ಗ್ರಾಮ ದಾನವ ಮಾಡಿರೈಯ್ಯಾ ಜನರೇ |
ಗ್ರಾಮ ಶಾಂತಿಗೆ ಜನರೇ ವಿಶ್ವಶಾಂತಿಗೆ || ಪಲ್ಲ||
ಗ್ರಾಮ ದಾನದಿಂದ ಮುಂದೆ ನೇಮ ವಿಶ್ವಶಾಂತಿಯಾಗಿ |
ಕಾಮಿತಾರ್ಥ |
ದೊರಿಯುದ್ರೈಯ್ಯಾ ಗ್ರಾಮ ಶಾಂತಿಗೆ |
ಜನರೇ ವಿಶ್ವಶಾಂತಿಗೆ||೧||
ಭೂಮಿತಾಯಿ ಮಕ್ಕಳು ಎಲ್ಲಾ |
ಭೂಮಿಗೊಡಿಯರ್ಯಾರ್ಯಾರಿಲ್ಲಾ |
ಸ್ವಾಮಿಮಾತ್ರ ಒಬ್ಬನೆ ಒಡಿಯಾ |
ವಿಶ್ವಶಾಂತಿಗೆ ಜನರೇ ಗ್ರಾಮಶಾಂತಿಗೆ||೨||
ಭೂಮಿತಾಯಿ ಮಾರುವದಲ್ಲಾ |
ಭೂಮಿತಾಯಿ ಕೊಳ್ಳುವದಲ್ಲಾ |
ಗ್ರಾಮದವರು ಒಪ್ಪಿರಿ ಮೊದಲಾ |
ಗ್ರಾಮ ಶಾಂತಿಗೆ ಜನರೇ ವಿಶ್ವಶಾಂತಿಗೆ||೩||
ಇಪ್ಪತ್ತರಲ್ಲಿ ಒಂದ ಪಾಲಾ |
ತಪ್ಪದೆ ಕೊಡಿರಿ ಬಡವರಿಗೆಲ್ಲಾ |
ಸುಲಭ ಗ್ರಾಮದಾನವಯ್ಯಾ |
ಗ್ರಾಮಶಾಂತಿಗೆ ಜನರೇ ವಿಶ್ವಶಾಂತಿಗೆ||೪||
ಗ್ರಾಮ ಸ್ವರಾಜ್ಯ ಮಾಡಿಕೊಳ್ಳಿರಿ |
ನಿಮ್ಮ ಸೌಖ್ಯ ನೀವೆ ಪಡಿರಿ
ಭೀಮ ಕವಿಯ ಪದಗಳ ಕೇಳ್ರಿ |
ಗ್ರಾಮ ಶಾಂತಿಗೆ ಜನರೇ ವಿಶ್ವಶಾಂತಿಗೆ||೫||
ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು
Leave A Comment