ಸಣ್ಣವನಲ್ಲ ನೀ ಪುಣ್ಯವಂತನು
ಕಣ್ಣತೆರೆದು ನೋಡ ಒಕ್ಕಲಿಗಾ
ಮಣ್ಣಿನ ಸೇವಕ ಬಣ್ಣಿಸಲಾರೆನು
ಚೆನ್ನಾಗಿ ಕಾಪಾಡು ಒಕ್ಕಲಿಗಾ       || ಪಲ್ಲ ||

ಹಣ್ಣುಹಂಪಲಾ ಧಾನ್ಯದವಸಗಳು
ನಿನ್ನಿಂದ ಜಗಕೆಲ್ಲಾ ಒಕ್ಕಲಿಗಾ
ಹುಣ್ಣಿವಿ ಅಮವಾಸಿ ಸಣ್ಣ ದೊಡ್ಡ ಕಾರ‍್ಯಗಳಿಗೆ
ಅನ್ನದಾತ ನೀನೆ ಒಕ್ಕಲಿಗಾ
ಎಣ್ಣಿ ಹೋಳಿಗಿ ದೊಣ್ಣಿ ದೊಣ್ಣಿ ತುಪ್ಪ
ಉಣ್ಣುದು ನಿನ್ನಿಂದ ಒಕ್ಕಲಿಗಾ
ಸಣ್ಣನ್ನ ಶಾಂವಿಗಿ ಚಿನ್ನಿ ಸಕ್ಕರಿ
ಗಿಣ್ಣದೂಟ ಕೊಡುವ ಒಕ್ಕಲಿಗಾ
ಸಣ್ಣಕ್ಕಿ ಸವಿ ಅನ್ನ ಬೆಣ್ಣಿಕೆನಿಮಸರ
ತಿನ್ನುವುದು ದಯ ನಿಂದು ಒಕ್ಕಲಿಗಾ
ತಣ್ಣನ್ನ ಮಜ್ಜಿಗಿ ನುಣ್ಣಗ ಉಂಡು
ದನಗಳ ಕಾಪಾಡು ಒಕ್ಕಲಿಗ

||ಚಾಲ||

ಧನ್ಯವಂತ ದಯಾಸಾಗರ
ನಿನ್ನ ಉಪಕಾರ
ಮರೆಯುವದ್ಹೆಂಗ ರೈತಾ
ನಿನ್ನಿಂದ ವಿಶ್ವ ಸಂಪತ್ತಾ
ಅನ್ನ ಧಾನ್ಯ ಒದಗಿಸುವ ಭಾರ
ಪೂರ್ಣ ಹೊತ್ತ ಧೀರ
ಕಷ್ಟ ಸಹಿಸುತಾ
ಮುನ್ನ ಮಾನಕಾಯುವ ಶಮರಂತಾ

||ಏರ||

ಉನ್ನತ ಕೃಷಿ ಕರ್ಮವನ್ನು ಮಾಡುವ
ಕನ್ನಡ ನಾಡಿನ ಒಕ್ಕಲಿಗ
ಮಣ್ಣಿನ ಸೇವಕ ಬಣ್ಣಿಸಲಾರೆನು
ಚನ್ನಾಗಿ ಕಾಪಾಡು ಒಕ್ಕಲಿಗ||೧||

ನಿನ್ನ ದೇಶದೊಳು ಏನೇನ ನಡದದ
ಮುನ್ನ ತಿಳಿಯಬೇಕ ಒಕ್ಕಲಿಗ
ಅನ್ಯ ದೇಶದ ಅನುಭವ ತಕ್ಕೊಂಡ
ಅನುಕರಣ ಮಾಡಬೇಕ ಒಕ್ಕಲಿಗ
ಪೂರ್ಣ ಓದಿಕೊಂಡ ಜ್ಞಾನಿಯಾಗುವದಕ್ಕ
ಶಿಕ್ಷಣ ಪಡಿಬೇಕ ಒಕ್ಕಲಿಗ
ನಿನಗ ತಿಳಿಯದಕ ಹಾನಿಯಾಗತದ
ಜಾಣತನ ಕಲಿ ಒಕ್ಕಲಿಗ
ನಿನ್ನ ಅನ್ನಾ ಉಂಡ ನಿನಗ ಮೋಸ ಮಾಡುವ
ಜನರು ಹೆಚ್ಚಾಗ್ಯಾರ ಒಕ್ಕಲಿಗ
ಮನಿಮುಟ್ಟ ಬಂದ ಮನಸ ಒಲಿಸುವಾಗ
ಬಹಳ ಎಚ್ಚರಿರಬೇಕ ಒಕ್ಕಲಿಗ

||ಚಾಲ||

ಅನ್ಯಾಯ ತಿಳಿದುಕೊಳ್ಳುವ ಬುದ್ಧಿ
ಕಲಿತರಾತ ಸಿದ್ಧಿ
ಸರಳ ಸಂಸಾರಾ
ಈ ಯುಗದೊಳಗಾಗತಿಯೊ ಪಾರಾ
ತನು ಮನ ಗುಣದಲಿ ಶುದ್ಧ
ಇದ್ರ ಪ್ರಸಿದ್ಧ
ನೀನೆ ಸರಕಾರಾ
ನಿನ್ನ ಕೈಯೊಳಗೆಲ್ಲಾ ಅಧಿಕಾರಾ ||

||ಏರ||

ಮಾನ್ಯವಂತ ಜನಸೇವಕ ಹುಲಕುಂದ
ಭೀಮೇಶ ಹೇಳಿದ ಒಕ್ಕಲಿಗ
ಮಣ್ಣಿನ ಸೇವಕ ಬಣ್ಣಿಸಲಾರೆನು
ಚೆನ್ನಾಗಿ ಕಾಪಾಡು ಒಕ್ಕಲಿಗ

 

ರಚನೆ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು