ಜನನಿ ಜನ್ಮಭೂಮಿ ಸೇವಾ ಮಾಡಿದರ
ಹುಟ್ಟಿ ಬಂದದ್ದಕ ಸಾರ್ಥಕ
ಜನ್ಮಭೂಮಿ ಸೇವಾ ಮಾಡದಿದ್ದರ
ಆಗೂದು ಘಟ್ಟಿ ಅವಗ ನರಕಾ
ಹುಟ್ಟಿ ಬಂದವಗ ಸಾವು ತಪ್ಪುದಿಲ್ಲರಿ
ಸಾವುದು ಒಂದಿನ ನಿರಕ |
ದೇಶ ಸೇವೆಗೆ ದೇಹದಾನ ಮಾಡಿದವ
ವಂದ್ಯನಾಗುವ ಲೋಕಕ್ಕ||೧||

ಭಾರತದ ಕೆಚ್ಚೆದೆಯ ವೀರ
ಪುರಾಣ ತೆಗದು ನೋಡು ಧೀರೆ
ಹಿಮಾಲಯ ಗೌರಿಶಂಕರ
ಶಿಖರದಲ್ಲಿ ಇರತಾನೋ ಶಿವಹರಾ
ಹೇಳತೈತೇ ಧರ‍್ಮ ಶಾಸ್ತರಾ
ಭಾರತೀಯರ ಪುಣ್ಯಕ್ಷೇತ್ರ
ಮಲಗಿದ ಭಾರತ ಸ್ವಾತಂತ್ರ್ಯ ಸಿಂಹಕ
ಚುಚ್ಚಿ ರೊಚ್ಚಿಗೆಬಿಸ್ಯಾರೋ||೨||

ನಾಡ ಸ್ವಾತಂತ್ರ್ಯಗಿಂತ ಹೆಚ್ಚಿನದ್ಯಾವುದಿಲ್ಲ
ನಾಡ ಗುಡಿಯ ಮಾನ ಕಾಯಬೇಕ
ತನುಮನಧನ ನೀವು ಅರ್ಪಣ ಮಾಡಿ
ಭಾರತಕೆಲ್ಲರು ದೇಶಕ್ಕೆ
ಕಲಾದಗಿ ಊರ ಕವಿಗಾರ ಇನಾಮದಾರ
ಭಾರತ ನಾಡಿನ ಸೇವಕ
ರಾಷ್ಟ್ರ ಮಾನಾ ಕಾಯಿರಂತ ಕೈಮುಗಿದು
ಹೇಳತಾನ ಹಿಂದು ದೇಶದ ಜನಕ್ಕ||೩||

ರಚನೆ :  ಕಲಾದಗಿ ಇನಾಮದಾರ
ಕೃತಿ :  ಜಾನಪದ ಝೇಂಕಾರ