ಗ್ರಾಮ ಸುಧಾರಣೆ ಗ್ರಾಮ ರಾಜವಾಗುದಕ್ಕ
ಗ್ರಾಮ ಪಂಚಾಯತಿಗಳು ಮುಖ್ಯ ಕಾರಣಾ ||
ಪ್ರಾಮಾಣಿಕತನ ಪ್ರೇಮ ಸಹಕಾರ ಜೀವನ |
ನೇಮ ಪಾಲಿಸ ಬೇಕ ಸರ್ವ ಜನಾ ||ಪಲ್ಲ||

ಹಿಂದುಸ್ತಾನದೊಳಗ ಹಿಂದಿನ ಕಾಲದಿಂದ |
ಬಂದಾವ ಪಂಚಾಯತಿ ಇಂದಿನ ತನಾ ||
ಬುದ್ಧ ಬಸವಂಣನವರು ಇದ್ದ ಕಾಲದಿಂದ |
ಮುಂದವರಿಯುತ ಬಂತ ಸುಧಾರಣಾ ||

ಇಂಗ್ಲೀಷರು ಬಂದ ಮೇಲೆ ಜಂಗ ಹತ್ತಿದಂಗ ಆಗಿ |
ಹಂಗು ಹಿಂಗು ಬಂದವು ಇಲ್ಲ ಉತ್ತೇಜನಾ ||
ಕಾಂಗ್ರೆಸ ಸರಕಾರ ಬಂದ ಸಂಘ ಸಂಸ್ಥೆಗಳಿಗೆ |
ಯೋಗ್ಯವಾಗಿರುವದು ಸನ್ಮಾನಾ ||

ಹೆಚ್ಚ ಅಧಿಕಾರ ಕೊಟ್ಟ ಉಚ್ಛ ಸ್ಥಿತಿಗೆ |
ವಯ್ಯಲಿಕ್ಕೆ ಸತತ ನಡದಿರುವದು ಪ್ರಯತ್ನಾ ||
ಸ್ವಚ್ಛ ಸ್ವಭಾವದ ಪಂಚರಿದ್ದಲ್ಲೆ ಸುಖವಾಗಿ |
ಇರತದ ಊರ ಜನಾ ||

||ಚಾಲ||

ನೀರಿನನುಕೂಲ ಆರೋಗ್ಯ ಒಕ್ಕಲುತನ |
ಊರ ಸ್ವಚ್ಛತೆ ಮಕ್ಕಳ ಶಿಕ್ಷಣಾ ||
ಕೋರ್ಟ ಕಚೇರಿಗ್ಹೋಗದಂತೆ ಜನಾ |
ನಿಷ್ಪಕ್ಷಪಾತ ಬೇಕ ನ್ಯಾಯದಾನಾ ||

||ಏರು||

ಸಾಮಾನ್ಯ ಮಾತಲ್ಲ ಗ್ರಾಮ ಪಂಚಾಯತಿಗಳಿಗೆ |
ಹೆಚ್ಚ ಕೊಟ್ಟಾರ ಅಧಿಕಾರ ಸ್ಥಾನಾ||೧||

ಒಂದೊಂದ ಪಂಚಾಯತಿಗಳು ಮುಂದುವರಿದು ಕೆಲಸಾ ಮಾಡಿ
ಅಂದವಾಗಿ ಅಧಿಕಾರ ನಡಿಶಾವನಿವಳಾ
ಬಂಧೂರ ಆಡಳಿತ ಊರ ಮಂದಿಗೆ ಸಮಾಧಾನ
ಹಿಂದುಸ್ತಾನಕ ತರುವವು ಕಳಾ

ಕೆಲವು ಪಂಚಾಯಿತಿ ಕಲಹದ ತವರೂರಾಗಿ
ಹೊಲಸುತನ ತುಂಬ್ಯಾವ ಬಹಳಾ
ತಮಗೂ ತಿಳಿಯೋಣಿಲ್ಲ ಹೇಳಿದ್ರ ಕೇಳೋಣಿಲ್ಲ
ಸುಮ್ಮ ಸುಮ್ಮನೆ ಮಾಡತಾವ ಜಗಳಾ

ಪಾರ್ಟಿ ಪಂಗಡ ಕಟ್ಟಿ ಊರ ಮೂರಾ ಬಟ್ಟಿ
ಉತ್ತಮ ಜನರಿಗೆ ಬರತದ ಗೋಳಾ
ಸತ್ಯದ ಕೊಲೆಯಾಗಿ ಅಸತ್ಯಕ್ಕೆ ಜಯವಾಗಿ
ನಿತ್ಯದ ಜೀವನವೆಲ್ಲಾ ಹಾಳಾ

||ಚಾಲ||

ಅಧಿಕಾರ ಆಸೇಕ ಅನೇಕ ಹುಂಬರಾಗಿ
ಬಾಧಾ ಕೊಡಬಾರ್ದ ಸರ್ವ ಜನರಿಗಿ
ಗ್ರಾಮದಾನ ಮಾಡಿಕೊಳ್ರಿ ಅದಕ್ಕಾಗಿ
ಗ್ರಾಮ ಸ್ವರಾಜ್ಯ ಆದ್ರ ಸುಖ ಎಲ್ಲರಿಗಿ

||ಏರು||

ಹಮ್ಮ ದಮ್ಮ ಬಿಟ್ಟ ಶಾಂತಿ ಮಾರ್ಗ ಹಿಡಿರೆಂತ
ಹುಲಕುಂದ ಭೀಮೇಶ ಹೇಳಿದ ಕವನಾ||೨||

ರಚನೆ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು