ಮಹತ್ವದ ಮಾತಿನ ಮಹಿಮೆ ಹೇಳುವೆವು
ಮಾಹಿತಿ ಮಾಡಿಕೊಳ್ರಿ ಎಲ್ಲ ಜನರಾ
ಸಹಕಾರ ಅಂದರೇನ ಸಹಜ ತಿಳಿಕೊಂಡರ ಸರಳ
ಸಾಗುವದು ಸಂಸಾರಾ                          || ಪಲ್ಲ ||

ಮಿತವ್ಯಯ ಸ್ವಾರ್ಥತ್ಯಾಗ ಸಮಾಜ ಸೇವೆ
ಸ್ವಾವಲಂಬನ ಇದರ ಆಧಾರಾ
ಜಾತ್ಯಾತೀತ ಪ್ರತಿಯೊಬ್ಬರ ಕಲ್ಯಾಣಕ್ಕಾಗಿ
ಶ್ರಮವಹಿಸುವ ಸಾಧನ ಶಿಖರಾ ||

ಆತ್ಮವಿಶ್ವಾಸ ಆತ್ಮಾರ್ಪಣೆ ಸಮಗ್ರತೆ
ಪ್ರಾಮಾಣಿಕತನವೆ ಅದರ ತಾಯ್ ಬೇರಾ
ಉತ್ತಮ ಬೇಸಾಯ ಉತ್ತಮ ವ್ಯವಹಾರ
ಉತ್ತಮ ಜೀವನ ಕಲಿಸುದು ಪೂರಾ ||
ಆರ್ಥಿಕ ಸಾಮಾಜಿಕ ನೈತಿಕ ವಿಷಯದಲ್ಲಿ
ಪ್ರೀತಿ ಗಳಿಸಿಕೊಳ್ಳುವ ಶಿಬಿರಾ
ಸಾತ್ವಿಕತನ ಸತ್ಯತೆಯಿಂದ ಸಾಗಿದರ ಕೀರ್ತಿಗೆ
ಬರುವದು ಊರಿಗೆ ಊರಾ ||

||ಚಾಲ||

ಪ್ರತಿ ನಿಮಿಷಕ್ಕೆ ಬೇಕ ಸಹಕಾರಾ |
ಅತಿ ಮಹತ್ವದ ಮಾತ ಖರೋಖರಾ ||
ಬಾಯಿ ಕೈಯಿಗಿ ಬೇಕ ಸಹಕಾರಾ |
ಕೈ  ಮೈಗೆ ಇರುವುದು ಸಹಕಾರಾ ||
ಒಂದಕೊಂದ ಸಂಬಂಧ ತಪ್ಪಿದರಾ |
ಮುಂದ ಬಂದ ಶರೀರದ ವ್ಯಾಪಾರಾ ||

||ಏರು||

ಬಹಳ ವಿಚಾರ ಮಾಡಿ ಸಹನ ಶೀಲತೆಯಿಂದ |
ಸಹವಾಸ ಮಾಡಿದರಿಲ್ಲ ಘೋರಾ ||೧||
ಒಳ್ಳೆ ಜನರನ ಒಂದ ಗೂಡಿಸುವದು |
ಬಂದು ಪ್ರೇಮದ ಸಹಕಾರಾ ||
ಕಳ್ಳ ಸುಳ್ಳತನ ತಳ್ಳಿ ಹಾಕುವದು |
ಹಳ್ಳಿಯೊಳಗಿನ ಸಹಕಾರ ||
ನಿರುದ್ಯೋಗಿಗಳಿಗೆ ಉದ್ಯೋಗ ಹಚ್ಚುವ |
ಪ್ರಯತ್ನ ಮಾಡುದು ಸಹಕಾರಾ ||
ಭಾರಿ ಬಡ್ಡಿಯಿಂದ ನರಳುವ ಜನರಿಗೆ |
ದಾರಿ ತೋರಿಸುವದು ಸಹಕಾರಾ ||
ಎಲ್ಲ ಉದ್ದಿಮಿ ವ್ಯಾಪಾರ ಉದ್ಯೋಗಗಳಿಗೆ |
ಉತ್ತೇಜನ ಕೊಡುವದು ಸಹಕಾರಾ ||
ಬಲ್ಲಿದ ಒಕ್ಕಲಿಗರಿಗೆ ಬೆಲ್ಲದ್ಹೇರಿನಂತೆ |
ಸಂಘರೂಪದ ಸಹಕಾರ ||

||ಚಾಲ||

ಬಗಿ ಬಗಿಯ ಸಂಘ ಉದಯಾಗಿ |
ಪ್ರಗತಿಯಾಗ ಬೇಕ ನಿಜವಾಗಿ ||
ಅಗಣಿತ ಐಶ್ವರ್ಯ ಜನತಿಗಿ |
ಉಗಮಾಗಲಿದರ ನೆರಳಿಗೆ ||
ಸುಗಮಾಗಿ ಪ್ರಪಂಚವು ಸಾಗಿ |
ಜಗದೊಳಗ ತತ್ವಕೆ ಜಯವಾಗಿ ||

||ಏರು||

ಬಹು ಮುಖವಾಗಿ ಕಾರ್ಯ ಸಾಗಲೆಂದು |
ಹುಲಕುಂದ ಭೀಮನ ಕವಿಸಾರಾ||೨||

ರಚನೆ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು