ಮೈಸೂರು ರಾಜಧಾನೀ ನಗರಕಲಾಶಾಲಿಕಾ ಬುಧಂ ಮಾನ್ಯಮ್‌|

ಸಂಗೀತ ಸಾಹಿತ್ಯವೀಥೀಸಂಚಾರಂ ನಮಾಮಿ ತಂ ಕೃಷ್ಣಮ್‌||

ಈ ಶ್ಲೋಕದಲ್ಲಿ ಉಭಯಭಾಷಾ ಪ್ರವೀಣರು ಗೌರಿಪೆದ್ದಿ ರಾಮಸುಬ್ಬಶರ್ಮರು ಸಂಗೀತಸಾಹಿತ್ಯವೀಥೀಸಂಚಾರರೆಂದು ಬಣ್ಣಿಸಿರುವ ಶ್ರೀ ರಾಳ್ಲಪಲ್ಲಿ ಅನಂತಕೃಷ್ಣಶರ್ಮರು ೧(ನಮ್ಮ ತಂದೆಯವರಾದ ರಾಳ್ಲಪಲ್ಲಿ ಅನಂತಕೃಷ್ಣಶರ್ಮರನ್ನು ಕುರಿತ ಈ ಲೇಖನವನ್ನು ವಸ್ತುನಿಷ್ಠವಾಗಿ ಇಡಬೇಕೆಂಬ ಉದ್ದೇಶದಿಂದ, ಅನ್ಯರು ಬರೆದಂತೆ ಬರೆದಿದ್ದೇನೆ.) ನಂದನ ಸಂವತ್ಸರ, ಮಾಘಶುಕ್ಲ ಷಷ್ಠಿ, ಸೋಮವಾರದಂದು(೨೩-೧೧-೧೮೯೩) ರಾಳ್ಲಪಲ್ಲಿ ಗ್ರಾಮದಲ್ಲಿ ರ್ಶರೀ ಕರ್ನಮಡಕಲ ಕೃಷ್ಣಮಾಚಾರ್ಯ, ಶ್ರೀಮತಿ ಅಲಮೇಲು ಮಂಗಮ್ಮ ದಂಪತಿಗಳ ಎರಡನೆಯ ಮಗನಾಗಿ ಜನಿಸಿದರು. ಆಂಧ್ರಪ್ರದೇಶದ, ರಾಯಲಸೀಮೆ, ಅನಂತಪುರ ಜಿಲ್ಲೆ, ಕಂಬದೂರು ತಾಲ್ಲೂಕಿಗೆ ಸೇರಿದ ಚಿಕ್ಕ ಹಳ್ಳಿ ರಾಳ್ಲಪಲ್ಲಿ. ಬಾಲ್ಯದಲ್ಲೇ ತೀರಿಕೊಂಡ ಐದಾರು ಮಕ್ಕಳನ್ನು ಬಿಟ್ಟರೆ, ರಾಳ್ಲಪಲ್ಲಿ ಕೃಷ್ಣಮಾಚಾರ್ಯ ದಂಪತಿಗಳಿಗೆ ಉಳಿದವರು ಎಂಟು ಮಂದಿ, ಆರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು.

ಬಾಲ್ಯದಲ್ಲಿ ಅನಂತಕೃಷ್ಣಶರ್ಮರಿಗೆ ಹಾಗೂ ಅವರ ಅಣ್ಣ ತಮ್ಮಂದಿರಿಗೆ, ಅಕ್ಕ ತಂಗಿಯರಿಗೂ ಕೂಡ ತಂದೆ ಕೃಷ್ಣಮಾಚಾರ್ಯರೇ ಗುರುಗಳು. ಮಕ್ಕಳಿಗೇ ಅಲ್ಲದೆ ಗ್ರಾಮದ ಇತರ ಜನರಿಗೂ ಕೂಡ, ಹೆಣ್ಣು ಗಂಡು ಎಂಬ ಪಕ್ಷಪಾತ ಮಾಡದೇ ತಾವು ಕಲಿತಿದ್ದ ತೆಲುಗು, ಸಂಸ್ಕೃತ ಸಾಹಿತ್ಯಗಳನ್ನು ಬೋಧಿಸಿದರು. ಸಾಹಿತ್ಯಸೃಷ್ಟಿ ಮಾಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿದರು.

ತಾಯಿ ಅಲಮೇಲಮ್ಮನವರೇ ಶರ್ಮರಿಗೆ ಬಾಲ್ಯದ ಸಂಗೀತ ಗುರು. ಎಲ್ಲಿ ಹೇಗೆ ಯಾರಿಂದ ಕಲಿತಿದ್ದರೋ! ಆಕೆಗೆ ಕೆಲವು ನೂರು-ಸಂಸ್ಕೃತ, ತೆಲುಗು, ಕನ್ನಡ, ತಮಿಳು, ಮರಾಠಿ ಹಾಡುಗಳು ಕಂಠಗತವಾಗಿದ್ದುವು. ೨) ಶರ್ಮರ ಹಳೆಯ ಕಾಗದ ಪತ್ರಗಳ ಸಂಗ್ರಹದಲ್ಲಿ ನನಗೆ ಅಲಮೇಲಮ್ಮನವರ ಎರಡು ಹಾಡಿನ ಪುಸ್ತಕಗಳು ದೊರೆಕಿವೆ. ಕೈ ಬರಹ ಇಬ್ಬರು, ಮೂವರರ ಕೊಡುಗೆ ಇದ್ದಂತಿದೆ ಈ ಎರಡು ನೋಟ್‌ ಬುಕ್‌ಗಳಲ್ಲಿ ಒಟ್ಟು ೨೩ ಹಾಡುಗಳಿವೆ.)ಇವೆಲ್ಲವನ್ನೂ ಆಕೆ ಮಕ್ಕಳಿಗೆ, ಪ್ರಧಾನವಾಗಿ ಮಗ ಅನಂತನಿಗೆ, ಹಿರಿಯ ಮಗಳು ಯದುಗಿರಿಯಮ್ಮನಿಗೆ ಕಲಿಸಿ ಹಾಡಿಸುತ್ತಿದ್ದರು. ರಾಳ್ಲಪಲ್ಲಿಯ ಕೋಟೆ ಆಂಜನೇಯನ ಗುಡಿಯಲ್ಲಿ ಪ್ರತಿ ಶನಿವಾರವೂ ನಡೆಯುತ್ತಿದ್ದ ಭಜನೆ ಕಾರ್ಯಕ್ರಮದಲ್ಲಿ ಅಕ್ಕ ತಮ್ಮಂದಿರ ಗಾಯನ ನಡೆಯುತ್ತಿತ್ತು. ಇಬ್ಬರದೂ ಬಹಳ ಸುಶ್ರಾವ್ಯವಾದ ಶಾರೀರವಾಗಿತ್ತೆಂದು ಪ್ರತೀತಿ.

ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ವಲಸೆ: ಶ್ರೀ ಕೃಷ್ಣಬ್ರಹ್ಮಯತೀಂದ್ರರ ಸನ್ನಿಧಿಯಲ್ಲಿ ಸಂಸ್ಕೃತ ಸಾಹಿತ್ಯ ಕಲಿಕೆಯನ್ನು ಮುಂದುವರಿಸಿದರು.

ಕ್ರಿ.ಶ. ೧೯೦೫ರಲ್ಲಿ ಅನಂತಕೃಷ್ಣಶರ್ಮರು ಉತ್ತಮ ವಿದ್ಯಾಧ್ಯಯನಕ್ಕೆಂದು ರಾಳ್ಲಪಲ್ಲಿ ಗ್ರಾಮವನ್ನು ಬಿಟ್ಟು ಮೈಸೂರಿಗೆ ಪ್ರಯಾಣ ಬೆಳೆಸಿದರು. ಅವರಿಗೆ ಮೈಸೂರಿನ ರ್ಶರೀ ಬ್ರಹ್ಮತಂತ್ರ ಪರಕಾಲ ಮಠದಲ್ಲಿ ಊಟ ವಸತಿಗಳ ಸೌಲಭ್ಯವು ದೊರೆಯಿತು. ಆ ಸಮಯದಲ್ಲಿ ಮಠದ ಆಸ್ಥಾನ ಪೀಠಾಧಿಪತಿಗಳಾಗಿದ್ದ ಶ್ರೀ ಕೃಷ್ಣಬ್ರಹ್ಮ ಯತೀಂದ್ರರು ಬಾಲಕ ಅನಂತನ ವಿನಯ ವಿಧೇಯತೆಗಳನ್ನೂ, ಬುದ್ಧಿಗ್ರಹಣಧಾರಣಾಶಕ್ತಿಗಳನ್ನೂ, ಅದುವರೆಗಾಗಲೇ ಸಂಪಾದಿಸಿಕೊಂಡಿದ್ದ ಸಾಹಿತ್ಯ ಪ್ರಜ್ಞೆಯನ್ನೂ ಗಮನಿಸಿ ತಮ್ಮಲ್ಲೇ ಅಂತೇವಾಸಿಯಾಗಿ ಸೇರಿಸಿಕೊಂಡರು. ಅವರ ಸನ್ನಿಧಿಯಲ್ಲಿ ತಮ್ಮ ಕಲಿಕೆಯ ಬಗ್ಗೆ ಶರ್ಮರು ಹೀಗೆ ಬರೆದಿದ್ದಾರೆ. “ನನ್ನ ಎರಡನೆಯ ಆಚಾರ್ಯರು ಮೈಸೂರಿನ ರಾಜಗುರುಗಳಾಗಿ ಶ್ರೀ ಬ್ರಹ್ಮತಂತ್ರ ಪರಕಾಲಸ್ಥಾನವನ್ನು ಅಲಂಕರಿಸಿದ್ದ ಶ್ರೀ ಕೃಷ್ಣಬ್ರಹ್ಮ ಯತೀಂದ್ರರು”. ಆ ಕಾಲಕ್ಕೇ ಅವರು ಬಹುಗ್ರಂಥಕರ್ತರು. ವಶ್ಯವಾಕ್ಕುಗಳು. ತಮ್ಮ ಕವಿತಾಸುಧಾಸ್ರವಂತಿಯಿಂದ ಗದ್ವಾಲ್‌, ವನಪರ್ತಿ ಮೊದಲಾದ ಅನೇಕ ರಾಜಾಸ್ಥಾನಗಳಲ್ಲಿ ಗೌರವ ಸನ್ಮಾನಗಳನ್ನು ಸಂಪಾದಿಸಿಕೊಂಡಿದ್ದರು. ಅವರ ವಾಕ್ಚಾತುರ್ಯವು ಅನನ್ಯ ಸಾಮಾನ್ಯವಾದದ್ದು. ಬಹು ಶಾಸ್ತ್ರ ನಿಷ್‌ಆತರಾದ ಅವರಿಗೆ ಸಾಹಿತ್ಯಕಲೆಯಲ್ಲಿ ಶಕ್ತಿರಕ್ತಿಗಳು ವಿಶಾಲಗಂಭೀರವಾಗಿ ವಿಕಾಸಗೊಂಡಿದ್ದವು…… ನಾನು ಅವರ ಸನ್ನಿಧಿಯಲ್ಲಿ ಪುಸ್ತಕ ಹಿಡಿದು ಪಾಠವನ್ನು ಓದಲಿಲ್ಲ. ಗ್ರಂಥರಚನೆ ಅವರ ನಿತ್ಯಕೃತ್ಯಗಳಲ್ಲೊಂದಾಗಿತ್ತು. ಅಲಂಕಾಋ ಮಣಿಹಾರ ವೆಂಬ ಸ್ವತಂತ್ರವಾದ ಲಕ್ಷ್ಯ ಲಕ್ಷಣಗಳನ್ನೊಳಗೊಂಡ ಮಹಾಗ್ರಂಥವನ್ನು ಶ್ರೀಯವರು ರಚಿಸುತ್ತಿದ್ದ ಕಾಲವದು. ಅವರಿಗೆ ದೃಷ್ಟಿಪಾಟವ ಸಾಕಷ್ಟು ಇಲ್ಲದೇ ಇದ್ದ ಕಾರಣ, ಅವರಿಗೆ ಬೇಕಾದ ಗ್ರಂಥಗಳಿಂದ ವಿಷಯಗಳನ್ನು ಓದಿ ಹೇಳುವುದು, ಶ್ರೀಯವರು ಹೇಳಿದ್ದನ್ನು ಬರೆಯುವುದು, ಪಂಡಿತರು ಯಾರಾದರೂ ಬಂದಿದ್ದರೆ ಶ್ರೀಯವರ ರಚನೆಗಳನ್ನು ಅವರಿಗೆ ಓದಿ ಕೇಳಿಸುವುದು, ಈ ಮೊದಲಾದ ವ್ಯಾಸಂಗಭಾಗ್ಯವು ಕೆಲವು ವರ್ಷಗಳ ಕಾಲ ನನಗೆ ಲಭಿಸಿತ್ತು. ಇದರಿಂದ ನನಗುಂಟಾದ ಹೃದಯ ಸಂಸ್ಕಾರವು ಅನುಭವೈಕ ವೇದ್ಯ.(ನನ್ನ ಗುರುಗಳು“ರಾ.ಅ.ಕೃ.ಶರ್ಮ, ೩೮,೩೯ ‘ಉತ್ಥಾನ’ ೧೯೮೩)

ಪಂಡಿತ ಚಾಮರಾಜನಗರದ ರಾಮಾಶಾಸ್ತ್ರಿಗಳು ಶರ್ಮರ ಮೂರನೆಯ ಸಂಸ್ಕೃತ ಸಾಹಿತ್ಯ ಗುರುಗಳು. ಶಿಷ್ಯನ ಮಾತುಗಳಲ್ಲಿ, “ಸಾಹಿತ್ಯಕ್ಷೇತ್ರದಲ್ಲಿ ಸ್ಮರಣೀಯರಾದ ನನ್ನ ಮೂರನೆಯ ದೇಶಿಕರು ಶ್ರೀ ಚಾಮರಾಜನಗರದ ರಾಮಾಶಾಸ್ತ್ರಿಗಳು. ಬಾಯಲ್ಲಿ ಒಂದು ಹಲ್ಲೂ ಇಲ್ಲದ ವಯಸ್ಸು. ಆದರೆ, ಆ ಬಕ್ಕಬಾಯಿಂದಲೇ ಅವರಂತೆ ಸ್ಪಷ್ಟವಾಗಿ, ನೆಮ್ಮದಿಯಾಗಿ, ಕಮನೀಯವಾಗಿ ಉಚ್ಛಾರಣೆ ಮಾಡಿ ಸಂಸ್ಕೃತ ಗದ್ಯಪದ್ಯಗಳನ್ನು ಓದಬಲ್ಲವರನ್ನು ನಾನು ನೋಡಿಲ್ಲ”. ಇನ್ನು ಅವುಗಳಿಗೆ ತಾತ್ಪರ್ಯ ಹೇಳುವ ವಿಧಾನವು ಅವರಿಗೆ ಮಾತ್ರವೇ ತಿಳಿದ ಕಲೆ. ಅದನ್ನು ಅನುಭವಿಸಬಲ್ಲವರಿಗೆ ಮೌನವೇ ಪರಾಯಣ. ಅವರ ಪಾಠಕ್ರಮದ ಪ್ರಶಾಂತ ಮಧುರ ವಾತಾವರಣವು ನನ್ನ ಸಿಹಿನೆನಪುಗಳಲ್ಲಿ ಮುಖ್ಯವಾದುದು.(“ನನ್ನ ಗುರುಗಳು”, ರಾ.ಅ.ಕೃ.ಶರ್ಮ, ಪ್ರ ೩೯, ‘ಉತ್ಥಾನ’೧೯೮೩)

ಕನ್ನಡ ದೇಶದಲ್ಲಿ ಶರ್ಮರಿಗೆ ತಂದೆಯವರ ಹತ್ತಿರ ಕಲಿತಿದ್ದ ತೆಲುಗು ಸಾಹಿತ್ಯಾಧ್ಯಯನವನ್ನು ಮುಂದುವರಿಸಲು ಅವಕಾಶಗಳಿರಲಿಲ್ಲ. ಕಲಿತದ್ದು ಕೂಡ ಮಾಸಿಹೋಗುವ ಪರಿಸ್ಥಿತಿಯುಂಟಾಗಿತ್ತು. ಆ ಸಂದರ್ಭದಲ್ಲಿ ಅದರ ಪುನರುದ್ಧಾರಕ್ಕೆ ಕಾರಣರಾದ ಮಹಾನುಭಾವರು ಶ್ರೀ ಕಟ್ಟಮಂಚಿ ರಾಮಲಿಂಗಾರೆಡ್ಡಿಯವರು. ರೆಡ್ಡಿಯವರನ್ನು ತಮ್ಮ ನಾಲ್ಕನೆಯ ಗುರುಗಳಾಗಿ ಶರ್ಮರು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ. ರೆಡ್ಡಿಯವರೊಡನೆ ೧೯೧೦ರಲ್ಲಿ ಅವರಿಗೆ ಪರಿಚಯ ಉಂಟಾದಾಗ, ಅವರು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಚರಿತ್ರೆ, ತತ್ವಶಾಸ್ತ್ರ, ತರ್ಕಶಾಸ್ತ್ರ, ಆಂಗ್ಲಸಾಹಿತ್ಯಗಳನ್ನು ಬೋಧಿಸುತ್ತಿದ್ದರು. ತೆಲುಗು ಸಾರಸ್ವತ ಕ್ಷೇತ್ರದಲ್ಲಿ ಪ್ರಸಿದ್ಧ ವ್ಯಕ್ತಿಗಳಾಗಿದ್ದರು. ತಮ್ಮ ತೆಲುಗು ಸಾಹಿತ್ಯ ಅಧ್ಯಯನದ ಪ್ರಗತಿಗೆ ರೆಡ್ಡಿಯವರ ಕೊಡುಗೆಯನ್ನು ಶರ್ಮರು ಹೀಗೆ ವಿವರಿಸಿದ್ದಾರೆ. “ಕಾಲೇಜು ಓದಿಗೂ ನನಗೂ ಸಂಬಂಧವಿರಲಿಲ್ಲ”. ಹಳೆಯ ಪ್ರಪಂಚದಲ್ಲೇ ಮುಳುಗಿಕೊಂಡಿದ್ದ ನನಗೆ ಅವರ ಸಹವಾಸವು ಆಧುನಿಕ ಪ್ರಪಂಚದ ಬಾಗಿಲನ್ನು ತೆರೆದು ಆಹ್ವಾನಿಸಿತು. ಅದರ ಬೆಲೆ ಅವರ ಇತರ ಶಿಷ್ಯರಿಗಿಂತ ನನಗೇ ಹೆಚ್ಚು ಅರ್ಥವಾಯಿತೆಂದು ಹೇಳಬಹುದು. ತೆಲುಗು ಕಾವ್ಯಗಳನ್ನು, ಮುಖ್ಯವಾಗಿ ಕವಿತ್ರಯರ ರಚನೆಗಳನ್ನು ಓದುವುದು, ಅವುಗಳ ಬಗ್ಗೆ, ಅನೇಕ ವಿಷಯಗಳನ್ನು, ವೈಶಿಷ್ಟ್ಯಗಳನ್ನು ತಾವು ಹೇಳುವುದು, ನನ್ನಿಂದ ಹೇಳಿಸುವುದು, ಇವೇ ನಮ್ಮ ಗೋಷ್ಠಿಯ ಕಾರ್ಯಕ್ರಮಗಳು. ತೆಲುಗಿನಲ್ಲಿ ಕವಿತ್ವರಚನೆಗೆ ನಾನು ಶ್ರೀಕಾರ ಹಾಕಿದ್ದು ರೆಡ್ಡಿಯವರ ವಿನೋಧಕ್ಕಾಗಿಯೇ. ನಾನು ರಚಿಸಿದ ತಾರಾದೇವಿ, ಮೀರಾಬಾಯಿ ಖಂಡಕಾವ್ಯಗಳನ್ನು ಶ್ರದ್ಧೆಯಿಂದ ಕೇಳಿ ಅಭಿನಂದಿಸಿದರು. ನನ್ನ ತೆಲುಗು ಸಾಹಿತ್ಯ ಜೀವನಕ್ಕೆ ಮುಖ್ಯದೋಹದವು ರೆಡ್ಡಿಯವರದೇ.

ಸಂಗೀತ ವಿದ್ಯಾಭ್ಯಾಸಗುರುಗಳು: ಮಾತೃಶ್ರೀ ಅಲಮೇಲಮ್ಮನವರು ಕಲಿಸಿದ್ದ ಹಾಡುಗಳನ್ನು ಅವರು ಮರೆತಿರಲಿಲ್ಲ. ಸಂಗೀತದ ಮೇಲಿನ ಒಲವು, ಶ್ರದ್ಧೆಗಳು ಗಾಢವಾಗಿಯೇ ಮುಂದುವರೆದಿದ್ದವು. ಮೈಸೂರಿನಲ್ಲಿ ಆ ದಿನಗಳಲ್ಲಿ ಅನೇಕ ಸಂಗೀತ ವಿದ್ವಾಂಸರಿದ್ದರು. ಮೈಸೂರು ಮಹಾರಾಜರಿಂದ ವಿಪುಲವಾಗಿ, ಪ್ರೋತ್ಸಾಹ, ಆಶ್ರಯ, ಪೋಷಣೆಗಳು ದೊರೆಯುತ್ತಿದ್ದ ಕಾಲವದು. ದೇವಸ್ಥಾನಗಳಲ್ಲಿ, ಭಜನಮಂದಿರಗಳಲ್ಲಿ, ಸಂಗೀತಪ್ರಿಯರಾದ ಸಾಹುಕಾರರ ಮನೆಗಳಲ್ಲಿ ಸತತವಾಗಿ ಸಂಗೀತ ಕಚೇರಿಗಳು ನಡೆಯುತ್ತಿದ್ದುವು. ಅನಂತಕೃಷ್ಣಶರ್ಮರು ಈ ಕಚೇರಿಗಳಿಗೆ ಅವಕಾಶ ದೊರೆತಾಗಲೆಲ್ಲಾ ತಪ್ಪದೆ ಹೋಗಿ ಸಂಗೀಥ ಸುಧೆಯನ್ನು ಅನುಭವಿಸಿ ಬರುತ್ತಿದ್ದರು. ಹೇಗಾದರೂ ಶಾಸ್ತ್ರೀಯ ಸಂಗೀತವನ್ನು ಕಲಿಯಬೇಕೆಂಬ ಹಂಬಲವು ದಿನೇದಿನೇ ಪ್ರಬಲವಾಗಿ ಬೆಳೆಯುತ್ತಿತ್ತು. ವೀಣೆ ಶೇಷಣ್ಣ, ಸುಬ್ಬಣ್ಣ, ಕರಿಗಿರಿರಾಯರು, ವಾಸುದೇವಾಚಾರ್ಯರು, ಬಿಡಾರಂ ಕೃಷ್ಣಪ್ಪನವರು, ಚಿಕ್ಕರಾಮರಾಯರು, ಇನ್ನೂ ಇತರ ಸಂಗೀತ ವಿದ್ವಾಂಸರ ಗಾಯನ, ವಾದನ ಪ್ರತಿಭೆಯು ಅವರ ಸಂಗೀತ ವಿದ್ಯಾಕಾಂಕ್ಷೆಯನ್ನು ಉದ್ದೀಪನಗೊಳಿಸಿತ್ತು. ಆದರೆ, ಈ ಅಜ್ಞಾತ ತರುಣನಿಗೆ ಕಲಿಸುವವರು ಯಾರು? ಅನೇಕ ವಿದ್ವಾಂಸರನ್ನು ಭೇಟಿ ಮಾಡಿ ತಮಗೆ ಸಂಗೀತವನ್ನು ಹೇಳಿಕೊಡಿ ಎಂದು ಬೇಡಿಕೊಂಡಂತೆ ಕಾಣುತ್ತದೆ. ಆದರೆ ಯಾರಿಂದಲೂ ಸಹಕಾರ ದೊರೆಯಲಿಲ್ಲ. ತನಗೆ ಸಂಗೀತವನ್ನು ಕಲಿಯುವ ಅದೃಷ್ಟವಿಲ್ಲವೆಂಬ ನಿರಾಶೆಯು ಬಾಧಿಸತೊಡಗಿತ್ತು. ಕೊನೆಗೆ ಒಂದು ದಿನ ೧೯೦೯ರಲ್ಲಿ ಜ್ಯೇಷ್ಠ ಶುಕ್ಲ ಏಕಾದಶಿ, ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ ವರ್ಧಂತಿ ಉತ್ಸವದ ಪ್ರಯುಕ್ತ ಮೈಸೂರಿನ ಅರಮನೆಯಲ್ಲಿ ನಡೆದ ಸಭೆಯಲ್ಲಿ ಬಿಡಾರಂ ಕೃಷ್ಣಪ್ಪನವರ ಸಂಗೀತ ಕಚೇರಿಯಲ್ಲಿ ಅವರು ಆಲಾಪನೆ ಮಾಡಿದ ಧನ್ಯಾಸಿ ರಾಗ, ಹಾಡಿದ ಧ್ಯಾನಮೇ ವರಮೈನ ಗಂಗಾಸ್ನಾನಮೇ ತ್ಯಾಗರಾಜರ ಕೃತಿಯನ್ನು ಕೇಳಿ ಸಂಗೀತವನ್ನು ಕಲಿಯಬೇಕೆಂಬ ಅಭಿಲಾಷೆಯ ವೇಗವನ್ನು ತಡೆದುಕೊಳ್ಳಲಾರದೆ ಗಾನವಿಶಾರದರನ್ನೇ ಬೇಡಿಕೊಳ್ಳಬೇಕೆಂದು ತೀರ್ಮಾನ ಮಾಡಿದರು. ಕೃಷ್ಣಪ್ಪನವರು ಉದಾರ ಹೃದಯದಿಂದ ಶರ್ಮರನ್ನು ಶಿಷ್ಯನ್ನಾಗಿ ಸ್ವೀಕರಿಸಿ, ನಾಲ್ಕೈದು ವರ್ಷಗಳು ತುಂಬು ಮನಸ್ಸಿನಿಂದ ಸಂಗೀತ ವಿದ್ಯಾದಾನ ಮಾಡಿದರು. ಗುರುಗಳ ಸಂಗೀತಸಾಧನೆ, ಪಾಠ ಹೇಳಿಕೊಡುವ ಕ್ರಮ, ಸಂಗೀತ ಕಲೆಯ ಸ್ವರೂಪಗಳ ಬಗ್ಗೆ, ಶರ್ಮರ ಮಾತುಗಳು ಬಹಳ ಹೃದಯಂಗಮವಾಗಿವೆ. “ಸಂಗೀತಕಲೆಗೆ ಮೂಲಾಧಾರಗಳಾದ ನಾದಕಾಲಗಳೆರಡರಲ್ಲೂ ನಿಷ್ಕಲ್ಮಷವಾದ ಪಾರಿಶುಧ್ಯವನ್ನು ಸಾಧಿಸುವುದಕ್ಕಾಗಿ ಅವರು ಮಾಡಿದ ತಪಸ್ಸು ಅಸಾಧಾರಣವಾದುದು. ಅದರ ಫಲವಾಗಿ ಮೂರು ಸ್ಥಾಯಿಗಳಲ್ಲೂ ನಿಷ್ಕಂಪವಾದ ಧೀರವಾಭಿನಾದವನ್ನು ಹೊರತರುವ ಶಖ್ತಿ, ಅದನ್ನು ಯಾವ ಕಾಲದಲ್ಲಾಗಲೀ ಓಟ ಎಳೆತಗಳಿಲ್ಲದೆ, ಗಮಕಶುದ್ಧವಾಗಿ ನಡೆಸುವ ಸ್ವಾತಂತ್ಯ್ರ ಅವರಿಗೆ ಲಭಿಸಿದಷ್ಟು, ನನ್ನ ಅನುಭವದಲ್ಲಿ ಇನ್ನಾರಿಗೂ ಸಿದ್ಧಿಸಿದಂತೆ ಕಾಣುವುದಿಲ್ಲ. ಇವೆಲ್ಲದರ ಜೊತೆಗೆ ಶುದ್ಧವಾದ, ಸ್ಪಷ್ಟವಾದ ಉಚ್ಚಾರಣೆ, ಹಾಡಿದ ಕೃತಿಗಳ ಅರ್ಥವನ್ನು ಚೆನ್ನಾಗಿ ತಿಳಿದುಕೊಂಡು ಪ್ರಸ್ತಾರ ಮಾಡುವುದು, ಶಾಸ್ತ್ರೀಯವಾದ ರಾಗತಾಳಗಳ ಜ್ಞಾನ, ಅಚಂಚಲವಾದ ರಾಮಭಕ್ತಿ, ಸಾಕ್ಷಾತ್‌ ಭಗವಂತನೇ ಗಾನರೂಪದಲ್ಲಿ ತನ್ನ ಕಂಠದ ಮೂಲಕ ಹೊರಬರುತ್ತಿದ್ದಾನೆಂಬ ನಂಬಿಕೆ”. ಇವು ಕೃಷ್ಣಪ್ಪನವರ ವ್ಯಕ್ತಿತ್ವವನ್ನು ರೂಪಿಸಿದ್ದವು.(ನನ್ನ ಗುರುಗಳು”, ಪ್ರ.೪೪,‘ಉತ್ಥಾನ’ ೧೯೮೩) ಗಾನವಿಶಾರದಲ್ಲಿ ಕಂಡುಕೊಂಡ ಈ ಗುಣಗಳನ್ನು ಶರ್ಮರು ತಮ್ಮ ಗಾಯನ ಶೈಲಿಯಲ್ಲಿ ಅನುಸರಿಸಲು ಸತತವಾಗಿ ಪ್ರಯತ್ನ ಮಾಡಿದ್ದರು.

ಸಾಹಿತ್ಯಕ್ಷೇತ್ರದಲ್ಲಿ ರಾಳ್ಲಪಲ್ಲಿಯವರ ಸಾಧನೆ: ಅವರ ಸಾಹಿತ್ಯ ಕೃಷಿಯು ಗಂಗಾಸ್ರವಂತಿಯಂತೆ ಮೂರು ಭಾಷೆಗಳಲ್ಲೂ, ಮೂರು ಪ್ರಕಾರಗಳಲ್ಲೂ ಪ್ರಸರಿಸಿದೆ. ತೆಲುಗು, ಸಂಸ್ಕೃತ, ಕನ್ನಡ ಭಾಷೆಗಳಲ್ಲೂ, ಕಾವ್ಯ, ಅನುವಾದ, ಸಂಪಾದನೆ ಕ್ರಿಯೆಗಳಲ್ಲೂ ಅವರ ಸಾಹಿತ್ಯ ಸೃಷ್ಟಿಯು ಹರಡಿದೆ. ಅವರು ಶೇಖರಿಸಿದ್ದ ಜ್ಞಾನಭಂಡಾರವನ್ನೂ, ಬರವಣಿಗೆಯ ಸೌಲಭ್ಯವನ್ನೂ ಗಮನಿಸಿದರೆ, ಅವರು ಬರೆದದ್ದು ಬಹು ಸ್ವಲ್ಪ. ಬರೆಯಬಹುದಾಗಿದ್ದ, ಬರೆಯಬೇಕಾಗಿದ್ದ ವಿಚಾರಗಳು ಬಹಳಷ್ಟು ಇದ್ದವು. ಆದರೆ ಅವರು ಬರೆಯುವ ಮನಸ್ಸು ಮಾಡಲಿಲ್ಲ. ವಾಲ್ಮೀಕಿ, ಕಾಳಿದಾಸ, ಕವಿತ್ರಯರು ನನ್ನಯ್ಯ, ತಿಕ್ಕನ್ನ, ಎರ್ ನ್ನ, ಪೋತನಾದಿ ಮಹಾಕವಿಗಳ ಕಾವ್ಯಗಳನ್ನು ಗಮನಿಸಿದರೆ ನಮ್ಮಂತಹ ಅಲ್ಪಪ್ರಜ್ಞರು ಏನು ಬರೆಯಬಲ್ಲೆವು? ಇದು ಅವರ ನಿರ್ವೇದ. ಆದ ಕಾರಣ ತಮ್ಮದೇ ಆದ ಹೊಸ ಭಾವನೆ, ನೂತನ ಸೃಷ್ಟಿ, ಅಭಿಪ್ರಾಯ, ಕೊಡುಗೆ ಇದೆಯೆಂದು ಅನಿಸಿದಾಗ ಮಾತ್ರ ಬರೆಯಲು ಉದ್ಯುಕ್ತರಾಗುತ್ತಿದ್ದರು. ವಿಶೇಷವಾಗಿ ತಾವು ಹೇಳುವುದು ಏನೂ ಇಲ್ಲವೆಂದಾಗ ಬರೆಯುವ ಪ್ರಯತ್ನ ಮಾಡುತ್ತಿರಲಿಲ್ಲ.

ಖಂಡಕಾವ್ಯಗಳು: ಯೌವನದಲ್ಲಿ ಉತ್ಸಾಹವು ಉಕ್ಕಿಬರುತ್ತಿದ್ದಾಗ ‘ತಾರಾದೇವಿ’(೧೯೧೧), ‘ಮೀರಾಬಾಯಿ’(೧೯೧೨) ಖಂಡಕಾವ್ಯಗಳನ್ನು ರಚಿಸಿದರು. ಈ ಖಂಡಕಾವ್ಯಗಳನ್ನು ಬರೆದಾಗ ಅವರ ವಯಸ್ಸು ಕ್ರಮವಾಗಿ ೧೮, ೧೯ ವರ್ಷಗಳು. ‘ಸರಸ್ವತಿ’ ಎಂಬ ಮಾಸಪತ್ರಿಕೆಯಲ್ಲಿ ‘ತಾರಾದೇವಿ’, ‘ಮಾನವಸೇವ’ ಪತ್ರಿಕೆಯಲ್ಲಿ ‘ಮೀರಾಬಾಯಿ’ಯೂ ಪ್ರಕಟಗೊಂಡವು. ಪುಸ್ತಕರೂಪದಲ್ಲಿ ಅವುಗಳ ಪುನರ್ಮುದ್ರಣವಾಗಲಿಲ್ಲ. ೧೯೨೬ರಲ್ಲಿ ‘ಭಾರ್ಗವೀ ಪಂಚವಿಂಶತಿ’ ಎಂಬ ಪದ್ಯಸಂಗ್ರಹವನ್ನು ಪ್ರಕಟಿಸಿದರು.

ಗದ್ಯರಚನೆಗಳು: ತೆಲುಗು ಗದ್ಯಸಾಹಿತ್ಯದಲ್ಲಿ ರಾಳ್ಲಪಲ್ಲಿಯವರ ಸ್ಥಾನವು ಅದ್ವಿತೀಯವಾದುದು. ಗದ್ಯ ಬರವಣಿಗೆಯಲ್ಲಿ ಅವರಿಗೆ ಸಮಾನರು ಇಲ್ಲ ಎನ್ನುವುದು ಎಲ್ಲರೂ ಅನುಮೋದಿಸಿರುವ ವಿಷಯ. ಈ ಕ್ಷೇತ್ರದಲ್ಲಿ ಅವರು ಪ್ರಕಟಿಸಿರುವ ಗ್ರಂಥಗಳು ಪ್ರಧಾನವಾಗಿ ಮೂರು. ವೇಮನ, ನಾಟಕೋಪನ್ಯಾಸಮುಲು ಮತ್ತು ಸಾರಸ್ವತಾಲೋಕಮು.

ವೇಮನನನ್ನು ಕುರಿತು ವಿಪುಲವಾದ ಪರಿಶೋಧನೆ ಮಾಡಿ, ವಿವಿಧ ವಿಷಯಗಳಲ್ಲಿ ಆತನ ಪ್ರತಿಭೆಯನ್ನು ವಿವರಿಸಿ ವಿಮರ್ಶೆ ಮಾಡಿ ಏಳು ಉಪನ್ಯಾಸಗಳನ್ನು ಬರೆದು, ೧೯೨೮ರಲ್ಲಿ ಅನಂತಪುರದ ಪ್ರಭುತ್ವ ಕಲಾಶಾಲೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಏಳು ದಿನಗಳು ಪ್ರತಿದಿನಕ್ಕೊಂದರಂತೆ, ಓದಿದರು. ಈ ಸಾಹಿತ್ಯ ಕ್ರಿಯೆಗೆ ರಾಳ್ಲಪಲ್ಲಿಯವರನ್ನು ಒಪ್ಪಿಸಿ, ಅವರಿಂದ ಬರೆಸಿ, ಆ ಉಪನ್ಯಾಸಗಳನ್ನು ನಂತರ ಪುಸ್ತಕ ರೂಪದಲ್ಲಿ ಪ್ರಕಟಿಸಿದ ಗೌರವವು ಆಂಧ್ರ ವಿಶ್ವಕಲಾಪರಿಷತ್ತಿನವರಿಗೆ ಸಲ್ಲುತ್ತದೆ. ಈ ಉಪನ್ಯಾಸಗಳ ಕಾರ್ಯಕ್ರಮವು ಮುಗಿದ ನಂತರ, ಶರ್ಮರ ಪ್ರತಿಭೆಯನ್ನು ಪ್ರಶಂಸಿಸಿ, ವಿಮರ್ಶೆ ಮಾಡಿ ಡಾ. ಚಿಲುಕೂರಿ ನಾರಾಯಣರಾವ್‌ರವರು “ಕೀರ್ತನೀಯ ಚರಿತ ಕೃಷ್ಣಶರ್ಮ” ಎಂಬ ಪದ್ಯಸರಣಿಯನ್ನು ರಚಿಸಿ ಪ್ರಕಟಿಸಿದರು. ೧೯೨೮ರಿಂದ ಈಚೆಗೆ ಅನೇಕರು ವೇಮನನನ್ನು ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆದರೆ ಶರ್ಮರ ಪುಸ್ತಕಕ್ಕಿಂತ ಉತ್ತಮವಾದ ಗ್ರಂಥವು ಪ್ರಕಟವಾಗಿಲ್ಲ ಎಂಬುದು ಪಂಡಿತರೆಲ್ಲರೂ ಆಮೋದಿಸಿರುವ ಮಾತು.

ಅವರ ನಾಟಕೋಪನ್ಯಾಸಮುಲು ೧೯೩೫ರಲ್ಲಿ ಹೊರಬಂದ ಗ್ರಂಥ. ಇದು ಕೂಡ ಉಪನ್ಯಾಸಗಳ ಸಂಕಲನವೇ. ಈ ಉಪನ್ಯಾಸ ಕಾರ್ಯಕ್ರಮವು ಬಳ್ಳಾರಿಯಲ್ಲಿ ಸುಪ್ರಸಿದ್ಧ ನಾಟಕ ಕರ್ತೃಗಳಾದ ಧರ್ಮವರಂ ಕೃಷ್ಣಮಾಚಾರ್ಯ, ಕೋಲಾಚಲಂ ಶ್ರೀನಿವಾಸ ರಾವ್‌ರವರ ಸ್ಮಾರಕೋತ್ಸವ ಸಂದರ್ಭದಲ್ಲಿ ನಡೆಯಿತು. ಈ ಉಪನ್ಯಾಸಗಳಲ್ಲಿ ನಾಟಕ ಕಲೆಗೆ ಸಂಬಂಧಪಟ್ಟ ಅನೇಕ ವಿಷಯಗಳನ್ನೂ, ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ಮುಖ್ಯವಾದುವು ನಾಟಕದಲ್ಲಿ ಗೇಯಗಳು, ಪಾತ್ರ ನಿರ್ವಹಣೆಯಲ್ಲಿ ಸ್ತ್ರೀಯರ ಪಾತ್ರ, ಪ್ರಾಚ್ಯ ಪಾಶ್ಚಾತ್ಯ ನಾಟಕ ಪದ್ಧತಿಗಳು, ವಿಷಾದಾಂತ ನಾಟಕಗಳು, ನಾಟಕಗಳಲ್ಲಿ ನೀತಿ ಬೋಧೆ ಮುಂತಾದುವು.

ಸಾರಸ್ವತಾಲೋಕಮು: ತೆಲುಗು ಸಾರಸ್ವತಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳನ್ನು ಕುರಿತ ವಿಮರ್ಶಾತ್ಮಕ ಲೇಖನಗಳ ಸಂಕಲನ ಈ ಗ್ರಂಥ. ಇದರಲ್ಲಿ ತೆನಾಲಿರಾಮಕೃಷ್ಣನ ಪಾಂಡುರಂಗ ಮಾಹಾತ್ಮ್ಯದಲ್ಲಿ ನಿಗಮಶರ್ಮನ ಅಕ್ಕಳ ಪಾತ್ರ, ಕೃಷ್ಣದೇವರಾಯರ ಕಾಲದ ರಸಿಕತೆ, ರಂಗನಾಥರಾಮಾಯಣದ ಕರ್ತೃತ್ವ ಪ್ರಶ್ನೆ, ತಿಕ್ಕನ್ನನ ಉತ್ತರರಾಮ ಚರಿತ್ರೆಯಲ್ಲಿ ಸೀಥೆಯ ಪಾತ್ರ, ಮೊದಲಾದ ವಿಷಯಗಳ ಬಗ್ಗೆ ವಿಮರ್ಶಾತ್ಮಕ ಲೇಖನಗಳಿವೆ. ಸಾರಸ್ವತಾಲೋಕಮು ಗ್ರಂಥವು ತೆಲುಗುನಾಡಿನ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸತತವಾಗಿ ಅನೇಕ ವರ್ಷಗಳು ಪಠ್ಯಗ್ರಂಥವಾಗಿತ್ತು. ಮಾತ್ರವಲ್ಲದೆ ಶಾಲಾಕಾಲೇಜುಗಳ ಪಠ್ಯಗ್ರಂಥಗಳಲ್ಲಿ ಪ್ರೌಢಶಾಲೆಯಿಂದ ಮೊದಲುಗೊಂಡು ಎಲ್ಲಾ ಹಂತಗಳಲ್ಲೂ ಶರ್ಮರ ಸಾರಸ್ವತಲೋಕದಿಂದ ಆರಿಸಿದ ಗದ್ಯ ಲೇಖನವೊಂದನ್ನು ಸೇರಿಸಿಯೇ ಇರುತ್ತಾರೆ. ಆದ್ದರಿಂದ ರಾಳ್ಲಪಲ್ಲಿಯವರ ಸಾಹಿತ್ಯವನ್ನು ಅರಿಯದವರು ಬಹಳ ಕಡಿಮೆ.

ಸಂಸ್ಕೃತ ಪ್ರಾಕೃತ ಕಾವ್ಯಗಳ ಅನುವಾದ: ಶರ್ಮರು ತಾರುಣ್ಯ ವಯಸ್ಸಿನಲ್ಲೇ ಕಾಳಿದಾಸನ ರಘುವಂಶ, ಭಾಸನ ಸ್ವಪ್ನವಾಸವದತ್ತ, ಮೊದಲಾದ ಸಂಸ್ಕೃತ ಕಾವ್ಯ-ನಾಟಕಗಳನ್ನು ತೆಲುಗಿಗೆ ಭಾಷಾಂತರ ಮಾಡಿದಂತೆ ಕಾಣುತ್ತದೆ. ಅನುವಾದದಲ್ಲಿ ಮೂಲಗ್ರಂಥದ ವಿಶಿಷ್ಟಗುಣಗಳು ಪ್ರತಿಬಿಂಬಿತವಾಗಲಿಲ್ಲವೆಂಬ ಅತೃಪ್ತಿಯುಂಟಾಗಿ ಅವನ್ನು “ಗೆದ್ದಲು ಪಾಲು ಮಾಡಿದೆ” ಎಂದು ಅವರೇ ಹೇಳಿಕೊಂಡಿದ್ದಾರೆ. ಇಂತಹ ಗ್ರಂಥನಾಶಕ್ಕೊಳಗಾಗದೆ ಉಳಿದುಕೊಂಡವು (ನಮ್ಮ ಅದೃಷ್ಟ!) ಕೆಲವಿದೆ.

ಅವರು ತೆಲುಗಿಗೆ ಭಾಷಾಂತರಿಸಿದ ಗ್ರಂಥಗಳಲ್ಲಿ “ಶಾಲಿವಾಹನ ಗಾಥಾ ಸಪ್ತಶತೀಸಾರಮು” ಅತ್ಯುತ್ತಮವಾದ ಕೃತಿಯೆಂದು ಪರಿಗಣಿತವಾಗಿದೆ. “ಶಾಲಿವಾಹನ ಗಾಥಾ ಸಪ್ತಶತಿ” ಎಂಬ ಪ್ರಾಕೃತ ಗ್ರಂಥವು ಆರ್ಯಾವೃತ್ತದಲ್ಲಿ ಬರೆಯಲ್ಪಟ್ಟಿದೆ. ಅನೇಕ ಸಹಸ್ರ ಗಾಥೆಗಳಲ್ಲಿ ೭೦೦ನ್ನು ಸಂಗ್ರಹಿಸಿದ ‘ಶಾಲಿವಾಹನ ಗಾಥಾ ಸಪ್ತಶತಿ’ಯಿಂದ ೩೯೫ ಗಾಥೆಗಳನ್ನು ಆರಿಸಿ, ತೆಲುಗಿಗೆ ಅನುವಾದ ಮಾಡಿ “ಶಾಲಿವಾಹನ ಗಾಥಾ ಸಪ್ತಶತೀಸಾರಮು” ಎಂಬ ಶೀರ್ಷಿಕೆಯುಳ್ಳ ಗ್ರಂಥವನ್ನು ರಾಳ್ಲಪಲ್ಲಿ ಅನಂತಕೃಷ್ಣ ಶರ್ಮರು ೧೯೩೧ರಲ್ಲಿ ಪ್ರಕಟಿಸಿದರು. ಕೆಲವು ವರ್ಷಗಳ ನಂತರ ಜರ್ಮನಿಯ ಪ್ರಾಕೃತಭಾಷಾ ಪಂಡಿತ ‘ವೀಬರನು ಪ್ರಕಟಿಸಿದ ಪ್ರತಿಯನ್ನು ನೋಡಿ, ಇನ್ನೂ ಕೆಲವು ಗಾಥೆಗಳನ್ನು ಅನುವಾದ ಮಾಡಿ ಸೇರಿಸಿ. ೧೯೬೪ರಲ್ಲಿ “ಪರಿವರ್ಧಿತ ಸಂಸ್ಕರಣ” ಮಾಡಿದರು. ಇದನ್ನು ಆಂಧ್ರ ಸಾರಸ್ವತ ಪರಿಷತ್ತು ಪ್ರಕಟಿಸಿದ್ದಾರೆ.

ಅನಂತಕೃಷ್ಣ ಶರ್ಮರು ತೆಲುಗಿಗೆ ಅನುವಾದ ಮಾಡಿರುವ ಇತರ ಗ್ರಂಥಗಳು ಸುಂದರ ಪಾಂಡ್ಯನ ಆರ್ಯಾ ಮತ್ತು ಜಾಯಪ ಸೇನಾನಿಯ ನೃತ್ತರತ್ನಾವಳಿ, ವೇದಾಂತ ದೇಶಿಕರ ಸ್ತೋತ್ರರತ್ನ ಅಭೀತಸ್ತವವನ್ನು ಕೂಡ ತೆಲುಗಿಗೆ ತರ್ಜುಮೆ ಮಾಡಿದ್ದಾರೆ.

ತೆಲುಗು ಗ್ರಂಥಗಳ ಸಂಪಾದನೆ: ಈ ವಿಭಾಗದಲ್ಲಿ ಹೆಸರಿಸಬೇಕಾದ ಪ್ರಧಾನ ಗ್ರಂಥಗಳು, ತೆನಾಲಿ ರಾಮಕೃಷ್ಣನ ಪಾಂಡುರಂಗ ಮಾಹಾತ್ಮ್ಯಮು (ಸಹ ಸಂಪಾದಕರು ಶ್ರೀ ಗೌರಿಪೆದ್ದಿ ರಾಮಸುಬ್ಬಶರ್ಮ) ಬಮ್ಮೆರ ಪೋತನನ ಭಾಗವತ, ಬ್ರಹ್ಮಶ್ರೀ, ಸುಬ್ಬರಾಮ ದೀಕ್ಷಿತರ “ಸಂಗೀತ ಸಂಪ್ರದಾಯ ಪ್ರದರ್ಶಿನಿ”, ತಾಳ್ಲಪಾಕ ಅನ್ನಮಾಚಾರ್ಯನ ಆಧ್ಯಾತ್ಮಿಕ ಮತ್ತು ಶೃಂಗಾರ ಸಂಕೀರ್ತನೆಗಳು.

ಕನ್ನಡ ಸಾಹಿತ್ಯಕ್ಕೆ ರಾಳ್ಲಪಲ್ಲಿಯವರ ಕೊಡುಗೆ: ಕನ್ನಡ ಭಾಷೆಯಲ್ಲಿ ಪ್ರಕಟಿತವಾಗಿರುವ ಅವರ ಗ್ರಂಥಗಳು ಪ್ರಧಾನವಾಗಿ ಎರಡು: ಗಾನಕಲೆ ಹಾಗೂ ಸಾಹಿತ್ಯ ಮತ್ತು ಜೀವನ ಕಲೆ. ಈ ಎರಡೂ ಬಹುತೇಕ ಅವರು ಸಂಗೀತ, ಸಾಹಿತ್ಯಗಳ ಬಗ್ಗೆ ತೆಲುಗಿನಲ್ಲಿ ಪ್ರಕಟಿಸಿರುವ ಲೇಖನಗಳ ಕನ್ನಡ ಅನುವಾದಗಳ ಸಂಕಲನಗಳು ಕೆಲವು ಅವರೇ ಕನ್ನಡಿಸಿದ ಲೇಖನಗಳು. ಒಟ್ಟಾರೆ, ‘ಗಾನಕಲೆ’ಯಲ್ಲಿ ಸಂಗೀತಕ್ಕೆ ಸಂಬಂಧ ಪಟ್ಟ ಉಪನ್ಯಾಸಗಳೂ, ‘ಸಾಹಿತ್ಯ ಮತ್ತು ಜೀಔನ ಕಲೆ’ಯಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ವಿಷಯಗಳೂ ಸೇರಿವೆ. ಗಾನಕಲೆಯಲ್ಲಿ ಮೈಸೂರಿನ ಸಂಗೀತ ದಿಗ್ಗಜಗಳಾಗಿದ್ದ ವೈಣಿಕ ಶಿಖಾಮಣಿ ಶೇಷಣ್ಣನವರು, ಗಾನವಿಶಾರದ ಬಿಡಾರಂ ಕೃಷ್ಣಪ್ಪ ಮೊದಲಾದವರ ಕಲೆ ಪ್ರತಿಭೆ, ಸಾಧನೆಗಳನ್ನೂ, ಕರ್ನಾಟಕ, ಸಂಗೀತದ ಶ್ರೇಷ್ಠ ಬಯಕಾರರಾದ ತ್ಯಾಗರಾಜ, ಶ್ಯಾಮಾಶಾಸ್ತ್ರಿ, ಮುತ್ತುಸ್ವಾಮಿ ದೀಕ್ಷಿತ, ಸ್ವಾತಿ ತಿರುನಾಳರ ಕಲ್ಪನಾ ಪ್ರತಿಭೆ, ಧಾತು ಮಾತುಗಳ ವೈಶಿಷ್ಟ್ಯ, ಭಕ್ತಿ ಮೊದಲಾದ ಗುಣಗಳ ವಿಶ್ಲೇಷಣೆಯನ್ನೂ ಕಾಣಬಹುದು. ಹೈಂದವ, ಪಾಶ್ಚಾತ್ಯಾ ಕರ್ನಾಟಕ ಹಿಂದುಸ್ತಾನಿ ಸಂಗೀತ ಪದ್ಧತಿಗಳು, ನಮ್ಮ ದೇಶದ ಸಂಗೀತ ವಾದ್ಯಗಳು, ಮೊದಲಾದ ಸಮಸ್ಯೆಗಳ ಬಗ್ಗೆ ತುಲನಾತ್ಮಕವಾದ, ವಿಮರ್ಶಾತ್ಮಕವಾದ ಲೇಖನಗಳಿವೆ. ‘ಸಾಹಿತ್ಯ ಮತ್ತು ಜೀವನ ಕಲೆ’ ಗ್ರಂಥದಲ್ಲಿ ‘ಕಲೆ’ಯ ಬಗ್ಗೆ ತಮ್ಮದೇ ಆದ ಒಂದು ಸಿದ್ಧಾಂಥವನ್ನು ಪ್ರತಿಪಾದಿಸಿದ್ದಾರೆ. ‘ಕಲೆಯ ವಿಶಿಷ್ಟ ಧರ್ಮ ಲಯ’, ‘ಲಯ’ ಎಂದರೆ’ ‘ಸಮತೆ’ ಎಂಬ ತಮ್ಮ ಸಿದ್ಧಾಂತವನ್ನು ದೀರ್ಘವಾಗಿ, ಸೋದಾಹರಣವಾಗಿ ಚರ್ಚೆ ಮಾಡಿದ್ದಾರೆ. ಈ ಸಿದ್ಧಾಂತವು ಸಂಗೀತ ಕಲೆಗೆ ಸೀಮಿತವಾಗದೆ ಸಮಸ್ತ ಕಲಾ ಪ್ರಕಾರಗಳಿಗೂ ಅನ್ವಯಿಸುವ ವಿಶಾಲ ದೃಷ್ಟಿಯನ್ನೊಳಗೊಂಡಿದೆ.

ಮೈಸೂರು, ಬೆಂಗಳೂರು ಆಕಾಶವಾಣಿಗಳ ಮೂಲಕ ಅನಂತ ಕೃಷ್ಣಶರ್ಮರ ಅನೇಕ ಕನ್ನಡ ಲೇಖನಗಳು ಪ್ರಸಾರಗೊಂಡಿವೆ. ಅವುಗಳಲ್ಲಿ ಕೆಲವು ಮಾತ್ರ ಪ್ರಕಟಿತವಾಗಿವೆ.

ತೆಲುಗು ಸಾರಸ್ವತ ಪ್ರಪಂಚದಲ್ಲಿ ದೇಶವ್ಯಾಪಿ ಪ್ರಖ್ಯಾತರಾಗಿದ್ದ ರಾಳ್ಲಪಲ್ಲಿಯವರಿಗೆ ತೆಲುಗಿಗಿಂತ ಸಂಸ್ಕೃತದ ಮೇಲೆಯೇ ಹೆಚ್ಚು ಪ್ರೇಮ. ಬಾಲ್ಯದಲ್ಲಿ ರಚಿಸಿದ ಹಾಡುಗಳೆಲ್ಲಾ ಸಂಸ್ಕೃತದಲ್ಲೇ ಇವೆ. ಅವರ ಮೊಟ್ಟ ಮೊದಲನೆಯ ಸಂಸ್ಕೃತ ಗೇಯವಾದ ‘ಜಲರಾಶಿಬಲೇ ಲೋಲೇ’ ಎಂಬ ಲಕ್ಷ್ಮೀದೇವಿಯನ್ನು ಉದ್ದೇಶಿಸಿ ರಚಿಸಿದ ಪೂಜೆ ಹಾಡು ಬರೆದಾಗ ಅವರ ವಯಸ್ಸು ೧೩-೧೪ ವರ್ಷಗಳೆಂದು ಕೇಳಿದ್ದೇನೆ. ಯೌವನ, ಮಧ್ಯಮ, ಪ್ರೌಢ ಮತ್ತು ಪಕ್ವವಯಸ್ಸುಗಳಲ್ಲಿ ಅವರು ರಚಿಸಿದ ಕೀರ್ತನಗಳೆಲ್ಲಾ, ಒಂದೆರಡು ಅಪವಾದಗಳ ಹೊರತು, ಸಂಸ್ಕೃತದಲ್ಲೇ ಇವೆ. ಅವರ ಸಂಸ್ಕೃತ ಶೈಲಿಯು ಸರಳ, ಸುಂದರ, ಶುದ್ಧ, ಮಧುರ ಮತ್ತು ಶಾಸ್ತ್ರ ಸಮ್ಮತ. ಪಾಂಡಿತ್ಯ ಪ್ರದರ್ಶನ ಅವರ ಉದ್ಧೇಶವಲ್ಲ. ಸಂಗೀತ ರಚನೆಗಳನ್ನು ಹೊರತು ಪಡಿಸಿದರೆ ಅವರ ಸಂಸ್ಕೃತ ಬರಹಗಳು ಕೆಲವೇ ಇವೆ. ಇವೆಲ್ಲವನ್ನೂ ‘ಅನಂತ ಭಾರತಿ’ ಎಂಬ ಸಣ್ಣ ಹೊತ್ತಿಗೆಯಲ್ಲಿ ‘ಸುರಭಾರತೀ ಪ್ರಕಾಶನ’ದವರು ಪ್ರಕಟಿಸಿದ್ದಾರೆ. ಈ ಪುಸ್ತಕದಲ್ಲಿ ೧. ಶ್ರೀ ಮಹಿಶೂರ ರಾಜ್ಯಾಭ್ಯುದಯಾದರ್ಶಃ ಎಂಬ ಚಂಪೂ ಕಾವ್ಯ ೨. ಶ್ರೀ ಗೀತಗೋವಿಂದೇ ಪಾಠ ಪರೀಕ್ಷಣಂ ಎಂಬ ವಿಮರ್ಶೆ ೩. ವಾಲ್ಮೀಕೇಃಗೇಯಪರಿಸ್ಪಂದಃ ಎಂಬ ಲೇಖನ ಮತ್ತು ೪. ನ್ಯಾಸ ಕಲಾನಿಧಿಸ್ತವಃ ಎಂಬ ಸ್ತೋತ್ರಾವಳಿಯು ಸೇರಿವೆ.

ಮೈಸೂರು ರಾಜ್ಯದಲ್ಲಿ ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಸಾಧಿಸಿದ್ದ ಅಭ್ಯುದಯವನ್ನು ಸಂಸ್ಕೃತ ಭಾಷೆಯಲ್ಲಿ ಬರೆಯಬೇಕೆಂದು ಒಂದು ಕವಿತಾಪರೀಕ್ಷೆ ನಡೆಯಿತು. ಕ್ರೋಧನ ಸಂ. ಚೈತ್ರ ಶುಕ್ಲ ದ್ವಿತೀಯ, ಗುರುವಾರದಂದು ನಡೆದ ಈ ಪರೀಕ್ಷೆಯಲ್ಲಿ ೪೦ ಕವಿಗಳು ಸ್ಪರ್ಧಿಸಿದ್ದರು. ಅನಂತಕೃಷ್ಣಶರ್ಮರು ಬರೆದ ‘ಮಹಿಶೂರ ರಾಜ್ಯಾಭ್ಯುದಯಾ ದರ್ಶಃ’ ಚಂಪೂ ಕಾವ್ಯಕ್ಕೆ ಪ್ರಥಮ ಬಹುಮಾನವನ್ನು ಕೊಡಲಾಯಿತು. ೮೩ ಪದ್ಯಗಳು ನಾಲ್ಕುಗದ್ಯ ಭಾಗಗಳಿಂದ ಕೂಡಿದ ಈ ಪ್ರಬಂಧವನ್ನು ೨೯.೪.೧೯೨೫ರಲ್ಲಿ ದೇವನಾಗರಿ ಲಿಪಿಯಲ್ಲಿ ಪ್ರಕಟಿಸಲಾಯಿತು.

ಶರ್ಮರ ಸಮಕಾಲೀನ, ಸಮವಯಸ್ಕ ಸಂಸ್ಕೃತ ಪಂಡಿತರೂ ಪೆನುಗೊಂಡೆ ಪ್ರೌಢಶಾಲೆಯಲ್ಲಿ ಉಪಾಧ್ಯಾಯರೂ ಆಗಿದ್ದ ಶ್ರೀ ಬುಕ್ಕಪಟ್ಟಣಂ ಅಣ್ಣಯಾಚಾರ್ಯಾರು ರಚಿಸಿದ ಒಂದು ಪುಸ್ತಕಕ್ಕಾಗಿ ಆಚಾರ್ಯರ ಕೋರಿಕೆಯ ಮೇರೆಗೆ ರಚಿಸಿದ ಸ್ತೋತ್ರರತ್ನವು, “ನ್ಯಾಸ ಕಳಾನಿಧಿಸ್ತವ”. ಇದರ ಕೊನೆಯಲ್ಲಿ, “ಸ್ವಯಂ ಸ್ವಪ್ರೀತಯೇ ಶ್ರೀಮಾನ್‌ಇಮಂನ್ಯಾಸಕಳಾನಿಧಿಸ್ತವಂ ಸದಯೋಸನಂತಕೃಷ್ಣಸ್ಯ ವದನಾದುದದೀಧರತ್‌”-ಶ್ರೀಮನ್ನಾರಾಯಣನು ತಾನೇ ತನ್ನ ಪ್ರೀತಿಗೋಸ್ಕರವೇ ಈ ನ್ಯಾಸಕಳಾನಿಧಿಸ್ತವವನ್ನು ಅನಂತ ಕೃಷ್ಣನ ವದನದ ಮೂಲಕ ಹೇಳಿಸಿದ್ದಾನೆ ಎಂದು ವಿನಯದಿಂದ ಹೇಳಿಕೊಂಡಿದ್ದಾರೆ. ಈ ಸ್ತೋತ್ರದಲ್ಲಿ ಭಗವದ್ಭಕ್ತಿ, ಪ್ರಾರ್ಥನೆಯ ಬಗ್ಗೆ ವಿಶಿಷ್ಟ ಭಾವನೆಗಳನ್ನೂ, ದೃಷ್ಟಿಕೋನವನ್ನೂ ಕಾಣಬಹುದು.

ಕರ್ನಾಟಕ ಸಂಗೀತ: ರಾಳ್ಲಪಲ್ಲಿಯವರ ಸಾಧನೆಗಳನ್ನು ಮೂರು ಪ್ರಕಾರಗಳಾಗಿ ವಿಂಗಡಿಸಬಹುದು ಅವುಗಳೆಂದರೆ ಗಾಯನ, ಸಂಶೋಧನೆ,ಗೇಯ ರಚನೆ.

ತೆಲುಗುನಾಡಿನಲ್ಲಿ ಸಾರಸ್ವತ ಸಾರ್ವಭೌಮರೆಂದು ಪ್ರಸಿದ್ಧರಾಗಿದ್ದ ರಾಳ್ಲಪಲ್ಲಿ ಅನಂತಕೃಷ್ಣಶರ್ಮರು ಕನ್ನಡ ನಾಡಿನ ಜನತೆಗೆ ಸಂಗೀತಗಾರರೆಂದೇ ಹೆಚ್ಚು ಪರಿಚಿತರು. ವಾಸ್ತವವಾಗಿ ಅವರು ಸಂಗೀತ ಸಾಹಿತ್ಯಗಳೆರಡರಲ್ಲೂ ಅಸಾಧಾರಣ ಪ್ರತಿಭೆಯನ್ನು ಸಾಧಿಸಿದ್ದ ಸವ್ಯಸಾಚಿ. ಸಂಗೀತ ಪ್ರಪಂಚದಲ್ಲಿ ಕೆಲವರು ಶಾಸ್ತ್ರ ಪಂಡಿತರು. ಅನುಷ್ಠಾತರಾಗಿ ಅವರಿಗೆ ಹೆಸರಿಲ್ಲ. ವೇದಿಕೆಯ ಮೇಲೆ ಗಾಯನ ವಾದನ ಕಲೆಯನ್ನು ಪ್ರದರ್ಶಿಸಿ ಜನಪ್ರಿಯತೆಯನ್ನು ಗಳಿಸಿರುವುದಿಲ್ಲ. ಇನ್ನೂ ಕೆಲವರು ಸಮರ್ಥ ಅನುಷ್ಠಾತರು. ಶ್ರೋತೃ, ಪ್ರೇಕ್ಷಕರ ಮುಂದೆ ಹಾಡಿ, ನುಡಿಸಿ ಪ್ರಖ್ಯಾತಿಯನ್ನು ಸಂಪಾದಿಸಿಕೊಂಡಿರುತ್ತಾರೆ. ಅವರ ಸಂಗೀತ ಶಾಸ್ತ್ರ ಜ್ಞಾನವು ಮಿತವಾಗಿರಬಹುದು. ಸಂಗೀತವು ಪ್ರಧಾನವಾಗಿ ಅನುಷ್ಠಾನ ಕಲೆ (Performing Art). ಆದ್ದರಿಂದ ಹಾಡಿ, ನುಡಿಸಿ ತೋರಿಸಬಲ್ಲ ಕಲಾವಿದರಿಗೆ ಜನಸಾಮಾನ್ಯರಲ್ಲಿ ಹೆಚ್ಚು ಗೌರವ. ಅನುಷ್ಠಾನ, ಶಾಸ್ತ್ರಜ್ಞಾನಗಳೆರಡರಲ್ಲೂ ಸಮಾನ ಸಾಮರ್ಥ್ಯಗಳನ್ನು ಸಾಧಿಸಿದ ಕಲಾವಿದರು ವಿರಳ.

ಹಾಡುಗಾರಿಕೆಯಲ್ಲಿ ಶಿಕ್ಷಣ ಪಡೆದ ಶರ್ಮರು ಗಾಯಕರಾಗಿ ಹೆಸರು ಗಳಿಸಲಿಲ್ಲ. ಇದಕ್ಕೆ ಮುಖ್ಯ ಕಾರಣಗಳು ಎರಡು. ಮೊದಲನೆಯದು ಅವರು ಗುರು ಬಿಡಾರಂ ಕೃಷ್ಣಪ್ಪನವರಿಗೆ ಮಾಡಿದ ವಾಗ್ದಾನ. ಶಿಷ್ಯನನ್ನಾಗಿ ಸ್ವೀಕರಿಸುವುದಕ್ಕೆ ಮುಂಚೆ ಆತನಿಂದ ಸಂಗೀತವನ್ನು ಜೀವನನೋಪಾಯಕ್ಕಾಗಿ, ಸಂಪಾದನೆಗಾಗಿ ಬಳಸಬಾರದೆಂದು ನಿಯಮ ಮಾಡಿಸಿಕೊಂಡರು. ಪ್ರತಿಭಾವಂತ, ಸಾಹಿತ್ಯ ಪಂಡಿತನಾಗಿದದ ಆತನಿಗೆ ಉದ್ಯೋಗವಕಾಶಗಳಿಗೆ  ಏನೂ ಕೊರೆತೆ ಇರುವುದಿಲ್ಲ. ಆದಕಾರಣ ಆತನು ಸಂಗೀತವನ್ನೇ ಅವಲಂಬಿಸಿದ ವಿದ್ಯಾರ್ಥಿಗಳೊಡನೆ ಅವರ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಯಬಾರದು ಎಂದು ಗಾನವಿಶಾರದ ಅಭಿಪ್ರಾಯವಿದ್ದಂತೆ ಕಾಣುತ್ತದೆ. ಶರ್ಮರು ಒಂದು ಕ್ಷಣವೂ ಹಿಂದುಮುಂದು ನೋಡದೆ ಗುರುಗಳ ನಿಯಮವನ್ನು ಒಪ್ಪಿಕೊಂಡರು. ಕೊಟ್ಟ ಮಾತಿಗೆ ತಪ್ಪದಂತೆ ಜೀವಮಾನವೆಲ್ಲಾ ನಡೆದುಕೊಂಡರು. ನಾನು ಹೈಸೂಲ್ಕಿನಲ್ಲಿ ಓದುತ್ತಿದ್ದ ಕಾಲ. ಒಂದು ದಿನ ಸಂಜೆ ನನ್ನನ್ನು ಮುತ್ತಯ್ಯ ಭಾಗವತರ ಮನೆಗೆ ಕರೆದುಕೊಂಡು ಹೋಗಿದ್ದರು. ಭಾಗವತರು ಹೇಳಿದರು. “ಶರ್ಮ, ನೀವು ಅರಮನೆಯಲ್ಲಿ ಮಹಾರಾಜರ ಸಭೆಯಲ್ಲಿ ಹಾಡಬೇಕು. ನಾನು ಅವರೊಡೆನೆ ಮಾತನಾಡಿದ್ದೇನೆ. ಅವರು ಒಪ್ಪಿಗೆ ಕೊಟ್ಟಿದ್ದಾರೆ. ಕಚೇರಿ ಯಾವಾಗ ಏರ್ಪಾಡು ಮಾಡೋಣ, ಹೇಳಿ” ಅಂದರು. ಶರ್ಮರು ಹೇಳಿದರು, “ಭಾಗವತರೇ, ನಿಮ್ಮ ಅಭಿಮಾನಕ್ಕೆ ನಾನು ಋಣಿ, ಆದರೆ ನಾನು ಹಾಡಲಾರೆ, ಕ್ಷಮಿಸಿ” ಎಂದಷ್ಟೇ ಉತ್ತರಿಸಿದರು. ಕಾರಣ ಹೇಳಲಿಲ್ಲ. ಕಾರಣ ನನಗೂ ಗೊತ್ತಿರಲಿಲ್ಲ. ಗುರುಗಳೊಂದಿಗೆ ಮಾಡಿಕೊಂಡಿದ್ದ ನಿಯಮವನ್ನು ರಹಸ್ಯವಾಗಿಟ್ಟಿದ್ದರು. ತಮ್ಮ ದೊಡ್ಡ ಮಗಳಿಗೆ ಮಾತ್ರ, ಅನೇಕ ವರ್ಷಗಳ ನಂತರ ತಿರುಪತಿಯಲ್ಲಿದ್ದಾಗ ಹೇಳಿಕೊಂಡಂತೆ ಕಾಣುತ್ತದೆ. ಎರಡನೆಯ ಕಾರಣ. ಶರ್ಮರಿಗೆ ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಹುಟ್ಟಿಕೊಂಡ ಮಹಾಮಾರಿ ಇನ್‌ಪ್ಲುಯೆಂಜಾ ಖಾಯಿಲೆಯು ತಗಲಿ, ಕೆಲವು ವರ್ಷಗಳ ಕಾಲ ನರಳಿದ್ದರು. ಆ ಕಾಲದಲ್ಲಿ ಅವರ ಕಂಠ ಸೌಭಾಗ್ಯವು ಕುಂದಿಹೋಗಿತ್ತು. ಕೆಲವು ವರ್ಷಗಳ ನಂತರ ವೈದ್ಯ ಚಿಕಿತ್ಸೆಯ ಫಲವಾಗಿ ಕಂಠ ಮಾಧುರ್ಯವನ್ನು ಮತ್ತೆ ಪಡೆದುಕೊಂಡಿದ್ದರು. ಆದಾಗ್ಯೂ ಗುರುಗಳಿಗೆ ಕೊಟ್ಟ ವಚನವನ್ನು ಪಾಲಿಸಿಕೊಂಡೇ ಬಂದರು.

ಅವರ ಗಾಯನ ಪ್ರತಿಭೆಯು ಅನೇಕರಿಗೆ ತಿಳಿದಿತ್ತು. ಅಂಥವರು ಶರ್ಮರ ಮನೆಗೆ ಬಂದು, ಅವರಿಂದ ಹಾಡಿಸಿಕೇಳಿ ಆನಂದಪಡುತ್ತಿದ್ದರು. ಅಂಥವರ ಪೈಕಿ ಕೆಲವರು ಬಹಳ ಹಿರಿಯ ಅಧಿಕಾರ, ಸ್ಥಾನಗಳಲ್ಲಿದ್ದವರು. ಇಂತಹ ಅಭಿಮಾನಿಗಳಲ್ಲಿ ನಾನು ಕಂಡಂತೆ, ವೈಸ್‌ ಛಾನ್ಸಲರ್ ಎನ್‌.ಎಸ್‌. ಸುಬ್ಬರಾಯರು, ಡಿ.ಸಿ. ಗಳಾಗಿದ್ದ ಟಿ.ಜಿ. ರಾಮಯ್ಯರ್ ದಂಪತಿಗಳು ಸೇರಿದ್ದರು. ಶರ್ಮರ ಮನೆಯಲ್ಲಿ ಪ್ರತಿ ಶುಕ್ರವಾರ ಸಾಯಂಕಾಲ ‘ಭಜನೆ’ ಕಾರ್ಯಕ್ರಮ ಇರುತ್ತಿತ್ತು. ಈ ಕಾರ್ಯಕ್ರಮಗಳಲ್ಲಿ ಮೈಸೂರಿನ ಮತ್ತು ಹೊರಗಿನ ಸಂಗೀತ ವಿದ್ವಾಂಸರು ಅನೇಕರು ಪಾಲ್ಗೊಂಡು ‘ಕಚೇರಿ’ ಮಾಡುತ್ತಿದ್ದರು. ಅವರ್ಯಾರು ಇಲ್ಲದ ದಿನಗಳಲ್ಲಿ ಶರ್ಮರೇ ಹಾಡುತ್ತಿದ್ದರು. ಅವರ ಹಾಡು ಕೇಳುವುದಕ್ಕಾಗಿಯೇ ಅನೇಕರು ಸಂಗೀತ ಪ್ರೇಮಿಗಳು ಬರುತ್ತಿದ್ದರು. ಅವರಲ್ಲಿ ಪ್ರಮುಖರು ವಿ. ಸೀತಾರಾಮಯ್ಯನವರು, ಬಿ. ವೆಂಕಟರಾಮಯ್ಯನವರು, ಆರ್.ಕೆ. ಪಟ್ಟಾಭಿರಾಮನ್‌ ಮತ್ತಿತರರು. ಈ ಸಂಗೀತ ಪ್ರೇಮಿಗಳು ತಮಗೆ ಪ್ರಿಯವಾದ ರಾಗಗಳನ್ನು ಕೃತಿಗಳನ್ನು ಕೇಳಬಯಸುತ್ತಿದ್ದರು. ವಿ.ಸೀ. ಯವರಿಗೆ ಕ್ಷೇತ್ರಜ್ಞಪದಗಳ ಬಗ್ಗೆ ಒಲವು. ಅವರು ಬಂದ ದಿನ ಕ್ಷೇತ್ರಜ್ಞನ ಎಕ್ಕಡಿನೇಸ್ತಮು, ಎಕ್ಕಡಿನೆನರು (ಸಾರಂಗ ರಾಗ), ಪೋಯಿರಮ್ಮನವೇ (ಕೇದಾರಗೌಳ) ಮಗುವ ತನಕೇಳಿಕಾ ಮಂದಿರಮು ವೆಡಲೆನ್‌(ಮೋಹನ ರಾಗ) ಅಥವಾ ಇನ್ನಾವುದಾದರೂ ಪದವನ್ನು  ತಪ್ಪದೆ ಹಾಡುತ್ತಿದ್ದರು. ಶರ್ಮರಂತೆ ಕ್ಷೇತ್ರಜ್ಞ ಪದಗಳನ್ನು ಮಧುರವಾಗಿ, ಭಾವಯುತವಾಗಿ, ಸಾಹಿತ್ಯ ಶುದ್ಧವಾಗಿ ಹಾಡಬಲ್ಲವರು ಇನ್ನಾರೂ ಇರಲಿಲ್ಲವೆಂದು ನಿರ್ಭಯವಾಗಿ ಹೇಳಬಹುದು. ಅಂತೆಯೇ, ಜಯದೇವನ ಅಷ್ಟಪದಿಗಳನ್ನು ಹಾಡಬಲ್ಲವರೂ ಯಾರೂ ಇರಲಿಲ್ಲ. ಪ್ರಳಯಪಯೋಧಿಜಲೇ (ಸೌರಾಷ್ಟ್ರ), ನಾಥಹರೇ ಜಗನ್ನಾಥ ಹರೇ (ಸಿಂಧು ಭೈರವಿ), ಸಂಚರದಧರ ಸುಧಾಮಧುರ ಧ್ವನಿ(ತೋಡಿ) ಮೊದಲಾದುವು ಅವರ ಮಧುರ ಕಂಠದಿಂದ, ತನ್ಮಯತೆಯನ್ನುಂಟು ಮಾಡುತ್ತಿದ್ದ ಜಯದೇವನ ಅಷ್ಟಪದಿಗಳು. ಶ್ರೋತೃಗಳು ಅವರಿಂದ ಅಪೇಕ್ಷಿಸುತ್ತಿದ್ದ ಇತರ ಗೇಯಗಳು ದೊರೆಸ್ವಾಮಯ್ಯನವರ ಶಿವತಾಮಡವ ಕೃತಿಗಳು: ಧೂರ್ಜಟಿ ನಟಿಂಚೆನೇ (ಗೌರಿ ರಾಗ) ಮತ್ತು ಆಡೆನಮ್ಮ ಹರುಡು(ಫರಜ್‌ರಾಗ). ಕನ್ನಡ ಹರಿದಾಸರ ಪೈಕಿ, ಕನಕದಾಸರ ಕೃತಿಗಳ ಬಗ್ಗೆ ಅವರಿಗೆ ವಿಶೇಷ ಅಭಿಮಾನ. ಭಜಿಸಿ ಬದುಕೆಲೋ ಮಾನವ (ಶಂಕರಾಭರಣ) ಮಗನೆಂದಾಡಿಸುವಳು (ಆನಂದ ಭೈರವಿ) ಹಾಡುಗಳನ್ನು ಅನುಭವಿಸಿ ಹಾಡುತ್ತಿದ್ದರು. ಪುರಂದರ ದಾಸರ ಮಾನವ ಜನ್ಮ ದೊಡ್ಡದು (ಪೂರ್ವಿ ಕಲ್ಯಾಣಿ) ಏನುಧನ್ಯಳೋಲಕುಮಿ (ತೋಡಿ) ಹಾಡುಗಳ ಬಗ್ಗೆಯೂ ಅವರಿಗೆ ವಿಶೇಷ ಅಭಿಮಾನ. ಶುಕ್ರವಾರ ಭಜನೆಯ ಕೊನೆಯಲ್ಲಿ ಮಂಗಳ ಹಾಡುವುದಕ್ಕೆ ಮುಂಚೆ ಸಾಮಾನ್ಯವಾಗಿ ತಪ್ಪದೆ ಹಾಡುತ್ತಿದ್ದ ಪುರಂದರ ದಾಸರ ಪದ ಪಾವನ ಗುಣ ನಿಸ್ಸೀಮನ, ಭಾವುಕ ಹೃದಯಾಭಿರಾಮನ (ಕುರಂಜಿ ರಾಗ).

ಸಂಗೀತ ಲಕ್ಷಣ ಗ್ರಂಥಗಳ ಅಧ್ಯಯನ: ರಾಳ್ಲಪಲ್ಲಿಯವರ ಸಂಗೀತ ಶಾಸ್ತ್ರಜ್ಞಾನವು ವಿಶಾಲ, ವಿಪುಲ, ವಿಮರ್ಶಾತ್ಮಕ. ಅವರದು ವಿಕಾಸಾತ್ಮಕವಾದ ದೃಷ್ಟಿಕೋನ. ಈ ದಿಶೆಯಲ್ಲಿ ಅವರು ಸಂಪಾದಿಸಿಕೊಂಡಿದ್ದ ಜ್ಞಾನಭಂಡಾರವನ್ನು, ತಾಳ್ಲಪಾಕ ಪಾಟಲು ಗ್ರಂಥದ ಎರಡು ಸಂಪುಟಗಳಲ್ಲಿ ಅವರು ಬರೆದಿರುವ ಸುಮಾರು ೩೦ ರಾಗಗಳ ವಿಶ್ಲೇಷಣೆಯನ್ನು ಓದಿದವರಿಗೆ ಅವರ ಅಸಾಧಾರಣ ಸಿದ್ಧಿಯು  ಸಂಗ್ರಹವಾಗದೇ ಇರಲಾರದು. ಅವರ ರಾಗಲಕ್ಷಣ ವಿಶ್ಲೇಷಣೆಯು ಸಮಗ್ರ, ಸಂಗ್ರಹ, ಸುಗ್ರಾಹ್ಯ,ಅಸಂದಿಗ್ಧ. ಅವರ ಜ್ಞಾನವು ಶುಷ್ಕ ಪಾಂಡಿತ್ಯವಲ್ಲ. ರಾಗಗಳ ಬಗ್ಗೆ ಅವರು ವಿವರಿಸಿದ ಲಕ್ಷಣಗಳನ್ನೂ, ವಿಶೇಷ ಪ್ರಯೋಗಗಳನ್ನೂ, ಹಾಡಿ ಪ್ರಾಯೋಗಿಕವಾಗಿ ಪ್ರದರ್ಶಿಸಬಲ್ಲವರಾಗಿದ್ದರು. ಸಾಮವೇದದಿಂದ ಸುಬ್ಬರಾಮ ದೀಕ್ಷಿತ “ಸಂಗೀತ ಸಂಪ್ರದಾಯ ಪ್ರದರ್ಶಿನಿ’ಯ ವರೆಗಿನ ಎಲ್ಲಾ ಶಾಸ್ತ್ರ ಗ್ರಂಥಗಳನ್ನು ಅವರು ಓದಿ ಜೀರ್ಣಿಸಿಕೊಂಡಿದ್ದರು.

ವಾಗ್ಗೇಯಕಾರರಾಗಿ ಅನಂತ ಕೃಷ್ಣಶರ್ಮರು: ಬಾಲ್ಯದ ಗೇಯಗಳ ಹಂತವನ್ನು ದಾಟಿ ಶಾಸ್ತ್ರ ಸಮ್ಮತವಾದ ಸಮಗೀತ ಕೃತಿಗಳನ್ನು ರಚಿಸಬಲ್ಲ ಸಾಮರ್ಥ್ಯವು ಅವರಲ್ಲಿ ವಿಕಾಸಗೊಂಡಿತು. ಈ ಹಂತದಲ್ಲಿ ಅವರು ಬರೆದ ಮೊದಲನೆಯ ಕೃತಿಯು “ಗಾನರಸ ಮೂರ್ತಿ ತ್ಯಾಗರಾಜ ಪಾಟಲು ತೇನೆಲ ತೇಟಲು” ಎಂಬ ಕೇದಾರಗೌಳ ರಾಗ, ಆದಿತಾಳ, ಚೌಕನಡೆ, ತಾರಸ್ಥಾಯಿ ಷಡ್ಜದಲ್ಲಿ ಪ್ರಾರಂಭವಾಗುವ, ವಿಳಂಬ ಕಾಲದ ಕೃತಿ. ಇದನ್ನು ರಚಿಸಿದಾಗ ಅವರ ವಯಸ್ಸು ಸುಮಾರು ೧೮-೨೦ ವರ್ಷಗಳು. ಈ ಕೃತಿಯು ಗುರು ಕೃಷ್ಣಪ್ಪನವರಿಗೆ ಬಹಳ ಪ್ರಿಯವಾಗಿತ್ತೆಂದೂ, ಅದನ್ನು ಆಗಾಗ್ಗೆ ಶಿಷ್ಯನಿಂದ ಹಾಡಿಸಿ, ಕೇಳಿ ಆನಂದಬಾಷ್ಪಗಳನ್ನು ಸುರಿಸುತ್ತಿದ್ದರೆಂದೂ ಕೇಳಿದ್ದೇನೆ.

ಇದಾದ ನಂತರ ಶರ್ಮರು ಗೀತೆಗಳು, ಸ್ವರಜತಿ, ವರ್ಣ, ಮಧ್ಯಮ ವಿಳಂಬಕಾಲದ ಕೃತಿಗಳು, ಮಧುರ ಗೀತೆ, ತಿಲ್ಲಾನ, ಮಂಗಳಗಳನ್ನು ರಚಿಸಿದ್ದಾರೆ. ಅವರ ಕೃತಿಗಳ ಸಂಕಲನ ಪರಮಾನಂದ ಗಾನಸುಧಾ ಗ್ರಂಥವು ೨೦೦೨ರಲ್ಲಿ ಪ್ರಕಟಿತಗೊಂಡಿದೆ. ಅವರ ರಚನಾಪ್ರಕಾರಗಳಲ್ಲಿ ಇಷ್ಟೊಂದು ವೈವಿಧ್ಯತೆ ಇದ್ದರೂ,ಸಂಖ್ಯೆಯಲ್ಲಿ ಬಹು ಕಡಿಮೆ, ಇಪ್ಪತ್ತೈದಕ್ಕೂ ಕಡಿಮೆ. ತಮ್ಮ ಕೃತಿಗಳಿಗೆ ಅವರು ಪ್ರಚಾರ ನೀಡಲಿಲ್ಲ; ತಮ್ಮ ಕಚೇರಿಗಳಲ್ಲಿ ಹಾಡಲಿಲ್ಲ; ಮಿತ್ರರಿಗೆ ಕೂಡ ಹಾಡಿ ಕೇಳಿಸಲಿಲ್ಲ; ಅವುಗಳನ್ನು ಒಂದು ಕಡೆ ಬರೆದಿಡಲಿಲ್ಲ; ಅಚ್ಚು ಹಾಕಿಸಿ ಪ್ರಕಟಿಸಲಿಲ್ಲ. ಕೃತಿಯನ್ನು ಬರೆದು ಮುಗಿಸಿದ ನಂತರ, ತಮ್ಮ ಜವಾಬ್ದಾರಿಯು ಮುಗಿಯಿತೆಂದೂ, ನಂತರದ ಹೊಣೆಯು ತಮ್ಮಿಂದ ಬರೆಯಿಸಿದ ಭಗವಂತನದೆಂದೂ ನಂಬಿ ನಿಶ್ಚಿಂತರಾಗಿರುತ್ತಿದ್ದರು.

ಭಕ್ತಿರಸವೇ ಎಲ್ಲಾ ಶ್ರೇಷ್ಠ ಬಯಕಾರರ ಕೃತಿಗಳ ಮುಖ್ಯವಸ್ತು, ಶರ್ಮರ ಕೃತಿಗಳಲ್ಲೂ ಭಕ್ತಿಭಾವನೆಯೇ ಪ್ರಧಾನರಸ. ಆದರೆ ಅವರುತಮ್ಮ ಉಪಾಸ್ಯದೈವವನ್ನು “ಭಕ್ತಿ ಮುಕ್ತಿ”ಗಾಗಿ ಬೇಡಲಿಲ್ಲ. “ನನ್ನ ಬುದ್ಧಿಯನ್ನು ಪ್ರಚೋದಿಸು” (ಮಮ ಧೀಯಂ ಪ್ರಚೋದಯ) “ನನ್ನ ಪಾಪ ಸಂಚಯನವನ್ನು ಸದಾ ಉಪಶಮನ ಮಾಡು”(ಮಮದುರಿತತತಿಂ ಅನಿಶಂ ಉಪಶಮಯ);“ನನ್ನ ಮನಸ್ಸಿನ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಚೆಲ್ಲು” (ಮಮ ಮಾನಸಕುಹರಂ ಪ್ರದೀಪಯ) ಎಂಬುದಾಗಿ ಪ್ರಾರ್ಥಿಸಿಕೊಂಡಿದ್ದಾರೆ. ಅವರ ಕೃತಿಗಳು ಸುಪರಿಚಿತ ರಂಜಕ ರಾಗಗಳಾದ ಕೇದಾರ ಗೌಳ, ಆರಭಿ, ಮುಖಾರಿ, ಕಲ್ಯಾಣಿ, ಕಾಂಭೋಜಿ, ಬಿಲಹರಿ ರಾಗಗಳಲ್ಲೇ ಅಲ್ಲದೆ, ಹೆಚ್ಚು ಪ್ರಚಾರವಿಲ್ಲದ ಲಲಿತ ಪಂಚಮ, ಶುದ್ಧಶೀಮಂತಿನಿ, ಉಮಾಭರಣ ರಾಗಗಳಲ್ಲೂ ಅಳವಡಿಸಲ್ಪಟ್ಟಿವೆ. ಚತುರಶ್ರ, ತ್ರಿಶ್ರನಡೆಗಳಲ್ಲೂ, ಆದಿ, ರೂಪಕ, ಝಂಪ (ಖಂಡ ಛಾಪು), ತ್ರಿಪುಟ (ಮಿರ್ಶರ ಛಾಪು) ತಾಳಗಳಲ್ಲೂ ಅಳವಡಿಸಿರುವ ಕೃತಿಗಳಿವೆ.

ಬಾಲಕನಾಗಿದ್ದಾಗ ಬರೆದ ಹಾಡುಗಳಲ್ಲಿ ತಮ್ಮ ಕರ್ತೃತ್ವವನ್ನು ಸೂಚಿಸಲು ತಮ್ಮ ಹೆಸರನ್ನೇ ಚಿಕ್ಕದಾಗಿ “ಅನಂತಕೃತ” ಎಂದು ಹೇಳಿಕೊಂಡಿದ್ದಾರೆ. ಅವರ ಮೋಹನ ರಾಗದ ಮಂಗಳದ ಕೊನೆಯಲ್ಲಿ ಅಶ್ಮಪುರಿ(ರಾಳ್ಲಪಲ್ಲಿಗೆ ಸಂಸ್ಕೃತ) ನಿವಸದನಂತ’ ಎಂದು ಬರೆದು ಕೊಂಡಿದ್ದಾರೆ. ತಮ್ಮ ರಚನೆಗಳಲ್ಲಿ ಹೆಸರನ್ನು ಉಲ್ಲೇಖಿಸುವುದು ಅಹಂಕಾರ ಸೂಚಕವೆಂದು ಭಾವಿಸಿ ಯೌವನ ಬರುವ ಕಾಲಕ್ಕೇ ಆ ಪ್ರವೃತ್ತಿಯನ್ನು ಕೈ ಬಿಟ್ಟರು. ಅವರ ಮೊಟ್ಟಮೊದಲನೆಯ ಶಾಸ್ತ್ರ ಬದ್ಧವಾದ “ಗಾನರಸ ಮೂರ್ತಿ” ಕೀರ್ತನೆಯಲ್ಲಿ ಅವರ ಹೆಸರಿಲ್ಲ. ಕರ್ತೃತ್ವವನ್ನು ಸೂಚಿಸುವ ಇನ್ನಾವ ಗುರುತೂ ಇಲ್ಲ. ಅನಂತರ ಬರೆದ ಕೃತಿಗಳಲ್ಲಿ “ಆನಂದ ಪರಮಾನಂದ” ಎಂಬ ಪದವನ್ನು ತಮ್ಮ ಕರ್ತೃತ್ವದ ಗುರುತಾಗಿ ಬಳಸಿದ್ದಾರೆ.

ತಾಳ್ಲಪಾಕ ಅನ್ನಮಾಚಾರ್ಯನ ಸಂಕೀರ್ತನೆಗಳಿಗೆ ಸ್ವರತಾಳ ಸಂಯೋಜನೆ ಮಾಡಿ ರಾಳ್ಲಪಲ್ಲಿಯವರು ತಮ್ಮ ಪ್ರತಿಭೆಯ ಇನ್ನೊಂದು ಮುಖವನ್ನು ಸಂಗೀತ ಪ್ರಪಂಚದ ಮುಂದಿಟ್ಟಿದ್ದಾರೆ. ತಾಳ್ಲಪಾಕ ಅನ್ನಮಾಚಾರ್ಯನು (ಕ್ರಿ.ಶ. ೧೪೦೮-೧೫೦೩) ತೆಲುಗಿನಲ್ಲಿ ೩೨,೦೦೦ ಹಾಡುಗಳನ್ನು ಬರೆದಿದ್ದಾನೆ. ಈ ಹಾಡುಗಳನ್ನು ಸಂಕೀರ್ತನೆಗಳೆಂದು ಕರೆಯುತ್ತಾರೆ. ಅವುಗಳಿಗೆ ‘ಪದ’ಗಳೆಂಬ ಪರ್ಯಾಯ ಪದವೂ ಉಂಟು. ಅನ್ನಮಯ್ಯನ ಸುಮಾರು ೧೩,೦೦೦ ಸಂಕೀರ್ತನೆಗಳನ್ನು ಕೆತ್ತಿಸಿರುವ ತಾಮ್ರದ ಹಲಗೆಗಳು ತಿರುಮಲೆಯ ದೇವಸ್ಥಾನದ “ಸಂಕೀರ್ತನ ಭಂಡಾರ”ದಲ್ಲಿ ದೊರೆತಿವೆ. ಈ ಸಂಕೀರ್ತನೆಗಳನ್ನು ತಿರುಮಲ ತಿರುಪತಿ ದೇವಸ್ಥಾನದವರು ಸಂಶೋಧನೆ ಮಾಡಿಸಿ, ಸಂಪಾದನೆ ಮಾಡಿಸಿ, ಮುದ್ರಿಸಿ ಪ್ರಕಟಿಸಿದ್ದಾರೆ. ಈ ಸಂಶೋಧನ, ಸಂಪಾದನ ಕಾರ್ಯದಲ್ಲಿ ರಾಳ್ಲಪಲ್ಲಿಯವರು (೧೯೫೦ ರಿಂದ ೧೯೭೪ ವರೆಗೆ) ತೊಡಗಿದ್ದು ಸುಮಾರು ೮೦೦೦ ಸಂಕೀರ್ತನೆಗಳ ಪ್ರಕಟಣೆಯಲ್ಲಿ ಪಾಲ್ಗೊಂಡಿದ್ದುದೇ ಅಲ್ಲದೆ, ಸುಮಾರು ೧೨೦ ಸಂಕೀರ್ತನೆಗಳಿಗೆ ಸ್ವರತಾಳ ಸಂಯೋಜನೆ ಮಾಡಿದ್ದಾರೆ. ತನ್ನ ಸಂಕೀರ್ತನೆಗಳಿಗೆ ಅನ್ನಮಯ್ಯನೇ ರಾಗ ನಿರ್ದೇಶನ ಮಾಡಿದ್ದಾನೆ. ತಾಳ, ಧಾತುಗಳನ್ನು ನಿರ್ದೇಶಿಸಿಲ್ಲ. ಆ ಸಂಕೀರ್ತನೆಗಳಿಗೆ ಧಾತು ತಾಳಗಳನ್ನು ಊಹಿಸಿಕೊಂಡು,ಆತನೇ ನಿರ್ದೇಶಿಸಿದ ರಾಗಗಳಲ್ಲೇ ವರ್ಣಮೆಟ್ಟುಗಳನ್ನು ನಿರ್ಮಿಸಿ ರಾಳ್ಲಪಲ್ಲಿಯವರು ಪ್ರಕಟಿಸಿದ್ದಾರೆ. ಆತನ ಕಾಲದಲ್ಲಿ ಪ್ರಚಲಿತವಾಗಿದ್ದ ಸುಮಾರು ೯೦ ರಾಗಗಳಲ್ಲಿ ಆ ಕೀರ್ತನೆಗಳನ್ನು ಅನ್ನಮಯ್ಯನು ಬರೆದಿದ್ದಾನೆ. ಆ ರಾಗಗಳಲ್ಲಿ ಕೆಲವು ಪ್ರಸಿದ್ಧ ರಾಗಗಳು, ಶಂಕರಾಭರಣ, ಭೈರವಿ, ಮುಖಾರಿ, ಕಾಂಭೋಜಿ ಇತ್ಯಾದಿ.

ಅನ್ನಮಾಚಾರ್ಯನು ಬಳಸಿದ್ದು, ಈಗ ಅಳಿಸಿ ಹೋಗಿರುವ ಕೆಲವು ರಾಗಗಳನ್ನು ಪುನರುದ್ಧಾರ ಮಾಡಬಹುದೆಂಬ ಉದ್ದೇಶದಿಂದ ರಾಳ್ಲಪಲ್ಲಿಯವರು, ಆ ರಾಗಗಳಲ್ಲೇ ಸಂಕೀರ್ತನೆಗೆ ವರ್ಣಮೆಟ್ಟುಗಳನ್ನು ನಿರ್ಮಿಸಿದ್ದಾರೆ. ಸಾಮಂತ, ಶುದ್ಧವಸಂತ, ದೇಶಾಕ್ಷಿ, ಸಾಳಂಗನಾಟ ಮೊದಲಾದ ರಾಗಗಳಲ್ಲಿ ಧಾತುವನ್ನು ಅಳವಡಿಸಿದ್ದಾರೆ.

ಗೌರವ, ಪ್ರಶಸ್ತಿ ಸನ್ಮಾನಗಳು: ಸಾಹಿತಿಯಾಗಿ, ವಿಮರ್ಶಕರಾಗಿ, ಕವಿಯಾಗಿ, ಸಂಗೀತ ಲಕ್ಷ್ಯ-ಲಕ್ಷಣ ವಿಬುಧರಾಗಿ, ವಾಗ್ಗೇಯಕಾರರಾಗಿ ಬಹುವಿಧಗಳಲ್ಲಿ ಸೇವೆ ಸಲ್ಲಿಸಿದ ರಾಳ್ಲಪಲ್ಲಿ ಅನಂತಕೃಷ್ಣಶರ್ಮರಿಗೆ ಅಯಾಚಿತವಾಗಿ ಸಂದ ಸನ್ಮಾನಗಳು, ಪ್ರಮಾಣ ಪತ್ರಗಳು, ಗೌರವ ಪಟ್ಟಗಳು, ಬಿರುದು ಪತ್ರಗಳು ಅನೇಕ, ಅಸಂಖ್ಯಾತ. ಪ್ರಶಸ್ತಿಗಳಲ್ಲಿ ಮುಖ್ಯವಾದುವು.

. ಗಾನಕಲಾಸಿಂಧು: ಮೈಸೂರು ಶ್ರೀ ಪ್ರಸನ್ನಸೀತಾರಾಮ ಮಂದಿರ, ಸಂಗೀತ ಸಮ್ಮೇಳನ,(೧೯೬೧),

.ಗಾನಕಲಾ ಪ್ರಪೂರ್ಣ: ಆಂಧ್ರಪ್ರದೇಶ ಸಂಗೀತ ನಾಟಕ ಅಕಾಡೆಮಿ,(೧೯೬೯),

.ಸಂಗೀತ ಕಲಾರತ್ನ: ಬೆಂಗಳೂರು ಗಾಯನ ಸಮಾಜ, (೧೯೭೦),

ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗೌರವಸದಸ್ಯತ್ವ,

. ಗೌರವ ಡಾಕ್ಟರೇಟ್‌ (D.L.H.) ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ, ತಿರುಪತಿ,  (೧೯೭೪).

.ಸಂಗೀತ ಕಲಾನಿಧಿ: ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿ,(೧೯೭೪), .ಸಂಗೀತ ಸಾಹಿತ್ಯ ಆಸ್ಥಾನ ವಿದ್ವಾನ್‌: ತಿರುಪತಿ ತಿರುಮಲ ವೆಂಕಟೇಶ್ವರ ಸಂಸ್ಥಾನ, (೧೯೭೯)

ಇವೇ ಅಲ್ಲದೆ, ಸಂಗೀತ ಸಾಹಿತ್ಯ ಸರಸ್ವತಿ, ಅಭಿನವ ತ್ಯಾಗರಾಜ, ವಿಮರ್ಶಕಾಗ್ರೇಸರ, ಇತ್ಯಾದಿ ಇನ್ನೂ ಅನೇಕ. ಆದರೆ, ತಮ್ಮ ಜೀವನದಲ್ಲಿ ಅವರು ಯಾವ ಸಂದರ್ಭದಲ್ಲೂ ಯಾವ ಬಿರುದನ್ನೂ, ಪಟ್ಟವನ್ನೂ ಉಲ್ಲೇಖಿಸಲಿಲ್ಲ. ಪತ್ರೋತ್ತರ ನಡೆಸುವುದಕ್ಕಾಗಿ ಅಚ್ಚು ಹಾಕಿಸಿ ಇಟ್ಟುಕೊಂಡಿದ್ದ “ಪತ್ರ ಶಿರೋನಾಮೆ”ಯಲ್ಲಿ “ರಾಳ್ಲಪಲ್ಲಿ ಅನಂತಕೃಷ್ಣ ಶರ್ಮ” ಎಂದು ಮಾತ್ರವೇ ಇರುತ್ತಿತ್ತು.

ರಾಳ್ಲಪಲ್ಲಿಯವರ ವ್ಯಕ್ತಿತ್ವ: ಕರ್ನಾಟಕದಲ್ಲಿ ಪಂಡಿತ ಪ್ರಪಂಚಕ್ಕೆ ಮಾತ್ರ ಪರಿಚಿತರಾಗಿದ್ದ ರಾಳ್ಲಪಲ್ಲಿ ಅನಂತಕೃಷ್ಣಶರ್ಮರು ತೆಲುಗುದೇಶದಲ್ಲಿ ಪಂಡಿತ ಪಾಮರರಿಬ್ಬರಿಗೂ ಸುಪರಿಚಿತ ವ್ಯಕ್ತಿ. ಈ ಸಾರ್ವತ್ರಿಕ ಜನಪ್ರಿಯತೆಗೆ ಅವರ ವಿದ್ಯಾವ್ಯುತ್ಪನ್ನಗಳು ಎಷ್ಟು ಕಾರಣಗಳೋ ಅವರ ವ್ಯಕ್ತಿತ್ವಗುಣಗಳು ಅಷ್ಟೇ ಕಾರಣ. ರಘುಕುಲತಿಲಕ ಶ್ರೀ ರಾಮಚಂದ್ರನಂತೆ ಅವರು ಸರ್ವಗುಣ ಸಂಪನ್ನರು. ಪ್ರಿಯದರ್ಶನರು. ಅನಸೂಯಕರು. ಸ್ಮಿತ ಭಾಷಿಗಳು, ನಿಗರ್ವಿಗಳು, ನಿಯತಾತ್ಮರು, ಸರಳ ಸ್ವಭಾವದವರು, ವಾಗ್ಮಿಗಳು, ಸಮರ್ಥರು, ಜಿತಕ್ರೋಧರು, ವಿನಯೋಪೇತರು, ಅಜಾತಶತ್ರುಗಳು. ಅವರ ಸರಳ ಸೌಜನ್ಯ ಸ್ವಭಾವವನ್ನು ಅನೇಕರು ಮೆಚ್ಚಿಕೊಂಡು ಬರೆದಿದ್ದಾರೆ. ಅವರು ಸಮವಯಸ್ಕರು, ವೃದ್ಧರು, ಯುವಕರು, ಪಂಡಿತರು, ಪಾಮರರು ಎಲ್ಲರನ್ನೂ ಸಮಭಾವನೆಯಿಂದ ನೋಡುತ್ತಿದ್ದರು. ತಮ್ಮ ಅಭಿಪ್ರಾಯಗಳಿಗೆ ತೀವ್ರವಾದ ವಿರೋಧಭಾವನೆಗಳನ್ನು ವ್ಯಕ್ತಪಡಿಸಿದವರೊಡನೆ ಜಗಳವಾಡುತ್ತಿರಲಿಲ್ಲ. ಅವರದು ಸಾಂಪ್ರದಾಯಿಕವಾದ ದೃಷ್ಟಿ, ಅನೇಕ ನವೀನ, ವಿಪ್ಲವಕಾರಿ ದೃಷ್ಟಿಯುಳ್ಳವರ ಲೇಖನಗಳನ್ನು ಅವರು ತೀವ್ರವಾಗಿ ವಿಮರ್ಶೆ ಮಾಡಿದ್ದರು. ಆದರೆ ಅವರಲ್ಲಿದ್ದ ಗುಣಗಳನ್ನು ಉದಾರ ಭಾವನೆಯಿಂದ ಮೆಚ್ಚಿಕೊಳ್ಳುತ್ತಿದ್ದರು.

ಯಾವ ವಿಷಯವೇ ಆಗಲಿ, ಅವರದು ಸ್ವತಂತ್ರ ದೃಷ್ಟಿಕೋನ. ಒಮ್ಮೆ ಸಸ್ಯಶಾಸ್ತ್ರತಜ್ಞರೊಬ್ಬರು ಅವರಿಗೆ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಗಿಡಮರಗಳ ಬಗ್ಗೆ ಬಹಳ ಉತ್ಸಾಹದಿಂದ ಮಾತನಾಡುತ್ತಾ, ಆ ತೋಟದಲ್ಲಿ ಕೆಲವು ಸಾವಿರ ಜಾತಿಯ ಸಸ್ಯಗಳಿವೆ. ಅಂತಹ ತೋಟ ಮತ್ತೊಂದಿಲ್ಲ ಎಂದು ಹೆಮ್ಮೆಯಿಂದ ಹೇಳಿದರು. ಎಲ್ಲವನ್ನೂ ಸಾವಧಾನದಿಂದ ಕೇಳಿದ ಶರ್ಮರು, “ಬಹಳ ಸಂತೋಷ ಆದರೆ ನಿಮ್ಮ ಗಮನಕ್ಕೆ ಬಂದಿದೆಯೊ ಇಲ್ಲವೋ ಆ ತೋಟದಲ್ಲಿ ನಮ್ಮ ನಾಡಿನ ಮೈಸೂರು ಮಲ್ಲಿಗೆಯೇ ಇಲ್ಲ!” ಅಂದರು. ಮೂಲತಃ ತೆಲುಗರಾಗಿದ್ದು. ಆಂಧ್ರ, ತಮಿಳುನಾಡು, ಕನ್ನಡನಾಡುಗಳ ಪರಿಚಯವಿದ್ದ ಶರ್ಮರಿಗೆ ಕನ್ನಡನಾಡಿನ ಬಗ್ಗೆಯೇ ಹೆಚ್ಚು ಒಲವು. ಮೈಸೂರು ಮಲ್ಲಿಗೆ, ವೀಳ್ಯದೆಲೆ, ರಸಪುರಿ, ಬಾದಾಮಿ, ಮಾವಿನಹಣ್ಣು, ನಂಜನಗೂಡು ರಸಬಾಳೆ, ಮೈಸೂರು ಅಗರಬತ್ತಿ, ಇದಕ್ಕೆ ಸಮನಾದ್ದು ಬೇರೆಲ್ಲೂ ಇಲ್ಲ ಎಂದು ಹೇಳುತ್ತಿದ್ದುದನ್ನು ನಾನು ಅನೇಕ ಬಾರಿ ಕೇಳಿದ್ದೇನೆ. ಹಾಗೆಯೇ, ಇತರ ಪ್ರಾಂತ್ಯದವರು ‘ಅತಿಥಿ ಸತ್ಕಾರ’ ಹೇಗೆ ಮಾಡಬೇಕೆಂಬುದನ್ನು ಕನ್ನಡಿಗರಿಂದ ಕಲಿಯಬೇಕು ಎಂದು ಹೇಳುತ್ತಿದ್ದರು.

ಶ್ರೀ ರಾಳ್ಲಪಲ್ಲಿ ಅನಂತಕೃಷ್ಣಶರ್ಮರು ಕಾಳಯುಕ್ತಿ ಸಂವತ್ಸರ ಫಾಲ್ಗುಣ ಶುಕ್ಲ ತ್ರಯೋದಶಿಯಂದು (೧೧.೩.೧೯೭೯) ತಿರುಪತಿ ತಿರುಮಲ ದೇವಸ್ಥಾನ ಆಸ್ಥಾನದಿಂದ ಸಂಗೀತ ಸಾಹಿತ್ಯ ಆಸ್ಥಾನ ವಿದ್ವಾನ್‌ ಪ್ರಶಸ್ತಿಯನ್ನು, ಎಕ್ಸಿಕ್ಯೂಟಿವ್‌ ಆಫೀಸರ್ ಪಿ.ವಿ.ಆರ್.ಕೆ. ಪ್ರಸಾದ್‌ರವರ ಸ್ವಗೃಹದಲ್ಲೇ ಸ್ವೀಕರಿಸಿದ ಒಂದೆರಡು ಗಂಟೆಗಳ ನಂತರವೇ ವೆಂಕಟೇಶ್ವರಸ್ವಾಮಿಯ ತಿರುವಡಿಗಳನ್ನಪ್ಪಿದರು.