ಸಾಮಾನ್ಯವಾಗಿ ಟಿ.ವಿ. ರೇಡಿಯೋಗಳಲ್ಲಿ ಹಾಗೂ ರಾಮಾಯಣದ ಇತರೆ ಜನಪ್ರಿಯ ಆವೃತ್ತಿಗಳಲ್ಲಿ ಮೂಲ ರಾಮಾಯಣದ ಎಷ್ಟೋ ಅಂಶಗಳನ್ನು ಮರೆ ಮಾಚಲಾಗಿರುತ್ತದೆ. ಆದಿ ಕವಿ ವಾಲ್ಮೀಕಿಯೇ ದಾಖಲಿಸುವ ಘಟನೆಗಳನ್ನು, ಅದರಲ್ಲಿ ನಿರ್ದಿಷ್ಟ ಪಾತ್ರವೊಂದು ವರ್ತಿಸುವ ಮಾತನಾಡುವ ವಿಧಾನಗಳನ್ನು ‘ಸೆನ್ಸಾರ್’ಮಾಡಲಾಗಿರುತ್ತದೆ. ಕೆಲವು ಅಂಶಗಳನ್ನು ‘ಸೆನ್ಸಾರ್’ ಮಾಡಿರದಿದ್ದರೂ, ಓದುಗರ ಗಮನ ಬೇರೆ ಯಾವುದೋ ಅಂಶಗಳ ಮೇಲೆ ಬೀಳುವಂತೆ ಬಿಂಬಿಸಲಾಗಿರುತ್ತದೆ. ಹೀಗೆ ಬಿಂಬಿಸುವ ಆಯ್ಕೆ ಪ್ರತಿ ಕೃತಿಕಾರ, ಕಲಾಕಾರನಿಗಿದೆ ಎಂಬ ಹಕ್ಕನ್ನು ಪ್ರಶ್ನಿಸುತ್ತಿಲ್ಲ. ಆದರೆ ಆ ಆಯ್ಕೆ ಆಯಾ ಕೃತಿಕಾರನ ಪೂರ್ವಾ ಗ್ರಹಗಳನ್ನು, ಪೂರ್ವ ನಿರ್ಣಯಗಳನ್ನು ಆಧರಿಸಿರುತ್ತದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳ ಬೇಕಾಗಿರುತ್ತದೆ. ಯಾವುದರ ಮೇಲೆ ಬೆಳಕು ಚೆಲ್ಲಬೇಕು, ಯಾವುದರ ಮೇಲೆ ಚೆಲ್ಲಬಾರದು ಎಂಬ ನಿರ್ಣಯದಲ್ಲಿಯೇ ಇತಿಹಾಸವನ್ನು ಪ್ರತಿ ಇತಿಹಾಸಕಾರ ಜೋಡಿಸಿಕೊಳತ್ತಾನೆ ಎಂದು ಇ.ಎಚ್.ಕಾರ್ ಎಂಬ ಪ್ರಸಿದ್ಧ ಇತಿಹಾಸ ತಜ್ಞ ಹೇಳುತ್ತಾನೆ.

ರಾಮಾಯಣವನ್ನು ಕಾಲದಿಂದ ಕಾಲಕ್ಕೆ ಜೋಡಿಸುತ್ತಾ ಬಂದ ಪ್ರತಿಯೊಬ್ಬರೂ ಈ ಬಗೆಯಲ್ಲಿ ತಮ್ಮ ಮೂಗಿನ ನೇರಕ್ಕೆ ಬರೆದವರೇ. ಅತ್ಯಂತ ಜನಪ್ರಿಯವಾಗಿರುವ ರಾಮಾಯಣ ಕತಾ ಹಂದರವನ್ನು ಬದಲಾಯಿಸುವುದು ಕಷ್ಟ. ಆದರೆ ಅದರಲ್ಲಿ ಬರುವ ವಿವರಗಳನ್ನು ಹೀಗೆ ಇಚ್ಛಿಸಿದ ರೀತಿಯಲ್ಲಿ ತುಂಬುವುದು ಸಾಧ್ಯ. ಈ ವಿವರಗಳು ಹೆಚ್ಚಿನ ಸಲ ಮೂಲ ಕತಾ ಹಂದರವನ್ನು ಸಮರ್ಥಿಸುವಂತೆ ಅಥವಾ ಅದು ಹೆಚ್ಚು ಅಪ್ಯಾಯಮಾನವಾಗಿರುವಂತೆ ಮಾಡುವ ಪ್ರಯತ್ನದಲ್ಲಿರುತ್ತವೆ. ಅದೇ ಸಮಯದಲ್ಲಿ ಅವು ಮತ್ತೆ ಕೆಲವು ವಿವರಗಳನ್ನು ಮರೆಸುವ ಕೆಲಸವನ್ನೂ ಮಾಡುತ್ತವೆ.

ರಾಮಾಯಣದ ಮೂಲ ಎನ್ನಬಹುದಾದ ವಾಲ್ಮೀಕಿ ರಾಮಾಯಣದ ಕೆಲವು ಘಟನೆಗಳನ್ನು ಈಗ ಮತ್ತೊಂದು ನಿಟ್ಟಿನಿಂದ ಪರಿಶೀಲಿಸಿದರೆ ಎನು ಅರ್ಥಹುಟ್ಟುತ್ತದೋ ನೋಡಿ:

ಬೇಟೆಗಾಗಿ ದಶರಥ ಬಂದವನು, ಶಬ್ದದ ಆಧಾರದಲ್ಲಿ ನೀರು ಕುಡಿಯುತ್ತಿರುವ ಆನೆ ಎಂದು ಭಾವಿಸಿ, ಬಾಣ ಬಿಟ್ಟು ಶ್ರವಣ ಎಂಬ ಮುನಿ ಕುಮಾರನನ್ನು ಕೊಲ್ಲುತ್ತಾನೆ. ಈಘಟನೆ ತುಂಬಾ ಪ್ರಸಿದ್ಧವಾದದ್ದು. ಆ ಶ್ರವಣ ಕುಮಾರನ ತಂದೆ ತಾಯಿಗಳ ಶಾಪದಿಂದಲೇ ಮುಂದೆ ದಶರಥ ಕೂಡ ಪುತ್ರ ವಿಯೋಗಕ್ಕೆ ಗುರಿಯಾಗಿ ಮರಣಿಸುತ್ತಾನೆ ಎಂಬ ಕೊಂಡಿಯನ್ನು ಜೋಡಿಸಲಾಗಿದೆ. ಅದಿರಲಿ-ಸಾಯುತ್ತಿರುವ ಶ್ರವಣಕುಮಾರ, ಅನ್ಯಾಯವಾಗಿ ಹತ್ಯೆ ಮಾಡಿದೆನಲ್ಲ ಎಂದು ಪಾಪ ಭಯದಿಂದ ದುಃಖಿಸುತ್ತಿರುವ ದಶರಥನಿಗೆ ಹೇಳುವ ಮಾತುಗಳು; ರಾಜಾ ದುಖಿಸಬೇಡ, ನಾನು ಬ್ರಾಹ್ಮಣನಲ್ಲವಾದುದರಿಂದ (ಶ್ರವಣನ ತಂದೆ ವೈಶ್ಯ, ತಾಯಿ ಶೂದ್ರಳು) ನಿನಗೆ ಬ್ರಹ್ಮಹತ್ಯಾ ದೋಷ ತಗುಲುವುದಿಲ್ಲ. ಇಲ್ಲೇ ಹತ್ತಿರದಲ್ಲಿ ನನ್ನ ಕುರುಡು ತಂದೆ ತಾಯಿ ಇದ್ದಾರೆ. ಅವರಿಗೆ ನೀರು ಕೊಟ್ಟು ಸುದ್ದಿ ತಿಳಿಸು

ಈ ಸಂಭಾಷಣೆಯ ಭಾಗವನ್ನು ಜನಪ್ರಿಯ ಆವೃತ್ತಿಗಳು ಹೊರತಂದಿಲ್ಲದಿರಬಹುದು. ಆದರೆ ಮೂಲ ರಾಮಾಯಣದಲ್ಲಿ ಅದನ್ನು ಯಾಕೆ ಜೋಡಿಸಲಾಗಿದೆ? ಬ್ರಾಹ್ಮಣರನ್ನು ಕೊಂದರೆ ಮಾತ್ರ ದೋಷ. ರಾಜನಾದವನು ಶೂದ್ರರನ್ನು ಕೋಳಿ, ಕುರಿ, ಜಿಂಕೆ, ಮೊಲಗಳನ್ನು ಕೊಂದಂತೆ ಕೊಲ್ಲಬಹುದು. ರಾಜನಿಗೆ ಬ್ರಾಹ್ಮಣರನ್ನು ಬಿಟ್ಟರೆ ಬೇರೆಯವರನ್ನು ಕೊಲ್ಲುವುದಕ್ಕೆ ಅವಕಾಶವಿದೆ ಎಂಬ ನೀತಿಯನ್ನು ರಾಮಾಯಣದ ನಂತರ ಬಂದ ಸಮಾಜದಲ್ಲಿ ನೆಲೆಗೊಳಿಸುವುದಕ್ಕೇ ಈ ಪ್ರಸಂಗವನ್ನು ಬಳಸಿಕೊಳ್ಳಲಾಗಿರುತ್ತದೆ. ವೈಚಾರಿಕತೆ, ಸ್ವಲ್ಪ ಮಟ್ಟಿನ ವ್ಯಕ್ತಿವಾದ ಬೆಳೆದ ನಂತರವೂ ಈ ಸಂಭಾಷಣೆಯನ್ನು ತೋರಗೊಟ್ಟರೆ ವಿರುದ್ಧ ಪರಿಣಾಮಗಳು ಬರಬಹುದೆಂಬ ಎಚ್ಚರಿಕೆಯಿಂದ ಅದನ್ನು ನಂತರ ಮುಚ್ಚಿಡಲಾಗಿದೆ.

ಕೃತಿಕಾರ ಇಡೀ ಪ್ರಸಂಗಕ್ಕೆ ಯಾವುದೇ ಬಣ್ಣ ಬಳಿದು ಬಳಿಸಿಕೊಂಡಿರಬಹುದು. ಆದರೆ ನಾವು ಇತಿಹಾಸದ ಆಧಾರದಲ್ಲಿ ಈ ಪ್ರಸಂಗದ ಬಗ್ಗೆ ಪುನರ್‌ಯೋಚಿಸಿದರೆ ಶ್ರವಣಕುಮಾರನ ಹತ್ಯೆ ಆಕಸ್ಮಾತ್ ಆದುದಲ್ಲಿ ಎಂಬುದಕ್ಕೆ ಆಧಾರಗಳು ಹೊಳೆಯುತ್ತವೆ. ರಾಮಾಯಣದ ಕಾಲಘಟ್ಟ ವೈಚಾರಿಕ ಹಾಗೂ ಸಾಮಾಜಿಕ ಸಂಘರ್ಷಗಳು ತೀವ್ರವಾಗಿದ್ದ ಕಾಲ. ರಾಮಾಯಣ ಪ್ರತಿಪಾದಿಸುವ ಮೌಲ್ಯಗಳನ್ನು ಅದರ ಅಕ್ಕಪಕ್ಕದ ಎಲ್ಲಾ ಸಮುದಾಯಗಳು ಇನ್ನೂ ಮಾನ್ಯಮಾಡಿರಲಿಲ್ಲ. ಅದೇ ಸಮುದಾಯದೊಳಗಿನವರೇ ತಾರ್ಕಿಕವಾಗಿ ಇದನ್ನು ವಿರೋಧಿಸುವವರಿದ್ದರು.

ಅಂತಹವರು ರೂಪುಗೊಳ್ಳುತ್ತಿರುವ ವ್ಯವಸ್ಥೆಗೆ ದೊಡ್ಡ ಸವಾಲೊಡ್ಡುತ್ತಿದ್ದರು. ಅವರನ್ನು ನಿಗ್ರಹಿಸದೆ ಬೇರೆ ದಾರಿಯೇ ಇರಲಿಲ್ಲ. ಯಜ್ಞ ಯಾಗಾದಿಗಳನ್ನು ವಿರೋಧಿಸುವ ರಾಕ್ಷಸರನ್ನು ಕೊಲ್ಲಲು ರಾಮನನ್ನು ಕರೆದೊಯ್ಯುವ ವಿಶ್ವಾಮಿತ್ರ, ರಾಮ ಪಟ್ಟಾಭಿಷೇಕದ ನಂತರ ಅಧರ್ಮ ಆಚರಿಸುತ್ತಿದ್ದಾನೆಂದು ಶಂಭೂಕನನ್ನು ಕೊಲ್ಲಲು ರಾಮನನ್ನು ಕೇಳಿಕೊಳ್ಳುವ ಪುರೋಹಿತರು, ರಾಜನಿಂದ ಇಂತಹ ಕರ್ತವ್ಯವನ್ನು ನಿರೀಕ್ಷಿಸುತ್ತಿದ್ದರು ಎಂಬುದು ವಾಸ್ತವ.

ಮಹಾಭಾರತದಲ್ಲೂ ಇದಕ್ಕೆ ನಿದರ್ಶನಗಳಿವೆ. ಕ್ಷತ್ರಿಯರಿಗೆ ಮಾತ್ರ ಬಿಲ್ವಿದ್ಯೆ ಮೀಸಲು ಎಂಬ ಹೊಸ ವರ್ಣಾಶ್ರಮ ನೀತಿಗೆ ವಿರೋಧವಾಗಿರುವ ಏಕಲವ್ಯನ ಹೆಬ್ಬೆರಳು ತುಂಡರಿಸಿದ ಕುರುಕುಲದವರು, ಧರ್ಮರಾಯನ ಪಟ್ಟಾಭಿಷೇಕದ ಪ್ರಸ್ತುತತೆಯನ್ನು ಪ್ರಶ್ನಿಸಿದ ಚಾರ್ವಾಕನೊಬ್ಬನನ್ನು ಜೀವಂತ ದಹಿಸಿದ ಪಾಂಡವರು ಈ ಪ್ರಸಂಗಗಳಲ್ಲೆಲ್ಲಾ ರಾಜ್ಯದ ಪಟ್ಟ ಹಿಡಿದವರು ವರ್ಣಾಶ್ರಮ ಧರ್ಮ ಎಂಬ ಹೊಸ ಸಾಮಾಜಿಕ ಸಂವಿಧಾನವನ್ನು ಎತ್ತಿ ಹಿಡಿಯಲು ನಡೆಸಿದ ರಕ್ತಪಾತ ನಿರೂಪಿಸಲ್ಪಟ್ಟಿದೆ.

ವರ್ಣಾಶ್ರಮ ಧರ್ಮ ಪಾಲನೆಯೇ ರಾಜನ ರಾಜ್ಯಭಾರದ ಯಶಸ್ಸನ್ನು ಅಳೆಯುವುದಕ್ಕೆ ದೊಡ್ಡ ಮಾನದಂಡವಾಗಿತ್ತು ಎಂಬುದನ್ನು ಹಲವಾರು ಪ್ರಾಚೀನ ಗ್ರಂಥಗಳು ಹೇಳುತ್ತಿವೆ. ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ದಲ್ಲಿ, ದುಶ್ಯಂತನ ರಾಜ್ಯಭಾರ ಎಷ್ಟು ಸುಗಮವಾಗಿತ್ತು ಎಂಬುದಕ್ಕೆ ಕವಿ ಒಂದು ಹೋಲಿಕೆ ನೀಡುತ್ತಾನೆ. ಅದೇ ಜಾಡಿನಲ್ಲಿ ನಡೆದೂ ನಡೆದೂ ಅಭ್ಯಾಸವಾದ ಎತ್ತುಗಳು, ಹೇಗೆ ಗಾಡಿ ಹೊಡೆಯುವವನು ನಿದ್ರಿಸಿದರೂ, ಸರಿಯಾದ ಸ್ಥಳಕ್ಕೆ ಹೋಗಿ ಸೇರುತ್ತವೋ ಹಾಗೆ, ವರ್ಣಾಶ್ರಮದ ಜಾಡಿನಲ್ಲಿ ನಡೆದು ಅಭ್ಯಾಸವಾದ ರಾಜ್ಯರಥ ಚಾಚೂತಪ್ಪದೆ ಸಾಗುತ್ತಾ, ರಾಜ್ಯಭಾರ ಸಮರ್ಥವಾಗಿತ್ತು.

ಈಗ ಶ್ರವಣನ ಪ್ರಸಂಗಕ್ಕೆ ಮರಳೋಣ. ಭ್ರಮೆಯಿಂದ ಆನೆಯೆಂದು ಭಾವಿಸಿ ಬಾಣಬಿಟ್ಟು ಶ್ರವಣನನ್ನು ಕೊಂದ ಎಂಬುದು ರಂಜನೀಯವಾಗಿರುವುದೇನೋ ಹೌದು, ಆದರೆ ಸಮರ್ಥನೀಯವಾಗಿಲ್ಲ. ತಪ್ಪಿನಿಂದ ಆದ ಹತ್ಯೆಗೆ ತಂದೆ ತಾಯಿ ರಾಜನಿಗೆ ಶಾಪಕೊಡುವಷ್ಟು ವ್ಯಗ್ರರಾಗುವುದಿಲ್ಲ. ಅಥವಾ ಶಾಪಕೊಟ್ಟರೂ ಪರಿಸ್ಥಿತಿ ತಿಳಿದ ನಂತರ ಶಾಪವನ್ನು ಉಪಸಂಹಾರ ಮಾಡುತ್ತಾರೆ. ಈ ಪ್ರಸಂಗದಲ್ಲಿ ಇದು ಇಲ್ಲ. ದೂರ್ವಾಸ, ಗೌತಮ ಮುಂತಾದವರೆಲ್ಲಾ ಹಲವಾರು ಪ್ರಸಂಗಗಳಲ್ಲಿ ಶಾಪಕೊಟ್ಟು ನಂತರ, ಶಾಪ ಹೊಂದಿದವರು ಉದ್ದೇಶಪೂರ್ವಕವಾಗಿ ತಪ್ಪು ಮಾಡಿದವರಲ್ಲ ಎಂದು ತಿಳಿದ ಮೇಲೆ ಶಾಪಕ್ಕೊಂದು ಪರಿಹಾರ ಸೂಚಿಸಿದವರೇ. ಆದರೆ ಇಲ್ಲಿ ಹಾಗಿಲ್ಲ. ಜೊತೆಗೆ ಕುರುಡು ತಂದೆ ತಾಯಿಗಳು, ತೀರ್ಥಕ್ಷೇತ್ರ ನೋಡುವ ಬಯಕೆ ಹೊಂದಿದವರಾಗಿದ್ದುದರಿಂದ, ಅದನ್ನು ಬೇರೆ ರೀತಿಯಲ್ಲಿ ಪೂರೈಸುವ ಸಾಧ್ಯತೆ, ಮಗನ ಮರಣದ ನಂತರ ಅವರ ಪೋಷಣೆಗೆ ಬೇರೆ ವ್ಯವಸ್ಥೆ ಮಾಡುವ ಸಾಧ್ಯತೆ ದಶರಥ ಮಹಾರಾಜನಿಗೆ ಇದ್ದೇ ಇತ್ತು. ಆದರೆ ಶ್ರವಣನ ಮರಣದ ಸುದ್ದಿ ಕೇಳಿ ವೃದ್ಧ ತಾಯಿ ತಂದೆ ಇಬ್ಬರೂ ಸತ್ತುಹೋದರು. ಮರಣದ ವಾರ್ತೆ ಕೇಳಿದೊಡನೆ ಇಬ್ಬರೂ ಸತ್ತು ಹೋಗುವುದು ಕೂಡ ಅಸಹಜವಾಗಿದೆ. ವಾಸ್ತವವಾಗಿ ಅವರಿಬ್ಬರೂ ಸತ್ತಿದ್ದರಿಂದ, ಅವರ ಪೋಷಣೆಗೆ ಬೇರೆ ವ್ಯವಸ್ಥೆ ಮಾಡಲಾಯಿತು ಎಂಬ ಹಾಗೆ ಪ್ರಸಂಗವನ್ನು ಕವಿ ತಿರುಚಲಾಗಿಲ್ಲ. ಆದರೆ ಅವರಿಬ್ಬರೂ ಕೊಲ್ಲಲ್ಪಟ್ಟರು ಎಂಬ ವಿವರವನ್ನು ಬದಲಾಯಿಸಿ ಅವರು ಸತ್ತ ಅಂಶವನ್ನು ಮಾತ್ರ ಉಳಿಸಲಾಗಿದೆ. ದಶರಥ ತನ್ನ ರಾಜ್ಯಭಾರದ ಮೇಲೆ ಬಹುಶಃ ವೈಚಾರಿಕ ದಾಳಿ ನಡೆಸಿದ್ದ ಅನ್ಯ ಪಂಥೀಯ ಶ್ರವಣ ಹಾಗೂ ಆತನ ಕುಟುಂಬದವರ ಮೇಲೆ ದಾಳಿ ನಡೆಸಿ ಕೊಂದಿದ್ದಾನೆ ಎಂಬುದೇ ಮರೆಮಾಚಲ್ಪಟ್ಟ ಅಂಶವಾಗಿರಬೇಕು. ಯಾಕೆಂದರೆ ಪ್ರಾಚೀನ ಕಾಲದಲ್ಲಿ, ಆ ಗೋಂಡಾರಣ್ಯದಲ್ಲಿ ಮಗನೊಬ್ಬನೇ ಕುರುಡು ತಂದೆ ತಾಯಿಗಳನ್ನು ಕರೆದುಕೊಂಡು ತೀರ್ಥಯಾತ್ರೆಗಾಗಿ ಪ್ರಯಾಣಿಸುತ್ತಿದ್ದ ಎಂಬ ವಿವರಣೆಯೇ ಇತಿಹಾಸಕ್ಕೆ ಹೊಂದದಿರು ವಂತದ್ದು. ದೀರ್ಘ ಪ್ರಯಾಣದ ದಾರಿಗಳೆಲ್ಲವನ್ನು, ಅದರಲ್ಲೂ ತೀರ್ಥಯಾತ್ರೆಯಂತಹ ಪ್ರಯಾಣಗಳನ್ನು ಜನ ಗುಂಪು ಗುಂಪಾಗಿಯೇ ಮಾಡುತ್ತಿದ್ದರೂ ತೀರ್ಥಯಾತ್ರೆಯ ಕಾಲಮಾನಗಳಲ್ಲಿ ಜನ ತಂಡ ತಂಡಗಳಾಗಿ ತೆರಳುವಾಗ ಅಂತಹ ತಂಡವೊಂದರ ಜೊತೆ ಇವರು ಪ್ರಯಾಣಿಸದೆ ಏಕಾಂಗಿಯಾಗಿ ಕಾಡಲ್ಲಿ, ಅದೂ ಬೇಟೆಯಾಡಲು ಆನೆ ಹುಲಿಗಳು ದೊರೆಯುವಂತಹ ಕಾಡಿನಲ್ಲಿ, ಇವರು ಇದ್ದರೆಂದರೆ ರಾಜನ ದಾಳಿಯಿಂದ ತಪ್ಪಿಸಿಕೊಳ್ಳಲು ತಲೆ ಮರೆಸಿಕೊಂಡು ಹೋಗುತ್ತಿದ್ದವರಿದ್ದಿರಬೇಕು ಎಂಬ ತರ್ಕ ಹುಟ್ಟುತ್ತದೆ. ಆದರೆ ಕೃತಿಕಾರ ಒಂದು ವಾಸ್ತವ ಪ್ರಸಂಗವನ್ನು ತನಗೆ ಬೇಕಾದ ನೀತಿ ಹೇಳಲು ಬಳಸಿಕೊಂಡ ತನ್ನ ಕವಿ ಸಾಮರ್ಥ್ಯದೊಂದಿಗೆ.

ಮೂಲ ಕತೆಯ ಅಂಶಗಳನ್ನು ಓದುವುದು ರಾಮಾಯಣದಲ್ಲಿರಲಿ, ಅಥವಾ ಬೇರೆ ಯಾವುದೇ ಪುರಾಣದಲ್ಲಿರಲಿ ಆಸಕ್ತಿಕರವಾಗಿಯೇ ಇರುತ್ತದೆ. ಆದರೆ ಆ ಅಂಶಗಳನ್ನು ಕೃತಿಕಾರ ಯಾವ ಸಂದೇಶ ನೀಡಲು ಬಳಸುತ್ತಾನೆ ಎಂಬುದರ ಆಧಾರದಲ್ಲಿ ಆ ಕತೆಗೆ ನಮ್ಮ ಬೆಂಬಲ ಅಥವಾ ತಿರಸ್ಕಾರ ರೂಪುಗೊಳ್ಳುತ್ತದೆ.

ರಾಮ ವನವಾಸಕ್ಕೆ ಹೋದ ನಂತರ ಅಯೋಧ್ಯೆಯನ್ನು ತಲುಪಿದ ಭರತ, ದುಃಖತಪ್ತಳಾಗಿರುವ ಕೌಸಲ್ಯೆಯ ಬಳಿ ಬಂದು ತನ್ನ ನಿರ್ದೋಷಿತ್ವವನ್ನು ಹೇಳಿಕೊಳ್ಳುತ್ತಾನೆ. ಆತನ ಮಾತುಗಳು-

ತಾಯಿ, ನಾನು ಪಾತಕದಲ್ಲಿ ಭಾಗಿಯಾಗಿಲ್ಲ. ಹಾಗೆ ಭಾಗಿಯಾದವನಾಗಿದ್ದರೆ, ನೀಚ ಕುಲಗಳಿಗೆ ಸೇವೆ ಮಾಡಿದ ಪಾಪ ತಗಲುತ್ತದೆ.’

ರಾಮಾಯಣದ ಕೃತಿಕಾರ ಜನರಿಗೆ ಏನು ಹೇಳಬೇಕೆಂದಿದ್ದಾನೆಂದರೆ, ಸಮಾಜದಲ್ಲಿ ನೀಚಕುಲಗಳು ಇತರರ ಸೇವೆ ಮಾಡಲು ಹುಟ್ಟಿವೆ. ಆ ನೀಚ ಕುಲಗಳಿಗೆ ಯಾರಾದರೂ ಆರೈಕೆ, ಸೇವೆ ಮಾಡಿದರೆ ತಾಯಿಯಿಂದ ಮಗನನ್ನು ಅಗಲಿಸಿದಂತಹ ಪಾಪ ತಗಲುತ್ತದೆ. ಶೂದ್ರ ಶ್ರವಣನನ್ನು ಕೊಂದರೂ ರಾಜನಿಗೆ ಪಾಪ ಬರುವುದಿಲ್ಲ. ಆದರೆ ನೀಚಕುಲಗಳಿಗೆ ಸೇವೆ ಮಾಡಿದರೆ ಮಾತ್ರ ಮಹಾಪಾಪ ತಗಲುತ್ತದೆ ಈ ರಾಜಕುಮಾರನಿಗೆ. ವಾಲ್ಮೀಕಿ (ವಾಲ್ಮೀಕಿಯೇ ರಾಮಾಯಣದ ಕೃತಿಕಾರನೇ ಅಲ್ಲವೇ ಎಂಬ ಚರ್ಚೆ ನಂತರ ಮಾಡೋಣ, ಅಥವಾ ರಾಮಾಯಣದಲ್ಲಿರುವುದನ್ನೆಲ್ಲಾ ವಾಲ್ಮೀಕಿಯೇ ಬರೆದನೇ ಎಂಬ ಅಂಶವನ್ನೂ ನಂತರ ನೋಡೋಣ, ಬರಹದ ಸೌಕರ್ಯಕ್ಕಾಗಿ, ಪ್ರಚಲಿತವಿರುವ ವಾಲ್ಮೀಕಿ ಹೆಸರನ್ನೇ ಈಗ ಸಧ್ಯಕ್ಕೆ, ಬಳಸಿಕೊಳ್ಳುತ್ತೇನೆ) ಆ ಕಾವ್ಯದ ಮೂಲಕ ಒಂದು ಮಾದರಿಯನ್ನು ನಿರ್ಮಿಸುತ್ತಿದ್ದಾನೆ. ಆ ಸಾಮಾಜಿಕ ಮಾದರಿಯ ಪ್ರಕಾರ ಶೂದ್ರರನ್ನು ಕೊಲ್ಲಬಹುದು. ಆದರೆ ಶೂದ್ರರಿಗೆ ಸೇವೆ ಮಾತ್ರ ಮಾಡುವಂತಿಲ್ಲ. ಮಹಾಪಾಪ! ಈ ಉದ್ದೇಶ ವಾಲ್ಮೀಕಿಗೆ ಇರದಿದ್ದರೆ ಭರತ ಬೇರೆ ಹೋಲಿಕೆಯೊಂದಿಗೆ ಮಾತನಾಡಬಹುದಿತ್ತಲ್ಲ!

ಅನಸೂಯಳ ಪಾತಿವ್ರತ್ಯ ಮಹಾತ್ಮೆಯ ಬಗ್ಗೆ, ವಾಲ್ಮೀಕಿ ರಾಮಾಯಣದಲ್ಲಿ ವಿಶ್ವಾಮಿತ್ರ ರಾಮನಿಗೆ ವಿವರಿಸುತ್ತಾನೆ.

ಹತ್ತು ವರ್ಷಗಳಿಂದ ಮಳೆಯಿಲ್ಲದೆ ಲೋಕವೆಲ್ಲಾ ದಗ್ಧವಾಗಿದೆ. ಅನ್ನ ನೀರಿಲ್ಲದೆ ಜನ ಸಾಯುತ್ತಿದ್ದಾರೆ. ದನಗಳು ತಲ್ಲಣಿಸುತ್ತಿವೆ. ಆಗ ಸತಿ ಅನಸೂಯ ತನ್ನ ಪಾತಿವ್ರತ್ಯದ ಮಹಿಮೆಯಿಂದ ಋಷಿಗಳಿಗಾಗಿ ನೀರುಹಣ್ಣು ಹಂಪಲು ಸೃಷ್ಟಿಸಿದಳು.’

ರಾಮ-ಲಕ್ಷ್ಮಣರು ಅಂತಾ ಅನಸೂಯೆಗೆ ವಂದಿಸಿದರು.

ಅನಸೂಯಳ ಮಾದರಿಯ ಮೂಲಕ ವಾಲ್ಮೀಕಿ ಪಾತಿವ್ರತ್ಯಕ್ಕೆ ಎಷ್ಟು ದೊಡ್ಡ ಶಕ್ತಿ ಇದೆ ಎಂದು ಜನತೆಗೆ ಸಾರಿ ಹೇಳಲು ಯತ್ನಿಸುತ್ತಿದ್ದಾನೆ. ಇಲ್ಲದ ಮಳೆ ಬರಿಸುವಂತಹ ಅತಿಮಾನುಷ ಶಕ್ತಿಯೊಂದನ್ನು ತನ್ನ ಕಲ್ಪನೆಯ ಮೂಲಕ ಅದಕ್ಕೆ ಒದಗಿಸಿದ್ದಾನೆ. ಇದು ಕತೆಯ ರಂಜನೀಯ ಅಂಶ ಎಂದುಕೊಳ್ಳೋಣ. ಆದರೆ ಇದರಲ್ಲಿ ವ್ಯಕ್ತವಾಗುತ್ತಿರುವ ಸಾಮಾಜಿಕ ತಾರತಮ್ಯದ ನೀತಿಯೇನು? ಜನರೆಲ್ಲರೂ, ದನಗಳೂ ಕೂಡ ಅನ್ನ ನೀರಿಲ್ಲದೆ ಸಾಯುತ್ತಿರುವಾಗ, ಎಲ್ಲರಿಗಾಗಿ ಮಳೆಯನ್ನು ತನ್ನ ಪಾತಿವ್ರತ್ಯದಿಂದ ಸೃಷ್ಟಿಸಬಹುದಿತ್ತು. ಬದಲಾಗಿ ಋಷಿ ಮುನಿಗಳಿಗಾಗಿ ಮಾತ್ರ ಅಂತಹ ದುರ್ಬರ ಸಂದರ್ಭದಲ್ಲಿ ನೀರು ಹಣ್ಣು ಹಂಪಲು ಸೃಷ್ಟಿಸಿದಳು. ಅಂದರೆ ಆಗಿನ ಸಮಾಜದಲ್ಲೇ ಮಾನವ ಜೀವಗಳಿಗೆ ಮೌಲ್ಯ ಕಟ್ಟುವಾಗ ಅದು ಯಾವ ವರ್ಗಕ್ಕೆ ಸೇರಿದ ಪ್ರಾಣ ಎಂಬುದರ ಮೇಲೆ ಆದ್ಯತೆ ನಿರ್ಧಾರವಾಗುತ್ತಿತ್ತು. ಯಾವುದೋ ಬತ್ತದ ಜಲಮೂಲವಿದ್ದ ಪ್ರದೇಶದಲ್ಲಿದ್ದ ಅನಸೂಯ ತನ್ನ ಸಂಗ್ರಹದಿಂದ ಋಷಿಮುನಿಗಳಿಗೆ ಹಣ್ಣು ನೀರು ಒದಗಿಸಿದ್ದಿರಬಹುದು. ಆ ಪ್ರಸಂಗಕ್ಕೆ ಬಣ್ಣ ಕೊಡುವಾಗ ಇಲ್ಲದ ಮಾಂತ್ರಿಕತೆಯನ್ನು ಸೃಷ್ಟಿಸಿದ್ದು ಸಾಲದೆಂಬಂತೆ ಸಾಮಾಜಿಕ ತಾರತಮ್ಯದ ನೀತಿಯನ್ನೂ ಹೇಳಿಸಿದ್ದಾನೆ. ಸತಿ ಅನುಸೂಯಳಂತಹ ಮಾಹಾತ್ಮೆ ಕೂಡ (ಕವಿಯ ಪ್ರಕಾರ) ಇಡೀ ಲೋಕ ಕಲ್ಯಾಣಕ್ಕಾಗಿ ತನ್ನ ಶಕ್ತಿಯನ್ನು ಬಳಸದೆ ಒಂದು ವಿಭಾಗದ ಉಪಯೋಗಕ್ಕಾಗಿ ಮಾತ್ರ ತನ್ನ ದೈಕ ಶಕ್ತಿಯನ್ನು ಬಳಸಿದಳು. ಹಾಗಾದರೆ ‘ಸರ್ವೇಜನೋಂ ಸುಖೀನೋ ಭವಂತು’ ಎಂಬ ಆದರ್ಶಗಳ ಋಷಿಮುನಿಗಳು ಇದ್ದಿದ್ದು ಯಾವ ಕಾಲದಲ್ಲಿ?

ವಾಲ್ಮೀಕಿಯ ಕತೆಯನ್ನೇ ಆಧರಿಸಿ ಮಾತನಾಡುವುದಾದರೆ ರಾಮಾಯಣ ಕಾಲದಲ್ಲಂತೂ ಅಂತಹ ಜನ ಇದ್ದುದಕ್ಕೆ ಆಧಾರವಿಲ್ಲ. ರಾಮಾಯಣದ ಕಾಲ ಆದರ್ಶ ಸಮಾಜವಾಗಿತ್ತು, ಸುಭಿಕ್ಷದ ಕಾಲವಾಗಿತ್ತು, ಅದು ಸತ್ಯದ ಯುಗವಾಗಿತ್ತು, ಈಗ ಕಲಿಕಾಲದಲ್ಲಿ ಮಾತ್ರ ಇಂತಹ ತಾರತಮ್ಯ, ದುಃಖ, ದಮನಗಳು ಜಾರಿಗೆ ಬಂದಿವೆ ಎಂದು ಹೇಳುವವರು ತಮ್ಮ ಮಾತಿಗೆ ಆಧಾರಗಳಾಗಿ ಬಳಸುವುದು ರಾಮಾಯಣ ಮಹಾಭಾರತ ಮುಂತಾದ ಪ್ರಾಚೀನ ಗ್ರಂಥಗಳನ್ನೇ ತಾನೇ? ಆಗಿನ ಕಾಲದಲ್ಲಿ ಇವರೆಲ್ಲಾ ಬಣ್ಣಿಸುವ ಬಗೆಯ ಜೀವನವಿತ್ತೇ, ಅಥವಾ ನಾವು ಇಂದಿಗೂ ಕಾಣುವ ಹಲವಾರು ಸಮಸ್ಯೆಗಳು, ದೋಷಗಳಿಂದ ತುಂಬಿತ್ತೇ ಎಂಬುದನ್ನು ಅರಿಯಲು ನಾವು ಎಲ್ಲಿಂದಲೋ ಆಧಾರಗಳನ್ನು ಹುಡುಕಬೇಕಾಗಿಲ್ಲ.

ರಾಮಾಯಣದಲ್ಲಿ ವ್ಯಕ್ತವಾಗುವ ಕೆಲವು ಒಳ್ಳೆಯ ಪ್ರಸಂಗಗಳು (ಅಂತಹವು ಯಾವುವು ಎಂಬುದು ನನಗಿನ್ನೂ ಸ್ಪಷ್ಟವಾಗಿಲ್ಲ) ನೀತಿಗಳು ಇವುಗಳನ್ನೇ ಏಕಮುಖವಾಗಿ ಮೆರೆಸುತ್ತಾ ಅದನ್ನು ಆರಾಧಿಸುವವರು ಮಾಡುವ ತಪ್ಪನ್ನೇ ನಾವೂ ಮಾಡಬೇಕಾಗಿಲ್ಲ. ಇಡೀ ಕತೆಯಲ್ಲಿ ದೊರೆಯುವ ಯಾವುದೋ ಒಂದೆರಡು ಅತಿರೇಕ ಅಥವಾ ತಪ್ಪುಗಳನ್ನು ಆಧರಿಸಿ ರಾಮಾಯಣದ ಬಗ್ಗೆ ಟೀಕೆಗಳ ಮಳೆ ಸುರಿಸಲು ಇಲ್ಲಿ ಹೊರಟಿಲ್ಲ. ಅದರ ಇಡೀ ಕತೆ, ಅದರ ಪ್ರಧಾನ ಸ್ವಭಾವವೇ ವಿರೋಧಾಭಾಸಗಳಿಂದ, ಎಲ್ಲ ಜನರಿಗೆ ಬೋಧಿಸಲು ಅರ್ಹವಾಗದ ನೀತಿಗಳಿಂದ ತುಂಬಿದೆ ಎಂಬುದನ್ನು ಕಂಡುಕೊಂಡ ನಂತರವೇ ಅದರ ವಿಮರ್ಶೆಯನ್ನು ಕೈಗೊಂಡಿರುವುದು. ಯಾಕೆಂದರೆ ಯಾವುದೇ ಒಂದು ಕೃತಿಯನ್ನು ವಿಮರ್ಶಿಸುವಾಗ ಅದರ ಪ್ರಧಾನ ಆಶಯವೇನು ಎಂಬುದನ್ನು ಪರಿಗಣಿಸದೆ ಅದರಲ್ಲಿ ಬರುವ ಪ್ರಾಸಂಗಿಕವಾದ ಕೆಲವೇ ಕೆಲವು ಒಳ್ಳೆಯ ಅಥವಾ ಕೆಟ್ಟ ಅಂಶಗಳನ್ನು ಆಧರಿಸಿ ವಿಮರ್ಶೆ ಮಾಡುವುದು ಸೂಕ್ತವಾದ ವಿಧಾನವಲ್ಲ ಎಂಬ ಜವಾಬ್ದಾರಿಯನ್ನು ನಾನಿಲ್ಲಿ ಮರೆತಿಲ್ಲ.