ಪುಣ್ಯ ಭೂಮಿ ಅಂದರೆ ಹಿಂದುಸ್ಥಾನ
ಕೇಳರಿ ಸರ್ವ ಜನ ಹೇಳುವೆನು ಪೂರ್ಣ
ಇರಲಿ ನಿಮ್ಮ ಚಿತ್ತ
ಧನ್ಯ ಧಾನ್ಯ ತುಂಬಿ ತುಳುಕುವದು ಸರ್ವ ಸಂಪತ್ತು||ಪ||

ಕನ್ಯಾಕುಮಾರಿಯಿಂದ ಹಿಮಾಲಯ ತನಕ
ದಕ್ಷಿಣೋತ್ತರಕ ಉದ್ದಳತಿ ಲೆಖ್ಖ
ಎರಡು ಸಾವಿರ ಮೈಲ
ಪೂರ್ವ ಪಶ್ಚಿಮದಡ್ಡಾಲಗಲಿರುವದು ೧೮೦೦ ಮೈಲ
ರಾಷ್ಟ್ರದ ಕ್ಷೇತ್ರಫಲ
ಒಟ್ಟುಗೂಡಿ ಎಲ್ಲಾ ೧೫ ಲಕ್ಷ ಮೈಲ
ಚಚ್ಚೌಕು ಇರುವದಲ್ಲಾ
ಭರತಖಂಡದ ಉತ್ತರದಲ್ಲಿ ಪರ್ವತದ ಸಾಲ
ಅದರಲ್ಲಿ ಎತ್ತರವಾದ ಶಿಖರ
ಗೌರಿಶಂಕರ ಎಂಬ ಹೆಸರ
ಎಲ್ಲಾಕ್ಕಿಂತ ಮೇಲ
೨೯ ಸಾವಿರದ ೨೫ ಅಡಿ ಇರುವದಲ್ಲ

||ಚ್ಯಾಲ||

ಪಶ್ಚಿಮಕ ಅರಬೀ ಸಮುದ್ರ
ದಕ್ಷಿಣಕ ಹೆಸರ ಹಿಂದುಮಹಾಸಾಗರ
ಇದು ಅಲ್ಲದೆ ಪೂರ್ವಕ ಬಂಗಾಲ ಉಪಸಾಗರ
ಇವು ಪಸರಿಸುವವು ಪೂರ

ಶ್ಲೋಕ

ಕೇಳರಿ ನಮ್ಮ ರಾಷ್ಟ್ರದಲ್ಲಿ ಸಿಂಧು ಬ್ರಹ್ಮಪುತ್ರ
ಯಮುನಾ ಕೃಷ್ಣ ಗೋದಾವರಿ ಸಮುದ್ರ
ಕಾವೇರಿ ಹರಣಕಾಶಿ ತುಂಗಭದ್ರ
ವೇದಗಂಗ ದೂದಗಂಗ
ಪಂಚಗಂಗ ಘಟಪ್ರಭ ಮಲಪ್ರಭ
ಮುಂತಾದ ಶ್ರೇಷ್ಠವಾದ ಹೊಳಿ ಇಲ್ಲಿ ಹರಿಯುವವು

||ಏರು||

ಮುತ್ತು ಮಾಣಿಕ ಬಂಗಾರ ಖಣಿ
ವಜ್ರದ ಮಣಿ ಚಿಮಣಿ ಎಣ್ಣಿ ಕಬ್ಬಿಣ ಸಹಿತ||೧||
ಇಲ್ಲಿ ಧಾನ್ಯ ಬೆಳೆಯುತಾವ ನಿವಳ
ಗೋಧಿ ಹತ್ತಿ ಜೋಳ
ಕಡ್ಲಿ ಅಡಗಾಳ ಮೊದಲಮಾಡಿ ಎಲ್ಲ
ಭತ್ತ ರಾಗಿ ನವಣಿ ಉದ್ದು ಸಜ್ಜೆ ಹಿಡಿದ ಸರ್ವೆಲ್ಲ
ಔಡ್ಲ ಅಗಸಿ ಸೇಂಗಾ ಪುಂಡಿ ಎಳ್ಳ
ಕುಸಬಿ ಗುರೆಳ್ಳು ಮುಂತಾದ ಎಂಣಿಕಾಳ
ಬೆಳೆಯುದ ಅಳತಿಲ್ಲ
ಸಿಂದಿಗಿಡದಿಂದ ಹೊಸೂರಾಗ ತಯಾರಾಗತೈತಿ ಬೆಲ್ಲ
ಬೇಕಾದಷ್ಟು ಹಣ್ಣು ಹಂಪಲ ಔಷಧ ತಪ್ಪಲ
ಯಾವದು ಕಡಿಮಿಲ್ಲ ದೊರೆಯತತಿ ಎಲ್ಲ
ಶ್ರೇಷ್ಠ ಅರಣ್ಯ ಇರುವದು ನೀಲಗಿರಿಯ ಎಡ ಬಲ

||ಚ್ಯಾಲ ||

೧೨೧ ಅಂಸ ಉಷ್ಣತಾ ಇಲ್ಲಿಯ ಹವಾ
೩೪ ಅಂಸ ತಂಪ ಹವಾ
ಹಿಂದುಸ್ಥಾನದ ಜನಸಂಖ್ಯೆ ಚಿತ್ತಿಟ್ಟ ಕೇಳರಿ ನೀವ
ಕೈಮುಗದ ಹೇಳುವೆ ಸಣ್ಣಾಂವ
ಕೇಳರಿ ನಮ್ಮ ದೇಶದಲ್ಲಿ
ಹತ್ತೊಂಬತನೂರಾ ನಾಲವತ್ತೊಂದರಲ್ಲಿ
ನಾಲವತ್ತು ಕೋಟಿ ಜನಸಂಖ್ಯೆ ಇರುವದಲ್ಲ

||ಏರು||

ಪಾರಸಿ ಸೀಖ ಯಹೂದಿ ಬೌದ್ಧ ಜೈನ ಹಿಂದು ಮುಸಲ್ಮಾನ
ಮರಾಠಿ ಕ್ರಿಶ್ಚಿಯನ್ ಧರ್ಮದ ಮಂದಿ ಸಹಿತ||೨||
ಎಲ್ಲಾ ಮಂದಿ ಆಗಿ ಒಕ್ಕಟ್ಟ
ಖಾದಿ ಉಟ್ಟ ತೊಟ್ಟ ಪರದೇಶಿ ಮಾಲ ಬಿಟ್ಟ
ಕೂಡಿರಿ ಕಾಂಗ್ರೆಸ್‌ಕ
ಜೋಡ ನಮಸ್ಕಾರ ಹಾಕತೇನಿ ನಾನು ನಿಮ್ಮ ಪಾದಕ
ಪಕ್ಕಾ ಖಾದಿ ಅರಿವಿ ತೊಟ್ಟವರ
ಗಾಂಧಿ ನೆಹರು ಅಝಾದರ ಅದಾರ
ಬಾಳ ಚೊಕ್ಕ ಇಂಥಾವರ
ಹೋಗೂದಿಲ್ಲ ಪರದೇಶಿ ಮಾಲಿನ ಸನಿಕ
ಅವರ‍್ಹೇಳಿದ್ಹಂಗ ಕೇಳರಿ
ಮುಕ್ತಿ ಪಡೆಯಿರಿ ನೂಲು ತಗಿಯಿರಿ
ಆಶ್ರಮದಾಗ ಹೊಕ್ಕ
ಹುಲಕುಂದ ಭೀಮಸಿಂಗ ಕವಿ ಹೇಳ್ಯಾನ ಕೌತುಕ||೩||

ಬಿಳಿಯ ಟೊಪ್ಪಿಗೆಯವರ ತಿಳಿಹೇಳಲಿಕ್ಕೆ ಬಂದರ ದುಡಿಯಲಾರದ ತಿರಗತಾವ   ಅನ್ನುವರ
ಕಬ್ಬಿಣಬುಟ್ಟಿಯಂಥ ಟೊಪ್ಪಿಗೆ ಮಾಂವಗಳ ಬಂದರ ಬೇಕಾದ್ದ ಕರಕರದ
ಕೊಡುವುವರ ||ಪ||

ಬಂಗ್ಲೆದೊಳಗ ಸಾಬ ಬಂದಾನಂತ ಹೇಳಿದರ ಕಲ್ತವರ ಹೋಗತಾರ ಓಡೋಡಿ |
ಇಂಗ್ಲೀಷ ಮಾತಿಲೆ ಟಿಸ್‌ಪಿಸ್ ಮಾತನಾಡಿ ಉಪಕಾರ ಮಾಡತಾರ ಲಗುಮಾಡಿ
ಮಸರಬೆಣ್ಣಿ ತುಪ್ಪ ಕಾಸಿ ಮಜ್ಜಿಗಿ ಹಾಲ ಓದ ಕೊಡತಾರ ಹಿಂಡಿಂಡಿ
ಗೆಣಸಿ ಗಂಜಾಳ ತೆನಿ ತಿನಸತಾರ ಓದ ಕಬ್ಬ ಬಾಳಿಹಣ್ಣ ಮೊದಲಮಾಡಿ
ಅದನ್ನು ನೋಡಿ ಅಂಜಿ ಸಾಯಿತೀದ ಹಿಂದುಸ್ಥಾನದವರ ನಾವು ಎಂಥಾ ಖೋಡಿ
ಅಂಜಿದ್ಹಾಂಗ ಅವರು ಮೈಮೇಲೆ ಬಂದು ತಿನಲಿಕ್ಕೆ ಹತ್ತ್ಯಾರ ಬುಂದೇದ ಉಂಡಿ

||ಚ್ಯಾಲ||

ದುಡದ ಆಗತೀವ ನಾವು ಸಣ್ಣ
ಅವರ ಹೊಡೆಯುತಾರ ಹಾಲು ಬಾನ
ಅವರಿಗೆ ಒಯ್ದು ಕೊಡತಾರ ನಮ್ಮ ಜನ
ಇಲ್ಲದಿದ್ದರ ತಿಂತಾರ ಏನ ಮಣ್ಣ

||ಏರು||

ಮೊಸಳೆ ತಿನ್ನುವರೆಲ್ಲ ಬಿಸಿ ಅಡಗಿ ಉಂಡ ಕಸುವು ಆಗೇರ ಪರದೇಶದವರ||೧||
ದುಡಿಯದಲೆ ಚೈನಿಹೊಡೆಯುವ ಪರಕೀಯರ ಬಡಿವಾರ ಎಷ್ಟು ಹೇಳಲಿ ನಾನ  ಹಿಡದತಂದ ಅಡವಿಯೊಳಗ ದುಡಿಯಲಿಕ್ಕ ಹಚ್ಚಿದರೆ ಸಿಡಿಯುತದ ಬುಡಕಿನ ಶಗಣ
ನಟ್ಟ ಕಡಿಯುವದಿಲ್ಲ ನೇಗಿಲ ಹೊಡೆಯುವುದಲ್ಲ ಟಾಕ ಹಿಡದ ಮಾಡತಾರ ಹಗಣ
ಶರಾ ಬರದ ಅವರು ಪೂರಾ ಪಗಾರ ತಿಂದ ಹಿಂದಗಡೆ ತಗೋತಾರ ಪೇನಸೇನ
ಭಾರಿ ಪಗಾರದ ನೌಕರಿ ಇದ್ದರ ತಮ್ಮ ಜನರಿಗೆ ಕೊಡತರ ಅದನ
ರಾವ್‌ಸಾಹೇಬ್ ಸರ್ ರಾವ್‌ಬಹದ್ದೂರಂತ ನಮ್ಮವರಿಗೆ ಕೊಡತಾರ ಪದವಿಯನ

||ಚ್ಯಾಲ||

ವಾಯಿಸರಾಯರದ ಕೇಳರಿ ಪಗಾರ
ತಿಂಗಳಿಗಿಪ್ಪತ್ತೊಂದು ಸಾವಿರ
ಗವ್ಹರ್ನರದು ಹತ್ತು ಸಾವಿರ
ಚೀಫ್ ಸೆಕ್ರಟಿರಿದು ಮೂರು ಸಾವಿರ

||ಏರು||

ಇಷ್ಟೆಲ್ಲ ಅಲ್ಲದೆ ಭತ್ತೇದ ಹಣ ಪುಕ್ಕಟ ವಸೂಲ ಮಾಡುವರ||೨||
ಕೆಲಸಕ್ಕೆ ಅವರು ನೇಮಣೂಕಿ ಆದ ಮೇಲೆ ಪಗಾರ ಅಲ್ಲದೆ ಬೇರೆ ಸುಲಿಯುವರ
ಇಂಗ್ಲೇಂಡದಿಂದ ಹಿಂದುಸ್ಥಾನಕ ಬರುವುದಕ ಹಾದಿ ಖರ್ಚು ಮೂವತ್ತ ಸಾವಿರ
ಕಛೇರಿ ಒಳಗ ಖುರ್ಚಿ ಮಾಡಿಸಲಿಕ್ಕೆ ಪ್ರತಿಯೊಂದು ಪ್ರಾಂತಕ್ಕೆ ಇಪ್ಪತ್ತೈದು ಸಾವಿರ
ಮಿಲ್ಟ್ರಿ ಸೆಕ್ರೆಟರಿ ಅವರ ಕಚೇರಿ ಖರ್ಚಿಗಾಗಿ ಒಂದ ಲಕ್ಷ ಮೂವತ್ತಾರ ಸಾವಿರ
ಇಂಗ್ಲಂಡದೊಳಗ ಅವರ ಹೆಂಡರು ಹಡೆದರ ಬಾಣೇತನಕ ಕೊಡಬೇಕು ನೀವೆಲ್ಲ
ಒಂದು ಲಕ್ಷ ಎಂಟು ಸಾವಿರ ಮೋಟರಕ್ಕ ಕೊಡಬೇಕು ಅದರಾಗ ಕೂತಕೊಂಡ   ಮೆರೆಯುವರ

||ಚ್ಯಾಲ||

ರಜೆದ ಭತ್ತಾ ಬೇರೆ ತಗೊಳ್ಳುರ
ತಿಂಗಳಿಗೆ ನಾಲ್ಕು ಸಾವಿರ
ಪ್ರವಾಸದ ಖರ್ಚು ಕೊಡಬೇಕ ಪರಭಾರೆ
ವರಷಕ್ಕ ಇಪ್ಪತ್ತೈದು ಸಾವಿರ

||ಏರು||

ಪಗಾರ ಅಲ್ಲದ ಚೈನಿ ಖರ್ಚು ಐದಲಕ್ಷ ಮೂವತ್ತೆಂಟಸಾವಿರ ನಾಲ್ಕುನೂರ||೩||
ನಾಲ್ವತ್ತೈದು ಕೋಟಿ ಅರವತ್ತು ಲಕ್ಷ ರೂಪಾಯಿ ಯುರೋಪಿಯನ್ನರ
ಒಯ್ಯತಾರ ಪುಕ್ಕಟ್ಟ
ಇಷ್ಟ ಪಗಾರ ನಿಮಗ್ಯಾಕಂತ ಕೇಳಿದರ ನಮ್ಮ ಮೇಲೆ ಆಗ ಅವರ ಸಿಟ್ಟ
ಅವರ ದೇಶದೊಳಗ ಪ್ರತಿಯೊಬ್ಬನ ಪಗಾರ ವರುಷದ ಕೇಳರಿ ಚಿತ್ತಿಟ್ಟ
ಒಂದು ಸಾವಿರದ ಎರಡುನೂರ ನಾಲ್ವತ್ತು ಒಬ್ಬೊಬ್ಬರಿಗೆ ಬೀಳತದ ಇಷ್ಟ
ಹಿಂದುಸ್ಥಾನದೊಳಗ ಪ್ರತಿಯೊಬ್ಬನ ಪಗಾರ ಎಪ್ಪತ್ತನಾಲ್ಕು ಬೀಳತದ ಸ್ಪಷ್ಟ
ದುಡಿಯುವವರಿಗೆ ಕೂಳು ಇಲ್ಲ ದುಡಿಯದವರು ಹೊಡೆಯತಾರ ಎಂಥಾದ
ನೋಡರಿ ಅದೃಷ್ಟ

||ಚ್ಯಾಲ||

ಹಿಂದುಸ್ಥಾನ ಖಜಾನಿ ಖಾಲಿ ಮಾಡಿ
ಇಂಗ್ಲಂಡಕ ಒಯ್ಯತಾರ ಓಡೋಡಿ
ಬ್ರಿಟಿಶ್ ಪಾರ್ಲಿಮೆಂಟಿನೊಳು ಕೂಡಿ
ಕಾಯ್ದೆ ತಗಿತಾರ ಬಹಳ ಅಡ್ನಾಡಿ

||ಏರು||

ಕಾಯ್ದೆ ತೆಗೆಸಿ ಗಾಂಧಿ ಫಾಯ್ದೆ ಮಾಡತಾನಂತ
ಭೀಮರಾಯ ತಿಳಿಸಿದ ಮಜಕೂರ||೪||

ರಚನೆ :  ಹುಲಕುಂದ ಭೀಮಕವಿ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ

____________________________________
   ಸನಿಕ – ಸಮೀಪ,   ಹೊಕ್ಕ – ನುಸುಳಿ,   ಸಾಬ – ಸಾಹೇಬರು, ಅಧಿಕಾರಿ

  ಪೇನಸೇನ – ಪಿಂಚಣಿ