ಭರತಖಂಡದೊಳು ಹಿರಿತನ ಮಾಡಿ ಮೆರೆಯಬೇಕಂತ ಫಿರಂಗೇರ
ನಮ್ಮ ಮನೆ ಹಿರಿತನ ನಮಗೆ ಕೊಡರಿ ಅಂತ ಸೌಮ್ಯದಿಂದ ಕೇಳತಾರ ಗಾಂಧಿಯವರ
ಹಿಂದೂಸ್ಥಾನದೊಳಗಿಂದ ತಿಂದ ಸಾಕಾಗಿಲ್ಲೇನ ಎಂದ ಬಿಡತೀರಂತ ಜವಾಹರಲಾಲರ
ಇದ್ದರ ಪಾಡಲ್ಲ ಇವರ‍್ನ ಸಧ್ಯದ ಕಾಲದೊಳು ಒದ್ದ ಕಳಸುನಂತಾರ ಸುಭಾಸಚಂದ್ರರ
ಸ್ವಾತಂತ್ರ್ಯ ಸಲುವಾಗಿ ಅಧಿಕಾರ ಸ್ವೀಕಾರ ಮಾಡಿ ಆಡಳಿತ ಸಾಗಸಿದ್ರ ಮಂತ್ರಿಯವರ
ಇದ್ದಷ್ಟ ಬಳಕೊಂಡು ಮತ್ತು ಯುದ್ಧಕ್ಕೆ ಸಹಾಯಮಾಡಿರಂತ ಗುದ್ದ್ಯಾಟ
ನಡೆಸಿದರ ವಾಯಿಸರಾಯರ
ಮೊದಲ ಸ್ವರಾಜ್ಯ ಕೊಟ್ಟ ನಂತರ ಸಹಾಯ ಅಂತ ಠರಾವು ತಗದರ ಕಾಂಗ್ರೆಸ್‌ದವರ
ಯಾರ ಸಲುವಾಗಿ ಘೋರಯುದ್ಧ ಹೂಡಿದಿರಿ ಪೂರ ತಿಳಿಸಿರಿ ಇದರ ಮುಜಕೂರ
ಹಿಂದಿನ ಕಾಲದೊಳು ಹೀಂಗ ಮಾಡಿ ನಮಗೆ ಟಂಗ ತಿನಿಸಿದರ ಭರಪೂರ
ಸ್ವರಾಜ್ಯ ಕೊಡತೀವಂತ ಸುಲಕೊಂಡ ಹೋಗಿ ಎಲ್ಲಿತನಕ ನಡಸಿರಿ ತಕರಾರ
೧೯೧೪ನೆಯ ಇಸ್ವಿಯೊಳು ಮಹಾಯುದ್ಧ ನಡದಿತ್ತ ಭಯಂಕರ
ಹದಿನಾರಕೋಟಿ ಪೌಂಡ ಧನ ಹತ್ತು ಲಕ್ಷ ಜನರ ಸಹಾಯ ನೈತಿಕ ಬೆಂಬಲ
ಕೊಟ್ಟರು ಮೋಹನದಾಸರ

||ಚ್ಯಾಲ||

ಹಿಂದೂಸ್ಥಾನದೊಳಗಿನ ಶೂರರು ಯುದ್ಧ ಮಾಡಿದರು ಹೊಟ್ಟೆಗಿಲ್ಲದ
ತೃಣ ಹರದ ತಿಂದ ನೀರ ಕುಡದ
ಸಾಮ್ರಾಜ್ಯಶಾಹಿ ದಶಿಯಿಂದ ನಡಾಕಟ್ಟಿ ದುಡದ
ಹೊಟ್ಟ್ಯಾಗ ಗುಂಡ ಬಡದ ಸತ್ತ ಹೋದರು ಹಲ್ಲ ಹೊರಬಿದ್ದ
ಎಷ್ಟೋ ಜನರ ಪ್ರಾಣ ಹೋದಮ್ಯಾಗ ಜಯಾ ಆತ ಆಗ ಬ್ರಿಟಿಶರ ಗೆದ್ದ
ಸ್ತುತಿ ಮಾಡ್ಯಾರ ಹಿಂದೂಸ್ಥಾನದ

||ಏರು||

ಸ್ವರಾಜ್ಯ ಕೊಡತೀವಂತ ಖರೇ ಮಾತಾಡುವುದಿಲ್ಲ ಬರೆ ಬಾಯಿಲಿ ಒದರ‍್ಯಾಡುವರ||೧||
ಲಡಾಯದಕಿಂತ ಮೊದಲು ಬಡಾಯ ಹೇಳಿದ್ದನ್ನ ಕೊಡುವಾಗ ಬಂದಿತ ಬಾಳ ಕಷ್ಟ
ಬಡಿವಾರ ಹೇಳಿದರ ಇವರ ಬಿಡುದಿಲ್ಲಂತ ತಿಳದ ಆಡತಾರ ಕಾಯ್ದೆ ತಗದಾರಪ್ಪ ಸ್ಪಷ್ಟ
೧೯೧೯ನೆ ಇಸ್ವಿ ಫೆಬ್ರುವರಿ ತಿಂಗಳ ಎರಡ ಬಿಲ್ ಹೊರಟ
ರಾಜದ್ರೋಹ ಪತ್ರಕ ಸಭೆ ಕೊಡುಸುದಕ ನಿರ್ಬಂಧವಾದಿತ ಸರ್ವಸಗಟ
ಕಾಯ್ದೆಗಳು ನಿಷೇಧಮಾಡಿ ಸಾವಿರ ಜನರು ಸತ್ತ್ರ ಗಾಯ ಆಗಿ ಬಿದ್ದವ ಗುಂಡಿನೇಟ
ಪಂಜಾಬದೊಳಗ ಇಂಥ ಗೊಂದಲವಾದಿತು ಮುಂದ ಕೇಳರಿನ್ನ ಚಿತ್ತಿಟ್ಟ
ಜಾಲಿಯನ್ ವಾಲಾಭಾಗ್ ಎಂಬು ಮಿಗಿಲ ಜಾಗದೊಳು
ಜಾತ್ರಿಗಿ ಬಂದಾರ ಜನರ ಹೊಂಟೊಂಟ
ಹೆಣ್ಣು ಮಕ್ಕಳು ಸಣ್ಣ ಹುಡುಗರ ಗಂಡಸರು ಘನವಾದ ಜಾತ್ರಿಯ ಆರ್ಭಾಟ
ವಿಸ್ತಾರವಾದ ಬೈಲಸುತ್ತ ಕಟ್ಟಡ ಸಾಲ ಒಂದೇ ದಾರಿ ಮತ್ತೊಂದಿಲ್ಲ ಎಳ್ಳಷ್ಟ
ನಾಲ್ಕು ಘಂಟೇಕ ಅಲ್ಲಿ ವ್ಯಾಖ್ಯಾನ ಆಗುವದೆಂದು ಜನರಲ್ ಡಾಯರ್
ದೈವಯೋಗದಿಂದ  ಚಿಲಕತ್ತಿನ ಮೋಟರ ಒಳಗ ಹೋಗಲಿಲ್ಲ ಆದಿತ ಕಟ್ಟ
ದಾರಿಯೊಳಗ ತರುಬಿ ಗೋಳಿಬಾರ ಮಾಡುವಾಗ ಹೆಣ ಬಿದ್ದುವರಿ ಪಟ ಪಟ

||ಚ್ಯಾಲ||

೧೬೫ ಗುಂಡಿನೇಟ ಹಾರಿಸಿದ ಮ್ಯಾಲ ಬಿಟ್ಟ ಅಲ್ಲಿ ತನಕ ಹೊಡದ
ಎಂಥಾ ಕಾಯ್ದೆ ನೋಡರಿ ಅವರದ
ಹರದೀತ ರಕ್ತಕಾವಲಿ ಕೂಸುಗಳ ತೇಲಿಹೋದವು ಒಂದೊಂದ
ಮುಳಮುಳಗಿ ಸತ್ತವು ಅಳತಿಲ್ಲದ
ನಿಂತಲ್ಲೆ ಸತ್ತಾವ ನೂರಾರು ಓಡಿ ಹೋಗವರ ಮ್ಯಾಲ ಗುಂಡು ಬಡದ
ನೆಲಕಬಿದ್ದ ಸತ್ತಾವ ತೆರಪಿಲ್ಲದ

||ಏರು||

ವಿನಾಕಾರಣ ಅನಾಹುತ ಹೆಣದ ರಾಶಿ ಆತ ಅಮೃತಸರ
ಉಪಕಾರ ಮಾಡಿದವರ‍್ನ ಉಪರಾಟೆ ಕೊಲ್ಲುರ ಕಪಟದಿಂದ ರಾಜ್ಯವಾಳುದಕ
ಸಲ್ಲಾದಿಂದ ಇಲ್ಲಿದೆಲ್ಲ ಹೇಳಿದವರ‍್ನ ಗಲ್ಲಿಗೇರಿಸುರು ಆ ಕ್ಷಣಕ
ಕತ್ತಿ ಕಠಾರಿ ಬಂದೂಕ ಕೊಟ್ಟರ ತಾಂವ ಸಿಕ್ಕೀವಂತಾರ ಹೊಡತಕ್ಕ
ವೀರ್ಯ ಸಹಿತ ನೀರ ನೀರ ಆಗುವಂಥ ಚಟಗಳ ಕಲಿಸ್ಯಾರ ನಮ ದೇಶಕ್ಕ
ರೊಕ್ಕ ಎಲ್ಲ ಮೊದಲ ಚೊಕ್ಕ ಸಲುದಾರು ಕಾಯ್ದೆ ತಗ ತಗದ ಕಾಲ ಕಾಲ ಕಾಲಕ್ಕ
ಸಿರಿ ಹೋಗಿ ನಾವು ಕುರಿಗಳಾದರೂ ಅರವ ಇಲ್ಲ ಹಿಂದು ಕುಲಕ
ಸೈನ್ಯ ಖಾತೇದನ ಅನ್ಯಾಯ ಕೇಳರಿ ಚೆನ್ನಾಗಿ ಹೇಳುವೆ ಉಳಿದ್ಹಂಗ ಶಿಲ್ಕ
೧೯೧೦-೧೧ನೇ ಇಸ್ವಿಯೊಳು ಇಪ್ಪತ್ತೆಂಟ ಕೋಟಿ
ರೂಪಾಯಿ ಖರ್ಚು ಇತ್ತು ಆ ಖಾತೇಕ
ಅದsಖಾತೇಕ ಅರವತ್ತ ಕೋಟಿ ರೂಪಾಯಿ ಖರ್ಚು ಈಗ
ಹೀಂಗ್ಯಾಕ ಅಂತಾನ ನಮ್ಮ ಮುದುಕ
ಅರ್ಧ ಖರ್ಚಿನೊಳಗ ಆಡಳಿತ ನಡಸರಿ ಹಿಂದು ಜನರ ಉನ್ನತಿಯಾಗಬೇಕ
ನಾಲ್ಕುನೂರಾ ಮೂವತ್ತಮೂರು ರೂಪಾಯಿ ಪಗಾರ
ಹಿಂದಿ ಸಿಪಾಯಿಗೆ ಪ್ರತಿವರ್ಷಕ
ಬ್ರಿಟಿಶ್ ಸಿಪಾಯಿಗೆ ಒಂದು ಸಾವಿರದ ಎರಡನೂರು ಮೂವತ್ತೇಳು ಯಾಕ

||ಚ್ಯಾಲ||

ನಮ್ಮ ಜನರಿಗೆ ನಮ್ಮ ಅರವ ಇಲ್ಲ ನಮ್ಮ ದೇಶದ ಪರವಿ ನಮಗಿಲ್ಲ
ನಮ್ಮ ರೂಪಾಯಿ ಶಿಪಾಯಿ ನಮ್ಮ ಎಲ್ಲ
ನಮ್ಮ ನಮ್ಮವರ ನಮ್ಮನ್ನಹಾಕತಾರ ಜೇಲ ನಮ್ಮ ಜನರದ ಆತಿ ಅನಾನುಕೂಲ
ನಮ್ಮಿಂದ ಆಗಿದಾರ ಮೇಲ

||ಏರು||

ನಮ್ಮವರೆಲ್ಲಾರು ಒಮ್ಮನಸಾಗಿರೆಂದು ಭೀಮರಾಮ ನಿತ್ಯ ತಿಳಿಸುವರ||೩||

ರಚನೆ :  ಹುಲಕುಂದ ಭೀಮಕವಿ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ