ಹಿಂದೆ ಯಾವುನೋ ಒಬ್ಬ ಇಡೀ ರಾತ್ರಿ ರಾಮಾಯಣ ಕೇಳಿದ ನಂತರ ಬೆಳಿಗ್ಗೆ ಎದ್ದವನೇ “ರಾಮನಿಗೆ ಸೀತೆ ಏನಾಗಬೇಕು?” ಅಂತ ಕೇಳಿದನಂತೆ! ಇದೊಂದು ಗಾದೆ ಮಾತಾಗಿ ಹೋಗಿದೆಯೆನ್ನಿ. ಹಾಗೆ ಪ್ರಶ್ನಿಸಿದವ ಒಬ್ಬ ಶುದ್ಧ ಪೆದ್ದ ಅನ್ನುವ ಭಾವನೆ ಜನರಲ್ಲಿ ಬೇರೂರಿದೆ. ಆದರೆ ನಿಜವಾಗಿ ಹೇಳುವುದಾದರೆ, ಆ ಪ್ರಶ್ನೆ ಕೇಳಿದವ ಅಂಥ ಪೆದ್ದನೇನಲ್ಲ. ಆ ಪ್ರಶ್ನೆಯಲ್ಲಿ ಎಷ್ಟೋ ನಿಗೂಢವಾದ ವಿಷಯಗಳು, ಚರ್ಚಿಸಬಹುದಾದಂಥ ಅಂಶಗಳು ಅಡಗಿವೆ.

ರಾಮಾಯಣವನ್ನೆಲ್ಲ ಅಲ್ಲದಿದ್ದರೂ ರಾಮಾಯಣಗಳನ್ನೆಲ್ಲ ಕೇಳಿದಾಗ ಈ ಪ್ರಶ್ನೆ ಪ್ರತಿಯೊಬ್ಬರಲ್ಲೂ ಹುಟ್ಟುವುದು ಖಂಡಿತ. ಇಂದು ನಮ್ಮ ದೇಶದಲ್ಲೂ ಪ್ರಪಂಚದ ಎಲ್ಲೆಡೆಗಳಲ್ಲೂ ವಾಲ್ಮೀಕಿ ರಾಮಾಯಣವು ವಿಶೇಷ ಪ್ರಚಾರ ಪಡೆದಿರುವ ಕಾರಣದಿಂದಾಗಿ ಅದೇ ಮೂಲ ರಾಮಾಯಣ ಎಂದು ಜನ ನಂಬಿದ್ದಾರೆ. ಆದರೆ ವಾಲ್ಮೀಕಿಯು ರಾಮಾಯಣವನ್ನು ರಚಿಸುವುದಕ್ಕೆ ಮುನ್ನವೇ ರಾಮನ ಬಗೆಗೆ ನಾನಾ ರೀತಿಯ ಕಥೆಗಳು ಪ್ರಚಾರದಲ್ಲಿದ್ದವು. ಈ ಸಂಗತಿ ವಾಲ್ಮೀಕಿ ರಾಮಾಯಣದಲ್ಲೇ ದಾಖಲಾಗಿದೆ.

ಒಮ್ಮೆ ನಾರದನು ವಾಲ್ಮೀಕಿ ಆಶ್ರಮಕ್ಕೆ ಆಗಮಿಸಿದ. ಅತಿಥಿ ಸೇವೆ ಮಾಡಿದ ನಂತರ ವಾಲ್ಮೀಕಿ ನಾರದನನ್ನು ಹೀಗೆ ಪ್ರಶ್ನಿಸಿದ: “ಈ ಲೋಕದಲ್ಲಿ ಇಂದು ಗುಣವಂತನೂ, ರ್ಯವಂತನೂ, ಧರ್ಮಜ್ಞನೂ, ಕೃತಜ್ಞನೂ, ಸತ್ಯವಚನನೂ, ದೃಢವ್ರತನೂ, ಚರಿತ್ರವಂತನೂ, ಸರ್ವಭೂತ ಹಿತವಂತನೂ, ವಿದ್ಯಾವಂತನೂ, ಸಮರ್ಥನೂ, ಏಕಪ್ರಿಯದರ್ಶನನೂ, ಜಿತಕ್ರೋಧನೂ, ಕಾಂತಿಯುತನೂ, ಅನಸೂಯಾವಂತನೂ, ದೇವತೆಗಳನ್ನೆಲ್ಲ ಯುದ್ಧದಲ್ಲಿ ಜಯಿಸಬಲ್ಲವನೂ ಆದಂಥ ಯಾರಾದರೂ ಒಬ್ಬ ವ್ಯಕ್ತಿ ಇದ್ದಾನೆಯೇ?” ವಾಲ್ಮೀಕಿ ಕೇಳಿದ ಈ ಪ್ರಶ್ನೆಯಲ್ಲಿನ ಸುಗುಣಗಳನ್ನೆಲ್ಲ ವ್ಯಕ್ತಿಯೆಂದರೆ ಶ್ರೀರಾಮನೊಬ್ಬನೇ ಎಂದು ಹೇಳಿ ನಾರದನು ವಾಲ್ಮೀಕಿಗೆ ರಾಮನ ಕಥೆಯನ್ನು ಸಂಗ್ರಹವಾಗಿ ತಿಳಿಸಿದ. ವಾಲ್ಮೀಕಿ ಆ ಕಥೆಯನ್ನು ಅನಂತರ ವಿಸ್ತಾರವಾಗಿ ಮಹಾಕಾವ್ಯವಾಗಿ ರಚಿಸಿದ.

ನಾರದನು ಹೇಳಿದ ರಾಮಕಥೆಗೆ ಮೂಲ ಯಾವುದು? ಅದು ಎಲ್ಲಿಂದ ಬಂದಿತು? ನಾರದನು ಸಹಜವಾಗಿಯೇ ಅಂದು ಸಮಾಜದಲ್ಲಿ ಪ್ರಚಾರದಲ್ಲಿದ್ದ ಕಥೆಯನ್ನೇ ಅದನ್ನು ತಿಳಿಯದಿದ್ದ ವಾಲ್ಮೀಕಿಗೆ ತಿಳಿಸಿಕೊಟ್ಟಿರಬೆಕು. ನಾರದನು ಹೇಳಿದ ಕಥೆಯನ್ನು ವಾಲ್ಮೀಕಿ ಸ್ವಲ್ಪ ಬದಲಿಸಿರಬಹುದು (ಶಕುಂತಳೆಯ ಕಥೆಯನ್ನು ಕಾಳಿದಾಸನು ಬದಲಿಸಿದಂತೆ). ವಾಲ್ಮೀಕಿ ಬರೆದದ್ದು ಕಾವ್ಯ ಅದು ಇತಿಹಾಸವಲ್ಲ, ಪುರಾಣವಲ್ಲ.

ಸ್ವಾರ್ಥಿಗಳು ಸ್ವಲಾಭಕ್ಕಾಗಿ ಪುರಾಣ ಇತಿಹಾಸಗಳಲ್ಲಿ ಪ್ರಕ್ಷಿಪ್ತಗಳನ್ನು ಸೇರಿಸಿದ್ದು ಮಧ್ಯ ಯುಗದಲ್ಲಿ. ಆದರೆ ಆದಿಕಾಲದಲ್ಲಿ ಜನಜನಿತವಾದ ಕಥೆಗಳನ್ನು ಪುರಾಣ ಇತಿಹಾಸಗಳು ಈ ರೀತಿ ತಿರುಚಲಿಲ್ಲ. ಆದ್ದರಿಂದಲೇ ಇತಿಹಾಸವಾದ ಭಾರತದಲ್ಲೂ ಪುರಾಣವಾದ ಭಾಗವತದಲ್ಲೂ ರಾಮನ ಕುರಿತು ಉಪಾಖ್ಯಾನಗಳಿವೆ. ಭಾಗವತ ಪುರಾಣವಷ್ಟೆ ಅಲ್ಲ ಅಷ್ಟಾದಶ ಪುರಾಣಗಳಲ್ಲಿನ ಅನೇಕ ಪುರಾಣಗಳೂ ರಾಮನ ಕಥೆಯನ್ನು ಹೇಳಿವೆ. ಪದ್ಮ ಪುರಾಣದಲ್ಲಿ ತುಂಬ ವಿವರವಾಗಿ ರಾಮಾಯಣಗಾಥೆ ಮೂರುಖಂಡಗಳಲ್ಲಿ ಕಾಣಬರುತ್ತದೆ. ವಾಲ್ಮೀಕಿ ರಾಮಾಯಣದಲ್ಲಿಲ್ಲದ ಎಷ್ಟೋ ವಿಷಯಗಳು ಇದರಲ್ಲಿವೆ.

ಅಗ್ನಿಪುರಾಣ, ಕೂರ್ಮ ಪುರಾಣ, ದೇ ಭಾಗವತ, ಬ್ರಹ್ಮವೈವರ್ತ ಬ್ರಹ್ಮಾಂಡ ಪುರಾಣಗಳು, ಮಾರ್ಕಂಡೇಯ ಹಾಗೂ ಶಿವಪುರಾಣಗಳು ಕೂಡ ರಾಮಕಥೆಯನ್ನು ಅಷ್ಟೋ ಇಷ್ಟೋ ಹೇಳುತ್ತವೆ. ಇವುಗಳಲ್ಲಿ ವಾಲ್ಮೀಕಿಯಲ್ಲಿಲ್ಲದ ವಿಷಯಗಳೂ ಎಷ್ಟೋ ಇವೆ. ಇವೆಲ್ಲ ಎಲ್ಲಿಂದ ಬಂದವು? ಪವಿತ್ರ ಗ್ರಂಥಗಳಲ್ಲಿ ಯಾರೂ ತಮ್ಮ ಮನಸ್ಸಿಗೆ ಬಂದದ್ದನ್ನು ಬರೆದು ಸೇರಿಸುವುದಿಲ್ಲ. ಸಂಪ್ರದಾಯಸಿದ್ಧವಾಗಿದ್ದಂಥ, ಜನರು ಹೇಳಿಕೊಳ್ಳುತ್ತಿದ್ದಂಥ ವಿಷಯಗಳನ್ನಷ್ಟೆ ಪುರಾಣ ಇತಿಹಾಸಗಳಲ್ಲಿ ಸೇರಿಸಿದ್ದಿರಬೇಕು.

ವಾಲ್ಮೀಕಿಯಂತೆಯೇ ಅನೇಕ ಇತರ ಪ್ರಾಚೀನರೂ ರಾಮನ ಕಥೆಯನ್ನು ಕಾವ್ಯವಾಗಿ ರಚಿಸಿದ್ದಾರೆ. ಅದ್ಭುತ ರಾಮಾಯಣ, ಆಧ್ಯಾತ್ಮ ರಾಮಾಯಣ, ಆನಂದ ರಾಮಾಯಣಗಳಂಥವು ಸುಪ್ರಸಿದ್ಧವಾದವು. ಭಾಸನ ಪ್ರತಿಮಾ ನಾಟಕ, ಕಾಳಿದಾಸನ ರಘುವಂಶ, ‘ಭಟ್ಟಿಕಾವ್ಯ’ ಅನ್ನುವ ಹೆಸರಿನಲ್ಲಿ ಪ್ರಸಿದ್ಧವಾದ ಭಟ್ಟಿ ಬರೆದ ರಾವಣವಧ, ಭವಭೂತಿಯ ಉತ್ತರ ರಾಮಚರಿತ್ರೆ, ದಿಜ್ನಾಗು ಬರೆದ ಕುಂದಮಾಲ, ಮೊದಲಾದವುಗಳೆಲ್ಲ ರಾಮಕಥೆಗಳೇ. ಇವುಗಳಲ್ಲಿ ವಾಲ್ಮೀಕಿಯಲ್ಲಿಲ್ಲದ ಎಷ್ಟೋ ಕಲ್ಪಿತ ವಿಷಯಗಳಿವೆ. ಇವರೆಲ್ಲರೂ ಸೀತಾರಾಮರಲ್ಲಿ ಪರಿಪೂರ್ಣವಾದ ಭಕ್ತಿ ಉಳ್ಳವರೇ, ರಾಮಕಥೆಯಲ್ಲಿ ಗೌರವ ಹೊಂದಿರುವವರೇ. ಈ ಲೇಖಕರೆಲ್ಲರಿಗೂ ವಾಲ್ಮೀಕಿ ರಾಮಾಯಣವೊಂದೇ ಮೂಲವಾಗಿಲ್ಲದಿರಬಹುದು.

ವಾಲ್ಮೀಕಿಗೆ ನಾರದನು ಹೇಳಿದ ರಾಮಕಥೆಯು ಆಗಲೇ ಜನರ ಮಧ್ಯೆ ವ್ಯಾಪಕವಾಗಿ ಹರಡಿದ್ದ ಕಥೆಯೇ ಎಂದು ಈ ಮೊದಲೇ ಹೇಳಿದ್ದೇವೆ. ಅದಕ್ಕೆ ಮುನ್ನ ರಾಮಕಥೆಯು ಎಷ್ಟೋ ಬೇರೆ ಬೇರೆ ರೀತಿಗಳಲ್ಲಿ ಪ್ರಚಾರದಲ್ಲಿದ್ದಿರಬೇಕು. ಅದು ಪರಂಪರಾಗತವಾಗಿ, ಸಂಪ್ರದಾಯಸಿದ್ಧವಾಗಿ ರಾಷ್ಟ್ರ ಸಂಪತ್ತಿನ ಒಂದು ಭಾಗವಾಗಿದೆ. ಈ ಸಂಪತ್ತಿಗೆ ವೈದಿಕ ಧರ್ಮಪರಾಯಣರಂತೆ ಬೌದ್ಧರು ಜೈನರು ಕೂಡ ವಾರಸುದಾರರೇ. ಈ ಮೂರು ಧರ್ಮಗಳ ಪೂರ್ವಿಕರೂ ಒಂದೇ ಮೂಲದಿಂದ ಬಂದವರೇ.

ವೈದಿಕರಂತೆ ಬೌದ್ಧರು ಜೈನರು ಕೂಡ ರಾಮಾಯಣವನ್ನು ಉಪಯೋಗಿಸಿಕೊಂಡರು. ವೈದಿಕರು ಬುದ್ಧನನ್ನು ದಶಾವತಾರದಲ್ಲಿ ಸೇರಿಸಿದಲ್ಲಿ, ಬೌದ್ಧರು ರಾಮನನ್ನು ಬುದ್ಧನ ಪೂರ್ವಜನ್ಮದ ಒಂದು ಅವತಾರವೆಂದೇ ಹೇಳಿಕೊಂಡಿದ್ದಾರೆ.

ವೈದಿಕರು ರಾಮನ ಮೂಲಕ ಬೌದ್ಧರನ್ನು ನಾಸ್ತಿಕರನ್ನು ವಿರೋಧಿಸಿದಲ್ಲಿ ಜೈನರು ರಾವಣನ ಮೂಲಕ ಹಿಂಸಾತ್ಮಕವಾದ ಯಜ್ಞಯಾಗಾದಿಗಳನ್ನು ನಾಶಗೊಳಿಸಿದರು, ಅಹಿಂಸೆಯನ್ನು ಪ್ರತಿಪಾದಿಸಿದರು.

ಭಾರತ ದೇಶದಲ್ಲಿ ಮೂರು ಪ್ರಧಾನ ಧರ್ಮಗಳಲ್ಲಷ್ಟೇ ಅಲ್ಲದೆ ಸರಿಸುಮಾರು ಎಲ್ಲ ಪ್ರಧಾನ ಭಾಷೆಗಳಲ್ಲೂ ರಾಮಾಯಣ ಇದೆ. ಪ್ರತಿಯೊಂದರಲ್ಲೂ ಎಲ್ಲಾದರೊಂದು ಕಡೆ ವಾಲ್ಮೀಕಿಯಲ್ಲಿಲ್ಲದ ಒಂದಲ್ಲ ಒಂದು ವಿಷಯ ಇದ್ದೇ ಇದೆ. ರಾಮನ ಮೇಲೆ ಅಪಾರ ಭಕ್ತಿಯಿಂದ ರಾಮಾಯಣದ ಮೇಲೆ ಗೌರವದಿಂದ ಬರೆದ ಇವುಗಳಲ್ಲೇ ಈ ಹುತ್ತದೊಳಗಿನ ಹುತ್ತಗಳೇಕೆ? ಸಂಪ್ರದಾಯಗಳನ್ನು ಕೈಬಿಡಲು ಆಗದೇ ಹೋದುದರಿಂದಲ್ಲವೇ?

ನಮ್ಮ ಪ್ರಾಚೀನ ಭಾರತ ದೇಶಕ್ಕೂ ದೂರ ಪ್ರಾಚ್ಯದ ಅನೇಕ ದೇಶಗಳಿಗೂ ಮಧ್ಯೆ ವ್ಯಾಪಾರ ವಾಣಿಜ್ಯ ಸಂಬಂಧಗಳು ಏರ್ಪಟ್ಟಿದ್ದವು. ನಮ್ಮ ಪ್ರಾಚೀನರು ಧರ್ಮವನ್ನೂ ರಫ್ತು ಮಾಡಿದರು. ರಾಮಕಥೆಯು ಏಷ್ಯ ಖಂಡದಾದ್ಯಂತ ಹರಡಿತು. ಶ್ರೀಲಂಕ, ಟಿಬೆಟ್, ಖೋಟಾನ್, ಮಂಗೋಲಿಯ, ಸೈಬೀರಿಯ, ಚೀಣ, ಜಪಾನು, ಲಾವೋಸ್, ಚಂಪ, ಕಾಂಬೋಡಿಯಾ, ಥಾಯ್ಲೆಂಡ್, ಇಂಡೋನೇಷಿಯಾ, ಮಲೇಷಿಯಾ, ಫಿಲಿಫೈನ್ಸ್, ಬರ್ಮ ದೇಶಗಳಲ್ಲಿ ರಾಮಾಯಣ ಕಥೆಯು ಕೆಲವು ಕಡೆ ಜಾನಪದ ಗಾಥೆಯಾಗಿ ತುಂಬ ಪ್ರಚಾರದಲ್ಲಿದ್ದರೆ, ಇನ್ನು ಕೆಲವು ಕಡೆ ಸಾಹಿತ್ಯವಾಗಿ ಗ್ರಂಥಸ್ತವಾಗಿದೆ. ಈ ಕಥೆಗಳಲ್ಲಿ ವಾಲ್ಮೀಕಿ ರಾಮಾಯಣದಲ್ಲಿಲ್ಲದ ಎಷ್ಟೋ ವಿಷಯಗಳಿವೆ. ಈ ರಾಮಾಯಣಗಳೆಲ್ಲವನ್ನೂ ಪರಿಶೀಲಿಸಿದಲ್ಲಿ, ಸೀತೆ ರಾಮನಿಗೆ ಏನಾಗಬೇಕು ಎಂಬ ಪ್ರಶ್ನೆ ಉದ್ಭವಿಸದೆ ಇರದು.

ಬೌದ್ಧ ಜೈನ ರಾಮಾಯಣಗಳಂತೆಯೇ ಈ ದೇಶ ವಿದೇಶಗಳ ರಾಮಾಯಣಗಳಲ್ಲೂ ಸೀತಾರಾಮರ ಮೇಲೆ ಗೌರವ ಭಕ್ತಿ ಭಾವನೆಗಳೆ ತುಂಬಿವೆ. ಸೀತಾರಾಮರು ಇವುಗಳಲ್ಲೂ ಆರಾಧ್ಯ ದೇವತೆಗಳೇ. ಆದರೆ ವಾಲ್ಮೀಕಿಗೂ ಮುನ್ನ ಅನೇಕ ರೀತಿಗಳಲ್ಲಿ ಪ್ರಚಾರದಲ್ಲಿದ್ದ ರಾಮಕಥೆಗಳು ಈ ದೇಶಗಳಿಗೆ ಸೀಮೋಲ್ಲಂಘನ ಮಾಡಿದುದರಿಂದಾಗಿ ಈ ವಿವಿಧ ದೇಶಗಳಲ್ಲಿನ ರಾಮಾಯಣಗಳಲ್ಲಿ ಬೌದ್ಧ ಜೈನ ರಾಮಾಯಣಗಳಲ್ಲಿರುವ ಅನೇಕ ಅಂಶಗಳು ಕಂಡುಬರುತ್ತವೆ.

ಬೌದ್ಧ ರಾಮಾಯಣದಲ್ಲಿ ಸೀತೆ ರಾಮನಿಗೆ ತಂಗಿ. ತಂಗಿಯಷ್ಟೇ ಅಲ್ಲ ಹೆಂಡತಿಯೂ ಹೌದು. ಖೋಟಾನ್‌ನ ರಾಮಾಯಣದಲ್ಲಿ ಸೀತೆ ರಾಮ ಲಕ್ಷ್ಮಣರಿಬ್ಬರಿಗೂ ಹೆಂಡತಿ. ಲಾವೋಸ್ ರಾಮಾಯಣದಲ್ಲಿ ಹನುಮಂತನು ರಾಮನ ಮಗ. ಮಲೇಷಿಯಾ ರಾಮಾಯಣದಲ್ಲಿ ಮಂಡೋದರಿ ದಶರಥನ ಹಿರಿಯ ಹೆಂಡತಿ. ಕೈಕೇಯಿ ಸ್ಥಾನದಲ್ಲಿರುವ ಬಾಲ್ಯಾದರಿ ‘ಇಟ್ಟುಕೊಂಡವಳಷ್ಟೆ’. ದಶರಥನ ಮಗನು ರಾವಣಾಸುರನ ಪುತ್ರಿಯನ್ನು ಮದುವೆಯಾಗಿ ರಾವಣನನ್ನು ಕೊಲ್ಲುತ್ತಾನೆ. ಆ ಪುತ್ರಿಯು ಪುತ್ರಿಕಾಮೇಷ್ಠಿಯಲ್ಲಿ ಪವಿತ್ರವಾದ ಒಂದು ಅನ್ನದ ಮುದ್ದೆಯಿಂದಾಗಿ ಹುಟ್ಟಿದವಳು. ವಿಚಿತ್ರವಾಗಿ ಕಾಣಬರುವಂಥ ಈ ವಿಭಿನ್ನ ರಾಮಾಯಣಗಳ ಅಂಶಗಳನ್ನು ನಾವು ಶ್ರದ್ಧೆಯಿಂದ ಪರಿಶೀಲಿಸಬೇಕು.

ವೈದಿಕ ಧರ್ಮವನ್ನು ಪರಿಹಾಸ್ಯ ಮಾಡಲು ಬೌದ್ಧರೂ ಜೈನರೂ ಈ ವಿಚಿತ್ರ ಸಂಗತಿಗಳನ್ನು ಸೃಷ್ಟಿಸಿದರೆಂಬ ವಾದ ಇದುವರೆವಿಗೂ ಚಾಲ್ತಿಯಲ್ಲಿದ್ದರೂ, ಇನ್ನು ಮುಂದೆ ಇರಲಾಗದು. ಜೈನ ರಾಮಾಯಣದ ಮೇಲೆ ಒಂದು ಅತ್ಯುತ್ತಮ ಪ್ರಬಂಧ ರಚಿಸಿದ ಸುರವರಂ ಪ್ರತಾಪರೆಡ್ಡಿಯವರ ಈ ಕೆಳಗಿನ ಮಾತುಗಳನ್ನು ಇಲ್ಲಿ ನೆವಪಿಸಿಕೊಳ್ಳುವುದು ತುಂಬ ಅವಶ್ಯ.

“ನಮ್ಮ ಧರ್ಮಕ್ಕೆ ವಿರುದ್ಧವಾದ ಬೌದ್ಧ ಧರ್ಮವನ್ನು, ಜೈನ ಧರ್ಮವನ್ನು, ಚಾರ್ವಾಕ ಲೋಕಾಯತ ಕಾಲವಾದಿಗಳ ಸಿದ್ಧಾಂತಗಳನ್ನು ನಾವು ಪಾಷಂಡ ಧರ್ಮಗಳ ಪಟ್ಟಿಯಲ್ಲಿ ಸೇರಿಸಿ ಅವುಗಳ ಅನುಯಾಯಿಗಳನ್ನೆಲ್ಲ ನಾಸ್ತಿಕರು, ವೇದ ವಿರೋಧಿಗಳು, ವೇದ ಬಾಹಿರರು ಎಂದು ನಿಂದಿಸಿ, ಉಪೇಕ್ಷಭಾವ ತೋರಿದ್ದೇವೆ. ಹೀಗೆ ಮಾಡುವುದು ಅಹಂಭಾವದ ಸಂಕೇತವಷ್ಟೆ”.

ಜೈನ ರಾಮಾಯಣದಲ್ಲಿ ವಿಶ್ವಾಸವಿರಿಸಬಹುದಾದಂಥ ಅನೇಕ ಸಂಗತಿಗಳಿವೆ ಎಂದು ಹೇಳಿ ಸುರವರಂ ಪ್ರತಾಪರೆಡ್ಡಿಯವರು ಈ ಕೆಳಗಿನಂತೆ ತಮ್ಮ ಅಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾರೆ: “ವಾಲ್ಮೀಕಿ ರಾಮಾಯಣವು ರಾಮನನ್ನು ಆದರ್ಶ ಪುರುಷನನ್ನಾಗಿ, ಏಕಪತ್ನೀವ್ರತನನ್ನಾಗಿ ಮಾಡಿದ ಹಾಗೆಯೇ ರಾವಣನನ್ನು ಸರ್ವದುರ್ಮಾರ್ಗನನ್ನಾಗಿ ಮಾಡಿ, ಪಾತ್ರ ಪೋಷಣೆಯಲ್ಲಿ ತುಂಬ ಪಕ್ಷಪಾತ ಮಾಡಿದೆ. ಇದು ಹಿಂದೂ ಧರ್ಮ ಸಂಪ್ರದಾಯಕ್ಕನುಗುಣವಾಗಿದ್ದರೂ, ಹೀಗೆ ಮಾಡುವುದು ಚರಿತ್ರೆಗೆ ತುಂಬ ನಷ್ಟವೇ. ವಿದ್ವದ್ವರೇಣ್ಯರುಗಳೇ ಜೈನ ರಾಮಾಯಣವನ್ನು ನಿಶಿತವಾಗಿ ವಿಮರ್ಶಿಸಿ ಯಥಾರ್ಥವನ್ನು ನಿರ್ಣಯಿಸಲಿ”.

ವಿದ್ವದ್ವರೇಣ್ಯರು ಜೈನ ರಾಮಾಯಣವೊಂದನ್ನಷ್ಟೆ ಅಲ್ಲ ಇತರ ದೇಶಗಳ ರಾಮಾಯಣಗಳನ್ನೂ ವಿಮರ್ಶಿಸಿದ್ದಾರೆ. ವಿವಿಧ ದೇಶಗಳ ಪಂಡಿತರು ವಿವಿಧ ಪತ್ರಿಕೆಗಳಲ್ಲೂ ವಿವಿಧ ಗ್ರಂಥಗಳಲ್ಲೂ ವಿಭಿನ್ನ ರಾಮಾಯಣ ವಿಶೇಷಗಳನ್ನು ವಿವರಿಸಿದ್ದಾರೆ. ಪುಸಾಲ್ಕರ್ ರವರು ಭಾರತೀಯ ಪುರಾಣ ಇತಿಹಾಸಗಳ ಕುರಿತು ರಚಿಸಿರುವ ಗ್ರಂಥದಲ್ಲಿ ರಾಮಕಥೆಯ ವಿವರಗಳನ್ನೆಲ್ಲ ಕ್ರೋಡೀಕರಿಸಿದ್ದಾರೆ. ಆಚಾರ್ಯ ವಿ.ರಾಘವನ್‌ರವರು ವಿವಿಧ ದೇಶಗಳ ರಾಮಾಯಣಗಳನ್ನೂ ನಮ್ಮ ದೇಶದ ರಾಮಾಯಣವನ್ನೂ ತುಲನಾತ್ಮಕವಾಗಿ ಪರಿಶೀಲಿಸಿದ್ದಾರೆ. ನಮಗೆ ‘ಮಹಾ’ ಭಾರತದಂತೆ ‘ಮಹಾ’ರಾಮಾಯಣ ಇಲ್ಲದಿದ್ದರೂ ಆಚಾರ್ಯ ರಾಘವನ್‌ರವರು ‘ಮಹತ್ತರ’ ರಾಮಾಯಣವಾಗಿ ನಮ್ಮ ರಾಮಾಯಣದ ಸರ್ವಸ್ವವನ್ನೂ ಪರಿಶೀಲಿಸಿ ಗುರುತಿಸಿದ್ದಾರೆ. ವಿವಿಧ ದೇಶಗಳ ರಾಮಾಯಣಗಳನ್ನು ಅವರು ಮಹತ್ತರ ಭಾರತ ದೇಶದೊಳಗಿನ ರಾಮಾಯಣ ಎಂದು ಕರೆದಿದ್ದಾರೆ.

ವಿವಿಧ ವಿದ್ವದ್ವರೇಣ್ಯರ ಪರಿಶೋಧನೆಗಳ ಫಲಿತಾಂಶಗಳನ್ನು, ತುಂಬ ಭಕ್ತಿಯಿಂದ ಮಾಡಿದ ಪರಿಶೋಧನೆಗಳ ಫಲಿತಾಂಶಗಳನ್ನು, ಮೇಳವಿಸಿ ವಿವಿಧ ದೇಶಗಳ ರಾಮಾಯಣ ವಿಶೇಷಗಳನ್ನು ಇಲ್ಲಿ ಲೇಖನ ಶ್ರೇಣಿಯಲ್ಲಿ ಪಾಠಕರಿಗೆ ಒಪ್ಪಿಸುತ್ತಿದ್ದೇನೆ. ರಾಮಾಯಣ ಚರಿತ್ರೆಯಲ್ಲಿ ಸತ್ಯನಿರ್ಣಯಕ್ಕೆ ಕಾರಣಭೂತವಾಗುವುದೆಂಬ ಏಕೈಕ ಆಶಯದಿಂದ ಕೈಕೊಂಡ ಕಾರ್ಯವಾಗಿದೆ ಇದು.