||ಚ್ಯಾಲ||

ಸೃಷ್ಟಿಯೊಳಗ ಬಹು ಶ್ರೇಷ್ಠ ಅನಿಸಿಕೊಂಡ ರಾಷ್ಟ್ರ ನಮ್ಮ ಕನ್ನಡ ನಾಡ
ಕರುಣೆಯಿಲ್ಲದ ಬ್ರಿಟಿಶರ ಕರದಿಂದ ಕಡಿಸಿಕೊಂಡ ಆಗೇತಿ ತುಂಡ
ಹೆಮ್ಮೆ ಮಾತ ಕೇಳ ನಮ್ಮ ನಾಡಿನೊಳು ಕಮ್ಮ ಇಲ್ಲ ಬೆಳ್ಳಿ ಬಂಗಾರ
ಕಬ್ಬಿಣ ಕಲ್ಲಿದ್ದಲಿ ಮುತ್ತು ರತ್ನ ಸಹಿತ ವಜ್ರ ವೈಡೂರ್ಯದ ಆಗರ
ಬಾಳ ಬೆಳಿತಾವ ಜೋಳ ಗೋದಿ ಕಡಲಿ ಹೇಳಿದಷ್ಟು ಅಲಸಂದಿ ಹೆಸರ
ಅಕ್ಕಿ ಹತ್ತಿ ಬೆಳೆ ಲೆಕ್ಕ ಹತ್ತುವದಿಲ್ಲ ದಿಕ್ಕ ದೇಶಕ ಜಾಹೀರ
ಹಣ್ಣು ಹಂಪಲಗಳ ಕಂಪ ಮಾವಿನಗುಂಪ ಅದಾವ ಬಾಳ ಸಂಪ ಟೆಂಗಿನಮರ
ಸೃಷ್ಟಿ ಸೌಂದರ್ಯಕ ದೃಷ್ಟಿ ಆಗುವ ಹಾಂಗ ಶ್ರೇಷ್ಟ ಅನಿಸೇತಿ ನಮ್ಮ ಕಾರವಾರ
ಕಟ್ಟಡಗಳೇನು ಇಲ್ಲಿ ಅಷ್ಟ ಇಷ್ಟ ಇಲ್ಲಾ ಎಷ್ಟೋ ಕಟ್ಟ್ಯಾರ ಜಕಣಾಚಾರ್ಯರ
ಅಷ್ಟುದರೊಳಗೆ ಒಂದ ಶ್ರೇಷ್ಠ ಕುರುಹ ಉಳದೈತಿ
ಪ್ರತ್ಯಕ್ಷ ನೋಡಬಹುದು ಗೊಮ್ಮಟೇಶ್ವರ
ಶಿಲ್ಪಿ ಕಲೆಗಳಿಗೆ ಸಿರಿಯು ಸಂಪನ್ನರಿಗೆ ಬುದ್ಧ ಬಸವರಿಗೆ ತವರೂರ
ಮೂರು ಧರ್ಮಗಳ ಸಾರಿದ ವೀರರಿಗೆ ಸ್ಥಾನ ಕೊಟ್ಟ ಸಲುಹಿತ ಪೂರ

||ಚ್ಯಾಲ||

ಮೈಸೂರದವರನ ನೋಡಿರಿ ಕೆನಾಲ ಕಟ್ಟಿಸ್ಯಾರ ತುಂಗಭದ್ರಾ ನದಿಗೆ
ನೀರಕೊಡತಾರ ಅಲ್ಲಿಯ ಭೂಮಿಗೆ
ಘಟಪ್ರಭ ಕೃಷ್ಣಾ ಕಾವೇರಿ ಭೀಮಾ ಮಲಪಹಾರಿ ನರ್ಮದಾ ನದಿಗೆ
ಒಡ್ಡ ಹಾಕುವರ ದಿಕ್ಕ ಇಲ್ಲ ನಮಗ

ಚಲತಿ ಚ್ಯಾಲ

ಸಿರಿಯ ಸಂಪತ್ತು ಕಡಿಮೆ ಇಲ್ಲ ಭರಪೂರ ಬೆಳೆಯುಳ್ಳ ಭೂಮಿ ವಿಸ್ತಾರ
ಹೊಳೆ ಹಳ್ಳ ಹರಿತಾವ ಭರರರಾ ಕೆನಾಲ ಮಾಡಿಕೊಂಡರ ನಮ್ಮದು ಉದ್ಧಾರ

||ಏರು||

ಒಡಕ ಕನಡಿಯೊಳಗ ಮುಖವ ನೋಡುವವರ‍್ಹಾಂಗ
ಆತ ನಮ್ಮ ಪ್ರಾಂತದ ಹಾಡ ||೧||
ಒಕ್ಕಟ ಆಗದ ಬಿಕ್ಕಟ್ಟ ಬಿಡುವದಿಲ್ಲ ಇಕ್ಕಟ್ಟಿನಿಂದ ಪಾರಾಗುದಕ
ಮುಕ್ಕಟ್ಟ ಕನ್ನಡಿಗರೆಲ್ಲ ಒಕ್ಕಟ ಅದರ ಲಗು ಬಿಡತೈತಿ ಈ ಕ್ಷಣಕ
ನೀತಿವಂತರಾಗಿ ಜಾತಿ ಜಗಳ ಬಿಟ್ಟು ಖ್ಯಾತಿವಂತರಾಗಿ ಮೆರೆಯುದಕ
ಹರದ ಹಂಚಿಹೋದ ಮೆರೆದ ಕರ್ನಾಟಕದ ಬಿರದವನ್ನು ನೀವು ತರಬೇಕ
ಕಳೆದು ಹೋದ ನಮ್ಮ ಕರಿನಾಡಿನ ಕೀರ್ತಿ ಮರಳಿ ನೀವೆಲ್ಲಾರು ಪಡೆಯುದಕ
ಸಪ್ಪಳ ಇಲ್ಲದೆ ಆದ ಇಪ್ಪತ್ತೆರಡ ಭಾಗ ಜಪ್ಪಿಸಿ ನೀವೀಗ ಹಿಡಬೇಕ
ಏಕೀಕರಣ ಆದ್ರ ಸಾಕ ಆಗುವ ಹಾಂಗ ಬೇಕಾದ್ದೆಲ್ಲ ಸಿಗತೈತಿ ಜನಕ
ಊಟ ಉಡಿಗಿಗೆ ಏಟು ಕಡಿಮೆ ಇಲ್ಲ ಎರಡು ಕೋಟಿ ಉಳಿಯುವದು ನಿರಕ
ಹತ್ತುಕೋಟಿ ಹಣ ನಮಗೆ ವೆಚ್ಚ ಮಾಡಿಬಿಟ್ರ ವಿಲಕ್ರರಿ ಆಗತೈತಿ ನಮ್ಮ ಪ್ರಾಂತಕ
ಅನುಕೂಲ ಇದ್ದರ ಸುದ್ದ ಪ್ರತಿಕೂಲ ನಡದೈತಿ ಚಿಮಣಿ ಎಣ್ಣಿ ಸಿಗವಲ್ದ ಹಣೆಬಾರಕ

||ಚ್ಯಾಲ||

ನಿಮ್ಮಲ್ಲಿ ಸ್ವಾಭಿಮಾನ ಇದ್ದರ ನಿಮ್ಮನ್ನ ಯಾರ ಕಾಡತಿದ್ದರ ಪರರ ಸ್ವಾಧೀನ
ಕನ್ನಡ ತಾಯಿಯನ್ನು ನೀವು ಮಾಡಿ ಇಟ್ಟದಿರಪೂರ್ಣ
ಎಚ್ಚರಾಗಿ ನೀವೆಲ್ಲಾರು ಎದ್ದರ ವಿದ್ಯಾ ಬುದ್ಧಿ ಇದ್ದರ ನೋಡಿ ನಿಮ್ಮನ್ನು
ಕಾಲಬಿದ್ದ ಕೈಮುಗದ ಕೊಟ್ಟು ಬಿಡತಾರ ನಾಡನ್ನ

ಚಲತಿ ಚ್ಯಾಲ

ಗಡಿ ನಿರ್ಣಯ ಮಾಡು ಕಾಲಕ ಎಚ್ಚರಾಗಿರಿ ಬಂದೈತಿ ಸನಿಯಕ
ಸುಮ್ನ ಕುಂತ್ರ ನಿಮ್ಮ ಹೆಣಕ ಗುದ್ಲಿ ಸಲಿಕಿ ತರತಾರ ಹುಗಿಯಾಕ
ಶಿಷ್ಟಮಂಡಳ ಒಯ್ಯಬೇಕ ದಿಲ್ಲಿತನಕ ಸ್ವದೇಶ ಸ್ವತಂತ್ರ ಪಡೆಯುದಕ

||ಏರು||

ಎಚ್ಚರಾಗಿ ನೀವು ಬಿಚ್ಚ ಮನಸಿನಿಂದ ನೋಡ ಅಂದ ಭೀಮ ಕಣಗಂಡ||೨||

  ಕೆನಾಲ ಕಾಲುವೆ

ರಚನೆ :  ಹುಲಕುಂದ ಭೀಮಕವಿ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ