ವಿಷಯ ಗುಣವೆಲ್ಲ ಬಿಸುಟಿದ ಮನುಜರು ಕೂಡ್ಯಾರ
ಹಸನುಳ್ಳ ಕಾಂಗ್ರೆಸ್‌ಕ
ವಸುಧೆಯೊಳಗ ಹೆಸರಾದ ಹಸರು ಕೇಸರಿ ಬಿಳಿಯ ಬಣ್ಣದ ಝೇಂಡ ವಂದನಕ
ಮುನಸೀಪಾಲಿಟಿ, ಸೊಸಾಯಿಟಿ ಲೋಕಲ್ ಬೋರ್ಡ
ಕೋರ್ಟ ಕಚೇರಿ ಮೇಲೆ ಮೆರೆಯುವದ
ಮೋಟರ ಸಾಯಕಲ್‌ಕ ಪ್ರೀತಿಲಿ ಹಚ್ಚುವರ ದೇಶಭಕ್ತರು ಬಿಟ್ಟು ಬಿಡದ
ಖಾದಿ ಭಾಂಡಾರಕ ಚರಕಾ ಸಂಘಕ ಹುರುಪಿಲಿ ಏರಸುವ ತ್ವರಿತದಿಂದ
ಸ್ವಯಂಸೇವಕರ ಕೈಯಾಗ ಮೆರಿವದು ಭರದಿ ಝೇಂಡ ಬಹುಚಂದ
ರಾಷ್ಟ್ರಧ್ವಜಕ ಬಹಳ ಕಷ್ಟಪಟ್ಟಲ್ಲೆ ಮೆಟ್ಟಿಗ್ಹತ್ತಿತ ಇಲ್ಲಿಗೆ ಬಂದ
ವಂದೇಮಾತರಂ ಗೀತೆ ಅಂದ ಮೇಲೆ ಅದು ಚಂದದಿಂದ ಹಾರಾಡುವದ

||ಚ್ಯಾಲ||

ಕೇಸರಿ ವರ್ಣವು ಸ್ವಾರ್ಥ ತ್ಯಾಗ ಚಿಹ್ನ
ಬಿಳಿಯ ಬಣ್ಣವು ಸತ್ಯಶಾಂತಿ ಕೂನ
ಹಸಿರು ಬಣ್ಣವು ವಿಶ್ವಾಸ ಗುರ್ತ ಪೂರ್ಣ
ಮೂರು ಗುಣಗಳದು ತೋರುವ ಚಿಹ್ನೆ

||ಏರು||

ಮೂರು ಬಣ್ಣದ ಮೇಲೆ ತೋರುವ ಚರಖ
ದೊರಕಿಸುವದು ಸ್ವರಾಜ್ಯ ಸುಖ||೧||
ಸುರುವ ಅದರ ಬರುವೆನು ಹೇಳದೆ ಸರ್ವರಿಗೆಲ್ಲ ಆಧಾರ ಚರಕ
ಕಂಬಾರ ಬಡಿಗರ ಪಿಂಜಾರರಿಗೆಲ್ಲ ಕೆಲಸ ಹಚ್ಚುವದು ಈ ಚರಕ
ಗಿರಣಿ ಬಂದಾಗಿನಿಂದ ಬರಲಿಲ್ಲ ಮುಂದಕ ಮೂಲಿಗಿ ಬಿದ್ದಿತ ನಮ್ಮ ಚರಕ
ಗಾಂಧಿ ಮಹಾರಾಜರು ತಂದಾರ ಬೈಲಿಗೆ ಚಾಲೂ ಮಾಡಲಾಕ ಈ ಚರಕ
ನೇಕಾರ ಜನರಿಗೆ ತವರೂರ ಇದ್ಹಾಂಗ ಬೇಕಾದ ಕೊಡುವದು ಈ ಚರಕ
ರೈತರ ಮನಿಯಾಗ ಸ್ಥಿರವಾಗಿ ನಡೆದರೆ ಪಕ್ವಾನ್ನ ಉಣಿಸುವದು ಈ ಚರಕ

||ಚ್ಯಾಲ||

ದುಡ್ಡು ಕೊಡುವದು ದುಡಿದರೆ ಚರಕ
ಬಡಜನರ ಕಾಯ್ದದು ಚರಕ
ಪೊಡವಿಗೆ ಒಡೆಯ ಚರಕ
ಕಡುದಾರಿದ್ರ್ಯ ಬಿಡಿಸುವದು ಚರಕ

||ಏರು||

ಚರಖಾ ಅಂದರೆ ರಾಟಿ ಜಂತ್ರ ನಾಮಕರಣ ಇರುವವು ಅದರ||೨||
ಗಿರಣಿ ನೂಲ ಗಿರಣಿ ಅರಿವೆ ಬಂದಾಗಿನಿಂದ
ಕೌದಿಗ್ಹಚ್ಚಾಕ ಉಳಿಯಲಿಲ್ಲ ತುಣಕ
ನಾಲ್ಕನೂರಾಅರವತ್ತಾರ ಕೋಟಿ ಗಜ ಅರಿವೆ
ಪ್ರತಿವರ್ಷ ಬೇಕ ನಮ್ಮ ಹಿಂದುಸ್ಥಾನಕ
ಅಷ್ಟ ಅರಿವೆ ನಮ್ಮ ರಾಷ್ಟ್ರದಾಗ ಹುಟ್ಟಿದರ ಅಷ್ಟೂರ
ಕೈಯಾಗ ಆಗತತಿ ರೊಖ್ಖ
ಅಗ್ಗ ಇಲ್ಲ ಕೈಮಗ್ಗದ ಖಾದಿ ನೂಲುವವರ ಬಾಳ ಇಲ್ಲದಕ
ನೂಲಿನ ಯೋಜನೆ ಪೂರ್ಣ ಆದಮ್ಯಾಲ ತಾನು
ಸೋಯಿ ಆಗುವದು ನಿರಕ

||ಚ್ಯಾಲ||

ನಿಮ್ಮ ಹತ್ತಿ ನೀವ ಅರೆಸಿರಿ
ರಾಟಿಯಿಂದ ನೂಲ ತೆಗೆಯಿರಿ
ನಿಮ್ಮ ನೇಕಾರ ಕೈಯಿಂದ ನೇಯಿಸಿರಿ
ಖಾದಿಬಟ್ಟೆ ತೊಟ್ಟಕೊಳ್ಳಿರಿ

||ಏರು||

ಅಂಗೈ ಹುಣ್ಣಿಗೆ ಕನ್ನಡಿ ಯಾತಕೆ ಭೀಮಸಿಂಗ ನೋಡಂದ ಪ್ರತ್ಯಕ್ಷ||೩||

ರಚನೆ :  ಹುಲಕುಂದ ಭೀಮಕವಿ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ