ಮೂಲ ಮಾತು ನಿಮಗ ಕಾಲಬಿದ್ದ ಹೇಳತೇನಿ
ಕೇಳಿಕೊಂಡು ನಡಿಬೇಕ್ರಿ ಸರ್ವಜನ
ದೇಶದಭಿಮಾನಕ್ಕಾಗಿ ತ್ರಾಸ ಆದರೂ ಚಿಂತಿಯಿಲ್ಲ
ಮೀಸಲಿದ್ದ ಖಾದಿಯ ವಸ್ತ್ರವನ ಧರಿಸಿರಿ ಇನ್ನ
ಮೂವತ್ತೇಳು ಕೋಟಿ ಮಂದಿ ಇಂದ
ಖಾದಿ ಧರಿಸಿದರ ಭರತಖಂಡ ಆಗತೈತಿ ಸ್ವಾಧೀನ
ಗೋಳಾಡಿ ಇಂಗ್ಲೀಷರು ಹಾಳಾಗಿ ಹೋಗತಾರ
ಕೂಳ ಇಲ್ಲದ ಸಾಯತಾರ ಗಿರಣಿ ಜನ / ಇಲ್ಲ ಅನಮಾನ

ಗಿರಣಿ ಸಹಾಯದಿಂದ ನಿಮಗ ವರ್ಣಿಸಲಿಕ್ಕೆ
ಬಾರದಂಥ ಅರಿವೆ ನೆಯ್ಯತಾರ ಇಂಗ್ಲೀಷ ಜನ
ಅಗ್ಗದಿಂದ ಅರಿವೆ ಮಾರಿ ಜಗ್ಗಿ ಹಣ ಒಯ್ಯತಾರ
ನುಗ್ಗ ಮಾಡಿ ಬಿಟ್ಟಾರಲ್ಲೊ ಹಿಂದುಸ್ಥಾನ / ಉಳಿಯಲಿಲ್ಲ ಏನ

ಅರಿವೆ ಮಾರಿ ನಿಮ್ಮಿಂದ ಅರವತ್ತು ಕೋಟಿ ಒಯ್ಯತಾರ
ಅರುವಗೆಟ್ಟ ಕೂತಿರೆಪ್ಪ ಎಲ್ಲ ಜನ
ಜಂತ್ರ ತಿರುವಿ ನೀವೆಲ್ಲರು ಸ್ವಂತ ನೂಲ ನೂತರ
ನಿಂತ ಹೊಯ್ಯಕೋತಾರ ಪರದೇಶಿ ಜನ / ಸಿಗಲಿಲ್ಲ ಅನ್ನ

ನಾಚಕಿಲ್ಲದವರು ನೀವು ನಾಡಿಗೆ ದೊಡ್ಡವರಪ್ಪ
ಹೇಸವಲ್ಲದ್ಯಾಕ  ಹೇಳ್ರೋ ನಿಮ್ಮ ಮನ
ದೇಶಾಭಿಮಾನ ಬಿಟ್ಟ ಖಾಸ ದ್ರೋಹಿಗಳ ಅರಿವೆ
ಬ್ಯಾಸರಿಲ್ಲದ ತೊಡತೀರಲ್ಲೊ ಎಲ್ಲ ಜನ / ಇಲ್ಲ ಸುಜ್ಞಾನ

ಜ್ಞಾನದಿಂದ ನಿಮ್ಮಲ್ಲಿಯ ಹೀನ ಗುಣ ತೆಗೆದು ಹಾಕಿ
ಮಾನವಂತರಾಗಿ ಖಾದಿ ವಸ್ತ್ರವನ
ಶ್ರೇಷ್ಠ ಅಂತ ಧರಿಸಿದರ ಸಾಷ್ಟಾಂಗ ಹಾಕತೇನಿ
ಕೋಟ್ಯಾವಧಿ ರೈತರ ಉಪಜೀವನ / ಆಗತತಿರಣ್ಣ

||ಚ್ಯಾಲ||

ರೈತರ ಹಿತದಗೋಸ್ಕರ ಖಾದಿ ಪ್ರಚಾರ
ಚಳವಳಿ ಮಾಡುವರ ಕಾಂಗ್ರೆಸ್ ಜನ
ಅವರು ಹೇಳಿದ್ಹಂಗ ನೀವು ಕೇಳಿಕೊಂಡು ನಡಿರಿನ್ನ
ಬಡತನದಿಂದ ಬಳಲೂರ ರೈತ ಜನರ ಕಷ್ಟ ಸೋಸೂರ ಹೊಟ್ಟೆಗಿಲ್ಲ ಅನ್ನ
ಸರಕಾರದ ಜನರು ತೆರೆದ ನೋಡವಲ್ಲರ ಕಣ್ಣ
ಸತ್ಯ ಶಾಂತಿ ತತ್ವಬೋಧಿಸುವರು ಹುಟ್ಟಿ ಬಂದರೆ
ತೊಟ್ಟ ಅವತಾರ ಗಾಂಧಿ ಭಗವಾನ
ಅನ್ನಹಾಕಿ ರೈತರನ್ನ ಸಾಕಿ ಸಲವುತಾನ ಪೂರ್ಣ

||ಏರು||

ಅಜ್ಜ ಗಾಂಧಿ ಮಾತಿನಂತೆ ಸಜ್ಜಾಗಿ ನಡೆದರ
ಲಗ್ಗ ಬಗ್ಗಬಡುತಾನ ದುಷ್ಟರನ||೧||

ಒಂದೇ ಮನಸ್ಸಿನಿಂದ ಕೂತ ವಂದೇ ಮಾತರಂ ಅನ್ನುತ
ಚಂದದಿಂದ ತಿರುವಿರೆವ್ವ ಜಂತ್ರವನ

ಜಂತ್ರದ ಅರಿವೆ ಉಟ್ಟ ತೊಟ್ಟ ದೇಶೀ ಹಸರಬಳಿ ಇಟ್ಟ
ಸ್ವಂತ ಹಿಂದುದೇಶದ ಅಭಿಮಾನ / ಹಿಡಿರೆವ್ವ ಇನ್ನ

ಒಂದುವರಿ ತಿಂಗಳ ನೀವು ಒಂದೇ ಮನಸ್ಸಿನಿಂದ ಕೂತು
ಚಂದದಿಂದ ಅರೆಯಿರೆವ್ವ ಹತ್ತಿಯನ
ಬೆಸೆಕಟ್ಟಿ ನೀವೆಲ್ಲರು ಕುಸಿಲಿಂದ ಕುತಗೊಂಡ
ಕಸರಿಲ್ಲದ ಹೊಡದ ಅರಳಿಯನ / ಹಾಕರಿ ಹಂಜಿಯನ

ಇಷ್ಟೆಲ್ಲ ಕೆಲಸ ನೀವು ಕಷ್ಟಪಟ್ಟು ಮಾಡಿದರ
ಶ್ರೇಷ್ಠ ಆಗತತಿ ನಿಮ್ಮ ಮನೆತನ
ಸಾಲ ಹರದ ನೀವೆಲ್ಲಾರು ಹಾಲು-ಬಾನ ಉಣತಿರಿ
ಖಾಲಿ ಕುಂಡ್ರ ಬ್ಯಾಡಿರವ್ವ ಎಲ್ಲ ಜನ / ಸಿಗತೈತಿ ಹಣ

ಹಣ ಇಲ್ಲದಕ್ಕ ನೀವು ಹೆಣದಂಗ ಕಾಣತೀರಿ
ಕೊರಳಾನ ಬಂಗಾರ ಸಾಮಾನ
ಒತ್ತೆ ಇಟ್ಟ ನೀವೆಲ್ಲರು ಕಟ್ಟತೀರ ಕರಿಮಣಿ
ನಷ್ಟಮಾಡಿ ಬಿಟ್ಟಿರೆವ್ವ ಮನಿತಾನ / ಎಂತ ದಡ್ಡತನ

ಶಾಂತಿಯಿಂದ ಶ್ಯಾಣ್ಯಾರಾಗಿ ಭ್ರಾಂತಿ ಬಿಟ್ಟ ಕೇಳಬೇಕ
ಸತ್ಯವಂತ ಮಹಾತ್ಮರ ವಚನವನ
ಬಂಗಾರೇನು ಕಮ್ಮಿಯಿಲ್ಲ ಬಾಳ ದಿವಸ ಹೋಗುದಿಲ್ಲ
ಹೇಳಿದ್ಹಂಗ ಕೇಳಿದರ ಎಲ್ಲ ಜನ / ಸಿಗತತಿ ಪುನಃ

||ಚ್ಯಾಲ||

ಬಂಗಾರದಿಂದ ಶೃಂಗಾರ ಮೊದಲಿನವರ ಜಂತ್ರ ತಿರವಿ ದಿನ
ಬಂಗಾರ ಘಳಿಸಿ ಮಾಡಿಸಿಕೊಂಡಿದ್ದರ ಸಾಮಾನ
ಕೊಡಿ ಅರವಿ ಅಂತ ತೊಡತಿದ್ದ್ರ ನೂಲ ತಗಿತಿದ್ದ್ರ ರೂಪಾಯಿ ಘಳಸತಿದ್ದ್ರ
ಮೊದಲಿನ ಜನ ಹಿಡಿರೆಂತ ಬಿರಾಡಕ್ಕ ತೆಗೆದುಕೊಡತ್ತಿದ್ದ್ರ ಹಣ
ಈಗಿನವರು ಚೈನಿ ಮಾಡತರ ಬೈತಲಿ ತಗಿತಾರ
ಎಣ್ಣಿ ಹಚ್ಚಿ ದಿನ ಅಳಗಾಲ ಬಡದರೂ ಉಳಿಯಲಿಲ್ಲ ಉತ್ಪನ್ನ

 

|ಏರು||

ಚರಖಾ ತಿರವಿ ನೀವೆಲ್ಲಾರು ದೊರಕಿಸಬೇಕ ಉತ್ಪನ್ನ
ತರಕಮಾಡಿ ಬಿಡರೆವ್ವ ಚೈನಿ ಗುಣ||೨||

ಇಷ್ಟಲ್ಲ ಕೇಳಿ ನೀವು ನಿಷ್ಠಾದಿಂದ ನಡೆದರ
ಶ್ರೇಷ್ಠವಾಗತೈತಿ ನಮ್ಮ ಹಿಂದುಸ್ಥಾನ
ಯಾವದೇನು ಕಡಮಿಯಿಲ್ಲ ಎರಡನೇಯವರು ಬೇಕಾಗಿಲ್ಲ
ಸ್ವಾವಲಂಬಿಯಾಗಿ ನಮ್ಮ ಎಲ್ಲ ಜನ / ದುಡಿಯಬೇಕು ದಿನ

ರಾಟಿ ಮೇಟಿ ಉದ್ಯೋಗ ನೀವು ರಾತ್ರಿ ಹಗಲ ನಡಿಸಿದರ
ಖಾತ್ರಿಯಿಂದ ಹೋಗತತಿ ಬಡತನ
ಕಂಬಾರ ಬಡಿಗೇರ ಪಿಂಜಾರ ನೇಕಾರ
ತಟಗಾರ ಬಣಗಾರ ಉಪಜೀವನ / ಸಾಗತತಿ ದಿನ

ಖಾದಿಕೇಂದ್ರ ಗ್ರಾಮೋದ್ಯೋಗ ಚರಖಾ ಸಂಘ
ಮೊದಲ ಮಾಡಿ ಎಷ್ಟೋ ಸಂಘ ಮಾಡಿದಾರ ಸ್ಥಾಪನ
ಪೊಡವಿಯೊಳಗಿನ ಕೂಲಿಕಾರ ದೃಢದಿಂದ
ಇದರೊಳಗ ದುಡದರ ಪ್ರತಿದಿನ / ಸಿಗತತಿ ಹಣ

ಹನ್ನೊಂದು ಸಾವಿರದ ಐದನೂರ
ಎಂಬತ್ತೊಂದ ಮಂದಿ ನೇಕಾರ ಜನ
ಒಂದ ಲಕ್ಷ ನಾಲ್ವತೊಂಭತ್ತು ಸಾವಿರದ
ಒಂದನೂರ ಇಪ್ಪತ್ತೊಂಬತ್ತು ಜನ / ನೂಲತಾರ ದಿನ

ಹತ್ತುಲಕ್ಷ ಹತ್ತು ಸಾವಿರದ ಒಂಬೈನೂರಾ ತೊಂಭತ್ತೇಳು
ವರ್ಷ ಉಳಸತಾರ ಇಷ್ಟ ಹಣ
ಕೋಟಿ ಮಂದಿ ನೂಲವರು ತೊಂಬತ್ತ ಲಕ್ಷನೆಯ್ಯುವರು
ಬಿಟ್ಟುಬಿಡದೆ ದುಡದರ ಎಷ್ಟೋ ಹಣ / ಉಳುತತಿ ದಿನ

||ಚಾಲ||

ಕಷ್ಟ ಪಟ್ಟ ನಿತ್ಯ ದುಡಿಬೇಕ ಕೈಕೆಲಸದಕ
ನೂಲ ತೆಗಿಬೇಕ ಖಾದಿ
ನೆಯ್ದು ದಿನಾ ಚರಖಾ ಸಂಘಕ್ಕೆ
ಓದ ಕೊಡಬೇಕ ನೇಕಾರ ಜನ
ಮೆಂಬರಾಗಬೇಕು ಖಾದಿ ತೊಡಬೇಕ
ಬೆಂಬಲ ಕೊಡಬೇಕ ಕಾಂಗ್ರೆಸಕ ಪೂರ್ಣ
ಅಂದ್ರ ಸ್ವರಾಜ್ಯ ಆಗತತಿ ಸ್ವಾಧೀನ
ಹಿಂಸಾ ಬಿಡಬೇಕ ಸತ್ಯ ನುಡಿಬೇಕ
ಕೊಳ್ಳುದ ಬಿಡಬೇಕ ಪರದೇಶಿ ಸಾಮಾನ
ಇದರಂತೆ ನಡೆದು ನೀವು ಘಳಿಸಬೇಕು ಉತ್ಪನ್ನ

||ಏರು||

ದೋಷರಹಿತ ಗಾಂಧಿಯವರ ದಾಸನಾದ
ಹುಲಕುಂದ ದೇಶಭಕ್ತ ಭೀಮರಾಯರ ಕವನ||೩||

   ಕೂಳ – ಆಹಾರ, ಜಗ್ಗಿ – ಅಪರಿಮಿತ, ನುಗ್ಗ ಮಾಡು – ಹಾಳುಮಾಡು,

   ಬಳಲೂರ – ಬಳಲುವರು,  ಲಗ್ಗ – ಬೇಗನೆ,  ಬಗ್ಗಬಡುತಾನ – ಸಂಹಾರ ಮಾಡುವನು,  ಜಂತ್ರ – ಕೈರಾಟೆ

 ರಚನೆ :  ಹುಲಕುಂದ ಭೀಮಕವಿ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ