ಅರಿವಿನ ಜಲ್ಮ ಅರಿತವ ಬ್ರಹ್ಮ ಅರಿಯದವಗತಿ ಬಿಕ್ಕಟ್ಟ
ಸುರಾಪಾನದಿಂದ ಶರೀರ ಕೆಡುವದು ಸಿರಿಯ ಸಂಪತ್ತು ಆಗುದು ನಷ್ಟ

ಚಿತ್ತವಿಕಾರವಾಗಿ ಉತ್ತಮರೆಂಬುವ ನಾಮಶೇಷ ಉಳಿದಿಲ್ಲ ಜನರ
ಹೆತ್ತ ತಾಯಿ ಹೆಂಡರ ಮಕ್ಕಳಿಗೆ ಭಿಕ್ಷಾಪಾತ್ರೆ ಕೊಡುವದು ಪೂರ

ಕುಡದ ಬಂದವರ‍್ನ ತಡವಿ ನೋಡಿದರ ದೃಢವಾಗಿ ಕೊಡುವರ ತಕರಾರ
ಒಡವಿ-ವಸ್ತ ಒತ್ತೆ ಇಡತಾರ ಕಣಗಂಡ ಮಡದಿ ಕೊರಳಾನ ಮಂಗಳಸೂತ್ರ

ದೇವಿಪುರಾಣ ಓದಿ ಭಾಮನ ಮಾಡತಾರ ನಾಮ ಮುಕ್ತಿಪದಕ್ಹೊಂದದವರ
ಹ್ಯಾವಕ್ಕಾಗಿ ತಮ್ಮ ಜೀವನ ಖಬರಿಲ್ಲದ ಕುಡದ ಮಾಡತಾರ ಎತ್ತಾರ

||ಚ್ಯಾಲ||

ಸಿಂದಿ ಶರೆ ಅಪು ಸೇವನ
ಮಂದಿಯೊಳಗ ಮಾಡತಾವ ಅಪಮಾನ
ಚಹ ಕಾಫಿ ಗಾಂಜಿ ವ್ಯಸನ
ದೇಹಮಾಡತಾವ ಬಾಳ ಕ್ಷೀಣ

||ಏರು||

ಪರಪೀಡೆ ಪರನಿಂದೆ ಸ್ಥಿರವಾಗಿ ನೆಲೆಗೊಂಡು ಗುರು
ಹಿರಿಯರ ದರಜಿಲ್ಲ ಏಟ  ||೧||

ಇಷ್ಟ ಚಟದೊಳಗ ಕೆಟ್ಟ ಬಾಳನೋಡ್ರಿ ಚುಟ್ಟ ಸಿಗರೇಟು ಸೇದುವದ
ಬಿಟ್ಟ ಬಿಡಿರಿ ಆಡು ಮುಟ್ಟುದಿಲ್ಲ ಅದನ ಬತ್ತಿ ಒಳಗ ಹಾಕಿ ಯಾಕ ಸೇದುವದ
ಊಟದ ರುಚಿ ಹೋಗಿ ನೋಟಗುಂದಿ ಪೊಡುಪೋಟ ಮುಂದ ಆಗುವದ
ಘಟ್ಟಿಕಫ ಲೊಟ್ಟಿ ಲೊಟ್ಟವುಗಳಕೂಡಿ ಕೆಟ್ಟ ರೋಗ ಉತ್ಪನ್ನವಾಗುವದ
ಆತ್ಮ ಇರುವ ಸ್ಥಾನ ಸ್ವಚ್ಛ ಇದ್ದರೆ ಅಂವಗ ಆಗುವದ ಆನಂದ
ಆನಂದದೊಳಗ ಆತ್ಮ ಇದ್ದರ ಅಲ್ಲಿಂದ ಶಾಂತಿ ಉತ್ಪನ್ನವಾಗುವದ

||ಚ್ಯಾಲ||

ಶಾಂತಿಯಿಂದ ಸರ್ವೆಲ್ಲ ಅಧೀನ
ಅಂತಃಕರಣ ಶುದ್ಧ ಆಗತದ ಪೂರ್ಣ
ಅಂತಃಕರಣ ಶುದ್ಧ ಆದವನ
ಅವನೇ ಲೋಕ ಪೂಜ್ಯನಾಗುವನ

||ಏರು||

ಸರ್ವರ ಶರೀರದಿ ಪರಮನು ಇರುವನು ಮರೆಯಾಗಿ ತೋರದೆ
ತನು ಮೆಟ್ಟ  ||೨||

ಪ್ರಾಣರಕ್ಷಕ ಅನ್ನ ನೀರ ಬೇಕು ಇವೇ ಮನುಷ್ಯನಿಗೆ ಚಟ
ಉಳಕಿ ಚಟ ಬಿಟ್ರ ಉಳಿಯತತಿ ಅನ್ನಾ ಬಿಟ್ರ ಹೋಗತೈತಿ ಜೀವ
ಆತ್ಮಜ್ಞಾನದಿಂದ ಅದನ್ನಾದರೂ ಬಿಟ್ಟಾರ ಸಾಧುಗಳಾಗಿ ಸೇರ‍್ಯಾರ ಬೆಟ್ಟ
ಸಾಧುಗಳು ಇದಕ ಬಾದ ಶರೀರ ಅಂತ ಭೇದಮಾಡಿ ಹೇಳುವರು ಸ್ಪಷ್ಟ
ಬೇಧ ಅಲ್ಲ ತತ್ವದ ಹಾದಿ ತಿಳಕೊಳ್ಳಾಕ ಸಾಧನಾಗೇತಿ ಇದ ಮುಕ್ಕಟ್ಟ

||ಚ್ಯಾಲ||

ತಿಳಕೋಳ ಬಿಡಿರಿ ಅವಗುಣ
ಸುಖ ದೊರಿತದ ಸಂಪೂರ್ಣ
ಸಿಂದಿ ಶರೆದೊಳಗಿಲ್ಲ ಬ್ರಹ್ಮಜ್ಞಾನ
ಮಂದಿಯೊಳಗ ಮಾಡತಾವ ಅಪಮಾನ

||ಏರು||

ಧರೆಯೊಳು ಹುಲಗುಂದ ದೊರಿ ಭೀಮಸಿಂಗನ ಕವಿಯೊಳು ಕಸರಿಲ್ಲ
ಏಟೇಟ   ||೩||

 ರಚನೆ :  ಹುಲಕುಂದ ಭೀಮಕವಿ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ