ಗ್ರಾಮಸೇವಾ ನಿಗದಿ ಸಹಕಾರ ತತ್ವ ಸಂಘದ ನಾ |
ಗರಿಕರಲ್ಲಿ ನನ್ನದೊಂದು ಸವಿನಯ ಪ್ರಾರ್ಥನಾ
ಭಾರತ ಪ್ರಧಾನಮಂತ್ರಿ ಶ್ರೀಮತಿ | ಸಾರಿದ ಸಮತಾವಾದದ ಕೃತಿ |
ಸಾರುವೆ ಇಪ್ಪತ್ತಂಶದ ಆರ್ಥಿಕ ಕಾರ್ಯಕ್ರಮವನು ||೧||
ಸರ್ವರ ಹೃದಯದಲ್ಲಿ ಇರುವ ಸರ್ವಾತ್ಮನೊಬ್ಬನೇ ಇದ್ದು |
ಓರ್ವ ಓರ್ವರಲ್ಲಿ ಇರುವ ಅಸಮಾನತೆಯನು |
ಸರಿಬಾರದಕ್ಕ ಶ್ರೀಮತಿ ಅರಿತು ತೆಗೆದು ತುರ್ತಪರಿಸ್ಥಿತಿ |
ಅಪತ್ಕಾಲ ತೆಗೆಯಲು ಇಪ್ಪತ್ತಂಶದ ಕಾಯ್ದೆಯನು ||೨||
ಖರೇ ದುಡಿಯುವ ಬಡವರತನಕ ಸರಕಾರ ಸಹಾಯ ಬರೂದರಾಗ |
ಸಿರಿವಂತರೇ ನುಂಗುವರು ಎಲ್ಲಾ ಹಣವನು |
ಸಂಪತ್ತೆಲ್ಲಾ ಶ್ರೀಮಂತರಿಗೆ | ಬರೇಕಾಗದ ಬಡವನ ಕೈಗೆ |
ಬರಿಮೈ ಅರಹೊಟ್ಟಿ ಸಾಯುವತನಕ ಕೇಳುವರಾರಿಲ್ಲ ||೩||
||ಚ್ಯಾಲ||
ಆರ್ಥಿಕ ವಿಷಮತೆ ಬಿಡಿಸಿ ಸಮಾನತೆ ಗಳಿಸಿ |
ಬಡವರನು ಮೇಲೆತ್ತಿ ಸರ್ವರ ಸುಖದ ಸಲುವಾಗಿ||೧||
ಎಲ್ಲರೂ ಓದಿ ಜಾಣರಾಗಿ ಸ್ವಂತ ಸುಖಕ್ಕಾಗಿ ಸರ್ವರ |
ಸಹಕಾರ ಬಯಸುತಲಿ ತಾನಿರಬೇಕು ಎಲ್ಲರಿಗಾಗಿ||೨||
ಹನಿಹನಿ ಕೂಡಿ ಹಳ್ಳವಾಗಿ | ತೆನೆಗಳಿಂದಲೇ ರಾಸಿಯಾಗಿ |
ಎಳೆಗಳು ಕೂಡಿಯೇ ಹಗ್ಗವಾಗಿ | ಆ ಶಕ್ತಿಯೇ ಅಮಿತವಾಗಿ||೩||
||ಏರು||
ಈ ಜನತಾ ಸಹಕಾರ ಶಕ್ತಿಯ ತಿಳಿಸಿ ಸ್ಥಾನಿಕ ಸಂಘ ಸಂಸ್ಥೆಯ ಬೆಳೆಸಿ |
ಹಳ್ಳಿ ಹಳ್ಳಿಗೆ ಬೆಳೆಸುತರಲಿರುವರು ಗ್ರಾಮೋದ್ಯೋಗವನು ||೧ನೆಯ ಚೌಕ||
ಭಾರತ ಪ್ರಧಾನಮಂತ್ರಿ ಶ್ರೀಮತಿ ಸಾರಿದ ಸಮತಾವಾದದ ಕೃತಿ
ಸಾರುವೆ ಇಪ್ಪತ್ತಂಶದ ಆರ್ಥಿಕ ಕಾರ್ಯಕ್ರಮವನು ||
ಬಡವರೆಲ್ಲ ಕೂಡಿಕೊಂಡು ಹಲವು ರೀತಿ ಮಾತಾಡತಾರ ಸ್ವರಾಜ್ಯ
ಸಿಕ್ಕರೂ ಸುಖವಿಲ್ಲಂತ ತಮ್ಮತಮ್ಮೊಳಗ |
ಸರಕಾರ ಹೊರಡಿಸಿ ತರತರ ಯೋಜನೆ ಮಾಡಿದ ಮಹಾಕಾರ್ಯ ಸಾಧನೆ
ಅರಿತರೆ ಬರತೈತಿ ತಪ್ಪಿನ ತಿರುಳು ನಮ್ಮ ಮನದಾಗ ||೧||
ಪೂರ್ವದಲ್ಲಿ ಬದುಕಿದ ಜನಕ | ಸಂಖ್ಯಾ ಕಡಿಮಿ ಇದ್ದ ಮೂಲಕ |
ಅನ್ನ ಅರಿವೆ ಹೈನುಶಕ್ತಿ ಬಲ ಹೆಚ್ಚಾಗ
ಮೀರಿ ಬೆಳೆದ ಜನಕ್ಕಿಂದು ಹೆಚ್ಚು ಅನ್ನ ಅಭಾವ ಬಂದು |
ಎಷ್ಟು ಬೆಳೆದರು ಸಾಲುವಲ್ಲದು ಎಲ್ಲರಿಗಿ ಈಗ ||೨||
ಗರೀಬರಲ್ಲಿ ವರ್ಷಂಪ್ರತಿ ಹದಿಮೂರು ದಶಲಕ್ಷ ಅಂದಾಜ ಹೆಚ್ಚಿಗೆ
ಸಂತಾನ ಹುಟ್ಟತಾವ ದೇಶದೊಳಗ |
ನೂರಾಹನ್ನೆರಡು ಸಾವಿರಸಾಲಿ ಮುನ್ನೂರಾ ಅರವತ್ತು ಸಾವಿರ ಇಲ್ಲಿ |
ಮಾಸ್ತರರು ಬೇಕು ಹೆಚ್ಚಿನ ಜನಕ ಇದ್ದ ಗಳಿಕ್ಯಾಗ ||೩||
||ಚ್ಯಾಲ||
ಇಪ್ಪತ್ತು ಲಕ್ಷ ಮನಿಬೇಕು ವಸತಿ ಸೌಕರ್ಯಕ |
ಕೋಟಿಗಟ್ಲೆ ಅರವಿ ಅಂಚಡಿ ತೊಡಲಾಕ | ಉದ್ಯೋಗ ಅನ್ನ ಎಲ್ಲ ಬೇಕು||೧||
ಅತಿವೃಷ್ಟಿ ಅನಾವೃಷ್ಟಿಯಿಂದಲೆ | ಬೆಳೆಯು ಕಡಿಮೆಯಾಗಿ
ಕಾಳುಕಡಿ ಸಾಲದಾಯ್ತು ಸರ್ವಜನರಿಗಿ | ಅದಕೆ ಸಾಲಕಾಗಿ ಬ್ಯಾರೆ
ದೇಶಕ ತಲೆಬಾಗಿ ||೨||
ಕುಟುಂಬ ಯೋಜನೆಗಾಗಿ | ಸರ್ವರಿಗಿ ತಿಳಿಸುವದಕಾಗಿ |
ಮಿತ ಸಂತಾನದರಿವಿಗಾಗಿ | ಮಾಡುವರು ಖರ್ಚು ಮಿತಿಮೀರಿ||೩||
ಶ್ರೀಮತಿಯವರ ತತ್ವತಿಳಿದು | ಭಾರತೀಯರ ಭಾವಬೆಳೆದು
ಸೂಕ್ತ ಕಾಯ್ದೆ ತಿಳಿದು ತರಬೇಕು ಕಾರ್ಯಾಚರಣಾ ||೨ನೆಯ ಚೌಕ||
ಭಾರತ ಜನರ ಬದುಕಿಗಾಗಿ | ಅನ್ನಾಹಾರ ಅಭಿವೃದ್ಧಿಗಾಗಿ ತರತರ
ತೆಗೆದು ಸರಕಾರ ಕೊಡುವದು ಸಾಲವನು |
ಹೊಸ ಹೊಸ ತಳಿಯ ಬೀಜಗಳನ್ನು ನೂತನ ಯಾಂತ್ರಿಕ ಉಪಕರಣವನು
ರಸಗೊಬ್ಬರ ಕೀಟನಾಶಕ ಪುಡಿಗಳು ಎಣ್ಣೆಯನು ||೧||
ನೀರಾವರಿ ಭೂಮಿಯಲ್ಲಿ ಬೋರ ಮಾಡಿ ನೀರು ತೆಗೆದು ನೀರೆತ್ತುವ
ಯಂತ್ರ ಕೂಡಿಸಿ ಅನುದಿನಾ |
ಹರಿದು ಹೋಗುವ ಹೊಳೆಹಳ್ಳಕ್ಕೆ ನೀರಕಟ್ಟಿ ನೀರಾವರಿಗೆ |
ನೀರು ಕೊಡುವರು ಸೂರೆಮಾಡಿ ಸರಕಾರದ ಹಣ ||೨||
ಭೂಮಿಯಿಲ್ಲದ ಬಡರೈತರಿಗೆ ಭೂಮಿ ಹಂಚಿಕೊಟ್ಟು ಅವರಿಗೆ |
ಮನೆ ಕಟ್ಟಲು ಕೊಡುವರು ಮತ್ತೆ ಹೆಚ್ಚಿನ ಸಾಲವನು |
ಕೃಷಿ ಕಾರ್ಮಿಕ ಬಾಂಧವರಿಗೆ ದುಡಿಸಿಕೊಂಡು ಸರಿವೇಳೆಗೆ |
ದುಡಿತಕೆ ಸರಿಯಾಗಿ ಕೂಲಿಕೊಡುವಂತೆ ತೆಗೆವರು ಯೋಜನೆ ||೩||
||ಚ್ಯಾಲ||
ಸಿರಿವಂತರ ಭೂಮಿಯನು | ಹೆಚ್ಚು ಇದ್ದುದನು
ಬಡವರಿಗೆ ಹಂಚಿ ಹೇಳುವರು | ಕಂತಿನಲಿ ಕೊಡಿರಿ ಹಣವನ್ನು||೧||
ಹರಿಜನ ಗಿರಿಜನರೆಲ್ಲರಿಗೆ | ನಿರ್ಗತಿಕರಾದವರಿಗೆ |
ಕೊಡುತಿಹರು ಸಾಲ ಕರುಣೆಯಲಿ | ಸುಲಭ ಕಂತಿನಲಿ ಪಡೆಯುತ||೨||
ಆವಶ್ಯ ವಸ್ತುಗಳನೆಲ್ಲ | ಕಡಿಮೆ ಬೆಲೆಯಲ್ಲಿ |
ಸರ್ವರಿಗೆ ಮುಟ್ಟಿಸುವರ | ಎಲ್ಲರ ಕ್ಷೇಮ ಬಯಸುವರು||೩||
||ಏರು||
ದುಡಿಯುವ ಶಕ್ತಿ ಇಲ್ಲದವರಿಗಿ | ಅಂಗಹೀನ ಊನರಿಗೆಲ್ಲ
ಮಾಶಾಸನವ ನೀಡುತ ಅವರ ಸುಖವನು ಬಯಸುವರು ||೩ನೆಯ ಚೌಕ||
ಭಾರತಪ್ರಧಾನಮಂತ್ರಿ ಶ್ರೀಮತಿ | ಸಾರಿದ ಸಮತಾವಾದದ ಕೃತಿ |
ಸಾರುವೆ ಇಪ್ಪತ್ತಂಶದ ಆರ್ಥಿಕ ಕಾರ್ಯಕ್ರಮವನು ||
ಹಿರಿಯರ ಹಳೆಯ ಸಾಲಗಳಿಗೆ | ಕಿರಿಯರು ದುಡಿವ ಜೀತಪದ್ಧತಿಗೆ |
ನಿರ್ಮೂಲನದ ಸೂಕ್ತ ಕ್ರಮವನು ಜಾರಿಗೆ ತಂದಿಹರು ||
ಬಡವರಿಗಾದ ತೊಂದರೆಗಳಿಗೆ ಊರೊಳಗಿನ ಮೀರಿದ ಸಾಲಕೆ
ಸರಕಾರದಿದಲೇ ಸಣ್ಣ ಕಂತಿನ ಸಾಲವನೀಯುವರು||೧||
ಏರಿಕೆ ಬೆಲೆಯ ಪರಿಸ್ಥಿತಿಗೆ ಸಣ್ಣ ಸಾಲಸಿಗದವರಿಗೆ ಲಾಯಸನ್ಸ ಇಲ್ಲದ
ಸಿರಿವಂತರು ಸಾಲಕೊಟ್ಟಿಹರು |
ನೂರಕ್ಕನೂರು ಬಡ್ಡಿಕೂಡಿ ಮೀರಿ ರೊಕ್ಕದ ಲೆಖ್ಖ ಮಾಡಿ
ವತ್ತಿ ಹಿಡಿದ ವಸ್ತು ಒಡವಿ ಮರಳಿ ಕೊಡಿಸುವರು ||೨||
ಕುರಿಕೋಳಿ ಸಾಕುವವರಿಗೆ ಕಂಬಾರ ಕುಂಬಾರ ಪತ್ತಾರರಿಗೆ ಕೈಮಗ್ಗದ
ನೇಕಾರರಿಗೆ ಸಾಲ ಕೊಡಿಸುವರು |
ಕಿರಿಬೆಲೆಯ ಮಾಲು ಕೊಡಿಸಿ ಯೋಗ್ಯಬೆಲೆ ನಿಗದಿಪಡಿಸಿ
ಸರ್ವರಿಗೆ ಮುಟ್ಟುವಂತೆ ನೋಡಿಕೊಳ್ಳುವರು ||೩||
||ಚ್ಯಾಲ||
ನೀರೆತ್ತುವ ಮೋಟಾರವ ಕೊಡಿಸಿ ವಿದ್ಯುತ್ ಒದಗಿಸಿ |
ನೀರಾವರಿಯ ಪ್ರಸಾರ | ಹಳ್ಳಿಹಳ್ಳಿಗೆ ಬೆಳಕಿನುಪಕಾರ||೧||
ಊರ ಹೊರಗಿನ ಮರಡಿಯಲ್ಲಿ | ಪ್ಲಾಟುಗಳ ನಿರ್ಮಿಸಿ |
ಯೋಗ್ಯಬೆಲೆಗೆ ಕೊಡಿಸುವರು | ಮಾರಿದರೆ ಶಿಕ್ಷೆ ವಿಧಿಸುವರು||೨||
ಸರಕಾರದ ತೆರಿಗೆ ತಪ್ಪಿಸಿ | ಮಾಲು ಸಾಗಿಸುವ |
ಕಳ್ಳ ಕದೀಮ ವರ್ತಕರ | ಲಾಯಸನ್ಸ ಕಸಿದುಕೊಳ್ಳುವರು||೩||
ವಂಚಕ ವ್ಯವಹಾರ ಮಾಡುವವರಿಗೆ | ಲಂಚ ತಿನ್ನುವ ನೌಕರರಿಗೆ |
ಹೊಂಚು ಹಾಕಿ ಹಿಡಿದು ದಂಡ ಶಿಕ್ಷೆ ವಿಧಿಸುವರು ||೪ನೆಯ ಚೌಕ||
ಭಾರತ ಪ್ರಧಾನಮಂತ್ರಿ ಶ್ರೀಮತಿ | ಸಾರಿದ ಸಮತಾವಾದದ ಕೃತಿ |
ಸಾರುವೆ ಇಪ್ಪತ್ತಂಶದ ಆರ್ಥಿಕ ಕಾರ್ಯಕ್ರಮವನು ||
ಆದಾಯದ ಆಸ್ತಿ ಬೆಳೆಸಿ ಆಡಳಿತೆಯ ಖರ್ಚುತಗ್ಗಿಸಿ | ಅಧಿಕ
ಉತ್ಪಾದನೆಯ ಕಾರ್ಯ ಮಾಡುತಿರುವರು |
ಸಾಮಾನ್ಯ ಜನರನುದ್ಧರಿಸಿ | ಹಿಂದುಳಿದವರನೆತ್ತಿ |
ಉದ್ಯೋಗಕ್ಕೆ ಅವಕಾಶಕೊಡುವ ಉದ್ದಿಮೆ ತೆಗೆದಿಹರು ||೧||
ಜಾಣರಾದ ಬಡಹುಡುಗರಿಗೆ | ಉಚಿತ ಊಟ ಬಟ್ಟೆ ಕೊಟ್ಟು
ಅಗತ್ಯ ವಸ್ತು ಅಗ್ಗದರದಲಿ ದೊರಕಿಸಿ ಕೊಡುವರು |
ವಿದ್ಯಾಕಲಿಯುವ ವಿದ್ಯಾರ್ಥಿಗಳಿಗೆ | ಕಲಿಸುವ ವಿದ್ಯಾಮಂದಿರಗಳಿಗೆ |
ಅನುದಾನ ನೀಡಿ ವಿದ್ಯಾ ಕ್ಷೇತ್ರಕೆ ಉಪಕಾರ ಮಾಡುವರು ||೨||
ಬುದ್ಧಿವಂತ ಬಾಲಕರಿಗೆ ಉದ್ಯೋಗದಲ್ಲಿ ತೊಡಗುವವರಿಗೆ
ವೃತ್ತಿ ಶಿಕ್ಷಣ ಕೇಂದ್ರದಿಂದ ಶಿಕ್ಷಣ ನೀಡುವರು |
ಹಿಂದಿನ ಬದುಕಿನ ಬದಲಾವಣೆ ಇಂದಿನ ಬಂದಿಹ ನವಚೇತನಕೆ |
ಹೊಂದಿಕೊಳ್ಳುವ ಭಾರತೀಯರೆ ಭಾಗ್ಯವಂತರು ||೩||
||ಚ್ಯಾಲ||
ಗರೀಬ ಶ್ರೀಮಂತರೆನ್ನುವ | ಭಾವ ತಿಳಿಯುವ |
ಸಾರ್ವಜನಿಕ ಸಮತಾವಾದಕ | ಸಹಕಾರ ಬೇಕು ನಡೆಸುದಕ||೧||
ಸ್ವಾತಂತ್ರ್ಯ ಸಿಕ್ಕ ಭಾರತಕ್ಕ | ಬೇಕು ಸರ್ವವಿಧ ಹಕ್ಕು |
ಸಾರ್ವಜನಿಕ ಶಾಂತಿ ಸುಖ ಬೇಕು | ವಿಷಮತೆ ಮೊದಲು ಅಳಿಬೇಕು||೨||
ರಚನೆ : ಶರಣಪ್ಪವಾಲಿ
ಕೃತಿ : ಶರಣಸ್ಮೃತಿ
Leave A Comment