ತುರಂಗದೊಳು ಜರುಗುವ ಮರ್ಮ ಕೇಳರಿ ನಿರ್ಮಲ ಮನಸ್ಸಿನಿಂದ ನೀವೆಲ್ಲ
ವೈರಾಗ್ಯ ಬಂದ ಮೇಲೆ ಆರಾಮ ಇರತಾರ ಯಾರ‍್ಯಾರ ಅಂಜಿಕಿ ಇರುವದಿಲ್ಲ
ಜೇಲಿನೊಳಗೆ ಹೋಗಿ ಕಾಲ ಹಾಕುದರೊಳಗ ಗಾಬ ಮಾಡುರ ಮೊದಲ   ಪೋಲಿಸರ
ಮೇಲ್ಮಾಳಿಗಿಯ ಮೇಲೆ ಕರಕೊಂಡ್ಹೋಗಿ ಮಾಲ ಜಪ್ತಿ ಮಾಡುವರು
ಕಾರಕೂನರ
ಮರಳಿ ಗುದಾಮ ಶೋಧಿಸಿ ಅರವಿ ತಗಸಿ ತಮ್ಮ ಅರವಿ ಕೊಡುವರು
ವಾಚಮನ್‌ರ
ಎರಡ ಅಂಗಿ ಎರಡ ಚೊಣ್ಣ ಲಂಗೂಟಿ ಟೊಪ್ಪಿಗಿ ಮ್ಯಾಲ ಒಂದ
ಮಘ್‌ಲರ್
ಥಂಡಿ ಸಲುವಾಗಿ ಗರಮ್‌ಬಂಡಿ ಎಂಬುವ ಕಂಬಳಿ ಅಂಗಿ ಒಂದು
ಕೊಡುವುವರ
ಹಾಸಿಕೊಳ್ಳಲಿಕ್ಕೆ ದಪ್ಪ ತಟ್ಟಗೊಂಗಡಿ ಹೊತ್ತಕೊಳ್ಳಲಿಕ್ಕೆ ರಗ್ಗ ಚಾದರ
ಊಟಕ್ಕಾಗಿ ತಾಲಿಪಾಟ ಅಂಬುವವು ಪರ‍್ಯಾಣದಷ್ಟ ಅದರ ಆಕಾರ
ನೀರು ಕುಡಿಯುವ ಅಳಿಯು ಸೇರಿನಂಥವು ತಗಡಿನವು ಇರತಾವ ತಯ್ಯಾರ

||ಚ್ಯಾಲ||

ಏಳ ಕೀಲಿ ಒಳಗ ಓದ ಇಟ್ಟ ವ್ಯಾಳೆ ವ್ಯಾಳ್ಯೇಕ ಗಸ್ತಿಯವರದು ಕಾಟ
ಲೆಕ್ಕ ಹೇಳುವುದು ವಾಚಮನ್ನರ ಸೃಷ್ಟ ತಾಸಿಗೊಬ್ಬಬ್ರು ಎದ್ದೆದ್ದ ನಿದ್ದಿಗೆಟ್ಟ
ಎರಡು ಅಂತಸ್ತಿನಾಗ ಮಲಗುದು ಐಟ ಬರಾಕ ಅಂತ ಅದಕ ಹೆಸರಿಟ್ಟ

||ಏರು||

ಶಿಕ್ಷಾ ಆಗುವುದಕಿಂತ ಮೊದಲ ಅಪರಾಧಿಯ ಓದ ಇಡುವುದು
ಅಂಡರ್ ಟ್ರಯಲ್||೧||

ಮುಂಜಾನೆ ಎದ್ದ ಸ್ನಾನ ಸಂಧ್ಯಾವಂದನ ತೀರಿಸಿ ಗಂಜಿಯ ಕುಡಿಯಬೇಕ   ಬಿಸಿಬಿಸಿದ
ಹನ್ನೊಂದು ಘಂಟೇಕ ಇನ್ನೇನ ಹೇಳಲಿ ಉಣ್ಣುದಕ ಬ್ಯಾಳಿರೊಟ್ಟಿ ಬರುವುವದ
ಹದಿನಾಲ್ಕು ಅಂಶ ತೂಕ ಒಂದೊಂದ ರೊಟ್ಟಿ ಎರಡ ರೊಟ್ಟಿ ಬ್ಯಾಳಿ ಹಾಕಿ   ಕಲಸುವದು
ಒಂದ ಸೌಟ ಉಪ್ಪ ತಂದ ಒಗದರ ಕಣ್ಣಮುಚ್ಚಿಕೊಂಡು ಅಷ್ಟು ನುಂಗುವುದ
ಸಂಜೆ ಐದ ಘಂಟೆಕ ಸಜ್ಜಿ ಭಕ್ರಿ ಕೂಡ ಕಾಯಿಪಲ್ಲೆ ಬಾಜಿ ಅಂಬು ಹೆಸರಿನದ
ಎಪ್ಪತ್ತ ತರದ ತೊಪ್ಲ ಪಪ್ಪಾಯಿಕಾಯಿ ಎಳಿ ಎಳಿ ಕಟಗಿ ಹುಳ ಒಂದೊಂದ
ಹೆಸರಬ್ಯಾಳಿ ಕಡ್ಲಿಬ್ಯಾಳಿ ಚನ್ನಂಗಿಬ್ಯಾಳಿ ತೊಗರಿಬ್ಯಾಳಿ ದಿವಸಕೊಂದ ಚಂದ ಚಂದ
ಆದಿತ್ಯವಾರ ಗೋಧಿರೊಟ್ಟಿ ಬೆಲ್ಲ ಕೊಟ್ರ ಮಾದಲಿ ಮಾಡುವದು ಏನ ಹದ

||ಚ್ಯಾಲ||

ವಾರದಾಗೆರಡ ಸಾರೆ ಉಳ್ಳಾಗಡ್ಡಿ ಹಲ್ಲ ಇಲ್ಲದವರಿಗೆ ಅಕ್ಕಿಯ ಕಿಚಡಿ
ಸೀತ ಆದರ ಡಾಕ್ಟರ ನೋಡಿ ಎಲ್ಲಾ ರೋಗಕ್ಕೆಲ್ಲ ಒಂದ ಔಷಧ ಕುಡಿ
ದಿವಸಕೆರಡ ಸಾರೆ ಲೆಖ್ಖ ಮಾಡಿ ಕೂಡ್ರಸೂರ ಇಬ್ಬರ ಜೋಡಿ ಜೋಡಿ

||ಏರು||

ನಳದ ನೀರಿನ ಜಳಕ ಪರಸಿನ ಮ್ಯಾಲ ಪಾಯಖಾನೆಗೆಲ್ಲ ಸಂಗಮರಿ ಕಲ್ಲ||೨||
ವಾರಕ್ಕೊಮ್ಮೆ ಅರವಿ ನೀರಾಗ್ಹಾಕುದಕ ಸರ್ವರಿಗೆ ಬರುವದು ಸೋಡಾಪುಡಿ
ಪೂರಾ ಎಂಟ ಘಂಟೇಕ ಕ್ಷೌರದವರ ಬಂದರ ನೀರಹಚ್ಚಿಕೊಳ್ಳುದೊಳೆ ಗಡಿಬಿಡಿ
ತಿಂಗಳಿಗೊಮ್ಮೆ ಭೆಟ್ಟಿ ಸಂಗಡ ವಾಚಮನ್‌ರು ರಂಗ ಕಾಮದಲಿ ದಾಖಲಮಾಡಿ
ಸಿಪಾಯಿಗೋಳ ಬಂದ ಪುಕಾರ ಮಾಡಿದಮ್ಯಾಲ ಆಫೀಸತನಕ ಬೇಗ ನಡಿ
ಮಾಸಕೊಂದ ಪತ್ರ ಖಾಸಗೀದ ಬರದರ ಹಕ್ಕಿನ ಪತ್ರ ಬಂದ ಹಿಂದಗಡಿ
ಟಿಪಾಲುಗಳ ಎಲ್ಲಾ ತಪಾಸ ಮಾಡಿದಮ್ಯಾಲ ಕಳಿಸುದಕ ಸುಪರಿಂಟೆಂಡೆಂಟ   ಸಹಿಮಾಡಿ
ಬಂದ ಪತ್ರಗಳು ತಂದಕೊಡುವರು ಒಂದೊಂದ ಅವರ ನಂಬರ ನೋಡಿ
ಹದಿನೈದ ದಿವಸಕ್ಕೊಮ್ಮೆ ಬಂದ ಡಾಕ್ಟರ ತೂಕಕ ಕಟ್ಟಸತಿದ್ದ ತಕ್ಕಡಿ

||ಚ್ಯಾಲ||

ತೂಕ ಕಡಿಮೆ ಅದರ ಚಪಾತಿ ಎಂಟ ಔಂಸ ಹಾಲ ಅನ್ನ ಪೂರ್ತಿ
ಸೀತ ಅದರ ಪಲಂಗ ಮ್ಯಾಲ ವಸ್ತಿ ಗಾದಿ ತಲಗಿಂಬ ಪರ‍್ಯಾಣ ಅವರ ಹಂತಿ
ವಾರದಾಗೆರಡ ಸಾರೆ ‘ಸಿವಿಲ್ ಸರ್ಜನ್’ ಸರತಿ ಬಂದ
ತಗೊಂಡ ಹೋಗಾಂವ ಎಲ್ಲಾ ಮಾಹಿತಿ

||ಏರು||

ಬಾಯಮಾತಿನ ಮ್ಯಾಲ ರಿಪೋರ್ಟ ಪೋಲಿಸರದು
ಭೀಮಶೇಂದ ಯಾವ ಮಾತಿಗೆ ಕಡಿಮಿಲ್ಲ||೩||

ರಚನೆ : ಹುಲಕುಂದ  ಭೀಮಕವಿ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ