(೧)
ಎರಡು ಹಡಿರಿ ಮುಂದ ತಡಿರಿ | ಮೀರಿ ಮೂರಾದರ ಬಿಡಿರಿ || ಪ ||
ಭಾರತದಲ್ಲಿ ಹೆಸರಾದ ಶ್ರೀಮಂತರು | ಪಂಡಿತ ಜವಾಹರಲಾಲ ಅವರು |
ಹೆಣ್ಣೊಂದೇ ನಮಗ ಸಾಕು ಅಂದರು | ಅವರೇ ಈಗ ಪ್ರಧಾನಿಯವರು||೧||
ಪಾಂಡುರಾಜಗ ಇಬ್ಬರ್ಹೆಂಡರು | ಇಬ್ಬರ ನಡುವೆ ಮಕ್ಕಳೈವರು |
ಸತ್ಯದಿಂದ ಅವರು ನಡೆದು ತೋರಿಸ್ಯಾರ | ಇನ್ನೂ ಸಾರತಾದ
ಪಾಂಡವರ್ಹೆಸರು ||೨||
ಅದೇ ಗಾಂಧಾರಿ ನೂರು ಹಡೆದರ | ದುಷ್ಟತನದಿ ದುಷ್ಕಾರ್ಯ ಮಾಡ್ಯಾರ |
ಇಂದಿನತನಕ ಸರ್ವರುಗಳತಾರ | ಕೌರವರೆನ್ನುವ ಹೆಸರ ತೆಗೆದರ||೩||
ದಶರಥರಾಜಗ ಮೂರ್ಹೆಂಡಿರು | ಮೂವರ ನಡುವೆ ಮಕ್ಕಳು ನಾಲ್ವರು |
ರಾಮಾಯಣ ಎಂಬ ಕಾವ್ಯ ಬರದಾರ | ಇನ್ನು ಕೇಳತಾದ ರಾಮನ ಹೆಸರ||೪||
ಹಿಂದಿನ ಇತಿಹಾಸ ತೆಗೆದನೋಡಿದರ | ಎರಡು ಮೂರು ಅವರಿಷ್ಟೇ ಹಡದಾರ |
ಹಂದಿಯಂತೆ ಹತ್ಹತ್ತು ಹಡದರ | ನಮ್ಮ ನಿಮ್ಮ ಪುರಾಣ ಬರೆಯವರಾರು||೫||
ವಾಲಿ ಶರಣರು ಪದಾ ಮಾಡತಾರ | ಬಸಯ್ಯ ಹಾಡಿ ತೋರಿಸತಾರ |
ನಿಂಗಪ್ಪ ರೇವಣಸಿದ್ಧ ಜೋಡಿ ಇರುವರು | ನಾಲ್ವರು ಎಲ್ಲಾ
ಸಾಲುಟಗಿಯವರು ||೬||
(೨)
ಗಂಡ ಹೆಂಡತಿ ಕೂಡಿ ಮಾತಾಡತಾರ ಹಡೆದಮಕ್ಕಳ ಗತಿ |
ಬಡತನವೆ ಬೆನ್ನ ಹತ್ತೈತ್ತಿ | ಹಡೆದು ಹಡೆದು ನನ್ನ ಶಕ್ತಿ ಕಡಿಮೆಯಾಗಿ
ಟಿ.ಬಿ.ರೋಗ ಆಗೈತಿ | ದುಡಿಯಲಾರದಂತೆ ಮಾಡೈತಿ || ಪ ||
ಎರಡಾದ ನಂತರ ಸಾಕೆಂದರೆ ಕೇಳಲಿಲ್ಲ | ಆರು ಮಕ್ಕಳಿಗೆಲ್ಲ ಹೊಟ್ಟೆ
ತುಂಬ ಅನ್ನ ಇಲ್ಲ |
ದುಡಕೊಂಡು ತಿಂದೇನಂದರ ಮಲಗಲಿಕ್ಕೆ ಜಾಗ ಇಲ್ಲ | ಸಾಕಾಗಿ |
ಸಾಕಾಗಿ ಜೀವ ಸಣ್ಣಾಗಿ ಹೋಗೈತಿ | ಬದುಕುವದು ಹೇಗೆ ಏನಂತಿ |
ಬಡತನವೆ ಬೆನ್ನ ಹತ್ತೈತಿ ||೧||
ಕಡಿಮೆ ಮಕ್ಕಳನ ಹಡೆಯಿರಂತ ಸರಕಾರದವರು ಹೇಳತಾರ |
ಇನ್ನಿಲ್ಲ ಮೂರರ ನಂತರ | ಹೆಚ್ಚು ಮಕ್ಕಳಾಗಿ ಶಿಕ್ಷಣ ದೊರೆಯದಾಗ್ಯಾದ |
ದುರ್ನೀತಿ ಮಾರ್ಗ ತೆರದಾದ ||
ಎರಡಾದರೆ ಅವರು ಶಿಕ್ಷಣ ಪೂರ್ಣ ಪಡೆಯುವರು ಜಾಣರಾಗಿ ಮನೆತನ
ತಾಯಿ ತಂದೆ ಅನ್ನುವರು |
ಸೃಷ್ಟಿಯಲ್ಲಿ ಹುಟ್ಟಿ ಸಂಸಾರ ಸುಖ ಕಂಡರ | ಈ ಜನ್ಮ |
ಈ ಜನ್ಮ ಸಾರ್ಥಕ ಇಂದೆ ಆಗುವದು | ಹಳಹಳಿಸಿದರೇನೈತಿ |
ಬಡತನವೆ ಬೆನ್ನ ಹತ್ತೈತಿ ||೨||
ಅಕ್ಕರತೆಯ ನನ್ನ ಅಕ್ಕ ತಂಗಿಯರೆ ಹೆಚ್ಚು ಹಡೆಯಬೇಡಿರಿ |
ಎರಡಾದ ಬಳಿಕ ಬಿಡಿರಿ || ಹೆಚ್ಚು ಮಕ್ಕಳಾಗಿ ಕಷ್ಟ ಕೊಡುವರು
ಲಕ್ಷಗೊಟ್ಟು ನಡೆಯಿರಿ | ಸರಕಾರದ ನೀತಿ ನೀವು ತಿಳಿಯಿರಿ ||
ಮಕ್ಕಳಾಗದಂತೆ ಶಸ್ತ್ರಕ್ರಿಯೆ ಮಾಡುವರು |
ಊಟೋಪಚಾರಕ ಹಣವಕೊಟ್ಟು ಕಳಿಸುವರು | ಮಿತಸಂತಾನ |
ಮಿತ ಸಂತಾನದ ಲಾಭ ಪಡೆಯಿರಂತ ಹೇಳುವೆ ಕೈ ಮುಗಿಯುತ್ತ |
ವಾಲಿ ಶರಣನ ಪದವ ಕೇಳಂತ ||೩||
ಹತ್ತು ಮಕ್ಕಳ ಹಡೆದು ಗೊತ್ತಿ ಸೋಸುದಕಿಂತ ಮುತ್ತಿನಂಥ
ಮಗು ಬೇಕಾಯ್ತು |
ಕೀರ್ತಿಗೊಂದು ಮಗು ಆರತಿಗೊಂದು ಮಗಳು ಎರಡೇ ಸಾಕು
ಸಾಕಾಯ್ತು ||೧||
ಹತ್ತು ವರ್ಷದ ಹಿಂದ ಮೂವತ್ತು ಕೋಟಿ ಜನ ಈಗ ಅರವತ್ತು
ಕೋಟಿಗೂ ಹೆಚ್ಚಾಯ್ತು |
ಮತ್ತೆ ಹತ್ತು ವರ್ಷ ಮರೆತು ಕುಳಿತರ ನೂರುಕೋಟಿಗೆ ಮುಟ್ಟತಿತ್ತು||೨||
ಭಾರತ ದೇಶದ ಜನನ ಸರಾಸರಿ ಒಂದೂವರೆ ಸೇಕಂದಿಗೊಂದಾಯ್ತು |
ಮೀರಿ ತಾಸಿಗೆ ಎರಡೂವರೆ ಸಾವಿರ ಹಗಲುರಾತ್ರಿ ಹಡಿಯುವದೇ |
ಆಯ್ತು ||೩||
ಅನ್ನ ನೀರು ಹೊನ್ನ ಕೊಡುವ ಭೂದೇವಿಯ ಬೆಳಿಸಲಿಕ್ಕೆ ಬಾರದ ಮಾತು |
ಮಿತ ಸಂತಾನದ ಶಸ್ತ್ರ ಚಿಕಿತ್ಸೆಯು ಜನತೆಯಲ್ಲಿ ತರಬೇಕಾಯ್ತು||೪||
||ಚಾಲ||
ಬಹಳ ಹಡೆಯುವ ಕಾಲ ಹಿಂದಿತ್ತು | ಧನ ಧಾನ್ಯ ಹೈನು ಸಂಪತ್ತು||೧||
ಜನಕಡಿಮೆ ಸರ್ವಸುಖ ಇತ್ತು | ಸುಖ ಸಂಸಾರವು ಅನಿಸಿತ್ತು||೨||
||ಏರು||
ದುಡಿಯುವದು ಕಡಿಮೆ ಆಯ್ತು ಹಡೆಯುವದು ಹೆಚ್ಚಾಯ್ತು |
ಬಡತನದಿಂದ ಬಳಲುವದಾಯ್ತು||೧ನೆಯ ಚೌಕ||
ನಿಯೋಜಿತ ಸಂಸಾರ ಸುಖ ಸಾಗರದ ಆಧಾರ ಮಿತ ಸಂತಾನವ
ತೆಗೆದಿಹರು |
ಸಿವ್ಹಿಲ್ ಸರ್ಜನರೆಲ್ಲ ಶಿಬಿರ ತೆಗೆಯುತ ಶಸ್ತ್ರ ಚಿಕಿತ್ಸೆಯ ಮಾಡುವರು||೧||
ಆಪರೇಷನ್ ಅಂದರ ಅಂಜುವ ಕಾರಣವಿಲ್ಲ ಮಕ್ಕಳಾಗದಂತೆ ಮಾಡುವರು |
ಗರ್ಭದಿ ಬೀಜಾಣು ಸೇರಿಕೊಳ್ಳದ್ಹಾಂಗ ಸೂಕ್ಷ್ಮನಳಿಕೆ ಕಟ್ ಮಾಡುವರು||೨||
ಆಪರೇಶನ್ ಆದಮೇಲೆ ಮೂರು ತಿಂಗಳ ಸತಿಪತಿ ಸಂಬಂಧ ಬಿಡಬೇಕರಿ |
ಲೈಂಗಿಕ ಸುಖಕೆ ಮುಂದ ಹಾನಿಯಿಲ್ಲ ಮಾಡಿ ಮೊದಲಿನಾಗ ಸಂಸಾರ||೩||
ವಿಚಾರ ಮಾಡಿ ದಂಪತಿಗಳೀರ್ವರಲ್ಲಿ ಒಬ್ಬರು ಆಪರೇಶನ್ ಮಾಡಿಕೊಂಡರೆ |
ವೀರ್ಯ ಕರಗದೆ ರಕ್ತ ಹೆಚ್ಚಾಗಿ ಆಯುಷ್ಯ ವೃದ್ಧಿಯಾಗುವದು||೪||
||ಚಾಲ||
ನಾಲ್ವತ್ತು ಹನಿಗೂಡಿ ರಕ್ತ | ವೀರ್ಯದ ಒಂದು ಹನಿಯಂತೆ||೧||
ವೀರ್ಯಾಣು ಕಟ್ ಮಾಡುವರು | ಹೆಣ್ಣಿಗಿಂತ ಗಂಡಿನದೆ ಬಲು ಹಗುರು||೨||
|ಏರು||
ಮಿತ ಸಂತಾನ ಅತ್ಯಂತ ಸುಖವೆಂದು ವಾಲಿ ಶರಣರು ಸಾರಿ
ಹೇಳುವರು ||೨ನೆಯ ಚೌಕ||
(೪)
ಮಿತಿಮೀರಿದ ಅತಿಸಂತಾನದ ಸ್ಥಿತಿಗತಿಯನು ನೋಡೂನು ಬಾ |
ಪ್ರತಿಯೊಂದು ಹಳ್ಳಿಗಿ ಹೋಗೂನು ಬಾ | ಜನತೆಯ ಸುಖ ದುಃಖ
ಕೇಳೂನು ಬಾ ||ಪ||
ಅತಿವೃಷ್ಟಿ ಅನಾವೃಷ್ಟಿಯ ಕಾಲ | ಬಿತ್ತಿದಷ್ಟು ಸಹ ಬರುವದಿಲ್ಲ ಕಾಳ |
ಸತಿಪತಿಗಳಿಗೇ ಸಾಲುವದಿಲ್ಲ | ಐದಾರು ಹಡೆದರ ಅವರಿಗೆ ಬೇಕಲ್ಲ||೧||
ಹಡೆದು ನಿಮ್ಮ ಶರೀರವೆಲ್ಲ | ಸಡಿಲ ಆಗಿ ರಕ್ತ ಉಳಿಯುವುದಿಲ್ಲ |
ನುಡಿಯಲು ಶಕ್ತಿ ಉಳಿಯುವದಿಲ್ಲ | ದುಡಿಯದೆ ಹೊಟ್ಟೆ ತುಂಬುವದಿಲ್ಲ||೨||
ಶಕ್ತಿ ಉಳಿಯುವುದಿಲ್ಲ ಮಕ್ಕಳು ಹೆಚ್ಚಾದರ | ದಿಕ್ಕು ಇರುವದಿಲ್ಲ ಬಡಿದು ಹೇಳಲು |
ಸಿಕ್ಕಾಂಗ ಸೊಕ್ಕಿಲೆ ಕುಡಿದು ತಿರಗತಾರ | ರೊಕ್ಕ ಆಡಿ ಆಸ್ತಿ ಹಾಳ ಮಾಡುವರು||೩||
ನೀವೆ ನೋಡತೀರಿ ಜನರ ಅವಸರ | ಮಾಡಿ ನೋಡ್ರಿ ಮನದೊಳಗ ವಿಚಾರ |
ತಿಳಿದು ತಿಳಿದು ನೀವು ಬಹಳ ಹಡೆದರ | ಮುಂದಿನ ಗೋಳಿಗಿ ನೀವೆ
ಹೊಣೆಗಾರ ||೪||
ಮಿತ ಸಂತಾಸ ಸಿರಿಯ ಆಗರ | ಅತೀ ಅಂದರ ಎರಡಿಲ್ಲ ಮೂರ |
ಸತಿ ಪತಿಯರು ನೀವು ಇಬ್ಬರು | ಅತೀ ಪ್ರೀತಿ ಮಕ್ಕಳೆರಡೇ ಇದ್ದರ||೫||
ಹಡೆಯಲು ನಿಮಗ ಸಾಕೆನಿಸಿದರ | ದಾರಿ ಹೇಳತಾರ ಸರಕಾರದವರು |
ಎರಡು ಮೂರು ತಿಂಗಳ ಆಗಿ ಇದ್ದರ | ಗರ್ಭಪಾತ ಸಹ ಮಾಡಿ ಬಿಡುವರು||೬||
ಇಷ್ಟವಿಲ್ಲದೆ ನೀವು ಹೊಟ್ಟಿಲಾದರ | ಕೆಟ್ಟ ಅನಿಸಿ ಗರ್ಭಪಾತ ಬಯಸಿದರ |
ಕೊಟ್ಟು ಗುಳಿಗಿ ಮುದಕಿ ಹಳ್ಳಿ ವೈದ್ಯರು | ಕಟ್ಟಕಡೆಗೆ ನಿಮ್ಮ ಲಾಗ
ಹೊಡಸತಾರ ||೭||
ರಾಷ್ಟ್ರಕೆ ಕಡಿಮೆ ಹುಟ್ಟುsದು ಬೇಕು | ಇದ್ದ ಜನಕೆ ಸುಖ ಅದರ ಸಾಕು |
ಸಾಲುಟಗಿಯವರು ನಿಂತಾರ ಪ್ರಚಾರಕ | ಬಿಚ್ಚಿ ಹೇಳತಾರ ತಿಳಿಮಾಡಿ ಚೊಕ್ಕ||೮||
___________________________
ನೇದ – ನೆಯ್ದ, ಓದ – ಒಯ್ದ, ತುಡುಗತನ – ಕಳ್ಳತನ
ರಚನೆ : ಶರಣಪ್ಪ ವಾಲಿ
ಕೃತಿ : ಶರಣಸ್ಮೃತಿ
Leave A Comment