ನಯಾ ಮೋಡದ ಪಾಯಾ ಹೇಳುವೆನು |
ದಯವಿಟ್ಟು ಕೇಳಿರಿ ಸರ‍್ವಜನರಾ |
ಬಾಯಿಲೆ ಅನ್ನುವದನ್ನ ಕೈಯಲ್ಲಿ ಮಾಡುವದಕ್ಕ |
ನಯಾ ಮೋಡ ಅಂತ ಇಟ್ಟಾರ ಹೆಸರಾ           ||ಪ||

ಐದು ಸಾವಿರ ಜನಸಂಖ್ಯೆ ಇರುವ ಕ್ಷೇತ್ರ ಆರಿಸಿ |
ಗ್ರಾಮ ಇಕಾಯಿ ಅಂದಾರ ಅದಕ |
ಅದೇ ಸ್ಥಾನದಲ್ಲಿ ಖಾದಿ ಉತ್ಪತ್ತಿ |
ಗ್ರಾಮೋದ್ಯೋಗ ಬೆಳೆಸುವದಕ್ಕ ||

ಸಹಕಾರಿ ಸಂಘಗಳು ಪಂಚಾಯಿತಿ ಬೇರೆ ಬೇರೆ |
ಸಂಸ್ಥಾ ಇದ್ರು ಅಡ್ಡಿ ಇಲ್ಲ ನಡಿಸುದಕ |
ಮಹತ್ತದ ಮಾತು ಇದು ಸರ್ವರೆಲ್ಲಾ ಕೂಡಿ |
ಒಂದೆ ಕುಟುಂಬದವರಂತೆ ನಡೀಬೇಕ |
ಎಲ್ಲರಿಗೆ ಬೇಕಾಗುವ ಎಲ್ಲ ಸಾಮಾನುಗಳು |
ಅಲ್ಲೆ ತಯಾರಿಸುವದು ಬಹುತೇಕ |
ಎಲ್ಲರಿಗೆ ಉದ್ಯೋಗ ಎಲ್ಲರಿಗೆ ಸಂಪತ್ತು |
ಸಮೃದ್ಧ ಜೀವನ ನಡಿಸುದಕ |

||ಚಾಲ||

ತಮಗೆ ಬೇಕಾದದ್ದನ್ನೆಲ್ಲ ಹುಟ್ಟಿಸಬೇಕ |
ಹೆಚ್ಚಾದ್ರ ಹೊರಗ ಕಳಿಸಬೇಕ ||
ಇಲ್ಲದ್ದು ಹೊರಗಿಂದ ತರಬೇಕ |
ಇದು ಗ್ರಾಮ ಇಕಾಯಿ ತೂಕ ||

||ಏರು||

ಪ್ರಯೋಗ ಮಾಡಿ ನೋಡ್ರಿ ಫಾಯ್ದೆಯಾಗುವದು |
ಖಾದಿ ಆಯೋಗದವರು ಸಹಾಯ ನೀಡುವರಾ ||
ಬಾಯಿಲೆ ಅನ್ನುವದನ್ನ ಕೈಯಲ್ಲಿ ಮಾಡುವದಕ್ಕ |
ನಯಾ ಮೋಡ ಅಂತ ಇಟ್ಟಾರ ಹೆಸರಾ||೧||

ಮೊದಲನೇ ವರ್ಷ ಪ್ರತಿಯೊಬ್ಬರು ಒಂದವಾರ |
ಖಾದಿಬಟ್ಟೆ ಉಪಯೋಗ ಮಾಡುವ ಸಂಕಲ್ಪ ಬೇಕ |
ಇದೇ ಪ್ರಕಾರ ಗ್ರಾಮೋದ್ಯೋಗ ಸಾಮಾನ |
ಉಳಿಸಬೇಕ ದೇಶದ ರೊಕ್ಕ |
ಐದು ವರ್ಷ ಅವಧಿಯಲ್ಲಿ ಹನ್ನೆರಡುವಾರ ಖಾದಿಬಟ್ಟೆ |
ಉಪಯೋಗಿಸಬೇಕ ತಮ್ಮ ಸ್ವಂತಕ್ಕ |
ಸ್ವತಃ ನೂತ ನೂಲ ಕೊಟ್ರ ನೇಗಿ ಕೂಲಿಯನ್ನೆ |
ಸಂಘದವರು ಕೊಡತಾರ ಸ್ವಾವಲಂಬನಕ ||

ನಮ್ಮವರಿಗೆ ಉದ್ಯೋಗ ದೊರೆತು ನಮ್ಮ ರೊಕ್ಕ |
ನಮ್ಮಲ್ಲುಳಿದು ನಮ್ಮ ಹಳ್ಳಿ ಉದ್ಧಾರಾತ ಕಡಿತನಕ |
ನಮ್ಮ ಹಳ್ಳಿಗಳಿಂದ ನಮ್ಮ ದೇಶದುದ್ಧಾರಂತ |
ನಮ್ಮ ಗಾಂಧಿ ಹೇಳಿದರು ಸಾಯುವತನಕ ||

||ಚಾಲ||

ತತ್ವ ತಿಳಕೊಳ್ರಿ ತಲಿಯೊಳಗ ಸರಿಯಾಗಿ |
ಮತ್ತು ತಿಳಿಯದಿದ್ರ ಕೇಳ್ರಿ ಮುಖಂಡರಿಗೆ ||
ಚಿಂತಿ ಮಾಡತಾರ ಹಿರಿಯರು ನಿಮಗಾಗಿ |
ಕ್ರಾಂತಿ ನಡಿಶಾರ ಪ್ರಾಂತ ಪ್ರಾಂತಗಳಿಗಾಗಿ ||

||ಏರು||

ನಯಾ ಮೋಡ ಆಗದಿದ್ರ ನಾವೇ ಮೋಡ |
ಆಗತೀವಂತ ಹುಲಕುಂದ ಭೀಮೇಶ ಹೇಳಿದ ಸಾರಾ |
ಬಾಯಿಲೆ ಅನ್ನುವದನ್ನ ಕೈಯಲ್ಲಿ ಮಾಡುವದಕ್ಕ |
ನಯಾ ಮೋಡ ಅಂತ ಇಟ್ಟಾರ ಹೆಸರಾ||೨||

ರಚನೆ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು