ನಾನು ಪಿ.ಯು.ಸಿ. ಓದುತ್ತಿದ್ದಾಗ ಮಿತ್ರನೊಬ್ಬ ನನ್ನೊಂದಿಗೆ ಓದಿಕೊಳ್ಳಲು ಬರುತ್ತಿದ್ದ. ನನಗಿಂತ ಒಂದು ವರ್ಷ ಹಿರಿಯ. ಒಂದು ಸಲ ಆಗಲೇ ಪರೀಕ್ಷೆಗೆ ಕೂತು ಫೇಲಾಗಿದ್ದವನು. ಆತ ದಿನವೂ ಪರೀಕ್ಷೆಗೆ ಓದಲು ಶುರುಮಾಡುವ ಮೊದಲು, ಓದು ಮುಗಿಸಿ ರಾತ್ರಿ ಮಲಗುವ ಮೊದಲು, ನೋಟು ಬುಕ್ಕೊಂದರಲ್ಲಿ ನೂರುಸಲ ‘ಶ್ರೀರಾಮ ಶ್ರೀರಾಮ’ ಎಂದು ಬರೆಯುತ್ತಿದ್ದ. ದಿನವೂ ಹೀಗೆ ಬರೆಯುವುದರಿಂದ ಆತ ಪಾಸಾಗುತ್ತಾನೆಂದು ಆತನ ತಾಯಿ ಹೇಳಿದ್ದರಂತೆ.

ಅವನ ತಂಗಿ, ನನ್ನ ಸಹಪಾಠಿ. ಆಕೆ ಅಣ್ಣನಿಗಿಂತ ಒಂದು ಕೈ ಮೇಲು. ಆಕೆ ನಿತ್ಯವೂ ಒಂದು ಸಾವಿರ ಸಲ ಶ್ರೀರಾಮ ಎಂದು ಬರೆಯುತ್ತಿದ್ದಳು. ಇದರಿಂದಾಗಿ ಒಳ್ಳೆಯ ವರ ದೊರಕುತ್ತಾನೆ ಎಂಬ ನಂಬಿಕೆಯಿಂದ.

ನನ್ನ ಸ್ನೇಹಿತ ಆ ಸಲವೂ ಪಾಸಾಗಲಿಲ್ಲ.

ಆತನ ತಂಗಿಗೆ ಈಗಲೂ ವರ ದೊರಕಿದಂತಿಲ್ಲ! ಆ ಮಾತು ಬೇರೆ.

ರಾಮಾಯಣದ ಕತೆ, ರಾಮಾಯಣದ ವ್ಯಕ್ತಿಗಳು ಜನರ ಮನಸ್ಸಿನಲ್ಲಿ ತುಂಬಾ ಪ್ರಭಾವ ಬೀರಿದ್ದಾರೆ. ಒಳ್ಳೆಯತನವನ್ನು ಜನರು ಹೆಸರಿಸುವಾಗ ‘ಶ್ರೀರಾಮನಂತವನು’ ಎನ್ನುತ್ತಾರೆ. ಆ ಒಂದು ಶಬ್ದ ಅವರ ಪಾಲಿಗೆ, ಒಳ್ಳೆಯತನದ ವಿವರಗಳನ್ನೆಲ್ಲ ಒಳಗೊಂಡಿರುತ್ತದೆ. ರಾಮ ಬದುಕಿದ ರೀತಿ ಮಾನವರೆಲ್ಲರಿಗೂ ಆದರ್ಶಪ್ರಾಯ, ಆತ ಪುರುಷೋತ್ತಮ ಎಂಬಂತೆಯೇ ಹರಿಕತೆ ದಾಸರು ಕೀರ್ತಿಸುತ್ತಾರೆ. ಎಳೆಯರಿಗಾಗಿ ಮುದ್ರಿತವಾಗುವ ರಾಮಾಯಣದ ಕತೆಗಳಲ್ಲೆಲ್ಲಾ ಈ ಬಗೆಯ ಏಕಮುಖ ಗುಣಗಾನವೇ ತುಂಬಿರುತ್ತದೆ.

ಹೆಚ್ಚಿನ ಸಲ ನಾವು ಓದುವ ಕೃತಿಗಳಲ್ಲೆಲ್ಲಾ ಈ ಬಗೆಯಲ್ಲಿ ಪರಿಷ್ಕೃತಗೊಂಡಿರುತ್ತವೆ. ಒಂದು ಮಾನವ ಬದುಕಿನ ಸಂಕೀರ್ಣತೆಗಳನ್ನು ಕಲಾತ್ಮಕವಾಗಿ ಚಿತ್ರಿಸುವ ಕಾವ್ಯವನ್ನು ಅಲ್ಲಲ್ಲಿ ತಿರುಚಿ, ಕತ್ತರಿಸಿ ತಮಗೆ ಬೇಕಾದಂತೆ ಚಿತ್ರಿಸಿ ಜನರ ಮುಂದಿಟ್ಟು, ಆ ಮೂಲಕ ಆ ಕಾವ್ಯದ ಪಾತ್ರಗಳನ್ನು ಅತಿಮಾನುಷಗೊಳಿಸಿ, ಆ ಪಾತ್ರಗಳು ಕೇವಲ ಗುಣ ವಿಶೇಷಣಗಳೇ ತುಂಬಿರುವ ದೈಕ ವ್ಯಕ್ತಿಗಳು ಎಂಬಂತೆ ಪ್ರತಿಬಿಂಬಿಸಲಾಗುತ್ತಿದೆ. ರಾಮಾಯಣದ ಬಗ್ಗೆ ಹೇಳಬೇಕೆಂದರೆ, ಆ ಕಾವ್ಯ ಹುಟ್ಟಿಕೊಂಡಾಗ ಅದೊಂದು ಕೇವಲ ಲಾವಣಿಯಾಗಿದ್ದಿರಬೇಕು. ಸಮುದಾಯವನ್ನು ತೀವ್ರವಾಗಿ ಕಲಕಿದ ಒಂದು ಕತೆಯನ್ನು ಅಥವಾ ಹಲವು ಕತೆಗಳ ಮಿಶ್ರಣವನ್ನು, ಆ ಸಮುದಾಯ ತಲೆ ತಲಾಂತರದವರೆಗೆ ನೆನಪಿಟ್ಟುಕೊಳ್ಳಲು ಸಾಧ್ಯವಾಗುವಂತೆ ಒಂದು ವಿಧಾನದಲ್ಲಿ ಕಟ್ಟಿಡುವ ಕೆಲಸವನ್ನು ನಮ್ಮಲ್ಲಿ ಈ ಲಾವಣಿಗಳು (ಹಾಡುಗಬ್ಬಗಳನ್ನು), ಪಾಶ್ಚಿಮಾತ್ಯರಲ್ಲಿ ಬ್ಯಾಲೆಡ್‌ಗಳು ನಿರ್ವಹಿಸಿವೆ.

ರಾಮಾಯಣ ಈಗ ಐತಿಹಾಸಿಕವಾಗಿ ಉಳಿದಿಲ್ಲ. ಅದೊಂದು ಪುರಾಣ, ಇತಿಹಾಸದಲ್ಲಿರ ಬೇಕಾದ ನಿರ್ದುಷ್ಟತೆ, ಕರಾರುವಾಕ್ಕುತನ ಅದರಲ್ಲಿ ಇಲ್ಲ. ಹಾಗೆಂದರೆ ರಾಮಾಯಣಕ್ಕೆ ಐತಿಹಾಸಿಕ ದಾಖಲೆಯಾಗಿ ಯಾವ ಪಾತ್ರವೂ ಇಲ್ಲವೆಂದಲ್ಲ. ನಮ್ಮ ಪರಂಪರೆಯಲ್ಲಿ ಇತಿಹಾಸ ಲಿಖಿತಗೊಳ್ಳುವ ಕಾಲಕ್ಕಿಂತಲೂ ಮೊದಲಿನ ಒಂದು ಕಾಲಘಟ್ಟವನ್ನು ಅರ್ಥಮಾಡಿಕೊಳ್ಳಲು ಅದು ಈಗಲೂ ಒಂದು ಸಮೃದ್ಧ ಆಕರ. ಆದರೆ ಅದನ್ನು ಆಕರವಾಗಿ ಪರಿಶೀಲಿಸಬೇಕೇ ಹೊರತು ರಾಮಾಯಣದ ಪಠ್ಯವನ್ನೇ ಅಧಿಕೃತ ಐತಿಹಾಸಕ ದಾಖಲೆಯೆಂಬಂತೆ ಪರಿಗಣಿಸಬಾರದು.

ನಮ್ಮ ಪೌರಾಣಿಕ ಮಹಾಕಾವ್ಯಗಳ ಬಗ್ಗೆ ವಿಚಾರವಾದಿಗಳು ಗೊಡ್ಡು ಪುರಾಣ ಎಂಬಂತಹ ಧೋರಣೆಯಿಂದ ತಿರಸ್ಕರಿಸುತ್ತಾರೆ. ಅಂತಹ ಪುರಾಣಗಳಲ್ಲಿ ಪ್ರಸ್ತುತವಾಗಬಲ್ಲ ಯಾವ ಅಂಶಗಳೂ ಅವರ ಪ್ರಕಾರ ಇಲ್ಲ. ಅದೊಂದು ಕವಿಯ ಕಲ್ಪನೆ, ಕಟ್ಟುಕತೆ, ಬೋಳೆ ರಸಾನಂದ, ಅರಾಮ ಕಾಲದ ಮೋಜು. ಅದರ ಉಲ್ಲೇಖ ಪರಿಶೀಲನೆ ಎಲ್ಲವೂ ವೃಥಾ ಕಾಲಹರಣ. ರಾಮಾಯಣ ಅಥವಾ ಮಹಾಭಾರತದಲ್ಲಿ ಏನಾದರೂ ಅರ್ಥಪೂರ್ಣವಾದ ದ್ದಿದೆ ಎಂದು ನಾವು ಹೇಳುವುದರಿಂದ ಜನ ಆ ಪುರಾಣಗಳನ್ನು ನಂಬುವ ರೀತಿಯನ್ನು ದೃಢೀಕರಿಸಿದಂತಾಗುತ್ತದೆ, ಇತ್ಯಾದಿ. ಇದು ಒಂದು ಬಗೆಯ ತಿರಸ್ಕಾರ.

ಪುರಾಣಗಳನ್ನು ನಂಬುವವರು ಅಥವಾ ಬೇರೆ ಯಾರನ್ನಾದರೂ ನಂಬುವಂತೆ ಮಾಡಲು ಸ್ವತಃ ತಾವು ಅದನ್ನು ನಂಬಿದ್ದೇವೆ ಎಂಬಂತೆ ನಟಿಸುವವರು ಈ ಪುರಾಣಗಳನ್ನು ಮತ್ತೊಂದು ಅತಿರೇಕಕ್ಕೆ ಒಯ್ಯುತ್ತಾರೆ. ಅದರಲ್ಲಿ ಬರೆದದ್ದೆಲ್ಲಾ ಅಕ್ಷರಸಹ ಸತ್ಯ. ನಮ್ಮ ಪೂರ್ವಕಾಲದ ಅದ್ಭುತ ರಮ್ಯಗಳೆಲ್ಲಾ ಋಷಿಮುನಿಗಳ ಕೃಪೆಯಿಂದ ದಾಖಲಾಗಿ ನಮ್ಮವರಿಗೆ ಬಂದಿವೆ. ಅವರಿಗೆ ದೈವಾಂಶಗಳಿದ್ದುದರಿಂದ, ಪುರಾಣಗಳು ವರ್ಣಿಸುವ ಮಹತ್ಕಾರ್ಯಗಳನ್ನು ಅತಿಮಾನುಷ ಘಟನೆಗಳನ್ನು ಸಾಧಿಸಲು ಸಾಧ್ಯವಾಯಿತು. ಅವರೆಲ್ಲಾ ಅವತಾರ ಪುರುಷರು. ಅವರ ತಪ್ಪು ಹುಡುಕುವುದಾಗಲೀ, ಆಯಾ ಕತೆ ಅಥವಾ ಘಟನೆಗಳನ್ನು ಜಿಜ್ಞಾಸೆಗೊಳಪಡಿಸುವುದಾಗಲೀ ‘ಅಪಚಾರ’. ಅವರನ್ನು ಕೀರ್ತಿಸುವುದು, ಏಕೋಭಾವದಿಂದ ನಂಬುವುದು ನಮ್ಮ ಮೋಕ್ಷಕ್ಕೆ ದಾರಿ. ದೇವರು ಭೂಲೋಕದಲ್ಲಿ ಅವತಾರವೆತ್ತಿ ಆಯಾ ಅವತಾರಗಳ ಮೂಲಕ ದುಷ್ಟಶಕ್ತಿಗಳಿಗೆ ಶಿಕ್ಷೆಯನ್ನು, ಶಿಷ್ಟ ಶಕ್ತಿಗಳಿಗೆ ರಕ್ಷಣೆಯನ್ನು ಒದಗಿಸಿದ್ದಾನೆ ಇತ್ಯಾದಿ. ಇಂತಹ ನಂಬಿಕೆಗಳನ್ನಿಟ್ಟುಕೊಳ್ಳುವ ಮೂಲಕ, ಇಂತಹ ನಂಬಿಕೆಗಳನ್ನು ಹರಡುವ ಮೂಲಕ, ಪುರಾಣಗಳಿಂದ ರಸಾನಂದದ ಹೊರತಾಗಿ ದೊರೆಯ ಬಹುದಾಗಿದ್ದ ಪ್ರಯೋಜನವನ್ನು ಮೂಲೆಗುಂಪು ಮಾಡಲಾಗಿದೆ. ಜೊತೆಗೆ ಜನರಿಗೆ ಹುಸಿ ಆದರ್ಶಗಳನ್ನು, ಬದುಕು ಪೂರ್ಣವಾಗಿ ಬಿಳಿ ಹಾಗೂ ಕಪ್ಪು ಎಂಬ ಎರಡು ಬಗೆಯ ವ್ಯತ್ಯಾಸಗಳಾಗಿ ವಿಂಗಡಿತವಾಗಿದೆ ಎಂಬಂತಹ ಅವೈಚಾರಿಕ ದೃಷ್ಟಿಕೋನವನ್ನೂ ಕಲಿಸಿಕೊಡಲಾಗಿದೆ.

ಇದರಿಂದ ಆಗುವ ಎರಡು ಬಗೆಯ ಅಪಾಯಗಳನ್ನು ಗಮನಿಸೋಣ. ಮೋಸದ ನಂಬಿಕೆಗಳಿಗೆ ಒಳಗಾಗುವ ಅಭ್ಯಾಸ ಬೆಳೆಸಿಕೊಂಡ ಜನತೆ ಸಮಾಜದ ವಾಸ್ತವಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸುವುದನ್ನು ಬಿಟ್ಟು ಬಿಡುತ್ತಾರೆ. ನಂಬಿಕೆ ಎಷ್ಟು ಪ್ರಾಚೀನವೋ ಅದು ಅಷ್ಟು ನಂಬಿಕೆಗೆ ಅರ್ಹ ಎಂಬಂತಹ ಧೋರಣೆ ಅಭ್ಯಾಸವಾಗಿ ಬಿಡುವುದರಿಂದ ಹೊಸದರ ಬಗ್ಗೆ ಸದಾ ಗುಮಾನಿ, ತಿರಸ್ಕಾರ ಹೊಂದಿ ಸಮಾಜದ ಚಲನಶೀಲತೆಗೆ ದೊಡ್ಡ ಮಾನಸಿಕ ಅಡತಡೆಯನ್ನು ನಿರ್ಮಿಸಿಕೊಳ್ಳುತ್ತಾರೆ. ಅವರಿಗೆ ಹೊಸ ಕಾಲಮಾನದಲ್ಲಿ ಹೊಸದೇನನ್ನಾದರೂ ಸಾಧಿಸಬೇಕಾದ ಅವಶ್ಯಕತೆ ಇದ್ದರೂ, ಹಳೆಯದರ ಆಧಾರದಲ್ಲಿ ಅದನ್ನು ಮಂಡಿಸಿ ಅವರನ್ನು ಪ್ರೇರೇಪಿಸಬೇಕಾಗುತ್ತದೆ. ಇದಕ್ಕೊಂದು ಸರಳ ಉದಾಹರಣೆಯನ್ನೂ ನಾವು ಕೊಡಬಹುದು. ಸತಿ ಪದ್ಧತಿಯನ್ನು ವಿರೋಧಿಸಬೇಕಾದ ಆಧುನಿಕ ಸಂದರ್ಭದಲ್ಲಿ ರಾಜಾರಾಮ್ ಮೋಹನ್‌ರಾಯ್, ಬಾಲ್ಯವಿವಾಹದಂತಹ ವಿವೇಚನಾರಹಿತ ಅಭ್ಯಾಸಗಳನ್ನು ವಿರೋಧಿಸಬೇಕಾದ ಸಂದರ್ಭದಲ್ಲಿ ದಯಾನಂದ ಸರಸ್ವತಿ, ಜನರಿಗೆ ಮನವರಿಕೆ ಮಾಡಲು ವೇದಶಾಸ್ತ್ರಗಳ ಉಲ್ಲೇಖಗಳನ್ನು ಮುಂದಿಟ್ಟುಕೊಂಡೆ ಹೋರಾಡಬೇಕಾಯಿತು.

ಬ್ರಿಟೀಷರ ವಿರುದ್ಧ ಭಾರತ ರಾಷ್ಟ್ರೀಯ ಚಳುವಳಿಯನ್ನು ಕಟ್ಟುವಾಗ ಬಾಲಗಂಗಾಧರ ತಿಲಕ್ ಹಾಗೂ ಮೋಹನ್‌ದಾಸ್ ಕರಮಚಂದಗಾಂಧಿ ಭಗವದ್ಗೀತೆಗಳ ಪುನರ್‌ವ್ಯಾಖ್ಯಾನವನ್ನು ಒಂದು ತಾತ್ವಿಕ ಸಾಧನವಾಗಿ ಬಳಸಿದರು. ಇವರು ಬೇರೆ ಸಾಧನಗಳನ್ನು ಬಳಸದೆ ಈ ಸಾಧನಗಳನ್ನೇ ಬಳಸದ್ದಕ್ಕೆ ಸ್ವತಃ ಆಯಾ ನಾಯಕರ ವರ್ಗಹಿತಾಸಕ್ತಿ ಕಾರಣವಾಗಿತ್ತು ಎಂಬುದನ್ನು ಮರೆಯದೆ, ಈ ಪ್ರಕರಣಗಳಲ್ಲಿ ನಾವು ಗಮನಿಸಬೇಕಾಗಿರುವ ಅಂಶವೇನೆಂದರೆ ತಮ್ಮ ನಿಲುವುಗಳನ್ನು ಜನತೆಯ ನಡುವೆ ತುಂಬಲು ಅವರು ಈ ಪೌರಾಣಿಕ ಗ್ರಂಥಗಳನ್ನು ಬಳಸಿದ್ದರಿಂದಲೇ ಅವರ ಮಾತಿಗೆ ಅಷ್ಟು ವ್ಯಾಪಕ ಮನ್ನಣೆ ದೊರೆಯಿತು. ಪ್ರಾಚೀನತೆಯ ಅವಲಂಬನೆ ಅಷ್ಟು ಆಳವಾದುದು. ಇಂತಹ ಪ್ರಾಚೀನತೆಯ ಅವಲಂಬನೆ ನಮ್ಮನ್ನು ಹಿಂದಕ್ಕೆ ಜಗ್ಗುವುದೇ ಹೆಚ್ಚು. ಈ ಮೋಹ ಅತಿಯಾದಾಗ ಇದೊಂದು ನಾಸ್ಟಾಲ್ಜಿಯಾ ಆಗಿ ಮನಸ್ಸಿನ ವಕ್ರತೆಗಳನ್ನು ಹೆಚ್ಚಿಸುತ್ತದೆ.

ಎರಡನೆಯ ಸಾಮಾನ್ಯ ಅಪಾಯ: ಇಬ್ಬಂದಿತನ. ಸಮಾಜದ ಜನರ ಮನಸ್ಸು ವಿಚಿತ್ರ ಬಗೆಯ ಆಷಾಡಭೂತಿತನದಿಂದ ತುಂಬಿಕೊಳ್ಳುವುದು. ಇದು ಯಾಕೆಂದರೆ, ಪುರಾಣಗಳಲ್ಲಿ ಪ್ರತಿಪಾದಿಸಲ್ಪಟ್ಟಿವೆ ಎಂದು ಜನರನ್ನು ನಂಬಿಸಲಾಗಿರುವ ಮೌಲ್ಯಗಳು ಕೆಲವು ವಾಸ್ತವದ ನೆಲೆಗಟ್ಟನ್ನು ಹೊಂದಿದವುಗಳಲ್ಲ. ಕವಿ ಕಲ್ಪನೆಯ ಅಂತರಿಕ್ಷದಲ್ಲಿ ಅವುಗಳನ್ನು ಚಿತ್ರಿಸಲಾಗಿದೆ. ಅವುಗಳನ್ನು ಯಥಾವತ್ ಆದರ್ಶವೆಂದು ಸ್ವೀಕರಿಸಿದ ಜನತೆ ಅವುಗಳನ್ನು ಯಥಾವತ್ ಜೀವನದಲ್ಲಿ ಅನುಸರಿಸಲಿಕ್ಕಾಗದೆ ಮಾನಸಿಕವಾಗಿ ನರಳುತ್ತಾರೆ. ಆದರೂ ಆ ಮೌಲ್ಯಗಳು ಶ್ರೇಷ್ಠವೆಂದು ಪ್ರತಿಪಾದಿಸಿಬಿಟ್ಟಿರುವುದರಿಂದ ವೈಯಕ್ತಿಕ ಜೀವನದಲ್ಲಿ ಹಾಗಿರಲಿಕ್ಕಾಗದಿದ್ದರೂ, ತಾವು ಅವುಗಳಿಗನುಸಾರವಾಗಿಯೇ ಇದ್ದೇವೆಂದು ನಟಿಸಲು ಸಾರ್ವಜನಿಕವಾಗಿ ಪ್ರಯತ್ನಿಸುವುದು. ಒಳ ಜೀವನದ ಹಾಗೂ ಹೊರ ತೋರಿಕೆಯ ನಡುವಿನ ಅಂತರ ಅಂತಹ ವ್ಯಕ್ತಿಗಳನ್ನು ಅಂತಿಮವಾಗಿ ವಂಚಕರನ್ನಾಗಿ ತಯಾರಿಸುತ್ತದೆ. ಅಥವಾ ಭೀಕರ ಪಾಪಪ್ರಜ್ಞೆಯ ಕೊರಗರನ್ನಾಗಿಸುತ್ತದೆ. ಇದು ಸಮಾಜವೊಂದರಲ್ಲಿ ವ್ಯಕ್ತಿವ್ಯಕ್ತಿಗಳ ನಡುವೆ ಸಹಜ ಸಂಬಂಧಗಳಿಗೆ ಅಡ್ಡಗೋಡೆಯಾಗಿ, ಸಾರ್ವಜನಿಕ ವಲಯದ ಸ್ನೇಹ, ಖಾಸಗಿ ವಲಯದ ಬಳಗ ಎಂಬಂತಹ ವಿಂಗಡಣೆಗಳನ್ನೂ, ಆರೋಗ್ಯಪೂರ್ಣವಾಗಿ ಇತರರ ದೌರ್ಬಲ್ಯಗಳನ್ನು ಗುರುತಿಸಿ ಅವುಗಳನ್ನು ತಿದ್ದುವ ಸಾಮಾಜಿಕ ಸಾಧ್ಯತೆಗಳ ನಿರಾಕರಣೆಯನ್ನೂ ಸೃಷ್ಟಿಸುತ್ತದೆ.

ಇವರೆಡು ಒಂದು ಬಗೆಯ ಅಪಾಯಗಳಾದರೆ ಮತ್ತೊಂದು ಬಗೆಯ ಅಪಾಯವನ್ನೂ ಈ ಪುರಾಣಗಳ ಆದರ್ಶ ಬೆಳೆಸುತ್ತದೆ. ತಾವು ಅರಾಧಿಸುವ ಪಾತ್ರ ಅಥವಾ ಕತೆಯ ಪೂರ್ಣ ಒಳಹೊರಗು ತಿಳಿಯುವ ಮೊದಲೇ ಅವುಗಳನ್ನು ‘ಸಾರ್ವಜನಿಕ ಆದರ್ಶದ ಮಾನದಂಡ’ಗಳಾಗಿ ಸ್ವೀಕರಿಸಿಬಿಡುವುದರಿಂದ ನಾಳೆ ಆ ಸಾರ್ವಜನಿಕ ಆದರ್ಶದ ಮಾನದಂಡ ಸ್ವತಃ ತನ್ನ ಸಹಜ ಹಿತಾಸಕ್ತಿಗೇ ಮಾರಕವಾಗಿದ್ದರೂ, ಆ ಮಾನದಂಡ ಪ್ರತಿಪಾದಿಸುವ ಮೌಲ್ಯವನ್ನೇ ಅಂತಿಮವೆಂದು ತಿಳಿದು, ತನಗೆ ಸಹಜವಾಗಿ ತೋಚುತ್ತಿರುವ ಹಿತಾಸಕ್ತಿಗಳು ‘ಏನೋ ತಪ್ಪು ಪ್ರವೃತ್ತಿಯಿಂದ’ ತನಗೆ ಕಾಡುತ್ತಿವೆ ಎಂಬ ಧೋರಣೆಗೆ ಪಕ್ಕಾಗುವುದು. “ಸಾರ್ವಜನಿಕ ಆದರ್ಶದ ಮಾನದಂಡ”ವೊಂದನ್ನು ಒಪ್ಪಿಕೊಂಡ ಮೇಲೆ ಪ್ರತಿ ಮೌಲ್ಯ ಹಾಗೂ ಘಟನೆಗಳನ್ನು ಸ್ವತಂತ್ರವಾಗಿ ಚಿಂತಿಸಿ ಆ ಬಗ್ಗೆ ನಿರ್ಧಾರಕ್ಕೆ ಬರುವ ಅಭ್ಯಾಸ ರೂಪುಗೊಳ್ಳುವುದಿಲ್ಲ.

ಸಾಮಾನ್ಯವಾಗಿ ಪುರಾಣಗಳಲ್ಲಿ ಚಿತ್ರಿತವಾಗಿರುವ ಮೌಲ್ಯಗಳು ಆ ಪುರಾಣಗಳು ರೂಪು ಗೊಂಡ ಕಾಲಘಟ್ಟಕ್ಕೆ ಸಂಬಂಧಿಸಿರುತ್ತವೆ. ಕಾಲಾತೀತವಾಗಿ ಯಾವುದೂ ಇರಲು ಸಾಧ್ಯವಿಲ್ಲ. ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿಯೇ ಅವು ಯಾವುದಾದರೂ ಒಂದು ಜನವರ್ಗದ ಹಿತಾಸಕ್ತಿಗಾಗಿ ಮಾತ್ರ ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ. ಮೌಲ್ಯವೆಂಬುದೇ ‘ಮಾನವ ಸಮಾಜ’ದ ಸೃಷ್ಟಿಯಾದುದರಿಂದ ‘ಸಮಾಜ’ವೆಂಬುದು ಇದ್ದ ಮೇಲೆ ಅದು ಪರಸ್ಪರ ವೈರುಧ್ಯಗಳ ನೇಯ್ಗೆಯಾದ್ದರಿಂದ ಸಾರ್ವಜನಾಧಾರಣೀಯ ಮೌಲ್ಯಗಳನ್ನು ಪ್ರತಿಪಾದಿಸಿರುವುದು ಸಾಧ್ಯವಿಲ್ಲ. ಹೀಗಿರುವಾಗ ಆ ನಿರ್ದಿಷ್ಟ ಕಾಲಘಟ್ಟ ದಾಟಿದ ಮೇಲೂ, ಆ ನಿರ್ದಿಷ್ಟ ಕಾಲ ಘಟ್ಟದಲ್ಲಿಯೇ ಆ ಮೌಲ್ಯಗಳು ಯಾರ ಪರವಾಗಿದ್ದವು, ತಾನು ಅದರಲ್ಲಿ ಲಾಭ ಪಡೆದವರ ವರ್ಗದವನೋ ಅಥವಾ ಲಾಭ ವಂಚಿತನ ವರ್ಗದವನೋ ಇತ್ಯಾದಿಗಳನ್ನು ಅರಿತುಕೊಳ್ಳದೆ ಒಂದು ಮೌಲ್ಯದ ಆದರ್ಶ ಸ್ವೀಕಾರ ಮಾಡುವುದರಿಂದ, ಅಂತಹ ಜನ ತಮ್ಮ ಕೈಗಳನ್ನು ತಾವೇ ಕಟ್ಟಿಹಾಕಿಕೊಳ್ಳುವ ದುರಂತಕ್ಕೆ ಗುರಿಯಾಗುತ್ತಾರೆ.

ಇಂತಹ ಅಪಾಯಗಳನ್ನು ನಿವಾರಿಸಿಕೊಳ್ಳಬೇಕೆಂದರೆ ಪ್ರತಿ ವ್ಯಕ್ತಿಯೂ ಚಿಂತನಶೀಲ ನಾಗಬೇಕು. ಇದು ಏನು? ಇದು ಯಾಕೆ? ಇದು ಯಾಕೆ ಹೀಗೆ? ಎಂಬಂತಹ ಪ್ರಶ್ನೆಗಳಿಂದ ನಾವು ನಂಬುವ ಪ್ರತಿಯೊಂದನ್ನೂ ಒರೆಗಲ್ಲಿಗೆ ಉಜ್ಜುವಂತಾಗಬೇಕು. ಈ ಪ್ರವೃತ್ತಿಯ ಬೆಳವಣಿಗೆ ನಮಗೆ ತುಂಬಾ ಅವಶ್ಯಕ.