ದೇಶಭಕ್ತಿಯದು ರಾಜದ್ರೋಹವೆಂದು ಸಾರಿ ಕಾಯ್ದೆಯಲಿ ಸರಕಾರ
ವೈಸರಾಯರು ಆರ್ಡರು ಕೊಟ್ಟರು ಗಾಂಧಿ ಸಹಿತ ಹಿಡಿಯಿರಿ ಜನರ
ಮುಂಬೈನಗರದಿ ಸೇರಿದ ಕಾಂಗ್ರೆಸ್ ಮಂದಿಯ ಹಿಡಿಯಿತು ಸರಕಾರ
ದೊಂಬಿಹಚ್ಚಿತದು ಜನತೆ ರೊಚ್ಚಿನಲಿ ಕಿಚ್ಚುಹಚ್ಚಿತದು ದೇಶ ಪೂರ
ಹಳಿಯು ಹಾರಿದವು ಗಾಡಿ ಉರಳಿದವು ಬೋಟು ಮುಳುಗಿದವು ಭರಪೂರ
ಪೋಲಿಸರಲ್ಲಿಯ ಬಂದೂಕ ಕಸೆದರು ತೆರಿಗೆ ಹಣವ ಲೂಟಿ ಮಾಡಿದರ
ಕೈಕಂಬಗಳು ಮಾಯವಾದವೋ ಸುಟ್ಟು ಹೋದವೊ ದಪ್ತರ
ಸಾಯ್ಬರ ಚೊಣ್ಣವು ಸೈಲಾತಪ್ಪ ಜೀವ ಹಿಡಿದುಕೊಂಡು ಓಡಿದರ
ಬಂಗ್ಲೆ ಸಾಲಿ ಚಾವಡಿಗೆ ಬೆಂಕಿ ಹಚ್ಚಿ ಸ್ಟೇಷನ್ ಸುಟ್ಟರೋ ಎದುರೆದುರ
ಆಂಗ್ಲರಾಳುಗಳು ಕಾವಲು ನಡಿಸಿರೆ ಕಣ್ಣುಕಟ್ಟಿ ಕೆಲಸಮಾಡಿದರ
ತಾರುಕಂಬಗಳ ಕತ್ತರಿಸಿತು ಜನ ಟಪಾಲು ಹೊಡೆದರೊ ಸರಸರಾ
ಮಾರಿ ಗುರ್ತಿ ಸಹ ಹತ್ತಲಿಲ್ಲರಿ ಗತ್ತ ತಿಳಸಲಿಲ್ಲ ಬಹದ್ದೂರ
ಮಿಲ್ಟ್ರಿ ಜನ ತಾ ಯುದ್ಧಕ್ಕೆ ಹೋಗದೆ ಮನೆಯ ಕಳ್ಳರನು ಹುಡಕಿದರ
ಸಿಕ್ಕಲಿಲ್ಲರಿ ಸಂಶಯದಿಂದಲಿ ಬಡಿದು ದಂಡವನು ಹೇರಿದರ

||ಇಳವು||

ಸಿಕ್ಕಾರ್ರೆ ಊರ ಜನ ಸೇರಿ ಹೊಕ್ಕಾಡಿ ಮಾಡತ್ತಿದ್ದರೊ ಸೋರಿ
ರೊಕ್ಕಕ್ಕ ಕಡಿಮೆ ಆಗಲಿಲ್ಲ ಸರಕಾರಕ ತೊಂದರೆ ಬಹಳಾತ್ರಿ

||ಏರು||

ರಾಜ್ಯ ನಡೆಸಿದಾರೊ ಜಿಲ್ಲೆ ಜಿಲ್ಲೆಯಲ್ಲಿ ಇಂಗ್ಲೇಜಿ ಸರಕಾರ ಉಳಿತೇನು ?||೧||

ರಚನೆ :  ಮಾರನಬಸರಿ ಮೋದಿನಸಾಬ
ಕೃತಿ :  ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ