ಜನಸಂಖ್ಯೆ ಹೆಚ್ಚಾಗಿ ತಿನಲಿಕ್ಕೆ ಅನ್ನ ಕಡಿಮಿ |
ಘನ ವಿಚಾರ ಮಾಡುವದು ಸರಕಾರಾ |
ಅನ್ಯ ರಾಷ್ಟ್ರದಿಂದ ಧಾನ್ಯ ತರಿಸುದು ಬಿಟ್ಟ |
ತನ್ನಲ್ಲಿ ಬೆಳೆಯ ಬೇಕಂತ ಪೂರಾ ||ಪ||

ನಾಲ್ಕನೇ ಪಂಚವಾರ್ಷಿಕ ಯೋಜನೆಗೆ ನಿರುದ್ಯೋಗ |
ದರಿದ್ರತನದ ಸಂಹಾರಾ |
ಸರಕಾರ ಕೂಡ ಜನರು ಸಹಕಾರ ಮಾಡಿದರ |
ಬರೋಬರಿ ಆಗುವದು ಇಲ್ಲ ಘೋರಾ ||

ಸಮಾಜವಾದದ ಸಮಾಜ ರಚನೆಯು |
ಸಮಾಧಾನದಿಂದ ತಯ್ಯಾರಾ |
ಪ್ರಾಮುಖ್ಯವಾಗಿ ಜೀವನ ಮಟ್ಟ ಎತ್ತಿರಿಸಿ |
ಆರ್ಥಿಕ ಸಮಾನತೆ ತಾಯಿಬೇರಾ ||

ಬೌದ್ಧಿಕ ಸಾಂಸ್ಕೃತಿಕ ಸಾಧನ ವೃದ್ಧಿಯಾಗಿ |
ಉದ್ದೇಶ ಸಾಧಿಸುವದು ನಿರಂತರಾ |
ಆದಾಯ ಮತ್ತು ಸಂಪತ್ತುಗಳ ಅಸಮಾನತೆಯು ನೀಗಿ |
ಉದ್ಯೋಗವಕಾಶಗಳು ಬಲು ಜೋರಾ ||

ಗ್ರಾಮೋದ್ಯೋಗದಿಂದ ವಿಮಾನ ಸಾರಿಗಿವರೆಗೆ |
ಯಂತ್ರ ತಂತ್ರ ಶಿಕ್ಷಣ ಶಿಬಿರಾ |
ಕ್ರಮ ಕ್ರಮವಾಗಿ ಪ್ರಮಾಣಕ್ಕನುಸರಿಸಿ ಸಮಗ್ರ |
ಸಮಸ್ಯ ಆಗುವವು ಹಗರಾ ||

||ಚಾಲ||

ಪಶು ಪೋಷಣೆ ಬೇಸಾಯ ಕೆಲಸ |
ವ್ಯವಸಾಯ ವೆವಸ್ತ | ಇವಕೆಲ್ಲಾ ಹಣಾ |
ಸರಕಾರ ಕೊಡುವದು ನೋಡಿರಣ್ಣಾ ||

ಸಮಾಜ ಕಲ್ಯಾಣ ಸೇವೆ | ವಸತಿ ಸೌಕರ್ಯ
ವದಗಿಸುವದು ತಾನಾ |
ನಿರಾಶ್ರಿತರ ಪುನರ್ನಿ ವೇಶನಾ ||

ಸಹಕಾರ ಬೇಸಾಯ ಪದ್ಧತಿ | ಮಹತ್ವದ ಸಂಗತಿ |
ಬಹಳ ಪ್ರಯೋಜನಾ |
ಮಾಡಬೇಕಂತ್ಹೇಳಾರ ಅನುಕರಣಾ ||

||ಏರು||

ಸಂಣ ಕೈಗಾರಿಕೆ ಮೀನುಗಾರಿಕೆ ಪೂರ್ಣ |
ಸಹಾಯ ಯೋಜನೆ ಸಾರಾ||೧||

ಶ್ರೇಷ್ಟವಾದ ರಾಷ್ಟ್ರೀಯ ವಿಸ್ತರಣ ಯೋಜನೆಯಿಂದ |
ಎಷ್ಟೋ ಲಾಭವಾಗುವದು ಹಳ್ಳಿಗಳಿಗಿ |
ಕೆಟ್ಟ ವ್ಯಸನ ಬಿಟ್ಟ ಮನ ಮುಟ್ಟ ಕೆಲಸ ಮಾಡಿದರ |
ರಾಷ್ಟ್ರ ಸೇವೆಯಾಗುವದು ನಿಜವಾಗಿ ||

ಸರಕಾರ ಸಾಕಷ್ಟ ಈಗ ಸಹಾಯ ವದಗಿಸುವಾಗ |
ಮೂಕರಂತೆ ಕೂಡ್ರಬಾರದ ನೀವಾಗಿ |
ಸರಿಯಾಗಿ ತಿಳಕೊಂಡ ಬರೋಬರಿ ನಡಕೊಂಡ್ರ |
ಸರಳವಾಗುವದು ಬಾಳ್ವೆ ಸುಖವಾಗಿ ||

ಆರೋಗ್ಯ ವ್ಯವಸಾಯ ಗ್ರಾಮೋದ್ಯೋಗ ಶಿಕ್ಷಣ |
ಸಹಕಾರಕ್ಕೆ ಸಹಾಯ ಮೊದಲಿಗಿ |
ದರಿದ್ರ ಬಡತನ ನಿರುದ್ಯೋಗ ಪರಿಪೂರ್ಣ |
ನಷ್ಟವಾಗುದು ಮುಖ್ಯ ತತ್ವಾಗಿ ||

ಗ್ರಾಮ ಗ್ರಾಮಗಳಲ್ಲಿ ಸಮಾಜ ಶಿಕ್ಷಣಾ ಕ್ರಮದಿಂದ |
ದೊರೆಯುವದು ಸರ್ವರಿಗಿ |
ನಮ್ಮ ಭಾಷೆ ನಮ್ಮ ದೇಶ ನಮ್ಮ ಉದ್ಯೋಗದ |
ಜ್ಞಾನವಾಗುವದು ನಿರಕ್ಷರಿಗಳಿಗಿ ||

 

||ಚಾಲ||

ರೈತರಿಗೆ ಸರ್ವ ಗೊಬ್ಬರ | ಮಾಹಿತಿ ಕೊಟ್ಟ ಪೂರ | ನೀರಿನ ಪುರವಠಾ |
ಉಳಿದ ಸವಲತ್ತ ವದಗಿಸಿ ಕೊಟ್ಟಾ ||
ಹೆಚ್ಚಾಗಿ ಆಹಾರ ಬೆಳೆಯಿರಿ | ಸ್ವಚ್ಛತೆ ಕಲಿಯಿರಿ |
ಅಂತ ಹೇಳಿ ಸ್ಪಷ್ಟಾ |
ಇದು ಯೋಜನೆ ಯೊಳಗಿನ ಗುಟ್ಟಾ ||
ಪ್ರಾಮಾಣಿಕರಾಗಿ ಬಾಳಿರಿ | ಪ್ರೇಮಬೆಳಿಸಿರಿ |
ಪ್ರಪಂಚ ಉತ್ಕೃಷ್ಟಾ |
ಸಮಾಧಾನ ಸಮಾಜದಿಂದ ರಾಷ್ಟ್ರಾ ||

||ಏರು||

ಕನ್ನಡ ನಾಡಿನ ಚನ್ನ ಹುಲಕುಂದದ ಮಾನ್ಯ |
ಭೀಮೇಶ ಹೇಳಿದ ವಿವರಾ||೨||

ರಚನೆ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು