ರಾಯಚೂರು

ರಾಯಚೂರು ಜಿಲ್ಲಾ ಕೇಂದ್ರ
ರಾಜಧಾನಿಯಿಂದ: ೫೨೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ಕೇಂದ್ರ ಸ್ಥಾನ

ರಾಯಚೂರು ಕೋಟೆಯು ಕನ್ನಡ ನಾಡಿನ ಸುಭದ್ರಕೋಟೆಗಳಲ್ಲೊಂದು ಇದಕ್ಕೆ ತನ್ನದೇ ಆದ ಇತಿಹಾಸವಿದೆ, ಬಹು ಸಂಸ್ಕೃತಿಗಳ ಆಗರವಾಗಿ ಅನೇಕ ರಾಜ ವಂಶಜರುಗಳು ರಾಯಚೂರು ಕೋಟೆಯನ್ನು ತಮ್ಮದಾಗಿಸಿಕೊಳ್ಳಲು ಹೋರಾಡಿದ ಚರಿತ್ರೆ ಇದೆ.

ಇತಿಹಾಸ:

ರಾಯಜೂರಿನಲ್ಲಿ ಎರಡು ಸುತ್ತಿನ ಕೋಟೆಗಳಿವೆ. ಒಳಕೋಟೆ ಹಾಗೂ ಹೊರಕೋಟೆ ಒಳಕೋಟೆಯನ್ನು ಕ್ರಿ.ಶ. ೧೨೯೪ರಲ್ಲಿ ವಾರಂಗಲ್ಲಿನ ಕಾಕತೀಯ ರಾಣಿ ರುದ್ರಮ್ಮದೇವಿಯ ದಂಡನಾಯಕ ಗೋರೆಗನ್ನಯ್ಯ ರೆಡ್ಡಿಯವರ ಆದೇಶಾನುಸಾರ ಅವನ ಸ್ಥಾನಿಕ ರಾಜ ವಿಠಲನಾಥನು ನಿರ್ಮಿಸಿದ್ದಾನೆ.

ಹೊರಕೋಟೆಯನ್ನು ಹದಿನೈದನೇ ಶತಮಾನದಲ್ಲಿ (೧೪೭೦) ಬಹುಮನಿ ಸುಲ್ತಾನರಿಂದ ನಿರ್ಮಿಸಲ್ಪಟ್ಟಿದೆ. ಈ ಕೋಟೆಯ ಐದು ದ್ವಾರಗಳನ್ನು ಹೊಂದಿದ್ದು, ಅವು ವಿವಿಧ ದಿಕ್ಕುಗಳಿಗೆ ತೆರೆದಿವೆ ಅವುಗಳನ್ನು ಕಾಟೇ ದರವಾಜ (ಪೂರದ್ವಾರ) ಮಕ್ಕಾದರವಾಜಾ (ಪಶ್ಛಿಮದ್ವಾರ) ನವರಂಗ ದರವಾಜಾ ಉತ್ತರದ್ವಾರ ಕಂದಕ ದರವಾಜ (ದಕ್ಷಿಣದ್ವಾರ) ಮತ್ತು ಕೊಡ್ಡಿ ದರವಾಜಾ ನೈರುತ್ಯದ್ವಾರ ಎಂದು ಕರೆಯಲಾಗುತ್ತಿದೆ.

ಕೋಟೆ ನಿರ್ಮಿಸಿದ ಬಗ್ಗೆ ೪೩. ಅಡಿ ಉದ್ದದ ಏಕ ಶಿಲಾ ಶಾಸನವಿದೆ. ಇದನ್ನು ಈಗ ಬಸ್ ಸ್ಟಾಂಡ್ ಹತ್ತಿರದ ಕೋಟೆಯಲ್ಲಿ ಕಾಣಬಹುದು. ಇದು ರಾಣಿ ರುದ್ರಮ್ಮ ದೇವಿಯ ಶಾಸನವಾಗಿದ್ದು, ಅದರಲ್ಲಿ ಆಕೆಯ ಎತ್ತುಗಳ ಬಂಡಿಯನ್ನು ಏರಿ ಸಖಿಯರೊಂದಿಗೆ ಹೊರಟ ರೇಖಾ ಚಿತ್ರ ಆ ಶಾಸನದಲ್ಲಿದೆ.

 

ಮಲಿಯಾಬಾದ್ ಕೋಟೆ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೫ ಕಿ.ಮೀ
ತಾಲೂಕ ಕೇಂದ್ರದಿಂದ: ೫ ಕಿ.ಮೀ

ರಾಯಚೂರಿನಿಂದ ೫ ಕಿ.ಮೀ ದೂರ ವಾಹನ ಮುಖಾಂತರ ಕೋಟೆಯೊಳಗೆ ಹೋಗಬಹುದು. ಮಲಿಯಾಬಾದ್ ನಲ್ಲಿ ಇರುವ ಕಲಾತ್ಮಕ ಎರಡು ಕಲ್ಲಾನೆಗಳು ತುಂಬಾ ಆಕರ್ಷಕವಾಗಿದ್ದು ಪ್ರವಾಸಿಗರಿಗೆ ಮುದ ನೀಡುತ್ತದೆ. ರಾಯಚೂರು ಕೋಟೆ ನಿರ್ಮಿಸುವುದಕ್ಕಿಂತ ಪೂರ್ವದಲ್ಲಿ ಇದೇ ಕೋಟೆಯನ್ನು ಮೊದಲು ೧೨೬೦ರಲ್ಲಿ ಕಟ್ಟಿಸಿರುವುದಾಗಿ ತಿಳಿದು ಬರುತ್ತದೆ. ಕ್ರಿ.ಶ ೧೫೨೦ರಲ್ಲಿ ಕೃಷ್ಣ ದೇವರಾಯನು ದಂಡಯಾತ್ರೆಗೆ ಬಂದಾಗ ಅವನ ಸೈನ್ಯ ಇಲ್ಲಿಯೇ ಬೀಡು ಬಿಟ್ಟಿತ್ತೆಂದು ಹೇಳಲಾಗುತ್ತಿದೆ. ವಿಶೇಷವಾಗಿ ವಿಜಯನಗರದ ದಂಡು ಎಲ್ಲಾ ದಂಡುಗಳಿಗಿಂತ ಮುಂಚೋಣಿಯಲ್ಲಿ ಇರುತ್ತಿತ್ತು. ಆ ದಮ್ಡು ಬೀಡು ಬಿಟ್ಟಿರುವ ಪ್ರದೇಶವೇ ಮುಂದೆ ವಸತಿಯಾಗಿ ಅದಕ್ಕೆ ಇಂದು ವಿಜಯನಗರದ ಹೆಸರಿನ ಉಚ್ಚಾರಣೆಯನ್ನು ಗ್ರಾಮೀಣ ಹಿನ್ನೆಲೆಯಲ್ಲಿ ಇಂದು ಜನರು ಬಿಜನಗೇರಾ ಎಂದು ಕರೆಯುತ್ತಾರೆ.

ಅದೇ ರೀತಿ ಶ್ರೀಕೃಷ್ಣ ದೇವರಾಯನಿಗೆ ತಿರುಪತಿಯ ಶ್ರೀ ವೆಂಕಟೇಶ್ವರನ ಬಗ್ಗೆ ಅಪಾರವಾದ ನಂಬಿಕೆ, ಗೌರವ ಇರುವ ಕಾರಣ ಶ್ರೀ ವೆಂಕಟೇಶ್ವರನ ಮೂರ್ತಿಯನ್ನು ತನ್ನೊಂದಿಗೆ ಸದಾ ತೆಗೆದುಕೊಂಡು ಹೋಗುತ್ತಿದ್ದ ಅಂತಹ ಮೂರ್ತಿ ಯಾವಾಗಲು ವಿಜಯ ನಗರದ ಸೈನ್ಯದ ಹಿಂಬಾಗದಲ್ಲಿ ಇರುತ್ತಿತ್ತು. ಅಂದು ಆ ಚರ ಮೂರ್ತಿಗಳನ್ನು ಇಟ್ಟು ಪೂಜಿಸಿದ ನೆಲವನ್ನೇ ಇಂದಿಗೂ ಗ್ರಾಮೀಣ ಜನರು ದೇವನಪಲ್ಲಿ ಎಂಬ ಹೆಸರಿನಿಂದ ಇಂದಿಗೂ ಕರೆಯುತ್ತಾರೆ.

 

ಕಾಟೇ ದರವಾಜ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೦ ಕಿ.ಮೀ
ತಾಲೂಕ ಕೇಂದ್ರದಿಂದ: ೦ ಕಿ.ಮೀ

ರಾಯಚೂರು ನಗರದ ಕೋಟೆಯ ಪೂರದ್ವಾರ. ಕಾಟೇ ದರವಾಜ ಎಂದರೆ ಮುಳ್ಳಗಸೆ ಎಂದರ್ಥ. ಈ ಬಾಗಿಲು ಸುಂದರ ಕೆತ್ತನೆಯಿಂದ ಕೂಡಿದೆ. ಇದೇ ದರವಾಜದ ಸ್ವಲ್ಪ ಮುಂದೆ ಕಲ್ಲಾನೆ ಇದೆ. ಮಲೆಯಬಾದಿನ ಕಲ್ಲಾನೆಗಳನ್ನು ನಿರ್ಮಿಸಿದ ಕಾಲಘಟ್ಟದಲ್ಲಿಯೇ ಈ ಆನೆಯನ್ನು ನಿರ್ಮಿಸಿರಬಹುದು. ಮಲಿಯಬಾದಿನ ಕಲ್ಲಾನೆಗಳಂತೆ ಅಲಂಕೃತವಲ್ಲದೆ. ಈ ಆನೆಯು ಸಾಮಾನ್ಯ ಅಲಂಕಾರದೊಂದಿಗೆ ಇದ್ದು, ಇದು ಎರಡು ಮರಿ ಆನೆಗಳೊಂದಿಗೆ ಇದೆ ಇದರ ಹತ್ತಿರದಲ್ಲಿಯೇ ಹೈದ್ರಾಬಾದ್ ನಿಜಾಂಶಾಹಿ ಆಡಳಿತದ ಕುರುಹು ಆಗಿ ತೀನ್ ಕಂದಿಲುಗಳು ಇವೆ. ಈ ಪ್ರದೇಶವು ರಾಯಚೂರು ನಗರದ ಹೃದಯ ಭಾಗವೆಂದು ಪ್ರಸಿದ್ಧವಾಗೆದೆ.

 

ನವರಂಗ ದರವಾಜ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೦ ಕಿ.ಮೀ
ತಾಲೂಕ ಕೇಂದ್ರದಿಂದ: ೦ ಕೆ.ಮೀ.

ನವರಂಗ ದರವಾಜ ರಾಯಚೂರು ನಗರದ ಕೋಟೆಯ ಉತ್ತರಕ್ಕಿದೆ. ಇದೊಂದು ಸುಂದರ ಕಲಾಕೃತಿಗಳ ಸಂಕೀರ್ಣವಾಗಿದೆ ಇಲ್ಲಿ ಐದು ಬಾಗಿಲುಗಳಿದ್ದು ಇದರ ವಿನ್ಯಾಸವು ಕೋಟೆಗಳ ಚರಿತ್ರೆಯಲ್ಲಿಯೇ ವಿನೂತನವಾದ ಕಟ್ಟಡವಾಗಿದೆ. ದಕ್ಷಿಣ ದಿಕ್ಕಿಗೆ ಮುಖಮಾಡಿಕೊಂಡು ನಿಂತಿರುವ ಈ ಕಟ್ಟಡ ಸಮೂಹದಲ್ಲಿ ಕಾವಲುಗಾರರ ಮಂಟಪ ವಿದೆ.

ಇದರ ಮುಖಾಂತರ ಒಳಹೋದಂತೆ ವಿಸ್ತಾರವಾದ ಬಯಲಿದ್ದು ಪೂರ್ವ ದಿಕ್ಕಿನಲ್ಲಿ ವಿಶಾಲವಾದ ಹೆಬ್ಬಾಗಿಲು ಇರುವಂತೆ ದಕ್ಷಿಣ ದಿಕ್ಕಿನಲ್ಲಿ ಮೇಲೆ ಏರುವುದಕ್ಕಾಗಿ ಸಾಲು ಮೆಟ್ಟಲುಗಳಿವೆ. ಪೂರ್ವ ದಿಕ್ಕಿನಿಂದ ಬಾಗಿಲಿನ ಮುಖಾಂತರ ಆವು ಒಳಹೋದಂತೆ ನಾವು ಅಲ್ಲಿ ಒಂದು ಮನೋಹರ ಯಕ್ಷಲೋಕವನ್ನೇ ಕಾಣುತ್ತೇವೆ. ಸುಮಾರು ೧೮ ಅಡಿ ಎತ್ತರದಲ್ಲಿ ಉಬ್ಬುಚಿತ್ರಗಳಿವೆ ನಿಗದಿತ ಸಮಯಕ್ಕೆ ಈ ಕಟ್ಟಡವನ್ನು ಪೂರ್ಣಗೊಳಿಸುವ ಕಾರಣಕ್ಕಾಗಿ ಅನೇಕ ಜನ ಶಿಲ್ಪಕಲಾವಿದರು ಇಲ್ಲಿ ದುಡಿದಿರುವ ಕಾರಣ ಒಂದು ಫಲಕದಲ್ಲಿ ಒಂದೊಂದು ವಿನ್ಯಾಸದ ಉಬ್ಬು ಶಿಲ್ಪಗಳಿವೆ ಆ ಶಿಲ್ಪಗಳಲ್ಲಿ ರಾಮಾಯಣ, ಮಹಾಭಾರತ, ಸಮುದ್ರ ಮಂಥನ, ದಶಾವತಾರ, ಶ್ರೀರಾಮನು ಸಪ್ತಸಾಲವೃಕ್ಷಗಳನ್ನು ಬೇಧಿಸುತ್ತಿರುವುದು, ವಾಲಿ ಸುಗ್ರೀವರ ಹೋರಾಟ ಗೋವರ್ಧನಗಿರಿ ಎತ್ತಿದ್ದ ಕೃಷ್ಣನ ಚಿತ್ರ, ಶ್ರೀಕೃಷ್ಣ ದೇವರಾಯನು ಸಖಿಯರೊಂದಿಗೆ ಮಾತನಾಡುವ ಕೀರವಾಣಿಯ ದೃಶ್ಯಗಳು ಹೀಗೆ ಅನೇಕ ಅಂಶಗಳನ್ನೊಳಗೊಂಡಿವೆ. ನೋಡಲು ಆಕರ್ಷಣೀಯವಾದಂತಹ ಹಲವು ವಿಷಯಗಳ ಹಲವಾರು ಶಿಲಾಫಲಕಗಳಿರುವ ಸ್ಥಳವಾಗಿದೆ.

ಈ ಬಯಲಿ ನಂತರ ನಾವು ಉತ್ತರಕ್ಕೆ ಬಂದಲ್ಲಿ ಅಲ್ಲೊಂದು ಅದ್ವೀತಿಯವಾದ ಹೆಬ್ಬಾಗಿಲು ಇದೆ. ಆ ಹೆಬ್ಬಾಗಿಲು ಹಲವು ಶಿಲಾ ವಿನ್ಯಾಸಗಳ ವೈವಿಧ್ಯತೆಗಳನ್ನು ಒಳಗೊಂಡಿದೆ ಇದರ ಬಲಭಾಗದಲ್ಲಿಯೇ ಬುರುಜ್ ಇದ್ದು ಅದು ಒಳಗಡೆ ಹೋಗುವ ಮತ್ತೊಂದು ಬಾಗಿಲನ್ನು ಒಳಗೊಂಡಿದೆ ಹೀಗಾಗಿ ವಿಭಿನ್ನ ರೀತಿಯ ಬಾಗಿಲುಗಳನ್ನು, ಉಬ್ಬುಶಿಲ್ಪಗಳನ್ನು, ಗಾರೆಗಚ್ಚಿನ ಮಾಳಿಗೆಗಳನ್ನು ಒಳಗೊಂಡ ಕಾರಣಕ್ಕಾಗಿಯೇ ಬಹುರಂಗಿಯ ಈ ಕಟ್ಟಡವನ್ನು ’ನವರಂಗ ದರವಾಜಾ’ ಎಂದು ಕರೆದಿರಬಹುದು ಎಂದು ಇತಿಹಾಸ ತಜ್ಞರು ಊಹಿಸುತ್ತಾರೆ.

 

ಏಕ್ ಮಿನಾರ್

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೦ ಕಿ.ಮೀ.
ತಾಲೂಕ ಕೇಂದ್ರದಿಂದ: ೦ ಕಿ.ಮೀ.

 

ಏಕ್ ಮಿನಾರ್ ರಾಯಚೂರು ನಗರದ ಮಧ್ಯ ಭಾಗದಲ್ಲಿದೆ. ಏಕ್ ಮಿನಾರ್ ಇದೊಂದು ಐತಿಹಾಸಿಕ ಸ್ಮಾರಕ ಎಡೆದೂರೆ ನಾಡಿನ ಮೇಲೆ ಬಹಮನಿ ಸುಲ್ತಾನರು ಸಾಧಿಸಿದ ವಿಜಯದ ಸಂಕೇತವಾಗಿ ಇದನ್ನು ನಿರ್ಮಿಸಲಾಗಿದೆ. ಇದರ ತಳಪಾಯದ ವ್ಯಾಸವು ೧೩ ಅಡಿ ಇದ್ದು ಅದು ೬೫ ಅಡಿ ಎತ್ತರವಿದೆ. ಇದೊಂದು ಕಾವಲು ಕೇಂದ್ರವಾಗಿತ್ತು ಇದಕ್ಕೆ ಹೊಂದಿಕೊಂಡ ಪ್ರಾರ್ಥನಾ ಮಂದಿರವೂ ಇದೆ.

 

ಹಜರತ್ ಸೈಯದ್ ಷಾಹ ಶಮ್ಸ್-ಎ ಆಲಮ್ ಹುಸೇನಿ ದರ್ಗಾ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೦ ಕಿ.ಮೀ.
ತಾಲೂಕ ಕೇಂದ್ರದಿಂದ: ೦ ಕಿ.ಮೀ.

ರಾಯಚೂರುನಿಂದ ದೇವಸೂಗೂರು ಹೋಗುವ ರಸ್ತೆಯಲ್ಲಿದೆ ಜಿಲ್ಲಾ ಪೋಲಿಸ್ ಕಛೇರಿ ಪಕ್ಕದಲ್ಲಿದೆ. ಇದು ಸೂಪಿಗಳ ಐಕ್ಯ ಸ್ಥಳವಾಗಿದೆ. ಇಲ್ಲಿಗೆ ಸರ್ವ ಧರ್ಮದ ಜನಾಂಗದವರು ಭೇಟಿ ನೀಡುತ್ತಾರೆ ಇದೊಂದು ಭಾವೈಕ್ಯ ಸ್ಥಳವಾಗಿದೆ.

 

ರಾಯಚೂರು ವಿಜ್ಞಾನ ಕೇಂದ್ರ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೫ ಕಿ.ಮೀ.
ತಾಲೂಕು ಕೇಂದ್ರದಿಂದ: ೫ ಕಿ.ಮೀ.

ರಾಯಚೂರು ನಗರದ ಹೊರವಲಯದಲ್ಲಿ ೧೯೯೭ರಂದು ವಿಜ್ಞಾನ ಕೇಂದ್ರವು ಶಿಕ್ಷಣ ತಜ್ಞ ಡಾ|| ಹೆಚ್. ನರಸಿಂಹಯ್ಯ ಅವರ ಅಮೃತ ಹಸ್ತದಿಂದ ಸ.ಜ. ನಾಗಲೋಟಿಮಠ ಅವರ ಪ್ರೇರಣೆಯಿಂದ, ಅಂದಿನ ಜಿಲ್ಲಾಧಿಕಾರಿಗಳಾದ ಶ್ರೀ. ಅಶೋಕ ದಳವಾಯಿಯವರ ನೇತೃತ್ವದಲ್ಲಿ ಸ್ಥಾಪನೆಯಾಗಿದೆ. ವಿಜ್ಞಾನ ಕೇಂದ್ರದಲ್ಲಿ ಒಂದು ವಿಶಾಲವಾದ ಭೌತಶಾಸ್ತ್ರದ ಪ್ರಯೋಗಾಲಯವಿದೆ. ಖಗೋಳ ವೀಕ್ಷಣೆಗೆ ಉತ್ತಮ ಸ್ಥಳವಿದೆ. ಔಷಧೀಯ ಸಸ್ಯವನವಿದೆ. ಗಣಿತ ಪ್ರಯೋಗಾಲಯವಿದೆ. ಜೀವ ವೈವಿಧ್ಯದ ಬಗ್ಗೆ ಅಧ್ಯಯನ ಕೈಗೊಳ್ಳಲು ಉತ್ತಮ ಸ್ಥಳವಿದೆ. ವಿಜ್ಞಾನ ಕೇಂದ್ರವು ಒಟ್ಟು ೫೦ ಎಕರೆ ಜಮೀನನ್ನು ಹೊಂದಿದ್ದು ಈ ವಿಜ್ಞಾನ ಬೆಟ್ಟದಲ್ಲಿ ಸುಮಾರು ವಿವಿಧ ಬಗೆಯ ೨೦೦೦ ಮರಗಳನ್ನು ಹೊಂದಿದೆ ೧ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸಲು ಕಲಿಯಲು ರಾಯಚೂರು ಜಿಲ್ಲೆಯ ಎಲ್ಲಾ ರಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳನ್ನು ಕರೆತಂದು ಒಂದು ದಿನದ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಉತ್ತಮ ಸ್ಥಳವಾಗಿದೆ.

ಸಂಪರ್ಕ ವಿಳಾಸ : ಜಿ ಬಸಪ್ಪ ಮೋ.ಸಂ: ೯೪೪೬೧೩೧೧೧

 

ಸಾತ್ ಕಛೇರಿ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೦ ಕಿ.ಮೀ
ತಾಲೂಕ ಕೇಂದ್ರದಿಂದ: ೦ ಕಿ.ಮೀ

ರಾಯಚೂರು ನಗರದಲ್ಲಿ ಇದೊಂದು ಐತಿಹಾಸಿಕ ಆಡಳಿತ ಕಛೇರಿಗಳ ಸಂಕೀರ್ಣವಾಗಿದೆ. ಹಿಂದೆ ಇಲ್ಲಿ ಏಳು ಕಾರ್ಯಾಲಯಗಳು ಇರುವುದರಿಂದ ಇದನ್ನು ಸಾತ್ (ಏಳು) ಕಛೇರಿ ಎಂದು ಕರೆಯಲಾಗುತ್ತಿದೆ. ಇದೊಂದು ನಿಜಾಂ ಶೈಲಿಯ ಸುಂದರ ಕಟ್ಟಡವಾಗಿದೆ ಪ್ರಸ್ತುತ ಜಿಲ್ಲಾಧಿಕಾರಿಗಳ ಆಡಳಿತ ಕಛೇರಿಯಾಗಿದೆ.

 

ಆಕಾಶವಾಣಿ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೫ ಕಿ.ಮೀ
ತಾಲೂಕ ಕೇಂದ್ರದಿಂದ: ೫ ಕಿ.ಮೀ

ರಾಯಚೂರಿನಲ್ಲಿ ೧೯೯೩ರಲ್ಲಿ ಆಕಾಶವಾಣಿ ಪ್ರಾರಂಭಿಸಲಾಗಿದೆ. ಇದರ ಮುಖಾಂತರ ಎಲ್ಲಾ ಸುದ್ದಿ ಸಾರವನ್ನು ಮತ್ತು ಇತರೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಾಕ್ರಮಗಳನ್ನು ಬಿತ್ತರಿಸಲಾಗುತ್ತದೆ. ಇದೊಂದು ಪ್ರೇಕ್ಷಣೀಯ ಸ್ಥಳವೂ ಆಗಿದೆ. ಆವೃತ್ತಿ ಮತ್ತು ತರಂಗಗಳ ಬಗ್ಗೆ ಅಧ್ಯಾಯನ ಮಾಡಲು ಉಪಯುಕ್ತವಾಗಿದೆ.

 

ನಾರದಗಡ್ಡೆ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೨೫ ಕಿ.ಮೀ
ತಾಲೂಕ ಕೇಂದ್ರದಿಂದ: ೨೫ ಕಿ.ಮೀ

ನಾರದಗಡ್ಡೆ ರಾಯಚೂರಿನ ಉತ್ತರದಿಕ್ಕಿನಲ್ಲಿ ಕೃಷ್ಣನದಿಯ ದ್ವೀಪವಾಗಿದೆ ರಾಯಚೂರಿನಿಂದ ೩೨ ಕಿ.ಮೀ ದೂರದಲ್ಲಿದೆ ಇದೊಂದು ಪೌರಾಣಿಕ ಪ್ರಸಿದ್ಧ ಸ್ಥಳವಾಗಿದೆ ನಾರದ ಮಹಾಮುನಿ ತಪ್ಪಸ್ಸುಗೈದು ಲಿಂಗ ಸ್ಥಾಪನೆ ಮಾಡಿದ ದ್ವೀಪ. ೧೫ನೇ ಶತಮಾನದಲ್ಲಿ ಬೋಳ ಬಸವೇಶ್ವರ ಎಂಬ ವಿರಕ್ತ ವೀರಶೈವಯತಿ ಇಲ್ಲಿ ಮಠ ಸ್ಥಾಪನೆ ಮಾಡಿದ್ದಾರೆ ಇದೊಂದು ನದಿ ಟಿಸಿಲೊಡೆದು ಮತ್ತೆ ಕೂಡುವ ಪ್ರೇಕ್ಷಣೀಯ ಸ್ಥಳ.

 

ಕುರುವ ಕಲಾ ದತ್ತಾತ್ರೇಯ ದೇವಸ್ಥಾನ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೨೪ ಕಿ.ಮೀ.
ತಾಲೂಕ ಕೇಂದ್ರದಿಂದ: ೨೪ ಕಿ.ಮೀ.

ಕುರುವಕಲಾ: ಕುರುವಕಲಾ ದೇವಸ್ಥಾನವು ಕೃಷ್ಣಾನದಿಯಲ್ಲಿ ಸರಣೀ ನಡುಗಡ್ಡೆಗಳ ಮಧ್ಯೆ ಒಂದು ಪ್ರಮುಖ ನಡುಗಡ್ಡೆ ಇಲ್ಲಿ ಪ್ರಸಿದ್ಧ ದತ್ತಾತ್ರೇಯ ಪೀಠ (ದೇವಸ್ಥಾನ) ವಿದೆ. ದೇಶದ ನಾನಾ ಭಾಗದಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಇದೇ ರೀತಿ ರಾಮಗಡ್ಡೆ ಎಂಬ ಪ್ರಸಿದ್ಧ ದ್ವೀಪ ಇದೆ. ಇಲ್ಲಿ ಚೋಳೇಂದ್ರ ಸ್ವಾಮಿಗಳು ತಪಸ್ಸು ಮಾಡಿದ್ದರಿಂದ ಇದು ವೀರಶೈವರಿಗೆ ಪವಿತ್ರ ಸ್ಥಳವಾಗಿದೆ ರಾಯಚೂರಿನಿಂದ ೨೬ ಕಿ.ಮೀ. ದಲ್ಲಿರುವ ಇಲ್ಲಿಗೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಇದೆ.

 

ಗಾಣದಾಳ ಪಂಚಮುಖಿ ದೇವಸ್ಥಾನ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೩೬ ಕಿ.ಮೀ
ತಾಲೂಕ ಕೇಂದ್ರದಿಂದ: ೩೬ ಕಿ.ಮೀ

ಗಾಣದಾಳ ಪಂಚಮುಖಿ ಪ್ರಾಣದೇವರ ದೇವಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳು ತಪಸ್ಸು ಮಾಡಿದ ಸ್ಥಳವಾಗಿದ್ದು ಜೊತೆಗೆ ಪಂಚಮುಖಿ ಪ್ರಾಣದೇವರ ಗುಡಿಯಾಗಿದ್ದರಿಂದ ಇದೊಂದು ಪವಿತ್ರ ಸ್ಥಳವಾಗಿದೆ. ಬೃಹದಾಕಾರ ಕಲ್ಲು ಬಂಡೆಗಳಿಂದ ಕೂಡಿದ ಸುಂದರ ಏಕಾಂತ ಸ್ಥಳವಾಗಿದೆ. ಬೃಹದಾಕಾರ ಕಲ್ಲು ಬಂಡೆಗಳಿಂದ ಕೂಡಿದ ಸುಂದರ ಏಕಾಂತ ಸ್ಥಳವಾಗಿದೆ. ಮಂತ್ರಾಲಯಕ್ಕೆ ಬರುವ ಭಕ್ತರು ಇಲ್ಲಿ ದರ್ಶನ ಪಡೆದುಕೊಳ್ಳುತ್ತಾರೆ. ಪ್ರತಿ ವರ್ಷ ರಾಮ ನವಮಿಯಂದು ರಾತ್ರಿ ಜರುಗುವ ಜಾತ್ರೆಗೆ ಕರ್ನಾಟಕ ಆಂಧ್ರಪ್ರದೇಶ ಹಾಗೂ ಇತರೆ ಸ್ಥಳಗಳಿಂದ ಭಕ್ತ ಜನ ಬರುತ್ತಾರೆ.

 

ರಾಯಚೂರು ಉಷ್ಣ ಸ್ಥಾವರ ಘಟಕ ಶಾಖೋತ್ಪನ್ನ ಶಕ್ತಿನಗರ

[RTPS]

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೧೮ ಕಿ.ಮೀ.
ತಾಲೂಕ ಕೇಂದ್ರದಿಂದ: ೧೮ ಕಿ.ಮೀ.

ಶಕ್ತಿನಗರದ ಥರ್ಮಲ್ ವಿದ್ಯುತ್ ಕೇಂದ್ರವು ರಾಜ್ಯದ ಪ್ರಮುಖ ವಿದ್ಯುತ್ ಗಾರವಾಗಿದೆ. ಇದು ರಾಯಚೂರಿನ ಉತ್ತರಕ್ಕೆ ಕೃಷ್ಣಾ ನದಿಯ ದಂಡೆಗೆ ದೇವಸೂಗೂರಿನ ಗ್ರಾಮದಲ್ಲಿ ಸ್ಥಾಪನೆಯಾಗಿದೆ. ೧೯೮೦ರಲ್ಲಿ ಈ ಶಾಖೋತ್ಪನ್ನ ಕೇಂದ್ರ ಸ್ಥಾಪನೆಯಾಗಿ ರಾಜ್ಯಕ್ಕೆ ಶೇಕಡಾ ೩೦% ರಷ್ಟು ವಿದ್ಯುತ್ ಪೂರೈಸುತ್ತಿದೆ. ರಾಯಚೂರಿನಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಇದೂ ಒಂದು ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಉತ್ತಮ ಕೇಂದ್ರವಾಗಿದೆ.

 

ದೇವಸೂಗೂರು

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೧೮ ಕಿ.ಮೀ
ತಾಲೂಕ ಕೇಂದ್ರದಿಂದ: ೧೮ ಕಿ.ಮೀ

ದೇವಸೂಗೂರು ಶ್ರೀ ಸೂಗೂರೇಶ್ವರ ದೇವಸ್ಥಾನವು ಪ್ರಸಿದ್ಧವಾಗಿದೆ. ಛಟ್ಟಿ ಅಮಾವಾಸ್ಯೆಯ ನಂತರ ಷಷ್ಟಿದಿನದಂದು ಜೋಡು ರಥೋತ್ಸವ ನಡೆಯುತ್ತದೆ. ಸುತ್ತಲಿನ ಸಹಸ್ರಾರು ಜನ ಭಕ್ತರು ಬರುತ್ತಾರೆ ಇದೊಂದು ಐತಿಹಾಸಿಕ, ಪೌರಾಣಿಕ ಪ್ರಸಿದ್ಧ ಸ್ಥಳವಾಗಿದೆ.

 

ಇಡಪನೂರು ರಾಮಲಿಂಗೇಶ್ವರ ದೇವಸ್ಥಾನ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೨೫ ಕಿ.ಮೀ
ತಾಲೂಕ ಕೇಂದ್ರದಿಂದ: ೨೫ ಕಿ.ಮೀ

ಇಡಪನೂರು ಗ್ರಾಮವು ರಾಮಲಿಂಗೇಶ್ವರ ದೇವಸ್ಥಾನದಿಂದ ಪ್ರಸಿದ್ಧ ಹೊಂದಿದೆ. ಇದು ಕಲ್ಯಾಣ ಚಾಲುಕ್ಯರ ತ್ರಿಕೂಟ ದೇವಾಲಯ. ಶಿವ, ಕೇಶವ ಮತ್ತು ಸರಸ್ವತಿ ದೇವತೆಗಳ ದೇವಸ್ಥಾನ. ಕಲ್ಯಾಣ ಚಾಲುಕ್ಯರ ೩ನೇ ಕೈಲಪಾ ಕಾಲದಲ್ಲಿ ನಿರ್ಮಾಣಗೊಂಡಿತೆಂದು ಹೇಳಲಾಗುತ್ತಿದೆ.

 

ದೇವದುರ್ಗ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೫೬ ಕಿ.ಮೀ
ತಾಲೂಕ ಕೇಂದ್ರದಿಂದ: ೦೦ ಕಿ.ಮೀ

ದೇವದುರ್ಗ ದೇವಾನುದೇವತೆಗಳ ದುರ್ಗ. ಭಾವೈಕ್ಯತೆಯ ತೊಟ್ಟಿಲು ಎನಿಸಿರುವ ದೇವದುರ್ಗ ಸುತ್ತಮುತ್ತಲೂ ಗುಡ್ಡಬೆಟ್ಟಗಳಿಂದ ಕೋಟೆ ನಿರ್ಮಾಣವಾದಂತಿದೆ. ಇಲ್ಲಿಯ ಬೆಟ್ಟಗುಡ್ಡಗಳು ಸಿಹಿ ಸೀತಾಫಲ ಹಣ್ಣುಗಳಿಗೆ ಖ್ಯಾತಿ. ಶ್ರೀ ಶಂಭುಲಿಂಗೇಶ್ವರನ ಬೆಟ್ಟವು ಪಟ್ಟಣದ ದಕ್ಷಿಣಕ್ಕೆ ಇರುವ ಸುಂದರವಾರ ಬೆಟ್ಟ. ಮನಸ್ಸಿಗೆ ಮುದ ನೀಡುತ್ತದೆ. ೧೭ನೇ ಶತಮಾನದಲ್ಲಿ ನಿರ್ಮಾಣವಾದ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನ ಹಾಗೂ ಜಾತ್ರೆ ಜಿಲ್ಲೆಗೆ ಖ್ಯಾತಿ ತಂದಿದೆ.

ಚಂದ್ರಗಿರಿ ಎಂದೇ ಹೆಸರಾಗಿರುವ ಚಂದನಕೆರೆ ಪಟ್ಟಣದ ಪಶ್ಚಿಮ ಭಾಗಕ್ಕಿದ್ದು ಹಿಂದೆ ಸುರಪುರ ದೊರೆಗಳ ಒಂದು ಸಂಸ್ಥಾನವೆನಿಸಿ ತನ್ನ ಐತಿಹಾಸಿಕ ಹಿನ್ನೆಲೆಗಳಿಂದ ಹೆಸರುಪಡೆದಿದೆ ಇಂದಿಗೂ ಇಲ್ಲಿ ಅನೇಕ ವೀರಗಲ್ಲು ಮಾಸ್ತಿಕಲ್ಲುಗಳು, ಗುಹೆ, ಸ್ಮಾರಕಗಳು ಕಂಡುಬರುತ್ತವೆ ಅಲ್ಲದೆ ನಾಯಕ ವಂಶಜರು ನಿರ್ಮಿಸಿದ ದರ್ಬಾರ್ ಹಾಗೂ ಅಮರ್ಪ್ಪ ಬೆಟ್ಟದ ಮೇಲಿನ ಚಿತ್ರಕೆತ್ತನೆ ಕಲ್ಲುಕೋಳಿ ಕಾಣಸಿಗುತ್ತವೆ.

 

ಜಾಲಹಳ್ಳಿ ರಂಗನಾಥ ಸ್ವಾಮಿ ದೇವಸ್ಥಾನ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೭೨ ಕಿ.ಮೀ
ತಾಲೂಕ ಕೇಂದ್ರದಿಂದ: ೨೫ ಕಿ.ಮೀ

ಜಾಲಹಳ್ಳಿ ಪ್ರಕೃತಿ ಸೌಂದರ್ಯ ತೋಟಗಳ ರಮಣೀಯ ತಾಣ ಇಲ್ಲಿಯ ಜಗದಾರಾಕ್ಯ ಜಯಶಾಂತಲಿಂಗೇಶ್ವರ ಶ್ರೀಗಳಿಂದ ಜ್ಞಾನದಾಸೋಹ ಹಾಗೂ ಅನ್ನದಾಸೋಹ ಪಾಠ ಪ್ರವಚನಗಳು ನಿರಂತರವಾಗಿ ನಡೆದು ಜನಮಾನಸಕ್ಕೆ ಭಕ್ತಿಜ್ಞಾನದ ಸಿಂಚನಗೈದಿಯುತ್ತಿವೆ. ಶ್ರೀ ರಂಗನಾಥ ಸ್ವಾಮಿ ಜಾತ್ರೆ ಮತ್ತು ಯಲ್ಲಮ್ಮದೇವಿಯ ಜಾತ್ರೆಗಳು ಈ ನೆಲದ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಇಲ್ಲಿಯ ನಿಂಬೆಹಣ್ಣುಗಳು, ಕರ್ನಾಟಕದೆಲ್ಲೆಡೆ ಸರಬರಾಜಾಗುತ್ತದೆ. ರಂಗನಾಥ ಸ್ವಾಮಿ ಮತ್ತು ಜಂಬುಲಿಂಗನ ಗುಡಿ ಶ್ರೀ ಕೃಷ್ಣ ದೇವರಾಯನ ಗುರುಗಳಾದ ವ್ಯಾಸರಾಯರಿಂದ ಸ್ಥಾಪಿತಗೊಂಡಿವೆ.

ನಿಜಾಮ ಸರಕಾರದಿಂದ ನೇಮಕಗೊಂಡ ಬ್ರಿಟಿಷ್ ಅಧಿಕಾರಿ ಲಿಯೋನಾರ್ಡ್ಮನ್ ರವರು ನಿರ್ಮಿಸಿದ ದೊಡ್ಡ ಏಳು ಗಿರಕಿಗಳ ಬಾವಿ ನಮ್ಮೆಲ್ಲರಿಗೆ ಜಲಸಂಪತ್ತಿನ ಸದ್ಬಳಕೆ ಕುರಿತು ಸಾರುತ್ತದೆ.

 

ವೀರಘಟ್ಟ: ಸಂತ ಮೌನೇಶ್ವರ ತಪೋ ಭೂಮಿ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೮೦ ಕಿ.ಮೀ
ತಾಲೂಕ ಕೇಂದ್ರದಿಂದ: ೧೬ ಕಿ.ಮೀ

ಇಂದು ದೇವದುರ್ಗ ತಾಲೂಕಿನ ಒಂದು ಪವಿತ್ರ ಧಾರ್ಮಿಕ ಶ್ರದ್ಧಾಕೇಂದ್ರ, ಇಲ್ಲಿ ಕೃಷ್ಣಾನದಿ ತಟದ ರಮ್ಯ ಪರಿಸರವು ಚೇತೋಹಾರಿಯಾಗಿದೆ. ಸಂತ ಮೌನೇಶ್ವರರು ಇಲ್ಲಿ ತಪಸ್ಸುಗೈದಿದ್ದಾರೆಂದು ಪ್ರತೀತಿ ಜನರಲ್ಲಿದೆ. ಮೌನೇಶ್ವರರ ತಪೋ ಭೂಮಿಯಾದ ಇಲ್ಲಿ ಕೃಷ್ಣಾನದಿಯ ಯಾವುದೇ ಸಪ್ಪಳ್ಳವಿಲ್ಲದೆ ಮೌನವಾಗಿ ಹರಿಯುತ್ತಿರುವುದು ವಿಶೇಷ. ಸಂಕ್ರಾಂತಿ ಹಬ್ಬದ ದಿನ ಹೊರ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತಾದಿಗಳು ಆಗಮಿಸುತ್ತಾರೆ. ಆದಿ ಮೌನಲಿಂಗ ಮಠದ ಮುಂದೆ ಮೌನೇಶ್ವರರ ಹಿಂದೂ-ಮುಸ್ಮಿಂ ಭಾವೈಕ್ಯತಾ ಸ್ಥಳ ತಿಂಥಿಣಿಯನ್ನು ನೋಡಬಹುದು.

 

ಕ್ಯಾದಿಗ್ಗೇರಾ: ವೀರಗಲ್ಲು ಮಹಾಸತಿಗಲುಗಳ ತಾಣ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೪೪ ಕಿ.ಮೀ
ತಾಲೂಕ ಕೇಂದ್ರದಿಂದ: ೨೮ ಕಿ.ಮೀ

ಇದು ಸುರಪುರ ದೊರೆಗಳ ಆಡಳಿತಕ್ಕೆ ಒಳಪಟ್ಟಿದ್ದ ಚಿಕ್ಕ ಸಂಸ್ಥಾನ. ಸಿರವಾರದಿಂದ ಅರಕೇರಾಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಬರುವ ಈ ಗ್ರಾಮ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಇದು ವೀರಗಲ್ಲು ಮತ್ತು ಮಹಾಸತಿಗಲ್ಲುಗಳ ಉಗ್ರಾಣವೆಂದರೆ ಅಚ್ಚರಿಯಲ್ಲ. ಈಗಾಗಲೇ ಇಲ್ಲಿ ಸುಮಾರು ನೂರಕ್ಕೂ ಅಧಿಕ ವೀರಗಲ್ಲುಗಳು ದೊರೆಕಿವೆ. ಈ ವೀರಗಲ್ಲುಗಳನ್ನು ಸ.ಹಿ.ಪ್ರಾ.ಶಾಲೆಯ ಆವರಣದಲ್ಲಿ ಸಂಗ್ರಹಿಸಿಡಲಾಗಿದೆ. ಇಲ್ಲಿ ಇತಿಹಾಸ ಪ್ರಸಿದ್ಧ ಕೋಟೆಯನ್ನು ಸಹ ನೋಡಬಹುದು. ಶಿಲ್ಪಕಲೆ ಮತ್ತು ವಾಸ್ತು ಶಿಲ್ಪದ ದೃಷ್ಟಿಯಿಂದ ವಿಶೇಷವಾದ ಬಸವಣ್ಣನ ದೇವಸ್ಥಾನ ಪೂರ್ಣಗೊಳ್ಳದ ಸ್ಮಾರಕವಾಗಿ ಉಳಿದಿದೆ.

 

ಕೊಪ್ಪರ: ನರಸಿಂಹ ದೇವಸ್ಥಾನ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೬೮ ಕಿ.ಮೀ
ತಾಲೂಕ ಕೇಂದ್ರದಿಂದ: ೧೨ ಕಿ.ಮೀ

ಕಾರ್ಪರ ಅಥವಾ ಕೊಪ್ಪರ ಕೃಷ್ಣೆಯ ತಟದಲ್ಲಿ ವಿಶಿಷ್ಟವಾಗಿ ಒಡಮೂಡಿರುವ ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ ರಮ್ಯ ಮನೋಹರ ಈ ಪುಣ್ಯಕ್ಷೇತ್ರವನ್ನು ನೋಡುವುದೇ ಒಂದು ಭಾಗ್ಯ. ಕೃಷ್ಣಾನದಿಯ ದಂಡೆಯ ಮೇಲೆ ಎತ್ತರವಾದ ಕಟ್ಟೆಯ ನಡುವೆ ಮರದಲ್ಲಿ ಮೂಡಿರುವ ಶ್ರೀ ನರಸಿಂಹಸ್ವಾಮಿಯು ಇಲ್ಲಿ ಭಕ್ತಿಯ ಪರವಶತೆಯನ್ನು ಪ್ರತಿನಿಧಿಸುತ್ತಾನೆ.

ಇಲ್ಲಿ ಸದಾಕಾಲ ದಾಸವರೇಣ್ಯರ ಹಾಡು, ಕೀರ್ತನೆಗಳು ಪೂಜಾಕಾರ್ಯಗಳು ಸಾಂಗೋಪಾಂಗವಾಗಿ ನಡೆಯುತ್ತಿವೆ. ದೂರದ ಬೆಂಗಳೂರು ಮೈಸೂರು ಅಷ್ಟೇ ಅಲ್ಲದೆ ದೇಶದ ವಿವಿಧ ಭಾಗಗಳಿಂದ ಭಕ್ತಸ್ತೋಮವು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ.

 

ಅಣಿ ಮಲ್ಲೇಶ್ವರ ದೇವಸ್ಥಾನ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೬೯ ಕಿ.ಮೀ
ತಾಲೂಕ ಕೇಂದ್ರದಿಂದ: ೧೩ ಕಿ.ಮೀ

ಅಣೆ ಮಲ್ಲೇಶ್ವರ ದೇವಸ್ಥಾನವು ತಾಲೂಕು ಕೇಂದ್ರದಿಂದ ಕೋಣಚಪ್ಪಳಿಗೆ ಹೋಗುವ ಮಾರ್ಗಮಧ್ಯದಲ್ಲಿ ಕೃಷ್ಣಾನದಿಯ ತಟದಲ್ಲಿ ಸಿಗುವ ಒಂದು ಸುಪ್ರಸಿದ್ಧ ಪುಣ್ಯಸ್ಥಳವಾಗಿದೆ. ಇಲ್ಲಿ ಕೃಷ್ಣಾನದಿಯ ಉತ್ತರಾಭಿಮುಖವಾಗಿ ಹರಿದು ಈ ಕ್ಷೇತ್ರಕ್ಕೆ ದಕ್ಷಿಣ ಕಾಶಿ ಎಂದು ಹೆಸರು ಬರಲು ಕಾರಣವಾಗಿದ್ದು ವಿಶೇಷ. ಹಾಗೆಯೇ ಜಮದಗ್ನಿ ಮಹರ್ಷಿಯು ಇಲ್ಲಿ ತಪಸ್ಸುಗೈದಿದ್ದರೆಂದು ಸ್ಥಳೀಯ ಪುರಾಣ ಹೇಳುತ್ತದೆ. ಇಲ್ಲಿಯ ಗರ್ಭಗುಡಿಯಲ್ಲಿರುವ ಮಲ್ಲೇಶ್ವರ ಲಿಂಗವು ಸ್ವಯಂ ಉದ್ಭವವಾದುದೆಂದು ಪ್ರತೀತಿ ಇದೆ. ದೇವಸ್ಥಾನದ ಹತ್ತಿರವಿರುವ ಬಂಡೆಗಲ್ಲು ’ಆಕಳಗುಂಡು’ ಎಂದು ಕರೆಯಲ್ಪಡುತ್ತದೆ. ಏಕೆಂದರೆ ಜಮದಗ್ನಿ ಮಹರ್ಷಿಯ ಹತ್ತಿರವಿದ್ದ ಕಾಮಧೇನು ಅವರು ತಪಸ್ಸು ಮಾಡುವ ಸಮಯದಲ್ಲಿ ಆ ಬಂಡೆಗಲ್ಲ ಮೇಲೆ ನಿಂತಿರುತ್ತಿತ್ತೆಂದು ಸ್ಥಳೀಯರು ಹೇಳುತ್ತಾರೆ.

 

ಗಬ್ಬೂರು ಮೇಳೆಶಂಕರಿ ದೇವಸ್ಥಾನ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೩೦ ಕಿ.ಮೀ
ತಾಲೂಕ ಕೇಂದ್ರದಿಂದ: ೨೮ ಕಿ.ಮೀ

ಗಬ್ಬೂರಿನಲ್ಲಿ ಅನೇಕ ದೇವಸ್ಥಾನಗಳಿದ್ದು ಇವೆಲ್ಲವೂ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಈ ದೇವಾಲಯಗಳು ನಿರ್ಮಾಣವಾಗಿವೆ. ಐತಿಹಾಸಿಕವಾಗಿ ಮಹತ್ವವನ್ನು ಪಡೆದಿರುವ ಇವು ಹಿಂದೆ ಬಬ್ರುವಾಹನ ಆಳುತ್ತಿದ್ದ “ಮಣಿಪುರ” ವೆಂಬ ಸ್ಥಳ ಇದೇ ಎಂದೂ ಹಿಂದೆ ಬಬ್ರುವಾಹನ ಪಾಂಡವರ ಅಶ್ವಮೇಧಯಾಗದ ಕುದುರೆಯನ್ನು ಇದೇ ಸ್ಥಳದಲ್ಲಿ ಕಟ್ಟಿಹಾಕಿದನೆಂಬ ಪ್ರತೀತಿ ಇದೆ. ಇಲ್ಲಿನ ಪ್ರಮುಖ ದೇವಸ್ಥಾನಗಳೆಂದರೆ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ, ಮೇಲುಶಂಕರ ದೇವಸ್ಥಾನ, ಮಹಾನಂಧೀಶ್ವರ ದೇವಸ್ಥಾನ, ಏಳುಬಾವಿ ಬಸವಣ್ಣನ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಆನೆಗುಡಿಯಲ್ಲಿರುವ ಶಂಕರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಬೂದಿಬಸವೇಶ್ವರ ಮಠ ಹೀಗೆ ಸುಮಾರು ೩೦ ಕ್ಕಿಂತಲೂ ಹೆಚ್ಚಿನ ದೇವಸ್ಥಾನಗಳಿದ್ದು ಎಲ್ಲವೂ ಐತಿಹಾಸಿಕ ಮಹತ್ವವನ್ನು ಪಡೆದಿವೆ, ಜೊತೆಗೆ ಸುಮಾರು ೨೬ ಶಿಲಾಶಾಸನಗಳನ್ನೂ ಕೂಡ ಇಲ್ಲಿ ಕಾಣಬಹುದು.

 

ಮಸರಕಲ್: ಗೋಪಾಲದಾಸರ ಕಂಬ

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೪೪ ಕಿ.ಮೀ
ತಾಲೂಕ ಕೇಂದ್ರದಿಂದ: ೧೨ ಕಿ.ಮೀ

ಮಸರಕಲ್ ಅಥವಾ ಮೊಸರಕಲ್ಲು ೧೨ನೇ ಶತಮಾನದ ಶರಣೆ ಮುಕ್ತಾಯಕ್ಕಳ ಊರು ಇಲ್ಲಿ ಮುಕ್ತಾಯಕ್ಕಳ ಸಮಾಧಿ ಸ್ಥಳವಿದೆ ಹಾಗೂ ದಾಸವರೇಣ್ಯ ಶ್ರೀ ಗೋಪಾಲದಾಸರು ಹುಟ್ಟಿದ ಸ್ಥಳ ಹಾಗೂ ಕರ್ಮಭೂಮಿ ಇಂದಿಗೂ ಇವರ ವಂಶಜರನ್ನು ಇಲ್ಲಿ ಕಾಣಬಹುದು ಇಲ್ಲಿ ಪ್ರಸಿದ್ಧ ಮರಸಿಂಗೇಶ್ವರ ದೇವಸ್ಥಾನವಿದೆ ಹಾಗೂ ದರ್ಗಾ ಇದ್ದು ಇದೊಂದು ಭಾವೈಕ್ಯತೆಯ ತವರೂರೆನಿಸಿದೆ.

ರಾಯಚೂರಿನಿಂದ ದೇವದುರ್ಗಕ್ಕೆ ಹೋಗುವ ಮುಖ್ಯರಸ್ತೆಯಲ್ಲಿದೆ>

 

ಅರಕೇರಾ ಪವಿತ್ರವನ (ಸಸ್ಯೋದ್ಯಾನ)

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೫೦ ಕಿ.ಮೀ
ತಾಲೂಕ ಕೇಂದ್ರದಿಂದ: ೧೦ ಕಿ.ಮೀ

ಅರಕೇರಾ ರಾಯಚೂರು-ಲಿಂಗಸೂಗೂರು ರಾಜ್ಯ ಹೆದ್ದಾರಿಯಲ್ಲಿರುವ ಸಿರವಾರ ಗ್ರಾಮದಿಂದ ೧೦ ಕಿ.ಮೀ ಉತ್ತರ ಭಾಗಕ್ಕಿದೆ ಇಲ್ಲಿ “ಪವಿತ್ರ ವನ” ಎಂಬ ಅಪರೂಪದ ಸಸ್ಯೋದ್ಯಾನವಿದೆ. ಇಲ್ಲಿ ದೇಶ ವಿದೇಶಗಳ ನಾನಾ ವಿಧವಾದ ಸಸ್ಯ ಪ್ರಭೇಧಗಳಿವೆ. ಹಿಮಾಲಯದ ತಪ್ಪಲಿನಲ್ಲಿ ಬೆಳೆಯುವ ವಿಶಿಷ್ಟ ಸಸ್ಯಗಳೂ ಕೂಡಾ ಇಲ್ಲಿ ಕಾಣಸಿಗುತ್ತದೆ ಆದ್ದರಿಂದ ಇದು ಈ ಭಾಗದಲ್ಲಿ “ಸಸ್ಯಕಾಶಿ” ಯೆಂದು ಪ್ರಸಿದ್ಧ ಗುಹೆಯು ಸಹ ಆಕರ್ಷಣೀಯವಾಗಿದೆ. ಅರಕೇರಾ ಗುಡ್ಡಗಾಡು ಭಾಗದ ತೆಲುಗು-ಕನ್ನಡ ಮಿಶ್ರಿತ ವಿಶಿಷ್ಟ ಭಾಷೆಯು ಇಲ್ಲಿನ ಜನರ ಮಾತೃ ಭಾಷೆಯಾಗಿದೆ. ಕನ್ನಡ ಮತ್ತು ತೆಲುಗುಗಳು ಇದೇ ಭಾಷೆಯಿಂದ ಬೇರ್ಪಟ್ಟಿರುವ ಕುರುಹುಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಆರಕೇರಾದಿಂದ ೭ಕಿ.ಮೀ. ಪಶ್ಚಿಮ ಭಾಗಕ್ಕೆ ಕ್ರಮಿಸಿದರೆ ಊಟಿ ಬಸವಣ್ಣ ದೇವಸ್ಥಾನ ಬರುತ್ತದೆ. ಇಲ್ಲಿ ಕೇದಿಗೆಯ ವನವಿದೆ, ಇಲ್ಲಿನ ಕಣಿವೆಯಲ್ಲಿ ಒಂದು ನೀರಿನ ಚಿಲುಮೆಯಿದ್ದು ಇದು ನಿತ್ಯ ನಿರಂತರ ಹರಿಯುತ್ತದೆ. ಈ ಚಿಲುಮೆ ಎಂದೂ ಬತ್ತುವುದಿಲ್ಲ ಎಂಬ ಪ್ರತೀತಿಯು ಇದೆ.

 

ಗೂಗಲ್ ಪ್ರಭುಸ್ವಾಮಿಯ ದೇವಸ್ಥಾನ ಅಲ್ಲಮ ಪ್ರಭುಗಳು ನೆಲೆಸಿದ ಬೀಡು

ಎಷ್ಟು ದೂರ?
ಜಿಲ್ಲಾ ಕೇಂದ್ರದಿಂದ: ೫೦ ಕಿ.ಮೀ
ತಾಲೂಕ ಕೇಂದ್ರದಿಂದ: ೧೦ ಕಿ.ಮೀ

೧೨ನೇ ಶತಮಾನದ ವಚನಕಾರರಾದ ಅಲ್ಲಮ ಪ್ರಭುಗಳು ಕಲ್ಯಾಣ ಕ್ರಾಂತಿಯ ನಂತರ ಗೂಗಲ್ ನಲ್ಲಿ ಬಂದು ಅನುಷ್ಠಾನಗೈದಿರುವ ಬಗ್ಗೆ ಇತಿಹಾಸದಿಂದ ತಿಳಿದು ಬಂದಿದೆ.

ಕಲ್ಯಾಣದಲ್ಲಿ ಕ್ರಾಂತಿಯಾದ ನಂತರ ವಿವಿಧ ಶರಣರು ವಿವಿಧ ಸ್ಥಳಗಳಿಗೆ ಹೋಗಿ ನೆಲೆಸಿದರು. ೧೨ನೇ ಶತಮಾನದ ವಚನಕಾರರಾದ ಶರಣ ಬಿಬ್ಬಿ ಬಾಚರಸರು ಗಬ್ಬೂರಿಗೆ ಬಂದು ನೆಲೆಸಿದರೆ ಅಲ್ಲಮ ಪ್ರಭುಗಳು ಕೃಷ್ಣಾನದಿಯ ತೀರದಲ್ಲಿರುವ ಗೂಗಲ್ ಗೆ ಬಂದು ನೆಲೆಸಿ ತಪೋನುಷ್ಠಾನವನ್ನು ನಡೆಸಿ ಅಲ್ಲಿಯೇ ಐಕ್ಯರಾದರು. ಇತ್ತೀಚೆಗೆ ನಿರ್ಮಾಣವಾಗಿರುವ ಗೂಗಲ್ ಬ್ಯಾರೇಜ್ ಪಕ್ಕದ ಗುಲ್ಬರ್ಗಾ ಜಿಲ್ಲೆಗೆ ಸ್ನೇಹಸೇತು ಬೆಸೆದಿದೆ ಇಲ್ಲಿನ ಕರು ಜಲಾಶಯ ಈ ಭಾಗದ ರೈತರಿಗೆ ವರವಾಗಿ ಪರಿಣಮಿಸಿದೆ.