(ಧಾಟಿ – ಮೈಸೂರ ಲಾವಣಿಯಂತೆ)
ಭೂಮಿಯ ಕೆಲಸನೇಮದಿ ಮಾಡುವ
ರಾಮನಂಥ ನನ್ನ ಒಕ್ಕಲಿಗಾ
ಧರ್ಮನಂಗದಯಾ ಗುಣದ ಒಕ್ಕಲಿಗಾ
ಭೀಮನಂಥ ಸಾಮರ್ಥದಂವ ಒಕ್ಕಲಿಗಾ ||

ಕರ್ಮಯೋಗಿ ನಿನ್ನ ವರ್ಣಿಸಲಾರೆನು
ಸರಿಯಾಗಿ ಕಾಪಾಡೋ ಒಕ್ಕಲಿಗಾ||೧||

ಕೋಟಿ ಉದ್ಯೋಗದೊಳೆ ಮೇಟಿ ಉದ್ಯೋಗಮೇಲ
ರಾಷ್ಟ್ರ ರಾಷ್ಟ್ರಕ್ಕೆಲ್ಲಾ ಒಕ್ಕಲಿಗಾ
ರಾಟಿ ಮೂಲಾಧಾರವೆಂದ ಒಕ್ಕಲಿಗಾ ||
ಶ್ರೇಷ್ಟ ಪದವಿಯ ಪಡೆದಂವ ಒಕ್ಕಲಿಗಾ ||
ಧಿಟ್ಟ ಶ್ರೀಮಂತಾ ಬಡವ ಕೂಲಿಕಾರ
ಹೊಟ್ಟೆಗೆ ಕೊಟ್ರಾಂವ ಒಕ್ಕಲಿಗಾ||೨||

ಎತ್ತಿನ ಕೂಡ ತೊತ್ತಾಗಿ ದುಡಿಯುತ
ನಿತ್ಯ ಹೊಲದೋಳು ಒಕ್ಕಲಿಗಾ
ಬಿತ್ತಲಿಕ್ಕೆ ಭೂಮಿಹದಮಾಡು ಒಕ್ಕಲಿಗಾ
ವ್ಯರ್ಥ ಹೊತ್ತ ಗಳಿಯದಂವ ಒಕ್ಕಲಿಗಾ
ಆತ್ಮರಾಮನ ಸ್ಮರಿಸಂದ ಸೃಷ್ಟಿ ಕರ್ತನು ಒಕ್ಕಲಿಗಾ||೩||

ಮೇಘ ರಾಜಗಾಗಿ ಹಗಲಿ ರಾತ್ರಿಯೋಳು
ನಿದ್ರಿ ಮಾಡದಂವ ಒಕ್ಕಲಿಗಾ
ಜಗದೊಳಗಯೋಗ ಸಿದ್ಧಿ ಒಕ್ಕಲಿಗಾ
ಯುಗ ಯುಗಾಂತರದ ನಮ್ಮ ಒಕ್ಕಲಿಗಾ
ಆಗ ಈಗಲ್ಲ ಸೃಷ್ಟಿ ಹುಟ್ಟಿದಾಗ ಬಂದವನು ಒಕ್ಕಲಿಗಾ||೪||

ತಿನ್ನುವ ಹಂಣ ಧನ ಧಾನ್ಯಗಳನು
ಪೂರ್ಣ ಒದಗಿಸುವ ಒಕ್ಕಲಿಗಾ
ದನಕರುಗಳ ಜೋಕೆ ಮಾಡು ಒಕ್ಕಲಿಗಾ
ತನುಮನಗಳನ ಅರ್ಪಿಸಾಂವ ಒಕ್ಕಲಿಗಾ ||
ಹೈನ ತನಗಲ್ಲದೆ ಅನ್ಯರಿಗೂ ಸಹಿತ
ಉಣಿಸಾಂವ ದೀನ ದಯಾ ಒಕ್ಕಲಿಗಾ||೫||

ಸರ್ವರ ಸಲುವಾಗಿ ಅರವಿ ಆಂಚಡಿಗಾಗಿ
ಹತ್ತಿ ಬಿತ್ತಿ ಬೆಳೆಯಾವ ಒಕ್ಕಲಿಗಾ
ಸಿರಿವಂತರನ್ನು ಮಾಡಂವಾ ಒಕ್ಕಲಿಗಾ
ಭಾರಿ ಗುಣದಲ್ಲಿ ಧೀರ ಒಕ್ಕಲಿಗಾ ||
ತರ ತರ ಐಶ್ವರ್ಯದಿಂದ ಮೆರೆಲಿಕ್ಕೆ ಹಚ್ಚಿದ
ಗ್ರಾಮದ ಒಡೆಯಾ ಒಕ್ಕಲಿಗಾ||೬||

ನಿನ್ನ ಉಪಕಾರದಿಂದ ಧನ್ಯರಾಗುವೆವು
ಮುನ್ನ ಮರಿಯಲಾರೆ ಒಕ್ಕಲಿಗಾ
ದಾನಧರ್ಮ ಮಾಡುವಂಥ ಒಕ್ಕಲಿಗಾ
ತನು ಆನಂದಗೊಳಿಸುವ ಒಕ್ಕಲಿಗಾ ||

ಕ್ಷೋಣಿಯೋಳು ಹುಲಕುಂದ ಭೀಮಕವಿ
ಪದಮಾಡಿ ಹೇಳಿದ ಒಕ್ಕಲಿಗಾ

ರಚನೆ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು