ಮಾನವಜೀವನದ ಮೂಲ ಶಿಕ್ಷಣದ
ಮಾತ ಹೇಳುವೆ ಈ ಸಭೆಯೊಳಗ
ಹೀನರಾಗಿ ನೀವು ಹಿಂದ ಊಳಿಯುವದಲ್ಲ
ದಿವಸ ಕಾಲಮಾನ ನಾಜುಕದೊಳಗ ||ಪಲ್ಲ||
ಕಲಿತಂವಗಮಾನಾ ಕಲಿದಂವಗೇನಾ
ಹಾನಿನೋಡ ಪ್ರಪಂಚದೊಳಗ
ಕೂಲಿ ಮಾಡಿ ಹೊಟ್ಟಿ ತುಂಬಿಕೊಂಡರೇನಾತ
ವಿದ್ಯಾ ಇರಬೇಕ ಬಾದ ಆಗದ್ಹಂಗ ||
ವಿದ್ಯಾ ಇದ್ದವರನ್ನ ಮುಂದಕ್ಕ ತರುತಾರ
ವಿದ್ಯಾ ಇಲ್ಲದಂವ ಕೇಳ್ರಿ ಹದ್ದಿನಂಗ
ಬಂದ ಎಡರು ತೊಡರ ಸರಿಸುದಕ್ಕ
ವಿದ್ಯಾ ಇರಬೇಕ ದರ ಒಬ್ಬಗ ||
ಮೂರ್ಖತನ ಮಾಡಿ ಹಿಂದ ಉಳದರ
ಪಶುಪಕ್ಷಿಯಂಗ ಇದ್ದ ಬಾಳ್ವೆ ಮಾಡಿದ್ಹಂಗ
ಅಕ್ಷರ ಜ್ಞಾನಾ ಪರಿಪೂರ್ಣ ಇದ್ದಂವಗ
ಕೀರ್ತಿಗೆ ಕಡಿಮಿಲ್ಲ ಜನದಾಗ ||
||ಚಾಲ||
ಅರಿತುಕೊಂಡು ಶಿಕ್ಷಣ ಪಡಿಬೇಕ
ಸರಳ ವ್ಯವಹಾರ ಸಂಸಾರ ಅನುಕೂಲಕ ||
ಅಜ್ಞಾನಿಗಳಿಗೆ ಎನ ದೊರಿಬೇಕ
ಸುಜ್ಞಾನಿಗಳಿಗೆ ಯಾವಾಗಲು ಸುಖ ||
||ಏರು||
ವಿನ್ಹಾ ಕಾರಣ ನೀವು ಹಾಳಾಗತೀರಿ
ತಿಳಿದ ನೋಡರಿದನ ಮನದಾಗ||೧||
ಮಹಾತ್ಮಾ ಗಾಂಧೀಜಿ ಮುದಕ ಆದ್ರಸುದ್ದಾ
ಕರಿತಿದ್ರ ಒಂದೊಂದು ಭಾಷೆಯನು
ಸಹಾನುಭೂತಿಯಿಂದ ಜ್ಞಾನಜ್ಯೋತಿ ಬೆಳಗುತ
ಕಣ್ಮರೆಯಾಗಿ ಕಂಡ್ರ ಮುಕ್ತಿ ಮಾರ್ಗವನು ||
ಪ್ರಧಾನ ಮಂತ್ರಿವರ್ಯರಾದ ಇಂದಿರಾ ಗಾಂಧಿಯವರು
ಹ್ಯೆಂಗನಡಿಸ್ಯಾರ ಹಿಂದುಸ್ತಾನವನು
ಸಂದೇಹವಿಲ್ಲದೆ ಪರರಾಷ್ಟ್ರದೊಳು ಹೋಗಿ
ಬಿಢೆಯಿಲ್ಲದೆ ಮಾಡತಾರ ಚರ್ಚೆಯನು ||
ಇಂದಿನ ಭಾಗ್ಯಾ ಕಂಡವರ ಸೌಭಾಗ್ಯ
ಮಾಹಿತಿ ಮಾಡಿಕೊಳ್ಳಿರಿ ಇದನು
ಕುಂದು ಕೊರತೆಗಾಗಿ ವೇಳ್ಯೆಗಳಿಯದೆ
ಕಲಿಯಬೇಕ ಪ್ರೌಢ ಶಾಲೆಯನು ||
||ಚಾಲ||
ವಿದ್ಯಾದಿಂದ ಸರ್ವ ಸಂಪತ್ತಾ
ಆದಿ ಬುನಾದಿ ಕಾಲದ ಮಾತಾ ||
ಹುಲಕುಂದ ಕಂದ ಭೀಮನ ಕವಿತಾ
ಹಾಲು ಸಕ್ರಿ ಕಾಸಿ ಕುಡದಂತಾ ||
||ಏರು||
ಮಾನ್ಯವಂತ ಜನಸೇವಕನಾಗಿ
ತಿಳದಷ್ಟ ಹೇಳಿದ ಜನದಾಗ||೨||
ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು
Leave A Comment