೨೮
ಎಲ್ಲಿ ಕೂತಿತ್ತು ಯಾವ ಕಡಿಂದ ಬಂತ ಏನೇನ ಮಾಡತೈತಿ ಚಳವಳಿ
ಎಲ್ಲಾ ಜಾತಿ ಕೂಡಿ ಏಕ ಆಗುದಂತ ನಮಗ ಬಂದತರಿ ಎಂಥಾ ಬಗಳಿ
ಹೀಂಗ ಅನ್ನುವರು ತುಂಬ್ಯಾರ ನಾಡಿನ್ಯಾಗ ಧರ್ಮದ ಅಭಿಮಾನ ಅವರಿಗೆ ಹೆಚ್ಚ
ಹ್ಯಾಂಗ ಮಾಡುದು ಕಾಂಗ್ರೆಸದವರ ಮಾಡಿ ಇಟ್ಟರಂತಾರ ಪೇಚ
ಹರಿಜನರ ಕಂಡರ ದೂರ ಸರಿಯತಾರ ಮುಟ್ಟಬ್ಯಾಡಂತ ಹೇಳತಾರ ಸ್ವಚ್ಛ
ಹೊರಗ ಹೋದರ ಮರತಿರತಾರ ಕುಲ ಮನಿಗಿ ಬಂದರ ಆಗತದ ಉಚ್ಚ
ಮೋಟಾರದವರು ಇವರನ್ನ ಒಳಗ ತುರುಕಿ ತುಳಲಿಕ್ಕೆ ಹತ್ತಿರತಾರ ಕಚಪಚ
ಏಟು ಉಳಿಯುವದಿಲ್ಲ ಕೈಯಾನ ರೊಖ್ಖ ಕೊಟ್ಟು ಮೈಯೆಲ್ಲ ಆಗತದ
ನುಚ್ಚ ನುಚ್ಚ

||ಚ್ಯಾಲ||

ಚಂಹದಂಗಡ್ಯಾಗ ಹೊಕ್ಕು ಏಕಾಗಿ ಮನ್ಯಾಗ ಆಗಿರತಾರ ದೊಡ್ಡ ಯೋಗಿ
ಹೇಳಿದರ ಬರತೈತಿ ನಗಿ ಸೂಳ್ಯಾರ ಮನ್ಯಾಗ ಅವರ ಗುಂಡಗಡಿಗಿ
ಎಲ್ಲಾ ಜಾತಿಯವರು ಕೂಡಿ ಏಕಾಗಿ ಸಿಂದಿಮಗಿ ಹಚ್ಚುವರು ಬಾಯಿಗಿ

||ಏರು||

ಹೊಲ್ಯಾರನೆಲ್ಲ ನೆಲದ ಮ್ಯಾಲ ಇಟ್ಟ ಉಳದವರು ಅದಾರ ಅಂತರಾಳಿ||೧||

ಖಂಡಾ ತಿನ್ನುವ ಕುಲ ಕಡಿಮಿ ಅಂತ ನಮ್ಮವರಿಗೆ ನುಡಿಯುವದು
ಹಂದಿ ತಿನ್ನುವ ಇಂಗ್ಲಂಡದವರಿಗೆ ಒಳಗೆ ಖುರ್ಚಿ ಹಾಕಿ ಕೂಡ್ರುಸುವದು
ಹದಿನೆಂಟು ಪುರಾಣ ಬರೆದ ವಯಾಸ ಋಷಿ ಹೊಲೆಯರ ಹೊಟ್ಟಿಲಿ ಹುಟ್ಟಿದ್ದ
ಮಾದಗಿತ್ತಿಯ ಮಗ ಮಾತಂಗ ಋಷಿ ಅರುಂಧತಿ ಜಾತಿ ಹೊಲೆಯರದ
ಹರಳಯ್ಯ ಸಮಗಾರ ಕಕ್ಕಯ್ಯ ಡೋಹರ ಚನ್ನಯ್ಯ ಮಾದಿಗರಂವ ಇದ್ದ

||ಏರು||

ಎಲ್ಲ ಜಾತಿ ಒಳಗ ಇದ್ದವರ ಬಲ್ಲಿದರು ಬಹಳ ಹರಿಜನರ
ಅದರಿಂದ ಅನಿಸ್ಯಾರ ಮುನೇಶ್ವರ ಮುದದಿಂದ ಬಸವನ ಶರಣರ
ಹೃದಯದಲ್ಲಿ ಮಲಿನ ಇಲ್ಲದವರು ಪದವಿಗೇರತಾರ ಎತ್ತರ
ಅಲ್ಲದ ಕೆಲಸಮಾಡಿ ಊರಾನ ಹೊಲೆಯರಿಗೆ ಯಾರ ಅನ್ನಬೇಕ್ರಿ
ಛೀ ಹಳಿ  ||೨||

ಹೊಲ್ಯಾರ ಕುಂತ ನಿಮಗ ಸಲಾಮ ಮಾಡಿದರ ದಾದ ಮಾಡದ
ಮುಜರಿ ಹೋಗತೀರಿ
ಇಲಾಖೆ ಸಾಹೇಬ ಬಂದ ದರ್ಪ ಮಾಡಿದರ ಅಡರಾಸಿ
ಮುಜರಿ ಮಾಡತೀರಿ
ಕಾಲಾನ ಕೆರವ ಮಾಡುವವರಿಗೆ ಅಂಜ ಅಂದರ‍್ಹೆಂಗ ಅಂಜತೀರಿ
ಪೋಲೀಸ ಕೋರ್ಡ ತಕ್ಕೊಂಡರ ಅಡರಾಸಿ ಅಡ್ಲಿ ಹಾಕತೀರಿ
ಅಂಜುದು ಅಂಜುಸುದು ಎರಡೂ ಪಾಪ ಅಂತ ಗಾದಿ ಮಾತಿನೊಳಗ ಹೇಳತೀರಿ
ಸಲಾಮ ಮಾಡಿದವರಿಗೆ ಸಹಾನುಭೂತಿ ತೋರಿಸಿ ಅವರನ್ನು
ಉದ್ಧಾರ ಮಾಡಬೇಕರಿ

||ಚ್ಯಾಲ||

ಅಸ್ಪೃಶ್ಯರಿಗಾಗಿ ಗಾಂಧಿಯವರು ಉಪವಾಸ ಹಿಡಿದಿದ್ದರ
ಬಂದ ಹೇಳ್ಯಾರ ಅಂಬೇಡ್ಕರ ಗಾಂಧಿಯವರ ಉಪವಾಸ ಬಿಡಿಸ್ಯಾರ
ಸರ್ವರೆಲ್ಲ ಕೂಡ ವತ್ತರ ಹರಿಜನರ ಮಾಡಿರಿ ಉದ್ಧಾರ

||ಏರು||

ಮೂಲ ಪುರುಷನ ಮಾತು ಪಾಲಿಸಿರೆಂದು ಭೀಮನ ಶಿಷ್ಯ ಹೇಳಿದ

 ರಚನೆ :  ಹುಲಕುಂದ ಭೀಮಕವಿ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ