ಕಮುನಿಷ್ಟ ಚೀನ ತತ್ವ ಗ್ರಾಮ ಗ್ರಾಮದೊಳಗ ಹೊಕ್ರ
ಶ್ರೀಮಂತಿಕಿದಾಗತದ ಸಂಹಾರಾ |
ಪ್ರೇಮದಿಂದ ಸುಲಭವಾದ ಗ್ರಾಮದಾನ ಮಾಡಿಕೊಳ್ರಿ
ನೇಮ ಹೇಳತಾರ ವಿನೋಬಾಜಿಯವರಾ ||ಪ||

ನಿಮ್ಮ ಭೂಮಿಯೊಳಗಿನ ಇಪ್ಪತ್ತರಲ್ಲಿ ಒಂದ ಪಾಲ
ನಿಮಗ ಬೇಕಾದ ಭೂಹೀನಗಕೊಡ್ರಿ ಮೊದಲಾ |
ಭೂಮಿಯನ್ನು ಮಾರುವುದಲ್ಲ ಒತ್ತಿ ಸಹೀತ ಹಾಕುವದಲ್ಲ
ಮತ್ತೊಬ್ಬರದು ಕೊಂಡುಕೊಳ್ಳುವದಲ್ಲಾ ||

ಉಳಿದ ಜಮೀನ ನಿಮ್ ವಂಶ ಪರಂಪರ ಉಪಭೋಗ
ಮಾಡುವುದಕ್ಕೆ ಅಡ್ಡಿ ಇಲ್ಲಾ |
ತಿಳದ ನೋಡ್ರಿ ಅದನ ಕಳೀಲಿಕ್ಕೆ ಬರುವದಿಲ್ಲ ಗ್ರಾಮ ಹೆಸರ‍್ಲೆ
ಮಾಡ್ರಿ ದಾಖಲಾ ||

ಪ್ರತಿಯೊಂದ ಮನಿಗೆ ಒಬ್ಬ ಸದಸ್ಯರಿದ್ದರ ಗ್ರಾಮ ಸಭೆಯು
ಆಗುದು ಸಫಲಾ |
ಜೊತೆಗೂಡಿ ಮಾತಾಡಿ ಪ್ರೀತಿಲೆ ತೀರ್ಮಾನ ಮಾಡ್ರಿ
ಹಿತ ಆಗುದನ್ನ ಸರ್ವರಿಗೆಲ್ಲಾ ||

||ಚಾಲ||

ಗ್ರಾಮಸಭೆಯ ಮುಂದಿನ ಕೆಲಸಕ್ಕ |
ಪ್ರಗತಿಗೊಯ್ಯುದಕ |
ನಿಧಿಯು ಅನುಕೂಲಾ
ಪ್ರತಿಯೊಬ್ಬರದಿರಬೇಕು ಪಾಲಾ
ನೌಕರದಾರ ಕೂಲಿಯ ಮನುಷ್ಯ
ತಿಂಗಳಿಗೊಂದ ದಿವಸ
ದುಡಿಮೆಯ ಫಲಾ |
ಗ್ರಾಮಸಭೆಗೆ ಕೊಡಬೇಕ ಖುಷಿಯಾಲಾ ||
ಉತ್ಪನ್ನದ ಒಂದ ನಾಲ್ವತ್ತಂಸ |
ಕೊಡಬೇಕ ಬಿಟ್ಟ ಸಂಶಯ |
ಮನಸಮಾಡಿ ಖುಲ್ಲಾ |
ಸ್ವಲ್ಪ ತ್ಯಾಗ ಮಾಡುದ ನಿರ್ವಾ ಇಲ್ಲಾ ||

||ಏರು||

ಗ್ರಾಮದ ನಿಧಿಯಿಂದ ಗ್ರಾಮೋದ್ಯೋಗ ಬೆಳಿಸಿ
ಗ್ರಾಮದೇಳ್ಗೆಯನ್ನು ಮಾಡಿಕೊಳ್ರಿ ಪೂರಾ||೧||

ಕ್ರಾಂತಿಕಾರ ಪ್ರಾಮಾಣಿಕ ಶಾಂತಿ ಸೈನಿಕರಾಗ್ರಿ ಸಂತರ‍್ಹೇಳ್ಯಾರ
ಮತ್ತೊಂದ ಮಾತಾ |
ಎಂಥ ಬೇಕಾದಂಥ ನ್ಯಾಯ ಸ್ವಂತ ಬಗೆ ಹರಿಸಿಕೊಳ್ರಿ
ಶಾಂತಿದಲದಿಂದ ಮಾಡಿ ಬಂದೊ ಬಸ್ತಾ ||

ಕೋರ್ಟ ಕಚೇರಿ ಪೋಲೀಸ ಫೌಜದಾರ ಮೋಟರ ಕಾಟ
ಏಟು ಇಲ್ಲದ ಊರಿಗೊಳೆ ಸಿಸ್ತಾ |
ಪ್ಯಾಟಿ ಸಾವಕಾರ ಮಂದಿ ಆಟ ನಡಿಯುದಿಲ್ಲ ಶೋಷಣೆ
ರಹಿತ ಸಮಾಜದ ವೆವಸ್ತಾ ||

ಉದ್ಯೋಗ ವಿಕೇಂದ್ರಿಕರಣ ಆದಾಯ ಊರಿಗೆ ಪೂರ್ಣ
ವಿಧಾಯಕ ಕಾರ್ಯದಿಂದ ಸಂಪತ್ತಾ |
ಸದಾ ಹಳ್ಳಿಯ ಶಾಂತಿ ಉದಯ ಸಮಾಜ ಕ್ರಾಂತಿ
ಹೃದಯ ಪರಿವರ್ತನದಿಂದ ಖಚಿತಾ ||

||ಚಾಲ||

ನಿರುದ್ಯೋಗ ಯಾರ‍್ಯಾರು ಇರಬಾರ‍್ದ |
ಉಪವಾಸ ಬೀಳಬಾರ‍್ದ |
ಬೇಡಬಾರ‍್ದ ಭಿಕ್ಷಾ
ಗ್ರಾಮ ಸಭೆಯವರದಿರಬೇಕ ಲಕ್ಷಾ ||

ಸಾಮೂಹಿಕ ಶಕ್ತಿ
ಸಮಗ್ರ ಸಮಾಜವಾದ ಕ್ರಾಂತಿ
ವಿಕಾಸ ಹೊಂದುವದಕ್ಕ
ಜನಶಕ್ತಿಯೆ ಇರುವದು ಮುಖ್ಯ ||

ಇಷ್ಟಾದ್ರ ಗ್ರಾಮಗಳದಿಲ್ಲ ಚಿಂತಿ
ರಾಷ್ಟ್ರಕಿಲ್ಲ ಭ್ರಾಂತಿ
ಪ್ರಪಂಚಕ ಸುಖ
ಪ್ರೇಮ ರಾಜ್ಯದ್ದು ತೋರುದು ಬೆಳಕ ||

||ಏರು||

ಭೂಮಿಯೊಳು ಹುಲಕುಂದ ಭೀಮಕವಿ ಹೇಳಿದ
ಗ್ರಾಮ ಸ್ವರಾಜ್ಯದ ಮಜುಕೂರ||೨||

ರಚನೆ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು