ರೈತರ ಹಿಂದಿನ ಇತಿಹಾಸ ನೋಡಿದರ ಪ್ರತಿಯೊಬ್ಬರಿಗೆ ಎಲ್ಲ ತಿಳದೀತ
ಸ್ವತ ಶಿಕ್ಷಣ ಇಲ್ಲದಕ ಹಿಂಗಾತ
ಅತಿ ಅಜ್ಞಾನ ತನದಿಂದ ಹಾಳಾತ
ಸತತ ಅಡಚಣಿ ಮಿತಿ ಮೀರಿದ ದೇಣಿ ಅತಿ ಬಡ್ಡಿಯನು ಕೊಡವುತ
ಸೋತ ಮತಿ ಹೀನನಾಗಿ ತಿರಗುದು ವ್ಯರ್ಥ ||ಪಲ್ಲ||

ಪುಷ್ಕಳ ಸಾರೆ ದುಷ್ಕಾಳ ಬಿದ್ದ ತುಸು ಕಾಳ ಇರುದಿಲ್ಲ ತಿನ್ನುದಕ
ನಿಸರ್ಗದ ಹೊಡತಕ್ಕ ಸಿಕ್ಕ ಸಿಕ್ಕ
ನಿಸ್ಕಾಳಜಿ ಉದ್ಯೋಗ ಮಾಡುದಕ
ಆಸರ ತಪ್ಪಿ ಘಾಸಿಯಾದಾಗ ಚಿಂತಿ ಬಂತ ಸರಕಾರಕ್ಕ
ಹೊಸ ಯೋಜನೆ ತಗದಾರ ಕಾಲ ಕಾಲಕ್ಕೆ ||

ಹಣದ ಸಹಾಯ ಋಣ ವಿಮೋಚನ ಬಿಲ್ಲ ಟೆನೆನ್ಸಿ
ಕಾಯ್ದೆ ತಗದಾರ ಖಡಕ
ಕ್ಷಣ ಕ್ಷಣಕ ಒಕ್ಕಲಿಗರ ರಕ್ಷಣಕ
ಜಾಣತನದ ಉಪಾಯಗಳು ಅನೇಕ
ಏನ ಮಾಡಿದರೇನು ಋಣಭಾರದ ಮುಂದ ಹಾನಿ
ಆದವು ಕಡಿ ಆ ಕರಕ
ಜ್ಞಾನವಂತರು ಕೂಡಿ ಹಾಕ್ಯಾರ ತೂಕ ||

ಪರದೇಶದೊಳಗ ಸಹಕಾರಿ ಚಳವಳಿ ಜೋರ ನಡದಿತ್ತ ಆ ವ್ಯಾಳೇಕ
ಜರ್ಮನಿ ಆಯರ್ಲಂಡ ಇಟ್ಲಿ ಡೆನ್ಮಾರ್ಕ
ಯುರೋಪ ಖಂಡದೊಳಗ ರೈಫೇಷಿಯನ್ರು ಪ್ರಚಾರಕ
ಭಾರತ ದೇಶಕ ಲಾರ್ಡ ಕರ್ಝನ್ನರವರ ಪ್ರಯತ್ನ
ಹತ್ತೊಂಬತ್ತನೂರಾ ನಾಲ್ಕಕ
ಪೂರ ಕಾಯ್ದೆ ಫಾಸ ಆದೀತ ಚೊಕ್ಕ ||

||ಚಾಲ||

ರೈತನ ಆರ್ಥಿಕ ಉನ್ನತಿಯಾಗಲೆಂತಾ
ನೈತಿಕ ಮಟ್ಟ ಸುಧಾರಿಸುವ ಬೇತಾ ||
ಕಳ ಕಳಿಯ ಗೆಳೆತನ ಬೆಳೆಯಲೆಂತಾ
ಚಳವಳಿಯ ಧೇಯ ಸಿದ್ಧಾಂತಾ

||ಏರು||

ತತ್ವ ಪ್ರತಿ ವರುಷ ಉತ್ತಮ ಪ್ರಗತಿಯಾಗಿ
ವರುಷ ತುಂಬಿದವಿಲ್ಲಿಗೆ ಐವತ್ತ
ಸಿಸ್ತ ಸುವರ್ಣ ಮಹೋತ್ಸವ ನಡದೀತ
ಸತ್ಸಂಗದ ಜನರಿಂದ ಸತ್ಪಲವಾಯ್ತ
ಸತತ ಅಡಚಣಿ ಮಿತಿ ಮೀರಿದ ದೇಣಿ ಅತೀ ಬಡ್ಡಿಯನು ಕೊಡವೂತ
ಸೋತ ಮತಿಹೀನನಾಗಿ ತಿರುಗುದು ವ್ಯರ್ಥ||೧||

ಪರರಾಷ್ಟ್ರದಲ್ಲಿ ಸಹಕಾರ ಚಳವಳಿ ಜನರಲ್ಲಿಯೇ ಹುಟ್ಟಿ ಬೆಳೆಯುದ
ಸರಕಾರದಿಂದ ಮನ್ನಣೆ ಹೊಂದುವದು
ಸಂರಕ್ಷಣೆಯನ್ನು ಪಡೆಯುವದು
ಭರತ ಖಂಡದಲ್ಲಿ ವಿಪರೀತ ಸಂಗತಿ ಸರಕಾರದವರೇ ಸುರು ಮಾಡುದ |
ಸರಿಯಾಗಿ ನಡಸಿಕೊಂಡ ಹೋಗುವದ ||

ಕಲಿತ ಜನರು ಒಳೆ ಚಳವಳಿ ಮಾಡಿದಲ್ಲೆ
ಬೆಳೆದವು ಈಗ ನಾನಾತರ ಸಂಘ
ಹಾಲು ಹೈನ ಸಂಘ ಗೊಬ್ಬರ ಸಂಘ
ಕೂಲಿಕಾರ ನೇಕಾರ ಬೇಸಾಯದ ಸಂಘ
ತಾಲೂಕ ಡೆವ್ಹಲ್‌ಪಮೆಂಟ ಅಸೋಸಿಯನ್ನಗಳು
ಶೇತ್ಕಿ ಸಂಘ ಗ್ರಾಮೋದ್ಯೋಗ ಸಂಘ
ಸೇಲ ಸೊಸಾಯಿಟಿ ಅಂದರ ಮಾಲು ಮಾರುವ ಸಂಘ ||

ಹೇಳಿಕೊಂತ ಹೋದರ ಬಹಳ ಅದಾವ ಖರೆ
ವೇಳೆಗಳೆಯುದಲ್ಲರಿ ಹಿಂಗ
ತಾಳಿ ಬಾಳ ಬೇಕ ಎಲ್ಲಾ ಸಂಘ
ಕಾಳಜಿ ಇರಬೇಕ ಅದರಲ್ಲಿ ದುಡಿಯಂವಗ
ಉಳಿದವರೆಲ್ಲಾ ಅಳಲಿ ಭಕ್ತಿ ಅಂತ ಚಳವಳಿಯಲಿ ವಹಿಸಲಿ ಭಾಗ
ಕಳಿಗುಂದದೆ ಬೆಳೆಯುವದು ಇಳೆಯೊಳಗೆ ||

||ಚಾಲ||

ಆರ್ಥಿಕ ಶೈಕ್ಷಣಿಕ ಲಾಭವ ಪಡಿಯಿರಿ
ನೈತಿಕ ರಾಜಕೀಯ ಉನ್ನತಿ ಹೊಂದಿರಿ ||
ಉತ್ಸಾಹ ದಿಟ್ಟತನ ಹಿಡಿಯಿರಿ
ಮಿತವ್ಯಯದಿಂದ ನೀವು ನಡಿರಿ

||ಏರು||

ಮಾತಾ ಪಿತ್ರರಂತೆ ಆತುಕೊಂಡಿದ್ದರ ಮಾನವ
ಪ್ರಾಣಿಗೆ ಆಗುದು ಹಿತ
ಪ್ರೀತಿಗಳಿಸಿ ಕೊಳ್ಳುವವನ ಬುದ್ಧಿವಂತ
ನಾಥ ಹುಲಕುಂದ ಭೀಮ ಹೇಳಿದ ಕವಿತ
ಸತತ ಅಡಚಣಿ ಮಿತಿ ಮೀರಿದ ದೇಣಿ
ಅತೀ ಬಡ್ಡಿಯನು ಕೊಡವೂತ
ಸೋತ ಮತಿಹೀನನಾಗಿ ತಿರಗುದು ವ್ಯರ್ಥ||೨||

ರಚನೆ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು