ಸರ್ವಾನುಮತದಿಂದ ತೀರ್ಮಾನಿಸಿತು ಸಮಿತಿ :
ಈ ದೇಶದಲಿ ರಾಷ್ಟ್ರ ಪಕ್ಷಿಯ ಪದವಿ ನವಿಲಿಗೇ.
ಪತ್ರಿಕೆಯ ಪುಟದಗಲಕೂ ಗರಿಗೆದರಿ ಬಂದಿತು ಸುದ್ದಿ
ದೇಶಾದ್ಯಂತ.
ಕೆಂಬೂತಗಳ ಸಮಾಜದಲಿ ಇದು ತಂದ
ಸೋಜಿಗಕೆ ಮಿತಿಯೇ ಇಲ್ಲ.
ತಂತಮ್ಮ ಪೆಟ್ಟಿಗೆಗಳಲಿ ಗುಟ್ಟಾಗಿಟ್ಟ
ನವಿಲುಗರಿಗಳನೊಂದೊಂದನೇ ತೆಗೆದು,
ಧೂಳೊರೆಸಿ, ಪಾಲಿಷ್ ಹಾಕಿ, ಮುಂದಿನ ವರ್ಷ
ರಾಷ್ಟ್ರಪಕ್ಷಿಯ ದಿನಾಚರಣೆ ಮಾಡುವ ದಿವಸ ಇರಲೆಂದು
ಜೋಡಿಸಿಟ್ಟವು ಮತ್ತೆ !
ಇನ್ನಾದರೂ ಹೊಟ್ಟೆಯುರಿಯನು ಮರೆತು, ನವಿಲನು ಕರೆಸಿ
ಸನ್ಮಾನ ಸಭೆ ಏರ್ಪಡಿಸಿ ಗೌರವಿಸಲೇಬೇಕೆಂದು
ಸರ್ವಾನುಮತದಿಂದ ಆಯ್ತು ತೀರ್ಮಾನ.
ಇನ್ನು ವಹಿಸುವರಾರು ಈ ಕಾರ್ಯಕ್ರಮದ ಅಧ್ಯಕ್ಷತೆ ?
ಹಾಳು ಈ ಪಕ್ಷಿಗಳ ಸಹವಾಸವೇ ಬೇಡ ;
ಕರೆದಲ್ಲಿ ಬಂದು ಭಾಷಣ ಬಿಗಿವ ನಾಯಕರಿಲ್ಲವೇ,
ಅವರೇ ಸಾಕು, ಇನ್ನಾರಿಗಿದೆ ಈ ಒಂದು ದಕ್ಷತೆ ?
*    *     *     *
ಹದ್ದು-ಕಾಗೆಗಳ ಸಭೆಯಲ್ಲಿ ಗದ್ದಲವೋ ಗದ್ದಲ.
ಛೇ, ನಾವಿರಲಿಲ್ಲವೇ ಈ ನಾಡಿನಾದ್ಯಂತ ?
ಬಹುಸಂಖ್ಯಾತರನ್ನೀ ರೀತಿ ಮರೆಯಬಹುದೆ ಸಮಿತಿ ?
ಈ ರಾಜಕೀಯದಲ್ಲಿ ನಮ್ಮಂಥ ಸಾಮಾನ್ಯರನು
ಕೇಳುವವರೇ ಇಲ್ಲ.
ಎಲ್ಲ ಮರ್ಯಾದೆಯೂ ಗರಿತೆರೆದು, ಪುಕ್ಕವ ಕುಣಿಸಿ
ವನಪು-ವಯ್ಯಾರದಲ್ಲಿ ಮೆರೆವ ಮಜಗಾರರಿಗೇ.
ನಾವೀಗಲೇ ಪ್ರತಿಭಟಿಸಿ, ಸಮಿತಿಯ ಬಗೆಗೆ
ಅವಿಶ್ವಾಸನಿರ್ಣಯಮಾಡಿ, ಕಳಿಸೋಣ
ರಾಷ್ಟ್ರಾಧ್ಯಕ್ಷರಿಗೊಂದು ತಂತಿ,
ಅದಕ್ಕಾಗಿ ಈಗಲೇ ಸಿದ್ಧಪಡಿಸೋಣ ಒಂದು
ವಿಶೇಷ ಸಮಿತಿ.
*    *     *     *
ದೂರ ಮಲೆನಾಡಿನಲಿ,
ಹಸಿರ ಚಕ್ರವ್ಯೂಹದಲಿ ಹೊಕ್ಕ ಬಿಸಿಲ ಕಿರಣಕೂ
ದಾರಿತಪ್ಪುವ ಹೆಗ್ಗಾಡಿನಾಳದಲಿ.
ಯಥಾ ಪ್ರಕಾರ ಧುಮುಕಿತ್ತು ಲಕ್ಷ ಪಕ್ಷಿಯ ಕೊರಳ ಜಲಪಾತ
ಕಂದರದ ಕಿವಿಗಳಲಿ.
ಗರುಡ ತನ್ನ ಪಾಡಿಗೆ ತಾನು ಗರಿಗೆದರಿ
ಹಾರಾಡಿತ್ತು, ನೀಲಿಯ ಬಾನ ಬೆನ್ನೊಳು ಹೊತ್ತು !
ಹಂಸ ಎದೆಯೆತ್ತಿ ಗಂಭೀರವಾಗಿ ತೇಲಿತ್ತು
ಹೂನಗುವ ಕಾಸಾರ ಜಲಗಳಲಿ !
ಜಂತೆಯಲಿ ಗೂಡುಕಟ್ಟಿದ್ದ ಗುಬ್ಬಚ್ಚಿ ಮಗ್ನವಾಗಿತ್ತು
ಮರಿಗೆ ಗುಟುಕನು ಕೊಡುವ ವಾತ್ಸಲ್ಯಭಾವದಲಿ !