ಕಡಿಮಿ ಅಲ್ಲ ನೋಡ್ರಿ ಪೊಡವಿ ಪಾಲಕರು |
ದುಡಿಯುವಂಥ ಬಡವ ಕೂಲಿಕಾರರು |
ಶಡಗರ ಸಂಪತ್ತ ಭೂಮಿ ಒಡೆಯರನ್ನ ಮಾಡಲಿಕ್ಕೆ |
ಅಡಿಪಾಯವಿದ್ದಂತೆ ಬಡವ ಕೂಲಿಕಾರರು || ಪ ||

ಮೊಟ್ಟ ಮೊದಲಿಗೆ ರಾಷ್ಟ್ರದ ಉತ್ಪನ್ನ ಮಾಡಲಿಕ್ಕೆ |
ಶ್ರೇಷ್ಠರು ಕೇಳ್ರಿ ಬಡವ ಕೂಲಿಕಾರರು |
ನಟ್ಟ ಕರಿಕಿ ಕಟ್ಟೀ ಕಡದ ಒಡ್ಡ ಹಾಕಿ ಕಷ್ಟಪಡವರು |
ಬಡವ ಕೂಲಿಕಾರರು |
ಹುಟ್ಟಿದ ಪೀಕ ಮನಿಗೆ ಮುಟ್ಟುವರೆಗೆ ರೈತಗೆಷ್ಟ |
ಸಹಾಯ ಬಡವ ಕೂಲಿಕಾರರು |
ಹೊಟ್ಟ ಮೇವ ಬಣಿವಿ ಒಟ್ಟುವಾಗ ಸಹೀತ |
ಬಿಟ್ಟರ ನಡೆಯುವುದಿಲ್ಲ ಕೂಲಿಕಾರರು ||

ಖಡಿ ರೋಡ ಸಿಮೆಂಟ ರೋಡ ದೊಡ್ಡ ದೊಡ್ಡ ಮೇನ ರೋಡ |
ದುಡದ ಮಾಡಿದವರು ಬಡವ ಕೂಲಿಕಾರರು |
ದೊಡ್ಡ ನದಿಗಳಿಗೆ ಅಡ್ಡ ಆಣೆಕಟ್ಟ ಕಟ್ಟಿ ನೀರ ವದಗಸವರು |
ಬಡವ ಕೂಲಿಕಾರರು ||

||ಚಾಲ||

ಗಿರಣಿ ಕಾರಖಾನೆ ನಡೆಯುವವು ಅವರಿಂದ |
ವರ್ಕ್‌ಶಾಪದಲ್ಲಿ ದುಡದ |
ಶರೀರ ಸಂವಿಸುದಾ | ಅರಹೊಟ್ಟಿ ಬರಿ ಮೈಯ್ಯಿಂದ ಇದ್ದ ||
ಖಣಿ ಖನಿಜ ಸಂಪತ್ತ ಅಗಿಯುವದ |
ಪ್ರಾಣದ ಭಯ ಇಲ್ದ | ರೇಲ್ವೆದಲ್ಲಿ ದುಡದಾ |
ಮನಿ ಇಲ್ಲದೆ ಗುಡಿಸಲದೊಳಗಿದ್ದಾ ||

||ಏರು||

ರೂಢಿಯೊಳಗ ಇವರು ಧಡ್ಡರೆಂದು ಹಿಂದಾಡಿ ಕೊಳ್ಳವರು |
ಹಲವ ಕೆಲವ ಜನರು||೧||
ಕಡಲೊಳಗ ಹಡಗ ಬಂದ ಧಡಕ ಹತ್ತಿದಾಗ ಸಾಮಾನ |
ಕಡೀಕ ತಗದ್ಹೇರವರು ಬಡವ ಕೂಲಿಕಾರರು |
ಗಾಡಿಯಿಂದಿಳಿಯುವಾಗ ಟ್ರಂಕ ಬೆಡ್ಡಿಂಗ ಕೈ ಚೀಲಗಳನ |
ನಡಕಟ್ಟಿ ಹೊರವರು ಬಡವ ಕೂಲಿಕಾರರು ||

ಜಂಗಲ ಹೋಗಿ ಅದನ ಮಂಗಲ ಮಾಡುವಾಗ ಹಂಗಿಲ್ದ |
ದುಡಿಯವರು ಬಡವ ಕೂಲಿಕಾರರು |
ಜಂಗಿ ಬಿಲ್ಡಿಂಗ ಮತ್ತೆ ಬಂಗ್ಲೆಗಳಾಗುವುದಕ್ಕೆ ಕಂಗೆಟ್ಟ |
ದುಡಿಯುವರು ಬಡವ ಕೂಲಿಕಾರರು ||

ವಾರಟಾಯಿಮ ಸರಕಾರ ಫುಕಾರಿಸಿದಾಗ ಸೈನ್ಯ ಸೇರವರು |
ಮದಲ ಬಡವ ಕೂಲಿಕಾರರು |
ಆರಾಮ ಹರಾಮ ಅನ್ನುವ ನೆಹರೂ ಅವರ ವಾಕ್ಯವನ್ನು |
ಪೂರಾ ಪಾಲಿಸವರು ಬಡವ ಕೂಲಿಕಾರರು ||

||ಚಾಲ||

ಜಗದೇಳ್ಗೆಯಾಗುವದು ದುಡಿಯವರಿಂದ |
ಸಮಾಜಕಾನಂದ | ವಿಶ್ವಕೆಲ್ಲಾ ಶಾಂತಾ |
ಪ್ರತ್ಯಕ್ಷ ಅನುಭವದ ಮಾತಾ ||
ದುಡಿಯದೆಲೆ ಉಂಣವ ಕಳ್ಳಂತ | ಹೇಳ್ಯಾನ ಭಗವಂತ |
ಬರದ ಇಟ್ಟ ಗೀತಾ |
ಗೀತಾ ಓದಂವಗಾಗುದು ಗೊತ್ತಾ ||

||ಏರು||

ನಾಡೊಳು ಹುಲಕುಂದ ಪಾಡ ಭೀಮೇಶ ಅಂದ |
ಎಚ್ಚರಾಗ ಬೇಕ ಬಡವ ಕೂಲಿಕಾರರು||೨||

ರಚನೆ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು