ಸಿಂಗಾಪುರದಿಂದ ಸೈನ್ಯವು ಹೊರಟಿತು ದಿಲ್ಲಿಗೆಂದು ಗುರಿಸಾಧಿಸುತ
ಸಂಗ್ರಾಮದ ಘನ ಸಿದ್ಧತೆ ಮಾಡಿತು ಜಯಹಿಂದ್ ವಂದನೆ ಮಾಡುತ
ತನ್ನ ಕಾಲಮೇಲೆ ನಿಲ್ಲುತೆ ಬಗ್ಗದ ವೈರಿಯ ದಂಡನು ಜಯಿಸುತ್ತ
ಘನ ಹಿಂದುಸ್ಥಾನ ಸ್ವತಂತ್ರ ಸರಕಾರ ತತ್ವವ ಜನರಲಿ ತಿಳಿಸುತ್ತ
ಹೆಣ್ಣು ಮಕ್ಕಳೊಳು ಸೈನ್ಯವ ಕಟ್ಟುತೆ ಶೋಭಿಸಿದಳು ಲಕ್ಷ್ಮೀ ವನಿತ
ಕಣ್ಣು ಮುಚ್ಚಿ ಕಣ್ತೆರೆಯುವದರೊಳಗೆ ಸುರಿಸಿ ರಕ್ತ ಸಹಿ ಮಾಡುತ್ತ
ದೇಶಸೇವೆಯಲಿ ದೇಹವಿಡುವೆವು ಸುಖ ಸಂಪದಗಳನೊದೆಯುತ್ತ
ಈ ಶರೀರವು ಭಾರತ ಸೇವೆಗೆ ಮುಡುಪಾಗಿರುವದು ಜೀವಿಸುತ
ಯುದ್ಧ ಮಾಡಿ ನಿಜಪುರುಷರ ತರದಲಿ ಹಿಂದುದೇಶವನು ಗಳಿಸುತ್ತ
ಬದ್ಧ ಮನದಿ ನಾವ್ ಸೈನ್ಯದ ಸಂಗಡ ಕೂಡಿ ತೋರುವೆವು ಕಸರತ್ತ
ಹೇಡಿಗಳಾಗದೆ ಬೇಡಿರಿ ದೇವರಿಗೆ ಹಿಂದುದೇಶಕ್ಕೆ ಸ್ವಾತಂತ್ರ್ಯ
ಕೂಡಬನ್ನಿ ಶೂರರಾದರೆ ಸ್ವತಂತ್ರ ಸೈನ್ಯಕ್ಕೆ ಓಡುತ್ತ
ಹೀಗೆ ನುಡಿಯುತಲಿ ಶಿಕ್ಷಣ ಪಡೆಯುತ  ಬಂದರು ಸ್ತ್ರೀಯರು ನಗುನಗುತಾ
ಬಾಗಿ ಕೇಳತಾರ ನೇತಾಜಿ ದೊರೆಯೆ ಕಳುಹಬೇಕು ನಮ್ಮ ಸರದಿ ತಾ

||ಇಳವು||

ಹೆಣ್ಣಾಳು ಎದ್ದ ಮಹಾಯುದ್ಧ ಇನ್ನೆಲ್ಲಿ ಕೇಳಿಲ್ರಿ ಜಗಶಬ್ದ
ಮುನ್ನೇಳತಾರ ಜಿಗದೆದ್ದ ಇನ್ನಾದ್ರು ಏಳ್ರಿ ಹುರಪೆದ್ದ

||ಏರು||

ಗಂಡಸರೆಂಬುವರಿರುವಿರ‍್ಯಾರು ದೇಶದಿ ಆಣಿ ಮಾಡಿ ಹೇಳ್ತೇವಿ ನೀವಿನ್ನು||೧||
ರೊಕ್ಕ ಸುರಿದನು ಸುಭಾಸ ಚಂದ್ರನು ಅಳತೆ ಮೀರಿದಪರಂಪಾರ
ಬೊಕ್ಕಸ ತುಂಬಿತು ಬ್ಯಾಂಕನು ಮಾಡಿದ ಸ್ವತಂತ್ರ ಭಾರತ ಸರ್ಕಾರ
ಬರ‍್ಲಿನ್ ಬರ್ಮಾ ಇಂಡೋಚೀನದಿ ಜಪಾನ ದೇಶದಿ ಕಾರಭಾರ
ಸಾರಿ ನಡೆಯಿತು ಸಾವಿರಗಟ್ಲೆ ಕೊಡುವ ತೆಗೆದುಕೊಳ್ವ ವ್ಯವಹಾರ
ಕೂಡಬೀಳತಿತ್ತು ಸಭೆಯಲಿ ರೊಕ್ಕವು ಮಾಲ ಲಿಲಾವಿಗೆ ಭರಪೂರ
ಕೂಡಿಸಿ ಕೊಡತಿದ್ರು ದುಡ್ಡಿದ್ದವರು ದೇಣಿಗೆಯಿಂದಲಿ ಸಾವಿರಾರ
ಸಾಲ ಮಾಡದಲೆ ಹಣವು ಸೇರಿತದು ದೇಶಭಕ್ತರಗೇನು ದರಕಾರ
ಕಾಲ ಊರಿದಾಂಗ್ಲರ ತಾ ಕಳಿಸಲು ಗಾಳಿ ದುರ್ಗವ್ವ ಗುಡಿತುಂಬಿದರ
ಟ್ಯಾಂಕ ತೋಪು ಬಂದೂಕು ವಿಮಾನವ ಕೊಂಡು ಕೊಂಡನಪ್ಪ ಬಹದ್ದೂರ
ಬ್ಯಾಂಕಿನಿಂದ ಚಕ್ಕು ಹೋಗಿ ಮುಟ್ಟತಿತ್ತೋ ಮೋಸವಿಲ್ಲ ಹಣ ಸರಸರ
ಭೆಟ್ಟಿಕೊಟ್ಟ ಹಿಟ್ಲರದೊರೆ ತಾ ಸೈನ್ಯ ನೋಡಿದನು ದುರಂಧರ
ದಿಟ್ಟ ಸುಭಾಸರು ಸಾರ್ವಭೌಮರೆಂದು ಗೌರವಿಸಿದನೈ ಹಿಂದಿಯರ
ರೋಮೇಲ ಸೇನಾಪತಿಯು ಬಂದು ಸಂತೋಷವ ಪಡೆದನು ಸೈನಿಕರ
ಭೀಮ ಪರಾಕ್ರಮ ನೋಡುತ ಕೇಳಿದ ಹಿಂದ-ಮುಸಲ್ಮಾರ‍್ಯಾರ‍್ಯಾರ
ಶಿಸ್ತು ಸೈನ್ಯದಲಿ ಮೇಲೆನಿಸಿತ್ತು ಜಾತಿ ಭೂತ ಇದ್ದಿಲ್ರಿ ಜರ
ಮಸ್ತಿಖೋರ ಜನಕಾಗುತಲಿತ್ತು ಪಾರುಪತ್ಯವದು ಭಯಂಕರ

||ಇಳವು||

ಹೀಗಾಗಿ ಸೈನ್ಯದಲ್ಲಿ ನೀತಿ ಉಳಿದಿತ್ತ್ರಿ ತಮ್ಮ ಜನ ಪ್ರೀತಿ
ಆಗಾಗ ಸುಭಾಸರ ಸ್ಫೂರ್ತಿ ಸಿಗತ್ತಿತ್ತ್ರಿ ಸೈನ್ಯಕದು ಭರ್ತಿ

||ಏರು||

ದೇಶದ ದಾಸ್ಯ ಹರಿದು ಚಲ್ಲಿ ಕೇಕೆಹೊಡೆದು ಸೈನ್ಯವೆಲ್ಲ
ಹೊಕ್ಕುಬಿಟ್ಟಿತು ಸಮ ಸೀಮೆಯನು||೨||

ರಚನೆ :  ಮಾರನಬಸರಿ ಮೋದಿನಸಾಬ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ