ಕೂತ ಕೇಳರಿ ಸಜ್ಜನ ಮಾಡುವ ಮೊದಲು ನಿಮಗೆ ವಂದನ
ಹಿಂದುಸ್ಥಾನದೊಳು ನಡೆದ ಕಾಂಗ್ರೆಸ್ ಮರ್ಮವನ   ||ಪ||

ಕಾಂಗ್ರೆಸ್ಸಿನ ಕಾಯ್ದೆ ಇರುವದು ಬಹು ಹಸನ
ನಾವು ನೆನೆಯಬೇಕು ಮಹಾತ್ಮಾಗಾಂಧಿಯನ
ಜಗತ್ತಿನೊಳು ಜಾಹೀರ ಮಾಡಿದಾನೊ ತಾನಾ
ತಿಳಸಿ ಹೇಳಿದ್ದನೊ ದಿನ ದಿನ
ಒಂದೇ ಮಾತಿನಿಂದ ನಡೆಯುಬೇಕರಿ ಎಲ್ಲ ಜನ
ಅಂದರೆ ಸಿಗುವದು ಸ್ವರಾಜ್ಯ ನಮಗಿನ್ನ
ನಾವೆಲ್ಲರೂ ಏಕಾಗಿ ಕೇಳಬೇಕು ರಾಜನ್ನ
ನಮಗೆ ನೀ ಕೊಡು ಸ್ವರಾಜ್ಯವನ
ಕೊಡದಿದ್ದರೆ ಬಿಡುವುದಿಲ್ಲ ನಾವು ಇನ್ನ

||ಇಳವು||

ಈ ಪ್ರಕಾರ ಬೋಧ ಮಾಡತಿದ್ದ ಗಾಂಧಿ ಮಹಾರಾಜ ದಿನ
ಈ ಮಾತು ಕೇಳಿ ಹಿಂದುಸ್ಥಾನದೊಳಗಿನ ಜನ
ಕೂಡಿ ಮಾಡಿತೊ ಕಾಂಗ್ರೆಸ್ ಎಂಬುವ ಸ್ಥಾನ
ಅದರೊಳಗೆ ಮುಂದಾಳಾಗಿ ನಡೆದಾರೊ ಸುಭಾಸ ಬೋಸ ಎಂಬ ಇನ್ನೂ
ಕೆಲವು ಮುಖ್ಯ ಮುಖ್ಯ ಜನ
ಮನಿಮಾರು ಬಿಟ್ಟು ಅಧಿಕಾರ ತೊರೆದು ಹೊಂಟಾರೊ
ದೇಶದ ಮೇಲೆ ನೆನೆಯುತ ಮಹಾತ್ಮಾಗಾಂಧಿಯನ

||ಏರು||

ಲಕ್ಚರ ಹೇಳುತ ಹೊಂಟಾರೊ ಅಲ್ಲಲ್ಲಿಗಿನ್ನ
ಇನ್ನು ಮುಂದ ಕಾಣುವದಿಲ್ಲರಿ ಅವರಂಥ ಧೈರ್ಯಶಾಲಿಗಳನ
ನೀವು ಕೇಳರಿ ಕಾಂಗ್ರೆಸ್‌ದ ಮರ್ಮವನ||೧||
ಕಾಂಗ್ರೆಸ್ ಪ್ರಚಾರ ಮಾಡಿದರೊ ಹಿಂದುಸ್ಥಾನದೊಳಗ
ಸರಕಾರಿ ನಜರ ಬಿತ್ತರಿ ಕಾಂಗ್ರೆಸ್‌ದ ಮೇಗ
ಕಾಂಗ್ರೆಸ್ ಮುರಿಯಬೇಕೆಂದು ಮನಸಿನ್ಯಾಗ ಹುಟ್ಟಿತು ಆಗ
ಲಕ್ಚರ್ ಹೇಳಬಾರದು ನಾಲ್ಕು ಜನ ಕೂಡಿದಾಗ
ಕಾಯ್ದೆ ಹೊರಡಿಸ್ಯಾನೋ ವಾಯ್ಸರಾಯ ಹಿಂದುಸ್ಥಾನದಾಗ
ಮತ್ತ ಬಿಕ್ಕಟ್ಟು ಇಟ್ಟಾನೊ ದಂಡ ಶಿಕ್ಷೆಯನ್ನು ಬಹುಬೇಗ

||ಇಳವು||

ಕಾಯ್ದೆ-ಗೀಯ್ದೆ ಕೇಳಲಿಲ್ಲರಿ ಕಾಂಗ್ರೆಸದ ಜನ
ತಯಾರಾಗಿ ನಿಂತರು ಬಂಟ ಜನ
ಎಲ್ಲಿಬೇಕು ಅಲ್ಲೆ ನಿಂತು ಸಭೆಗೂಡಿಸಿ ಹೇಳುತ ಹೊಂಟರು ಲಕ್ಚರನ
ಬಂಧು ಜನಗಳೇ ನಾವು ನೀವು ಕೂಡಿ ಮಾಡೂನು ಒಂದು ಸಂಘವನ
ಕೊಡು ಎಂದು ನಮಗೆ ಕೇಳೂನು ನಮಗ ಸ್ವರಾಜ್ಯವನು
ಹೀಗೆಂದು ಹೇಳುತ ಹೊಂಟರು ಬಂಟ ಜನ
ನಿಷ್ಠೆಲಿಂದ ನಡೆದು ನಾವು ಸ್ವರಾಜ್ಯವನ||೨||

ಎಲ್ಲಿ ನೋಡಿದಲ್ಲಿ ಧರಿಸಿತು ಜನ
ಕೈ ನೂಲಿನ ಖಾದಿ ಅರಿವಿಯನ
ಕೈಯೊಳು ಪಿರಕಿ ಮನೆಯೊಳು ರಾಟಿಯ
ಗಿರಾಕಿ ಹೆಚ್ಚಾಗುತ ನಡೆದಿತು ದೇಶದೊಳಗಿನ್ನ
ಇದನ್ನೆಲ್ಲ ಕಣ್ಣಿಲೆ ನೋಡಿ ಕಿವಿಯಿಂದ ಕೇಳಿ
ಗಾಂಧಿ ಮಹಾತ್ಮನಾದನು ಮನಸ್ಸಿನೊಳು ಖುಸಿ ತಾನ
ಸ್ತ್ರೀಯರು ಮೊದಲಾಗಿ ಉಟ್ಟರು ಖಾದಿಯ ಬಟ್ಟೆಯನ
ಸ್ತ್ರೀ-ಪುರುಷರೆಲ್ಲರು ಕೂಡಿ ಕಾಂಗ್ರೆಸ್‌ದ ತತ್ವಕೆ ಒಪ್ಪಿ ನಡಿತೈತರಿ ಜನ
ಕಾಂಗ್ರೆಸ್‌ದ ಜನರನ್ನು ಹಿಡಿಯಬೇಕೆಂದು ತಯಾರಾಗಿ ಹೊರಟಿತು
ಸರಕಾರದ ಜನ
ಕಾಂಗ್ರೆಸ್‌ದ ಜನರನ್ನು ಎಲ್ಲಿಬೇಕು ಅಲ್ಲಿ ಹಾಕಿತು ಜೇಲಿಗಿನ್ನ
ಅನ್ಯಾಯವೆಂಬುದು ತುಂಬಿ ತುಳಕುತ ಹೊರಟಿತು ಸರಕಾರದೊಳಗಿನ್ನ
ಹಿಡಿದ ಕೂಡಲೆ ಅನ್ನುದು ಜನ ಮಹಾತ್ಮಾಗಾಂಧೀಕಿ ಜೈ ಜೈ
ಭಾರತ ಮಾತಾಕಿ ಜೈ ಜೈ ಎಂದು ಅನ್ನುತ್ತ ಖುಸಿಲಿಂದ ಹೋಗುತ್ತಿದ್ದರು
ಜೇಲಿಗೆ ಜನ
ಶಿಕ್ಷದ ಅವಧಿ ಮುಗಿದ ಮರುದಿನ ಸರಕಾರಕ ಹೇಳಿ ಬರತಿತ್ತ ಜನ
ಪುನಃ ನಾವು ಬರತೇವಿ ಇಲ್ಲೆ ಇರತೇವಿ ನಮ್ಮ ತಂಬಿಗಿ
ತಾಲಿ ಮೊದಲಾದ ಸಾಮಾನ ಜೋಪಾನ
ಎಂದು ಹೇಳಿ ದೇಶದೊಳಗೆ ಹರೆಬಿದ್ದು ಹೆಚ್ಚಾಗಿ
ಮಾಡಿತು ಕಾಂಗ್ರೆಸ್‌ವನ
ಪುನಃ ಪುನಃ ಹಿಡಿದು ಜೈಲಿಗೆ ತರತಿತ್ತು ಸರಕಾರದ ಜನ
ಜೇಲಿನೊಳಗೆ ಎಷ್ಟೋ ಮುಖಂಡ ಜನ ಮಾಡಿತು ಉಪವಾಸವನ
ಸರಕಾರಕ್ಕೆ ಹೆದರಲಿಲ್ಲರಿ ತಮ್ಮ ಹಟ ಬಿಡಲಿಲ್ಲರಿ ಕಾಂಗ್ರೆಸ್‌ದ ಜನ||೩||

ದಿನ ದಿನಕ್ಕೆ ಹೆಚ್ಚಾಗುತ್ತ ಹೊರಟಿತು ಕಾಂಗ್ರೆಸ್ ಹಿಂದುಸ್ಥಾನದೊಳಗಿನ್ನ
ಹಿಡಿದು ಹಿಡಿದು ಜೇಲಿಗೆ ಹಾಕಿ ಬೇಸತ್ತು ಹೋಯಿತು ಸರಕಾರದ ಜನ
ಕೂಡಿ ನಡೆಸಿತು ಐರ್ಲಂಡದೊಳಗೆ ಮುಖ್ಯ ಮುಖ್ಯ ಜನ
ಹಿಂದುಸ್ಥಾನಕ ಸ್ವರಾಜ್ಯ ಕೊಡಬೇಕು ನಾವು ಇನ್ನ
ಕೊಡದಿದ್ದರೆ ಮೂರಾಬಟ್ಟೆಯಾದೀತು ಎಂದು
ನಿರ್ಣಯ ಮಾಡಿತು ಆ ಮುಖ್ಯ ಜನ
ಕಾಂಗ್ರೆಸ್‌ದ ಮೇಲಿನ ಬಿಕ್ಕಟ್ಟು ತೆಗೆದು ಹಾಕಿ ಹೇಳಿತ ಲಗಿಬಿಗಿನ
ವೋಟರ್ ಲಿಸ್ಟಿನಿಂದ ಆರಿಸಿ ಬಂದರೆ ಸ್ವರಾಜ್ಯ ಕೊಡಿಸುವೆವು ಕಾಂಗ್ರೆಸ್ಸಿಗೆ ಇನ್ನ
ಅದೇ ಪ್ರಕಾರ ವೋಟಿನಿಂದ ಅರಿಸಿ ಬಂತರಿ ಕಾಂಗ್ರೆಸ್ ತಾನ
ಮುಖ್ಯ ಮುಖ್ಯ ಸ್ಥಾನದೊಳಗೆ ಕಾಂಗ್ರೆಸ್ ಅಧಿಕಾರ
ಆಯ್ತು ಹಿಂದುಸ್ಥಾನದೊಳಗಿನ್ನ
ಬುದ್ಧಿವಂತ ಸಣ್ಣ-ದೊಡ್ಡ ಜನರ ನಿಮಗೆ ನಾನು ಮಾಡುವೆ ವಂದನ
ನಾವು ನೀವು ಕೂಡಿ ಮಹಾತ್ಮಾಗಾಂಧಿಯನ್ನು ನೆನೆಯಬೇಕು ದಿನ
ಅನ್ನುನು ಒಂದೇ ಮಾತರಂ ಮಹಾತ್ಮಾಗಾಂಧೀಕಿ ಜೈ
ಭಾರತ ಮಾತಾಕಿ ಜೈ
ಎಂಬ ಹೆಸರು ಭಜಿಸಿ ಸ್ತೋತ್ರ ಮುಗಿಸೋಣ ದಿನ ದಿನ||೪||

ರಚನೆ :  ಮೋದಿನಸಾಬ ಮಾರನಬಸರಿ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ