ಸುಮಾರು ೭೫ ವರ್ಷಗಳ ಹಿಂದಿನ ಮಾತು. ಒಂದು ದಿನ ಬೆಳಗಿನ ಸಮಯ. ಮೈಸೂರಿನ ಜಗನ್ಮೋಹನ ಬಂಗಲೆಯ ಸಮೀಪದ ಒಂದು ಬೀದಿ. ಅಲ್ಲಿ ಒಬ್ಬ ಹುಡುಗ ಬರುತ್ತಿದ್ದ. ನಿಧಾನವಾದ ನಡಗೆ, ಅವನ ವಯಸ್ಸು ೧೨-೧೩ ಇರಬಹುದು. ತೆಳು ಮೈ, ಮಾಟವಾದ ಮುಖ, ಎತ್ತರದ ನಿಲುವು. ಲಕ್ಷಣವಾದ ಹುಡುಗ. ತೇಜಸ್ಸಿನಿಂದ ತುಂಬಿದ ಕಣ್ಣುಗಳಲ್ಲಿ ಆಳಕ್ಕಿಳಿದ ಚಿಂತೆ. ಗುರಿಯಿಲ್ಲದೆ ಎತ್ತೆತ್ತಲೋ ತುಯ್ಯುತ್ತಿದ್ದ ಹೆಜ್ಜೆಗಳು ಅವನ ದುಃಖದ  ಭಾರವನ್ನು ಸೂಚಿಸುವಂತಿದ್ದವು. ರಸ್ತೆಯಂಚಿನಲ್ಲಿ ಎದುರಿಗೆ ಬಂದ ವೃದ್ಧೆಯೊಬ್ಬರು ಹುಡುಗನನ್ನು ದೃಷ್ಟಿಸಿ ನೋಡಿದರು. ನಿಲ್ಲಿಸಿ ಮಾತನಾಡಿಸಿದರು. ವೃದ್ಧೆಗೆ ಮುರುಕ ಹುಟ್ಟಿತು. ಮೃದುವಾಗಿ ಕೇಳಿದರು: “ಯಾಕಪ್ಪಾ ಅಳುತ್ತೀಯೆ? ನಿನಗೆ ಏನಾಗಬೇಕು?” ಹುಡುಗ ಮೌನದಿಂದ  ತಲೆತಗ್ಗಿಸಿದ. ಸ್ವಲ್ಪ ಸಮಯದ ನಂತರ ಮಾತುಕತೆ, ಅವನು ವೃದ್ಧೆಯ ಜತೆ ತನ್ನಕಷ್ಟವನ್ನು ತೋಡಿಕೊಂಡ.

“ಈಗ ಎಲ್ಲೂ ತಾವಿಲ್ಲ”

ಅವನು ಕೆಲವೇ ದಿನಗಳ ಹಿಂದೆ ಪರ ಊರಿನಿಂದ ಅಲ್ಲಿಗೆ ಬಂದಿದ್ದ. ಅವನ ತಂದೆ ತಾಯಿಗಳು ನೆರೆಯ ಆಂಧ್ರಪ್ರದೇಶದವರು. ಹುಡುಗನನ್ನು ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಕಳುಹಿಸಿದರು. ದೂರದ ನಂಟರ ಮನೆಯಲ್ಲಿದ್ದುಕೊಂಡು ಸಂಸ್ಕೃತ ಪಾಠಶಾಲೆಯಲ್ಲಿ ಅವನು ವಿದ್ಯೆ ಕಲಿಯಲೆಂಬುದು ಅವರ ಏರ್ಪಾಡು. ಅದು ತಪ್ಪಿಹೋಗಿತ್ತು. ಆ ಹುಡುಗ ವೃದ್ಧೆಯೊಡನೆ ಮೇಲು ದನಿಯಲ್ಲಿ ಹೇಳಿದ : “ನನಗೆ ಈಗ ಎಲ್ಲೂ ತಾವಿಲ್ಲ. ಊಟಕ್ಕೂ ತೊಂದರೆಯಾಗಿದೆ.” ಮೃದು ಮನಸ್ಸಿನ ಆಕೆಗೆ ಯೋಚನೆ ಆಯಿತು. ಮರುಕ್ಷಣವೆ ಆಕೆ “ಬಾ ಮಗು, ನೋಡೋಣ, ದೇವರ ಇಚ್ಛೆ ಏನಿದೆಯೋ” ಎಂದರು. ಹುಡುಗನನ್ನು ಹತ್ತಿರದ ಶ್ರೀ ಪರಕಾಲಮಠಕ್ಕೆ ಕರೆದುಕೊಂಡು ಹೋದರು. ಆಕೆ ಅಲ್ಲಿ ಪರಿಚಾರಿಕೆಯಾಗಿದ್ದರಂತೆ, ಮಠದವರೆಲ್ಲರ ಪರಿಚಯ ಇತ್ತು. ಹುಡುಗನ ವಿನಯ ಸ್ವಭಾವ ಎಲ್ಲರನ್ನೂ ಸೆಳೆಯಿತು. ಮಠದಲ್ಲೇ ಅವನಿಗೆ ಊಟ-ವಸತಿ ಹಾಗೂ ವಿದ್ಯಾಭ್ಯಾಸದ ಏರ್ಪಾಡು ನಡಯಿತು.

ಆ ಪುಟ್ಟ ಹುಡಗನೇ ಮುಮದೆ ಸಂಗೀತ-ಸಾಹಿತ್ಯಗಳಲ್ಲಿ ಶ್ರೇಷ್ಠ ವಿದ್ವಾಂಸರೆನಿಸಿಕೊಂಡ ಶ್ರೀ ರಾಳ್ಳಪಲ್ಲಿ ಅನಂತಕೃಷ್ಣ ಶರ್ಮರು.

ಮೊದಲ ಗುರು-ತಂದೆ

ರಾಳ್ಲಪಲ್ಲಿ ಎಂದರೆ ಕನ್ನಡದಲ್ಲಿ ’ಕಲ್ಲು ಹಳ್ಳಿ’ ಎಂದು ಅರ್ಥ. ಇದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ತಾಲ್ಲೂಕಿನ ಒಂದು ಸಣ್ಣ ಹಳ್ಳಿ. ಅನಂತ ಕೃಷ್ಣ ಶರ್ಮರ  ತಂದೆಯವರ ಹೆಸರು ಶ್ರೀಕೃಷ್ಣಮಾಚಾರ್ಯರು ಒಳ್ಳೆಯ ಶ್ರೋತ್ರೀಯರು, ಸಂಸ್ಕೃತ, ತೆಲುಗು, ತಮಿಳು ಭಾಷೆಗಳಲ್ಲಿ ಉನ್ನತ ಪಾಂಡಿತ್ಯ ಉಳ್ಳವರು. ತಾಯಿ ಸುಸಂಸ್ಕೃತೆ, ಸಾಧ್ವಿ, ಆಕೆಯ ಶರೀರ ಬಹುಕೋಮಲ. ಚೆನ್ನಾಗಿ ಹಾಡುತ್ತಿದ್ದರು.

ಶರ್ಮರು ಹುಟ್ಟಿದ್ದು ೧೮೯೩ನೆಯ ಜನವರಿ ತಿಂಗಳಿನ ೨೩ನೆಯ ತಾರೀಖಿನಿಂದು. ಬಾಲ್ಯದಿಂದಲೂ ಚುಟಿಯಾದ ಹುಡುಗ. ಎಲ್ಲರ ಕೈಯಲ್ಲೂ ಜಾಣ ಎನಿಸಿಕೊಂಡಿದ್ದರು. ಅವರ ಪ್ರಥಮ ವಿದ್ಯಾಗುರುಗಳು, ತಂದೆ ಕೃಷ್ಣಮಾಚಾರ್ಯರೇ, ಶರ್ಮರಿಗೆ ಹೆಚ್ಚಾಗಿ ಸಾಹಿತ್ಯದ ಕಡೆಗೆ ಒಲವು. ಮಗನ ಅಭಿರುಚಿಯನ್ನು ತಂದೆ ಬಹಳ ಬೇಗ ಗುರುತಿಸಿದರು. ಆತನನ್ನು ಸಾಹಿತ್ಯದ ಅಧ್ಯಯನಕ್ಕೆ ಹಚ್ಚಲು ನಿರ್ಧರಿಸಿದರು. ಮಗನಿಗೆ ಓನಾಮದಿಂದ ಹಿಡಿದು ಪ್ರೌಢ ಸಾಹಿತ್ಯ  ಪ್ರವೇಶದವರೆಗೆ ಪಾಠ ಹೇಳಿಕೊಟ್ಟರು. ಶರ್ಮರು ಸುಮಾಋಉ ೮ ವರ್ಷದ ಹುಡುಗನಾಗಿದ್ದಾಗಲೇ ಭೋಜರಾಜನ (ಕ್ರಿ.ಶ.೧೦೧೮-೧೦೬೩) ಚಂಪೂ ರಾಮಾಯಣವನ್ನು ಓದಿ ಮುಗಿಸಿದ್ದರು. ೧೨ ವರ್ಷ ತುಂಬುವ ಹೊತ್ತಿಗೆ ರಾಮಾಯಣ ಸಂಗ್ರಹ, ಕಾಳಿದಾಸನ ರಘುವಂಶ, ಚಂಪೂ ಭಾರತ, ವಿರ್ಶಗುಣಾದರ್ಶ ಮುಂತಾದ ಸಂಸ್ಕೃತ ಗ್ರಂಥಗಳು ಪಾಠವಾಗಿದ್ದವು. ತೆಲುಗಿನಲ್ಲಿ ’ಅಚ್ಚ ತೆಲುಗು ರಾಮಾಯಣ’ ’ನೀಲಾ ಸುಂದರಿಯ ಪರಿಣಯ’ ಮುಂತಾದವನ್ನು ಓದಿ ಆಗಿತ್ತು. ತಂದೆ ಕೃಷ್ಣಮಾಚಾರ್ಯರು ಬಹಳ ಶಾಂತ ಸ್ವಭಾವದವರು. ಒಳ್ಳೆಯ ಉಪಾರ್ದಯಾಯರು. ವಿದ್ಯೆ ಕಲಿಯಬೇಕೆಂದು ಯಾರು ಬಂದರೂ ಯಾವ ಭೇದವನ್ನೂ ಮಾಡುತ್ತಿರಲಿಲ್ಲ. ಪ್ರೀತಿಯಿಂದ ಪಾಠ ಹೇಳಿ ಕೊಡುತ್ತಿದ್ದರು. ಅವರದು ಬಹಳ ದೃಢ ಮನಸ್ಸು. ಎಂಥ ಕಷ್ಟದಲ್ಲೂ ಕಣ್ಣೀರು ಹಾಕಲಿಲ್ಲ. ತಮ್ಮ ಮಗ ಅಪಾರ ವಿದ್ಯೆಯನ್ನು ಗಳಿಸಬೇಕೆಂಬುದು ಅವರ ಆಸೆ. ಆಗ ಮೈಸೂರು ಸಂಗೀತ-ಸಾಹಿತ್ಯ-ಕಲೆಗಳ ಬೀಡು ಎನಿಸಿಕೊಂಡಿತ್ತು. ಆದ್ದರಿಂದ ಮಗನನ್ನು ಮೈಸೂರಿಗೆ ಕಳುಹಿಸಿದ್ದರು.

ಶ್ರೀ ಪರಕಾಲ ಸ್ವಾಮಿಗಳ ಶಿಷ್ಯ

ಶರ್ಮರ ಊಟ ವಸತಿಗೆ ಶ್ರೀ ಪರಕಾಲ ಮಠದಲ್ಲಿ  ಅನುಕೂಲ ದೊರೆಯಿತಷ್ಟ. ಆಮೇಲೆ ಅವರು ತಮ್ಮ ಒಳ್ಳೆಯ ನಡತೆಯಿಂದ ಎಲ್ಲರ ಮೆಚ್ಚುಗೆ ಪಡೆದರು.  ಆಗ ಶ್ರೀಕೃಷ್ಣ ಬ್ರಹ್ಮತಂತ್ರ ಸ್ವಾಮಿಗಳೆಂಬುವರು ಆ ಮಠದ ಪೀಠವನ್ನು ಅಲಂಕರಿಸಿದ್ದರು. ಮೈಸೂರಿನ ಅರಸರಿಗೆ ಶ್ರೀ ಪರಕಾಲ ಸ್ವಾಮಿಗಳು ರಾಜ ಗುರುಗಳು. ಆದ್ದರಿಂದ ಮಠಕ್ಕೂ ಅರಮೆನೆ ಆಸ್ಥಾನಗಳಿಗೂ ನಿಕಟ ಸಂಬಂಧವಿತ್ತು. ಶ್ರೀ ಕೃಷ್ಣ ಬ್ರಹ್ಮತಂತ್ರರು ವೇದೋಪನಿಷತ್ತುಗಳಲ್ಲಿ ಪ್ರಡಂಡ ವಿದ್ವಾಂಸರು. ಸಂಸ್ಕೃತ-ತೆಲಗು ಸಾಹಿತ್ಯಗಳಲ್ಲಿ  ಆಳವಾಧ ವ್ಯಾಪ್ತಿ ಇತ್ತು. ಅವರು ಮಹಾಜ್ಞಾನಿಗಳ. ಬಹಳ ಬೇಗ ಬಾಲಕ ಆನಂದ ಕೃಷ್ಣನಿಗೆ ಗುರುಗಳ ಕೃಪಾದೃಷ್ಟಿ ದೊರೆಯಿತು. ಕೆಲವೇ ದಿನಗಳಲ್ಲಿ ಅವರು ಗುರುಗಳ ಆಪ್ತ ಶಿಷ್ಯರಾದರು. ಅವರ ಪ್ರಭಾವದಿಂದ  ಶರ್ಮರ ಚೇತನ ಬೆಳಗಿತು. ಆಗ ಶ್ರೀ ಶ್ರೀಗಳಿಗೆ ೬೫ ವರ್ಷಗಳು ಕಳೆದು ವೃದ್ಧರಾಗಿದ್ದರು. ಅವರು ಶರ್ಮರಿಗೆ ವೈಷ್ಣವ  ದೀಕ್ಷೆಯನ್ನು ಕೊಟ್ಟು ಶಿಷ್ಯನೆಂದು ಪರಿಗ್ರಹಿಸಿದರು. ಶ್ರೀಕೃಷ್ಣಬ್ರಹ್ಮತಂತ್ರರು ಒಬ್ಬ ಶ್ರೇಷ್ಠ ಸಾಹಿತಿಯೂ ಆಗಿದ್ದರು. ಅವರು ಬರೆದ ಶ್ರೀನಿವಾಸ ವಿಲಾಸ ಚಂಪು ಎಂಬ ಕಾವ್ಯವು  ತಿರುಪತಿಯ ವೆಂಕಟೇಶ್ವರನನ್ನು ಕುರಿತುದು. ಅದು ಅನಂತಕೃಷ್ಣ ಶರ್ಮರ ಮೇಲೆ ಗಾಢ ಪ್ರಭಾವ  ಬೀರಿತು.

ಶ್ರೀ ಶ್ರೀಗಳು ಮಧ್ಯಾಹ್ನದ ವೇಳೆಯಲ್ಲಿ ಶಿಷ್ಯನಿಗೆ ಸಾಹಿತ್ಯದ ಪಾಠ ಹೇಳುತ್ತಿದ್ದರು. ಶರ್ಮರು ಗುರುಗಳ ಬಳಿ ಕುಳಿತು ಸಂಸ್ಕೃತ ಕಾವ್ಯ- ನಾಟಕಗಳನ್ನು ಓದುತ್ತಿದ್ದರು. ಗುರುಗಳ ನಿಧಾನವಾಗಿ ಅರ್ಥ ವಿವರಣೆ ಮಾಡಿ,  ಕಾವ್ಯದ ಸ್ವಾರಸ್ಯವನ್ನು ತಿಳಿಸುತ್ತಿದ್ದರು. ಅವರಿಗೆ ಶಾಸ್ತ್ರಕ್ಕಿಂತ ಹೆಚ್ಚಾಗಿ ಸಾಹಿತ್ಯದ ಕಡೆಗೇ ಹೆಚ್ಚು ಒಲವು. ಪ್ರತಿವರ್ಷವೂ ಅವರು ಮಠದಲ್ಲಿ ಶ್ರಾವಣ ಶುಕ್ಲ ಪಕ್ಷದಲ್ಲಿ ವಿದ್ವಾಂಸರ ಕವಿ ಗೋಪ್ಠಿಗಳನ್ನು ಏರ್ಪಡಿಸುತ್ತಿದ್ದರು. ಮೊದಲಿನಿಂದ ಶರ್ಮರಿಗೆ ಕಾವ್ಯ ರಚನೆಯ ಹಂಬಲ. ಈ ಗೋಷ್ಠಿಗಳ ದೆಸೆಯೀಮದ ಅವರ ಪ್ರತಿಭೆಗೆ ಅವಕಾಶ ಸಿಕ್ಕಿತು. ಹೀಗೆ ಸುಮಾರು ಆರು ವರ್ಷಗಳ ಕಾಲ ಗುರುಕುಲವಾಸ ಕಳೆಯಿತು. ಶರ್ಮರ ಬದುಕಿನಲ್ಲಿ ಅದು ಪ್ರಮುಖ ಘಟ್ಟ.

ಒಂದು ದಿನ ಶರ್ಮರು ಗುರುಗಳ ಅಪ್ಪಣೆಯಿಂತೆ ರಾಮಾಯಣದಲ್ಲಿ ಒಂದು ಭಾಗವನ್ನು ಓದುತ್ತಿದ್ದರು.  ಓದುತ್ತಿದ್ದುದು ಅಯೋಧ್ಯಾಕಾಂಡದಲ್ಲಿನ ೪೪ ನೆಯ ಸರ್ಗ. ಒಂದು ಮನಕರಗಿಸುವ ಸಂದರ್ಭ. ಶ್ರೀರಾಮನನ್ನು ಕಾಡಿಗೆ ಕಳುಹಿಸಿದ ಮೇಲೆ, ಅವನ ತಾಯಿ ಕೌಸಲ್ಯಾದೇವಿ ದುಃಖಿಸುತ್ತಿದ್ದಾಳೆ. ಸುಮಿತ್ರಾದೇವಿ ಆಕೆಯನ್ನು ಸಂತೈಸುತ್ತಾಳೆ. ಸಂಸಾರವನ್ನು ತ್ಯಜಿಸಿದ ಯತಿಗಳ ಕಣ್ಣಿನಲ್ಲಿ ನೀರು! ಗುರುಶಿಷ್ಯರಿಬ್ಬರಿಗೂ ಮನಸ್ಸನ್ನು ತಣಿಸುವ ಅನುಭವ. ಯಾವದೋ ದೂರದ ಲೋಕದಲ್ಲಿ ಸಂಚರಿಸುತ್ತಿದ್ದ ಹಾಗಿತ್ತು.  ಕಣ್ಣೊರೆಸಿಕೊಂಡ ಶರ್ಮರು ’ಮುಂದೆ ಏನನ್ನು ಓದಲಿ?’ ಎಂದರು. ಶ್ರೀ ಶ್ರೀಗಳು ಭಾರವಾದ ಧ್ವನಿಯಲ್ಲಿ ಹೇಳಿದರು: ‘ಇವತ್ತಿಗೆ ಇಷ್ಟು ಸಾಕಪ್ಪ- ನಮ್ಮ ನಿತ್ಯ ಓದು ಇದ್ದೇ ಇದೆ.’ ಅಷ್ಟು ಮೃದುವಾದ ಮನಸ್ಸು ಅವರದು.

ಅಸಾಧಾರಣ ಜ್ಞಾಪಕ ಶಕ್ತಿ

ಆ ಕಾಲದಲ್ಲಿ ಚಾಮರಾಜನಗರದ ರಾಮಾಶಾಸ್ತ್ರಿಗಳೆಂಬ ಒಬ್ಬ ದೆಒಡ್ಡ ಸಂಸ್ಕೃತ ವಿದ್ವಾಂಸರಿದ್ದರು. ಅವರಿಗೂ ಶ್ರೀಕೃಷ್ಣ ಬ್ರಹ್ಮತಂತ್ರರಿಗೂ ಗಾಢ ಸ್ನೇಹ. ಒಮ್ಮೆ ಚಮತ್ಕಾರದ ಶ್ಲೋಕ ಒಂದನ್ನು ರಾಮಾಶಾಸ್ತ್ರಗಳು ಹೇಳಿದರು. ಗುರುಗಳು ಹತ್ತಿರದಲ್ಲಿದ್ದ ತಮ್ಮ ಶಿಷ್ಯ ಶರ್ಮರ ಕಡೆ ತಿರುಗಿ ’ಇದನ್ನು ಬರೆದುಕೋ’ ಅಂದರು. ಶಾಸ್ತ್ರಗಳು ’ಇನ್ನೊಮ್ಮೆ ಹೇಳಲೇ?’ ಅಂದಾಗ ಶ್ರೀ ಬ್ರಹ್ಮತಂತ್ರರು’ ಬೇಡ, ನಮ್ಮ ಹುಡುಗ ಈಗಾಗಲೇ ಅದನ್ನು ಬರೆದುಕೊಂಡದ್ದಾಗಿದೆ’ ಎಂದು ವಾತ್ಸಲ್ಯದಿಂದ ನಕ್ಕರಂತೆ, ಇಂತಹ ಗ್ರಹಣಶಕ್ತಿ ಶರ್ಮರದು, ಇಷ್ಟು ಚುರುಕು ಅವರ ಜ್ಞಪಕ ಶಕ್ತಿ. ಶರ್ಮರ ಅಪಾರ ಜ್ಞಾಪಕ ಶಕ್ತಿಗೆ ಇನ್ನೊಂದು ಉದಾಹರಣೆ ಕೊಡಬಹುದು. ೧೯೧೯ರಲ್ಲಿ ಕವಿ ರವೀಂದ್ರನಾಥ ಠಾಕುರರು ಮೈಸೂರಿಗೆ ಬಂದಿದ್ದರು. ಆಗ ಅವರು ಮೊಟಟ ಮೊದಲನೆಯ ಬಾರಿಗೆ ’ಜನಗಣಮನ’ ಮತ್ತು ’ದೇವಿ ಭುವನ ಮನಮೋಹಿನಿ’ ಎಂಬ ಹಾಡುಗಳನ್ನು ಹಾಡಿದರು. ಹತ್ತಿರದಲ್ಲಿದ್ದ ಶರ್ಮರು ಠಾಕೂರರು ಹಾಡಿ ಮುಗಿಸುವಷ್ಟರಲ್ಲಿ ಹಾಡುಗಳಿಗೆ ಸ್ವರಪ್ರಸ್ತಾರ ಹಾಕಿ ಇಟ್ಟುಕೊಂಡರು. ಶರ್ಮರೇ ಆ ಹಾಡುಗಳನ್ನು ಮತ್ತೆ ಹಾಡಿದಾಗ ಠಾಕೂರರು ಆಶ್ಚರ್ಯಚಕಿತರಾದರಂತೆ.

ಮತ್ತೊಬ್ಬ ಗುರುಗಳು

ಶರ್ಮರ ಜ್ಞಾನದಾಹ ಅಪಾರವಾದುದು. ಶ್ರೀಕೃಷ್ಣ ಬ್ರಹ್ಮತಂತ್ರರಿಂದ ಶಿಕ್ಷಣ ನಡೆದ ಮೇಲೂ ಅವರು ವ್ಯಾಸಂಗವನ್ನು ಮುಂದುವರಿಸಿದರು. ಅವರು ಕೆಲಕಾಲ ಪಂಡಿತವರ್ಯ ರಾಮಾಶಾಸ್ತ್ರಗಳಿಗೆ  ಬಳಿ ಸಾಹಿತ್ಯವನ್ನು ಕಲಿತರು. ಆ ಹೊತ್ತಿಗೆ ಶಾಸ್ತ್ರಗಳಿಗೆ ತೀರಾ ಇಳಿವಯಸ್ಸು. ವ್ಯಾಕರಣದಲ್ಲಿಯೂ ಅವರನ್ನು ಮೀರಿಸಿದವರಿರಲಿಲ್ಲ. ಆದರೆ ಅವರದು ಕವಿಹೃದಯವನ್ನು ಅರಿಯಬಲ್ಲ ಶಕ್ತಿ. ಅವರು ಎಂದೂ ಪಾಂಡಿತ್ಯದ ಚಮತ್ಕಾರಕ್ಕೆ ಮರುಳಾದವರಲ್ಲ. ಆದರೆ ಯಾರಾದರೂ ಅವರನ್ನು ಕೆಣಕಿದರೆ ಅವರು ವಾದಕ್ಕೆ ಇಳಿದು ಜಯಗಳಿಸುತ್ತಿದ್ದರು. ’ಸೀತಾರಾವನ ಸಂವಾದ ಝರಿ’ ಎಂಬ ಶತಕವನ್ನು ಕೇವಲ ಹಟಕ್ಕಾಗಿ ಬರೆಯಲು ಹೊರಟು ಐವತ್ತು ಶ್ಲೋಕಗಳನ್ನು ರಚಿಸಿದರು. ವೃದ್ಧಾಪ್ಯ ಹಾಗೂ ಅನಾರೋಗ್ಯದ ನಿಮಿತ್ತ ಅದು ಪೂರ್ಣವಾಗಲಿಲ್ಲ. ಶರ್ಮರು ಶಾಸ್ತ್ರಗಳಿಂದ ’ಶಾಕುಂತಲಾ’ ’ಉತ್ತರ ರಾಮ ಚರಿತ್ರೆ’ ’ಮುದ್ರಾ ರಾಕ್ಷಸ’ ’ಅನರ್ಘ ರಾಘವ’ ನಾಟಕಗಳನ್ನೂ ’ಕಾದಂಬರಿ’ ಕಾವ್ಯವನ್ನು ಅಭ್ಯಾಸ ಮಾಡಿದರು.

೧೯೧೨ಕ್ಕಿಂತ ಸ್ವಲ್ಪ ಹಿಂದೆಯೇ ಶರ್ಮರ ಪ್ರೊಫೆಸರ ಸಿ. ಆರ್. ರೆಡ್ಡಿಯವರ ಪರಿಚಯವಾಯಿತು. ಅವರು ಪ್ರಕಾಂಡ ಪಂಡಿತರು. ಇಂಗ್ಲಿಷ್‌ಭಾಷೆಯನ್ನು ತುಂಬಾ ಚೆನ್ನಾಗಿ ಬಳಸಬಲ್ಲವರಾಗಿದ್ರು. ತೆಲುಗಿನಲ್ಲಿ ಹಲವು ಗ್ರಂಥಗಳನ್ನು ರಚಿಸಿದ್ದರು. ಅವರು ಶರ್ಮರಿಗೆ ಪಾಶ್ಚತ್ಯ ಸಾಹಿತ್ಯವನ್ನು ಪರಿಚಯ ಮಾಡಿಕೊಟ್ಟರು. ತೆಲುಗಿನಲ್ಲಿ ಸ್ವಂತವಾಗಿ ಬರೆಯುವಂತೆ ಶರ್ಮರನ್ನು ಒತ್ತಾಯಪಡಿಸಿದರು.

ತೆಲಗು ಪ್ರಾಧ್ಯಾಪಕರು

ಪ್ರೊಫೆಸರ್‌ರೆಡ್ಡಿಯವರು ಶಿಕ್ಷಕರಾಗಿ ಕೆಲಸಮಾಡುತ್ತಿದ್ದ ಮೈಸೂರಿನ ಮಹಾರಾಜರ ಕಾಲೇಜು ಅಂದು ಇಡೀ ದೇಶದಲ್ಲೆ ಒಂದು ಮಾದರಿ ವಿದ್ಯಾಸಂಸ್ಥೆಯಾಗಿತ್ತು. ಆಗ ಅಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್‌, ಎ.ಆರ್.ವಾಡಿಯ, ಜೆ.ಸಿ.ರಾಲೋ, ಎ.ಹಿರಿಯಣ್ಣ, ಬಿ.ಎಂ.ಶ್ರೀಕಂಠಯ್ಯ, ಎನ್.ಎಸ್.ಸುಬ್ಬರಾವ್ ಮುಂತಾದವರು ಪ್ರಾಧ್ಯಾಪಕರಾಗಿದ್ದರು. ಅವರೆಲ್ಲರೂ ತಮ್ಮ ತಮ್ಮ ಜ್ಞಾನ ಕ್ಷೇತ್ರಗಳಲ್ಲಿ ದೊಡ್ಡ ವಿದ್ವಾಂಸರಾಗಿದ್ದರು. ೧೯೧೨ ರಲ್ಲಿ ಆಗತಾನೆ ವಿದ್ಯಾಭ್ಯಾಸವನ್ನು ಮುಗಿಸಿದ್ದ ಶರ್ಮರಿಗೆ ಆ ಕಾಲೇಜಿನಲ್ಲಿ ತೆಲುಗು ಅಧ್ಯಾಪಕರ ಹುದ್ದೆ ಸಿಕ್ಕಿತು. ಅದಕ್ಕೆ ಬೇಕಾದ ಎಲ್ಲಾ ಅರ್ಹತೆಯನ್ನು ಅವರು ಆ ವೇಳೆಗೆ ಗಳಿಸಿದ್ದರು. ತೆಲುಗಿನಲ್ಲಿ ’ತಾರಾದೇವಿ’ ’ಮೀರಾಬಾಯಿ’ ಎಂಬ ಖಂಡಕಾವ್ಯಗಳನ್ನು ಬರೆದಿದ್ದರು.ಕಾಳಿದಾಸನ ’ರಘುವಂಶ’ ವನ್ನು ತೆಲುಗಿಗೆ ಅನುವಾದಿಸಿ ೧೬ ಸರ್ಗಗಳನ್ನು ಮುಗಿಸಿದ್ದರು. ಪ್ರೊಫೆಸರ ಸಿ.ಆರ್. ರೆಡ್ಡಿಯವರು ಎಷ್ಟು ಬಲವಂತ ಮಾಡಿದರೂ ಶರ್ಮರು ಆ ಕಾವ್ಯಗಳನ್ನು ಪ್ರಕಟಿಸಲು ಒಪ್ಪಲಿಲ್ಲ. ಸಜ್ಜನರಿಗೆ ಸಹಜವಾದ ವಿನಯ ಮತ್ತು ಸಂಕೊಚಗಳೇ ಇದಕ್ಕೆ ಕಾರಣವಾಗಿದ್ದವು.

 

ಶರ್ಮರೇ ಹಾಡುಗಳನ್ನು ವತ್ತು ಹಾಡಿದರು

ಅಪಾರವಾದ ತಮ್ಮ ವಿದ್ವತ್ತಿಗೆ ತಕ್ಕ ವಿನಯ ಅವರದು. ೧೯೭೪ ರಲ್ಲಿ ಮದರಾಸಿನ ಮ್ಯೂಸಿಕ್‌ಅಕಾಡೆಮಿಯ ಅಧ್ಯಕ್ಷರಾದರು. ಅವರ ಅಧ್ಯಕ್ಷ ಭಾಷಣದಲ್ಲಿನ ತೂಕವಾದ, ಖಚಿತವಾದ ವಿಚಾರಗಳನ್ನು ಕೇಳಿ ವಿದ್ವತ್‌ಸಭೆ ತಲೆದೊಗಿತು, ಎಲ್ಲರೂ ಬಾಯಿತುಂಬ ಶರ್ಮರನ್ನು ಕೊಂಡಾಡಿದರು. ಪ್ರಸಿದ್ದ ಸಂಗೀತ ವಿದ್ವಾಂಸರಾದ ಎಂ.ಡಿ. ರಾಮನಾರ್ಥನ್‌ಅವರು ಆಡಿದ ಮಾತು ಮನೋಜ್ಞವಾದುದು. “ಶರ್ಮರ ಅಧ್ಯಕ್ಷ ಭಾಷಣದಲ್ಲಿ ಒಂದು ಲವಲೇಶವಾದರೂ ಆತ್ಮಪ್ರಶಂಸೆಯ ಸೋಂಕಿಲ್ಲ. ವಿದ್ವತ್‌ಸಂಪ್ರದಾಯಕ್ಕೆ ಇದೊಂದು ಮಾದರಿ. ನಾವು ಮೆಚ್ಚಬೇಕಾದುದು ಇದನ್ನು” ಎಂದು ಅವರು ತುಂಬಕಂಠದಿಂದ ಮಾತನಾಡಿದರು.

ಮಹಾರಾಜ ಕಾಲೇಜಿನ ಕಾಮನ್‌ರೂಮ್

೧೯೧೨ರಲ್ಲಿ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡ ಶರ್ಮರು ಅತ್ಯಂತ ಶ್ರೇಷ್ಠ ಉಪಾರ್ಧಯಾಯರು ಮತ್ತು ವಿದ್ವಾಂಸರೆಂದು ಪ್ರಸಿದ್ಧರಾದರು. ಅಂಥ ಕೀರ್ತಿ ಆಗಿನ ಕಾಲದಲ್ಲಿ ಸುಲಭವಾಗಿ ಸಿಕ್ಕುತ್ತಿರಲಿಲ್ಲ. ಏಕೆಂದರೆ ಆಗ ಮಹಾರಾಜರ ಕಾಲೇಜಿನಲ್ಲಿ ಅನೇಕ ವಿದ್ವಾಂಸರು, ಕವಿಗಳು, ವಿರ್ಮಶಕರು, ದಾರ್ಶನಿಕರು ಇದ್ದರು. ಅವರ ನಡುವೆ ಬೆಳಕಿಗೆ ಬರುವುದಕ್ಕೆ ನಿಜವಾದ ಯೋಗ್ಯತೆ ಅಗತ್ಯವಾಘಿತ್ತು. ಅರ್ಧಯಾಪಕರೆಲ್ಲರೂ ಕುಳಿತು ಕೊಳ್ಳುತ್ತಿದ್ದ ಕಾಮನ್‌ರೂಮ್‌ಎಂಬುದು ಒಂದು ಅಪೂರ್ವಲೋಕ. ಅಲ್ಲಿ ಸೇರುತ್ತಿದ್ದ ವಿದ್ವಾಂಸರ ನಡುವೆ ಪ್ರತಿ ನಿತ್ಯವೂ ಚರ್ಚೆ, ವಾಗ್ವಾದ, ಮಾತುಕತೆಗಳು ನಡೆಯುತ್ತಿದ್ದವು.  ಇದು ಕೇವಲಕಾಡು ಹರಟೆಯಾಗಿರುತ್ತಿರಲಿಲ್ಲ. ಸೂಕ್ಷ್ಮವಾದ ಹಾಸ್ಯ, ದ್ವೇಷ್ ಅಸೂಯೆಗಳಿಲ್ಲದ ಗೇಲಿ, ಕುಚೇಷ್ಟೆಗಳು ಇರುತ್ತಿದ್ದವು. ಪ್ರೊಪೇಸರ್‌ಮೂರ್ತಿರಾಯರು ಹೇಳುವಂತೆ ಅಂದಿನ ಮಹಾರಾಜ ಕಾಲೇಜಿನ ಅಧ್ಯಾಪಕರು “ಪಾಂಡಿತ್ಯ ಸಂಪಾದಿಸಿದ್ದರೆ ಅದು ಕಣ್ಣೀರಿನಿಂದ ಕೈ ತೊಳೆದು ಸಂಪಾದಿಸಿದ್ದಲ್ಲ. ಮಕ್ಕಳು ಆಟವಾಡುತ್ತಲೇ ಪ್ರಪಂಚ ಜ್ಞಾನವನ್ನು ಪಡೆಯುವಂತೆ” ಅವರು ದಕ್ಕಿದಷ್ಟು ಪಾಂಡಿತ್ಯ ಗಳಿಸಿದ ಕಾಲ ಅದು.

ಅಂಥ ಅಧ್ಯಾಪಕರ ಕೊಠಡಿಯಲ್ಲಿ ಅನಂತಕೃಷ್ಣ ಶರ್ಮರಿಗೆ ವಿಶಿಷ್ಟ ಸ್ಥಾನ. ಅವರನ್ನು ಆಗ ಅವರೊಡನೆ ಕೆಲಸ ಮಾಡುತ್ತಿದ್ದ ಇಂಗ್ಲೀಷ್ ಅಧ್ಯಾಪಕದ ಪ್ರೊಫೆಸರ ಕೆಲಸ ಮಾಡುತ್ತಿದ್ದ ಇಂಗ್ಲಿಷ್‌ಅಧ್ಯಾಪಕ ಪ್ರೊಫೆಸರ ಮೂರ್ತಿರಾಯರು ಹೀಗೆ ವರ್ಣಿಸಿದ್ದಾರೆ. ’ನೋಡುವುದಕ್ಕೆ ತಕ್ಕಮಟ್ಟಿಗೆ ಎತ್ತರದ ಆಳು, ಕೃಶವಾದ ದೇಹ, ಗೌರವರ್ಣ’ ಅವರನ್ನು ನೋಡಿದರೆ ಯಾರೋ ಸಾಧು ಸಂತರನ್ನು ಕಂಡಂತಾಗುತ್ತದೆ. ನಮ್ಮೆಲ್ಲರಲ್ಲೂ ಫೃಥ್ವಿ, ಅಪ್ಪು, ತೇಜಸ್ಸು, ವಾಯು, ಆಕಾಶ-  ಈ ಪಂಚಭೂತಗಳಿವೆಯಂತೆ, ಶರ್ಮರ ದೇಹದಲ್ಲಿ ಆಕಾಶದ ಭಾಗ ಸ್ವಲ್ಪ ಹೆಚ್ಚಾಗಿರಬೆಕು. ಅವರು ಸಾಧಾರಣವಾಗಿ ಧರಿಸುವುದು ನಿಲುವಂತಿ, ಅವರ ರುಮಾಲು ಈಷತ್ತು ಕಂದು ಬಣ್ಣದ ರೇಷ್ಮೆಯದು. ಅವರು ಸಂಸ್ಕೃತದಲ್ಲೂ ಪ್ರಾಕೃತದಲ್ಲೂ ಉದ್ಧಾಮ ಪಂಡಿತರು, ಚೆನ್ನಾಗಿ ಇಂಗ್ಲಿಷ್ ಬಲ್ಲವರು; ತೆಲುಗಿನಲ್ಲಂತೂ ಪ್ರಸಿದ್ಧರದ ಸಾಹಿತಿ; ಶಾಸ್ತ್ರೀಯವಾಗಿ ಸಂಗೀತವನ್ನು ಅಭ್ಯಾಸ ಮಾಡಿ ಪರಿಣಿತಿ ಪಡೆದವರು. ತಮ್ಮ ವಯಸ್ಸನ್ನೂ, ವಿದ್ವತ್ತನ್ನೂ ಮರೆತು ಯುವಕರೊಡನೆ ಯುವಕರಾಗಿ ನಮ್ಮ ಹುಚ್ಚಾಟಗಳೆಲ್ಲದರಲ್ಲಿಯೂ ಭಾಗವಹಿಸಲಬಲ್ಲರು. ಅವರು ಏನೇ ಕೆಲಸ ಮಾಡಲಿ, ಅದರಲ್ಲಿ ಕಲೆಗಾರನ ಕೈವಾಡ ಕಾಣಿಸುತ್ತದೆ. ಅವರ ಮನೆಗೆ ಹೋದರೆ ಕಾಫಿಗೆ ಬದಲಾಗಿ ಬಾದಾಮಿ, ಕೇಸರಿ, ಏಲಕ್ಕಿ ಮೊದಲಾದುವುಗಳಿಂದ ಸಂಸ್ಕಾರ ಪಡೆದಿರುವ ಹಾಲು ಕೊಡುತ್ತಾರೆ. ಅವರು ಕಿತ್ತಲೆ ಹಣ್ಣನ್ನು ಬಿಡಿಸುವುದೇ ಒಂದು ಕಲೆ. ಅದರ ಮೇಲೆ ಸಣ್ಣದೊಂದು  ಬಿರುಕುಮಾಡಿ ಸಿಪ್ಪೆಯನ್ನು ಸುರುಳಿಸುರುಳಿಯಾಗಿ ಬಿಡಿಸಿ ಅಖಂಡವಾಗಿ ತೆಗೆಯುತ್ತಾರೆ. ಆ ಸುರುಳಿಯ ಕೊನೆಯಲ್ಲಿ ಬಟ್ಟಲಿನಂತೆ ಒಂದು ಭಾಗ ನಿಲ್ಲಬೇಕು. ಹಣ್ಣು ಆ ಬಟ್ಟಲಿನಲ್ಲಿ ನೆಲಸಿರಬೇಕು. ಕೋಮಲವರ್ಣದ ಆ ಚೆಂಡು ಪುಟವಿಕ್ಕಿದ ಚಿನ್ನದಂತಿರುವ ಆ ಬಟ್ಟಲಿನಲ್ಲಿರುವುದೇ ಒಂದು ಸೊಬಗು. ಶರ್ಮರು ಆ ಬಣ್ಣದ ಸೊಬಗನ್ನು ಕ್ಷಣಕಾಲ ಹಾಗೆಯೇ ಸವಿಯುವರು; ಅನಂತರ ಮುಮದಿನ ಕೆಲಸ. ಹಣ್ಣಿನ ಸೇವನೆಗೆ ಬೇಕಾದ ಆ ಪೂರ್ವಸಿದ್ದತೆ ನಡೆಯುತ್ತಿರುವಾಗ ಅವರು  ಯಾವುದೋ ಪ್ರಾಕೃತ ಪದದ ವಿಷಯವಾಗಿಯೋ ಗಾಥಾಸಪ್ತತಿಯ ಶ್ಲೋಕವೊಂದರ ವಿಷಯವಾಗಿಯೋ ವ್ಯಾಖ್ಯಾನ ಮಾಡುತ್ತಿರುತ್ತಾರೆ.”

ಸಾಹಿತ್ಯದ ಅಧ್ಯಯನ

ಹೀಗೆ ಶರ್ಮರು ಶುಚಿ-ರುಚಿಗಳೆರಡಕ್ಕೂ  ಹೆಸರಾದ ಜೀವನ್ನನು ನಡೆಸಿದರು. ಶ್ರೋತ್ರೀಯ ಬ್ರಾಹ್ಮಣರಾದರೂ ಕುರುಡು ಸಂಪ್ರದಾಯಕ್ಕೆ ಸಿಕ್ಕಿ ಬಿದ್ದವರಲ್ಲ. ಜ್ಞಾನವನ್ನು ಎಲ್ಲ ದಿಕ್ಕುಗಳಿಂದಲೂ ಗ್ರಹಿಸಿದರು. ವೇದೋಪನಿಷತ್ತುಗಳು, ಸಂಸ್ಕೃತ- ಪ್ರಾಕೃತ ಸಾಹಿತ್ಯಗಳ ಜತೆಗೆ ಪಾಶ್ಚತ್ಯ ಸಾಹಿತ್ಯವನ್ನು ಓದಿ ಅರಗಿಸಿಕೊಂಡಿದ್ದರು. ಇಂಗ್ಲಷ್ ಸಾಹಿತ್ಯದ ಜೇನ್‌ಆಸ್ಟಿನ್‌ಎಂಬ ಕಾದಂಬರಿಕಾರಳ ಕೃತಿಗಳನ್ನು ಓದಿ ಸಂತೋಷಪಟ್ಟಿದ್ದರು. ಅರ್ಲ್‌‌ಸ್ಪಾನ್ಲೆ ಗಾರ್ಡಿನರ್‌ಎಂಬ ಪತ್ತೇದಾರಿ ಕಾದಂಬರಿಕಾರ ಸೃಷ್ಟಿಸಿರುವ ಪೆರಿ ಮೇಸನ್ ಎಂಬ ಕಥಾನಾಯಕನ ನೀತಿ-ನಿಷ್ಠೆಗಳನ್ನುಮೆಚ್ಚುತ್ತಿದ್ದರು. ಭಾರತೀಯ ಸಂಗೀತ-ಸಾಹಿತ್ಯ ಕಲೆಗಳನ್ನು ಮೆಚ್ಚುತ್ತಿದ್ದರಾದರೂ ಪಾಶ್ಚತ್ಯರ ಸಾಹಿತ್ಯ ಕಲೆಗಳನ್ನು ಅಲ್ಲಗಳೆದವರಲ್ಲ. ಅವರು ಅರ್ಥವಿಲ್ಲದ ಕುರುಡು ಅನುಕರಣೆಯನ್ನು ಮಾತ್ರ ಖಂಡಿಸುತ್ತಿದ್ದರು. ಶ್ರೀ ಮುತ್ತಯ್ಯ ಭಾಗವತರಂಥ ಪ್ರಕಾಂಡ ಪಂಡಿತರು ಸಹ ಯಾವುದಾದರೂ ಹೊಸಕೃತಿ ರಚಿಸಿದಾಗ ಶರ್ಮರ ವಿಮರ್ಶೆಯನ್ನು ಆಹ್ವಾನಿಸುತ್ತಿದ್ದರು. ಅವರ ಅಭಿಪ್ರಾಯವನ್ನು ಗೌರವಾದರಗಳಿಂದ ಸ್ವೀಕರಿಸುತ್ತಿದ್ದರು.

ಸಂಗೀತ ಕಲಿಯಬೇಕು

ಸಾಹಿತ್ಯವು ಶರ್ಮರ ವ್ಯಕ್ತಿತ್ವದ ಒಂದು ಮುಖ. ಸಂಗೀತ ಅದರ ಇನ್ನೊಂದು ಮುಖ. ಬಾಲ್ಯದಿಂದಲೂ ಅವರಿಗೆ ಮೃದುವಾದ ಮಧುರವಾದ ಶಾರೀರವಿತ್ತು. ಪ್ರಕೃತಿ ಕೊಟ್ಟ ವರ. ಆದರೆ ಈ ಪ್ರತಿಭೆಗೆ ಸಾಕಷ್ಟು ಪೋಷಣೆ ದೊರಕಿತ್ತು. ಶರ್ಮರ ತಾಯಿ ಆಲಮೇಲಮ್ಮನವರಿಗೆ ಒಳ್ಳೆಯ ಕಂಠವಿತ್ತು. ಅವರಿಗೆ ನುರಾರು ಸಂಸ್ಕೃತ ಶೋಕ್ಲಗಳನ್ನು, ಕನ್ನಡ, ತೆಲುಗು, ತಮಿಳು, ಹಾಡುಗಳು, ಭಜನೆ ಗೀತೆಗಳು, ಮದುವೆ ಹಾಡುಗಳು ಬರುತ್ತಿದ್ದವಂತೆ. ಶರ್ಮರು ೫-೬ ವರ್ಷದ ಹುಡುಗನಾಗಿದ್ದಾಗ ಅವರ ತಾಯಿ ದಿನವು ಅವರಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದರಂತೆ. ಇದರ   ಜತೆಗೆ ಹಳ್ಲಿಯ ಅಂಜನೇಯ ಗುಡಿಯಲ್ಲಿ ರಾಮಭಜನೆ ನಡೆಯುತ್ತಿತ್ತು. ಅವರು ಅದರಲ್ಲಿ ಭಾಗವಹಿಸುತ್ತಿದ್ದರು. ಹಳ್ಳಿಯಲ್ಲೂ ಸಂಗೀತಮಯ ವಾತಾವರಣವಿದ್ದ ಕಾಲ. ಶರ್ಮರಿಗೆ ಸಂಗೀತ ಕಲಿಯಬೇಕೆಂಬ ಹುಚ್ಚು ವಿಪರೀತ.

ಶರ್ಮರೇ ಹಾಡುಗಳನ್ನು ವತ್ತು ಹಾಡಿದರು

ಮೊದಲು ಅವರು ಮೈಸೂರಿನ ಪ್ರಸಿದ್ಧ ಸಂಗೀತಗಾರರಾದ ಕರಿಗಿರಿರಾಯರಲ್ಲಿ ಸಂಗೀತ ಹೇಳಿಸಿಕೊಂಡರು. ನಿಜವಾಗಿಯೂ ಸಂಗೀತ ಅವರಿಗೆ ರಕ್ತಗತವಾಗಿ ಸಿದ್ಧಸಿತ್ತು. ಅವರು ನೇವಾಗಿ ಗುರುಮುಖದಿಂದ ಕಲಿಯುವುದಕ್ಕಿಂತ ತಾವೇ ಸ್ವಂತ ಅಭ್ಯಾಸದಿಂದ  ಕಲಿತದ್ದು ಹೆಚ್ಚು. ಅಪಾರವಾದ ನಾದಮಯ ಸುಖವನ್ನು ಅನುಭವಿಸಿ ಕಲಿತ ವಿದ್ಯೆ ಅವರದು. ಅವರು ಮೈಸೂರಿನಲ್ಲಿ ತಪ್ಪದೆ ಒಳ್ಳೆಯ ಸಂಗೀತ ಕಚೇರಿಗಳಿಗೆ ಹೋಗುತ್ತಿದ್ದರು. ಮಹಾ ವಿದ್ವಾಂಸರಾದ ವೀಣೆ ಶೇಷಣ್ಣನವರ ವಾದನ, ಬಿಡಾರಂ ಕೃಷ್ಣಪ್ಪನವರ ಹಾಡುಗಾರಿಕೆ ಅವರ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವು. ಆಗಿನ ಕಾಲದಲ್ಲಿ ಈಗಿನಷ್ಟು ಸಂಗೀತಶಾಸ್ತ್ರದ ಬಗ್ಗೆ ಜನರು ಚರ್ಚಿಸುತ್ತಿರಲಿಲ್ಲ. ಪರಿಶುದ್ಧ ಸಂಗೀತವನ್ನು ಕೇಳಿ ಸುಖಿಸುತ್ತಿದ್ದರು. ಮನಸ್ಸಿನ ಭಾವನೆಗಳನ್ನು ಪರಿಶುದ್ಧಗೊಳಿಸಿಕೊಳ್ಳುತ್ತಿದ್ದರು. ಶರ್ಮರು ಸಂಗೀತ ಕಲಿತದದು ಅಂಥ ಮನೋಧರ್ಮವುಳ್ಳ ಗುರುಗಳ ಸಹವಾಸದಲ್ಲಿ. ಆ ಕಾಲದಲ್ಲಿ ಸಂಗೀತ ವಿದ್ವಾಂಸರು ಬಹುಮಂದಿ ಸುಲಭವಾಗಿ ಸಂಗೀತ  ಹೇಳಿಕೊಡುತ್ತಿರಲಿಲ್ಲ. ಶಾಸ್ತ್ರದ ವಿಷಯಗಳನ್ನು ರಹಸವೆಂಬಂತೆ ಮುಚ್ಚಿಟ್ಟುಕೊಳ್ಳುತ್ತಿದ್ದರು. ಆದರೆ ಬಿಡಾರಂ ಕೃಷ್ಣಪ್ಪನವರಂಥವರು ಇದಕ್ಕೆ ಹೊರತಾಗಿದ್ದರು.

ಮೈಸೂರಿಗೆ ಬಂದ ಮೂರು ವರ್ಷಗಳ ನಂತರ ೧೯೦೯ರಲ್ಲಿ ಒಂದು ಘಟನೆ ನಡೆಯಿತು. ಜ್ಯೇಷ್ಠ ಮಾಸದಲ್ಲಿ ಅರಮನೆಯಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜರ ವರ್ಧಂತಿ ಉತ್ಸವ. ಶರ್ಮರ ವಿದ್ಯಾಗುರುಗಳಾದ ಶ್ರೀ ಪರಕಾಲ ಸ್ವಾಮಿಗಳು ಪರಿವಾರದೊಂದಿಗೆ ಅರಮನೆಗೆ ದಯಮಾಡಿಸಿದರು.ಆ ಪರಿವಾರದಲ್ಲಿದ್ದ ಶರ್ಮರು ಚಾಮರ ಹಿಡಿದು ನಡೆದಿದ್ದರು. ಪ್ರಥಮವಾಗಿ ಅವರಿಗೆ ಅರಮನೆಗೆ ಪ್ರವೇಶ ದೊರೆತ ದಿನ ಅದು. ಅಂದು ಅವರಿಗೆ ರೋಮಾಂಚನವಾಗುವಂಥ ಅನುಭವ. ಅವತ್ತು ಬೆಳಿಗ್ಗೆ ಅರಮನೆಯ ವಿಶಾಲ, ಸುಂದರ ಅಂಬವಿಲಾಸ ತೊಟ್ಟಿಯಲ್ಲಿ ಸಂಗೀತ ಕಚೇರಿ ನಡೆಯುತ್ತಿತ್ತು. ಅಲ್ಲಿ ಸಂಗೀತ ವಿದ್ವಾಂಸರಾದ ಬಿಡಾರಂ ಕೃಷ್ಣಪ್ಪನವರು ಹಾಡುತ್ತಿದ್ದರು. ಬೀಸುತ್ತಿದ್ದ ಚಾಮರ ಶರ್ಮರ ಕೈಯಿಂದ  ಎಲ್ಲೋ ಹೋಯಿತು. ಅವರು ಮೈಯಲ್ಲಾ ಕಿವಿಯಾಗಿ ಆ ಅವೋಘವಾದ ಸಂಗೀತ  ಸಂಗೀತ ಕೇಳಿದರು. ಅಂದಿನಾ ಸಂಗೀತ ಅವರ ಪಾಲಿಗೆ ನಾದಮಯ ಗಂಗಾಸ್ನಾನವಾಯಿತು. ಹೇಗಾದರೂ ತಾನು ಸಂಗೀತ ಕಲಿಯಲೇಬೇಕೆಂದು ಅವರು ಪ್ರತಿಜ್ಞೆ ಮಾಡಿದರು. ಅಂದಿನಿಂದ ಸಂಗೀತ ಸಾಧನೆಗೆ ಜೀವವನ್ನು ಮೀಸಲಿಟ್ಟರು.

ಬಿಡಾರಂ ಕೃಷ್ಣಪ್ಪನವರ ಮಾರ್ಗದರ್ಶನ

ಅರಮನೆಯಲ್ಲಿ  ಅತ್ಯದ್ಭುತ ಸಂಗೀತ ಕೇಳಿ ಮಯ ಮರೆತ ಶರ್ಮರು ನೇರವಾಗಿ ಬಿಡಾರಂ ಅವರ ಬಳಿಗೆ ಹೋದರು. ಅವರ ಮುಂದೆ ತಮ್ಮ ಮಹದಾಸೆಯನ್ನು ಹೇಳಿಕೊಂಡರು. ವ್ಯಕ್ತಿಯ  ಉತ್ತಮ ಗುಣವನ್ನು ಗ್ರಹಿಸುವ ಶಕ್ತಿ ಕೃಷ್ಣಪ್ಪನವರಗೆ ಇತ್ತು. ಅವರು  ಅನಂತಕೃಷ್ಣ  ಶರ್ಮರನ್ನು  ಶಿಷ್ಯನಾಗಿ ಸ್ವೀಕರಿಸಿದರು. ಸುಮಾರು ೪-೫ ವರ್ಷ ಅವರಿಗೆ ಕ್ರಮಬದ್ದವಾದ ಪಾಠವಾಯಿತು. ಪ್ರೀತಿಯಿಂದ ಹೇಳಿಕೊಟ್ಟ ವಿದ್ಯೆ ಚೆನ್ನಾಗಿ ಸಿದ್ಧಿಸಿತ್ತು. ಆ ಹೊತ್ತಿಗೆ ಶರ್ಮರಿಗೆ ಕಾಲೇಜಿನಲ್ಲಿ ಶಿಕ್ಷಕರ ಕೆಲಸ  ಸಿಕ್ಕಿತ್ತು. ಸಂಗೀತವನ್ನು ವೃತ್ತಿಯಾಗಿ ಅನುಸರಿಸುವ ಅಗತ್ಯವಿರಲಿಲ್ಲ. ಆದರೆ ಅದು ಕೇವಲ ಹವ್ಯಾಸವೆಂದು ಬಗೆಯದೆ ಸಂಗೀತವನ್ನು ನಿರಂತರವಾಗಿ ಅಭ್ಯಾಸ ಮಾಡಿದರು.

ಅವರು ಬಿಡಾರಂ ಅವರ ಬಳಿ ಕಲಿಯುತ್ತಿದ್ದಾಗ ಒಂದು ದುರಂತ ಒದಗಿತು. ೧೯೧೮-೧೯ರಲ್ಲಿ ದೇಶದ ಎಲ್ಲಾ ಕಡೆ ಇನ್‌ಪ್ಲುಯೆಂಜಾ ರೋಗ ಹರಡಿತು. ಆದರೆ ಪೀಡೆ ಶರ್ಮರಿಗೂ ತಟ್ಟಿತು.  ಕೆಲವು ದಿನ ಅವರು ಜವರದಲ್ಲಿ ನರಳಿದರು. ಜ್ವರ ಬಿಟ್ಟಾಗ ಅವರ ಧ್ವನಿ  ಒಡೆದು ಹೋಗಿತ್ತು. ಅಲ್ಲಿಂದ ಮುಂದೆ ಅವರಿಗೆ ಹಾಡುಗಾರಿಕೆ ಸಾಧ್ಯವಾಗಲಿಲ್ಲ. ಗುರುಗಳಾದ ಕೃಷ್ಣಪ್ಪನವರು ಶಿಷ್ಯನ ಈ ಪರಿಸ್ಥಿತಿ ಕಂಡು ವ್ಯಥೆಪಟ್ಟರು. ಅವರ ಸಲಹೆಯಂತೆ ಶರ್ಮರು ಪೀಟಿಲು ವಾದನವನ್ನು ಅಭ್ಯಾಸ ಮಾಡಲು  ಪ್ರಾರಂಭಿಸಿ ಅದನ್ನು ಚೆನ್ನಾಘಿ ನುಡಿಸುವುದನ್ನು ಕಲಿತರು. ಗುರುಗಳು ಅವರ ಪ್ರತಿಭೆಯನ್ನು ಅರಿತು ಅವರನ್ನು ಚೆನ್ನಾಗಿ ತಿದ್ದಿದರು. ಕೃಷ್ಣಪ್ಪನವರು ಯವಾಗಲೂ ಶಿಷ್ಯರು ಗುರುವಿನ ಶೈಲಿಯನ್ನು ’ಮಕ್ಕಿಕಾಮಕ್ಕಿ’ ಅನುಕರಿಸಬಾರದೆಂದು ಹೇಳುತ್ತಿದ್ದರು. “ಪ್ರತಿ ಕಲಾವಿದನಿಗೂ ತನ್ನದೇ ಆದ ಪ್ರತಿಭೆ ಇರುತ್ತದೆ. ಅದನ್ನು ಹದಗೆಡಿಸಬಾರದು. ನಾನು ನನಗೆ ತಿಳಿದಷ್ಟನ್ನು ಹೇಳಿ ಕೊಡುತ್ತೇನೆ. ನೀವು ನಿಮ್ಮ ಶರೀರ, ಶಾರೀರ ಮನೋ ಧರ್ಮಗಳನ್ನು ಅನುಸರಿಸಿ ಕಲಿತುಕೊಳ್ಳಿ’ ಎನ್ನುತ್ತಿದ್ದರಂತೆ.

ಶೇಷಣ್ಣನವರ ಆದರ್ಶ

ಗುರುಗಳಾದ ಬಿಡಾರಂ ಅವರ ಬಾಯಿಯಿಂದ ಅರಮನೆಯಲ್ಲಿ ತಾವು ಕೇಳಿ ಸಂತೋಷಪಟ್ಟಿದ್ದ ಧನ್ಯಾಸಿ ರಾಗದ ಕೀರ್ತನೆಯನ್ನು ಒಮ್ಮೆ ಶರ್ಮರು ಅವರ ಎದುರಿಗೆ ಹಾಡಿದರಂತೆ. ಆದರೆ ಶರ್ಮರಿಗೆ ಅದರಿಂದ ಏನೇನೂ ತೃಪ್ತಿಯಾಗಲಿಲ್ಲ. “ಇದೆಕೆ ಹೀಗಾಯಿತು ಸ್ವಾಮಿ? ನೀವು ಹಾಡಿದ ಧಾಟಿಯನ್ನು ’ಚಾಚು’ ತಪ್ಪದೆ ಅನುಸರಿಸಿ ಹಾಡಿದ್ದೇನೆ. ಆದರೂ ಅಂದು ನನಗೆ ಆದ ಸಂತೋಷದ ಅನುಭವ ಇಂದು ಆಗಲಿಲ್ಲ” ಎಂದು ಗುರುಗಳನ್ನೇ ಕೇಳಿದರು. ಅದಕ್ಕೆ ಬಿಡಾಲಂ ಅವರು ಕೊಟ್ಟ ಉತ್ತರ : “ಸಂಗೀತ  ಕೇವಲ ಅನುಕರಣೆಯಲ್ಲ. ನೀನು ಹೆಚ್ಚು ಹೆಚ್ಚು ಸಾಧನೆ ಮಾಡಿ ಕರಗತ ಮಾಡಿಕೊಳ್ಳಬೇಕಾದ ವಿದ್ಯೆ ಅದು. ” ಈ ಮಾತು ಶರ್ಮರಿಗೆ ಒಪ್ಪಿಗೆಯಾಯಿತು. ಸಂಗೀತ ಕ್ಷೇತ್ರದಲ್ಲಿ ಶರ್ಮರಿಗೆ ವೀಣೆ ಶೇಷಣ್ಣನವರ ಆದರ್ಶ ಬಹಳ ದೊಡ್ಡದೆಂದು ತೋರಿತು. ಶೇಷಣ್ಣನವರು ಹಲವಾರು  ಸಲ  ಅತ್ಯಂತ ಭವ್ಯ ರೀತಿಯಲ್ಲಿ ವಾದನ ನಡೆಸುತ್ತಿದ್ದರು. ಅಲೌಕಿಕವಾದ ನಾದಲಯಗಳಲ್ಲಿ ಮಗ್ನರಾಗಿರುತ್ತಿದ್ದರು. ಕೆಲವೊಮ್ಮೆ ’ಅಯ್ಯೋ ನಮ್ಮ ಯೋಗ್ಯತೆಗೆ, ಸಾಧನೆಗೆ ತಕ್ಕಂತೆ ನಾವು ಬಾರಿಸ್ತೇವೇ ಹೊರತು ವೀಣೆಯ ಯೋಗ್ಯತೆಗೆ ತಕ್ಕಂತೆ ಬಾರಿಸಬಲ್ಲವೆ? ಎಂದು ಭಕ್ತಿ ಗೌರವದಿಂದ ನುಡಿದು ಕಣ್ಣೀರು ಕರೆಯುತ್ತಿದ್ದರಂತೆ. ಅಂಥ ಭಾವುಕ ಹೃದಯದ ಶ್ರೇಷ್ಠ ಕಲಾವಿದರನ್ನು ಶರ್ಮರು ತಮ್ಮ ಬದುಕಿಗೆ  ’ಮಾದರಿ’ ಎಂದು ಭಾವಿಸಿದರು. ಇದರ ಫಲವಾಗಿ ಸಂಗೀತ ಕಲೆ ಅವರಿಗೆ ಸಂಪೂರ್ಣವಾಗಿ ಸಿದ್ಧಿಸಿತು-ಆ ಪರಿಪೂರ್ಣತೆಯಿಂದಾಗಿ ಅವರು ಕೆಲವೊಮ್ಮೆ ಮೈ ಮರೆತು ಹಾಡುತ್ತಿದ್ದರು. ೧೯೫೦ರಲ್ಲಿ ಒಂದು ಅಪೂರ್ವ ಘಟನೆ ನಡೆಯಿತು. ತಿರುಪತಿಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಅವರು ಭಾಗವಹಿಸಿದ್ದರು. ಆಗ  ಅವರು ಅಣ್ಣಮಾಚಾರ್ಯರ ’ಬ್ರಹ್ಮಕಡಿಕಿನ ಪಾದಮು’ ಎಂಬ ಸುಂದರ ಕೃತಿಯನ್ನು ಮುಖಾರಿ ರಾಗದಲ್ಲಿ ಹಾಡಿದರು. ಸಭಿಕರ ನಡುವೆ ಕಪಿಸ್ಥಳಂ ಶ್ರೀ ರಂಗಾಚಾರಿ ಎಂಬ ವಿದ್ವಾಂಸರು ಕುಳಿತಿದ್ದರು. ಅವರೊಬ್ಬ ನಾಸ್ತಿಕರೆಂಬುದು ಎಲ್ಲರಿಗೂ ಗೊತ್ತಿತ್ತು. ಶರ್ಮರ ಹಾಡುಗಾರಿಕೆಯಿಂದ ರೋಮಾಂಚನಗೊಂಡ ಅವರು ಭಾವೋದ್ರಿಕ್ತರಾಗಿ ವೇದಿಕೆಯ ಮೇಲೆ ಬಂದರು. “ನಾಸ್ತಿಕನಾದ ನನಗೆ ಶರ್ಮರು ದೈವ ಸಾಕ್ಷಾತ್ಕಾರ ಮಾಡಿಸಿದ್ದಾರೆ” ಎಂದು ಹೇಳಿ ಹೊರಟು ಹೋದರಂತೆ.

ಗ್ರಂಥ ಸಂಪಾದನೆ-ಅನುವಾದ

ಹೀಗೆ ಅನಂತಕೃಷ್ಣ ಶರ್ಮರು ಸಂಗಿತ-ಸಾಹಿತ್ಯಗಳೆರಡಲ್ಲೂ ವಿಶೇಷ ಪಾಂಡಿತ್ಯಗಳಿಸಿ ಧನ್ಯರಾದರು. ಅವರು ಮೈಸೂರು ಮಹಾರಾಜರ ಕಾಲೇಜಿನಲ್ಲಿ ಮೂವತ್ತೇಳು ವರ್ಷ ಸಾರ್ಥಕ ಸೇವೆ ಸಲ್ಲಿಸಿದರು. ಬೇಕಾದಷ್ಟು ಕೀರ್ತಿ ಗೌರವಗಳನ್ನೂ ಸ್ನೇಹದ ಸಂಪತ್ತನ್ನೂ  ಗಳಿಸಿದರು. ೧೯೪೯ ರಲ್ಲಿ ಅವರು  ನಿವೃತ್ತರಾದಾಗ ಅವರ ಜೀವನದ ಒಂದು ಘಟ್ಟ ಮುಗಿದಿತ್ತು.

೧೯೫೦ರಲ್ಲಿ ಅವರ ಸೇವೆಯನ್ನು ತಿರುಪತಿ ವೆಂಕಟೇಶ್ವರ ವಿಶ್ವವಿದ್ಯಾನಿಲಯದವರು ಬೇಡಿದರು. ಅವರನ್ನು ಅಲ್ಲಿನ ಓರಿಯಂಟಲ್‌ರಿಸರ್ಚ್ ಸಂಸ್ಥೆಯಲ್ಲಿ ರೀಡರ್‌ಆಗಿ ನೇಮಿಸಿದರು. ಅಲ್ಲಿ ಶರ್ಮರಿಗೆ ಸಂಗೀತಶಾಸ್ತ್ರದ ಬಗ್ಗೆ ಸಂಶೋಶಧನೆ ನಡೆಸಲು ಅವಕಾಶ ಸಿಕ್ಕಿತು. ತಾವು ಬದುಕಿನಲ್ಲಿ  ಗಳಿಸಿದ ವಿದ್ಯೆಯ ಫಲವನ್ನು, ಚಿಂತನೆಯ ಸಾರವನ್ನು ಗ್ರಂಥಗಳ ರೂಪದಲ್ಲಿ ಪ್ರಕಟಿಸಿದರು. ಸ್ವಂತ ಕೃತಿಗಳ ಜತೆಗೆ ಹಳೆಯ ಗ್ರಂಥಗಳನ್ನು ಶೋಧಿಸಿ  ನೋಡಿ ತಿದ್ದಿ ಪ್ರಕಟಿಸಿದರು. ಈ ಕೆಲಸಕ್ಕೆ ’ಗ್ರಂಥ ಸಂಪಾದನೆ’ ಎಂದು ಹೆಸರು. ಇದನ್ನು ಅವರು ಚೆನ್ನಾಗಿ ನಿರ್ವಹಿಸಿದರು. ಅಲ್ಲದೆ ಸಂಸ್ಕೃತದಿಂದ ತೆಲುಗಿಗೆ ಉತ್ತಮ ಕೃತಿಗಳನ್ನು ತಂದುಕೊಟ್ಟರು. ಅವರು ಮೊದಲು ತೆಲುಗಿನಲ್ಲಿ ಪ್ರಕಟಿಸಿದ ಗ್ರಂಥ-ತೆನಾಲಿ ರಾಮ ಕವಿಯ ’ಪಾಂಡುರಂಗ ಮಹಾತ್ಮ್ಯಮು’. ನಮಗೆಲ್ಲಾ ತೆನಾಲಿ ರಾಮನೆಂದರೆ ಒಬ್ಬ ವಿದೂಷಕ. ಹಾಸ್ಯಗಾರ ಎಂಬ ತಪ್ಪು ಕಲ್ಪನೆ ಇದೆ. ಆದರೆ ಅವನು ಒಬ್ಬ ಮಹಾಜ್ಞಾನಿಯೂ , ಭಕ್ತನೂ ಆಗಿದ್ದ, ತೆಲುಗು ಸಾಹಿತ್ಯದ ಒಬ್ಬ ಉತ್ತಮ ಕವಿ ಅವನು. ಅವನು ರಚಿಸಿದ ’ಪಾಂಡುರಂಗ ಮಹಾತ್ಮ್ಯಮು’ ಒಂದು ಶ್ರೇಷ್ಟ ಭಕ್ತಿ ಕಾವ್ಯ. ಶರ್ಮರು ಅದನ್ನು ಶೋಧಿಸಿ, ಸರಿಯಾದ ಶಬ್ದಗಳನ್ನು ಸೇರಿಸಿ ’ಸಂಪಾದಿಸಿ’ದರು. ಸುಬ್ಬರಾರಾಮ ದೀಕ್ಷಿತರೆಂಬ ಸಂಸ್ಕೃತ ವಿದ್ವಾಂಸರ ’ಸಂಗೀತಶಾಸ್ತ್ರ’ಕ್ಕೆ ಸಂಬಂಧಿಸಿದ ಅಮೂಲ್ಯ ಕೃತಿ. ಅದನ್ನು ಶರ್ಮರು ಪರಿಷ್ಕರಿಸಿ ಪ್ರಕಟಿಸಿದರು. ಇದಲ್ಲದೆ ಅವರು ಕೆಲವು ಹಳೆಯ ಉತ್ತಮ ಸಂಸ್ಕೃತ ಗ್ರಂಥಗಳನ್ನು ತೆಲುಗಿಗೆ ಭಾಷಾಂತರಿಸಿದರು.

ಪ್ರಾಕೃತವು ಸಂಸ್ಕೃತಕ್ಕಿಂತ ಹಳೆಯದು, ಅದರ ಹಿಂದಿನ ಸ್ವರೂಪ. ಶತಮಾನಗಳ ಹಿಂದೆ ಆ ಪ್ರಾಚೀನ ಭಾಷೆಯಲ್ಲೂ ಹಲವು ಗ್ರಂಥಗಳು ರಚಿತವಾಗಿದ್ದವು. ಹಾಲ ಎಂಬ ಕವಿ ಪ್ರಾಕೃತದಲ್ಲಿ ’ಗಾಥಾ ಸಪ್ತತಿ’  ಎಂಬ ಕಾವ್ಯ ಬರೆದಿದ್ದ.  ಶರ್ಮರು ಅದನ್ನು ತೆಲುಗಿನಲ್ಲಿ ಪದ್ಯ ರೂಪಕ್ಕೆ  ಎಳಿಸಿ ತೆಲುಗು ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನಿತ್ತರು.ಆಂಧ್ರಪ್ರದೇಶದ ಹಲವಾರು ಕಡೆ ಕಾವ್ಯ-ನಾಟಕಗಳ ಬಗ್ಗೆ ಉಪನ್ಯಾಸಗಳನ್ನು ಕೊಟ್ಟು ಜ್ಞಾನ ಪ್ರಸಾರ ನಡೆಸಿದರು.

ಎರಡು ನಾಡುಗಳ ನಡುವೆ ಸೇತುವೆ

ಹುಟ್ಟಿನಿಂದ ಆಂಧ್ರ ಪ್ರದೇಶದವರಾದರೂ ಅನಂತಕೃಷ್ಣ ಶರ್ಮರು ಬೆಳೆದದ್ದು, ಸರಸ್ವತಿಯ ಸೇವೆ ಸಲ್ಲಿಸಿದ್ದು. ಕನ್ನಡ ನಾಡಿನಲ್ಲಿ. ಆದರೆ ಅವರಿಗೆ ಭಾಷೆಗಳ ಬಗ್ಗೆ ದ್ವೇಷಾಸೂಯೆಗಳಾಗಲಿ. ಸಂಕುಚಿತ ಭಾವನೆಗಳಾಗಲಿ ಇರಲಿಲ್ಲ. ಎಲ್ಲ ಭಾಷೆಗಳೂ ಸರಸ್ವತಿಯ ನಾಲಿಗೆಯಿಂದ ಹೊರಹೊಮ್ಮಿದ ದಿವ್ಯ ಪ್ರಸಾದವೆಂದೇ ಭಾವಿಸಿದ್ದರು. ಅವರು ಕರ್ನಾಟಕ-ಆಂಧ್ರ ರಾಜ್ಯಗಳ ನಡುವೆ ಸೇತುವೆಯಂತಿದ್ದರು. ಸಂಗೀತ -ಸಾಹಿತ್ಯಗಳ ಮೂಲಕ ಎರಡು ಭಾಷೆಗಳ  ನಡುವೆ ಏಕತೆಯನ್ನುಂಟುಮಾಡಿದರು. ಕನ್ನಡದ ಸಂಗೀತ ಕೃತಿಗಳನ್ನು ಸಂಗೀತಗಾರರನ್ನು ಆಂಧ್ರದಲ್ಲಿ ಜನಪ್ರಿಯಗೊಳಿಸಿದರು. ಸರ್ವಜ್ಞ ಕವಿಯು ಕನ್ನಡದ ಒಬ್ಬ ಅಪೂರ್ವ ವರ್ಚಸ್ಸಿನ  ಕವಿ. ಅವನು ಆಂಧ್ರ ದೇಶದಲ್ಲಿ ತಿರುಗಾಡಿದ್ದನೆಂದು ಪ್ರತೀತಿ. ಅವನೊಬ್ಬ ಆಶು ಕವಿ. ಆಂದರೆ ಸಮಯಸ್ಫರ್ತಿಯಿಂದ ತತಕ್ಷಣದಲ್ಲೇ ಕಾವ್ಯಗಳನ್ನು ರಚಿಸುವ ಶಕ್ತಿಯುಳ ಕವಿ. ಅವನು ಬರೆದ ನೀತಿ ವಚನಗಳು  ಮುರು ಸಾಲಿನ ’ತ್ರಿಪದಿ’ಗಳು. ತೆಲುಗಿನಲ್ಲಿ ವೇಮನೆಂಬ ಕವಿ ಕನ್ನಡದ ಸರ್ವಜ್ಞನ  ಸಮಕಾಲೀನನಾಗಿದ್ದನೆನ್ನುವುದುಂಟು. ಅವನು ಸಹ ಸಾವಿರಾರು ನೀತಿ ಕವನಗಳನ್ನು  ಬರೆದಿದ್ದ. ಶರ್ಮರು ತಮ್ಮ ಲೇಖನಗಳ ಮೂಲಕ ಸರ್ವಜ್ಞನನ್ನು ಆಂಧ್ರರಿಗೆ ಪರಿಚಯ ಮಾಡಿಸಿದರು. ವೇಮನನನ್ನು ಕನ್ನಡದವರ ಹತ್ತಿರಕ್ಕೆ ತಂದುಕೊಟ್ಟರು.

ಅವರ ಸ್ವಂತ ಕೃತಿಗಳಲ್ಲಿ ಈ ಕೆಲಸವನ್ನು ಹೆಸರಿಸಬಹುದು. ತೆಲುಗಿನಲ್ಲಿ ಬರೆದ ’ಸಾರಸ್ವತ ಲೋಕಮು’, ’ಕಾವ್ಯವಲೋಕವು’ ಶ್ರೇಷ್ಠ ಪ್ರಬಂಧ ಸಂಕಲನ.ಇದಲ್ಲದೆ ಕನ್ನಡದಲ್ಲಿ ಅವರು ಬರೆದ  ಪ್ರಬಂಧಗಳು ’ಗಾನಕಲೆ’ ’ಸಾಹಿತ್ಯ ಮತ್ತು ಜೀವನ ಕಲೆ’ ಎಂಬ ಎರಡು ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಆಂಧ್ರ ವಿಶ್ವವಿದ್ಯಾನಿಲಯದಲ್ಲಿ ಅವರು ವೇಮನನನ್ನು ಕುರಿತು ನೀಡಿದ ಎರಡು  ವಿಶೇಷ ಉಪನ್ಯಾಸಗಳು ಗ್ರಂಥರೂಪವಾಗಿ ಪ್ರಕಟವಾಗಿವೆ. ಜತೆಗೆ  ’ನಾಟಕೋಪನ್ಯಾಸಮು’ ’ಕಾವ್ಯವಲೋಕಮು’ ಎಂಬ ಬಿಡಿ ಲೇಖನಗಳೂ ಅಚ್ಚಾಗಿವೆ.  ಈ ಎಲ್ಲ ಕೃತಿಗಳಲ್ಲಿ ಶರ್ಮರ ಆಳವಾದ ಪಾಂಡಿತ್ಯ ವಿಮರ್ಶನಾ ಶಕ್ತಿ, ರಸಾಭಿಜ್ಞತೆಗಳು ಎದ್ದು ಕಾಣುತ್ತವೆ. ಅವರು ಸ್ವಂತವಾಗಿ ಬರೆದುದು ಸ್ವಲ್ಪವೇ ಆದರೂ ಅದೆಲ್ಲಾ ಅಪ್ಪಟ ಬಂಗಾರದ ಹಾಗೆ ಬೆಲೆಯುಳ್ಳವು, ನಾಲ್ಕುಕಾಲ ನಿಲ್ಲುವ ಯೋಗ್ಯತೆ ಅವಕ್ಕೆ ಉಂಟು.

ಅಣ್ಣಮಾಚಾರ್ಯರು

ಶರ್ಮರದು ಹಲವು ಸಾಧನೆಗಳ ಮೂಲಕ ಸಾರ್ಥಕವಾದ ಜೀವನ. ತಮ್ಮ ಎಲ್ಲಾ ಸಾಧನೆಗಳಿಗೂ ಕಳಶವಿಡುವಂಥ ಒಂದು ಉನ್ನತ ಕೆಲಸವನ್ನು ಅವರು ಮಾಡಿ ಮುಗಿಸಿದರು. ೧೯೫೦ ರಲ್ಲಿ ಅವರು ತಿರುಪತಿಗೆ ಹೋಗಿ ಅಲ್ಲಿ ಸುಮಾರು ಏಳು ವರ್ಷ ಕಾಲ ಸಂಶೋಧನೆಯಲ್ಲಿ ತೊಡಗಿದ್ದರಷ್ಟೆ. ಆಗ ಅವರು ತಳ್ಳಪಾಕು ಅಣ್ಣಮಾಚಾರ್ಯರ ಕೀರ್ತನೆಗಳನ್ನು ಪರಿಷ್ಕರಿಸಿ ಸಂಪಾದಿಸಿದರು.

ತಾಳ್ಳಪಾಕು ಅಣ್ಣಮಾಚಾರ್ಯರೆಂಬುವರು  (ಕ್ರಿ.ಶ. ೧೪೦೮-೧೫೦೩) ಆಂಧ್ರ ರಾಜ್ಯದಲ್ಲಿ ೧೫ನೆಯ ಶತಮಾನದಲ್ಲಿ ಜೀವಿಸಿದ ಒಬ್ಬ ಮಹಾಕವಿ. ಅವರಿಗೆ ’ಪದಕವಿ ಪಿತಾಮಹ’ ಎಂಬ ಬಿರುದು ಇತ್ತು. ಅವರು ತೆಲುಗಿನಲ್ಲಿ ಸಾವಿರಾರು ’ಕೀರ್ತನೆ’ ಅಥವಾ ’ಪದ’ ಗಳನ್ನು ರಚಿಸಿದರು. ಅವರು ತಿರುಪತಿ ವೆಂಕಟೇಶ್ವರನ ಭಕ್ತರು. ತಮ್ಮ ಇಷ್ಟದೈವವಾದ ಶ್ರೀನಿವಾಸನನ್ನು ಕುರಿತು ಅವರು ಅಸಂಖ್ಯಾತ ಭಜನೆಗಳನ್ನು  ರಚಿಸಿದರು. ತೆಲುಗಿನಲ್ಲಿ ಕೀರ್ತನೆಗಳನ್ನು ಬರೆದವರಲ್ಲಿ ಅವರೇ ಮೊದಲಿಗರು. ಅವರು  ಕೀರ್ತನೆಗಳನ್ನು ರಚಿಸುವ ಮೊದಲು ಇದ್ದ ತೆಲುಗು ಹಾಡುಗಳು ಈಗ ಸಿಕ್ಕಿಲ್ಲ. ಆಗಿನ ಕಾಲದಲ್ಲಿ ಧರ್ಮದ ವಿಷಯವಾಗಿ ಜನರಿಗೆ ತಿಳಿಸಲು ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು. ತಮಿಳಿನ ಭಕ್ತಿ ಕವಿಗಳಾದ  ಆಶ್ವಾರುಗಳ ’ಪ್ರಬಂಧ’ ಅಥವಾ  ಹಾಡುಗಳು ಅವರಿಗೆ ಮಾದರಿಯದವು. ಅವೆಲ್ಲ ರಾಗ ತಾಳ ಬದ್ದ ಹಾಡುಗಳು. ಆದ್ದರಿಂದ ಬಾಲ್ಯದಿಂದಲೇ ಅಣ್ಣಮಾಚಾರ್ಯರಿಗೆ ಸಂಗೀತಶಾಸ್ತ್ರದ ಪರಿಚಯವಾಯಿತು. ಇದರ ಜೊತೆಗೆ ಅವರಿಗೆ ಕನ್ನಡದ ದಾಸ ಕವಿಗಳಾದ  ಶ್ರೀನರಹರಿತೀರ್ಥರು, ಪುರಂದರದಾಸರು ಬರೆದ ಹಾಡುಗಳು ಸಹ  ತಿಳಿದಿದ್ದವು. ಇವೆಲ್ಲದರ ದೆಸೆಯಿಂದ ಅವರ ಕಾವ್ಯಶಕ್ತಿ ಚಿಗುರಿ ಬೆಳೆಯಿತು. ಅವರು ದಕ್ಷಿಣ ದೇಶಧ ಹಲವೆಡೆ ಸಂಚರಿಸುತ್ತಾ ಸಾವಿರಾರು ಭಕ್ತಿ ’ಪದ’ಗಳನ್ನು ಬರೆದರು. ಅವರು  ಬರೆದ  ಈ ಕೀರ್ತನೆಗಳು ಸುಮಾರು ಮೂವತ್ತೆರಡು ಸಾವರಿದಷ್ಟಾಗುತ್ತವೆ. ಈಗ ಅವುಗಳಲ್ಲಿ ಸುಮಾರು ಹದಿನಾಲ್ಕು ಸಾವಿರ ಹಾಡುಗಳು ಸಿಕ್ಕಿವೆ. ಒಟ್ಟು ಹಾಡುಗಳ ಸಾಲುಗಳನ್ನು ಲೆಕ್ಕ ಹಾಕಿದರೆ ವ್ಯಾಸ ಮಹಾಭಾರತದಷ್ಟಕ್ಕೆ ಏರುತ್ತದೆ. ಇಂಥ ಅಮ್ಯೂಲ್ಯ ಗ್ರಂಥರಾಶಿ ನೂರಾರು ವರ್ಷಗಳ ಕಾಲ ಜನರ ಕಣ್ಣಿಗೆ ಕಾಣಿಸದಂತೆ ಅಡಗಿ ಹೋಗಿತ್ತು.  ಆ ಕಾವ್ಯ ಸಂಪತ್ತನ್ನು ಚೆನ್ನಾಗಿ ಕಾಪಾಡಿದ್ದು ನಮ್ಮ ಪುಣ್ಯ.  ಆ ಕೆಲಸ ಮಾಡಿದವರು ಅಣ್ಣಮಾಚಾರ್ಯರ ಮಕ್ಕಳು ಮೊಮ್ಮಕ್ಕಳು. ಅವರ ಮಗ ತಿರುಮಲಾಚಾರ್ಯ, ಮೊಮ್ಮಗ ಚಿಕ್ಕ ತಿರುಮಲಾಚಾರ್ಯ ಇಬ್ಬರು ಸೇರಿ ಆ ಹಾಡುಗಳನ್ನು ಜೋಪಾನವಾಗಿ ಸೇರಿಸಿಟ್ಟರು. ಆ ಎಲ್ಲಾ ಹಾಡುಗಳನ್ನೂ ತಾಮ್ರದ  ತಗುಡುಗಳಲ್ಲಿ  ಮುತ್ತಿನಂಥ ದಪ್ಪ ಅಕ್ಷರಗಳಲ್ಲಿ  ಕೆತ್ತಿಸಿದರು. ಆಮೇಲೆ ಹೇಗೋ ಆವೆಲ್ಲವನ್ನೂ ತಿರುಮಲೆಯ ಸಂಕೀರ್ತನ ಭಂಡಾರದಲ್ಲಿ ಅಡಗಿಸಿಡಲಾಗಿತ್ತು. ನುರಾರು ವರ್ಷ ಅವು ಯಾರ ಗಮನಕ್ಕೂ ಬಂದಿರಲಿಲ್ಲ.  ಅದರ ಪತ್ತೆಯಾದುದು ಕೇವಲ ಆಕಸ್ಮಿಕ. ೧೯೨೦ ರ ಸುಮಾರಿನಲ್ಲಿ, ಬೆಲೆಬಾಳುವ ಆ ತಾಮ್ರದ  ತಗಡುಗಳಲ್ಲಿ ಕೆಲವನ್ನು ಯಾರೂ ದುರುಳರು ಕದ್ದು ಮಾರುವಾಗ ಸಿಕ್ಕಿಬಿದ್ದರಂತೆ .  ದೇವಸ್ಥಾನದ ಅಧಿಕಾರಿಗಳು ಜಾಗೃತರಾದರು. ಅವುಗಳನ್ನು ಜೋಪನ ಮಾಡುವ ಏರ್ಪಾಡು ನಡೆಯಿತು.  ಶತಮಾನಗಳ ಹಿಂದೆ ಆ ಹಾಡುಗಳ ನಕಲುಗಳನ್ನು ಇನ್ನೂ ದಪ್ಪ ದೊಡ್ಡ ತ್ರಾಮದ ಹಲಗೆಗಳಲ್ಲಿ ಕೆತ್ತಿಸಿ ಆಹೋಬಲದ ಶ್ರೀ ನರಸಿಂಹ ದೇವಾಲಯದಲ್ಲಿರಿಸಿದ್ದುದು ಆಗ ಬೆಳಕಿಗೆ ಬಂತು. ಇದು ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲೇ ಒಂದು ಅಸಾಧಾರಣ ಸಂದರ್ಭ. ದೇವಸ್ಥಾನದ ಕತ್ತಲೆಯ ಮೂಲೆಯಲ್ಲಿ ಸಾವಿರಾರು ತಾಮ್ರದ ಗತಡುಗಳಲ್ಲಿ ಕೆತ್ತಿದ ಕೀರ್ತನೆ ರಾಶಿಗಳು ಪತ್ತೆಯಾದವು. ದೇವಸ್ಥಾನದ ಅಧಿಕಾರಿಗಳು ಈ ತಗಡುಗಳನ್ನು ಸಂಗ್ರಹಿಸಿಟ್ಟರು. ಆಂಧ್ರ ದೇಶದ ಮೂಲೆ ಮೂಲೆಗಳಲ್ಲಿ  ದೊಡ್ಡ ಕೋಲಾಹಲ.

ರಾಳ್ಲಪಲ್ಲಿಯವರ ಸೇವೆ

ಸಂಶೋಧನೆ ನಡೆಸಲು ತಕ್ಕ ವಿದ್ವಾಂಸರಿಗಾಗಿ ದೊಡ್ಡ ಶೋಷಣೆಯೇ ನಡೆಯಿತು.  ಈ ಕೀರ್ತನೆಗಳನ್ನು ಸಂಪಾದಿಸುವ ಕೆಲಸ ೧೯೩೧ರಲ್ಲಿ ಪ್ರಾರಂಭವಾಯಹಿತು. ಎಲ್ಲಾ ಹಾಡುಗಳೂ ೧೫ನೇಯ  ಶತಮಾನದ ಅಣ್ಣಮಾಚಾರ್ಯರು ರಚಿಸಿದವೆಂಬುದು ಖಚಿತವಾಯಿತು. ಅವುಗಳನ್ನು ಸಂಶೋಧಿಸುವ ಕೆಲಸ ಪ್ರಾರಂಭಿಸಿದರು ಸಾಧು ಸುಬ್ರಹ್ಮಣ್ಯ ಶಾಸ್ತ್ರೀಗಳು. ಆಮೇಲೆ  ಕೆಲಕಾಲ  ವೇಟೂರಿ ಪ್ರಭಾಕರ ಶಾಸ್ತ್ರಿಗಳು  ಕೆಲಸ ಮಡಿದರು. ಆದರೆ ಈ ಮಹತ್ಕಾರ್ಯವನ್ನು ಮುಂದುವರಿಸಿ ಸಮರ್ಪಕವಾಗಿ ಮಾಡಿದವರು ರಾಳ್ಳಪಲ್ಲಿ ಅನಂತ ಕೃಷ್ಣ ಶರ್ಮರು. ಗ್ರಂಥ ಸಂಪಾದನೆಯ ಕೆಲಸ ಬಹಳ ಕಷ್ಟಕರ ಹಾಗೂ ಸೂಕ್ಷ್ಮವಾದುದು. ಬಹುಕಾಲದ ಹಿಂದೆ ಬರೆದಿಟ್ಟ ಗ್ರಂಥ, ಶಾಸನಾದಿಗಳಲ್ಲಿ ಅನೇಕ ಶಬ್ದಗಳು  ಅಳಿಸಿ ಹೋಗಿರುತ್ತವೆ. ಕೆಲವೊಮ್ಮೆ ಕೇವಲ ಜಾಣತನದಿಂದ ಯರೋ ಬೇರೆ ಬೇರೆ ಮಾತುಗಳನ್ನೂ, ವಾಕ್ಯಗಳನ್ನೂ, ಕಾವ್ಯ ಭಾಗಗಳನ್ನೂ ಸೇರಿಸಿಬಿಟ್ಟಿರಬಹುದು. ಇನ್ನೂ ಕೆಲವು ವೇಳೆ ಅರ್ಥವಿಲ್ಲದ ಅಪಪಾಠಗಳು ಸೇರಿ ಹೊಗಿರುವ ಸಂಬವವಿರುತ್ತದೆ. ಆದರೆ ಇದೆಲ್ಲವನ್ನೂ ಪ್ರಮಾಣಬದ್ಧವಾಗಿ  ಸಮಂಜಸವಾಗಿ ತಿದ್ದಿ ಜೊಡಿಸುವ ಕೆಲಸ ಸಂಪಾದಕನದು ಆ ಸಂಪಾದಕ ಆ ಭಾಷೆಯಲ್ಲಿ  ಪಂಡಿತನಾಗಿರಬೇಕು. ಕವಿಯ ಹಿನ್ನೆಲೆ ಹಾಗೂ ಸಂಪ್ರದಾಯಗಳು ಅವನಿಗೆ ಚೆನ್ನಾಗಿ ತಿಳಿದಿರಬೇಕು. ಕವಿ ಹೃದಯವನ್ನು ಬಲ್ಲ ಪಂಡಿತ ಸಂಪಾದಕ ಕವಿಯ ಆಲೋಚನಾಕ್ರಮವನ್ನು ಅನುಸಿರಿ ಸರಿಯಾದ ’ಪಾಠ’ಗಳನ್ನು ಆರಿಸಿಕೊಳ್ಳಬಲ್ಲನು. ಆಮೇಲೆಯೂ ಆ ಪಾಠದಲ್ಲಿ ಹಲವು ತಪ್ಪುಗಳು ಉಳಿಯಬಹುದು. ಕೆಲವು ಕಡೆ ಅರ್ಥವಾಗದಿರಬಹುದು. ಆಗ ಸಂಪಾದಕನು ತನ್ನ ಪಾಂಡಿತ್ಯ, ಪ್ರತಿಭೆಗಳ ಆಧಾರದ ಮೇಲೆ ಊಹಾತ್ಮಕವದ ತಿದ್ದುಪಾಡುಗಳನ್ನು ಮಾಡಬೇಕಾಗುತ್ತದೆ. ಊಹೆಯಿಂದ ಮೂಲ ಪಾಠದ ರಸಭಂಗವಾಗಬಾರದು. ಇಷ್ಟೆಲ್ಲಾ ಎಚ್ಚರಿಕೆಯನ್ನು ’ಸಂಪಾದಕ’ ಪಂಡಿತ ವಹಿಸಬೇಕು. ಇಂಥ ಕಡುಕಷ್ಟದ ಹೊಣೆಗಾರಿಕೆಯನ್ನು ಶರ್ಮರು ಹೊತ್ತುಕೊಂಡರು. ಅಣ್ಣಮಾಚಾರ್ಯರ ಕೃತಿಗಳ ’ಸಂಪಾದನೆಯ’ ಕೆಲಸವನ್ನು ಅವರು ೧೯೫೧ ರಿಂದ ಹಿಡಿದು ೬-೭ ವರ್ಷಗಳ ಕಾಲ ನೆರವೇರಿಸಿದರು. ಈ ಕೆಲಸಕ್ಕೆ ಬೇಕಾದ ವಿದ್ವತ್ತು, ಪ್ರತಿಭೆ, ತಾಳ್ಮೆ, ಭಾಷಾ ಸಂಪತ್ತು, ರಸಗ್ರಹಣ ಶಕ್ತಿ ಎಲ್ಲವೂ  ಅವರಲ್ಲಿದ್ದವು. ಅವರು ಸುಮಾರು ೯೦೦೦ ಸಂಕೀರ್ತನಗಳನ್ನು ಶೋಧಿಸಿ ಸಂಪಾದಿಸಿದರು. ಈಗ ಅವು ೨೩ ಸಂಪುಟಗಳಾಗಿ ಹೊರಬಂದಿವೆ.  ಆ ಕೆಲಸ ಇನ್ನೂ ಆಗುತ್ತಿದೆ. ಶರ್ಮರು ಸುಮಾರು ೧೦೬ ಕಿರ್ತನೆಗಳಿಗೆ (ಎರಡು ಸಂಪುಟಗಳ) ಸ್ವರ ಪ್ರಸ್ತಾರ ಹಾಕಿ  ಪ್ರಕಟಿಸಿದರು.

ಈ ಹಾಡುಗಳನ್ನು ’ಪದ’ಗಳೆನ್ನುತ್ತಾರೆ. ಪ್ರತಿ ಕೀರ್ತನೆಯಲ್ಲೂ ಮೂರು ಭಾಗಗಳಿರುತ್ತವೆ. ಪಲ್ಲವಿಯಲ್ಲಿ  ರಾಗತಾಳಗಳ ಸಾಮಾನ್ಯ ಸ್ವರೂಪವಿದ್ದು ಅನುಪಲ್ಲವಿಯಲ್ಲಿ ಅವು ವಿಸ್ತೃತವಗಿರುತ್ತವೆ. ಚರಣ ಅಥವಾ ಕೊನೆಯ ಭಾಗದಲ್ಲಿ ಅವುಗಳ ಸಂಪೂರ್ಣ ಸಂಚಾರವಿರುತ್ತದೆ. ಪ್ರತಿ ಕೀರ್ತನೆಯಲ್ಲೂ ಸಾಮಾನ್ಯ ಜನರಿಗೆ  ಚೆನ್ನಾಘಿ ಗೊತ್ತಿದ್ದ ರಾಗತಾಳಗಳನ್ನೆ ಅಳವಡಿಸಲಾಗುತ್ತಿತ್ತು. ಎಲ್ಲವೂ ಸುಲಭವಾಗಿ ಹಾಡಲು ಬರುತ್ತವೆ. ಆದರೆ ಅಣ್ಣಮಾಚಾರ್ಯರು ಮಹಾಕವಿಗಳು, ಆದ್ದರಿಂದ ಅವರ ಹಡುಗಳಲ್ಲಿ ಸಾಹಿತ್ಯದ ಗುಣವೂ ಬೇಕಾದಷ್ಟಿದೆ. ಅವರು ಹಾಕಿಕೊಟ್ಟ ದಾರಿಯನ್ನು ಅನಂತರದ ಕೀರ್ತನಕಾರರು ಅನುಸರಿಸಿದರು. ತ್ಯಾಗರಾಜರು, ಕ್ಷೇತ್ರಯ್ಯ ಮುಂತಾದ ಸಂಗೀತಶಾಸ್ತ್ರಜ್ಞರಿಗೆ ಅಣ್ಣಮಯ್ಯನವರೇ ದಾರಿ ದೀಪ. ಸಾಹಿತ್ಯ ಸಂಗೀತಗಳಲ್ಲಿ ವಿದ್ವಾಂಸರಾಗಿದ್ದ ಶರ್ಮರು ಈ ಹಾಡುಗಳ ಬಗ್ಗೆ ಸಂಶೋಧನೆ ನಡೆಸಿದ್ದು ಅವರ ದೊಡ್ಡ ಸಾಧನೆ.

ತಾನಾಗಿ ಬಂದ ಸನ್ನಾನ

ಅನಂತಕೃಷ್ಣ ಶರ್ಮರು ಎಂದೂ ಕೀರ್ತಿ, ಪ್ರಶಸ್ತಿಗಳಿಗಾಗಿ ಹಂಬಲಿಸಿದವರಲ್ಲ, ಅತ್ಯುತ್ತಮವಾದ ಸಂಗೀತವನ್ನು ಜನರು ಕೇಳಲಿ, ಒಳ್ಳೆಯ ಸಾಹಿತ್ಯ ಓದಲಿ, ಜೀವನವನ್ನು ಉತ್ತಮಗೊಳಿಸಿಕೊಳ್ಳಲಿ ಎಂಬುದೇ ಅವರ ಉದ್ದೇಶ. ಅದಕ್ಕಾಗಿ ಅವರು ಹಗಲಿರುಳು ದುಡಿದರು. ಈ ಕೆಲಸದಲ್ಲಿ ಅವರ ಮನಸ್ಸಿಗೆ ಬೇಕಾದಷ್ಟು ಸುಖ ಸಂತೋಷಗಳು ಲಭಿಸಿದವು.

ಅನಂತಕೃಷ್ಣ ಶರ್ಮರಿಗೆ ಕೀರ್ತಿ ಪ್ರಶಸ್ತಿ ತಾವಾಗಿಯೇ ಬೆನ್ನಟ್ಟಿ ಬಂದವು. ಅವರು ದೀರ್ಘಕಾಲದ  ಆಂಧ್ರ ಸಾಹಿತ್ಯ ಆಕಾಡೆಮಿಯ ಉಪಾದ್ಯಕ್ಷರಾಗಿದ್ದರು. ೧೯೭೨ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅವರಿಗೆ ಗೌರ ಸದಸ್ಯತ್ವ ನೀಡಿ ಪುರಸ್ಕರಿಸಿತು. ಮದರಾಸು ಮ್ಯೂಸಿಕ್‌ಅಕಾಡೆಮಿ ಸಂಗೀತ ಕಳಾನಿಧಿ ಪ್ರಶಸ್ತಿ ನೀಡಿ ಗೌರವಿಸಿತು. ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾನಿಲಯವು ೧೯೭೩ರಲ್ಲಿ ಅವರಿಗೆ ಡಾಕ್ಟರ್‌ಆಫ್‌ಲಿಟರೇಚರರ ಪ್ರಶಸ್ತಿ ಕೊಟ್ಟಿತು.

ಶರ್ಮರು ತಿರುಪತಿಯಿಂದ ಆಗಾಗ ಬೆಂಗಳೂರಿಗೆ ಬಂದು ಅವರ ಮಕ್ಕಳ ಮನೆಯಲ್ಲಿರುತ್ತಿದ್ದರು. ಕೆಲವು ವರ್ಷಗಳಿಂದೀಚೆಗೆ ಅವರು ಬೆಂಗಳೂರಿನಲ್ಲಿಯೇ ನೆಲಸಿದ್ದರು.

ಇಳಿವಯಸ್ಸಿನಲ್ಲೂ ಅವರು ವಿದ್ವತ್‌ಪ್ರಪಂಚದ ಕಣ್ಮಣಿಯಾಗಿದ್ದರು. ಸಂಗೀತಕಲಾಭಿಮಾನಿಗಳಿಗೆ ಅವರ ಮನೆ ಒಂದು ತೀರ್ಥ ಕ್ಷೇತ್ರವಾಗಿತ್ತು. ಯಾರೇ ತಮ್ಮನ್ನು ನೋಡಲು ಬರಲಿ-ಅವರನ್ನು ತಮ್ಮ ಸಹಜ ಪ್ರಿತಿ ಗೌರವಗಳಿಂದ ಕಂಡು ವಿಚಾರ ವಿನಿಮಯ ನಡೆಸುತ್ತಿದ್ದರು.

೧೯೭೯ನೆಯ ಮಾರ್ಚ್ ತಿಂಗಳು ೧೧ ರಂದು ಸಂಜೆ. ೭.೧೫ ಗಂಟೆಗೆ ಶರ್ಮರು ತಮ್ಮ ೮೬ನೇ ವಯಸ್ಸಿನಲ್ಲಿ ಇಹಲೋಕ ವ್ಯಾಪಾರವನ್ನು ಮುಗಿಸಿದರು. ಅಂದು ಒಂದು ಮಹಾದಾಶ್ಚರ್ಯದ ಸಂಗತಿ ನಡೆಯಿತು. ಮಧ್ಯಾಹ್ನ ನಾಲ್ಕು ಗಂಟೆ ವೇಳೆಗೆ ತಿರುಪತಿ ದೇವಸ್ಥಾನದ ಅಧಿಕಾರಿಯೊಬ್ಬರು ಶರ್ಮರ ಮನೆಗೆ ಬಂದರು. ಅವರು ಶರ್ಮರನ್ನು ಕಂಡು ಸಂಗೀತ ಸಾಹಿತ್ಯ ಆಸ್ಥಾನ ವಿದ್ವಾನ್‌ಎಂಬ ಬಿರುದನ್ನು ದೇವರ ಪ್ರಸಾದವನ್ನು ಅರ್ಪಿಸಿದರು. ಶರ್ಮರು ಎದ್ದು ಕುಳಿತು ಭಗವಂತನ ಸಾನಿಧ್ಯದಿಂದಲೇ ಬಂದ ಹಾಗಿದ್ದ ಪ್ರಶಸ್ತಿಯನ್ನು ಸ್ವೀಕರಿಸಿದರು. ಅದಾದನಂತರ ಕೆಲವು ಗಂಟೆಗಳಲ್ಲಿ ಅವರು ಕಣ್ಣು ಮುಚ್ಚಿದರು.

ಕಲಾತಪಸ್ವಿ

ಶರ್ಮರು ಸಂಗೀತ ಸಾಹಿತ್ಯ ಶಾಸ್ತ್ರಕಲೆಗಳ ಬಗ್ಗೆ ಖಚಿತವಾದ ಅಭಿಪ್ರಾಯಗಳನ್ನು ತಳೆದಿದ್ದರು. ಅವರು ಸಾಹಿತ್ಯದಲ್ಲಿ ಶಾಂತಿರಸವನ್ನು ಹೆಚ್ಚಾಗಿ ಬಯಸುತ್ತಿದ್ದರು. ಕಾವ್ಯದಲ್ಲಿ ಶಬ್ದ ಚಮತ್ಕಾರ, ಅಲಂಕಾರದ ಅಬ್ಬರ ಇವುಗಳಿಗಿಂತಲೂ ಹೆಚ್ಚಾಗಿ ಭಾವುಕತೆಗೆ ಹೆಚ್ಚು ಬೆಲೆ ಕೊಡುತ್ತಿದ್ದರು. ಸಂಗೀತದಲ್ಲಿ ನಾದಲಯ ಪರಿಶುದ್ಧತೆ ಎಂದರೆ ಅವರಿಗೆ ಪಂಚಪ್ರಾಣ. ಆದ್ದರಿಂದ ಅವರಿಗೆ ದ್ವಾರಂ ವೆಂಕಟಸ್ವಾಮಿ ನಾಯುಡು ಅವರ ಪಿಟೀಲು ವಾದನ, ಬಿಡಾರಂ ಕೃಷ್ಣಪ್ಪನವರ ಹಾಡುಗಾರಿಕೆ, ವೀಣೆ ಶೇಷಣ್ಣನವರ ಸಂಗೀತ ಶೈಲಿ ಮೆಚ್ಚಾಗಿದ್ದವು. ಸಂಗೀತಗಾರರ ಎದುರಿನಲ್ಲಿ ಅವರು ಸಾಹಿತ್ಯ ಶುದ್ದಿಯ ಅಂಶವನ್ನು ಒತ್ತಿ ಹೇಳುತ್ತಿದ್ದರು. ಆದರೆ ಸಾಹಿತಿಗಳ ಕೂಟದಲ್ಲಿ ಸಂಗೀತದ ಅಂಶವೇ ಮುಖ್ಯವೆಂದು ಹೇಳುತ್ತಿದ್ದರು. ಒಟ್ಟಿನಲ್ಲಿ ಅವರು ಸಂಗೀತ ಸಾಹಿತ್ಯಗಳೆರಡರ ಉಪಾಸಕರು. ಹಲವು ವೇಳೆ ಅವರು ತಮ್ಮ ಖಚಿತ ಪ್ರಾಮಾಣಿಕ ಅಭಿಪ್ರಾಯಗಳ ಕಾರಣದಿಂದ ಸಂಗೀತಗಾರರ ಕೋಪಕ್ಕೆ ಗುರಿಯಾದುದುಂಟು. ಅವರ ಪ್ರಾಮಾಣಿಕತೆಗೆ ಒಂದು ಉದಾಹರಣೆ ಕೊಡಬಹುದೊ. ಯಾವದೋ ವಿದ್ವತ್‌ಸಭೆಯಲ್ಲಿ ಜನಪ್ರಿಯರಾದ ವಿದ್ವಾಂಸರೊಬ್ಬರು ತಮ್ಮ ವಾದವನ್ನು ಮಂಡಿಸಿದರು. ಅವರ ವಾದದಲ್ಲಿ ಹುರುಳಿರಿಲಿಲ್ಲ-ಕೇವಲ ಮಾತಿನ ಆಡಂಬರವೇ ತುಂಬಿತ್ತು. ಸಭೆಯಲ್ಲಿದ್ದ ಶರ್ಮರು ಜನಪ್ರಿಯ ವಿದ್ವಾಂಸರ ಮಾತುಗಳನ್ನು ಖಂಡಿಸಿ ವಾದವನ್ನು ಅಲ್ಲಗಳೆದರು. ಸಭೆಯಲ್ಲಿ ಕೋಪೋದ್ರೆಕಗಳು, ಹಾರಾಟ, ಚೀರಾಟ, ಆದರೆ ಶರ್ಮರು ತಮ್ಮ ಪ್ರಮಾಣಿಕವಾದ ನಿಲುವನ್ನು ಸಮರ್ಥಿಸಿ ಕೊಂಡರು. ’ಇದು ನ್ನನ ಅಭಿಪ್ರಾಯ’=ನನ್ನ ತಲೆ ತೆಗೆದೂ ಬದಲಾಯಿಸಲು ಸಾಧ್ಯವಿಲ್ಲ’ ಅಂದರು.

ಈ ಕಾರಣದಿಂದ ಎಲ್ಲರೂ ಶರ್ಮರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು.

ರುಚಿ-ಶುಚಿಗಳಿಗೆ ಹೆಸರಾಗಿ ಸಾರ್ಥಕ ಜೀವನ ನಡೆಸಿದ ರಾಳ್ಳಪಲ್ಲಿ ಅನಂತಕೃಷ್ಣ ಶರ್ಮರು ಒಬ್ಬ ಕಲಾತಪಸ್ವಿಗಳು. ಅಂಥವರನ್ನು ನಾವು ನೆನೆದರೆ ನಮಗೆ ಶ್ರೇಯಸ್ಸು.

 

ತಿರುಪತಿ ದೇವಸ್ಥಾನದ ಸನ್ಮಾನ