ಕನ್ನಡಿಯಂಥ ಕನ್ನಡ ತಾಯಿಗೆ ಮನ್ನಣೆ ಕೊಡಬೇಕ ಮನಸಿಟ್ಟ
ವರ್ಣನ ಮಾಡುವಂಥ ಪೂರ್ಣ ಕರ್ನಾಟಕ ಜೀರ್ಣೋದ್ಧಾರ
ಮಾಡ್ರಿ ದಯವಿಟ್ಟ||ಪ||

ಕನ್ನಡ ಭಾಷಾ ಇದು ಮಣ್ಣು ಪಾಲಾಗುವದು ಕಣ್ಣ ತೆರದ
ನೀವು ನೋಡವಲ್ಲರಿ
ಛಿನ್ನ-ವಿಚ್ಛಿನ್ನವಾಗಿ ಅನ್ಯರ ಆಕ್ರಮಿಸಿ ಉನ್ನತ ನಾಡನ್ನು ಉಳಿಸಿಕೊಳ್ಳಿರಿ
ಸರಳವಿದ್ದ ಮಾತೃಭಾಷಾ ಹೊರಳಿನೋಡವಲ್ಲರಿ ಪರಭಾಷೆಯೊಳು
ಸಿಲ್ಕಿ ಮರುಳಾದಿರಿ
ಹೆರವರ ಮಾತಿಗೆ ಹೆಗ್ಗಣ ಕಡಿದಾಡಿದಂತೆ ತರ ತರದ ಶಬ್ದಗಳ
ಬೆರಸಿ ಇಟ್ಟಿರಿ
ಲಾಯಿಟ್ ಅನ್ನುವಂಥ ಶಬ್ದ ಐಟದಿಂದ ಅನ್ನು ದಾತ ಬೆಳಕು ಅಂಬು
ಶಬ್ದ ಈಗ ಬೇನೆ ಬಿತ್ತರಿ
ಬ್ರೆಡ್ ಅನ್ನುವಂಥಾದ್ದು ಶಹರದೊಳಗೆ ಉಳದೈತಿ ಹಳ್ಳಿಗೆ ಒಯ್ದು
ರೊಟ್ಟಿ ಅಂಬುದ ಕೊಂದ ಇಡುತಿರಿ

||ಚ್ಯಾಲ||

ಮಾತನಾಡುವದು ಕನ್ನಡ
ಕಾಗದ ಪತ್ರ ಇರಬಾರದು ಅಡ್ನಾಡ
ಪತಿ ಸತ್ತರ ಸತಿ ಚಿತೆಯೊಳಗ ಧುಮುಕುವ
ವೃತ ಪಾಲಿಸುರ ಪೂರ್ವಜರ
ಮಹಾಸತಿ ಕಲ್ಲಂತ ಮಸ್ತ ಹುಗದಾರ ಗುರ್ತ ಹಿಡಿದ ಬರ್ರಿ ಬಲ್ಲವರ
ಕಲಾಕೌಶಲ್ಯದ ಶಿಲಾಲಿಪಿಯಿಂದ ಚಲೋ ಹಂಪಿ ಗುಡಿಗೋಪುರ
ಬಲಾಢ್ಯವಾದ ಪ್ರಾಂತ ಬಲ್ಲಿದ ಅನಿಸಿಕೊಂತ
ಎಲ್ಲದರಿಂದ ಬಹಳ ಶಡಗರ
ಹಾಳ ಆಗಿ ಹೋತ ಕೇಳವರಿಲ್ಲದ ವೇಳೆ ಹತ್ತಿತ ನಮಗ ಸುಮಾರ
ಬೆಳಗಾಂವದೊಳಗ ಸಹಿತ ಅಳಗಾಲ ತಂದಾರ ನಮಗ
ಬೆಳಸಬೇಕ ಕನ್ನಡ ಜೋರ

||ಚ್ಯಾಲ||

ನಮ್ಮ ಭಾಷಾ ಅಭಿಮಾನ ಇರಬೇಕ
ಅನ್ಯ ಭಾಷೆಗೆ ನಿಮ್ಮ ಮನಶ್ಯಾಕ
ತಾಯಿ ನಾಡಿನ ಸೇವ ಠೀಕ ಠೀಕ
ಅರವ ಇಲ್ಲದವರೇನು ಸುಡಬೇಕ
ಭೀಮೇಶನ ಕವಿ ಹಸನ ಚೊಕ್ಕ
ತನ್ನ ಜನ್ಮ ಭೂಮಿಯ ಸೇವಕ

||ಏರು||

ಹಳ್ಳಿಯೊಳಗ ರಾಷ್ಟ್ರ ಬಳ್ಳಿ ಹಬ್ಬಲೆಂದು ಮಳ್ಳ
ಜನರಿಗೆಲ್ಲ ಭೀಮ ಬೋಧಕೊಟ್ಟ

ರಚನೆ :  ಹುಲಕುಂದ ಭೀಮಾಕವಿ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ