ಸರ್ವರಿಗೆಲ್ಲ ಶಿರಬಾಗಿ ಹೇಳತೇನಿ ಕರುಣಿಸಿ ಕೇಳರಿ ಕುಂತ ಜನರ
ಸ್ವರಾಜ್ಯ ಅಂದರೇನ ಪರ್ವತದ ಹಂಗಯಿಲ್ಲ ಸರಳ
ಹಾದಿ ತಗದಾರ ಮಹಾತ್ಮರ  ||ಪ||

ಹನ್ನೊಂದ ಕಲಂ ಬಿಟ್ಟ ಇನ್ನೊಂದರಾಗ ಇಲ್ಲ
ಚೆನ್ನಾಗಿ ಹೇಳ್ಯಾರ ಪುಣ್ಯಾತ್ಮರ

ಮಾನ್ಯಮೂರ್ತಿ ವಚನಕ ಧನ್ಯ ಆತಿ ನನ್ನ ಮನ
ಅನ್ನ ಹಾಕಲಿಕ್ಕೆ ಅವನೇ ಆಧಾರ

ಮೊದಲಿನ ಕಲಂದಾಗ ಸದ್ಯಕ್ಕ ಮದ್ಯಪಾನ ಬಂದ ಆಗಬೇಕ ಅನ್ನುತ
ಬಂಡಮಾತ ಅಲ್ಲ ಹುಂಡಾವಳಿ ಭಾವ ಕಮ್ಮಿ
ಮಾಡಬೇಕ ಅಂತ ಅನ್ನುವರ

ಮಳೆಹೋಗಿ ಬೆಳೆ ಇಲ್ಲ ಅನ್ನುವಂಥ ರೈತಗ
ಬಿರಾಡ ಬಿಡುವದಿಲ್ಲ ಸರಕಾರ

ತೆರಿಗೆ ಕೊಟ್ಟ ಬಾಳ ಮರಗುತ ಕುಂತಾರ ಮನಿಯಾಗ ಉಳಿಯಲಿಲ್ಲ ಬಂಗಾರ
ಅರ್ಧ ತೆರಿಗೆ ಇಳಸಂತ ಹೇಳತಾರ ಮೂರನೆ ಕಲಂದಾನ ಮಜಕೂರ
ಸದರೀ ಖಾತೆದ ಮ್ಯಾಲ ಕಾಯ್ದೆ ಮಂಡಲದ ಅಧಿಕಾರವಿರಬೇಕು ಭರಪೂರ

||ಚ್ಯಾಲ||

ಮುಪ್ಪಿನವರ ಹೇಳಿದ ಕೌತುಕ ಉಪ್ಪಿನ ಮ್ಯಾಲಿನ ಕರ ತೆಗಿಬೇಕ
ಸೈನ್ಯ ಖಾತೇದ ಖರ್ಚು ಇಷ್ಟಯಾಕ ಈಗ ಇದ್ದರೊಳಗ ಅರ್ಧ ತೆಗಿಬೇಕ

||ಏರು||

ಬಾಳ ದಿವಸ ಆತಿ ಇವರು ಹೇಳಿಕೊಂತ ಬರತಾರ ಕೇಳವಲ್ರ
ಹಾ ಗೋಷ್ಠಿ ಸರಕಾರ       ||೧||

ಬಡಬಗ್ಗರು ಕೂಲಿಕಾರ ದುಡದ ದುಡದ ಸಾಯತಾರ ಏಳು
ದುಡ್ಡ ಸಿಗುದಿಲ್ಲ ಪಗಾರ
ಹೋಳಗಿ-ತುಪ್ಪ ಹೊಡದ ಮೇಲ್ಮಾಳ್ಗಿ ಮ್ಯಾಲ ಮಲಗತಾರ
ದೊಡ್ಡ ದೊಡ್ಡ ನೌಕರಿ ಮಾಡವರ
ಸರ್ವರಿಗೆಲ್ಲ ಸರಿಯಾಗಿ ದೊರಿಯಬೇಕ ಇವರಿಗ್ಯಾಕ ಮೂರು ನಾಲ್ಕು ಸಾವಿರ
ಐದನೂರ ಮ್ಯಾಲ ಕೊಡಬಾರದಂತ ಸ್ವಚ್ಛವಾಗಿ ಹೇಳ್ಯಾರ ಅಚ್ಯುತರ
ಪರದೇಶಿ ಬಟ್ಟೆ ಮ್ಯಾಲ ಕರಾ ಹೇರುವುದು ರೈತರ ಹಕ್ಕಿನ ವಿಚಾರ
ನಮ್ಮ ಸಮುದ್ರ ದಂಡೆಯ ಮ್ಯಾಲ ನಡೆಯುವದು ನಮ್ಮ ಕೈಯಾಗಿರಬೇಕ   ವ್ಯಾಪಾರ
ತಾಪತ್ರಯ ಬಿಡಿಸಾಕ ವ್ಯಾಪ ಹಾಕಿದರ ಭೂಪಾಲಗ ಬಾಪೂಜಿಯವರ
ಬಾಪೂಜಿಯವರಿಗೆ ತಾಪಪಡಿಸಿದ ಪಾಪಿಗಳು ಲೋಪಾಗುವರ
ಗುಪ್ತ ಪೋಲಿಸ ಖಾತೆ ಕಿತ್ತ ಹಾಕುವದು ಹತ್ತನೇಯ ಕಲಂದ ಆಧಾರ
ಇದ್ದರ ಸುದ್ದ ಸರಿಹೋದಿತ ಅದರ ಮೇಲೆ ಜನರದ ಇರಬೇಕ ಅಧಿಕಾರ
ಕತ್ತಿ ಕಠಾರಿ ಬಂದೂಕದ ಪ್ರಯೋಗ ಹಿಂದುಸ್ಥಾನಕ ಬೇಕಾದರ ಉಪಯೋಗ
ಮಾಡುವ
ಪರವಾನಿಗಿ ಬೇಡಿದಾರ ವರವೀ ಪುರುಷ ಗಾಂಧಿಯವರ
ಬೇಕಾದವರ ಚೌಕಾಸಿ ಮಾಡಿರಿ ನಿಕಾಲಾದುವ ಇಲ್ಲಿಗೆ ಆಕಾರ
ಮಕ್ಕಳ – ಮರಿಗಳಿಗೆ ಸುಖ ದೊರಿಯತದ ಪಕ್ಕಾ ಸ್ವರಾಜ್ಯ ದೊರಕಿದರ

||ಚ್ಯಾಲ||

ಕಷ್ಟ ಬಿಟ್ಟ ಕಡಿ ಅಕರಕ ಮೆಟ್ಟಿಗ್ಹತ್ತುದ ಬಂತ ಸನಿಯಕ
ಎಲ್ಲ ಜನರದು ನಜರಿರಬೇಕ ಸುವರ್ಣಮಯ ಕಾಂಗ್ರೆಸ್‌ಕ

||ಏರು||

ಪ್ರೇಮ ಕಾಂಗ್ರೆಸ್‌ಕ ಭೀಮಸಿಂಗಗ ನೇಮದಿ ಮಾಡುವೆ ನಮಸ್ಕಾರ

ರಚನೆ :  ಹುಲಕುಂದ ಭೀಮಕವಿ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ