ಸ್ವಚ್ಛ ಮಾತ ಒಂದ ಬಿಚ್ಚಿ ಹೇಳತೀನಿ
ಮುಚ್ಚಿ ಇಡುವದಿಲ್ಲ ಇನ್ನ ಮ್ಯಾಗ
ಎಚ್ಚರಿಲ್ಲದ ಕಣ್ಮೂಚ್ಚಿ ಕೂತರ
ಹುಚ್ಚರಾಗತೀರಿ ಜಗದೊಳಗ   ||ಪ||

ಖಾಲಿ ಕೂತಾಗ ಸಾಲಿ ಕಲಿಯಿರಿ
ಕೈ ಕಾಲ ಬಿದ್ದ ಹೇಳುವೆ ನಿಮಗ
ಕೂಲಿಕಾರ ರೈತರು ಎಲ್ಲಾರು
ಕಲಿಯ ಕಾಲ ಬಂದತಿ ಈಗ ||

ಬಯ್ಯತಾರ ಜನ ಬಟ್ಟ ಒತ್ತವರನ್ನ
ಮರ್ಯಾದಿಲ್ಲ ಸಂಸಾರದೊಳಗ
ಸಹಿ ಮಾಡಂದ್ರ ಅಸಯ್ಯ ಅಗತ
ಅಯ್ಯಯ್ಯೋ ಅಂತೀರಿ ಆವಾಗ ||

ಪತ್ರ ಬಂದರ ಮತ್ತೊಬ್ಬರ ಹತ್ತರ
ವತ್ತರ ಹೋಗುದು ನಿಮ್ಮ ಭೋಗ
ಉತ್ತರ ಬರಿಸಲಿಕ್ಕೆ ಮತ್ತು ಮಂದಿಯ
ಬೆನ್ಹತ್ತಿ ತಿರಗುವ ಪ್ರಸಂಗ

||ಚಾಲ||

ಕಲಿತವನೇ ಓದಾವ ಪುರಾಣಾ
ಎಲ್ಲ ದೇಶದಲ್ಲಿಯ ವರ್ತಮಾನಾ
ಅರಿದವನು ಹಾಕುವದು ಗೋಣಾ
ಬಲ್ಲವನಿಗೆ ಹೆಚ್ಚಿನ ಜ್ಞಾನಾ ||

||ಏರು||

ಗಚ್ಚಿನ ಗುಡಿಯೊಳು ಅಚ್ಯುತ ಇದ್ದಂತೆ
ಅಕ್ಷರ ಜ್ಞಾನ ಇದ್ದವಂಗ||೧||
ಕಂಣು ಇದ್ದು ನಾವು ಕುರುಡರಾಗಿವೆಂತ
ನೀವೆ ಅನ್ನತಿರಿ ಈ ಮಾತಾ
ಸಣ್ಣ ಮಕ್ಕಳನ್ನ ದನಾ ಕಾಯಕ ಹಚ್ಚಿ
ವಿನಾಕಾರಣ ಮಾಡತೀರ ಘಾತಾ ||

ಹೆಣ್ಣು ಮಕ್ಕಳಿಗೆ ಶಾಣೆತನ ಯಾಕ ಬೇಕ
ಅನ್ನುವವರು ತುಂಬ್ಯಾರ ಮಸ್ತಾ
ಮಣ್ಣಿನೊಳಗ ಮಾಣಿಕ ಹುಗಿದಂತೆ
ಕೋಣೆಯೊಳಗ ಇಡುವ ಬೇತಾ ||

ತನ್ನ ಮನಿ ಹಿರಿತನಾ ತಾನೆ ನಡಿಸುವಷ್ಟು
ಜ್ಞಾನ ಬಂದರಾಗುವದು ಒಳಿತಾ
ಅನ್ಯರು ಮಾಡುವಂಥ ಅನ್ಯಾಯ ತಿಳಿಯುದಕ
ಸಾಲಿಕಲಿಕರಾಗತದಿ ಸಿಸ್ತಾ ||

||ಚಾಲ||

ಖೊಟ್ಟ ಕಾಗದ ಪತ್ರ ಇದ್ದರಾ
ಸ್ವಚ್ಛ ಓದತೀರಿ ಕಲಿತವರಾ ||
ಅಷ್ಟೂರ ಸಾಲಿಕಲತರಾ
ನಿಚ್ಚಳಾತ ನಿಮ್ಮ ಸಂಸಾರಾ ||

||ಏರು||

ಅಚ್ಚ ಕನ್ನಡ ನಾಡ ಉಚ್ಛ ಸ್ಥಿತಿಗೆ ಒಯ್ದು
ಹೆಚ್ಚು ಕೀರ್ತಿ ಪಡಿಯಿರಿ ಬೇಗ||೨||

ನಿರಕ್ಷರರಿಗೆ ದೊರೆಯುದಿಲ್ಲ ಮಾನಾ
ಮರತ ಕೂಡ್ರದೆ ತಿಳಕೊಳ್ಳರಿ
ಪರ ರಾಷ್ಟ್ರದವರು ದಡ್ಡರಂತಾರ ನಿಮಗ
ಗುರ್ತಾ ಹಿಡಿದು ಸಾಲಿ ಕಲಕೊಳ್ಳಿರಿ ||

ಬರಿಲಿಕ್ಕೆ ಬಂದರ ಸರ್ವ ಅಧಿಕಾರ
ಇಲ್ಲದಿದ್ದರ ಇಲ್ಲಿ ನೋಡಿಕೊಳ್ಳಿರಿ
ಸರಕಾರ ಪರಿಪರಿ ಯೋಚನೆ ನಡಿಶಾರ
ರಾತ್ರಿ ಸಾಲಿಗೆ ಹೋಗಿ ಕಲಕೊಳ್ಳಿರಿ ||

ಅರಿದವರ ಹರಿಯದವರ ಗುರು ಹಿರಿಯರು
ಮರಿ ಮಕ್ಕಳೆಲ್ಲರು ಕೂಡಿಕೊಳ್ಳಿರಿ
ಶಾರೀರಿಕ ಶಿಕ್ಷಣ ಪ್ರೌಢ ಶಿಕ್ಷಣ
ವರ್ದಾ ಶಿಕ್ಷಣ ಪಡಕೊಳ್ಳಿರಿ ||

||ಚಾಲ||

ವಿದ್ಯೆಯಿಂದ ರಾಷ್ಟ್ರದುದ್ದಾರಾ
ಬುದ್ಧಿಯಿಂದ ರಾಜ್ಯಕಾರಭಾರ ||
ಶುದ್ಧ ಶ್ರದ್ಧೆಯಿಂದ ಸಂಸಾರ
ಇದ್ದವನೆ ಆಗತಾನ ಪಾರಾ ||

||ಏರು||

ಸಚ್ಚಿದಾನಂದ ಹುಲಕುಂದ ಭೀಮನ
ಇಚ್ಚಾ ಇದ್ದಂತೆ ಅಗಲಿ ಬೇಗ||೩||

ರಚನೆ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು