ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಒಂದು ಸಣ್ಣ ಗ್ರಾಮವಾದ ರಾಳ್ಳಪಲ್ಲಿಯಲ್ಲಿ ೧೮೯೩ ನೇ ಇಸವಿಯಲ್ಲಿ ಜನಿಸಿದ ಅನಂತ ಕೃಷ್ಣಶರ್ಮರು ವಿದ್ಯಾಭ್ಯಾಸದ ನಿಮಿತ್ತ ಮೈಸೂರು ಸೇರಿದರು. ವ್ಯಾಕರಣ ಅಲಂಕಾರ ಶಾಸ್ತ್ರಗಳಲ್ಲಿ ಪಾಂಡಿತ್ಯ ಗಳಿಸುವುದರ ಜೊತೆಗೆ ಕರಿಗಿರಿರಾಯರು, ಚಿಕ್ಕರಾಮರಾಯರು ಹಾಗೂ ಬಿಡಾರಂ ಕೃಷ್ಣಪ್ಪ ಇವರುಗಳ ಮಾರ್ಗದರ್ಶನದಲ್ಲಿ ಸಂಗೀತದಲ್ಲಿಯೂ ಅತ್ಯುತ್ತಮ ಮಟ್ಟದ ಜ್ಞಾನ ಸಂಪಾದಿಸಿಕೊಂಡರು. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ತೆಲುಗು ಪ್ರಾಧ್ಯಾಪಕರಾಗಿ ವೃತ್ತಿಯಲ್ಲಿದ್ದ ಶ್ರೀಯುತರು ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಅಪಾರ. ಕರ್ನಾಟಕದಂತೆ ಆಂಧ್ರಪ್ರದೇಶದಲ್ಲಿಯೂ ಹಿರಿದಾದ ಜನ ಮನ್ನಣೆ ಪಡೆದಿದ್ದವರು.

‘ಗಾನಕಲೆ’ ಸಾಹಿತ್ಯ ಮತ್ತು ಜೀವನಕಲೆ’ ಶ್ರೀಯುತರು ಕನ್ನಡದಲ್ಲಿ ಬರೆದಿರುವ ಅಮೂಲ್ಯ ಗ್ರಂಥಗಳು. ಸಂಸ್ಕೃತದಲ್ಲಿ ಹಲವಾರು ಬರಹಗಳನ್ನು ನೀಡಿರುವುದರೊಡನೆ ‘ಮಹಿಶೂರ ರಾಜಾಭ್ಯುದಯಾದರ್ಶಃ’ ಎಂಬ ಚಂಪೂ ಕಾವ್ಯವನ್ನು ಬರೆದು ಪ್ರಥಮ ಬಹುಮಾನವನ್ನು ಮೈಸೂರು ಸಂಸ್ಥಾನದಿಂದ ಪಡೆದಿದ್ದರು. ತಿರುಪತಿ ಪರಿಶೋಧನಾಲಯದ ರೀಡರ್ ಆಗಿದ್ದು ಅಣ್ಣಮಾಚಾರ್ಯರ ಆಧ್ಯಾತ್ಮಿಕ ಮತ್ತು ಶೃಂಗಾರ ಸಂಕೀರ್ತನಗಳನ್ನು  ಸಂಪಾದಿಸಿ ಹೊರ ತಂದರು.

ಆಂಧ್ರಪ್ರದೇಶದ ಸಾಹಿತ್ಯ ಅಕಾಡೆಮಿಯಲ್ಲಿಯೂ ಸಂಗೀತ ನಾಟಕ ಅಕಾಡೆಮಿಯಲ್ಲಿಯೂ ಸೇವೆ ಸಲ್ಲಿಸಿದ್ದರು. ‘ಗಾನಕಲಾಸಿಂಧು’ ಗಾನಕಲಾ ಪ್ರಪೂರ್ಣ’ ಸಂಗೀತ ಕಲಾರತ್ನ’ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರವಾದ ಗೌರವ ಡಾಕ್ಟರೇಟ್‌ ಮುಂತಾದ ಸನ್ಮಾನಗಳಿಗೆ ಭಾಜನರಾಗಿದ್ದ ಶ್ರೀಯುತರು ೧೧-೩-೧೯೭೯ ರಂದು ತಿರುಪತಿ ತಿರುಮಲ ದೇವಸ್ಥಾನದ ‘ಸಂಗೀತ ಸಾಹಿತ್ಯ ಆಸ್ಥಾನ ವಿದ್ವಾನ್‌’ ಗೌರವ ಪಡೆದ ಒಂದೆರಡು ಘಂಟೆಗಳಲ್ಲೇ ಭಗವಂತನ ಚರಣಾರವಿಂದಗಳಲ್ಲಿ ಐಕ್ಯರಾದರು.