ಧನ್ಯಧನ್ಯ ಭೋ ಭಾರತ ಮಾತೆಯ ಧೀರವೀರ ತನುಜಾತೆ |
ಜಯ ಜಯ ಕರ್ನಾಟಕ ಮಾತೆ   ||ಪ||

ಅಂದವಾದ ನದಿ ಸುಂದರ ಬನಗಳ ಬೀಡು |
ಶ್ರೀಗಂಧ ಬಿದಿರು ಮತ್ತಿ ದೇವದಾರ ಗಿಡಕಾಡು |
ದಿವ್ಯೌಷಧಿ ಅಮೃತ ವನಸ್ಪತಿ ಗುಡ್ಡಗಾಡು | ನಿಸರ್ಗದಿ |
ನಿಸರ್ಗದಿ ಶೋಭಿಸಿ ದೇವಿ ಧರಿಸಿದ ಹೊಳೆವ ಮಕುಟಮಣಿಯಂತೆ |
ಜಯ ಜಯ ಕರ್ನಾಟಕ ಮಾತೆ  ||೧||

ಅನ್ನ ಹೊನ್ನ ಖನಿಜಾದಿ ರಸಾಯನ ಮುತ್ತ ರತ್ನ ಸೇರಿದಾತೆ |
ವಿಸ್ತೀರ್ಣ ದೇಹ ಪ್ರಖ್ಯಾತೆ  |
ಬುದ್ಧ ಬಸವ ಮಧ್ವ ಶಂಕರ ವಿದ್ಯಾರಣ್ಯರು |
ಮುದ್ದಣ್ಣ ಹರಿಹರ ರನ್ನ ಪೊನ್ನ ಪಂಪರು |
ರುದ್ರಮ್ಮ ಚೆನ್ನಮ್ಮ ಮಲ್ಲಮ್ಮ ಮಾದೇವಿಯರು | ನಿನ್ನಲ್ಲಿ |
ನಿನ್ನಲ್ಲಿ ಜನಿಸಿ ಜಗದಲ್ಲಿ ಮೆರೆದ ಮಹಾಮಾನ್ಯರನ್ನು ಹಡೆದಾತೆ |
ಜಯ ಜಯ ಕರ್ನಾಟಕ ಮಾತೆ ||೨||

ಪರಮೇಶ್ವರಿ ನಿನ್ನ ಪವಿತ್ರ ಅಡಿಯಲಿ ಮೆರೆದ ಮಹಾಜನರನ್ನಾ |
ಪರಿಪಾಲಿಸಿದೆವ್ವ ಸಂಪೂರ್ಣ |
ಕನ್ನಡ ಭೂಮಿಯ ಮಣ್ಣಿನಲ್ಲಿ ಜನ್ಮವಿಟ್ಟು
ಕನ್ನಡ ನಾಡಿನ ಅನ್ನ ಅರಿವೆ ಉಂಡುಟ್ಟು |
ಕನ್ನಡ ತಾಯಿಯ ರಕ್ತಶರೀರವ ತೊಟ್ಟು || ಕನ್ನಡದ |
ಕನ್ನಡದ ತಾಯಿಯ ಸೇವೆಗಾಗಿ ನಿಂತ ವಾಲಿ ಶರಣರ ದಾತೆ |
ಜಯ ಜಯ ಕರ್ನಾಟಕ ಮಾತೆ  ||೩||

ರಚನೆ :  ಶರಣಪ್ಪವಾಲಿ
ಕೃತಿ :  ಶರಣ ಸ್ಮೃತಿ