ಸನ್ ಹತ್ತೊಂಭತ್ತನೂರ ನಾಲವತ್ತೇಳನೆ ಆಗಸ್ಟ್ ಹದಿನೈದನೆಯ ತಾರೀಖ
ಶುಕ್ರವಾರ ಉದಯಕ್ಕ ದೊರಕೀತು ಸ್ವಾತಂತ್ರ್ಯ
ಹರದ ಹೋತು ಪಾರತಂತ್ರ್ಯ
ಹಳ್ಳಿಗಳ ಸಡಗರ ನಗರಗಳ ಶೃಂಗಾರ ನಾರಿ ಪುರುಷರೆಲ್ಲಾರ
ಧರಿಸ್ಯಾರ ಹೊಸ ವಸ್ತ್ರ ತರಸಿ ಪುಷ್ಪದ ಹಾರ
ಕುಸುಮ ವೃಷ್ಟಿ ಸುರಿಸ್ಯಾರ ಊರೂರ
ಮಹಾತ್ಮಾಗಾಂಧಿಯವರ ಪಂಡಿತ ನೆಹರೂರವರ
ಸುಭಾಸಚಂದ್ರ ಬೋಸರ

ಮೂರ್ತಿ ಪೂಜೆ ಮಾಡ್ಯಾರ ಭಕ್ತಿಯಿಂದ ಜನರ
ಸಕಲ ವಾದ್ಯ ಜಯಘೋಷ ಜಯಕಾರ
ಮದ್ದುಗುಂಡಿನ ಆರ್ಭಾಟ ತಾರ ಲಳಗಿ ಹಾರ‍್ಯಾಟ ಭಾಷಣಗಳ ತೂರ‍್ಯಾಟ
ಜಯಘೋಷದ ಚೀರಾಟ ನಡದೀತು ಭಯಂಕರ
ರಾಷ್ಟ್ರಗೀತ ಅನ್ನುವರು ಬಾಲಕರ
ಗ್ರಾಮದೇವರಿಗೆ ಬಂದ ಕ್ಷೀರ ಘೃತ ಸುಗಂಧ ಉದಕ ನೀಡಿ ಮುದದಿಂದ
ತೊಳೆದಾರ ದೇವರಪಾದ ಬೆಳಗ್ಯಾರ ಕರ್ಪುರ
ಮಂಗಲಮಾಡಿ ಅನ್ನುವರು ಹರಹರ
ಅನಾಥರಿಗೆ ಆನಂದ ಅನ್ನಸಂತರ್ಪಣದಿಂದ ಚಂದ ಗ್ರಾಮ ಹುಲಕುಂದ
ಹಿರೇಮಠೇಶನ ಕಂದ ಶಿವಲಿಂಗ ಸುಕುಮಾರ
ಮಾಡಿದಂಥ ಕವಿ ಕನಕ ಶಿಖರ

———————
ಕಟಿಪಟಿ – ಪ್ರಯತ್ನ,

ರಚನೆ :  ಹುಲಕುಂದ ಶಿವಲಿಂಗಸ್ವಾಮಿ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ