ಗಳಿಸಿ ಸ್ವಾತಂತ್ರ್ಯವ ಪಂಚವಿಂಶತಿ ವರ್ಷ ಬೆಳೆಸಿತಂದ ಕನ್ನಡವನ್ನು |
ಹಳ್ಳಿಹಳ್ಳಿಗೆ ಮುಟ್ಟಲೆಂದು ಜನ ಬೆಳ್ಳಿ ಹಬ್ಬ ಮಾಡಿ ಆಚರಣ||೧||

ನಾಲ್ವತ್ತೇಳು ಅಗಷ್ಟ ಹದಿನೈದರ ಹಿಂದೆ ಮರೆಯಾಗಿದ್ದ ಸಾಹಿತ್ಯವನ್ನು
ಬಯಲಿಗೆಳೆದು ತೋರಿಸಲು ಬಯಸಿದರು ಕನ್ನಡಾಭಿಮಾನಿ ನಮ್ಮ ಜನ||೨||
ಎಲ್ಲ ಮುಖಗಳಿಂದ ಬೆಳೆದ ಸಾಹಿತ್ಯವ ತಿಳಿಯಲೆಂದು ಹಳ್ಳಿ ಹಳ್ಳಿಯಲಿ |
ಕಲೆಯ ನೆಲೆಯ ತಿಳಿದಂಥ ಬಲ್ಲವರ ಎಲ್ಲ ಬಗೆಯ ಪುಸ್ತಕವನ್ನು||೩||

||ಚಾಲ||

ಲೇಖಕ ಪ್ರಕಾಶಕರನು | ಮುದ್ರಕರನು | ಮಾರಾಟಗಾರರನು |
ವಿಚಾರಿಸಿ ಕುಂದುಕೊರತೆಯನು ಪ್ರಕಟನೆಗೆ ಹಣವಿಲ್ಲದವರನು |
ಸರಕಾರವೆ ಕೊಟ್ಟು ಹಣವನು | ಓದುವವರಿಗೆ ಪ್ರೋತ್ಸಾಹವನು |
ಉನ್ನತ ಸಂಸ್ಕೃತಿಯ ರೀತಿ | ಆಧ್ಯಾತ್ಮದ ಪ್ರಗತಿ | ಧಾರ್ಮಿಕ ಉನ್ನತಿ |
ಈ ಬಗೆಯ ಗ್ರಂಥಗಳನೊಂದೆಡೆ ಪ್ರದರ್ಶಿಸಿ ||

||ಏರು||

ಊರಿಗೊಂದು ಗ್ರಂಥಾಲಯ ಕೇರಿಗೊಂದು ವಾಚನಾಲಯ |
ಸರ್ವರಮನೆಯಲ್ಲಿ ಪುಸ್ತಕ ದೊರೆಯುವ ಭಾಂಡಾರವನು ||೧ನೆಯ ಚೌಕ||
ಕನ್ನಡ  ಭಾಷೆಯ ಶ್ರೇಷ್ಠ ಸಾಹಿತ್ಯ ಪರರಾಳಿಕೆಯಲಿ ಮರೆಯಾಗಿತ್ತು |
ಸ್ವಾತಂತ್ರ್ಯೋತ್ತರ ಕಾಲದಲದು ಉನ್ನತಿಗೇರಲು ಅನುವಾಯ್ತು||೧||

ಎಪ್ಪತ್ತೆರಡರ ಅಗಷ್ಟ ಹದಿನೈದಕೆ ಇಪ್ಪತ್ತೈದು ವರ್ಷ ಕಳೆದಾಯ್ತು |
ಸರ್ವತೋಮುಖ ಅಭಿವೃದ್ಧಿ ಸಾಧಿಸಿ ಕನ್ನಡ ಸಾಹಿತ್ಯ ಮೆರೆದಾಯ್ತು||೨||

ಮಾನ್ಯರೆಲ್ಲ ಸಂಭ್ರಮದಿ ಆಚರಿಸಿ ಯುನೆಸ್ಕೋವನ್ನು ಘೋಷಿಸಿತು |
ಎಪ್ಪತ್ತೆರಡರ ಇಡೀ ಸಂವತ್ಸರ ಸಾಹಿತ್ಯ ಪ್ರಸಾರ ನಡೆಯಿಸಿತು||೩||

||ಚಾಲ||

ಕನ್ನಡದ ಶಕ್ತಿಯ ಬೆಳೆಸಿ | ಅನ್ಯರಿಗೆ ತಿಳಿಸಿ ಸರ್ವರಿಗೆ ಉಣಿಸಿ |
ಆಸೇತು ಹಿಮಾಚಲ ಪಸರಿಸಿ | ಸಣ್ಣ ದೊಡ್ಡ ಹೊತ್ತಿಗೆಗಳ ಕೂಡಿಸಿ |
ಬೆಲೆ ನಿಲುಕುವಂತೆ ಇಳಿಸಿ | ಮನೆಮನೆಗೆ ಪುಸ್ತಕಗಳನಿಡಿಸಿ |
ಓದುವ ಹವ್ಯಾಸ ಬೆಳೆಸಿ || ಹೆಣ್ಣು ಮಕ್ಕಳನು ಯೋಜನೆಗೆ ತೊಡಗಿಸಿ |
ಸ್ಪರ್ಧೆ ಏರ್ಪಡಿಸಿ ಬಹುಮಾನಗಳನು ವಿತರಿಸಿ ಉಚಿತ ಪುಸ್ತಕಗಳ ಕೊಡಿಸಿ ||

||ಏರು||

ದಾನ ಧರ್ಮ ಮಾಡುವಾಗ | ಮದುವೆ-ಮುಂಜಿ ನಡೆಯುವಾಗ
ಒಬ್ಬರಿಗೊಬ್ಬರು ಕಾಣಿಕೆ ಕೊಡಿರಿ ಪುಸ್ತಕಗಳನು || ೨ನೆಯ ಚೌಕ||

ಕರುನಾಡಿನ ಸಾಹಿತ್ಯವ ಬೆಳೆಸಿ ರೀತಿ ನೀತಿ ಸಮನ್ವಯಗೊಳಿಸಿ
ಭಾರತದೊಳು ವರಕೀರ್ತಿಯ ಗಳಿಸಲು ರಜತ ಮಹೋತ್ಸವ ಆಚರಿಸಿ||೧||

ಪರಿಷತ್ತಿನ ಹಿರಿತನದಲ್ಲಿ ಕಾಯಂ ಪುಸ್ತಕ ಪ್ರದರ್ಶನ ಏರ್ಪಡಿಸಿ |
ಮಾರುವ ಪುಸ್ತಕ ಮೂಟೆಕಟ್ಟಿಕೊಂಡು ಹಳ್ಳಿಹಳ್ಳಿಗೆಲ್ಲ ಸಂಚರಿಸಿ||೨||

ಕರ್ನಾಟಕದ ಜಿಲ್ಲೆ ತಾಲೂಕಿನ ಜನರನು ಸಭೆ ಮಾಡಿ ಕೂಡಿಸಿ |
ಚಿತ್ರಪ್ರದರ್ಶನ ಕಾವ್ಯವಾಚನ ಮೊದಲಾದ ಲಾವಣಿ ಹಾಡಿಸಿ||೩||

ಮೊದಲೊಂದು ಪ್ರಕಟಣೆ ಹೊರಡಿಸಿ | ಎಲ್ಲರಿಗೂ ಮುಟ್ಟಿಸಿ |
ಸಿಗುವಂಥ ಗ್ರಂಥ ಬೆಲೆ ತಿಳಿಸಿ | ಬೆಲೆಯಿಳಿಸಿದ್ದನ್ನು ತೋರಿಸಿ||೧||

ಓದುಗರಿಗೆ ಕೂಪನ್ ಕೊಡಿಸಿ | ಸ್ತ್ರೀ ಪುರುಷರೆಲ್ಲ ಭಾಗವಹಿಸಿ
ಒಂದು ವರ್ಷ ಕಾರ‍್ಯನಡೆಸಿ | ಜಯಗಳಿಸಿ | ಜಗದೊಳಗೆ
ನಾಡ ಕೀರ್ತಿತೋರಿಸಿ ||೨||

ಕನ್ನಡ ಸಾಹಿತ್ಯ ಪ್ರಚಾರ ಯೋಜನೆ | ಉನ್ನತಗೊಳಿಸಲು ಮಾಡಿ ಪ್ರಾರ್ಥನೆ
ರಜತಮಹೋತ್ಸವ ಮಹತ್ಕಾರ್ಯಕೆ | ಕೂಚೆತ್ತಿ ಹಾಡುವರು ವಾಲಿ ಶರಣರು||೩||


ರಚನೆ :
 ಶರಣಪ್ಪ ವಾಲಿ
ಕೃತಿ :  ಶರಣ ಸ್ಮೃತಿ