ಸಾಲಿಕಲಿ ನಿತ್ಯ ಸಾಲಿಕಲಿ ಮತ್ತ
ಸಾಲಿಕಲಿ ಚಿತ್ತಗೊಟ್ಟಿ ಕಲಿ
ಸಾಲಿಕಲಿ ಮಿತ್ರ ಸಾಲಿಕಲಿ ಖಾತ್ರಿ
ಸಾಲಿಕಲಿ ರಾತ್ರಿ ಸಾಲಿ ಕಲಿ      || ಪಲ್ಲ ||

ಮಳ್ಳತನಕ ಹಗಲಗಳ್ಳರು ಸುಲಿಯತಾರ
ಒಳ್ಳೆ ಮನಸ್ಸಿನಿಂದ ಸಾಲಿಕಲಿ
ಡೊಳ್ಳಹೊಟ್ಟಿ ಪಳ್ಳಗಚ್ಚಿ ಜನರ ಕಾಟ
ತಳ್ಳಲಿಕ್ಕೆ ಮದಲ ಸಾಲಿಕಲಿ ||
ಗ್ಯಾಸ ಹಚ್ಚಿವಳೆ ತ್ರಾಸ ತಗೊಂಡ ಮೇಲೆ
ಬೇಸ್ಯಾಗಿ ಕೂತಕೊಂಡ ಖಾಸಕಲಿ
ಹಾಸಿಕೊಂಡ ಚೀಲ ಪಾಟಿ ಪೇನಸೀಲ
ನೀಟಾಗಿ ಹಿಡದ ರ ಠ ಈ ಕ ಕಲಿ ||
ಕೋರ್ಟ ಕಚೇರಿಯೊಳಗ ಕುಟಿಲ ಜನರು
ನಿನ್ನ ಫಸಾಸದಂತೆ ಹಸನಾಗಿ ಕಲಿ
ಪೇಟೆಯೊಳಗಿನ ಥೇಟ ದಲಾಲರ ಆಟ
ನಡೆಯದಂತೆ ನೀಟ ಕಲಿ ||

||ಚಾಲ||

ಶಹರದೊಳಗ ಬೋರ್ಡ ಹಚ್ಚಿದರ ಓದಿ ವತ್ತರ
ಮಾಡಲಿಕ್ಕೆ ಕೆಲಸಾ ಸಾಲಿ ಕಲಿತರ ಆಗತದ ಪಾಸಾ ||
ಊರಿಗ್ಹೊರಟ ಲೈನ ಹಿಡಿದರ ಊರ ಎಷ್ಟು ದೂರ
ನೋಡಲಿಕ್ಕೆ ತುಸಾ ಓಟ ಮೈಲಿಗಲ್ಲಿನಕ್ಷರ ಖಾಸಾ ||

||ಏರು||

ಕಲಿತವಗ ಇಲ್ಲ ಘೋರ ಹೋಗತಾನ ಭರರರ
ಅರಿದಂವಗ ಹೈರಾಣ ಇಲ್ಲ ನೆಲಿ||೧||

ಮುದುಕರಾಗಿ ನಮಗ ಯದಕ ಬೇಕಂತ
ಹುದಿಗ್ಯಾಡ ಬೇಡ ಮದಲ ಓದ ಕಲಿ
ಬದುಕಿ ಬಾಳಂವಗ ಶರೀರ ಮುದಕ ಆದ್ರು
ಜ್ಞಾನ ಮುಪ್ಪ ಅಲ್ಲ ಹೆಚ್ಚಬೆಲಿ ||
ಗಾಂಧೀಜಿ ಸಾಯುವ ಮುಂದ ಕಲಿಯತಿದ್ರ
ಒಂದೊಂದು ಭಾಷೆಯ ಬರೆಯುತಲಿ
ಒಂದೇ ಒಂದ ಚಂದವಾದ ಕನ್ನಡ
ಕಲಿಯವಲ್ರಿ ನಿಮ್ಮದೆಂಥ ತಲಿ ||
ಗುಲಾಂಗಿರಿ ಹೋಗಿ ಫಲಾ ಇಲ್ಲ ನೋಡ
ಅರಿಯದವನು ಬೀಳತಾನ ಬಲಿ
ಕಲಿಯುಗದೊಳಗಿನ ಕಲೆಯ ತಿಳಿಯುದಕ
ಸರಳ ಮಾರ್ಗ ಓದುಬರ ಕಲಿ ||

||ಚಾಲ||

ಸಜ್ಜನರ ಕೂಡ ಸಹಕಾರ ದುರ್ಚಟ ದೂರ ಮಾಡಂವನೆ
ಧೀರಾ ಅವಗ ಒಲಿಯುವನು ದೇವರಾ ||
ಸದ್ಗುರುವಿನಲ್ಲಿಟ್ಟ ಭಕ್ತಿ ಪಡಿರಿ ನಿಜ ಮುಕ್ತಿ ಕಲಿತ
ಅಕ್ಷರಾ ಮುಂದ ಓದಿಕೊಳ್ಳಿರಿ ಮಂತರಾ ||

||ಏರು||

ಕಾಳಿದಾಸ ಕವಿಯಾದದ್ದ ಕೇಳಿಕೊಂಡ
ಹುಲಕುಂದ ಭೀಮ ಅಂದ ತೀವ್ರ ಕಲಿ||೨||

ರಚನೆ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು