ಪ್ರಪಂಚದ ಇತರ ಎಲ್ಲ ದೇಶಗಳಿಗಿಂತ ಹೆಚ್ಚಿನ ಪುರಾಣ ಸಮೃದ್ದಿ ಇಂಡಿಯಾದಲ್ಲಿದೆ. ಇಲ್ಲಿನ ಮಹಾಪುರಾಣಗಳು ಶತಮಾನ ಶತಮಾನಗಳ ಕಾಲದಿಂದ ಜನರ ಮನಸ್ಸನ್ನು ಅಖಂಡವಾಗಿ ಆಳುತ್ತಾ ಬಂದಿದ್ದಾವೆ. ಬುದ್ಧ, ಅಶೋಕ ಈ ಮೊದಲಾದ ಇತಿಹಾಸದ ಮಹಾವ್ಯಕ್ತಿಗಳ ಹೆಸರು ನಮ್ಮ ಜನರಲ್ಲಿ ಕಾಲುಭಾಗಕ್ಕೆ ಮಿಕ್ಕು ತಿಳಿದಿಲ್ಲ; ಇನ್ನು, ಅವರು ಏನು ಮಾಡಿದ್ದರೆಂಬುದು ಹತ್ತರಲ್ಲಿ ಒಬ್ಬನಿಗೆ ಅಷ್ಟೋ ಇಷ್ಟೋ ಗೊತ್ತಿರಬಹುದು ಮತ್ತು, ನೂರಕ್ಕೊ ಸಾವಿರಕ್ಕೋ ಒಬ್ಬ ಅವರ ಕೃತಿ ಹಾಗೂ ಆದರ್ಶಗಳನ್ನು ಕೊಂಚ ವಿವರವಾಗಿ ಹೇಳಬಲ್ಲನೆಂದರೆ ಅದೂ ಸ್ವಲ್ಪ ಆಶ್ಚರ್ಯದ ಮಾತೇ. ಆದರೆ, ರಾಮ ಕೃಷ್ಣಶಿವ ಈ ಮೂರು ಹೆಸರುಗಳು ಮಹತ್ತಮವಾದ ನಮ್ಮ ಈ ಮೂರು ಪುರಾಣ ಕಲ್ಪನೆಗಳು, ಎಲ್ಲರಿಗೂ ಗೊತ್ತು; ಅವರು ಏನೇನು ಮಾಡಿದರೆಂಬುದು ಮಸುಮಸುಕಾಗಿಯಾದರೂ ಸಾಮಾನ್ಯ ಎಲ್ಲರಿಗೆ, ಕನಿಷ್ಟ ಮೂವರಲ್ಲಿ ಇಬ್ಬರಿಗೆ, ಪರಿಚಿತವಾಗಿದೆ; ಮತ್ತು, ಹತ್ತಕ್ಕೆ ಒಬ್ಬನಾದರೂ ಅವರ ಕೃತಿ ಮತ್ತು ಆದರ್ಶಗಳ ವಿವರ ತಿಳಿದಿರುತ್ತಾನೆ, ಯಾವ ಹೊತ್ತಿನಲ್ಲಿ ಏನು ಮಾಡಿದರು ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಂಡರು ಮುಂತಾಗಿ, ಇಂಡಿಯಾದ ಮಹಾಪುರಾಣಗಳ ಇಂಥ ನಾಯಕಮಣಿಗಳು ಎಂದಾದರೂ ವಾಸ್ತವವಾಗಿ ಇದ್ದುದುಂಟೆ ಅಥವಾ ಇಲ್ಲವೆ ಎಂಬ ಪ್ರಶ್ನೆ ದೇಶದ ಸಾಂಸ್ಕೃತಿಕ ಇತಿಹಾಸಕ್ಕೆ ತುಲನಾತ್ಮಕವಾಗಿ ಅಷ್ಟೇನೂ ಅಗತ್ಯವಾಗಿಲ್ಲದ ವಿವರ; ಭಾರತೀಯ ಅಂತಶ್ಚೇತನಕ್ಕೆ ಈ ಪ್ರಶ್ನೆ ಅಸಂಬದ್ಧ ನಿಶ್ಚಯವಾಗಿ.

ರಾಮ ಮತ್ತು ಕೃಷ್ಣ ಪ್ರಾಯಶಃ ಇತಿಹಾಸದ ವ್ಯಕ್ತಿಗಳೇ, ಶಿವ ಕೂಡ ಅಂಥ ದೊಡ್ಡ ಗಂಗಾ ನದಿಗೆ ಕಾಲುವೆಯನ್ನಗೆದ ಒಬ್ಬ ನಿರ್ಮಾಣತಜ್ಞನಿರಬಹುದು, ಮತ್ತು ಅದೇ ತರ್ಕದಂತೆ, ಅವನೊಬ್ಬ ದೊಡ್ಡ ಪಶುವೈದ್ಯನೋ ಮಹಾಪ್ರೇಮಿಯೋ ಅನುಪಮ ದಾನಶೀಲನೋ ಕೂಡ ಇದ್ದಿರಬಹುದು. ಇವರನ್ನೆಲ್ಲ ಇತಿಹಾಸದ ಪುಟಕ್ಕೆ ಹರಿದು ಅಂಟಿಸಲೆತ್ನಿಸುವುದು ವಾಸ್ತವಿಕವಾಗಿ ಹಾಗೆ ಮಾಡುವುದುಂಟು. ಹಾಸ್ಯಾಸ್ಪದ ಸಾಹಸವಾದೀತು ಅವರ ಬದುಕಿನ ಕಥೆಗಳನ್ನು ಸಂಭಾವ್ಯತೆಯ ಸಾಮಾನ್ಯ ಮಟ್ಟಗಳಿಂದ ಅಳೆಯಬಾರದು. ಈ ಕಥೆ ದೇಶದಲ್ಲಿ ಮುಂದಿನ ಐವತ್ತು ಶತಮಾನಗಳ, ಏಕೆ ಬಹುಶಃ ನೂರು ಶತಮಾನಗಳ ಪೀಳಿಗೆಗಳ ಮನಸ್ಸಿನ ಮೇಲೆ ಕೆತ್ತಿದಂತಿತ್ತು ಎಂಬ ಸಂಗತಿಗಿಂತ ಹೆಚ್ಚಿನ ಸಾಂಭಾವ್ಯತೆ ಮತ್ತಾವುದಿದ್ದೀತು? ಈ ಕಥೆ ತೆರಪಿಲ್ಲದಂತೆ ಏಕಪ್ರಕಾರ ಪುನರುಕ್ತವಾಗುತ್ತಲೇ ಬಂದಿದೆ. ಹಾಗೆ ಪುನಶ್ಚರಣೆ ಮಾಡುವಲ್ಲಿ ದೊಡ್ಡ ದೊಡ್ಡ ಗಾಯಕರು ಕವಿಗಳು ಅದನ್ನು ಮತ್ತೂ ನಯಗೊಳಿಸಲು ಆಳವಾಗಿಸಲು ತಮ್ಮ ಪ್ರತಿಭೆಯನ್ನು ಬಳಸಿದರು. ಹಾಗೇ, ಅದಕ್ಕೂ ಹೆಚ್ಚಿನದಾಗಿ, ಅಸಂಖ್ಯವಾದ ಜನಕೋಟಿಯ ಅದಮ್ಯ ಒತ್ತಡಗಳು ತಮ್ಮದೇ ಆದ ಹರ್ಷ ಶೋಕಗಳನ್ನು ರೂಪಾಂತರಗೊಳಿಸಿ ಅವಕ್ಕೆ ಕೂಡಿಸಿಕೊಟ್ಟವು.

ಯಾವುದೇ ಜನರ ಪುರಾಣ ಕಥೆಗಳು ಅವರ ಕನಸು ಮತ್ತು ಕೋಟಲೆಗಳ ದಾಖಲೆ ಯಾಗಿರುತ್ತದೆ; ಅವರು ಅತ್ಯಂತ ಆಳದಲ್ಲಿ ಸವಿದ ಅತ್ಯಮೂಲ್ಯವೆಂದು ತಿಳಿದ ಆಸೆಗಳು ಹಂಬಲಗಳನ್ನು, ಅಲ್ಲದೆ, ಬದುಕಿನ ಸರಕಾಗಿರುವ ಮತ್ತು ಬದುಕಿನ ಸ್ಥಳಿಕ ಹಾಗೂ ಲೌಕಿಕ ಇತಿಹಾಸದ ಸರಕಾಗಿರುವ ವಿಮೋಚನೆಯೇ ಇಲ್ಲದ ವಿಷಾದ-ಇವುಗಳ ಅಳಿಸಲಾಗದಂತ ದಾಖಲೆ. ರಾಮಕೃಷ್ಣ ಮತ್ತು ಶಿವ-ಇವು ಇಂಡಿಯಾದ ಮಹತ್ ಸ್ವಪ್ನಗಳು, ಮಹತ್ ದುಃಖಗಳು. ಅವರ ಕಥೆಗಳಲ್ಲಿ ಏಕಸೂತ್ರತೆವನ್ನು ಹೊಂದಿಸುವುದಾಗಲಿ ಅಥವಾ ಅವರ ಜೀವನದೊಳಕ್ಕೆ ಊನವಿಲ್ಲದ ನೀತಿಮಾಲಿಕೆಯನ್ನು ಹೆಣೆಯುವುದಾಗಲಿ ಮತ್ತು ಸುಳ್ಳೆಂದು ಅಸಂಭವವೆಂದು ತೋರುವುದನ್ನೆಲ್ಲ ಕಳಚಿ ಎಸೆಯುವುದಾಗಲಿ, ಜೀವನವನ್ನು ತರ್ಕವೊಂದು ಬಿಟ್ಟು ಉಳಿದೆಲ್ಲ ದೋಚಿ ಹೊರನಿಲ್ಲಿಸಿದಂಥ ಯತ್ನವಾದೀತು. ರಾಮ ಶಿವ ಮತ್ತು ಕೃಷ್ಣರು ಎಂದೂ ಬದುಕಿರಲಿಲ್ಲ ಎಂಬುದನ್ನು, ಅಥವಾ ಇದ್ದರೂ ಕಥೆಗಳಲ್ಲಿ ಕಾಣುವಂತೆ ಇರಲಿಲ್ಲ ಎಂಬುದನ್ನಾದರೂ, ನಾವು ನೇರ ಒಪ್ಪಿಕೊಳ್ಳೋಣ. ಅವರ ಬದುಕಿನ ದಾಖಲೆಗಳು ಸುಳ್ಳು ಅಥವಾ ಅಸಂಭಾವ್ಯ ಮತ್ತು ಕೆಲವು ಸಂದರ್ಭಗಳಲ್ಲಿ ಅವು ತರ್ಕಶುದ್ಧ ಅರ್ಥವನ್ನೇ ಕೊಡದಷ್ಟು ಅಸಂಬದ್ಧವಾಗಿದೆ-ಒಪ್ಪಿಕೊಳ್ಳೋಣ. ಆದರೆ ಹೀಗೆ ಅವರು ಇರಲಿಲ್ಲ, ಇದ್ದಿದ್ದರೂ ಈ ಕಲ್ಪನೆಗಳು ರೂಪದಂತೆಯಲ್ಲ. ಆ ಕಲ್ಪನೆಗಳಿಗೂ ಯಾವ ಸಂಬಂಧವೂ ಇಲ್ಲ. ಭಾರತೀಯ ಸತ್ವದ ಇತಿಹಾಸಕ್ಕೆ ಈ ಮೂರು ಹೆಸರುಗಳು, ಅಂಥ ಹೆಸರುಗಳ ಕಿಕ್ಕಿರಿದ ಸಾಲು ಮೆರವಣಿಗೆಯಲ್ಲೂ, ಸತ್ಯಸ್ಯಸತ್ಯವಾದ ಮಹತ್ತಮವಾದ ಉಸಿರುಗಳಾಗಿವೆ. ಅವು ಅಷ್ಟು ಪುರೋಗಾಮಿಗಳಾಗಿವೆ. ಇತರ ಎಲ್ಲವುಗಳನ್ನೂ ನುಸುಳಿಸಿ ನಿಂತುಬಿಟ್ಟಿದೆ ಸುಳ್ಳು ಅಥವಾ ಅಸಂಭವ ಎನ್ನಲು ಸಾಧ್ಯವೇ ಆಗದ ಹಾಗೆ. ಇತಿಹಾಸವೆನ್ನುವುದು ಕಲ್ಲಿನ ಮೇಲೋ ಲೋಹದ ಮೇಲೋ ಬೇಕೆಂದು ಕೆತ್ತಿರುವಂಥದು. ಆದರೆ ಇವರ ಕಥೆ ಜನರ ಮನಸ್ಸಿನಲ್ಲಿ ಬೇಕೆನ್ನದೆಯೇ ಕೊರೆದುಕೊಂಡಿರುವಂಥದು.

ಇಂಡಿಯಾದ ಬೆಟ್ಟಗುಡ್ಡಗಳೆಲ್ಲ ದೇವಾನುದೇವತೆಗಳ ನಿವಾಸಗಳೇ ಆಗಿದ್ದಾವೆ, ಇವೊತ್ತಿಗೂ. ಈ ದೇವವರ್ಗ ಒಮ್ಮೊಮ್ಮೆ ಮನುಷ್ಯ ಗಾತ್ರದಲ್ಲಿ ಅವತರಿಸಿ ಇಲ್ಲಿನ ಬಯಲುಗಳಲ್ಲಿ ಬದುಕಿದ್ದೂ ಉಂಟು. ಮಹಾನದಿಗಳಲ್ಲಿನ ಸರ್ಪಗಳನ್ನು ಕೊಲ್ಲುತ್ತಲೊ ಪಳಗಿಸುತ್ತಲೊ, ಅಳಿಲುಗಳೂ ಭಕ್ತಿ ತುಂಬಿ ಸಮುದ್ರಕ್ಕೆ ಸೇತುವೆ ಕಟ್ಟಿದ್ದುಂಟು. ಜೂಡಿಸಂ, ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ-ಈ ಮೊದಲಾದ ಮರುಭೂಮಿಯ ‘ವಿಷಯಾತೀತ ದರ್ಶನಗಳು’ ಎಲ್ಲಕ್ಕೂ ಆಚೆ, ಎಲ್ಲಕ್ಕೂ ಮೇಲೆ ಇರುವ ಏಕೈಕವೊಂದನ್ನು ಬಿಟ್ಟು ಉಳಿದೆಲ್ಲ ದೇವರುಗಳನ್ನೂ ನಾಶಪಡಿಸಿಬಿಟ್ಟಿವೆ; ಮತ್ತು ಅವರ ಬೆಟ್ಟಗುಡ್ಡಗಳೂ ಬಯಲುಗಳೂ ನದಿಗಳೂ ಪುರಾಣದ ಅಲಂಕರಣಗಳಿಲ್ಲದೆ ನಗ್ನವಾಗಿ ಉಳಿದಿವೆ.

ಪುರಾಣವೆಂಬುದು ತುದಿಯೇ ಇಲ್ಲವೇನೋ ಎನ್ನುವಂಥ ಕಾದಂಬರಿ. ಚಕಚಕಿಸುವ ಅಸಂಖ್ಯ ಕಥೆಗಳನ್ನು ಖಚಿತಗೊಳಿಸಿ ಕಟ್ಟಿದ್ದು. ಅದು ಉಪದೇಶಿಸಿದರೆ ಅಥವಾ ರಂಜಿಸಿದರೆ ಉಪಾಂಗವಾಗಿ ಅಷ್ಟೆ. ಹೆಚ್ಚಾಗಿ ಅದು ಸೂರ‍್ಯನ ಹಾಗೆ, ಬೆಟ್ಟಗಳ ಹಾಗೆ, ಫಲವೃಕ್ಷಗಳ ಹಾಗೆ-ನಮ್ಮ ಬದುಕಿನ ದೊಡ್ಡ ಭಾಗವೇ. ಮಾವು ಹಲಸುಗಳು ನಮ್ಮ ದೇಹಧಾತುವೇ ಆಗುತ್ತವೆ. ನಮ್ಮ ರಕ್ತಮಾಂಸಗಳಲ್ಲೇ ಬೆರೆತುಕೊಳ್ಳುತ್ತವೆ. ಪುರಾಣ ಯಾವುದೇ ಜನಾಂಗದ ದೇಹಧಾತುವಿನ ಭಾಗ, ರಕ್ತಗತ ಮಾಂಸಗತವಾಗುವಂಥದು. ಪುರಾಣ ಕಲ್ಪನೆಗಳನ್ನು ಉದಾತ್ತೀಕರಣದ ಮಾದರಿಗಳಾದ ಮಹಾವ್ಯಕ್ತಿಗಳ ಜೀವನ ಎಂಬಂತೆ ಅಳೆಯಹೊರಡುವುದು ಹಾಸ್ಯಾಸ್ಪದವಾದ ಬೆಪ್ಪುತನ ಆದೀತು. ರಾಮ ಕೃಷ್ಣ ಶಿವರನ್ನು ಸಚ್ಚಾರಿತ್ರ್ಯಕ್ಕೋ ಸಚ್ಚಿಂತನೆಗೋ ಮಾದರಿಗಳೆಂದು ಜನ ಪ್ರಯತ್ನ ಪೂರ್ವಕ ಪರಿವರ್ತಿಸಲೆತ್ನಿಸಿದರೆ ಅದರಿಂದ ಅವರನ್ನು ಕೆಳಮಟ್ಟಕ್ಕೇ ಎಳೆದಂತಾಗುತ್ತದೆ. ಅವರು ಇಡೀ ಇಂಡಿಯಾದ ದೇಹಧಾತು, ರಕ್ತ, ಮಾಂಸ, ಅವರ ಭಾಷಣ ಸಂಭಾಷಣೆಗಳು, ಅವರ ಕೃತಿ ಚಾರಿತ್ರ್ಯಗಳು, ಯಾವೊಂದು ಕಾರ‍್ಯಾವಸರದಲ್ಲಿ ಅವರ ಭ್ರೂವಿಕ್ಷೇಪಣದ ಅತಿ ನಿರ್ದಿಷ್ಟ ಶೈಲಿ-ಇವೆಲ್ಲ ಹೆಜ್ಜೆಹೆಜ್ಜೆಯಾಗಿ ಅತಿ ಸತ್ಯ ಸೂಕ್ಷ್ಮವಾಗಿ ವರ್ಣಿತವಾಗಿವೆ. ಮತ್ತು, ಅವರ ಈ ನಿರ್ದಿಷ್ಟ ವಿಭಾವಗಳು, ಯಾವೊಂದು ಸಂದರ್ಭದಲ್ಲಿ ಅವರು ಆಡಿದ ಅದೇ ಮಾತು-ಇವೆಲ್ಲ ಇಂಡಿಯಾದ ಬದುಕಿನ ಚಿರಪರಿಚಿತ ಭಾಗಗಳಾಗಿವೆ. ಅವು ಒಂದೊಂದು ವಾಸ್ತವವಾಗಿ ನಮ್ಮ ಜನಕ್ಕೆ ಆಧಾರಕೋಶವಾಗಿದೆ, ಅಳತೆಗೋಲಾಗಿದೆ. ಇದು ಎಚ್ಚರವಾದ ಮನಸ್ಸಿನ ಕ್ರಿಯೆ ಮಾತ್ರವಲ್ಲ; ರಕ್ತದಲ್ಲಿ ಕಾಣುವ ದ್ರವ್ಯಮಿಶ್ರಣ, ಆ ದೇಹದ ಮುಂದಿನ ಆರೋಗ್ಯ ಅಥವಾ ಅನಾರೋಗ್ಯದ ವಿವಿಧ ಹಂತಗಳನ್ನು ಹೇಗೆ ನಿರ್ದೇಶಿಸುತ್ತದೋ, ಸುಮಾರಾಗಿ ಹಾಗೆ, ಇವು ನಮ್ಮ ಜೀವದ್ರವ್ಯಗಳೇ ಆಗಿ ಬದುಕನ್ನು ನಿರ್ದೇಶಿಸುತ್ತವೆ.

ಮಹಾಪುರಾಣವೆನ್ನುವುದು ಒಂದು ರೀತಿಯ ಸಂಕೀರ್ಣ ಸೃಷ್ಟಿ: ಮಹಾಕಾವ್ಯ ಮತ್ತು ನೀತಿಕಥೆ, ಕಥೆ ಮತ್ತು ಕಾದಂಬರಿ, ನಾಟಕ ಮತ್ತು ಕವಿತೆ-ಇವುಗಳೆಲ್ಲ ಕೂಡಿ ಸೃಷ್ಟಿಸುವಂಥದು; ತನ್ನ ಜನರಲ್ಲಿ ಪ್ರತಿಯೊಬ್ಬರ ಮನಸ್ಸನ್ನೂ ಹೊಕ್ಕು ಸ್ಥಾಪಿತವಾಗಬಲ್ಲ, ಅಂಥ ಶಕ್ತಿಯ, ಪರಮಾಣು ಗಮನವುಳ್ಳದ್ದು. ಪುರಾಣಗಳು ಅನಕ್ಷರಸ್ಥರನ್ನೂ ಸಂಸ್ಕೃತಗೊಳಿಸಬಲ್ಲವು ಮತ್ತು ಹಾಗೇ-ಅನುಭವದ ರೂಪ ತೀವ್ರ ಬದಲಾಗುತ್ತಿರುವಾಗ ಜನರ ಬದುಕು ನಿಂತ ನೀರಾಗಿ ನಾರುವಂತೆಯೂ ಮಾಡಿಬಿಡಬಲ್ಲವು ಈ ಪುರಾಣಗಳು ವಿಶ್ವಕಥೆಯನ್ನು ಹೇಳುವಂಥವಾಗಿಯೂ ಸ್ಥಳದ ಬಣ್ಣಗಳನ್ನು ಸುತ್ತಿಕೊಂಡಿವೆ ಎಂಬುದು ಸ್ವಲ್ಪ ಶೋಚನೀಯವಾದ ವಿಚಾರವೇ. ಇಡೀ ಮಾನವಕುಲವೆಲ್ಲ ಒಂದೇ ಕಾಲದಲ್ಲಿ ಒಂದೇ ಸ್ಥಳದಲ್ಲಿ ಬದುಕಲಾರದಲ್ಲ ಎಂಬ ವಿಷಾದದಂಥವೆ ವಿಷಾದ ಇದು ಕೂಡ ಸುಮಾರಾಗಿ. ಮಾನವಕುಲ ಬೇರೆ ಬೇರೆ ಕೇಂದ್ರಗಳಲ್ಲಿ ಹರಿಹಂಚಿ ಬದುಕಬೇಕಾಗಿದೆ ಮತ್ತು ಈ ವಿವಿಧ ಸ್ಥಳಗಳಲ್ಲಿ ಒಂದೊಂದಕ್ಕೂ ಅದರದೇ ಆದ ನದಿಗಳಿವೆ, ಬೆಟ್ಟಗಳಿವೆ., ಪಚ್ಚೆಯ ನೀಲದ ಕಡಲುಗಳಿವೆ. ವಿಶ್ವವು ಸ್ಥಳದ ಮುಖದಲ್ಲೆ ಮಾತಾಡಬೇಕಾಗಿದೆ. ಗಂಡುಹೆಣ್ಣುಗಳ, ಅವರ ಮಕ್ಕಳುಮರಿಗಳ ಶಿಕ್ಷಣದಲ್ಲಿ ಇದೊಂದು ಸತತ ಸಮಸ್ಯೆಯೇ ಆಗಿ ಉಳಿಯುತ್ತದೆ. ಅಲ್ಲಲ್ಲಿನ ಸ್ಥಳಿಕ ವರ್ಣಗಳನ್ನು ಸ್ವಚ್ಛಗೊಳಿಸಿ ವಿಶ್ವಕವನ್ನು ಅನಾವೃತಗೊಳಿಸುವ ಕ್ರಿಯೆಯಲ್ಲಿ, ಆವಾಹಿತ ಭಾವದ್ರವ್ಯಗಳು ಮಾಯವಾಗಿಬಿಡುತ್ತವೆ; ರಕ್ತದ ಅರ್ಕ ಹೀರಿ ಅದರ ನೀರು ನೆಳನ್ನಷ್ಟೆ ಉಳಿಸಿದಂತಾಗುತ್ತದೆ.

ರಾಮ ಕೃಷ್ಣ ಶಿವ-ಈ ಮೂವರು ಇಂಡಿಯಾದ ಪೂರ್ಣತ್ವದ ಮೂರು ಮಹತ್ ಸ್ವಪ್ನಗಳು. ಮೂವರೂ ತಂತಮ್ಮದೇ ಹಾದಿಯುಳ್ಳವರು. ರಾಮನದ್ದು ಸೀಮಿತ ವ್ಯಕ್ತಿತ್ವದಲ್ಲಿ ಪೂರ್ಣತೆ, ಕೃಷ್ಣನದು ಸಮೃದ್ಧ ವ್ಯಕ್ತಿತ್ವದಲ್ಲಿ ಪೂರ್ಣತೆ, ಶಿವನದಾದರೋ ಪ್ರಮಾಣತೀತ ಎಂದರೆ, ಉದ್ದಗಳ ಎತ್ತರಗಳ ಗಾತ್ರ ಕಲ್ಪನೆಗೆ ಸಂಬಂಧವೇ ಇಲ್ಲದ ಗಾತ್ರದ ಮಾನಕ್ಕೆ ಸಿಲುಕದ ವ್ಯಕ್ತಿತ್ವದಲ್ಲಿ ಪೂರ್ಣತೆ ಒಂದೊಂದೂ ಪೂರ್ಣತೆ ಒಂದೊಂದೂ ಪೂರ್ಣವಾದ್ದೇ. ಇವುಗಳಲ್ಲಿ ಒಂದು ಇನ್ನೊಂದಕ್ಕಿಂತ ಹೆಚ್ಚು ಅಥವಾ ಕಮ್ಮಿ ಎಂಬ ಪ್ರಶ್ನೆಯೇ ಇಲ್ಲ. ಪೂರ್ಣಕ್ಕೆ ಹೆಚ್ಚು ಕಮ್ಮಿಯ ಮಾತೆಲ್ಲಿ? ಅದರಲ್ಲಿರುವುದು ಗುಣದ ಜಾತಿಭೇದ ರೀತಿಭೇದಗಳು, ಇಷ್ಟೇ. ಇವುಗಳಲ್ಲಿ ಒಬ್ಬೊಬ್ಬನೂ ತಂತನ್ನ ರುಚಿಗೆ ಸಮನಾಗಿ ಆಯ್ದುಕೊಳ್ಳಬಹುದು, ಅಥವಾ ಒಬ್ಬೊಬ್ಬನೂ ತನ್ನ ಸ್ವಂತ ಬದುಕಿನ ನಿಶ್ಚಿತ ಮಜಲಿನಲ್ಲಿ, ಆಯಾ ಕಾಲದಲ್ಲಿ, ಅದಕ್ಕೆ ಹೊಂದುವಂಥ ರೀತಿಯ ಪೂರ್ಣತೆಯನ್ನು ಆಯ್ದುಕೊಳ್ಳಬಹುದು. ಕೆಲವರಲ್ಲಿ ಈ ಮೂರೂ ಬಗೆಯ ಪೂರ್ಣತೆಗಳೂ ಒಡಗೂಡಿಕೊಂಡಿರುವುದು ಕೂಡ ಸಾಧ್ಯ. ಸೀಮಿತವ್ಯಕ್ತಿತ್ವ, ಸಮೃದ್ಧವ್ಯಕ್ತಿತ್ವ, ಗಾತ್ರಾತೀತ ವ್ಯಕ್ತಿತ್ವ-ಇವೆಲ್ಲ ಒಬ್ಬನಲ್ಲೆ ಒಗ್ಗೂಡಿ ಸಂಭವಿಸಬಹುದು. ವಾಸ್ತವವಾಗಿ, ಇಂಡಿಯಾದ ಮಹಾ ಮಹಾ ಸಂತುರುಗಳೆಲ್ಲ ಅಂಥ ಸಮರಸದ ಸಂಭವಕ್ಕೇ ಯತ್ನಪಟ್ಟಿದ್ದಾರೆ; ಅವರು ರಾಮನಲ್ಲಿ ಶಿವನನ್ನೂ ಶಿವನಲ್ಲಿ ಕೃಷ್ಣನನ್ನೂ ಕಂಡುಕೊಂಡಿದ್ದಾರೆ, ರಾಮನೂ ಯುಮುನೆಯ ಮಳಲುದಂಡೆಯಲ್ಲಿ ಹೋಳಿಯಾಡುವಂತೆ ಮಾಡಿದ್ದಾರೆ. ಜನರ ಪೂರ್ಣತ್ವದ ಕನಸಿನಲ್ಲಿ ಈ ಜಾತಿಭೇದಗಳಿದ್ದೂ ಆ ಭೇದಗಳು ಕೂಡ ಒಂದಕ್ಕೊಂದು ಸಂಬಂಧ ಬೆಸೆದುಕೊಂಡಿವೆ; ಸಂಬಂಧ ಬೆಸೆದಿದ್ದು ಕೂಡ ಒಂದೊಂದರ ಅತಿಸ್ಪಷ್ಟ ವೈಶಿಷ್ಟ್ಯ ಮಾಸದೆ ಉಳಿದಿದೆ. ರಾಮಕೃಷ್ಣರು ವಿಷ್ಣುವಿನ ಮನುಷ್ಯಾವತಾರಗಳು, ಭೂಮಿಯ ಮೇಲೆ ಜ್ಞಾನ ವೃದ್ದಿಸಿ ಧರ್ಮ ಕ್ಷಯಿಸುತ್ತಿರುವಾಗ ಬಂದಂಥವು. ರಾಮ ಭೂಮಿಗೆ ಬಂದದ್ದು ತ್ರೇತಾಯುಗದಲ್ಲಿ, ಆಗಿನ್ನೂ ಧರ್ಮ ಅಷ್ಟು ಕ್ಷಯಿಸಿರಲಿಲ್ಲ. ವಿಷ್ಣುವಿನ ಅಷ್ಟಾಂಶಗಳಿಂದ ಸಂಭೂತನಾದವನು ಅವನು. ಮತ್ತು ಅದಕ್ಕಾಗಿಯೇ ಅವನದು ಸೀಮಿತ ವ್ಯಕ್ತಿತ್ವ. ಕೃಷ್ಣಬಂದದ್ದು ದ್ವಾಪರಯುಗದಲ್ಲಿ, ಧರ್ಮಗ್ಲಾನಿ ತುಂಬ ಹೆಚ್ಚಿದಾಗ. ಆತ ವಿಷ್ಣುವಿನ ಷೋಡಾಶಾಂಶಗಳಿಂದ ಕೂಡಿದವನು. ಅಂತೆಯೇ ಅವನದು ಸಮುದ್ರಸಮವಾದ ತುಂಬು ವ್ಯಕ್ತಿತ್ವ, ಸಮೃದ್ಧ ವ್ಯಕ್ತಿತ್ವ, ವಿಷ್ಣು ಕೃಷ್ಣಾವತಾರ ತಾಳಿ ಭೂಮಿಗೆ ಬಂದಾಗ ದೇವಲೋಕದ ಅವನ ಪೂಜ್ಯಪೀಠ ಬರಿದಾಗಿತ್ತು. ಆದರೆ ರಾಮಾವತಾರದಲ್ಲಿ ವಿಷ್ಣುವಿನ ಅರ್ಧಾಂಶ ಭೂಮಿಯ ಮೇಲಿದ್ದರೆ, ಅರ್ಧಾಂಶ ದೇವಲೋಕದಲ್ಲಿ ಉಳಿದಿತ್ತು.

ಈ ಸಮೀತ ಹಾಗೂ ಸಮೃದ್ಧ ವ್ಯಕ್ತಿತ್ವಗಳ ಬಗ್ಗೆ ಎರಡು ಶ್ರೀಮಂತ ಕಥೆಗಳಿವೆ. ರಾಮ ಮೆಚ್ಚಿ ಮದುವೆಯಾದದ್ದು ಒಬ್ಬಳೇ ಹೆಣ್ಣನ್ನು ಮತ್ತು ತನ್ನ ಜೀವನದುದ್ದವೂ ಆತ ಬೇರೊಂದು ಹೆಣ್ಣಿನ ಕಡೆ ಕಣ್ಣೆತ್ತಿ ಕೂಡ ನೋಡಲಿಲ್ಲ. ಸೀತೆಯ ಕಥೆ ಬಹ್ವಂಶಗಳಲ್ಲಿ ರಾಮನ ಕಥೆಯೆ. ಆಕೆಯ ವಿವಾಹ, ಅಪಹಾರ ಬಂಧನಗಳು, ಬಿಡುಗಡೆ ಮತ್ತು ಕೊನೆಯಲ್ಲಿ ಆಕೆ ತನ್ನ ತಾಯಿಯಾದ ಭೂಮಿಯ ಗರ್ಭದೊಳಕ್ಕೆ ಅಂತರ್ಧಾನಗಳಾಗುವುದು-ಇವುಗಳ ಸುತ್ತ ರಾಮನ ಕೃತಿಗಳೆಲ್ಲ ಹೆಣೆದುಕೊಂಡಿವೆ. ಸೀತೆಯ ಅಪಹಾರವಾದಾಗ ರಾಮ ಶೋಕತಪ್ತನಾದ. ಆತ ಆಕ್ರಂದನ ಮಾಡಿದ, ಮರಗಳನ್ನೂ ಕಲ್ಲುಗಳನ್ನೂ ಯಾಚಿಸಿ ಕೇಳಿದ-ಸೀತೆಯನ್ನು ಕಂಡಿರಾ ಎಂದು. ಚಂದ್ರ ನಕ್ಕ, ಸಾವಿರ ಸಾವಿರ ವರ್ಷಗಳ ತನಕ ಚಂದ್ರನ ಆ ನಗುವನ್ನು ವಿಷ್ಣು ನೆನಪಿಸಿಕೊಳ್ಳುತ್ತಿದ್ದನೇನೊ? ಮುಂದೆ ಆತ ಕೃಷ್ಣನಾಗಿ ಮತ್ತೆ ಭೂಮಿಗೆ ಬಂದಾಗ ಆತನ ಪ್ರೇಯಸಿಯರು ಅಸಂಖ್ಯರಿದ್ದರು ಅವನ್ನೊಮ್ಮೆ ನಡುರಾತ್ರಿಯಲ್ಲಿ ಪ್ರೇಯಸಿರಾದ ಬೃಂದಾವನದ ಹದಿನಾರು ಸಾವಿರ ಗೋಪಿಕಾಸ್ತ್ರೀಯರೊಡನೆ ರಾಸಕ್ರೀಡೆಯಾಡಿದ. ಅವರು ಅರವತ್ತು ಇದ್ದಾರು ಆರುನೂರು ಇದ್ದಾರು-ಅದು ಮುಖ್ಯವಲ್ಲ. ಈ ರಾಸಲೀಲೆಯಲ್ಲಿ ಒಬ್ಬೊಬ್ಬ ಗೋಪಿಯೂ ತನ್ನವನೇ ಆದ ಕೃಷ್ಣನೊಂದಿಗೆ ಇಡೀ ಕುಣಿಯುತಿದ್ದಳು; ಕೃಷ್ಣ ಅನೇಕನಾಗಿದ್ದ. ಎಲ್ಲವನ್ನೂ ಚಲಿಸುವವನು ತಾನು ವಿಚಲಿತನಾಗಿದ್ದ. ಆನಂದ ಅಖಂಡವಾಗಿತ್ತು. ಏಕೈಕವಾಗಿತ್ತು, ಯಾಚನೆಯಿಲ್ಲದೆ ತಂತಾನೆ ಬೆಳಗಿದ ಆನಂದವಾಗಿತ್ತು. ಈಗ ನಗು ಎಂದು ಚಂದ್ರನನ್ನು ಆಹ್ವಾನಿಸಿದ ಕೃಷ್ಣ, ಚಂದ್ರ ಗಂಭೀರನಾಗಿದ್ದ. ಈ ಎರಡು ಮಹಾ ಅಖ್ಯಾನಗಳಲ್ಲಿ ಸೀಮಿತ ಹಾಗೂ ಸಮೃದ್ಧ ವ್ಯಕ್ತಿತ್ವಗಳೂ ಒಳತುಂಬಿ ಹೊರತುಂಬಿ ಪೂರ್ಣ ಅರಳಿ ನಳನಳಿಸಿವೆ.

ಸೀತೆಯ ಅಪರಹರಣವಷ್ಟನ್ನೇ ಹೇಳುವುದಾದರೂ ಅದು ಮಾನವ ಕುಲದ ಕಥಾರಾಶಿಯಲ್ಲಿ ಅತ್ಯಂತ ಮಹತ್ವದ ಘಟನೆಗಳಲ್ಲೊಂದು. ಎಲ್ಲ ವಿವರಗಳೊಂದಿಗೆ ಅದನ್ನು ದಾಖಲಿಸಲಾಗಿದೆ. ಇದು ಸೀಮಿತವಾದದ್ದರ ಸಂಯಮಿತವಾದದ್ದರ ಘಟನಾಬದ್ಧ ಅಸ್ತಿತ್ವದ ಕಥೆ. ವನವಾಸದಲ್ಲಿ ಅಲೆಯುತ್ತಿದ್ದಾಗ ಒಮ್ಮೆ ಸೀತೆ ಒಬ್ಬಳೇ ಇರಬೆಕಾದಂಥ ಪ್ರಸಂಗ ಬಂತು; ಲಕ್ಷ್ಮಣ ದಾಟಬಾರದ ಒಂದು ಗೆರೆ ಎಳೆದು ಹೋಗಿದ್ದ. ಆಗ ರಾಮನ ಮಹಾಶತ್ರುವಾದ ರಾವಣ ಹೊತ್ತು ನೋಡಿ ಸನ್ಯಾಸಿಯ ವೇಷತಾಳಿ ಅಲ್ಲಿ ಬಂದ. ಆದರೆ ಭಿಕ್ಷೆಯ ನೆವ ಹೊಂಚಿ. ಅದಕ್ಕಾಗಿ ಸೀತೆ ಲಕ್ಷ್ಮಣರೇಖೆಯನ್ನು ದಾಟಿಬರುವ ತನಕ ಅವನೂ ನಿಸ್ಸಹಾಯನೇ ಆಗಿದ್ದ. ಸೀಮಿತ ವ್ಯಕ್ತಿತ್ವ ನಿಯಮಗಳ ವೃತ್ತದಲ್ಲಿ ಸ್ಥಿರ ನಿಂತಿರುತ್ತದೆ. ಸಮೃದ್ಧವ್ಯಕ್ತಿತ್ವಮಾತ್ರ, ತನಗೆ ಇಚ್ಚೆಯಿರುವ ಪರ‍್ಯಂತ ನಿಯಮಗಳನ್ನೂ ಘಟನೆಗಳನ್ನೂ ಮನ್ನಿಸುತ್ತವೆ ಮತ್ತು, ಅದು ತನಗೆ ಕಂಟಕವಾಯಿತಾದರೆ ಮರುಕ್ಷಣದಲ್ಲಿ ಅದನ್ನು ಧಿಕ್ಕರಿಸಿಬಿಡುತ್ತದೆ.

ರಾಮ ತನ್ನ ಅಧಿಕಾರದ ಸುತ್ತ ರೇಖಿತವಾಗಿದ್ದ ನಿಯಮ ಘಟನೆಗೆ ವ್ಯಕ್ತಿತ್ವವನ್ನು ಎಂದೂ ಹೆಜ್ಜೆದಾಟಿದ್ದಿಲ್ಲ ಮತ್ತು, ಅಂಥ ಕಟ್ಟಳೆಯ ಗೆರೆಗಳಿಗೆ ಮಹತ್ ಕಳಂಕಗಳಿಗೆ ಕಾರಣವಾಯಿತು. ರಾಮನ ಇಂಥ ಸೀಮಿತ ವ್ಯಕ್ತಿತ್ವದ ಬಗ್ಗೆ ಇರುವ ಇನ್ನೊಂದು ಸಂಪನ್ನ ಕಥೆ ಸೀತಾಪರಿತ್ಯಾಗದ್ದು. ಸೀತೆಯ ಪಾವಿತ್ರ್ಯದ ಬಗ್ಗೆ ಒಬ್ಬ ಅಗಸ ದೋಷಾರೋಪಣೆ ಮಾಡಿದ. ಆರೋಪಿಸಿದಾತ ಒಬ್ಬನೇ, ಅದೂ ಅಲ್ಪ, ಆರೋಪಣೆ ಹುಡುಗಾಟಿಕೆಯೆನ್ನಿಸುವಂಥದು, ಅಷ್ಟೇ ಕೀಳುಮಟ್ಟದ್ದು ಕೂಡ. ಆದರೆ ನಿಯಮಗಳ ಪ್ರಕಾರ ಪ್ರತಿಯೊಂದು ಆರೋಪವು ಯಾವುದೊಂದು ರೋಗದ ಅಭಿವ್ಯಕ್ತಿ. ಅದಕ್ಕೆ ತಕ್ಕ ಪರಿಹಾರವೋ ಪ್ರಾಯಶ್ಚಿತ್ತವೋ ಆಗಲೇಬೇಕಾಗಿತ್ತು. ಈ ಸಂದರ್ಭದಲ್ಲಿ ಸೀತಾಪರಿತ್ಯಾಗವೊಂದೇ ಸಕ್ರಮವಾದ ಪರಿಹಾರವಾಗಿತ್ತು. ನಿಯಮಮೂರ್ಖ ತನದ್ದು, ಶಿಕ್ಷೆ ಕ್ರೂರವಾದ್ದು. ಮತ್ತು ಈ ಇಡೀ ಘಟನೆ ರಾಮನಿಗೆ ಅಪಕೀರ್ತಿಯ ಕಲಂಕ ಹಚ್ಚಿತು, ಮುಂದೆ ಜೀವನದುದ್ದವೂ ಅವನನ್ನು ವ್ಯಾಕುಲದಲ್ಲಿ ಅದ್ದಿತು. ಆದರೂ ಅವನು ನಿಯಮಕ್ಕೆ ತಲೆ ಬಾಗಿದ. ಅದನ್ನು ಬದಲಿಸಲಿಲ್ಲ. ನಿಯಮ ಘಟನೆಗಳಿಂದ ಸಂಪೂರ್ಣ ಬದ್ಧನಾಗಿದ್ದ ಈತ ಸೀಮಿತವ್ಯಕ್ತಿತ್ವದ ಪರಿಪೂರ್ಣ ಮಾದರಿಯಾಗಿದ್ದಾನೆ. ಅದನ್ನೇ, ಈ ಒಂದು ಘಟನೆಯ ಮೂಲಕ ತನ್ನ ಜೀವನದಲ್ಲಿ ಆಗಿ ತೋರಿಸಿದ್ದಾನೆ. ಹಾಗಲ್ಲದಿದ್ದರೆ ಈ ಘಟನೆ ರಾಮನ ಕಳಂಕಮಾತ್ರವೇ ಆಗಿಬಿಡುತ್ತಿತ್ತು.

ಸೀಮಿತ ವ್ಯಕ್ತಿತ್ವವಾಗಿದ್ದೂ ಪ್ರಾಯಃ, ಅವನಿಗೆ ಇದಿಲ್ಲದೆ ಇನ್ನೊಂದು ಹಾದಿಯಿತ್ತು -ಸೀತೆಯನ್ನು ತ್ಯಾಗಮಾಡುವುದರ ಜೊತೆಗೆ ತಾನೂ ಇನ್ನೊಮ್ಮೆ ದೇಶಭ್ರಷ್ಟನಾಗಿ ಹೋಗಬಹುದಿತ್ತು. ಬಹುಶಃ ರಾಮ ಹಾಗೆ ಸೂಚಿಸಿದ, ಆದರೆ ಅದಕ್ಕೆ ಅವನ ಪ್ರಜರು ಒಪ್ಪಲಿಲ್ಲ. ಅದನ್ನೇ ಅವನು ಪಟ್ಟು ಹಿಡಿಯಬಹುದಾಗಿತ್ತು. ಆಗ ಅವರೇ ನಿಯಮವನ್ನು ರದ್ದುಗೊಳಿಸಲು ಅಥವಾ ಅದಕ್ಕೊಂದು ಅಪವಾದ ಕಲ್ಪಿಸಲು ಮುಂದಾಗುತ್ತಿದ್ದರೇನೋ. ಆದರೆ-ಯಾವುದೊಂದು ಒತ್ತಡದಲ್ಲಿ ಅಗುವ, ಯಾವುದೋ ಗಂಡವನ್ನು ದಾಟಿ ಹಾರಿಬಿಡುವ ಸಲುವಾಗಿ ಆಗುವ, ತಾನೇ ಕೊಂಚವಾದರೂ ಭಾಗಿಯೆನ್ನಿಸಬಹುದಾದ ನಿಯಮದ ಅಂಥ ರದ್ಧತಿಯನ್ನು ಸೀಮಿತ ವ್ಯಕ್ತಿತ್ವ ಒಪ್ಪಲಾರದು. ಇತಿಹಾಸದಲ್ಲಿಯ ಹಾಗೇ ಪುರಾಣಗಳಲ್ಲೂ ಹೀಗಾಗಬಹುದಿತ್ತು-ಎಂಬಂಥ ಊಹೆಗಳು ಉಪಯೋಗವಿಲ್ಲದ ಲಹರಿಗಳೇ ಸರಿ. ಸೀಮಿತ ವ್ಯಕ್ತಿತ್ವಕ್ಕೆ ಅಷ್ಟು ಅತಿ ವಿಶಿಷ್ಟವೆನ್ನಿಸುವ ನಿಯಮಗಳ ಎದುರಿನ ಇಂಥ ಘೋರ ಶರಣಾಗತಿಯ ಮುಂದೆ, ರಾಮ ಇನ್ನೇನು ಮಾಡಬಹುದಿತ್ತು ಅಥವಾ ಮಾಡದೆ ಇರಬಹುದಿತ್ತು ಎಂಬುದೆಲ್ಲ ಕೇವಲ ಅಲ್ಪವಾದ ಊಹೆ. ವೈಯಕ್ತಿಕ ನಾಯಕತ್ವ ಹಾಗೂ ಸಾಮೂಹಿಕ ನಾಯಕತ್ವ ಈ ಎರಡು ಪಂಥಗಳ ನಡುವಣ ಸಮಕಾಲೀನ ಚರ್ಚೆ ನಮ್ಮಲ್ಲಿ ತುಂಬ ಆಸಕ್ತಿ ಹುಟ್ಟಿಸಿದೆ. ಆದರೆ ಈ ಚರ್ಚೆ ಮೇಲು ಮೇಲಿನದು. ನಾಯಕತ್ವ ವೈಯಕ್ತಿಕವಿರಲಿ ಸಾಮೂಹಿಕವಿರಲಿ, ಎರಡೂ ಮೂಲತಃ ಸಮೃದ್ಧ ವ್ಯಕ್ತಿತ್ವದ ವರ್ಗಕ್ಕೇ-ನಿಯಮಗಳಿಗೆ ಘಟನೆಗಳಿಗೆ ಶರಣಾಗದೆ ಸೆಣಸಿ ನಿಲ್ಲುವಂಥ ಪ್ರವೃತ್ತಿಯ ವರ್ಗಕ್ಕೇ-ಸೇರಿರಲು ಸಾಧ್ಯ. ಅಧಿಕಾರಸೀಮೆಯ ನಿಯಮ ರೇಖೆಯನ್ನು ಅತಿಕ್ರಮಿಸುವುದು ಒಬ್ಬನೇ ಅಥವಾ ಐದೋ ಹತ್ತೋ ಜನರ ಒಂದು ಕೂಟವೇ ಎಂಬುದಷ್ಟೇ ಇಲ್ಲಿನ ವ್ಯತ್ಯಾಸ. ಆದರೆ ಒಬ್ಬ ಅತಿಕ್ರಮಿಸುವುದಕ್ಕಿಂತ ಹತ್ತೂ ಜನ ನಿಯಮವನ್ನು ಅತಿಕ್ರಮಿಸುವುದು ಹೆಚ್ಚು ಕಷ್ಟದ್ದೇ ಸರಿ. ಏನಾದರೂ, ಸತತಪ್ರವಾಹಗಿರುವ ಈ ಬದುಕು, ಹೋರಾಡುವ ದ್ವಂದ್ವಗಳ ಮಧ್ಯೆ, ಅನೇಕಾನೇಕ ಸೂಕ್ಷ್ಮವರ್ಣತಂತುಗಳು ನೆಯ್ಗೆಯಾಡಿ ಬೆರೆಸುತ್ತಿರುವ ಸಂಧ್ಯಾಪ್ರಭೆಯಾಗಿದೆ.

ಜೀವನದ ಇಂಥ ಪ್ರವಾಹದಲ್ಲಿ, ದ್ವಂದ್ವಗಳ ಹೋರಾಟದ ವೈಯಕ್ತಿಕ ಸಮೃದ್ದಿಗೂ ಸಾಮೂಹಿಕ ಸಮೃದ್ದಿಗೂ ನಡುವೆ ತೂಗಾಟ ನಡೆದಿರುತ್ತದೆ. ಸತತವಾಗಿ-ಆಚೆಯಿಂದ ಈಚೆ, ಈಚೆಯಿಂದ ಆಚೆ ನಡೆವ ಗಡಿಯಾರದ ಲೋಲಕದ ಆಂದೋಲನದ ಹಾಗೆ. ಒಮ್ಮೆ ಸಮೃದ್ಧ ವೈಯಕ್ತಿಕತೆ ಸಮೃದ್ಧ ಸಾಮೂಹಿಕತೆಗೆ ಹಾದಿ ಮಾಡಿಕೊಡುತ್ತದೆ, ಮತ್ತು ಹಾಗೇ, ಇನ್ನೊಮ್ಮೆ ಸಮೃದ್ಧ ಸಮೂಹಿಕತೆ ಸಮೃದ್ದ ವೈಯಕ್ತಿಕತೆಗೆ ಹಾದಿ ಮಾಡಿಕೊಡುತ್ತದೆ. ಇದು ಸಣ್ಣ ಚೌಕಟ್ಟಿನಲ್ಲಿ ನಡೆವ ಸಣ್ಣ ಪ್ರಮಾಣದ ತೂಗಾಟ ಏಕೆಂದರೆ ಇಲ್ಲಿ ವೈಯಕ್ತಿಕತೆ ಮತ್ತು ಸಾಮೂಹಿಕ ಇವುಗಳ ನಡುವೆ ತೂಗಾಟ ನಡೆಯುತ್ತಿದ್ದರೂ, ಎರಡೂ ಸಮೃದ್ಧ ಪ್ರವೃತ್ತಿಗೇ ಸೇರಿದ್ದು. ಹೋಲಿಕೆಯಲ್ಲಿ ಇದಕ್ಕಿಂತ ದೀರ್ಘಾಚಾರಿಯಾದ ಇನ್ನೊಂದು ತುಯ್ದಾಟ ಕೂಡ ಇದರ ಜೊತೆಯಲ್ಲೆ ನಡೆದಿರುತ್ತದೆ. ಅದು ಸಮೃದ್ದಿಗೂ ಸಮೀತಕ್ಕೂ ನಡುವೆ ನಡೆವ ತುಯ್ದಾಟ. ಮೊದಲು ಹೇಳಿದ ಸಮೃದ್ಧ ಪ್ರವೃತ್ತಿಯಲ್ಲಿನ ಆಂದೋಲನಕ್ರಿಯೆ ಇಡೀ ಇಲ್ಲಿ ಒಂದು ಬಿಂದುವಾಗುತ್ತದೆ. ಅದಕ್ಕೆ ಎದುರಾಗಿ ಸೀಮಿತಪ್ರವೃತ್ತಿಯ ಇನ್ನೊಂದು ಬಿಂದು-ಈ ಎರಡರ ನಡುವೆ ತೂಗಾಟ: ಸಮೃದ್ಧ ಪ್ರವೃತ್ತಿಗೂ ಸೀಮಿತ ಪ್ರವೃತ್ತಿಗೂ ನಡುವೆ ನಡೆವ ತೂಗಾಟ. ರಾಮನಲ್ಲಿ ಸೀಮಿತ ವ್ಯಕ್ತಿ ಕಾಣುವ ಹಾಗೆ ಘಟನಾಬದ್ಧ ಪ್ರಜಾಪ್ರಭುತ್ವದಲ್ಲಿ ಸೀಮಿತ ಸಮೂಹದ ಕ್ರಿಯೆ ಕಾಣಬಹುದು. ಎರಡೂ ಒಂದೇ ವರ್ಗದ್ದು. ಕೃಷ್ಣನಲ್ಲಿ ಸಮೃದ್ಧ ವೈಯಕ್ತಿಕತೆ ಕಾಣುವ ಹಾಗೆ, ಯಾವ ಕಟ್ಟುಪಾಡುಗಳಿಗೂ ಒಳಪಡದೆ ತಮ್ಮ ವಿವೇಕವನ್ನೇ ನಂಬಿ ಆಳುವ ಉನ್ನತ ನಾಯಕರ ಸಮಿತಿಯೊಂದರಲ್ಲಿ ಸಮೃದ್ಧ ಸಾಮೂಹಿಕತೆ ಕಾಣಸಿಗುತ್ತದೆ. ಪುನಃ-ಈ ಎರಡೂ ಸಮೃದ್ಧ ಪ್ರವೃತ್ತಿಯ ಒಂದೇ ವರ್ಗದಲ್ಲಿ ಬರುತ್ತವೆ. ಅಧಿಕಾರ ಹಿಡಿದಿದ್ದು ವ್ಯಕ್ತಿಯೇ ಅಥವಾ ಸಮೂಹವೇ ಎಂಬುದು ಒಂದು ಪ್ರಶ್ನೆ: ಹಾಗೂ ಆ ಅಧಿಕಾರ ಸೀಮಿತವೆ ಅಥವಾ ಸಮೃದ್ಧವೆ-ಎಂಬುದು ಇನ್ನೊಂದು ಪ್ರಶ್ನೆ. ಈ ಎರಡು ಪ್ರಶ್ನೆಗಳಲ್ಲಿ, ಎರಡನೆಯ ಪ್ರಶ್ನೆಯೇ ಎಲ್ಲ ರೀತಿಗಳಿಂದಲೂ ಅತಿಮಹತ್ವದ್ದು ಅಧಿಕಾರ ಯಾರ ತರಹದ್ದು ಅದು ಅತಿ ಕ್ರಮಿಸಲಾಗದಂತೆ ನಿಯಮಗಳಿಗೂ ಘಟನೆಗಳಿಗೂ ಬುದ್ಧವಾಗಿದೆಯೆ -ಎಂಬುದು ಮುಖ್ಯವಾದ ಪ್ರಶ್ನೆ. ಇದಕ್ಕೆ ಉತ್ತರ ಸಿಕ್ಕಿದ ಮೇಲೆ ಮಾತ್ರವೆ ಮುಂದಿನ ಪ್ರಶ್ನೆ -ಹೋಲಿಕೆಯಲ್ಲಿ ಮೊದಲಿನದರಷ್ಟು ಮುಖ್ಯವಲ್ಲದ ಪ್ರಶ್ನೆ-ಏಳುತ್ತದೆ. ಈ ಸೀಮಿತವಾದ (ಅಥವಾ ಅಲ್ಲದ) ಅಧಿಕಾರ ವ್ಯಕ್ತಿಯದೆ ಅಥವಾ ಸಮೂಹದ್ದೆ-ಎಂಬುದು. ಅಧಿಕಾರ ಸೀಮಿತವಾಗಿದ್ದು ಅದು ಸಮೂಹದ ಕೈಯಲ್ಲಿರುವುದೇ ಅತ್ಯುತ್ತಮವಾದದ್ದು, ನಿಸ್ಸೇಂದೇಹವಾಗಿ.

ರಾಮ ಸೀಮಿತ ವ್ಯಕ್ತಿ, ಸರಿ. ಆದರೆ ಅವನು ಹಾಗಾದದ್ದು ಆ ಗುರಿಯನ್ನೆ ಎಚ್ಚರದಲ್ಲಿಟ್ಟುಕೊಂಡು ಸಂಕಲ್ಪಪೂರ್ವಕ ಹಾಗೆ ರೂಪಿಸಿಕೊಂಡದ್ದರಿಂದ. ನಿಯಮಗಳು ಮತ್ತು ಘಟನೆಗಳು ಇದ್ದವು ನಿಜ, ವಿಧೇಯತೆಯನ್ನು ಹೇರುವುದಕ್ಕೆಅಳತೆಗೋಲಾಗಿ. ಆದರೆ ಈ ಹೊರಗಿನ ಬಲವಂತ ನಿಷ್ಪ್ರಯೋಜಕವಾಗಿ ಬಿಡುತ್ತಿತ್ತು. ಅದಕ್ಕೆ ಸಮಸ್ಪಂದಿಯಾಗಿ ಒಳಗಿನ ಒತ್ತಡವೊಂದು ಕೂಡಿಕೊಂಡು ಬರದಿದ್ದರೆ. ನಿಯಮ ಘಟನೆಗಳ ಹೊರಗಿನ ಹತೋಟಿಯೂ ಅಂತಃಪ್ರಜ್ಞೆಯ ಆಂತರಿಕ ನಿಯಂತ್ರಣವೂ ಒಂದನ್ನೊಂದು ಬಲಗೊಳಿಸುತ್ತದೆ. ಈ ಎರಡರಲ್ಲಿ ಮೊದಲಿಗ ಯಾವುದು ಎಂಬ ಚರ್ಚೆ ಕೆಲಸವಿಲ್ಲದ್ದು. ಸೀಮಿತವ್ಯಕ್ತಿತ್ವಕ್ಕೆ ನಿಯಮ ಹೊರಗಿನ ಘಟನೆಗಳ ಹತೋಟಿ ಅಂತಃಪ್ರಜ್ಞೆಯ ಒಳಗಿನ ಸ್ಫುರಣೆಗೆ ಮತ್ತೊಂದು ಹೆಸರಾಗಬಹುದು, ಅಷ್ಟೆ. ಬಾಹ್ಯದ ವಿಧಿ ಮತ್ತು ಅಂತರ‍್ಯದ ಸ್ಫೂರ್ತಿ-ಈ ಎರಡು ಶಕ್ತಿಗಳ ಅಸಾಮಾನ್ಯ ಹೊಂದಿಕೆ ಮತ್ತು ಸಹಯೋಗ ಸೀಮಿತ ವ್ಯಕ್ತಿತ್ವದ ಮುಖ್ಯ ಗುರುತು. ಎಲ್ಲೆಗಳು ಹೊರಗಿಂದ ಹತೋಟಿಗಾಗಿ ಕಲ್ಪಿತವಾಗಿದ್ದರೂ ಅವು ಒಳಗಿಂದ ನಿರ್ಮಿತವಾದ ಸರಹದ್ದುಗಳನ್ನೇ ಕೂಡಿಕೊಂಡಿರುತ್ತವೆ; ಸೀಮಿತನಾಯಕತ್ವ ತಹಬಂದಿ ವಿಧಿಸುವ ನಾಯಕತ್ವ ನಿಜ. ಆದರೂ ಅದು ಅಂತಃಶ್ಚೇತನದ ಪ್ರಾಂತಭೂಮಿಯನ್ನೆ ತಲುಪಿ ನಿಲ್ಲುತ್ತದೆ. ರಾಮ ವಾಸ್ತವಿಕವಾಗಿ ಕಟ್ಟುನಿಟ್ಟಿಗೆ ಒಳಪಟ್ಟ ಶಿಸ್ತಿನ ವ್ಯಕ್ತಿ, ಆದರೆ ಅವನ ವರ್ಣನೆಯನ್ನು ಅಷ್ಟಕ್ಕೇ ನಿಲ್ಲಿಸಿದರೆ ತಪ್ಪಾದೀತು. ಏಕೆಂದರೆ, ಬಾಹ್ಯ ನಿಬಂಧನೆಗಳ ಜೊತೆಗೆ ಆತನ ಆಂತರಂಗಿಕ ಇಚ್ಛೆ ಒಂದಾಗಿ ಸಹಯೋಗ ಹೊಂದಿದಂಥ ಸೀಮಿತ ವ್ಯಕ್ತಿತ್ವ ಆತನದ್ದು.

ರಾವಣನ ಅಂತ್ಯಕಾಲದ ಕಥೆಯೊಂದಿದೆ. ರಾವಣ ಆ ಕಾಲದ ಮಹಾವಿದ್ವಾಂಸರಲ್ಲೊಬ್ಬ; ಆದರೆ ಅವನು ವಿದ್ಯೆಯನ್ನು ಅಪಮಾರ್ಗದಲ್ಲಿ ತೊಡಗಿಸಿದ್ದ. ಈ ವಿದ್ಯೆ ದುಷ್ಟಲಕ್ಷ್ಯಗಳಿಂದ ವಿಮುಕ್ತಗೊಂಡು ಮಾನವ ಕುಲದ ಸತತ ಬಳಕೆಗಾಗಿ ಪರಂಪರೆಯಲ್ಲಿ ಸಂಗೋಪಿತವಾಗಬೇಕಿತ್ತು. ಅದಕ್ಕಾಗಿ ರಾಮ ಆತನ ಬಳಿಗೆ ಲಕ್ಷ್ಮಣನನ್ನೇ ಕಳಿಸಿದ, ಅವನಿಂದ ಕಲಿತು ಬರಲು. ರಾವಣ ಮಾತೇ ಆಡಲಿಲ್ಲ. ಲಕ್ಷ್ಮಣ ಮರಳಿ ಬಂದು ಅಣ್ಣನಿಗೆ ವರದಿ ಒಪ್ಪಿಸಿದ, ಆತನ ಅಹಂಕಾರ ಇನ್ನೂ ಕ್ಷಯಿಸಿಲ್ಲವೆಂದು. ಅಲ್ಲಿ ಏನು ನಡೆಯಿತೆಂಬುದರ ಸೂಕ್ಷ್ಮ ವಿವರಗಳನ್ನು ರಾಮ ಕೇಳಿಕೊಂಡ-ಲಕ್ಷ್ಮಣ ಹೋಗಿ ರಾವಣ ತಲೆದೆಸೆಯಲ್ಲಿ ನಿಂತಿದ್ದನೆಂದು ತಿಳಿಯಿತು. ಅವನ ಕಾಲ ಬುಡದಲ್ಲಿ ಹೋಗಿ ನಿಂತುಕೋ ಎಂದು ಲಕ್ಷ್ಮಣನನ್ನು ಮತ್ತೆ ಕಳಿಸಿಕೊಟ್ಟ, ವಿನಯದ ಪಾಠ ಕಲಿಸಿದ.

ಸದಾಚಾರವನ್ನು ಕುರಿತ ಇಂಥ ಚೆಂದದ ಕಥೆಗೆ ಹೋಲುವಂಥದ್ದು ಕಡಿಮೆ, ಮೀರಿದ್ದು ಇನ್ನೊಂದಿಲ್ಲ. ನೀತಿ ಎಷ್ಟು ಮುಖ್ಯವೋ ಆಚರಣೆಯೂ ಅಷ್ಟೇ ಮುಖ್ಯ, ನಿಶ್ಚಯವಾಗಿ. ಯಾವನೊಬ್ಬ ತಿನ್ನುವ ನಡೆಯುವ ಕೂಡುವ ಕಾಣಿಸಿಕೊಳ್ಳುವ ಬಟ್ಟೆಯುಡುವ ರೀತಿ, ಅವನು ತನ್ನಂಥವರೊಂದಿಗೆ ಮಾತಾಡುವ ಬಗೆ ಅಥವಾ ಅವರ ಜೊತೆ ಕೂಡಿಕೊಂಡಿರುವಂಥ ಬಗೆ, ತನ್ನಿಂದ ಅವರಿಗೆ ಯಾವ ಗಳಿಗೆಯಲ್ಲಿ ಏನು ಅಪಚಾರವಾದೀತೋ ತೊಂದರೆ ಯಾದೀತೋ ಎಂದು ಕಣ್ಣಾಗಿರುವ ಎಚ್ಚರ, ಪ್ರಾಣಿಸಮಸ್ತದೊಡನೆ ಅವನ ನಡತೆ-ಇವೆಲ್ಲ ಸದಾಚಾರಕ್ಕೆ ಸಂಬಂಧಸಿದವೇ. ಹಾಗೆಂದು ಇವೆಲ್ಲ ಉಳಿದವುಗಳಷ್ಟು ಮಹತ್ವದ್ದಲ್ಲ ಎನ್ನಲಾದೀತೆ?-ಖಂಡಿತ ಇಲ್ಲ. ಕೃಷ್ಣನ ಸದಾಚಾರವೃತ್ತಿಯೂ ಗಮನಾರ್ಹವಾದದ್ದೇ. ಸೀಮಿತವ್ಯಕ್ತಿತ್ವ ಹಂಬಲಿಸಬಹುದಾದ ದರ್ಜೆಯ ಅತ್ಯುಚ್ಛ ಸದಾಚಾರಕ್ಕೆ ಸಮೃದ್ಧ ವ್ಯಕ್ತಿತ್ವದ ಕೃಷ್ಣನೂ ಅದ್ಭುತ ಮಾದರಿಯಾಗಿದ್ದಾನೆ. ಆತ ಸದಾಚಾರಿಯಾದವನ ಅರ್ಥಾತ್ ಸ್ಥಿತಪ್ರಜ್ಞನ ಸ್ಮರಣೀಯ ವರ್ಣನೆಯನ್ನೇ ಕೊಟ್ಟಿದ್ದಾನೆ, ವಿವರ ವಿವರವಾಗಿ. ಅಂಥ ಮನುಷ್ಯ ಆಮೆಯಂತೆ ತನ್ನೆಲ್ಲ ಅಂಗಗಳನ್ನೂ ಒಳಕ್ಕೆ ಸೆಳೆದಿಟ್ಟುಕೊಳ್ಳಬಲ್ಲ. ಅಂಗಾಂಗಗಳ ಮೇಲೆ ಅಂಥ ಹತೋಟಿ ಅವನಿಗೆ; ಅದರಲ್ಲಿ ಯಾವದೊಂದೂ ಯಾವ ಕಾಲದಲ್ಲೂ ತಪ್ಪಿ ಚಲಿಸದು. ಸಮೃದ್ಧ ಹಾಗೂ ಸೀಮಿತ ವ್ಯಕ್ತಿತ್ವಗಳು ಬೇರೆ ವಿಷಯಗಳಲ್ಲಿ ವಿಭಿನ್ನವೆನಿಸಿದರೂ ಸದಾಚಾರದ ವಿಷಯದಲ್ಲಿ ಏಕರೂಪ. ಸಮೃದ್ಧ ವ್ಯಕ್ತಿತ್ವ ಸದಾಚಾರದ ಯಾವ ಪರಮೌನ್ನತ್ಯ ವನ್ನು ಸಾಧಿಸಬಲ್ಲದೋ ಅದೇ ಸಮೀತಕ್ಕೆ ಕೂಡ ಅತ್ಯುಚ್ಛ ಗುರಿಯಾಗಿರುತ್ತದೆ. ಸಾಯಲು ಬಿದ್ದಿರುವ ವೈರಿಯ, ಮಹಾವಿದ್ವಾಂಸನ ವಿಷಯದಲ್ಲಿ ನಡೆದುಕೊಂಡ ರೀತಿಯಂಥ ಉದಾಹರಣೆಗಳಿಂದ ರಾಮ ಸದಾಚಾರದ ಉನ್ನತ ಕಥೆಯನ್ನೆ ರಚಿಸಿ ಕೊಟ್ಟಿದ್ದಾನೆ.

ರಾಮ ವಕ್ತಾರನಾಗಿದ್ದಕ್ಕಿಂತ ಶ್ರೋತಾರಾನಾಗಿದ್ದದ್ದೇ ಹೆಚ್ಚು. ಮಾತಾಡುವಾಗ ಎದುರಿನವನಿಗೆ ತಾಳ್ಮೆಯಿಂದ ಕಿವಿಗೊಡುವುದು ದೊಡ್ಡವರಿಗೆ ಸಹಜವೇ. ಅಷ್ಟಲ್ಲದೆ ಎಲ್ಲರ ಮಾತಿಗೂ ಕಿವಿಗೊಡುತ್ತಿದ್ದ ರಾಮ. ಒಮ್ಮೆ ಪರುಶರಾಮ ಈತನನ್ನು ನಿಂದಿಸಿದ್ದೂ ಉಂಟು. ತಮ್ಮ ಲಕ್ಷ್ಮಣ ಕೆರಳಿ ಮಾತಾಡುತ್ತಿದ್ದರೂ ಇವನು ಆತನನ್ನು ತಡೆಯದೆ ಹಿಂದಾಗಿ ಅವಕಾಶ ಕೊಟ್ಟನೆಂದು. ಹೀಗೆ ನಿಂದಿಸಿದ್ದು ಸಕಾರಣವೆಂದು ಒಪ್ಪಲೇಬೇಕು. ತನ್ನ ಕಡೆಯವರು ಮತ್ತು ಶತ್ರುಪಕ್ಷದವರು ಮಾತಿನ ಮಲ್ಲಯುದ್ಧಕ್ಕಿಳಿದಾಗ ರಾಮ ಆಸಕ್ತಿಯಿಂದ ಕೇಳುವವನಾಗಿ ನಿಲ್ಲುತ್ತಿದ್ದುಂಟು. ಎಷ್ಟೋ ಸಲ. ಉದಾಹರಣೆಗೆ-ಲಕ್ಷ್ಮಣ ಶೂರ್ಪನಖಿಯರ ವಾಗ್ವಾದದ ಸಂದರ್ಭದಲ್ಲಿ ಹೀಗೇ ಆಯಿತು, ಮುಂದೆ ಪರಿಸ್ಥಿತಿ ಅಸಹ್ಯಕ್ಕಿಳಿಯಿತು. ಅಂಥ ಸಂದರ್ಭಗಳಲ್ಲಿ ರಾಮ ರಮೌನಿಯಾಗಿ ಕಾಣುತ್ತಿದ್ದ, ಪಕ್ಷಾತೀತನಾಗಿ ಕಾಣುತ್ತಿದ್ದ-\|ರ ಅಪರೂಪವಾಗಿ ತನ್ನವರ ಹೆಚ್ಚನ್ನು ತಡೆಯುತ್ತ, ಅಪರೂಪವಾಗಿ ಅವರಿಗೆ ಪ್ರೋಒಂದು ಮಾತನ್ನೂ ಹೇಳುತ್ತ, ಇದು ಒಂದು ರೀತಿಯ ಚಾತುರ್ಯ ಎನ್ನಿಸಬಹುದಾದರೂ, ನಿಶ್ಚಯವಾಗಿ ಸೀಮಿತವ್ಯಕ್ತಿತ್ವದ ಒಂದು ಅಭಿವ್ಯಕ್ತಿಯೇ ಆಗಿದೆ. ಸೀಮಿತ ವ್ಯಕ್ತಿತ್ವ ಅವಕಾಶ ಬಳಸಿಕೊಂಡು ತಾನೇ ಮಾತನಾಡುವ ಬದಲು, ಸಂದರ್ಭಕ್ಕೆ ಹೊಂದಿದ ಇತರರ ಮಾತುಗಳಿಗೆ ಹೆಚ್ಚು ಎಡೆಕೊಟ್ಟು ಮುದಗೊಳ್ಳುತ್ತದೆ. ಕೃಷ್ಣನಾದರೋ ಮಹಾ ಮಾತುಗಾರ. ಅವನು ಕೇಳುತ್ತಿದ್ದುದೂ ಉಂಟು. ಅದನ್ನೇ ನೆಮ್ಮಿ ಮುಂದೆ ಇನ್ನೂ ಚಂದವಾಗಿ ಮಾತನಾಡಲು ಬಂದೀತು ತನಗೆ ಎಂಬ ಕಾರಣಕ್ಕೆ ಮಾಂತ್ರಿಕವಾದ ಅವನ ವಾಕ್ ಆ ಹಾದಿ ಹತ್ತಿದವರನ್ನು ಇಂದಿಗೂ ಮರುಳುಗೊಳಿಸುತ್ತದೆ. ರಾಮನಿಗೆ ಅನಿರ್ವಾಚ್ಯದ ಮಂತ್ರ ಶಕ್ತಿ ತಿಳಿದಿತ್ತು. ತಾನು ಮಾತ ನಾಡಬೇಕಾದಂಥ ಅಥವಾ ಕೃತಿಗಿಳಿಯಬೇಕಾದಂಥ ಸಂದರ್ಭ ತೀರ ಅಗತ್ಯವಾಗಿ ಒದಗುವ ತನಕ ಆತ ಬೇರೆಯವರನ್ನೆ ಆಡಬಿಡುತ್ತಿದ್ದ, ರಾಮ ತನ್ನ ಮಾತಿಂದ ಎಷ್ಟೋ ಅಷ್ಟೇ ಶ್ರವಣಕುತೂಹಲದ ನೀರವದಿಂದಲೂ ನಮ್ಮ ಗಮನ ಸೆಳೆಯುತ್ತಾನೆ.

ರಾಮನ ಜೀವನ ಸ್ವಾಹಾಕಾರವಿಲ್ಲದ ವಿಸ್ತಾರಗೊಳ್ಳುವ ವ್ಯಕ್ತಿತ್ವಮಾರ್ಗಕ್ಕೆ ಒಂದು ಪ್ರಬಂಧವೇ ಆಗಿದೆ. ರಾಮನ ವನವಾಸ. ಶಕ್ತಿಯ ಎರಡು ಕೇಂದ್ರಗಳ ನಡುವೆ ಸೆಣೆಸಾಟ ನಡೆಯುತ್ತಿದ್ದ ರಾಷ್ಟ್ರವನ್ನು ಏಕಾಧಿಪತ್ಯದ ಕೆಳಗೆ ತರುವ ಒಂದು ಅವಕಾಶವೇ ಆಗಿತ್ತು. ಅಯೋಧ್ಯೆ ಮತ್ತು ಲಂಕೆ ಇವೇ ಆ ಎರಡು ಕೇಂದ್ರಗಳು. ರಾಮನ ಅಲೆದಾಟ ಅಯೋಧ್ಯೆ ಯಿಂದ ದೂರವಾಗುತ್ತ ಲಂಕೆಯ ಕಡೆ ಸಾಗುವುದಾಗಿತ್ತು. ಹಾದಿಯಲ್ಲಿ ಅನೇಕಾನೇಕ ರಾಜ್ಯಗಳೂ ಪಾಳೆಯಗಳೂ ಇದ್ದವು. ಈ ಎರಡು ಕೇಂದ್ರಗಳಲ್ಲಿ ಒಂದಲ್ಲ ಒಂದಕ್ಕೆ ಸಾಮಂತವೆನ್ನಿಸಿಕೊಂಡು, ರಾವಣನ ಆಶ್ರಯಜಾಲದಲ್ಲಿದ್ದ ಮೊದಲ ಮಹಾರಾಜ್ಯವನ್ನು ಹೊಕ್ಕಾಗ ರಾಮನ ಸೀಮಿತ ವ್ಯಕ್ತಿತ್ವದ ರಾಜಕೀಯ ಸಾಮರ್ಥ್ಯಕ್ಕೆ ಅತ್ಯುತ್ತಮ ಅಭಿವ್ಯಕ್ತಿ ದೊರಕಿತ್ತು. ವಾಲಿ ಅಲ್ಲಿನ ಮುಖ್ಯ. ಅವನ ತಮ್ಮ ಸುಗ್ರೀವ ಮತ್ತು ಸೇನಾಮುಖ್ಯ ಹನುಮಾನ್ ಇಬ್ಬರೂ ಅಸಂತುಷ್ಟರಾಗಿದ್ದರು. ರಾವಣನ ಕೂಟದಿಂದ ಹೊರಬಂದು ರಾಮನ ಸ್ನೇಹ ಸೇವೆಗಳಿಗೆ ಹಾದಿ ಹುಡುಕುತ್ತಿದ್ದರು. ಹನುಮಾನ್ ಮುಂದೆ ರಾಮನ ನೆಚ್ಚಿನ ಬಂಟನೇ ಅದ: ಒಮ್ಮೆ ತನ್ನ ಎದೆಯನ್ನೇ ಸೀಳಿ ತೋರಿಸಿದ, ಅಲ್ಲಿ ರಾಮನಲ್ಲದೆ ಬೇರೆ ಇಲ್ಲವೆಂಬುದನ್ನು ಸ್ಪಷ್ಟಪಡಿಸಲು. ಈ ಮೊದಲ ಮಹತ್ ಭೇಟಿಯ ಸಂದರ್ಭವನ್ನು ರಾಮ ಕೌಶಲದಿಂದ ಬಳಸಿಕೊಂಡ, ತನ್ನ ಸೀಮಿತ ವ್ಯಕ್ತಿತ್ವಕ್ಕೆ ತೀರ ತಕ್ಕುದಾಗಿ ರಾಜ್ಯವನ್ನು ಅಪಹರಿಸಲಿಲ್ಲ, ಅದು ಹಾಗೇ ಉಳಿಯಿತು. ಅಲ್ಲಿನ ಪದವಿಗಳಿಗೆ ಅದು ಕೆಳಗಿನದಿರಲಿ ಮೇಲಿನದಿರಲಿ ಹೊರಗಿಂದ ಅಧಿಕಾರಿಗಳನ್ನು ತಂದು ತುಂಬಲಿಲ್ಲ. ವಾಲಿ ದ್ವಂದ್ವಯುದ್ಧದಲ್ಲಿ ಸತ್ತ, ಸುಗ್ರೀವನಿಗೆ ಪಟ್ಟ ಕಟ್ಟಲಾಯಿತು-ಇಷ್ಟೇ ನಡೆದುದು. ವಾಲಿಯ ಸಾವು ರಾಮನ ಕೆಲವೇ ಅಪಕೃತಿಗಳಲ್ಲಿ ಒಂದು: ಸ್ನೇಹ ಬೇಡಿದ ಸುಗ್ರೀವ ಅಣ್ಣನಿಂದ ಹೊರಗಾಗಿ ಬಂದ ವೇಳೆ ರಾಮ ಮರದ ಹಿಂದೆ ಅಡಗಿ ನಿಂತು ಮರೆಯಿಂದ ಬಾಣ ಬಿಟ್ಟ. ಇದು ನಿಯಮಕ್ಕೆ ವಿರುದ್ಧವಾಗಿತ್ತು. ಸಾಮಾನ್ಯ ಸಂಭಾವಿತನಾದ ಯಾವನೂ ಎಂದೂ ಇಂಥದ್ದು ಮಾಡುವುದಿಲ್ಲ; ಅದರಲ್ಲೂ ಸೀಮಿತ ವ್ಯಕ್ತಿತ್ವಕ್ಕಂತೂ ಇದು ತೀರ ಅಸಾಧ್ಯ. ಆದರೆ ಅದಲ್ಲದೆ ಬೇರೆ ಮಾರ್ಗವಿರಲಿಲ್ಲ ಎನ್ನಬಹುದು ರಾಮ.

ಪ್ರಶ್ಯಾದ ಫ್ರೆಡರಿಕ್ ಮಹಾಶಯ ವ್ಯಕ್ತಿಯ ನೈತಿಕತೆ ಹಾಗೂ ರಾಜ್ಯದ ನೈತಿಕತೆಗಳ ನಡುವಣ ವ್ಯತ್ಯಾಸ ಕುರಿತು ಸಮರ್ಥವಾಗಿ ವಾದಿಸಿದ್ದಾನಷ್ಟೆ. ಈ ವ್ಯತ್ಯಾಸ ಕಾರಣವಾಗಿ ಒಂದು ಸುಳ್ಳಿನ ಮೂಲಕವೋಕೊಟ್ಟ ಮಾತನ್ನು ಮುರಿಯುವುದರ ಮೂಲಕವೋ ಸಾಮೂಹಿಕವಾದ ಕಗ್ಗೊಲೆಯನ್ನೋ ಗುಲಾಮೀಕರಣವನ್ನೋ ತಡೆಯುವುದಾದರೆ ಅದು ತಪ್ಪಲ್ಲ ಎಂದ ಅವನು. ಒಪ್ಪಂದಗಳಿಗೆ ಸದಾ ಬದ್ಧರಾಗಿದ್ದ ತನ್ನ ರಾಜಸಾಮಂತರು ಜೀವನದಲ್ಲಿ ಒಮ್ಮೆ ಹೀಗೆ ತಪ್ಪಿದರೆ ಅಂಥವರನ್ನು ಮನ್ನಿಸಿದ. ರಾಮನೂ ಅಂಥದೇ ವಾದ ಬಳಸಿಕೊಂಡು ಸಾಮೂಹಿಕ ನಾಶ ತಡೆವ ಸಲುವಾಗಿ ಒಬ್ಬ ವ್ಯಕ್ತಿಯ ಧಾರ್ಮಿಕವೆನ್ನಲಾಗದ ಕೊಲೆಗೆ ಕೈಹಾಕಬೇಕಾಯಿತು ಎನ್ನಬಹುದಿತ್ತು. ತಾನು ಅಂಥ ಕುಕಾರ‍್ಯ ಮಾಡಿದ್ದು ಜೀವನದಲ್ಲಿ ಒಮ್ಮೆ ಮಾತ್ರ ಅದರಿಂದ ತೊಂದರೆಯಾದದ್ದು ತನಗೇ, ಬೇರೆ ಯಾವುದೇ ಜನಕ್ಕೆ ಹಿಂಸೆಯಿಲ್ಲದೆ ಇಡೀ ರಾಜ್ಯವೊಂದನ್ನು ಸತ್ಪಥಕ್ಕೆ ಹಚ್ಚಿದೆ-ಎಂದು ಹೇಳಿಕೊಳ್ಳಬಹುದಿತ್ತು. ಇದು ಮೊದಲಾಗಿ ಸುಗ್ರೀವ ಧರ್ಮಕೂಟದೊಳಕ್ಕೆ ಸೇರಿಕೊಂಡ, ರಾಮನಿಗೆ ಅಗತ್ಯವಾಗಿದ್ದ ಸೈನ್ಯದಲ್ಲಿ ಬಹು ಭಾಗವನ್ನೊದಗಿಸಿದ, ಲಂಕೆಯ ಅಭೇದ್ಯ ಕೋಟೆಯನ್ನು ಒರೆಸಿದ. ಇದೆಲ್ಲ ನಿಜವಾಗಿ ವಾಲಿಯೊಬ್ಬನ ಕೊಲೆಯಿಂದ ಸಾಧಿಸಿದ್ದು. ಮುಂದೆ ಕೂಡ ಆ ರಾಜ್ಯ ಸ್ವತಂತ್ರವಾಗಿಯೇ ಉಳಿಯಿತು. ಅದು ರಾಮರಾಜ್ಯದ ಮಿತ್ರಕೂಟದಲ್ಲಿ ಕೂಡಿಕೊಂಡಿದ್ದು ಕೂಡ ಅಲ್ಲಿನ ಪ್ರಜೆಗಳ ಇಚ್ಛೆಗನುಸಾರವಾಗಿಯೇ ಇದ್ದಿತ್ತು. ಹಾಗಿದ್ದರೂ ರಾಮನಂಥ ಸೀಮಿತದ ಶಿಖರವ್ಯಕ್ತಿತ್ವ ಈ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ್ದು ಅನಪೇಕ್ಷಣೀಯವೇ-ನಿಯಮ ಅಲ್ಲದ್ದಿರಬಹುದು, ಮಹತ್ವದ್ದಿರಬಹುದು, ಉಲ್ಲಂಘನೆ ಜೀವಿತದಲ್ಲಿ ಒಮ್ಮೆ ಮಾತ್ರವೇ ಮಾಡಿದ್ದಿರಬಹುದು ಹಾಗೂ ಅದಕ್ಕಿಂತ ದೊಡ್ಡ ಇಲ್ಲವೆ ಉನ್ನತ ನಿಯಮವೊಂದರ ಸ್ಥಾಪನೆಗಾಗಿಯೇ ಇದ್ದಿರಬಹುದು. ಏನಾದರೂ ಇದು ಅನಪೇಕ್ಷಣೀಯ ಎಂದೇ ಎನಿಸುತ್ತದೆ.

ಅಪಹಾರವಿಲ್ಲದೆ ವಿಸ್ತರಣೆ ರಾಜದಾಹವಿಲ್ಲದೆ ಏಕೀಕರಣ ಸಾಧನೆ-ಇದು ರಾಮಕತೆ; ಸೀಮಿತ ವ್ಯಕ್ತಿತ್ವ ಕ್ರಿಯೋತ್ಸಾಹದ ರಾಜಕೀಯದಲ್ಲಿ ಮತ್ತು ರಾಷ್ಟ್ರಂತರ ಸಂಬಂಧಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಕತೆ. ಕಥಾನಾಯಕ ರಾಮ, ಉದ್ದಕ್ಕೂ, ಶತ್ರುಪಕ್ಷದಲ್ಲಿರುವ ಧಾರ್ಮಿಕ ಸ್ನೇಹವನ್ನು ಹುಡುಕಿ ಎತ್ತಿಕೊಳ್ಳುವುದಕ್ಕೆ ಮುಂದಾಗುತ್ತಿದ್ದುದನ್ನು ಕಾಣಬಹುದು. ಲಂಕೆಯಲ್ಲೂ ಅವನು ಮರಳಿ ಹಾಗೆ ಮಾಡಿದ. ರಾವಣನ ತಮ್ಮ ವಿಭೀಷಣ ರಾಮನ ಆಶ್ರಯ ಪಡೆದುಕೊಂಡ. ಆದರೆ ಮುಂದೆ ಮಾತ್ರ ಕಿಷ್ಕಿಂಧೆಯ ಕತೆಯನ್ನು ಅಲ್ಲೂ ಪುನರಾವರ್ತಿಸುವುದು ಸಾಧ್ಯವಾಗಲಿಲ್ಲ. ಲಂಕೆ ಕಿಷ್ಕಿಂಧೆಗಿಂತ ಕಠಿಣವಾಗಿತ್ತು. ಅಲ್ಲಿನ ದೌಷ್ಟ್ಯ, ಹೆಚ್ಚು ಬಲಶಾಲಿಯಾಗಿತ್ತು,ಪ್ರೌಢವಾಗಿತ್ತು. ಘೋರ ಯುದ್ಧವೇ ನಡೆದು ಅಸಂಖ್ಯ ಜನರ ಕೊಲೆಯಾಗಬೇಕಾಯಿತು. ಮುಂದೆ ವಿಭೀಷಣ ಅಭಿಷಿಕ್ತನಾದ. ವಿಧವೆಯಾದ ಅಣ್ಣನ ಮಡದಿ ಮಂಡೋದರಿಯನ್ನು ಪತ್ನಿಯಾಗಿ ಸ್ವೀಕರಿಸಿದ. ಇಂದಿಗೆ ಕೂಡ ವಿಭೀಷಣನೆಂದರೆ, ಹೇಗೋ ಏನೋ, ಗೂಢಚಾರತನಕ್ಕೆ ಹಿಂದಿಂದ ಬಂದು ಕೊಲ್ಲುವುದಕ್ಕೆ, ಪಂಚಮದಳಕ್ಕೆ ಇನ್ನೊಂದು ಹೆಸರಾಗಿ ಉಳಿದುಬಿಟ್ಟಿದ್ದಾನೆ-ಅದೂ ರಾಮನ ಮುಖ್ಯ ಕೇಂದ್ರಗಳಿದ್ದ ಅವಧಿ ಪ್ರಾಂತ್ಯದಲ್ಲಿ. ಅತ್ಯಾಶ್ಚರ‍್ಯವೂ ಸೂಚಕಸ್ತಂಭವೂ ಆಗಿ ಸದಾ ಉಳಿಯುವ ಸಂಗತಿ ಇದು-ಯಾವ ಕವಿಗಾಯಕನಿಗೂ ವಿಭೀಷಣನ ಪಾಪವನ್ನು ತೊಳೆಯವುದಾಗಲಿಲ್ಲ, ದೇವರ ಅವತಾರವಾದ ಸೀಮಿತ ವ್ಯಕ್ತಿ ರಾಮ ತನ್ನ ಮಿತ್ರವರ್ಗದ ಈತನನ್ನು ಜನ ಒಪ್ಪುವ ಸ್ಥಿತಿಗೆ ಎತ್ತಲು ಅಸಮರ್ಥನಾದ. ರಾಮನ ಸಹವಾಸದ ಸದಾವಕಾಶ ಸಿಕ್ಕಿದರೂ ಕೂಡ ವಿಭೀಷಣನ ಅಪಕೀರ್ತಿ ಚಿರಸ್ಥಾಯಿಯಾಗಿಬಿಟ್ಟಿತು. ತನ್ನ ಮಿತ್ರನನ್ನು ಪವಿತ್ರಗೊಳಿಸುವ ಪವಾಡ ಸೀಮಿತ ವ್ಯಕ್ತಿತ್ವಕ್ಕೆ ಅಸಾಧ್ಯವಾಯಿತು. ಅಥವಾ, ಸೀಮಿತ ವ್ಯಕ್ತಿತ್ವದ ಲಕ್ಷಣವೇ ಅದು ಎನ್ನಬಹುದೆ-ಸದ್ಗುಣಕ್ಕೆ ಜಯ ಸಿಕ್ಕರೂ, ಅದರ ಗೆಲುವಿಗೆ ಕಾರಣನಾದವನು ದ್ರೋಹಿಯೂ ಆಗಿದ್ದರಿಂದ ಆತ ತನ್ನ ಹೆಸರಿನ ಮೇಲೆ ವಂಚಕತ್ವದ ಕಳಂಕವನ್ನು ಸದಾಕಾಲ ಹೊರಬೇಕಾದ್ದು ತಪ್ಪಲಿಲ್ಲ ಎನ್ನುವುದು?