ಇಪ್ಪತ್ತೈದು ವರ್ಷ ಸ್ವಾತಂತ್ರ್ಯೋತ್ತರ | ಬೆಳ್ಳಿ ಹಬ್ಬದ ಸಡಗರ |
ಕನ್ನಡ ಸಾಹಿತ್ಯ ಪ್ರಸಾರ |
ಶ್ರೀ ಅರವಿಂದ ಶತಮಾನದ ಇಸ್ವಿ ಬಂದೈತಿ ಬಾ ಹತ್ತರ
ಮೂರು ಮುಖದ ಮೂರ್ತಿಯ ಮಹೋತ್ಸವ  ಇದರರ್ಥ ಮಾಡ್ರಿ ವಿಚಾರ
ತಿಳಿದು ಆಚರಿಸಿರೆಲ್ಲರು |
ಭಾರತ ಹಿರಿಮೆಯ ಪರ್ವಕಾಲವಿದು ಎನಿಸುವ ಸಂವತ್ಸರ||೨||

ಸ್ವರಾಜ್ಯ ದೊರೆತರೂ ಸುಖವಿಲ್ಲಂತ | ಪ್ರತಿಯೊಬ್ಬರು ಅಂತಾರ |
ಸರ್ವರು ಸ್ವಾರ್ಥ ಬಯಸ್ಯಾರ |
ಜ್ಞಾನದಿ ನವಮನ್ವಂತರಗೊಳಿಸಲು ಅರವಿಂದರ ಅವತಾರ||೩||

||ಚಾಲ||

ಆತ್ಮಾಹುತಿ ಮಾಡಿ ಸ್ವಾತಂತ್ರ್ಯವ ತಂದಾರ |
ಸತ್ಯ ಶಾಂತಿ ಅಹಿಂಸೆಯ ಮೂಲ ತಂತ್ರ ಕಲಿಸ್ಯಾರ |
ಬಂಧನವ ಹರಿದೊಗೆದು ಎಲ್ಲರಿಗೆ ಸುಖವನು ತಂದಿಟ್ಟಾರ |
ಜನತೆಯ ಪ್ರತಿನಿಧಿಯಾಗಿ ಅಧಿಕಾರವನು ಪಡೆದಾರ |
ಜಾತ್ಯಾತೀತ ಎಂಬ ತಂತ್ರದಡಿಯಲಿ ಜಾತಿ ಜಗಳಕ್ಕೆ ಆಸರ |
ಸ್ವಾರ್ಥಲಾಲಸೆಗೆ ಆಶೆ ಮಾಡುವ ದೇಶವ ಹದಗೆಡಿಸ್ಯಾರ |

||ಏರು||

ಸಿಂಡಿಕೇಟ ಇಂಡಿಕೇಟ ಅಂದಾರ ಪಕ್ಷ ಇಬ್ಭಾಗ ಮಾಡ್ಯಾರ |
ಸಂಸ್ಥೆಯ ಹೆಸರ ಕೆಡಿಸ್ಯಾರ ಶ್ರೀ ಅರವಿಂದ ಶತಮಾನದ
ಇಸ್ವಿ ಬಂದೈತಿ | ಬಾ ಹತ್ತಿರ||೧ನೆಯ ಚೌಕ||

ಜನತೆಗಾಗಿ ಹಣ ಖರ್ಚುಮಾಡಿ ಪರದೇಶಿ ಸಾಲ ತಂದಾರ |
ಕೋಟಿಗಟ್ಟಲೆ ಖರ್ಚು ಮಾಡ್ಯಾರ |
ತಳದತನಕಹಣ ಬರೂದರಾಗ | ಖಾಲೆ ಕಾಗದ ಪ್ರಚಾರ||೧||

ನೀರಾವರಿ ಕೆರೆಕಾಲವೆ ಕಟ್ಟಿ | ಬೆಳೆಸಿ ಧಾನ್ಯದ ಆಗರ |
ಸರ್ವರಿಗೆ ಸಾಲ ಕೊಟ್ಟಾರ |
ದುರಪಯೋಗ ಮಾಡಿ ದೂರುಕೊಟ್ಟರ ಏನೈತಿ ಸ್ವಾತಂತ್ರ್ಯ||೨||

ಬಡವ ಬಲ್ಲಿದರ ಸಮತಾವಾದಕೆ ಭೂಪರಿಮಿತಿ ತೆಗೆತಾರ |
ಬಡ ಜನತೆಯ ಉದ್ಧಾರ |
ಸರಿಯಾಗಿ ಸರಕಾರ ಅರಿತು ನಡೆದರೆ ಬೆಳ್ಳಿಹಬ್ಬ ಸಾರ್ಥಕ ನೋಡ್ರಿ||೩||

||ಚಾಲ||

ಸರಿಯಾಗಿ ಬಂದ ಸುಖ ಸರ್ವರ ಸ್ವತ್ತೆನಬೇಕು |
ಈ ಪರಿಯ ಅರವಿಗೆ ಸುಸಂಸ್ಕೃತಿ ಬರಬೇಕು |
ಪೂರ್ವದ ಭಾರತವು ಪುನಃ ನಿರ್ಮಾಣವಾಗಬೇಕು||೧||
ದಿಲ್ಲಿಯಿಂದ ಹಳ್ಳಿಯತನಕ ಸಾಹಿತ್ಯ ಹೊನಲು ಹರಿಬೇಕು |
ಒಳ್ಳೊಳ್ಳೆ ಪುಸ್ತಕ ಎಲ್ಲರು ಓದಿ ತಿಳಿಯಬೇಕು |
ವರ್ಷವಿಡೀ ಪುಸ್ತಕ ಪ್ರಸಾರವು ನಡಿಯಬೇಕು |||೨||

||ಏರು||

ರಾಜ್ಯದ ಜಿಲ್ಲೆ ತಾಲೂಕ ಹಳ್ಳಿಗೆ ಪುಸ್ತಕಗಳ ತರತಾರ |
ಸಾಹಿತ್ಯದ ಪ್ರಸಾರ ಮಾಡುವರು ||
ಶ್ರೀ ಅರವಿಂದರ ಶತಮಾನದ ಇಸ್ವಿ ಬಂದೈತಿ ಬಾ ಹತ್ತರ |(೨ನೆಯ ಚೌಕ)

ರಾಜಕಾರಣ ಸಮಾಜ ಸುಧಾರಣ ನಿಸ್ವಾರ್ಥದಿಂದ ದುಡಿದರ |
ಸಹಕಾರದಿಂದ ನಡೆದರ |
ತಾತ್ವಿಕ ಶಾಂತಿಯ ನೆರವು ಇರಬೇಕು ಭಗವಾನ್ ಶ್ರೀ ಅರವಿಂದರ||೧||

ಯೋಗದಿಂದ ವಿಜ್ಞಾನವ ಗಳಿಸಿ ಜಗಕೆ ತಂದು ಬಿರ‍್ಯಾರ ಜನತೆಗೆ
ದಾರಿ ತೋರ‍್ಯಾರ
ಮಾನವನಲಿ ಅತಿಮಾನವತೆಯನಿಳಿಸಿ ಜಗಪಾವನಗೊಳಿಸ್ಯಾರ||೨|

ಸತ್ಯ-ಮಿಥ್ಯೆ ಹಳೆಭಾವನೆಯಳಿಸಿ ಸರ್ವಸತ್ಯವೆಂದಾರ ಸತ್ಯದ ಮೂಲ ತಿಳಿಸ್ಯಾರ
ಸರ್ವಯೋಗ ಸಮನ್ವಯಗೊಳಿಸಿ ಪೂರ್ಣಯೋಗವೆಂದು ಸಾರಿದರು||೩||

||ಇಳುವು||

ಬಂಗಾಲದಲ್ಲಿ ಭಗವಾನರು ಹುಟ್ಟಿ ಬಂದರೊ |
ಕಂಗಾಲ ಭಾರತದ ಸ್ಥಿತಿಯ ನೋಡಿ ನೊಂದರೊ |
ಆಂಗ್ಲರನು ಓಡಿಸಲು ಕಷ್ಟದಲ್ಲಿ ಬೆಂದಾರೊ||೧||

ಪರಿವರ್ತನೆಗೊಳಿಸುತ ನವಮನ್ವಂತರವೆಂದಾರೊ ಚಿರಕಾಲ ಸ್ಥಿರ
ಶಾಂತಿಯ ಪಡೆಯಲು ಶ್ರಮಿಸ್ಯಾರೊ |
ಈಗವರ ಜನ್ಮಶತಾಬ್ದಿಯ ಆಚರಿಸುವರೊ||೨||

ರಜತೋತ್ಸವ ಭಾರತಮಾತೆಗೆ ನಮಿಸಿದರು ಶಿರಬಾಗಿ ವಾಲಿ ಶರಣರು
||೩ನೆಯ ಚೌಕ||

ರಚನೆ :  ಶರಣಪ್ಪವಾಲಿ
ಕೃತಿ :  ಶರಣಸ್ಮೃತಿ