ಕಲಿಯುಗದಾಟಾ ನೋಡಿ ಕಲಿವಿಲಿ ಆತ ಮನಸಿಗಿ
ಕಳಕಳಿಯಿಂದ ನಿಮ್ಮ ಮುಂದ ತಿಳಸೂದಕ
ಈಗ ಹೊಳದೈತಿ ಹಿಂಗ ನನ್ನ ಧ್ಯಾಸಕ್ಕ ||
ಅತಿಯಾದ ಸಂತಾನ ಮಿತಿಗೊಳಿಸಿರೆಂದು
ಹಿತವಾದ ಸಂಗತಿ ಹೇಳುದಕ
ಬಂದೇನ ಇಲ್ಲಿಯತನಕ ||

ಹಿಂದಿನ ಕಿಂತ ಈಗ ಮುಂದ ವರಿತ ಹಿಂದುಸ್ತಾನ
ಯಾತಕ್ಕಂದರ ಮಕ್ಕಳನ್ನು ಹಡಿಯೋದಕ
ಗಣತಿ ಮಾಡೋದು ಬ್ಯಾಸರಾತಿ ಸರಕಾರಕ ||
ಸೊನ್ನಿಗೆಟ್ಟ ವಂದಸವನ ಗೊಣ್ಣಿ ತಗದ ಒಗದಾಂಗ
ವರ್ಷಕ ಒಂದೊಂದರಂತೆ ಬಿಡುದಿಲ್ಲ ನಿರಕ
ಈಗ ಒಬ್ಬೊಬ್ಬರಿಗದಾವ ಮಕ್ಕಳು ಹತ್ತನಾಕ ||

ಸಣ್ಣ ಸಂಸಾರಾ ಸರಿಯಾಗಿ ಸಾಗತದ
ಕೊರತಿ ಯಾಗೋದಿಲ್ಲ ಯಾತ್ಯಾತಕ
ಎರಡ ಮಕ್ಕಳಾದ್ರ ಸಾಕ ಒಂದ ಕುಟುಂಬಕ ||
ಹೆಚ್ಚಾಗಿ ಹಡದರ ಪೇಚ ಆಗತsದ
ಒದ್ದಾಡೋದು ಸಿಕ್ಕ ಬಡತನಕ
ಅಡ್ಡಿ ಆತಂಕ ಮಕ್ಕಳ ಶಿಕ್ಷಣಕ ||

||ಏರು||

ಪ್ರಾಯ ಆಗಬೇಕ ಪೂರ್ತಿ ಲಗ್ನದ ರೀತಿ
ಹೆಣ್ಣಿಗೆ ಇಪ್ಪತ್ತಾ
ಗಂಡಿಗೆ ಆಗಿರಬೇಕ ಮೂವತ್ತಾ ||
ವಯಸ ಇರತsತಿ ಎಳಕ ಹುಟ್ಟತಾವ ಕೊಳಕ
ಜೀವ ಜರಿಜರಿತಾ
ಹಡಹಡದ ಆದ್ರ ಅಶಕ್ತಾ ||
ಹಿರಿಯರು ಅಂತಾರ ಸಣ್ಣಮಗಳ ಮಕ್ಕಳಾದುವ ನಿನಗ ಒಂದ ಏಳ
ಮತ್ತ ಏಸರಾಗಂತಾ
ನಾಲ್ಕರೊಳಗ ಐತಿ ಈಗ ತುರ್ತಾ ||
ನಮ್ಮ ಕೈಯಾಗಿರುವುದೇನ ದೇವರ ಹಾಕಿದ ಮಣ್ಣ
ಕೊಡಾಂವ ಭಗವಂತಾ
ಹೆಂಗಸರ ಮಾತಾಡತಾರ ಹಿಂಗ ನಗನಗತಾ ||

||ಏರು||

ಹತಿಬಿದ್ದ ಒಂದ ಸವನ ಹತ್ತೆಂಟ ಹಡದರ
ವಿಪತ್ತ ತಪ್ಪೋದಿಲ್ಲ ಕಡಿತನಕ
ಮುದಿ ಮಾರಿ ಮೂವತ್ತ ವರ್ಷಕ್ಕ ||

ಅತಿಯಾದ ಸಂತಾನ ಮಿತಿಗೊಳಿಸಿರೆಂದು
ಹಿತವಾದ ಸಂಗತಿ ಹೇಳುದಕ
ಬಂದೇನ ಇಲ್ಲಿಯತನಕ ||||೧||

ಬಾಳ ಮಕ್ಕಳಿದ್ರ ಗೋಳ ಆಗತೈತಿ
ಸರಿಯಾಗಿ ಸಾಗೋದಿಲ್ಲ ಜೀವನ
ಹೆಚ್ಚಾದೀತ ಖರ್ಚಿನ ಪ್ರಮಾಣ ||
ಕಷ್ಟಪಟ್ಟ ಬೇಕಾದಷ್ಟು ದುಡಿದರು ದೂರ
ಆಗೋದಿಲ್ಲ ಬಡತನಾ
ಹೊಟ್ಟೆತುಂಬ ಸಿಗವಲ್ತ ಅನ್ನಾ ||

ಮೊದಲ ಇದ್ದ ಭೂಮಿ ಇದ್ದಷ್ಟ ಇರುವುದು
ಉದ್ದ ಅಗಲ ಆಗಿಲ್ಲ ಏನೇನಾ
ಹ್ಯಾಂಗ ಪುರೋಸೀತ ಉತ್ಪನ್ನ
ಕಾಳಕಮ್ಮಿಯಾಗಿ ಗೋಳಾಟ ನಡದೀತ
ಜಡಾ ಬಂತ ಸಲಹುವದು ಮಕ್ಕಳನ
ಸಾಕ ಮಾಡರಿ ಆಗ್ಯಾವ ಒಂದ ಡಜನ ||

ಏನಗಂಟ ಬಿದ್ದ್ಯೊ. ನಿನ್ನ ಹೊಟ್ಟಿ ಹೆಂತದಂತ
ಸಿಟ್ಟಿಗೆದ್ದ ಬೈತಾರ ಮಕ್ಕಳನ್ನ
ವಟಾವಟಾ ಪಿಟಿಪಿಟಿ ವಂದsಸವನ ||
ಹುಳುಹುಳು ಮಾರಿ ನೋಡಿ ಗುಳುಗುಳು ಅತಗೊಂತ
ಹೊಡಕೊಂಡ ಹೋಗತಾವ ದನಗಳನ್ನ
ದಾರಿ ನೋಡತಾವ ಊಟಾ ಓದ ಕೊಡವುದನ ||

ಹಿಂದಮುಂದ ಏನೂ ಇಲ್ಲ ಒಂದೇ ರೊಟ್ಟಿ ಊಟಾ ಮಾಡಿ
ಹೊತ್ತಗಳದ ಬರತಾವ ಸಂಜಿತನ
ತಿಂದೇವ ಅಂತಾವ ಸಿಗೋದಿಲ್ಲ ಮತ್ತೇನ ||
ಸಂಜಿಕ ಮನಿಗಿ ಬಂದ ಸಪ್ಪಾನ ಗಂಜಿ ಕುಡದ
ಸೊಗಸ ಇಲ್ಲದ ಮಲಗತಾವ ಸುಮ್ಮನ
ನಿದ್ರಿ ಹತ್ತೋದಿಲ್ಲ ಬೆಳತಾನ ||

||ಚಾಲ||

ತಟ್ಟುವದು ಮಕ್ಕಳ ಮರಗ ತಗಲೀತ ಕೆಟ್ಟರೋಗ
ಆರೋಗ್ಯಕ್ಕ ಇಲ್ಲ ಸಿಸ್ತಾ |
ಬೀಳುವುದು ಬ್ಯಾನಿ ಬಳಲೂತಾ ||

ಹುಡಗೋರಿಗೆ ಇರೋದಿಲ್ಲ ಜ್ಞಾನ ಬೇಡತಾನ ಅನ್ನ
ನುಚ್ಚವಲ್ಲಿನಂತಾ
ಸುಳ್ಳ ಹೇಳತಾರ ನಾಳೆ ಮಾಡೋಣಂತಾ ||

ತಿನ್ನ ಉಣ್ಣು ಬಾಯಲಿ ಮಣ್ಣ ಮಾರತಾರ ಹೈನ
ಮಕ್ಕಳು ಮರಗುತಾ
ಆಸೆ ಮಾಡಿ ನೋಡತಾವ ನಿಂತಾ ||

ಮೈಯೊಳಗ ಮತ್ತೊಂದಿಲ್ಲ ಬಟ್ಟಿ ಅಷ್ಟಕ್ಕಷ್ಟ ಚಾಟಿಮಿಟಿ
ಊಟ ಸಿಗೋದಿಲ್ಲ ಒಪ್ಪತ್ತಾ
ಬೆಲ್ಲದ ಚಾ ಕುಡದ ಹೊತ್ತಗಳಿಯುತಾ ||

||ಏರು||

ಉಂಡ ಆಡೊ ಹಿಂಡ ಮಕ್ಕಳು ಅಂಗಡಿ ಮುಂದ ಹೋಗಿ ನಿಂತ
ಕಂಡದ್ದನ್ನ ಬೇಡತಾವ ತಿಳಿಲಾರದಕ
ನೀವು ತಗದ ಕೊಡತೇರಿ ಎರಡ ಕಪಾಳಕ ||

ಅತಿಯಾದ ಸಂತಾನ ಮಿತಿಗೊಳಿಸಿರೆಂದು
ಹಿತವಾದ ಸಂಗತಿ ಹೇಳುದಕ
ಬಂದೇನ ಇಲ್ಲಿಯತನಕ ||||೨||

ಹತ್ತ ಹಡಿಯೋದ ಯಾಕ ಬೇಕ ಮೂರ ಮುತ್ತ ಹಡದರ ಸಾಕ
ಸರಿಯಾಗಿ ಸಾಗತದ ಸಂಸಾರ
ಮಕ್ಕಳ ವಿದ್ಯಾಭ್ಯಾಸಕ್ಕೆ ಒಳ್ಳೆ ಸಸಾರ ||
ಅತಿಯಾದ ಹಡದ ತಾಯಿ ಅಶಕ್ತಳಾಗತಾಳ
ಮೈಯೊಳಗ ಕಮ್ಮಿ ಆತ ನೆತ್ತರ
ಬಾಣತಿ ರೋಗ ಕ್ಷಯಾ ಹತ್ತಿ ಬಳಲುವರ ||

ಒಂದ ಹಡದ ಮ್ಯಾಲ ಮತ್ತೊಂದ ಹಡಿಯೋದಕ್ಕ
ಮೂರ‍್ನಾಲ್ಕ ವರ್ಷ ಇರಬೇಕ ಅಂತರ
ದಷ್ಟಪುಷ್ಟ ಹುಟ್ಟತಾವ  ಹುಡಗೋರ ||
ಇಂದಿನ ಬಾಲಕರು ನಾಳಿನ ನಾಗರಿಕರು
ನಾಡಿಗಾಗಿ ನಡಾಕಟ್ಟಿ ನಿಲ್ಲವರಾ
ಇವರಿಂದ ದೇಶದ ಉದ್ಧಾರಾ ||

ಬಗಲಾನ ಕೂಸ ಬಗಲಾಗ ಇರತ ಬೈಕಿ ಸುರು ಆಗತಾವ
ಬಾಯಿ ಕೆಟ್ಟ ಬೇಕಾದ್ದ ತಿನ್ನುವರ
ಹುಣಶಿಕಾಯಿ ಹುಳಿ ಮಜ್ಜಿಗಿ ಹಸಿಖಾರಾ ||
ಕೆಟ್ಟ ಉಷ್ಣ ಬಲಿಷ್ಣಾತಿಂದ ದುಷ್ಟದುರ್ಗುಣ ಹುಡಗೋರ ಹುಟ್ಟಿ
ಭ್ರಷ್ಟರಾಗಿ ನಾಡಮ್ಯಾಲ ತಿರುಗುವರಾ
ರಾಷ್ಟ್ರಕ್ಕೆ ಅಪಕೀರ್ತಿ ತರಾವರಾ ||

ಅತ್ತಿಸೊಸಿ ಬಾಣಂತನಾ ನಡದಿರತೈತಿ ಒಂದೆ ಕ್ಷಣ
ಗಂಡಸರಿಗಿ ಗಂಟ ಬಿದ್ದುವ ಹುಡಗೋರ
ಊಳಗಾ ಮಾಡಿ ಮಾಡಿ ಬಂದೀತಿವಗ ಬ್ಯಾಸರ ||
ದುಡಿದಿದ್ರ ನಿರ್ವಾ ಇಲ್ಲ ಮೊದಲ ಮನಿಯೊಳಗೇನಿಲ್ಲ
ಕಡ್ನಾ ಕಟ್ಟಾ ಕೇಳಿದರ ಕೊಡೊದಿಲ್ಲ ಯಾರ
ಆಜು ಬಾಜು ಕೈಬಡದ ನಗವೂವರಾ ||

ನಮ್ಮ ಬಾಳ್ವೆ ಠೀಕ ಇದ್ರ ನಮಗ್ಯಾರ‍್ಯಾಕ ನಗತಿದ್ರ
ಇಬ್ರು ಒಮ್ಮೆ ಹಡದ ಆತಿ ಇಷ್ಟ ಅಡತಾರ
ನಮಗ ಹಿಂದ ಮುಂದ ಕೊಡಬಾರದೇನ ದೇವರ
ಮನಿಯಾನ ದೇವರನ್ನ ವಿನಯದಿಂದ ಕೇಳಿಕೊಂಡ
ನಿಮಗಾಗಿ ಕುಟುಂಬ ಯೋಜನಾ ತಯ್ಯಾರ
ಅಲ್ಲಿ ಹ್ವಾದ್ರ ಆಗತೇರಿ ಉದ್ಧಾರ ||

||ಚಾಲ||

ಡಾಕ್ಟರ ಸಲ್ಲಾ ಪಡಕೊಂಡ್ರ ಅದ್ರಂತೆ ನಡಕೊಂಡ್ರ
ಸುಖಾ ಐತಿ ಮುಂದಾ
ಏನೂ ದೋಕಾ ಇಲ್ಲ ಅದರಿಂದಾ ||

ತಿಳಿಸಿ ಹೇಳತಾರ ಜಳಜಳ ನಿತ್ಯ ವ್ಯಹಾರಕ್ಕ ಸರಳ
ಸಂತತಿ ನಿರೋಧಾ
ನಮ್ಮ ಸಲುವಾಗಿ ಮಾಡ್ಯಾರ ಶೋಧಾ ||

ನಿಮ್ಮದೇನ ಹೋಗೋದಿಲ್ಲ ಗಂಟ ಎಲ್ಲಾ ಪುಕ್ಕಟ್ಟ
ಬತ್ತೆ ಕೊಡಲಾರ ಗಂಡಸರಿಗೆ ಹದಿನೆಂಟ
ಹೆಂಗಸರಿಗಿ ಇಪ್ಪತ್ತೈದಾ
ಹೆಣ್ಣ ಮಕ್ಕಳಿಗಿ ಇಡಸತಾರ ವಂಕಿ ಆರೋಗ್ಯಕ್ಕೆ ಇಲ್ಲ ಧಕ್ಕಿ
ಆಪ್ರೆಶನ್ ಇಬ್ಬರ ಪೈಕಿ ಒಬ್ಬರದಾ ||

ಗರ್ಭಧಾರಣ ಆಗುವದು ಬಂದಾ
ಸದ್ಧೇದ ಪರಿಸ್ಥಿತಿ ತಿದ್ದಿ ಪದ್ಯ ಬರಿತಾನ
ತಿಗಡೊಳ್ಳಿ ಮಾರುತಿ ಸೇವಕ
ಮಲಶೆಟ್ಟಿ ಮರಿಕಲ್ಲನ ಪದಾ ಠೀಕ ||

ಅತಿಯಾದ ಸಂತಾನ ಮಿತಿಗೊಳಿಸಿರೆಂದು
ಹಿತವಾದ ಸಂಗತಿ ಹೇಳುದಕ
ಬಂದೇನ ಇಲ್ಲಿಯತನಕ ||||೩||

ರಚನೆ :  ಮರಿಕಲ್ಲಕವಿ
ಕೃತಿ :  ಮರಿಕಲ್ಲಕವಿಯ ಗೀಗೀ ಪದಗಳು