ಕಣ್ಣುಗಳಿಂದ ವರ್ಷಧಾರೆ ಸುರಿಯುತ್ತಿರುವ ಮೊಲೆಗಳ ಎಡೆಯಲ್ಲಿ ಕಣ್ಣೀರು ಹಳ್ಳ ಹರಿಯುತ್ತಿರುವ” ಅವರ ಬಗ್ಗೆ ಈ ದಿನಕ್ಕೆ ಕೂಡ ಹಾಡುಗಳನ್ನು ಕೇಳುತ್ತೇವೆ. ಆ ಆಕ್ರಂದನದಲ್ಲಿ ಆಸೆಯ ಸೊಕ್ಕು ಮೇರೆಯವರಿದಿರುವಂತೆ ಭಾಸವಾಗುತ್ತದೆ. ತನ್ನ ತನದ ಕಿಂಚಿತ್ತೂ ಶೇಷ ಉಳಿಯದಂತೆ ಸಮರ್ಪಿಸಿಕೊಂಡ ಪೂರ್ಣತ್ವ ಹೊಳೆಯುತ್ತದೆ. ಅಂಥ ಸಮರ್ಪಣವನ್ನು ಶರಣತೆಯನ್ನು ಅರಳಿಸಿದ ಮಹಾಪ್ರೇಮಿ ಕೃಷ್ಣ ಮತ್ತು ಈ ದಿನಕ್ಕೆ ಕೂಡ ಲಕ್ಷೋಪಲಕ್ಷ ಸ್ತ್ರೀ-ಪುರುಷರು ಹೆಣ್ಣಿನಂತೆ ವೇಷವುಟ್ಟೋ ಅಥವಾ ಇನ್ನಿತರ ರೀತಿಗಳಿಂದಲೋ ಹೆಣ್ಣೇ ಆಗಿ ವರ್ತಿಸುತ್ತ ತಮ್ಮ ಪ್ರೇಮಿಯನ್ನು ಸಂತೃಪ್ತಗೊಳಿಸಲು ಯತ್ನಿಸುವ ಗಂಡುಗಳು-ಕಣ್ಣೀರು ತುಂಬಿಯೂ ಅದಿಲ್ಲದೆಯೂ ತಮ್ಮನ್ನು ಕೃಷ್ಣಾರ್ಪಣ ಮಾಡಿಕೊಳ್ಳಲು ವ್ಯರ್ಥಪ್ರಯತ್ನ ನಡೆಸುತ್ತಿದ್ದಾರೆ. ಈ ಅನುಭವ ಕೆಲವು ಸಲ ರಾಜಕೀಯಕ್ಕೆ ಮುಗುಚಿಕೊಳ್ಳುತ್ತದೆ ಮತ್ತು ಷಂಡತನ ವಂಚನೆಯ ಜೊತೆ ಕೈಗೂಡಿಸಿಕೊಳ್ಳುತ್ತದೆ.

ಹುಟ್ಟಿದ್ದು ಮೊದಲಾಗಿ ಸಾಯುತನಕವೂ ಕೃಷ್ಣ ಅಸಾಮಾನ್ಯನಾಗಿಯೇ ಇದ್ದ, ಅಸಂಭವವೆನ್ನಿಸುವ ಹಾಗಿದ್ದ, ಏಕಮೇವನಾಗಿದ್ದ. ರಾಜನಾಗಿದ್ದ ಮಾವ, ಮಂತ್ರಿಯಾಗಿದ್ದ ತನ್ನ ತಂದೆಯನ್ನೂ ತಾಯಿಯನ್ನು ಯಾವ ಸೆರೆಗೆ ದೂಡಿದ್ದನೋ ಆ ಸೆರೆಮನೆಯಲ್ಲೇ ಆತ ಹುಟ್ಟಿದ. ಅವನಿಗೆ ಮುಂಚೆ ಹುಟ್ಟಿದ ಹೆಣ್ಣು-ಗಂಡುಗಳೆಲ್ಲ ಹುಟ್ಟುತ್ತಿದ್ದಂತೆಯೇ ಕೊಲೆಯಾಗಿ ದ್ದರು. ಇವನನ್ನು ಮಾತ್ರ ಬುಟ್ಟಿಯಲ್ಲಿಟ್ಟು ಮುಚ್ಚಿ ಸೆರೆಯಿಂದ ಹೊರತಂದರು; ಮುಂದೆ ನದಿಯನ್ನು ದಾಟಿ ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯಬೇಕಾಗಿತ್ತು. ಯಮುನೆ ಉಕ್ಕೇರುತ್ತಿದ್ದಳು, ಆಳ ಆಳವನ್ನು ಆಹ್ವಾನಿಸಿ ಬಂದಿತೋ ಎನ್ನುವ ಹಾಗೆ ವಸುದೇವ ಬುಟ್ಟಿ ಎತ್ತಿದಷ್ಟೂ ಯಮುನೆ ಮೇಲೇರಿ ಉಕ್ಕುತ್ತಿದ್ದಳು; ಕೊನೆಗೆ ಕೃಷ್ಣ ತನ್ನ ಗುಲಾಬಿ ಬೆರಳನ್ನು ಕೆಳಗಿಳಿಸಿ ನೀರು ಮುಟ್ಟಿದಾಗ ಆಕೆ ಶಾಂತಳಾದಳು. ಹುಟ್ಟು ಹೀಗೆ, ಸಾವು ಇನ್ನೊಂದು ಬಗೆ: ಅನೇಕ ವರ್ಷ ಕಳೆದಿದ್ದವು. ಅವನ ಕಾರ್ಯಭಾರಗಳೆಲ್ಲ ತೀರಿದವು; ಅವನ ಪರಿಚಯದವರೆಲ್ಲ ಇಲ್ಲವೆ ಕೊಲೆಯಾಗಿದ್ದರು ಇಲ್ಲವೆ ಚದುರಿದ್ದರು; ಕೆಲವರು ಹಿಮಾಲಯದ ಹಾದಿಯಲ್ಲಿದ್ದರೆ ಕೆಲವರು ಸ್ವರ್ಗದ ದಾರಿ ತುಳಿದಿದ್ದರು. ಅವನ ಕುಲದ ಹೆಣ್ಣುಗಳು ಕೂಡ ತುಂಡು ದರೋಡೆಕಾರನ ಕೈಗೆ ಸಿಕ್ಕಿ ಅಪಹೃತರಾಗಿದ್ದರು. ಕೃಷ್ಣ ದ್ವಾರಕೆಯತ್ತ ತನ್ನ ಏಕಾಂತದ ದಾರಿ ಸವೆಸುತ್ತಿದ್ದ. ಒಂದು ಗಿಡದ ನೆರಳಿನಲ್ಲಿ ಸ್ವಲ್ಪ ವಿಶ್ರಮಿಸಲು ಕೂತ. ಒಬ್ಬ ಬೇಡನಿಗೆ ಕೃಷ್ಣನ ತುದಿಗಾಲು ಜಿಂಕೆಯ ಕಾಲಿನಂತೆ ಕಂಡಿತು. ಬಿಲ್ಲು ನೇರ ಸೀಳಿ ಬಂತು, ಕೃಷ್ಣ ಮೃತಿಯೊಂದಿದ. ಈ ಹೊತ್ತಲ್ಲಿ ಕೃಷ್ಣ ಏನು ಮಾಡಿದ್ದಾನು? ಅವನ ಕೊನೆಯ ನೋಟವೂ, ಅದರ ಜೊತೆ ತಿಳಿದು ಬರುವ ಕಾರುಣ್ಯದ ಮಂದಹಾಸವೂ ಬೇಡನನ್ನು ಬೆಳಗಿತೆ? ಅಲ್ಲೇ ಇರಬಹುದಾದ ತನ್ನ ಕೊಳಲಿನತ್ತ ಕೈ ಚಾಚಿದನೆ, ಅದರಲ್ಲಿ ದಿವ್ಯವಾದ ಅಂತಿಮ ತಾನವನ್ನು ಬಾರಿಸಿದನೆ ಅಥವಾ ಕೊಳಲು ಹಿಡಿದು ಹೊರಚಾಚಿ ಬಿದ್ದಿದ್ದ ತನ್ನ ಕೈಯನ್ನು ಕಂಡು ಮೆಲು ನಕ್ಕು ತೃಪ್ತನಾದನೆ; ಅವನ ಮನಸ್ಸಿನಲ್ಲಿ ಏನು ಹಾದಿರಬಹುದು? ಹರ್ಷ ಕೊಡುವ ಹರಹು ಕೊಡುವ ಆಟವೆ, ಎಲ್ಲ ಲೀಲಾಮಾತ್ರವೇ ಆಗಿರುವ ಈ ಭ್ರಮೆ ಸತ್ಯಗಳೇ? ಅಥವಾ ಒಡೆಯ ಶ್ರೀವಿಷ್ಣು ಸ್ವರ್ಗದಲ್ಲಿಲ್ಲದ ಕೊರತೆ ಕಂಡು ಅಲ್ಲಿಂದ ಕೂಗಿ ಬೇಡುತ್ತಿರುವ ದೇವಾನುದೇವತೆಗಳ ಆರ್ತ ಕರೆಯೆ?

ಕೃಷ್ಣ ಕಳ್ಳನಾಗಿದ್ದ, ಸುಳ್ಳುಗಾರನಾಗಿದ್ದ, ವಂಚಕನಾಗಿದ್ದ, ಕೊಲೆಗಾರನಾಗಿದ್ದ; ಇವುಗಳನ್ನೂ ಇನ್ನಿತರ ಇಂಥ ಪಾತಕಗಳನ್ನು ಈಷತ್ ಪಶ್ಚಾತ್ತಾಪವೂ ಇಲ್ಲದೆ ರೂಢಿಮಾಡಿದ. ತನ್ನ ಸಾಕುತಾಯಿಯಲ್ಲಿ ಬೆಣ್ಣೆ ಕದಿಯುವುದರಿಂದ ಪ್ರಾರಂಭಿಸಿ ಮತ್ತೊಬ್ಬನ ಹೆಂಡತಿಯನ್ನು ಕದಿಯುವ ಹಂತಕ್ಕೆ ಏರಿದ. ಮಹಾಭಾರತ ಕಾಲದಲ್ಲಿ ಎಂದೆಂದೂ ಸುಳ್ಳು ಹೇಳದಿದ್ದ ಏಕೈಕ ವ್ಯಕ್ತಿಯಿಂದ ಅರೆಸುಳ್ಳು ಹೇಳಿಸಿದ. ಅವನ ಸ್ವಂತದ ಸುಳ್ಳುಗಳಿಗಂತೂ ಲೆಕ್ಕವೇ ಇಲ್ಲ. ಸೂರ‍್ಯನನ್ನು ಮುಚ್ಚಿ ಸುಳ್ಳು ಅಸ್ತಮಯ ಕಲ್ಪಿಸಿ ಅದೇ ಸುಳ್ಳು ಕತ್ತಲಲ್ಲಿ ಮಹಾ ವೈರಿಯೊಬ್ಬನನ್ನು ಕೊಲ್ಲಿಸಿ, ಪುನಃ ಸೂರ‍್ಯ ಬೆಳಗುವ ಹಾಗೇ ಮಾಡಿದ. ಯೋದ್ಧೃ-ಕುಲತಿಲಕನ ಎದುರು ಶಿಖಂಡಿಯನ್ನು ತಂದು ನಿಲ್ಲಿಸಿದ: ಅಂಥ ಅತ್ಯಪೂರ್ವ ಕವಚದ ಹಿನ್ನೆಲೆಗೆ ನಿಂತು ಶಸ್ತ್ರತ್ಯಾಗ ಮಾಡಿದ ಭೀಷ್ಮಪಿತಾಮಹನಿಗೆ ಬಾಣ ಪ್ರಯೋಗ ಮಾಡಿಸಿದ. ಮಿತ್ರನಿಗೆ ತನ್ನ ತಂಗಿಯನ್ನು ಓಡಿಸಿಕೊಂಡು ಹೋಗಲು ನೆರವಾದ.

ಕರ್ಣರಥದ ಕಥೆ ಪಾತಕಗಳಿಗೆ ಅಥವಾ ಅಧರ್ಮಯುದ್ಧಕ್ಕೆ ಹೇಳಿಸಿಕೊಳ್ಳಬಹುದಾದ ಮಾದರಿ. ಯಾವನು ತನ್ನ ಕಾಲದಲ್ಲೇ ಅದ್ವೀತೀಯನಾದ ತ್ಯಾಗಮೂರ್ತಿಯೋ, ಯುದ್ಧ ಕೌಶಲದಲ್ಲಿ ಶೌರ‍್ಯದಲ್ಲಿ ಪ್ರಾಯಃ ಯಾವನು ಸಾಟಿಯಿಲ್ಲದವನಾಗಿದ್ದನೋ, ಅರ್ಜುನನೂ ತನ್ನಂತೆ ಅಸಹಾಯಕನಾಗಿದ್ದ ಪಕ್ಷದಲ್ಲಿ ಯಾವನು ಆತನನ್ನು ಶಕ್ತಿಗುಂದಿಸಿ ಬಿಡಬಲ್ಲವನಾಗಿದ್ದನೋ ಅಂಥ ಕರ್ಣನ ರಥ ಯುದ್ಧಮಧ್ಯದಲ್ಲಿ ಹೂತುಹೋದಾಗ ಅವನಮೇಲೆ ಆ ಕ್ಷಣದಲ್ಲಿ ಬಾಣಪ್ರಯೋಗ ಮಾಡಲು ಅರ್ಜುನನಿಗೆ ಆಜ್ಞೆ ಮಾಡಿದ ಕೃಷ್ಣ. ಕರ್ಣ ಆ ಅಧರ್ಮವನ್ನು ದೂರಿದ. ಆ ಘಟ್ಟದಲ್ಲಿ ಮಹಾಭಾರತ ಪ್ರಾಯಃ ಆತನುದ್ಧ ಯಾವ ಭಾಗದಲ್ಲೂ ಇಲ್ಲದಂಥ ವಾಗ್ವೈಭವವನ್ನು ಸೂರೆ ಚೆಲ್ಲುತ್ತದೆ; ಕೃಷ್ಣ ರಾಶಿ ರಾಶಿ ಘಟನೆಗಳನ್ನು ಜ್ಞಾಪಿಸಿದ. ಒಂದೊಂದು ಘಟನೆಯನ್ನು ಕಾವ್ರೋವರ್ಣಿಸುತ್ತ ಕೊನೆಗೆ ಆಗ ನಿನ್ನ ಧರ್ಮ ಎಲ್ಲಿ ಅಡಗಿ ಹೋಗಿತ್ತು?’ ಎಂಬ ಪ್ರಶ್ನೆಪಲ್ಲವಿ ಹಾಡಿ ಮುಗಿಸುತ್ತಿದ್ದ. ಧರ್ಮದ ಈ ಅಗ್ನಿ ವರ್ಷದಲ್ಲಿ ಜ್ಯೋತಿಪ್ರವಾಹದಲ್ಲಿ ಪೂರ್ವತೀರ್ಮಾನಗಳು ಸೋತು ಕುಸಿಯುತ್ತವೆ, ಎಂಥ ವಿಮರ್ಶಾತ್ಮಕ ಬುದ್ದಿಯೂ ತರಗಲೆಯಾಗಿ ತಿರಿದುಬಿಡುತ್ತದೆ -ತತ್ಕಾಲ ಮಾತ್ರವಾದರೂ, ದ್ರೌಪದಿಯ ಕಥೆ-ದುರ್ಯೋಧನನ ಸಭಾವೈಭವದ ಮಧ್ಯೆ ಎಳೆತಂದು ಸೀರೆ ಸುಲಿದದ್ದು ನೆನಪಾಗುತ್ತದೆ. ಅಲ್ಲಿ ಕರ್ಣ ಕೂತಿದ್ದ, ಭೀಷ್ಮನಿದ್ದ, ಆದರೆ ಅವರು ದುರ‍್ಯೋನನ ಉಪ್ಪು ತಿಂದವರಾಗಿದ್ದರು. ತಿಂದ ಉಪ್ಪು ಮನುಷ್ಯನ ಮನಸ್ಸನ್ನು ತನ್ನಂತೆ ತಿದ್ದುತ್ತದೆ ಎನ್ನುತ್ತಾರೆ. ಮೇಲಾಗಿ, ಕೊಟ್ಟು ನಡೆಸಿದವನಿಗೆ ತಪ್ಪಬಾರದ ಜೋಳದಪಾಳಿಯೂ ಇತ್ತು. ಆಗ ದ್ರೌಪದಿ ಕೃಷ್ಣನನ್ನು ಸ್ಮರಿಸಿದ್ದಳು. ಕೃಷ್ಣ ವಸ್ತ್ರವನ್ನು ಅಕ್ಷಯವಾಗಿದ್ದ. ಕೃಷ್ಣ-ದ್ರೌಪದಿಯರ ಬಗ್ಗೆ ನೋಡುವಾಗ ಅವರಲ್ಲಿ ಅನುಕ್ತಿಯೇ ಸೂಚಿಸುವಂಥ ಆಳವಾದ ಕೋಮಲ ಸಂಬಂಧ ಬೆಳೆದಿದ್ದಂತೆ ತೋರುತ್ತದೆ.

ಕೃಷ್ಣನ ಭಕ್ತರು ಅವನ ಒಂದೊಂದೂ ಕೃತಿಗೂ ಬೇರೆ ಬಗೆಯ ಅರ್ಥವನ್ನೇ ಹಚ್ಚಿ ಹೇಳಲು ಪ್ರಯತ್ನಿಸುತ್ತಾರೆ. ಅವನು ಬೆಣ್ಣೆ ಕದ್ದದ್ದು ತನ್ನ ಸ್ನೇಹಿತರಲ್ಲಿ ಹಂಚುವುದಕ್ಕಾಗಿ, ತನ್ನ ತಾಯಿಯ ಹೃದಯವನ್ನು ಕಳವಳಗೊಳಿಸಿ ಅನಂತರ ಹರ್ಷಗೊಳಿಸುವ ಸಲುವಾಗಿ, ಬಾಲ್ಯ ಹೇಗಿರಬೇಕೆಂಬುದನ್ನು ಆಡಿ ತೋರಿಸಲು, ಮುಂದಿನ ಪೀಳಿಗೆಗಳು ತನ್ನ ಬಾಲ್ಯದ ಮೂಲಕ ಬಾಲಕ್ರೀಡೆಗಳು ಆದರ್ಶಗಳನ್ನು ಕನಸುಕಟ್ಟಿಕೊಳ್ಳಲಿ ಎಂಬ ಬಗ್ಗೆ ಮುಂತಾಗಿ ಆತ ಯಾರು ಯಾರಿಗೆ ಏನೇನೆಲ್ಲ ಮಾಡಿದನೋ ಅವರೆಲ್ಲ ಆತನ ಭಾಗವೇ ಆಗಿದ್ದರು ಎಂಬುದನ್ನು ಬಿಟ್ಟರೆ, ಆತ ತನಗಾಗಿ ಎಂದೂ ಏನು ಮಾಡಿಕೊಂಡಿದ್ದಿಲ್ಲ. ಆತ ರಾಧೆಯನ್ನು ಅಪಹರಿಸಿದ್ದು ತನಗಾಗಿ ಅಲ್ಲ, ಆಕೆಗೆ ಮೋಕ್ಷವಾಗಲಿ ಎಂಬುದಕ್ಕೂ ಅಲ್ಲ-ಎಲ್ಲ ಪೀಳಿಗೆಗಳ ಅಸಂಖ್ಯ ಮಹಿಳೆಯರಿಗಾಗಿ. ಸ್ತ್ರೀಕುಲಕ್ಕಾಗಿ-ಅವರೆಲ್ಲ ಶೃಂಖಲಿತವಾದ ತಮ್ಮ ಭೌತಗಾತ್ರಗಳ ಆಚೆ ಹೆಜ್ಜೆಯಿಟ್ಟು ವಿಶ್ವವನ್ನು ಅನುಸಂಧಾನ ಮಾಡಲಿ ಎಂಬ ಅಭಿಲಾಷೆಯಿಂದ. ಇಂಥ ವ್ಯಾಖ್ಯಾನ ವಿವರಣೆಗಳೆಲ್ಲವೂ ಅನಗತ್ಯ. ಭಗವದ್ಗೀತೆಯಂಥ ಜಗತ್ತಿನ ಮಹಾಗೀತವನ್ನೇ ಹಾಡಿದ ಕೃಷ್ಣ ಯಾರಿಗೆ ಅಪರಿಚಿತ? ತತ್ತ್ವವನ್ನು ಸಂಗೀತವಾಗಿಸಿದ, ಚಿಂತನವನ್ನು ಕಥೆ ಮಾಡದೆ ಕಾವ್ಯ ಮಾಡದೆ ನೇರ ಹಾಡಿದ ಜಗತ್ತಿನ ಏಕೈಕ ದೇಶ ಇದು. ಇಲ್ಲಿನ ಋಷಿಗಳು ತಮ್ಮ ಅನುಭವದಿಂದ ಅರ್ಕತೆಗೆದ ಚಿಂತನೆಗಳನ್ನು ಸತ್ಯಗಳನ್ನು ಅನೇಕ ಉಪನಿಷತ್ತುಗಳು ಹಾಡಿದವು. ಕೃಷ್ಣ ಅವೆಲ್ಲವನ್ನೂ ರಸಪಾಕ ಮಾಡಿ ಮತ್ತೂ ಶುದ್ಧವಾದ ಸಾರವನ್ನು ಹಿಂಡಿದ. ಮುಂದಿನ ವಿದ್ವಾಂಸರು ಮಾತ್ರ ವಿವಿಧ ರುಚಿಗಳಲ್ಲಿ ಪಕ್ಷಪಾತ ತೋರಿಸಿದ್ದೂ ನಿಜ. ಗೀತೆಯ ಮೂಲಕ ತನ್ನ ಶುದ್ಧ ಚಿಂತನವನ್ನು ಹಾಡಿದ್ದಾನೆ ಕೃಷ್ಣ.

ಆತ್ಮದ ಬಗ್ಗೆ ಅವನು ಹಾಡಿದ್ದು-ಅದರ ಅವಿನಾಶಿತ್ವಃ ಅಗ್ನಿ ಸುಡದಂಥ ನೀರು ನೆನೆಸದಂಥ, ಗಾಳಿ ಶೋಷಿಸದಂಥ ನಿತ್ಯತ್ವ, ತನಗೆ ಬೇಕೆಂಬಂತೆ ಧರಿಸುವ ಇಲ್ಲವೆ ತೆಗೆದು ಎಸೆಯುವ ಉಡುಪಿನಂತೆ ಅದು ಶರೀರಗಳನ್ನು ಬಳಸುವ ರೀತಿ ಇವೆಲ್ಲ ಆ ಮಾಂತ್ರಿಕ ವಾಗ್ವೈಭವದಿಂದ ನಂಬದವರನ್ನೂ ಸೆಳೆದುಕೊಂಡು ಹೋಗಿಬಿಡುತ್ತದೆ. ಅವನು ಕರ್ಮವನ್ನು ಕುರಿತು ಹಾಡಿದ, ತಮ್ಮ ಕರ್ಮವನ್ನು ತಾವು ಮಾಡಲು, ಫಲಾಪೇಕ್ಷೆ ಬಿಟ್ಟು ಫಲಕ್ಕೆ ಕಾರಣಭೂತರೂ ಆಗದೆ ಕರ್ಮಬಂಧನವನ್ನೂ ತಪ್ಪಿಸಿಕೊಂಡು ಸಂತತವೂ ನಿಸ್ಸಂಗಕರ್ಮಿಗಳಾಗುವಂತೆ ಜನಕ್ಕೆ ಉದ್ಘೋಷಮಾಡಿ ಹೇಳಿದ. ಸಮತ್ವದ ಬಗ್ಗೆ ಹಾಡಿದ. ಸುಖದುಃಖಗಳಲ್ಲಿ ಜಯಾಪಜಗಳಲ್ಲಿ ಶೀತೋಷ್ಣಗಳಲ್ಲಿ ಮತ್ತು ಜೀವದ ಎಲ್ಲ ಇಂಥ ದ್ವಂದ್ವಗಳಲ್ಲಿ ಏಕೋದೃಢವಾಗಿ ನಿಲ್ಲುವ ಸಮತ್ವ. ಇಂಡಿಯಾದ ಎಲ್ಲ ಭಾಷೆಗಳಿಗೂ ಸಾಮಾನ್ಯವಾಗಿರುವ ಪದ ‘ಸಮತ್ವ’ ಎಂಬುದು; ಅದೊಂದು ಪದದಿಂದ ಈ ಭಾಷೆಗಳೆಲ್ಲ ವಿಶಿಷ್ಟವಾಗಿವೆ. ಈ ಪದ ‘ಸಮಾನತೆಯ’ ಬಾಹ್ಯಸ್ಥಿತಿಯನ್ನೂ ‘ಸಮತೆ’ಯ ಆಂತರಿಕ ಅವಸ್ಥೆಯನ್ನೂ ಏಕ ಸಂಕೇತದಲ್ಲಿ ಸೂಚಿಸುತ್ತದೆ. ಸಮಾನತೆ ಮತ್ತು ಸಮತೆ ಈ ಒಂದೇ ನಾಣ್ಯದ ಎರಡು ಮುಖಗಳನ್ನು ಕುರಿತು ಕೃಷ್ಣ ಮತ್ತೂ ಸ್ಪಷ್ಟವಾಗಿ ಇನ್ನಷ್ಟು ಹಾಡಬಾರದಿತ್ತೇ ಎನ್ನಿಸುತ್ತದೆ.ಸಮಾನತೆ ಸಮಾಜದಲ್ಲಿನ ಸ್ಥಿತಿಯಾಗಿ ಸಮತೆ ವ್ಯಕ್ತಿಯಲ್ಲಿನ ಅವಸ್ಥೆಯಾಗಿ ವಿಭಕ್ತಗಳ ಮಧ್ಯೆ ಅವಿಭಕ್ತವಿರುವುದನ್ನು ಕಾಣಬಲ್ಲಂಥ ‘ಸಮತ್ವ’ದ ಬಗ್ಗೆ ಇನ್ನೂ ಹಾಡಬೇಕಿತ್ತೆನಿಸುತ್ತದೆ. ಇಂಡಿಯಾದಲ್ಲಿ ಅಂಥ ಮಾಂತ್ರಿಕವೂ ಚಿಂತನಪರವೂ ಆದ ಸಂಗೀತ ಲಹರಿಯ ನಡುವೆ ಬೆಳೆಯದಿರುವ ಮಗು ಯಾವುದು? ಈ ಮಕ್ಕಳಿಗೆ ಕೃಷ್ಣನನ್ನು ಸಮರ್ಥಿಸಿ ತೋರಿಸುವ ಯತ್ನವೆಂದರೆ ಅದು ಅವರ ಇಡೀ ಬೆಳವಣಿಗೆಯ ಪ್ರಕ್ರಿಯೆಯನ್ನೇ ಅಲ್ಲಗಳೆದಂತೆ. ಅತ್ಯಂತಿಕವಾಗಿ ನೋಡಿದಾಗ ಕೃಷ್ಣ ನಮ್ಮಲ್ಲಿ ವಿಷಾದವನ್ನೇ ಉಂಟು ಮಾಡುತ್ತಾನೆ. ತನಗಲ್ಲದೆ ಇತರರ ಅಂಗೋಪಾಂಗಗಳಿಗಾಗಿ ಸದಾ ಅನಂತ ಅವಿಶ್ರಾಂತವಾಗಿ ಟುಕುಗುಡುವ ಪಾಪದ ಹೃದಯದಂತಿದ್ದಾನೆ ಅವನು. ಅಂಗಾಂಗಳ ಬೇಡಿಕೆಗಾಗಿ ಯಾವತ್ಕಾಲವೂ ಟುಕುಗುಡುತ್ತಿರುವುದು, ಶಕ್ತಿ ಚಿಮ್ಮಿಭೋರ್ಗರೆ ಯುತ್ತಿರುವುದು-ಯಾಕೆ ಬೇಕು ಈ ಹೃದಯಕ್ಕೆ? ಕೃಷ್ಣ ಹೃದಯದಂತಿದ್ದ, ಆದರೆ ಜನರ ಮುಂದಿನ ಎಲ್ಲ ಪೀಳಿಗೆಗೂ ತನ್ನಂತೆ ಇರಬೇಕೆನ್ನಿಸುವ ಆಸೆ ಕಲಿಸಿದ-ಅವರು ಎಂದೂ ಅವನಂತೆ ಆಗದಿದ್ದರೂ, ಹಾಗಾಗುವ ಉಮೇದಿನಲ್ಲಿ ಅವನ ಕೊಲೆ ವಂಚನೆಗಳನ್ನಷ್ಟೆ ರೂಢಿಸಿಕೊಂಡರೂ.

ರಾಮ ಮತ್ತು ಕೃಷ್ಣ ಈ ಇಬ್ಬರ ವ್ಯಕ್ತಿತ್ವ ನಡುವೆ ಒಂದು ಕುತೂಹಲಕಾರಿಯಾದ ಅಂಶ ಎದ್ದು ಕಾಣುತ್ತದೆ. ಕೃಷ್ಣ ಕಣಕಣದಲ್ಲೂ ಪವಾಡ ಪುರುಷ: ಪ್ರವಾಹಗಳೂ ಸುರ‍್ಯಾಸ್ತಮಯಗಳೂ ಅವನ ಇಚ್ಛೆಯ ಬಂಟರಾಗಿದ್ದವು ಮತ್ತು ಅವನು ಸಂಭವ ಅಸಂಭವಗಳ ನಡುವಣ ಗೆರೆಯನ್ನೆ ಅಳಿಸಿಬಿಟ್ಟ. ರಾಮ ಯಾವುದೇ ಪವಾಡ ಮೆರೆಯಲಿಲ್ಲ. ಇಂಡಿಯಾ ಮತ್ತು ಲಂಕಾದ ಮಧ್ಯೆ ಸೇತುವೆಕಟ್ಟಿದ್ದು ಕೂಡ ಒಂದೊಂದೇ ಕಲ್ಲು ಕೂಡಿಸಿ ಕೂಡಿಸಿ -ಮೊದಲಿನ ಸಮುದ್ರಪೂಜೆ ಅದರ ಕೋಪ ಇಂಥ ಅತ್ಯಲ್ಪ ಬಿಟ್ಟರೆ ಆದರೆ ಈ ಎರಡು ವ್ಯಕ್ತಿಗಳ ಅದ್ಯಂತ ಜೀವಿತವನ್ನು ಇಡೀ ನೋಡಿ ತಃಖ್ತೆಹಾಕಿದಾಗ, ರಾಮ ಅದ್ವಿತೀಯ ಪವಾಡಪುರುಷನಾಗಿ ನಿಂತುಬಿಡುತ್ತಾನೆ. ಕೃಷ್ಣನ ಸಾಧನೆ ಬಯಲೆನ್ನಿಸಿಬಿಡುತ್ತದೆ. ಅಣ್ಣತಮ್ಮಂದಿರಿಬ್ಬರು ಮತ್ತು ಒಬ್ಬ ಹೆಣ್ಣು-ಇಬ್ಬರು ಯೋಧರು ಮತ್ತು ಒಬ್ಬ ಅನ್ನಪೂರ್ಣ -ಹೀಗೆ ಹೊರಟಾಗ ಕೇವಲ ಮೂವರಾಗಿದ್ದವರು, ಅಯೋಧ್ಯೆಯಿಂದ ಲಂಕೆಗೆ ಎರಡು ಸಹಸ್ರ ಮೈಲು ಕ್ರಮಿಸಿ ಮರಳುವಾಗ ಇಡೀ ಚಕ್ರಾಧಿಪತ್ಯವನ್ನೇ ಪದಾಕ್ರಾಂತಗೊಳಿಸಿದ್ದರು. ಕೃಷ್ಮನೋ-ಇದ್ದ ಸಾಮ್ರಾಜ್ಯವನ್ನು ಇದ್ದಂತೇ ರಾಜವಂಶದ ಒಂದು ಶಾಖೆಯಿಂದ ಮತ್ತೊಂದಕ್ಕೆ ಹಸ್ತಾಂತರಗೊಳಿಸಿದ್ದಲ್ಲದೆ ಮತ್ತೇನೂ ಮಾಡಿರಲಿಲ್ಲ. ಇದೊಂದು ಒಗಟೇ, ಏನಿಲ್ಲೆಂದರೂ ರಾಜಕಾರಣದ ದೃಷ್ಟಿಯಿಂದಲಾದರೂ, ಸೀಮಿತ ವ್ಯಕ್ತಿತ್ವ ದೊಡ್ಡದೂ ಅರ್ಥಪೂರ್ಣವೂ ಆಗಿ, ಸಮೃದ್ಧ ವ್ಯಕ್ತಿತ್ವ ಅಲ್ಪವೂ ಅರ್ಥರಹಿತವೂ ಆಗಿಬಿಡುವ ಈ ಒಗಟು ಕಾಲದ ಒಗಟಿನಂತೆಯೇ ಬಿಡಿಸಲು ಬಾರದ್ದಾಗಿ ಕಾಣುತ್ತದೆ. ಮಹತ್ ಘಟನೆಗಳಿಲ್ಲದಿ ರುವ ಜೀವನದಲ್ಲಿ ಒಂದೊಂದುಕ್ಷಣವೂ ಭಾರವಾಗಿ ಅಸಹ್ಯದೀರ್ಘವಾಗಿ ತೋರಿದರೂ ಹತ್ತಿಪ್ಪತ್ತು ವರ್ಷಗಳ ಇಲ್ಲವೆ ಒಂದು ಜೀವಿತಾವಧಿಯ ಮೊತ್ತದಲ್ಲಿ ಅದು ಸುಲಭ ಕಳೆದಿದ್ದೆಂಬಂತೆ, ಶೀಘ್ರ ಹಾರಿದ್ದೆಂಬಂತೆ ಭಾಸವಾಗುತ್ತದೆ. ಅದೇ, ಅಧ್ಬುತ ಜೀವನವೊಂದರಲ್ಲಿ ಒಂದೊಂದು ಕ್ಷಣವೂ ಆಗಿಹೋಯಿತೇ ಎಂದು ಜೀವ ಚಡಪಡಿಸುವ ರೀತಿಯಲ್ಲಿ ಅತ್ಯಂತ ಆಸ್ಥೆಯದಾಗಿದ್ದು, ಧಾವಂತದಲ್ಲಿರುವಂತೆ ಕಾಣುತ್ತದೆ; ಆದರೆ ಕಾಲ ಕಳೆದು ಒಂದೆರಡು ವರ್ಷಗಳ ಆಚೆ ನಿಂತು ಹಿಂದೆ ನೋಡಿದಾಗ ಮಾತ್ರ ಅದು ಅತಿ ದೀರ್ಘವೆಂಬಂತೆ ಭಾರಾಲಸವಿದಂತೆ ತೋರುತ್ತದೆ. ‘ಮರ್ಯಾದಾ ಪುರುಷೋತ್ತಮ’ ಎನ್ನಿಸಿಕೊಂಡ, ಸೀಮಿತದಲ್ಲಿ ಶ್ರೇಷ್ಠನೆನ್ನಬೇಕಾದ, ವಿಷ್ಣುವಿನ ಅಂಶಾವತಾರಿಯಾದ ರಾಮ ರಾಜಕಾರಣದಲ್ಲಿ ಪವಾಡವನ್ನೆ ಸಾಧಿಸಿದ. ಪೂರ್ಣಾವತಾರಿಯಾದ ಕೃಷ್ಣ ತನ್ನ ಕೃತಿಗಳಿಂದ ವಿಶ್ವ ಕೋರೈಸುವ ಹಾಗೆ ಮಾಡಿದ, ಬೇರೊಬ್ಬರಿಲ್ಲ ಎನ್ನುವಂತೆ ಜೀವನಧರ್ಮವನ್ನು ಬೋಧಿಸಿದ. ಆದರೆ-ಈ ಸಮೃದ್ಧ ವ್ಯಕ್ತಿತ್ವದ ರಾಜಕೀಯ ಸಾಧನೆ ನೀರಿಗಿಂತ ಹೆಚ್ಚು ನೊರೆಯಾಗಿಬಿಟ್ಟಿತು.

ರಾಮನ ಮೂಲದಿಂದೇ ಬಂದ ಮಹತ್ವದ ವ್ಯಕ್ತಿ ಗಾಂಧಿ. ಅವರು ಸಾಯುವಾಗ ತುಟಿಯಮೇಲೆ ಇದ್ದದ್ದು ರಾಮಾಕ್ಷರಗಳು. ಅವರು ಬದುಕನ್ನು ರೂಪಿಸಿಕೊಂಡದ್ದು ಸೀಮಿತ ವ್ಯಕ್ತಿತ್ವದ ಆ ಅತ್ಯುಚ್ಛ ಮಾದರಿಯನ್ನೇ ಅನುಸರಿಸಿ. ಮತ್ತು ಅವರು ದೇಶದ ಜನಕ್ಕೆ ಹಾಗೇ ಆಗಲು ಕರೆಕೊಟ್ಟರು. ಆದರೆ ಗಾಂಧಿಯಲ್ಲಿ ಕೃಷ್ಣನ ವ್ಯಕ್ತಿತ್ವದ ಒಂದು ಎಳೆಯೂ-ಸರಿಯಾಗಿ ಹುರಿಗೊಂಡ ಗಟ್ಟಿ ಎಳೆಯೇ-ನೆಯ್ದುಕೊಂಡು ಬಿಟ್ಟಿತ್ತು ಎನಿಸುತ್ತದೆ. ಅವರ ಪಾತ್ರಗಳು; ಭಾಷಣಗಳು ಮತ್ತು ಇತರ ಲೇಖನಗಳು ದಿನದಿನಕ್ಕೆ ವಾರವಾರಕ್ಕೆ ಪ್ರಕಟಗೊಳ್ಳುತ್ತಿದ್ದ ಹಾಗೆ ಅವುಗಳಲ್ಲಿ ನಿಶ್ಚಲ ಸಾಂಗತ್ಯವಿದ್ದಂತೆ ಕಾಣಿಸುತ್ತಿತ್ತು. ಆದರೆ ಈಗ ಅವರ ಅನಂತರದಲ್ಲಿ ಓದುವಾಗ ಬೇರೆ ಬೇರೆ ಸಂದರ್ಭಗಳಲ್ಲಿನ ಅವುಗಳ ಅರ್ಥದ ವ್ಯತ್ಯಾಸ ಮತ್ತು ಧೋರಣೆಯಲ್ಲಿನ ವ್ಯತ್ಯಾಸ ಸ್ಪಷ್ಟ ಕಾಣುತ್ತದೆ. ಈ ಬದಲಾವಣೆಗಳ ಹಿಂದಿರುವ ಕೌಶಲ ಮತ್ತು ಕಸುಬುಗಾರಿಕೆ ನಮ್ಮನ್ನು ಬೆರಗುಗೊಳಿಸುತ್ತದೆ. ದ್ವಾರಕೆ ಮಥುರಾಕ್ಕೆ ಮರುಪಯಣ ಹೋಗಿತ್ತು. ದ್ವಾರಕೆಯ ಸಾಗರಶಿಶುವನ್ನು ಕೊಂದು ಯಮುನೆಯ ದಂಡೆಯಲ್ಲಿ ಸುಡಲಾಯಿತು. ಕೆಲ ಸಹಸ್ರವರ್ಷಗಳ ಹಿಂದೆ ಯಮುನೆಯ ಶಿಶುವನ್ನು ದ್ವಾರಕೆಯಸಮುದ್ರ ತೀರದಲ್ಲಿ ಕೊಂದು ಸುಡಲಾಗಿತ್ತು. ಆದರೆ ಈ ದ್ವಾರಕೆಯ ಶಿಶುವಿನ ಕಣ್ಣುಗಳು ಆ ಮರ್ಯಾದಾಪುರುಷೋತ್ತಮನಲ್ಲಿಯೆ ನೆಟ್ಟಿದ್ದವು ಮತ್ತು ಆತ ತನ್ನ ಗೋತ್ರಮೂಲವನ್ನು ಅಯೋಧ್ಯೆಯ ಮಾದರಿಯಲ್ಲಿ ಪುನರ್ನಿರ್ಮಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದನು. ಹೀಗಿದ್ದರೂ ಆತನಲ್ಲಿ ಒಂದು ವಿಲಕ್ಷಣ ಹಾಗೂ ವಿಶಿಷ್ಟ ಮಿಶ್ರಣವೇ ಇತ್ತು.

ರಾಮ ಮತ್ತು ಕೃಷ್ಣ ಮನುಷ್ಯ ಜೀವನವನ್ನೆ ಬದುಕಿದವರಾದರೆ ಶಿವ ಹುಟ್ಟಿಲ್ಲದವನು. ಸಾವೂ ಇಲ್ಲದವನು. ದೇವ ಸಹಜವೆನ್ನುವಂತೆ ಅವನು ಅನಂತ; ಆದರೆ, ದೇವತ್ವಕ್ಕೆ ವಿರುದ್ಧವಾಗಿ ಅವನ ಜೀವನ ಕಾಲದ ಅವಧಿಯಲ್ಲೆ ಸಂಭವಿಸಿದಂಥ ಘಟನೆಗಳಿಂದ ತುಂಬುಕೊಂಡಿದೆ. ಮೆಟ್ಟಿಲು ಮೆಟ್ಟಿಲು ತೋರುವ ಹಾಗಿದೆ. ಈ ಕಾರಣ ಅವನನ್ನು ದೇವರು ಎನ್ನುವುದಕ್ಕಿಂತ ಗಾತ್ರಾತೀತ ಎನ್ನಬೇಕು. ಪ್ರಾಯಃ, ಮಾನವಕುಲಕ್ಕೆ ಗೊತ್ತಿರುವ ಇಂಥ ಗಾತ್ರಾತೀತೆಯ ಕಥಾಕಲ್ಪನೆ ಅಥವಾ ಪುರಾಣ ನಿರ್ಮಿತ ಇವನೊಬ್ಬನದೆ ಸರಿ. ಈ ದೃಷ್ಟಿಯಿಂದ ಇವನ ಹತ್ತಿರಕ್ಕೆ ಬರಬಹುದಾದ ಕಲ್ಪನೆ ಇನ್ನೊಂದಿಲ್ಲ ಎಂಬುದಂತೂ ನಿಶ್ಚಿತ.

ಶಿವ ಹಣೆಗಣ್ಣು ತೆರೆದು ಕಾಮವನ್ನು ಉರಿಸಿ ಭಸ್ಮಕೇವಲ ಮಾಡಿದಾಗ, ಅವನ ಮನಃಪ್ರಿಯೆಯಾದ ರತಿ, ಕಣ್ಣುಗಳು ಅಶ್ರಕುಲಷಿತವಾಗಿರಲು ಶಿವನ ಹತ್ತಿರ ಬಂದು ತನ್ನ ಗಂಡ ಬದುಕಿಬರುವಂತೆ ಬೇಡಿಕೊಂಡಳು. ಕಾಮನೇನೋ ನಿಸ್ಸಂದೇಹವಾಗಿ ಮಹಾಪರಾಧದ ದೋಷಕ್ಕೆ ಗುರಿಯಾಗಿದ್ದ, ಶಿವನನ್ನೆ ಕ್ಷೋಭೆಗೊಳಿಸಲು ಯತ್ನಿಸಿದ್ದ. ನಾಮಗಾತ್ರಗಳಿಲ್ಲದೆ ಧ್ಯಾನದಲ್ಲಿ ಲೀನನಾಗಿದ್ದ ಸಮಾಧಿಮಗ್ನನಾಗಿದ್ದ ಆ ಮಹಾದೇವನನ್ನು ಆಸೆಗೆ ಎಳೆಯಲು ಯತ್ನಿಸಿದ್ದ; ತನ್ನ ನಿಲುಕಿಗಿಂತ ತುಂಬ ದೂರವಾದದ್ದರ ಮೇಲೆ ಗುರಿಯಿಟ್ಟಿದ್ದ; ಅದರಲ್ಲೆ ಸಾವನ್ನಪ್ಪಿದ. ಹರ್ಷೋಲ್ಲಾಸಗಳ ಚಿರಲಹರಿಯಾಗಿದ್ದ ರತಿ ಮೊತ್ತ ಮೊದಲಸಲಕ್ಕೆ ಶೋಕತಪ್ತಳಾಗಿದ್ದಳು, ಅದಕ್ಕೂ ಹೆಚ್ಚು ವಿಧವೆಯಾಗಿದ್ದಳು. ಇಡೀ ಜಗತ್ತು ದುರ್ವಿಧಿಯ ಧರೆಯಂಚಿಗೆ ಬಂದು ನಿಂತಂತಾಗಿತ್ತು; ಇನ್ನು ಮುಂದೆ ರತಿಯಿಲ್ಲದೆಯೆ ರತಿಕ್ರೀಡೆ ನಡೆಯಬೇಕಿತ್ತು. ಆದರೆ ಶಿವನಾದರೊ ಆಗಿದ್ದನ್ನು ಮನ್ನಿಸಿ ಬದಲಿಸುವ ಹಾಗಿರಲಿಲ್ಲ. ಶಿಕ್ಷೆಯೇನೋ ಅಪರಾದಕ್ಕೆ ತಕ್ಕದ್ದೇ ಆಗಿತ್ತು. ಆದರೆ ಪ್ರಲಾಪಿಸುತ್ತಿದ್ದಳು. ದುರ್ವಿಧಿಯ ಸುಳಿಗೆ ಸಿಕ್ಕ ಜಗತ್ತನ್ನು ಕಂಡೋ ಅಥವಾ ರತಿಯು ಶೋಕ ಕಂಡೊ ಶಿವನೂ ವಿಚಲಿತನಾದ, ಭಾವನಿರ್ಭರಕ್ಕಿಳಿದ. ಕಾಮನಿಗೆ ಆದರೆ ಅನಂಗವಾಗಿರುವಂತೆ ವಿಧಿಸಿದ ಅಲ್ಲಿಂದ ರಾಮ ಅನಂಗನಾಗಿಯೇ ಇದ್ದಾನೆ. ಅನಂಗನಾಗಿರುವ ಕಾರಣ ಅವನನ್ನು ತಡೆಯಬಲ್ಲ ಮೇರೆಮರ್ಯಾದೆಗಳಿಲ್ಲ; ಅವನು ಎಲ್ಲವನ್ನೂ ಮುಟ್ಟಬಲ್ಲ, ಎಲ್ಲವನ್ನೂ ಆರಿಸಿ ವ್ಯಾಪಿಸಬಲ್ಲ, ಹೊಕ್ಕು ಬಳಸಬಲ್ಲ, ಪತ್ತೆಯಿಲ್ಲದೆ ಬಂದು ಒಳಗು ಸೇರಿ ಕಿರಿಕಿರಿಹಚ್ಚಿ ಕಾಡಬಲ್ಲ. ಈ ನಾಟಕ ಶಿವನ ಅತ್ಯುನ್ನತ ಪರ್ವತನಿವಾಸದಲ್ಲಿ, ಕೈಲಾಸದಲ್ಲಿ, ನಡೆಯಿತೆಂದು ಭಾವಿಸಬೇಕೆನ್ನಿಸುತ್ತದೆ. ಒಂದುಕಡೆ ಹಂಸಗಳು ಮುತ್ತು ಕುಟುಕುತ್ತಿರುವ ಮಹಾಸರೋವರ ಮಾನಸದ ಕಣ್ತಣಿಸುವ ಸ್ಪಟಿಕಲ ಅಂಟುಗಟ್ಟಿದೆ: ಇನ್ನೊಂದು ಕಡೆ, ಆಳ ನೀಲದ ದೂರ ನಿಲ್ಲಿಸುವ ಗಾಂಭೀರ್ಯದ ಅಂಥವೇ ಮಹಾಸರೋವರ ರಾಕ್ಷಸತಲ ಸೆರಗಾಗಿದೆ-ಇವುಗಳ ನಡುವಣ ಕೈಲಾಸ, ಸಾರ್ವಕಾಲಿಕ ಹಿಮಾಚ್ಛಾದಿನದಿಂದ ಏಕಾಂತ ನೀರವದಿಂದ ಮತ್ತಾವುದೇ ಪರ್ವತಪ್ರದೇಶದಂತಲ್ಲದೆ ಅಕ್ಷತಭೂಮಿಯಾಗಿ, ಹಿಂದೂ ಪುರಾಣ ಹೇಳುವಂತೆ ವಿಶ್ವದ ಕೆಂದ್ರಸ್ಥಾನವಾಗಿದೆ, ಭೂಮಿಯಲ್ಲೇ ಅದ್ವೀತಿಯ ರಮ್ಯವಾಗಿದೆ.

ಧರ್ಮ ಮತ್ತು ರಾಜಕಾರಣ, ದೇವರು ಮತ್ತು ರಾಷ್ಟ್ರ (ಅಥವಾ ಜನಾಂಗ) ಒಂದಕ್ಕೊಂದು ಮಿಶ್ರವಾಗಿಬಿಡುವುದುಂಟು, ಎಲ್ಲ ಕಡೆಗೂ ಎಲ್ಲ ಕಾಲದಲ್ಲೂ, ಇಂಥದು ಉಳಿದೆಲ್ಲ ಕಡೆಗಳಿಗಿಂತ ಇಂಡಿಯಾದಲ್ಲೇ ಹೆಚ್ಚು. ಶಿವನ ಜೀವಿತದ ಮಹತ್ ಘಟನೆಗಳಲ್ಲಿ ಒಂದು, ಪಾರ್ವತಿಯ ಮರಣಾನಂತರದ ಆತನ ದೈತ್ಯಶೋಕ. ಪಾರ್ವತಿಯ ಕಲೇವರವನ್ನು ಬೆನ್ನಿಗೂ ಹೆಗಲಿಗೂ ಚೆಲ್ಲಿಕೊಂಡು ಆತ ಇಡೀ ದೇಶದ ಒಳಗೂ ಸುತ್ತಲೂ ಧಾವಂತ ಸುತ್ತಿದ. ಈ ಧಾವಂತದಲ್ಲಿ ಪಾರ್ವತಿಯ ದೇಹದ ಅಂಗಾಂಗಳು ಒಂದೊಂದೇ ಕಳಚಿ ಬೀಳುತ್ತಿದ್ದವು. ಕೊನೆಯ ಚೂರು ಉದುರುವ ತನಕವೂ ಶಿವ ನಿಲ್ಲಲಿಲ್ಲ. ತೀಕ್ಷ್ಣವೂ ನಿಸ್ಸಂಕೋಚವೂ ಆದ ಮೈತ್ರಿಯ ಇಂಥ ಅವಧೂತಕಥೆಯನ್ನು ಯಾವ ಪ್ರೇಮಿಯೂ ಉಳಿಸಿಹೋಗಿಲ್ಲ-ದೇವಾನುದೇವತೆಗಳಲ್ಲಾಗಲಿ,, ದೈತ್ಯರಲ್ಲಾಗಲಿ, ಮನುಷ್ಯರಲ್ಲಾಗಲಿ. ಅದಷ್ಟೇ ಅಲ್ಲ, ಈ ಕಥೆ ಇಂಡಿಯಾದ ಕ್ಷಯವಿಲ್ಲದಂಥ ಅಂತಃಸ್ಫೂರ್ತವಾದ ಏಕತೆಯ ಕಥೆಯನ್ನೂ ಹೇಳುತ್ತದೆ. ಪಾರ್ವತಿಯ ಒಂದೊಂದು ಅಂಗ ಕೆಳಗೆ ಬಿದ್ದಲ್ಲೂ ಒಂದೊಂದು ಯಾತ್ರಾಸ್ಥಳ ಕಲ್ಪಿತವಾಗಿದೆ. ಮಾಣಿಕ್ಯ ಮುಡಿದ ಅವಳ ಕಿವಿ ವಾರಣಾಸಿಯಲ್ಲಿ ಬಿತ್ತು, ಅದು ಮಣಿಕರ್ಣಿಕಾ ಎನ್ನಿಸಿಕೊಂಡಿತು. ಇವೊತ್ತಿಗೂ, ಸತ್ತವರನ್ನು ಅಲ್ಲಿ ಸುಟ್ಟರೆ ಅವರಿಗೆ ನಿಸ್ಸಂಶಯ ಮುಕ್ತಿ ದೊರೆಯುತ್ತದೆ ಎಂದು ತಿಳಿಯಲಾಗುತ್ತದೆ. ಭಾರತದ ಉತ್ತರದ ತುದಿಯಲ್ಲಿ ದೂರಕ್ಕಿರುವ ಕಾಮರೂಪದಲ್ಲಿ ಆಕೆಯ ಛಿನ್ನಮುಂಡ ಬಿದ್ದಿತಂತೆ. ನೂರಾರು ಪೀಳಿಗೆಗಳು ಕಳೆದು ಈಗಲೂ ಅದರ ಮಾಂತ್ರಿಕತೆ ಅಳಿದಿಲ್ಲ. ಈಗ ಕೂಡ ಮನೆಯೊಳಗಿನ ಅಜ್ಜಿಯರು ಕಾಮರೂಪದ ಸ್ತ್ರೀಯರ ಬಗ್ಗೆ ಮಕ್ಕಳಿಗೆ ಎಚ್ಚರ ಹೇಳುತ್ತಾರೆ.. ಅವರು ತಮ್ಮ ಗಂಡಸರನ್ನು ಪಳಗಿದ ಕೋಣವಾಗಿಸಿಬಿಡುತ್ತಾರೆ-ಎಂದು.

ಸೃಷ್ಟಿಕರ್ತನಾದ ಬ್ರಹ್ಮನೂ ಸ್ಥಿತಿಕಾರಕನಾದ ವಿಷ್ಣುವೂ ಒಮ್ಮೆ ತಮ್ಮಲ್ಲಿ ಕಾದಾಡಿಕೊಳ್ಳಲು ತೊಡಗಿದರಂತೆ, ತಮ್ಮಲ್ಲಿ ಯಾರು ಮೊದಲು ಮತ್ತು ಯಾರು ಹೆಚ್ಚು ಎಂಬ ಪ್ರಶ್ನೆಗಾಗಿ. ಆಮೇಲೆ ಅವರು ಅದರ ತೀರ್ಪಿಗಾಗಿ ಸಂಹಾರಕನಾದ ಶಿವನ ಬಳಿಗೆ ಹೋದರು. ಶಿವ ಅವರಲ್ಲಿ ಒಬ್ಬನನ್ನು ತನ್ನ ತಲೆದೆಸೆಗೂ ಇನ್ನೊಬ್ಬನನ್ನು ಕಾಲದೆಸೆಗೂ ಕಳಿಸಿದ, ತುದಿಮುಟ್ಟಿಬರುವಂತೆ ಹೇಳಿ; ಅದರಲ್ಲಿ ಯಾರು ಮೊದಲು ತುದಿ ಕಂಡುಬರುತ್ತಾರೋ ಅವರು ವಾದದಲ್ಲಿ ಗೆದ್ದವರೆಂದು ತೀರ್ಪು ಸಿಕ್ಕುತ್ತಿತ್ತು. ಇಬ್ಬರೂ ಹೋದರು. ಅನೇಕ ಯುಗಗಳು ಕಳೆದವು. ಕೊನೆಯಲ್ಲಿ ಇಬ್ಬರೂ ಸೋತು ಕೋಡುಮುರಿದಂತಾಗಿ ಹಿಂತಿರುಗಿದ್ದರು. ಶಿವ ಹೀಗೆ ಇಬ್ಬರಿಗೂ ಜಂಭ ಮುರಿದು ಎಚ್ಚರಿಸಿದ. ಉಳಿದ ಇಂಥ ಪ್ರಸಂಗಗಳಲ್ಲಿ ಹೇಗೋ ಹಾಗೆ ಈ ಪ್ರಸಂಗ ಮುಗಿದ ಮೇಲೆ ತ್ರಿಮೂರ್ತಿಗಳು ಕೂಡ ನಕ್ಕಿರಬೇಕು. ಬೇರೆ ಅನೇಕ ಕಥೆಗಳಲ್ಲಿ ವಿಷ್ಣುವಿಗೂ ಅನಂತ ನಿದ್ರೆಯವನು ಅಗಮ್ಯಗಾತ್ರನು ಮುಂತಾಗಿ ಹೇಳಿರುವುದು ಇಲ್ಲಿ ನೆನಪಾಗುತ್ತದೆ. ಇದೇ ರೀತಿ ಶಿವನ ಪ್ರಮಾಣೀತೀತ ಅಥವಾ ಗಾತ್ರಾತೀತ ವ್ಯಕ್ತಿತ್ವಕ್ಕೂ ಅನಂತ ಅಥವಾ ಅಗಮ್ಯ ಎಂದು ಲಕ್ಷಣ ಹೇಳಿಬಿಡಬಹುದು. ಅದು ತಪ್ಪು. ಶಿವನು ಯಾವುದೇ ವಿಶೇಷಣ ಹಚ್ಚಿ ಹೇಳಲು ಬರುವ ಪ್ರಮಾಣದವನಲ್ಲ; ಪ್ರಮಾಣದ ಕಲ್ಪನೆಗೇ ಹೊರಗಾಗಿರುವವನು. ಹೆಚ್ಚು ಕಡಿಮೆ ಅಥವಾ ಅನಂತ ಎಂಬ ಗುಣದ ಉದ್ದಗಲಗಳಿಂದ ಅವನನ್ನು ಅಳೆಯುವುದಕ್ಕೇ ಸಾಧ್ಯವಿಲ್ಲ. ಇವನನ್ನು ಸೂಚಿಸುವ ಸಲುವಾಗಿ ಮತ್ತೊಂದು ಕಥೆಯಿದೆ. ಒಬ್ಬ ಸುಂದರಿಯ ಪಾಣಿಗ್ರಹಣಕ್ಕಾಗಿ ಶಿವನ ಮಕ್ಕಳಿಬ್ಬರಲ್ಲಿ ನಡೆದ ಮೇಲಾಟದ ಕಥೆ ಅದು. ಇಬ್ಬರಲ್ಲಿ ಯಾರು ಈ ಜಗತ್ತನ್ನೆಲ್ಲ ಸುತ್ತಿ ಮೊದಲು ಹಿಂದಿರುಗಿ ಬರುತ್ತಾರೋ ಅವರಿಗೆ ಆ ಸುಂದರಿ ಕಾಣಿಕೆಯಾಗಿ ದೊರೆಯುತ್ತಾಳೆ ಎಂದ ಶಿವ. ದೃಢಕಾಯನೂ ಸುಂದರನೂ ಆಗಿದ್ದ ಕಾರ್ತಿಕೇಯ ಕ್ಷಣವೂ ತಡಮಾಡದೆ ಹೊರಟುಬಿಟ್ಟ. ಆನೆಮುಖದ ಗಣಪ ಯಾವಾಗಲೂ ಜೋಲು ಮೋರೆಯವನೇ; ಏನು ಮಾಡುವುದೆಂದು ಬೆರಗಾಗಿ ಯೋಚಿಸುತ್ತಾ ಹಲವರಿಯುತ್ತ ಕೂತುಬಿಟ್ಟ. ಎಷ್ಟೋ ಹೊತ್ತು ಕಳೆದುಹೋಯಿತು. ಇದ್ದಕ್ಕಿದ್ದಂತೆ ಆತನಿಗೆ ಹೊಳೆದಹಾಗಾಯಿತು, ತುಂಟ ಕಣ್ಣುಗಳು ಮಿನುಗಿದವು. ಸಾವಧಾನವಾಗಿ ಎದ್ದು ಒಮ್ಮೆ ತಂದೆಯ ಸುತ್ತ ಪ್ರದಕ್ಷಿಣೆ ಬಂದು ಕೂತ, ಆಯಿತು ಜಗತ್ ಪ್ರದಕ್ಷಿಣೆ ಎನ್ನುತ್ತ, ಪಂಥದಲ್ಲಿ ಗೆದ್ದ. ಇದು ನೀತಿಕಥೆಯಾಗಿ ವಿವೇಚನೆಯ ಪ್ರಯೋಜನವನ್ನು ವಿವೇಕರಹಿತ ಆತುರದ ಎದುರು ಸಾವಧಾನ ಬುದ್ದಿಯ ಹೆಚ್ಚಳವನ್ನೂ ಬೋಧಿಸಬಹುದು. ಆದರೆ ಇದು ಮುಖ್ಯವಾಗಿ ಶಿವನ ಕಥಾರಹಸ್ಯಕ್ಕೆ ಕೂಡಿದ್ದು ಮೂಲತಃ ಅವನು ಅನಂತಗಾತ್ರನಾಗಿರುವ ಹಾಗೆ ಅದೇ ಕಾಲದಲ್ಲಿ ಏಳು ಹೆಜ್ಜೆ ಅಳೆಯಬಲ್ಲ ನಿಶ್ಚಿತಗಾತ್ರನೂ ಆಗಿದ್ದಾನೆ. ದೈಹಿಕವಾಗಿ ಹೇಳುವುದಾದರೂ ಶಿವನು ಪ್ರಮಾಣಾತೀತನೇ ಸರಿ.

ಆನೆಮುಖದ ಗಣೇಶನ ವ್ಯಕ್ತಿತ್ವಕ್ಕೂ ತೀರ ವಿಶಿಷ್ಟವಾದದ್ದೆ. ಒಂದು ರೀತಿಯಿಂದ ಅವನು ತನ್ನ ತಂದೆಯ ಕೈಚಳಕವೇ ಆಗಿದ್ದಾನೆ, ಇನ್ನೊಂದು ರೀತಿಯಿಂದ ತನ್ನ ಅನಾತುರದ ಆದರೆ ಆಳವಾದ ಬುದ್ದಿಮತ್ತೆಯ ಸಾಕಾರನಾಗಿದ್ದಾನೆ. ಸಣ್ಣ ಹುಡುಗನಾಗಿದ್ದಾಗ ಒಮ್ಮೆ ಅವನ ತಾಯಿ ಸ್ನಾನಕ್ಕೆ ಹೋಗುವಾಗ ಹೊರಗೆ ಈತನನ್ನು ನಿಲ್ಲಿಸಿದ್ದಳು. ಯಾರನ್ನೂ ಒಳಕ್ಕೆ ಬಿಡದಿರುವಂತೆ ಹೇಳಿ, ಅದೇ ಹೊತ್ತಿನಲ್ಲಿ ಶಿವ ಅಲ್ಲಿಗೆ ಬಂದ. ಅವನೋ ಮೊದಲೇ ಶೀಘ್ರಕೋಪಿ, ಗಣೇಶನೋ ಅಚಲನಾದ ಬಂಟ. ಗಣೇಶ ಶಿವನನ್ನು ತಡೆದ, ಶಿವ ಮಗನ ಕುತ್ತಿಗೆ ಅರಿದು ಹಾಕಿದ. ಮುಂದೆ ಪಾರ್ವತಿಯ ಶೋಕಕ್ಕೆ ಮೇರೆಯಿಲ್ಲವಾಯಿತು. ಅಷ್ಟರಲ್ಲಿ ಅಲ್ಲೆ ಒಂದು ಆನೆ ಹೋಗುತ್ತಿದ್ದುದು ಕಂಡಿತು. ಶಿವ ಆ ಆನೆಯ ಕುತ್ತಿಗೆಯನ್ನೆ ಕತ್ತರಿಸಿ ಗಣೇಶನಿಗಿಟ್ಟ. ಅದು ಮೊದಲಾಗಿ ಮನುಷ್ಯಬುದ್ದಿಯೂ ಆನೆಯ ವಿಧೇಯತೆಯೂ ಏಕತ್ರ ಹೊಂದಿಕೊಂಡು ಜ್ಞಾನಸಾಗರನಾಗಿರುವ ಈ ಗಜ ದೇವತೆ ಎಲ್ಲ ಹಿಂದೂ ಮನೆಗಳಲ್ಲೂ ಯಾವುದೇ ಕಾರ‍್ಯದ ಬುಡಕ್ಕೂ ಪ್ರಥಮ ಪೂಜೆಗೊಳ್ಳುತ್ತಿದ್ದಾನೆ. ಅವನಿಗೆ ನಮಸ್ಕರಿಸಿ ಏನನ್ನೇ ತೊಡಗಿದರೂ ಜಯ ನಿಶ್ಚಿತ. ಈ ಸಂದರ್ಭದಲ್ಲಿ ಶಿವ ತನ್ನ ಸಹಜ ಚಾರಿತ್ರ್ಯಕ್ಕೆ ವಿರುದ್ಧನಡೆದುಕೊಳ್ಳಲಿಲ್ಲವೆ ಎಂದು ಎಷ್ಟೋ ಸಲ ಆಶ್ಚರ್ಯವಾಗಿದೆ ನನಗೆ. ಅವನ ಈ ಕೃತಿ ಸಮರ್ಥನೀಯವೇ? ಗಣೇಶನಿಗೆ ಜೀವ ಮರಳಿ ಪಾರ್ವತಿಯ ದುಃಖ ತಣಿಯಿತು ನಿಜ, ಆದರೆ ಆ ಆನೆ, ಯಾವುದೋ ಮರಿಯ ತಾಯಿ, ಈ ಬಗ್ಗೆ ಜೀವನ ಕಳೆದುಕೊಂಡಂತಾಗಲಿಲ್ಲವೆ? ಬಹುಶಃ ಈ ಪ್ರಶ್ನೆಯಲ್ಲಿ ಉತ್ತರವೂ ಹೊಳೆಯುವಂತಿದೆ. ಗಜಮುಖನ ಈ ನೂತನ ನಿರ್ಮಿತಿಯಲ್ಲಿ ಹಿಂದಿನ ಗಣೇಶನೂ ಆ ಆನೆಯೂ-ಎರಡು ಜೀವ ಪಡೆದುಕೊಂಡಂತಾಯಿತು. ಎರಡೂ ಜೀವ ಇಲ್ಲಿ ಮತ್ತೆ ತಮ್ಮ ಬದುಕನ್ನು ಮುಂದುವರಿಸಿದವು, ಯಾರೂ ಸಾಯಲಿಲ್ಲ ಮತ್ತು ಮನುಷ್ಯ ಮತ್ತು ಆನೆಯ ಈ ಮೋಜಿನ ಮಿಶ್ರಣ ಎಂಥ ನಿತ್ಯಹರ್ಷದ ನಿತ್ಯಜ್ಞಾನದ ನೂತನ ಸೃಷ್ಟಿಯಾಗಿತ್ತು!

ಶಿವನ ಇನ್ನೊಂದು ಕೃತಿ ಸಮರ್ಥನೆ ಇದಕ್ಕಿಂತಲೂ ಕೊಂಚ ಹೆಚ್ಚು ಕಷ್ಟದ್ದು. ಅದು ಒಮ್ಮೆ ಅವನು ಪಾರ್ವತಿಯ ಸಂಗಡ ಪಂಥ ಕಟ್ಟಿ ನರ್ತಿಸಿದ್ದು, ಹೆಜ್ಜೆಗೆ ಹೆಜ್ಜೆ ಕೊಟ್ಟು ಶಿವನನ್ನು ಮೀರಿಸಿದಳು ಪಾರ್ವತಿ. ಕುಣಿತದ ಗತಿ ತೀವ್ರತೆ ಏರುತ್ತಿತ್ತು. ಪಾರ್ವತಿಯನ್ನು ಸೋಲಿಸುವುದಕ್ಕೆ ಆಗದೆಂದು ಕಂಡು ಶಿವ ಕ್ಷಣದಲ್ಲಿ ನೃತ್ಯಚಾರಿಯನ್ನೇ ಬದಲಿಸಿ, ಕಾಲನ್ನು ಅಷ್ಟೆತ್ತರಕ್ಕೆತ್ತಿದ. ಪಾರ್ವತಿ ಮೂಕವಿಸ್ಮಿತಳಾಗಿ ನಿಬ್ಬೆರಗಾಗಿ ನಿಂತುಬಿಟ್ಟಳು. ಹೆಣ್ಣಿನ ಮರ‍್ಯಾದೆಗೆ ತೀರ ಮೀರದಂಥ ಆ ಭಂಗಿಯನ್ನು ಅಭಿನಯಿಸಲು ಅಸಾಧ್ಯವಾಗಿ ತನ್ನ ಪತಿ ಇಂಥ ಅಸಾಧುಮಾರ್ಗಕ್ಕೆ ಮೊರೆಹೊಕ್ಕದ್ದು ಕಂಡು ಆಕೆ ಅಪ್ರತಿಭಳಾದಳು. ಆದರೆ-ಬದುಕಿನ ಕುಣಿತದಲ್ಲಿ ಅಂಥ ಹುಚ್ಚು ನೆಗೆತಗಳು, ಯಾವುದನ್ನು ಲೋಕದ ಮಡಿಬುದ್ದಿ ಅಶ್ಲೀಲವೆನ್ನುತ್ತದೋ ಮತ್ತು ಅಂಥದರಿಂದ ತನ್ನ ಹೆಣ್ಣುಗಳ ಮರ‍್ಯಾದೆಯನ್ನು ರಕ್ಷಿಸಲು ಹೆಣಗುತ್ತದೋ ಅಂಥ ನೆಗೆತಗಳು. ಶಿವ ಅಂಥ ರ‍್ಯವತ್ತಾದ ಭಂಗಿಯನ್ನು ತೋರಿದ್ದು, ಪಂಥವೊಂದರಲ್ಲಿ ತಾನು ಸೋತುಹೋಗಿಲ್ಲಿದ್ದಾಗ; ಅದನ್ನು ಮೋಸದಿಂದ ಮರೆಸಿ ಹೇಗೋ ಗೆಲುವು ಪಡೆಯುವ ಸಲುವಾಗಿಯೇ? ಅಥವಾ ಕನಿಷ್ಠ ಅದರಷ್ಟೇ ಮುಖ್ಯವಾಗಿ, ಹೆಜ್ಜೆಯಿಂದ ಹೆಜ್ಜೆಗೆ ಲಯ ಕಾವೇರುತ್ತ ಸಹಜ ತೀವ್ರಗೊಂಡು ವಿಜೃಂಭಿಸುವ ಬದುಕಿನ ಕುಣಿತದ ಅಂಗಮಾತ್ರವಾಗಿಯೇ?

ತನಗೆ ತಾನೇ ನ್ಯಾಯವೆಂದು ನಿಸ್ಸಂದೇಹ ಸಮರ್ಥಿಸಿಕೊಳ್ಳಲಾಗದಂಥ ಯಾವುದೇ ಕಾರ‍್ಯವನ್ನೂ ಮಾಡಿದವನಲ್ಲ ಶಿವ. ಈ ರೀತಿಯಲ್ಲಿ ಅವನು ಮನುಷ್ಯಕುಲ ಬಲ್ಲ ಏಕೈಕ ಸೃಷ್ಟಿ-ಯಾವನ ಸಮಸ್ತ ಕೃತಿಗಳೂ ತಮ್ಮಿಂದ ತಾವೇ ಸಮರ್ಥನೆಗೊಳ್ಳಬಲ್ಲವೋ ಅಂಥವನು. ಅವನ ಯಾವುದೇ ಕೃತಿಯನ್ನು ಸಮರ್ಥಿಸುವ ಸಲುವಾಗಿ ಹಿಂದಿನ ಮತ್ತೊಂದರಲ್ಲಿ ಕಾರಣವನ್ನಾಗಲಿ ಮುಂದಿನದ್ದೊಂದರ ಪರಿಣಾಮವನ್ನಾಗಲಿ ಹುಡುಕಬೇಕಾದ್ದಿಲ್ಲ. ಬದುಕು ಎನ್ನುವುದು ಕಾರ‍್ಯಕಾರಣಗಳ ಅತಿ ದೀರ್ಘ ಸರಪಳಿ. ಮನುಷ್ಯನೂ ದೇವತೆಗಳೂ ಇಬ್ಬರೂ ತಮ್ಮ ಕಾರ‍್ಯಗಳ ಸಮರ್ಥನೆಗಾಗಿ ಈ ದೀರ್ಘದ ಮೊರೆ ಹೊಕ್ಕಿದ್ದಾರೆ. ಯಾವೊಂದು ಕಾರ‍್ಯದಮೇಲೂ ಅಂಥ ದೂರನಿಯಂತ್ರಣವಿದೆಯೆಂಬ ಕಲ್ಪನೆ ಸದಾ ದುರುಪಯೋಗಕ್ಕೆ ಗುರಿಯಾಗಿದೆ. ಸಂಪೂರ್ಣ ಅಸಮರ್ಥನೀಯ ಕಾರ‍್ಯಗಳನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಚಾತುರ‍್ಯದ ಬುದ್ದಿತಂತ್ರಗಳನ್ನು ಬಳಸಲಾಗುತ್ತದೆ. ಇಂಥ ಬುದ್ದಿವಂತಿಕೆಯಿಲ್ಲದ ಸುಳ್ಳು ಸತ್ಯವಾಗಬಹುದು, ಬಂಧನವೇ ಸ್ವಾತಂತ್ರ್ಯವೆನ್ನಿಸಿಕೊಳ್ಳ ಬಹುದು, ಕೊಲೆ ಬದುಕೆನ್ನಿಸಿಕೊಳ್ಳಬಹುದು. ಅಂಥ ಬುದ್ದಿತಂತ್ರಕ್ಕೆ ವಿರುದ್ಧವಿದ್ದು ಅದನ್ನು ನಿವಾರಿಸಬಲ್ಲ ಒಂದೇ ಒಂದು ಈ ಶಿವತತ್ವ. ಶಿವತಾತಣಿಕ ಸಿದ್ದಾಂತಕ್ಕೆ ಸಾಕಾರನಾಗಿದ್ದಾನೆ. ಅವನ ಪ್ರತಿಯೊಂದು ಕೃತಿಯೂ ತತ್ತಕ್ಷಣದಲ್ಲೇ ತನ್ನನ್ನು ಸಮರ್ಥಿಸಿಕೊಳ್ಳುವಂಥದು: ಅದಕ್ಕಾಗಿ ಹಿಂದಿನ ಅಥವಾ ಮುಂದಿನ ಕಾರ‍್ಯಕಾರಣಗಳನ್ನು ಕೆದಕಬೇಕಾಗಿಲ್ಲ.

ಗಾತ್ರಾತೀತವಾದ ಈ ವ್ಯಕ್ತಿತ್ವ ತಾತಣಿಕತೆಯ ಈ ಮಹತ್ ಪುರಾಣತತ್ವಜಗತ್ತಿಗೆ ಮತ್ತೂ ಎರಡು ದರ್ಶನವೈಭವಗಳನ್ನು ಕೊಟ್ಟಿದೆ. ದೇವತೆಗಳು ಮತ್ತು ರಾಕ್ಷಸರು ಸಮುದ್ರಮಥನ ಮಾಡಿದಾಗ ಅಮೃತ ಬರುವ ಮೊದಲೇ ವಿಷ ಹೊರಟಿತು. ಈ ವಿಷವನ್ನು ಯಾರಾದರೂ ಕುಡಿದು ಮುಗಿಸಬೇಕಾಗಿತ್ತು. ಆ ಹಿಂದೆ ನಡೆದ ದೇವರಾಕ್ಷಸ ಯುದ್ಧಗಳಲ್ಲಾಗಲಿ ಸಮುದ್ರಮಂಥನದ ಸಹಕೃತ ಸಾಹಸದಲ್ಲಾಗಲಿ ಶಿವ ಪಾಲುಗೊಂಡವನಲ್ಲ. ಹಾಗಿದ್ದೂ ಅವನು ಹುಟ್ಟಿದ ವಿಷವನ್ನು ಹೀರಿ ಕಥೆ ಮುಂದುವರಿಸುವಂತೆ ಮಾಡಿದ. ಕುಡಿದ ವಿಷ ಗಂಟಲಲ್ಲೆ ನಿಲ್ಲಿಸಿಕೊಂಡು ಅಲ್ಲಿಂದ ಮುಂದೆ ನೀಲಕಂಠ ಎಂದು ಹೆಸರಾದ. ಶಿವತತ್ತ್ವದ ಇನ್ನೊಂದು ದರ್ಶನ ಎಲ್ಲ ಕಾಲಕ್ಕೂ ಎಲ್ಲ ಹೊತ್ತಿನಲ್ಲೂ ಪೂಜಾರ್ಹವಾದದ್ದು. ಒಮ್ಮೆ ಯಾವನೋ ಭಕ್ತ ಶಿವ ಜೊತೆಯಲ್ಲಿ ಪಾರ್ವತಿಗೂ ಪೂಜೆ ಸಲ್ಲಿಸಲು ನಿರಾಕರಿಸಿದಾಗ ಶಿವ ಅರ್ಧನಾರೀಶ್ವರನಾಗಿ ನಿಂತ: ದೇಹಾರ್ಧ ತಾನಾಗಿ ಮತ್ತೊಂದು ಪಾರ್ವತಿಯಾಗಿ ಪೂಜೆಗೊಂಡ. ಈ ಚಿತ್ರವನ್ನು ಮುಡಿಯಿಂದ ಅಡಿತನಕ ವಿವರ ವಿವರವಾಗಿ ಇಡೀ ಕಲ್ಪಿಸಿಕೊಳ್ಳಲು ಯತ್ನಿಸಿ ತುಂಬ ಕಷ್ಟವಾಗಿದೆ ನನಗೆ, ಅನೇಕ ಸಲ. ಆದರೆ ಈ ದರ್ಶನ ಮಾತ್ರ ತುಂಬ ಸುಂದರವಾದದ್ದು.

ಈ ಪುರಾಣ ಕಲ್ಪನೆಗಳು ಕಾಲಕಾಲಕ್ಕೆ ಕ್ರಮವಾಗಿ ದುಷ್ಪಾಕಗೊಳ್ಳುತ್ತ ಬಂದುದನ್ನೂ ಇಲ್ಲಿ ಗುರುತಿಸುವ ಇಚ್ಛೆಯಿಲ್ಲ ನನಗೆ. ಶತಮಾನಗಳಲ್ಲಿ ಹಾದುಬರುವಾಗ ಇವೆಲ್ಲ ಅಧಃಪತನಕ್ಕೆ ಆಹಾರವಾಗಿವೆ, ಪೂರ್ಣತ್ವಕ್ಕೆ ನೆರೆದ ಬೀಜ ಕೆಲವು ಸಲ ಕೊಳೆತು ಪಿಶಾಚಪೀಡೆಯಾಗಿ ನಾರಿದೆ. ರಾಮನ ಭಕ್ತರು ಮತ್ತೆ ಮತ್ತೆ ಪತ್ನೀಪರಿತ್ಯಾಗ ಪರಾಯಣರಾಗಿದ್ದಾರೆ, ಕೃಷ್ಣಭಕ್ತರು ಕಳ್ಳರಾಗಿದ್ದಾರೆ, ಶಿವಭಕ್ತರು ಹೊಲೆಗೊಳಕನ್ನೇ ಪ್ರೀತಿಸುವವರಾಗಿದ್ದಾರೆ. ಅಧಃಪತನಗೊಳ್ಳುತ್ತ ಹಾದಿ ತಪ್ಪುತ್ತ ಸೀಮಿತವ್ಯಕ್ತಿತ್ವ ಕೂಪಮಂಡೂಕವಾಗುತ್ತದೆ. ಸಮೃದ್ಧ ವ್ಯಕ್ತಿತ್ವ ಅನೈತಿಕವಾಗುತ್ತವೆ, ಗಾತ್ರಾತೀತ ವ್ಯಕ್ತಿತ್ವ ಆಕಾರವಿಲ್ಲದೆ ಹೊಗೆಯಾಗುತ್ತದೆ, ಛಿನ್ನಾಭ್ರವಾಗುತ್ತದೆ, ಕಥೆಗಷ್ಟೆ ಅನ್ನವಾಗುತ್ತದೆ. ಕುಲಮರಳಿದ ರಾಮ ಅಲ್ಪವ್ಯಕ್ತಿತ್ವದ ಪರಿಣತಿಯೂ, ಕುಲಮರಳಿದ ಕೃಷ್ಣ ಅನೈತಿಕತೆಯ ಪರಿಣಿತಿಯೂ, ಕುಲಮರಳಿದ ಶಿವ ಪ್ರೇತತ್ವದ ಪರಿಣತಿಯೂ ಆಗುತ್ತದೆ. ರಾಮ ಸೀಮಿತನೂ ಆಗಿ, ಅಲ್ಪನೂ ಆಗಿ, ಕೃಷ್ಣ ಸಮೃದ್ಧನೂ ಆಗಿ, ಕಾಮುಕನೂ ಆಗಿ, ಶಿವ ಗಾತ್ರಾತೀತನೂ ಆಗಿ, ಕಾಲ್ಪನಿಕನೂ ಆಗಿ ಇಬ್ಬಂದಿ ಬದುಕು ಬಾಳುತ್ತಾರೆ. ಇದಕ್ಕೆ ಒಂದು ಪರಿಹಾರ ಸೂಚಿಸುವ ಮೂರ್ಖತನಕ್ಕೆ ಹೋಗದೆ ಇಷ್ಟೆ ಪ್ರಾರ್ಥಿಸುತ್ತೇನೆ: ತಾಯಿ, ಭಾರತಿ, ನಮಗೆ ಶಿವನ ಮನಸ್ಸನ್ನೂ ಕೃಷ್ಣನ ಹೃದಯವನ್ನೂ, ರಾಮನ ಕಾರ‍್ಯಪ್ರಪಂಚವನ್ನೂ ಕೊಡು; ಪ್ರಮಾಣತೀತವಾದ ಮನಸ್ಸು ಸಮೃದ್ಧ ಹೃದಯ ಆದರೆ ಸೀಮಿತವಾದ ಬುದುಕು-ಇವುಗಳಿಂದ ನಮ್ಮನ್ನು ನಿರ್ಮಿಸು.