ಗದ್ದಲ ಮಾಡಬ್ಯಾಡ್ರಿ ವೃದ್ಧ ತರುಣರೆಲ್ಲ ನೀವು ಸ್ಥಬ್ಧಾಗಿ
ಕೇಳಬೇಕು ಸಂಪೂರ್ಣ
ಶುದ್ಧವಾದ ಮನಸಿನಿಂದ ಮದ್ಯಪಾನವನು ಬಿಟ್ಟು ಬುದ್ಧಿವಂತರಾಗಬೇಕು
ಎಲ್ಲ ಜನಾ
ಖೋಡಿ ಸರಾಯದ ಸಂಗ ಮಾಡುವದಷ್ಟೇ ತಡ ಪಾಡಾಗಿ ಕಲಿಸುವದು
ತುಡಗತನ
ಹೆಂಡರ ಮಕ್ಕಳನ ಬಿಡಿಸಿ ಖಂಡಾ ತಿನ್ನಲಿಕ್ಕೆ ಹಚ್ಚಿ ಖಂಡಿತ
ಮಾಡತದ ಅಪಮಾನ
ಒಟ್ಟಿಗೇಳುದೇನೈತಿ ದುಷ್ಟಗುಣದ ಮೆಟ್ಟ ಇದು ಬಿಟ್ಟು
ನಾವು ದೂರ ಇರಬೇಕು ಅದನ
ಬೆರಿಕಿ ಬಹಳ ಬ್ರಿಟಿಶರು ಬ್ಯಾಡ ಅಂತ ಹೇಳಲಿಲ್ಲ ನೋಡಿ
ನೋಡಿ ನಗತಿದ್ದ್ರು ಕುಡಕರನ
ನೀಚ ಸರಾಯದ ಚಟ ಹಚ್ಚಿ ನಮಗ ಹುಚ್ಚ ಹಿಡಿಸಿ ಹೆಚ್ಚ
ಮಾಡಿಕೊಂಡ್ರು ತಮ್ಮ ಉತ್ಪನ್ನ
ಸಿಂದಿ ಸರಾಯದಿಂದ ಬರುವ ಒಂಭತ್ತು ಕೋಟಿ ರೂಪಾಯಿ
ಚೀಲಾ ತುಂಬಿ ತುಂಬಿ ಒಯ್ಯುತ್ತಿದ್ರು ಎಲ್ಲ ಹಣ

||ಚ್ಯಾಲ||

ಹಿಂದುಸ್ಥಾನ ಬಂಧುಗಳು ದುಃಖ ಪಡೆಯುವ ರೊಖ್ಖ ಎಲ್ಲ ಬಳದ್ಹೋತಿ
ಬೇರೆಯವರ ರಾಜ್ಯಾಡಳಿತೆಯಲ್ಲಿ ಹಿಂಗಾತಿ
ಹಿಂದುಸ್ಥಾನ ಎಲ್ಲಾ ಹಾಳುಮಾಡಿ ಹೋದರು ಓಡಿ
ಅತಿ ಬಹುಶಾಂತಿ ಈಗ ಜನತಾ ಸರಕಾರಾಗಿ ಸ್ವಾತಂತ್ರ್ಯ ಬಂದಿತ ಪೂರ್ತಿ
ದುಷ್ಟವ್ಯಸನಗಳೆಲ್ಲ ಅಳಿದು ನಡೆಯಬೇಕು ತಿಳಿದು ಮುಳಗಬೇಕ ಕ್ರಾಂತಿ
ಬಂದ ಸ್ವಾತಂತ್ರ್ಯ ಸ್ಥಿರವಾಗಿ ನಿಲ್ಲುವದು ನಮಗ ಇಲ್ಲ ಚಿಂತಿ

||ಏರು||

ಜನತಾ ಸರಕಾರಂದಮ್ಯಾಲ ಜನರೆಲ್ಲ ಮುಂದೆ ಬಂದು
ಮನಮುಟ್ಟಿ ಕಲಿಯಬೇಕು ಶಾಣೇತನ ಶುದ್ಧವಾದ ಮನಸಿನಿಂದ
ಎಷ್ಟ ಹೇಳಿದರ ದುಷ್ಟ ಚಟ ಬಿಡದ ಹೊರ್ತು ರಾಷ್ಟ್ರ
ಹ್ಯಾಂಗ ಆಗಬೇಕು ಉದ್ಧಾರ
ರಾಷ್ಟ್ರವೆಂಬು ಅಭಿಮಾನ ಹುಟ್ಟಬೇಕು ಎಲ್ಲರಲ್ಲಿ
ಗಟ್ಟಿಯಾಗಿ ನಿಲ್ಲುವದು ಸ್ವತಂತರ
ಮದ್ಯಪಾನದಿಂದ ಮೊದಲಿದ್ದ ಜ್ಞಾನ ಎಲ್ಲಾ ಹೋಗಿ
ಬುದ್ಧಿ ಗೇಡಿಯಾಗತೀರಿ ಇಲ್ಲ ಖಬರ
ಕುಡುಕತನದಿಂದ ನಾವು ನಡಕ ಬಿದ್ದು ಸಾವುತೇವಿ ದಡಕ್ಕ
ಹತ್ತೂದಿಲ್ಲ ನಮ್ಮ ವಿಚಾರ
ಪಂಡಿತ ನೆಹರು ಸರಕಾರ ಕಂಡು ಹಿಡಿದು ಇದನೆಲ್ಲ
ಖಂಡತುಂಡ ಹೇಳಿದಾರ ಕಾಯ್ದೆಸೀರ
ಫಾಯ್ದೆ ನಮಗ ಬ್ಯಾಡ ಅಂತ ಒಂಬತ್ತ ಕೋಟಿ
ಉತ್ಪನ್ನಕ ನೀರ ಹಣಿಸಿ ನಿಂತಾರ ಪಂಡಿತರ
ಪಾನಪ್ರತಿಬಂಧ ಆಗೂತನ ಸುಖಾ ಇಲ್ಲ ಜನಕ ಎಂಬುವ ಮಾತ
ನಿರ್ಣಯಮಾಡಿಕೊಂಡು ಪ್ರಚಾರ ನಡಿಸ್ಯಾರ ಸತತ
ಸೌಮ್ಯ ರೀತಿಯಿಂದ ಹಗಲೆಲ್ಲ ಹೇಳತಾರ ಮೊದಲ ಕುಡಿಬ್ಯಾಡರೆಂತ
ಕೇಳದವರ‍್ನ ಹಿಡದ ಮಾಡತಾರ ಬಂದೋಬಸ್ತ
ಆಗಬುದ್ಧಿ ಬರುವದು ಎಲ್ಲರಿಗಿ ಸರಾಯಿ ಕೂಡ ಕರಗಿ
ಆಗತದ ಶಾಂತಿ ಜ್ಞಾನ ಉದಯವಾಗಿ

||ಏರು||

ಸ್ವಲ್ಪ ಹೇಳಿದರೆ ಸಾಕ ಗಪ್ಪಚಿಪ್ಪ ಮಾಡಿದಂಥ ತಪ್ಪು
ಒಪ್ಪಿಕೊಂಡು ಬಿಡಬೇಕ ವ್ಯಸನ
ಇಚ್ಛೆಯಿಂದ ಸುರಾದೇವಿ ಮೆಚ್ಚಿದವನ ಸ್ವಚ್ಛ ಮಾಡಿ
ಹಚ್ಚತಾಳ ಹೊಲಮನಿ ಚಕ್ಕಬಂದಿಗಿ
ಬೋಳ್ಸಿ ಮತ್ತ ಮದ್ದ ಹಾಕಿ ಮುಂದೆ ಹುಚ್ಚ ಹಿಡಿಸಿ
ಕೊಡತಾಳ ಕಸಬರಿಗಿ
ಮರೆಯದ ಮಾತಲ್ಲ ಸುರೆವ್ವನ ವಂಶಾವಳಿ
ಬರದಿಟ್ಟುಕೊಳ್ಳರೆಪ್ಪ ಹಸನಾಗಿ
ಸುಳ್ಳ-ಕಳ್ಳರೆಂಬುವಂಥ ಮಕ್ಕಳನ್ನು ಹಡದಾಳು
ತಳ್ಳಿಕೋರರಿಗೆ ಆಗಬೇಕು ತಂಗಿ
ಪರದೇಶಿಯರ ಸಹಾಯದಿಂದ ಟೋಳಿಕಟ್ಟಿ ದೇಶದೊಳು
ದಂಗೆ ಎಬ್ಬಿಸಿ ಮಾಡತಿದ್ದಳ ಕೊಲೆ ಸುಲಿಗಿ
ಕಾಂಗ್ರೆಸ್ ಸರಕಾರ ಬಂದು ಕಂಡು ಈಕಿ ಅತ್ಯಾಚಾರ
ಬೇಡ ಅಂತ ಹೇಳತಾರ ಈಕಿ ಸಲಗಿ

||ಚ್ಯಾಲ||

ದೇಶ ಹಾಳಾಗತದ ಇವಳಿಂದ ಬಿಗವಿಗ್ಹಾಕಿ ತಂದ ಒಯ್ಯಬೇಕ ದೂರ
ಹೊರಗ ಹಾಕರೆಂತಾರ ನಮ್ಮ ನೆಹರು ಸರಕಾರ
ಸುರಾದೇವಿ ಭಕ್ತರಿಗೆ ಹಾದಿ ಹೇಳತಾರ ಬದ್ಧಿ ಮಾಡಿ ಜೋರದಾರ
ಸುರಾಪಾನಬಿಟ್ಟು ನೀವು ಆಗಬೇಕ ಉದ್ಧಾರ
ಶಾಣ್ಯಾರಾಗಿ ದೇಶಕ ಹಿತ ಮಾಡುದಕ ಸ್ವತಃ ದುಡಿಯರೆಲ್ಲರ
ನಡಾಕಟ್ಟಿ ನಿಲ್ಲಿರಿ ರಾಷ್ಟ್ರೋನ್ನತಿಗೋಸ್ಕರ

||ಏರು||

ಕ್ಷೋಣಿಯೊಳು ಹುಲಕುಂದ ಜಾಣ ಹಿರೇಮಠೇಶನು
ಪಾನನಿರೋಧಕ್ಕ ಮಾಡಿದ ಕವನ

   ನೇದ – ನೆಯ್ದ, ಓದ – ಒಯ್ದ, ತುಡುಗತನ ಕಳ್ಳತನ
ಸ್ವತಂತರ – ಸ್ವತಂತ್ರ,  ಖಬರ – ಎಚ್ಚರ, ನಡಕ
ನಡುವೆ


ಕರ್ತೃ :
 ಶಿವಲಿಂಗಸ್ವಾಮಿ ಹಿರೇಮಠ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ