ಪರಸ್ಪರ ಸಹಕಾರ ತತ್ವದ ಉದ್ದೇಶಗಳು ಇರುವವು ಹತ್ತು
ಸರಿಯಾಗಿ ತಿಳಕೊಂಡವರಿಗೆ ಗೊತ್ತು
ಅರಿದವರು ಅರಿತು ಕೊಳ್ಳಿರೀ ಹೊತ್ತು
ಬರೋಬರಿ ಗುರಿ ಹಿಡಿದ ಸಾಗಿದರ ಸರ್ವರಿಗಾಗುದು ಸವಲತ್ತು ||

ಜನರಿಗೆ ಹಣದ ಉಳಿತಾಯ ಮಾಡುವಂತ ಉತ್ತೇಜನ
ಕೊಡುವದು ಸಿಸ್ತು
ಅನ್ಯಾಯದ ಬಡ್ಡಿ ಬಿಡಿಸುವ ಬೇತು
ಪೂರ್ಣ ಹಳೇ ಸಾಲ ಹಾಕುದು ಕಿತ್ತು
ಮುನ್ನ ಯೋಗ್ಯ ಬಡ್ಡೀಯ ಕರಾರಿನಿಂದ ಸಾಲಕೊಟ್ಟ
ಬೆಳೆಸುದು ಪತ್ತು ||

ಮೆಂಬರರಲ್ಲಿ ಒಬ್ಬರೊಬ್ಬರ ಪರಿಚಯ ತುಂಬಾ
ಇದ್ದರಾಗುದು ಒಳಿತು
ಸಂಭಾವಿತರಿಗೆ ಬಹು ಕಿಮ್ಮತ್ತು
ನಂಬಿಗಸ್ತರಿಂದ ಮುಂದರದೀತು
ಡಾಂಭಿಕತನದ ಕೆಟ್ಟ ಗುಣದವರನ್ನ ಬಿಟ್ಟ ಬಿಡಬೇಕೆನ್ನುವ ಶರ್ತು ||

ಹೊರಗಿಂದ ಅಥವಾ ಠೇವುದಾರರಿಂದ ಸಂಘ ಸಾಲ ತಂದದ್ದು ಮಾತು
ಸರ್ವ ಮೆಂಬರರಿಗೆ ಇರಬೇಕ ಗೊತ್ತು
ಪೂರ ತಮ್ಮ ಜವಾಬದಾರಿಯ ಹೊತ್ತು
ಯಾರಲ್ಲಿ ಮುದ್ದತ ಮೀರಿ ಬಾಕಿ ಉಳಿಯದಂತೆ
ಮಾಡಬೇಕ ಬಂದು ಬಸ್ತು ||

||ಚಾಲ||

ಭಾಂಡವಲ ಕೂಡಿಸಿ ಇಟ್ಟಾ |
ಮೇಂಬರರಿಗೆ ಸಾಲವು ಕೊಟ್ಟಾ ||

ಹಸನಾಗಿ ಲೆಕ್ಕ ಪತ್ರಿಟ್ಟಾ |
ವಸೂಲಿ ಮಾಡುವದು ಸಗಟಾ ||

ಇವನ್ನೆಲ್ಲ ತಿಳಕೊಳ್ಳುವ ಗುಟ್ಟಾ |
ವ್ಯವಸ್ಥಾಪಕ ಕಮೀಟಿ ಶ್ರೇಷ್ಠಾ ||

||ಏರು||

ತಾರೀಖವಾರ ಸರಳ ವಸುಲಾಗಿ ಜಮಾ ಮಾಡಿದರ
ಮುಗದೋಯ್ತು
ಪೂರ ಸುಳ್ಳ ಜಮಾ ಖರ್ಚು ಮಾಡಬಾರದಂತು
ಆರನೆ ಕಲಮದೊಳಗ ಹೀಗ ಸಾರೀತು
ಬರೋಬರಿ ಸರಿಯಾಗಿ ನಡದರ ಸರ್ವರಿಗಾಗುದು ಸವಲತ್ತು||೧||

ಪ್ರತಿ ವರುಷ ಒಂದು ವ್ಯವಸ್ಥಾಪಕ ಕಮೀಟಿಯನ್ನು
ನೇಮಿಸುವುದು
ವಾರ್ಷಿಕ ಅಢಾವೆ ಚರ್ಚೆಗಿಡವುವದು
ಮತ್ತು ಸೆಕ್ರೆಟರಿಯನ್ನು ಆರಿಸುವದು
ಅತೀ ಬಯಲಿಗೆ ಬಂದ ತಪ್ಪುಗಳ ಬಗ್ಗೆ
ನಿರ್ಣಯ ಮಾಡುವದು ||

ಸಂಘದ ಎಲ್ಲ ಲಾಭಗಳನ್ನು ರಿಝರ್ವ
ಫಂಡಿಗೊಯ್ಯ ತಕ್ಕದ್ದು
ಸಂಘದ ಪತ್ತು ಸುಧಾರಿಸುವದು
ಹೀಗ ಮೆಂಬರ ಜವಾಬದಾರಿ ಪಾಲಿಸುವದು
ಸಂಘಟನೆಯಿಂದ ಸಂಯುಕ್ತವಾಗಿ ಸರ್ವ
ಆಸ್ತಿ ಕಾಪಾಡುವದು ||

ಸದಸ್ಯರಿಂದ ಮತ್ತು ಅನ್ಯರ ಕಡೆಯಿಂದ
ಬಂಡವಲನ್ನು ಕೂಡಿಸುವದು
ಮಧ್ಯವರ್ತಿ ಬ್ಯಾಂಕಿನಲ್ಲಿ ಕೇಳುವುದು
ಅದು ಠೇವಿನ ರೂಪದಿಂದ ತರವುವದು
ಸೆಂಟ್ರಲ್ ಬ್ಯಾಂಕಿನ ಆಡಳತೆಯು
ಭಾಗಿದಾರರ ಕೈಯಲ್ಲಿರುವುವದು ||

ಅದರಲ್ಲಿ  ಸಂಘವು ಸೇರಕೊಂಡದರಾಡಳತೆ ಹಕ್ಕ ಬರವುವದು
ಇದನ್ನೆಲ್ಲಾ ಮೆಂಬರರು ನೆನಪಿಸುವುವದು
ಸದಾಕಾಲ ಲಕ್ಷಗೊಟ್ಟ ನಡೆಯುವದು
ಮೊದಲೇ ಹೇಳುವೆವು ಸಹಕಾರಕಿಂತ
ನಿಮ್ಮ ಹೊಣೆಗಾರಿಕೆ ಹೆಚ್ಚಿನದು ||

||ಚಾಲ||

ಸಾಲ ಒಯ್ಯುವವರು ನೆನಪಿಡಿರಿ
ಮೂಲ ಮಾತ ಮರಿಯ ಬೇಡಿರಿ ||
ಏತಕಾಗಿ ಸಾಲ ಒಯ್ಯುವಿರಿ
ಅದೇ ಕೆಲಸಕ್ಕದನ ಬಳಿಸಿರಿ ||
ಚಾಲ್ತಿ ಶೇತ್ಕಿ ಖರ್ಚಿಗೆ ಸಾಲ ತಗಿರಿ
ಸಾಲ ಮುದ್ದತ ಒಂದು ವರುಷರಿ ||

||ಚಾಲ||

ದನಗಳ ಕೊಳ್ಳಲಿಕ್ಕೆ ಮನೀ ಖರ್ಚಿಗೆ ಸಾಲ ತಂದ್ರ
ಮೂರು ವರ್ಷ ಮುದ್ದತು
ಹಳೇ ಸಾಲ ತೀರಿಸುದಕ ಐದು ವರುಷಂತು
ಹುಲಕುಂದ ಭೀಮಕವಿ ಹೇಳಿದ ನಿಂತು
ಬರೋಬರಿ ಸರಿಯಾಗಿ ನಡದರೆ ಸರ್ವರಿಗಾಗುದು ಸವಲತ್ತು||೨||


ರಚನೆ :
 ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು