ಹೂಗ್ಲಿ ಜಿಲ್ಲೆ, ಭದ್ರೇಶ್ವರದ ಬಳಿ ಪರಲವಿಘಟ ಎಂಬುದೊಂದು ಹಳ್ಳಿ. ಅಲ್ಲಿ ರಾಸಬಿಹಾರಿಯ ಸೊದರ ಮಾವನ ಮನೆ. ಆ ಮನೆಯಲ್ಲಿ ೧೮೮೬ನೇ ಮೇ ತಿಂಗಳಲ್ಲಿ ರಾಸಬಿಹಾರಿ ಹುಟ್ಟಿದ. ಬರದ್ವಾನ್‌ಜಿಲ್ಲೆಯ ಸುಬಲ್ದಹ ಹಳ್ಳಿಯಲ್ಲಿ ತಾತ ಕಾಲಿಚರಣ ಬೋಸರ ಲಾಲನೆಪಾಲನೆಯಲ್ಲಿ ಬೆಳೆದ ಬಾಲಕ ರಾಸಬಿಹಾರಿ. ತಂದೆ ಚಂದ್ರನಾಗೂರಿನಲ್ಲಿದ್ದ. ಮಗನನ್ನು ಅಲ್ಲಿಗೆ ಕರೆಸಿಕೊಂಡ. ಮೊದಮೊದಲ ವಿದ್ಯಾಭ್ಯಾಸವೆಲ್ಲ ಚಂದ್ರನಾಗೂರಿನಲ್ಲಾಯಿತು. ಅಪ್ಪ  ವಿನೋದಬಿಹಾರಿ ಸಿಮ್ಲಾ ಸರ್ಕಾರಿ ಮುದ್ರಣಾಲಯದಲ್ಲಿ ಕೆಲಸಕ್ಕೆ ಸೇರಿದ.

‘‘ಯೋಧನಾಗಬೇಕು’’

ಚಿಕ್ಕಂದಿನಿಂದ ರಾಸಬಿಹಾರಿ ಮಹಾತುಂಟ; ಯಾರ ಮಾತಿಗೂ ಜಗ್ಗುವವನಲ್ಲ; ಎಂತಹವರಿಗೂ ತಲೆ ಬಾಗುವವನಲ್ಲ. ಈ ಪುಟ್ಟ ಫಟಿಂಗ ಮುಂದೆ ಮಹಾ ಹೋರಾಟದ ನಾಯಕನಾಗುವನೆಂದು ಯಾರೂ ಭಾವಿಸಿರಲಿಲ್ಲ. ಜಗಳವಾಡುವುದು ಅವನ ಜಾತಕದ ಲಕ್ಷಣ. ಚಂದರನಾಗೂರಿನ ಡೂಪ್ಲೆ ಕಾಲೇಜಿನಲ್ಲಿ ಓದುತ್ತಿದ್ದಾಗ ಅಲ್ಲಿ ಉಪಾಧ್ಯಾಯರುಗಳೊಂದಿಗೆ ಜಗಳ. ಆ ಶಾಲೆ ಬಿಟ್ಟ; ಆ ಊರನ್ನೇ ಬಿಟ್ಟ! ಕಲ್ಕತ್ತೆಗೆ  ಬಂದು ಮಾರ್ಟನ್ ಶಾಲೆ ಸೇರಿದ.

ಅದೇಕೋ ಅವನಿಗೆ ಪುಸ್ತಕ ಶಿಕ್ಷಣ ರುಚಿಸಲಿಲ್ಲ; ಶಸ್ತ್ರ ಶಿಕ್ಷಣ ಬಯಸಿದ. “ನಾನೊಬ್ಬ ಯೋಧನಾಗಬೇಕು. ಸಂಗ್ರಾಮ-ಶಾಸ್ತ್ರ-ಕೋವಿದನಾಗಬೆಕು; ಸೇನಾನಿಯಾಗಬೇಕು”-ಇದು ಅವನ ಆದರ್ಶವಾಯಿತು.ಶಾಲೆ ಬಿಟ್ಟು ಸೈನ್ಯಕ್ಕೆ ಸೇರುವ ಪ್ರಯತ್ನ ಮಾಡಿದ  ಇದಕ್ಕಾಗಿ ಮನೆ ಬಿಟ್ಟು ಎಷ್ಟು ಪ್ರಯತ್ನ ಮಡಿದರೂ ಅವನ ಆಸೆ ಪೂರೈಸುವಂತೆ ಕಂಡುಬರಲಿಲ್ಲ.

“ನೀನು ಬಂಗಾಳಿ, ನೀವು ಹುಟ್ಟು ದುರ್ಬಲರು, ನೀವು ಕ್ಷತ್ರಿಯ ಜೀವನಕ್ಕೆ ಅರ್ಹರಲ್ಲ. ಆದ್ದರಿಂದ ನಿನ್ನನ್ನು ಸೈನ್ಯಕ್ಕೆ ಸೇರಿಸಲು ಸಾಧಯವಿಲ್ಲ”-ಇದು ಆಂಗ್ಲ ಅಧಿಕಾರಿಗಳು ಎತ್ತುತ್ತಿದ್ದ ಆಕ್ಷೇಪಣೆ. ಇದು ರಾಸಬಿಹಾರಿಯ ಆತ್ಮಗೌರವಕ್ಕೆ ಬಹಳ ನೋವನ್ನು ಉಂಟು ಮಾಡಿತು. “ಬಂಗಾಳಿಗಳೆಲ್ಲ ಕ್ಷಾತ್ರ ಜೀವನಕ್ಕೆ ಅನರ್ಹರೇ?  ಬಂಗಾಳದ ಜನ ಸಮುದಾಯಕ್ಕೆ ಬಂದ ದೌರ್ಬಲ್ಯದ ಅಪಖ್ಯಾತಿಯಿಂದ ಅದನ್ನು ರಕ್ಷಿಸಬೇಕು” ಎಂದು ಸಂಕಲ್ಪ ಮಾಡಿದ.

ಬಾಂಬುಗಳ ಕಾರ್ಖಾನೆ

ರಾಸಬಿಹಾರಿಯ ತಾಯಿ ಮಗನ ಮನಸ್ಸಿನಲ್ಲಿ ಏನೇನು ಆಲೋಚನೆಗಳು ನಡೆಯುತ್ತಿವೆಯೆಂಬುದನ್ನು ಗಮನಿಸಿದಳು. ಮಗನನ್ನು ಸಿಮ್ಲಾಕ್ಕೆ ಕರೆದೊಯ್ದಳು. ಮಗನಿಗೂ ಮುದ್ರಣಾಲಯದಲ್ಲೇ ತಂದೆ ಒಂದು ಕೆಲಸ ಕೊಡಿಸಿದ. ಅಲ್ಲಿ ಕೆಲಸದಲ್ಲಿದ್ದಾಗ ಹುಡುಗ ಚೆನ್ನಾಗಿ ಇಂಗ್ಲೀಷ್ ಕಲಿತ, ಟೈಪಿಂಗ ಕಲಿತ. ಮುದ್ರಣಾಲಯದ ಕೆಲಸಗಾರೆಲ್ಲ ಏನೋ ಗಲಾಟೆಗಾರಂಭಿಸಿದರು. ರಾಸಬಿಹಾರಿಯೂ ಕೆಲಸಗಾರರೊಂದಿಗೆ ಸೇರಿದನೆಂದು ತಂದೆಗೆ ಕೋಪ ಬಂತು. ಮಗ ಕೆಲಸಕ್ಕೆ ರಾಜಿನಾಮೆ ಕೊಟ್ಟ ಮನೆ ಬಿಟ್ಟ ಅಲ್ಲಿ ಇಲ್ಲಿ ಓಡಾಡಿ, ಕಡೆಗೆ ಡೆಹರಾಡೂನಿನಲ್ಲಿ ಅರಣ್ಯ ಸಂಶೋಧನಾ ಕಾರ್ಯಾಲಯದಲ್ಲಿ ರಸಾಯನಶಾಸ್ತ್ರ ಸರದಾಋ‌ಪೂರ್ಣಸಿಂಗನಿಗೆ ಪ್ರಯೋಗಶಾಲಾ ಮಾಣಿಕಯಾಗಿ ಕೆಲಸಕ್ಕೆ ಸೇರಿದ.

ಡೆಹರಾಡೂನಿನಲ್ಲಿ ಪ್ರಫುಲ್ಲನಾಥ ಠಾಕೂರ ಎಂಬ ವರ ಭವನ; ಅದಕ್ಕೆ ‘ಠಾಕೂರವಿಲ್ಲಾ’ ಎಂದು ಹೆಸರು. ಆ ಭವನದ ಸಂರಕ್ಷಕ ಅತುಲಚಂದ್ರ ಘೋಷ್‌. ಇವನು ರಾಸಬಿಹಾರಿಗೆ ಪರಮಮಿತ್ರನಾಧ. ಮನೆ ಯಜಮಾನನಿಗೆ ಇದು ಗೊತ್ತಿಲ್ಲ. ಆ ಭವನದ ಸುತ್ತ ವಿಶಾಲ ಕ್ಷೇತ್ರ; ಒಂದು ಮೂಲೆಯಲ್ಲಿ ಅತುಲಚಂದ್ರನ ವನವಾಸಕ್ಕಾಗಿ ಒಂದು ಮನೆ;  ಅದು ಮಾವಿನ ತೋಪಿನ ಮಧ್ಯೆ ಇತ್ತು. ಈ ಮನೆಯಲ್ಲಿ ರಾಸಬಿಹಾರಿ, ಅತುಲಚಂದ್ರ, ಇನ್ನೂ ಕೆಲವು ತರುಣರುಸೇರಿ ಬಾಂಬುಗಳನ್ನು ಮಾಡಲು ಆರಂಭಿಸಿದರು; ನಾಯಕ ರಾಸಬಿಹಾರಿ. ಇದವನು ಪ್ರಯೋಗಶಾಲೆಯಿಂದ ಬೇಕಾದ ಸಾಮಗ್ರಿ ತರುತ್ತಿದ್ದ ! ಅತುಲಚಂದ್ರ ಹಣಸಹಾಯ ಕೊಟ್ಟ! ಪ್ರತಿ ದಿನವೂ ಆ ರಸ್ಯ ಗೃಹದಲ್ಲಿ ತರುಣರೆಲ್ಲ ಸೇರುತ್ತಿದ್ದರು. ಅಲಹಾಬಾದ ಶ್ರೇಷ್ಠ ನ್ಯಾಯಸ್ಥಾನದ ವಕೀಲ ಜೋಗೀಂದ್ರನಾಥರೂ ಇವರ ಗುಂಪಿಗೆ ಸೇರಿದರು.

ಆ ಕಾಲದಲ್ಲಿ ಸಹರಾನಪುರದ್ ಜೀತೇಂದ್ರ ಮೋಹನ ಮುಖರ್ಜಿ ಎಂಬುವನು ರಹಸ್ಯ ಸಂಘವೊಂದನ್ನು ಸ್ಥಾಪಿಸಿದ್ದ. ೧೯೦೬ರಲ್ಲಿ ಜಿತೇಂದ್ರನಿಗೂ ರಾಸಬಿಹಾರಿಗೂ ಭೇಟಿಯಾಯಿತು.

ಪಂಜಾಬ್, ಸಂಯುಕ್ತ ಪ್ರಾಂತಗಳು ಆಗ ಬಂಗಾಳದ ಕ್ರಾಂತಿಕಾರರ ಚಟುವಟಿಕೆಗಳ ಕೇಂದ್ರಗಳು. ಪಂಜಾಬಿಗೆ ಕ್ರಾಂತಿಯ ಸ್ಫರ್ತಿ ಕೊಟ್ಟವರಲ್ಲಿ ಮೊಟ್ಟ ಮೊದಲಿಗೆ ’ಸ್ವಾಮಿ ನಿರಾಲಂಬ’ ಈ ’ಸ್ವಾಮಿ’ಯೇ ಜತೀಂದ್ರನಾಥ ಬ್ಯಾನರ್ಜಿ!

ಕ್ರಾಂತಿಕಾರರ ಕೂಟಕ್ಕೆ ಜಿತೇಂದ್ರಮೋಹನನ್‌ಏ ನಾಯಕನಾದ. ಡೆಹರಾಡೂನಿನ ರಾಸಬಿಹಾರಿ ಮೂಲಕ ಪಂಜಾಬ್‌ಮತ್ತು ಬಂಗಾಳದ ಕ್ರಾಂತಿಕಾರರ ಮಧ್ಯೆ ಬಾಂಧವ್ಯ ಕಲ್ಪಿಸುವ ಸಲಹೆ ಮಾಡಿದ. ಚಂದ್ರನಾಗೂರಿನ ಶ್ರೀಶಚಂದ್ರ, ಜೀತೇಂದ್ರರ ಸ್ನೇಹ ಬೆಳೆದದ್ದೂ ರಾಸ ಬಿಹಾರಿ ಮೂಲಕವೇ.

ಜಿತೇಂದ್ರಮೋಹನನ ರಹಸ್ಯ ಪತ್ರಗಳೆಲ್ಲ ಹೇಗೋ ಪೊಲೀಸರ ಕೈಗೆ ಬಿದ್ದವು. ಇವನನ್ನು ಹಿಡಿಯಲು ಆಜ್ಞೆ ಹೊರಟಿತು. ಆಗ ನಾಯಕತ್ವವನ್ನು ಜಿತೇಂದ್ರ ರಾಸಬಿಹಾರಿಗೆ ವಹಿಸಿದ. ಸಹರಾನ್‌ಪುರಕ್ಕೆ ಅವನನ್ನು ಬರಮಾಡಿಕೊಂಡು ಹೇಳಬೇಕಾದದ್ದನ್ನೆಲ್ಲ ಹೇಳಿ. ತಾನು ಓದಲು ಇಂಗ್ಲೆಂಡಿಗೆ ಹೊರಟ. ಅಂದಿನಿಂದ ಡೆಹರಾಡೂನ ೭ವರ್ಷಗಳ ಕಾಲ ಬಂಗಾಲ ಮತ್ತು ಪಂಜಾಬ್‌ಕ್ರಾಂತಿಕಾರರ ಸಂಗಮಸ್ಥಾನ ಮತ್ತು ಕುರುಸ್ಥನವೆನಿಸಿತು. ರಾಸಬಿಹಾರಿ ತಾನಿದ್ದ ಪ್ರಯೋಗಾಲಯದಿಂದ ರಾಸಾಯನಿಕ ವಸ್ತುಗಳನ್ನು ತಂದು ಬಾಂಬುಗಳನ್ನು ಮಾಡುತ್ತಿದ್ದ. ನಿವೃತ್ತ ಗೂರ್ಖಾ ಸೈನ್ಯಾಧಿಕಾರಿಗಳಿಂದ ರಿವಾಲ್ವರ್‌ಗಳನ್ನು ಕೊಂಡುಕೊಳ್ಳುತ್ತಿದ್ದ. ಜಿತೇಂದ್ರ ಲಂಡನ್ನಿನಲ್ಲಿ ಓದುತ್ತಿದ್ದನಷ್ಟೆ  ‘ಪುಸ್ತಕ ವ್ಯಾಪಾರಿಗಳ ಮೂಲಕ ರಿವಾಲ್ವರಗಳನ್ನು ಕಳಿಸು’ ಎಂದವನಿಗೆ ಬರೆಯುತ್ತಿದ್ದ.

೧೯೧೧ ಸುಮಾರು, ರಾಸಬಿಹಾರಿಯ ತಾಯಿ ಹಾಸಿಗೆ ಹಿಡಿದು  ಮಲಗಿದ್ದಳು. ಆಗ ರಾಸಬಿಹಾರಿ ಚಂದ್ರನಾಗೂರಿಗೆ  ಬಂದ. ಅಲ್ಲಿ ಮೋತಿಲಾಲ್ ರಾಯ ಕ್ರಾಂತಿಕಾರರ ನಾಯಕಕ ; ಯೋಗಿ ಅರವಿಂದರ ಶಿಷ್ಯ. ರಸಬಿಹಾರಿಗೆ ಅವರ ಪರಿಚಯವೂ, ಅವರ ಮೂಲಕ ಯೋಗಿ ಅರವಿಂದರ ದರ್ಶನವೂ ಆಯಿತು.

ವೈಸರಾಯ್‌ಮೇಲೆ ಬಾಂಬು

ಈ ಕಾಲದಲ್ಲೆ ಇವರಿಗೆ ಒಂದು ರೋಮಂಚಕರ ಯೋಚನೆ ಹೊಳೆದದ್ದು.

ಬ್ರಿಟಿಷ್‌ಸರ್ಕಾರ ಆಗ ಭಾರತದ ರಾಜಧಾನಿಯನ್ನು ಕಲ್ಕತ್ತಯಿಂದ ದೆಹಲಿಗೆ ವರ್ಗಾಯಿಸುತ್ತಿತ್ತು. ಆ ಸರ್ಕಾರದ ಪ್ರತಿನಿಧಿ ‘ವೈಸ್‌ರಾಯ್; ಆಗ ಲಾರ್ಡ್‌ಹಾರ್ಡಿಂಜ್‌ಎಂಬಾತ ವೈಸರಾಯ್‌ಆಗಿದ್ದ. ಅವನು ಬಹು ವೈಭವದಿಂದ ಮೆರವಣಿಗೆಯಲ್ಲಿ ದೆಹಲಿಯನ್ನು ಪ್ರವೇಶಿಸಲು ಸರ್ಕಾರ ಸಿದ್ದತೆ ನಡೆಸುತ್ತಿತ್ತು.

ಮೆರವಣಿಗೆಯಲ್ಲೆ ವೈಸ್‌ರಾಯ್‌ಮೇಲೆ ಬಾಂಬು ಹಾಕಿದರೆ !

ಬ್ರಿಟಿಷ್‌ನೌಕರಶಾಹಿ ಉದ್ಯೋಗಿಗಳ ಹೃದಯಗಳಲ್ಲಿ ಮರಣಭಯವನ್ನುಂಟುಮಾಡುವುದೇ,, ಅವರ ಹೃದಯಗಳಲ್ಲಿ ಸರ್ಕಾರದ ವಿರುದ್ಧ ಬೀಜ ಬಿತ್ತುವುದೇ ಈ ಆಲೋಚನೆಯ ಉದ್ದೇಶ.  ರಾಸಬಿಹಾರಿಯಾದರೋ ಇದನ್ನು ಸಾಧಿಸಿಯೇ ತೀರಬೇಕೆಂದು ಸಂಕಲ್ಪ ಮಾಡಿದ.

ರಾಸಬಿಹಾರಿ ವಸಂತಕುಮಾರ ವಿಶ್ವಾಸನೆಂಬ ತರುಣನೊಂದಿಗೆ ಡೆಹರಾಡೂನಿಗೆ ಬಂದ; ವಿಶ್ವಾಸ ರಾಸಬಿಹಾರಿಯ ಅಡಿಗೆಭಟ್ಟನಾದ. ರಾಸಬಿಹಾರಿ ವಸಂತನಿಗೆ ಬೇಕಾದ ತಿಳವಳಿಕೆ ಕೊಟ್ಟು. ಲಾಹೋರಿಗೆ ಕರೆದೊಯ್ದು ‘ಪಾಫ್ಯುಲರ್ ಡಿಸ್ಪೆನ್ಸರಿ’ ಯಲ್ಲಿ ’ಕಾಪೌಂಡರ’ ಆಗಿ ಸೇರಿಸಿದ.

ಕೆಲವು ದಿನಗಳ ನಂತರ ರಾಸಬಿಹಾರಿ ಚಂದ್ರನಾಗೂರಿಗೆ ಹೋಗಿ, ಅಲ್ಲಿ ತನ್ನ ಸಾಹಸಕಾರ್ಯಕ್ಕೆ ಮಾಡಬೇಕಾದುದನ್ನೆಲ್ಲ ಮಾಡಿದ.

೧೯೧೨ರ ಡಿಸೆಂಬರ ೨೧ನೆಯ ದಿನ ವಸಂತಕುಮಾರ ವಿಶ್ವಾಸ ಲಾಹೋರಿನಿಂದ ದೆಹಲಿಗೆ ಹೊರಟ. ಎರಡು ದಿನಗಳ ನಂತರ ರಾಸಬಿಹಾರಿಯೂ ದೆಹಲಿಗೆ ಬಂದ.

ಬಿತ್ತು ಬಾಂಬ್ !

ವೈಸರಾಯರ ಮೆರವಣಿಗೆ ಮಹಾವೈಭವದಿಂದ ಸಾಗುತ್ತಿದೆ. ಜನಸಂದಣಿಯಂತೂ ಊಹೆಗೇ ನಿಲುಕದು. ಆನೆಯ ಮೇಲೆ ಅಂಬಾರಿ; ಅಂಭಾರಿಯಲ್ಲಿ ಲಾರ್ಡ ಹಾರ್ಡಿಂಜ್‌ಅತ್ತ ಇತ್ತ ನೋಡುತ್ತ, ಮಂದಹಾಸ ಬೀರುತ, ಹಾರಗಳನ್ನು ಸ್ವೀಕರಿಸುತ್ತಲಿದ್ದಾನೆ.

ಇದ್ದಕ್ಕಿದ್ದ ಹಾಗೆಯೇ ಪ್ರಳಯ ಸಂಕಟ ಧ್ವನಿಯಾಯಿತು !

ಅಂಬಾರಿಯ ಮೇಲೊಂದು ಬಾಂಬು ಬಿತ್ತು! ಸಿಡಿಯಿತು! ವಯಸರಾಯರ ಅಂಗರಕ್ಷನೊಬ್ಬ ತಕ್ಷಣ ಪ್ರಾಣ ಬಿಟ್ಟ ಇನ್ನೊಬ್ಬ ಗಾಯಗೊಂಡ ವೈಸರಾಯರಿಗೂ  ತೀವ್ರ ಗಾಯಗಳಾದವು. ಭೀತಿ, ಪ್ರಾಣ ಸಂಕಟ, ನೂಕು ನುಗ್ಗಲು, ಗಜಿಬಿಜಿ- ಈ ದುರಂತ ವಾತಾವರಣದಲ್ಲಿ  ರಾಸಬಿಹಾರಿ, ವಸಂತ ಇಬ್ಬರೂ ಮಾಯವಾದರು!

ಇಷ್ಟೆಲ್ಲ ಪಿತೂರಿ, ಇಷ್ಟೆಲ್ಲ ಸಾಹಸ ನಡೆದದ್ದು ವೈಸರಾಯರನ್ನು ಕೊಲ್ಲಲಿಕ್ಕಾಗಿ, ಆದರೆ ದೇವರ ಇಚ್ಚೇ ಬೇರೆಯಾಗಿತ್ತು. ಹಾರ್ಡಿಂಜ್‌ಉಳಿದುಕೊಂಡ. ಆದರೆ ಬಾಂಬ್‌ಸ್ಫಠನದ ಪರಿಣಾಮವಾದರೋ ಅಳತೆಯನ್ನು ಮೀರಿದ್ದು. ಈ ಸುದ್ಧಿ ಭಾರತಾದ್ಯಂತ ಹರಡಿತು! ಎಲ್ಲರ ಎದೆಗಳೂ ಝಲ್ಲೆಂದವು.

ಪ್ರುಭುತ್ವದವರ ಮನೋಧಮ್, ಅವರ ಕಾರ್ಯ ಕ್ರಮ ಕೇಳಬೇಕೆ ? ಬ್ರಿಟಿಷ್ ಸಾಮ್ರಾಜ್ಯದ ಘನತೆಗೆ ಒಪ್ಪುವ ಹಾಗಿತ್ತು ಸೇಡಿನ ಕಾಠಿಣ್ಯ.

ಬಾಂಬನ್ನು ಎಸೆದವರು ಯಾರು? ಎಲ್ಲಿಂದ ಎಸೆದರು? ಮೋತಿಲಾ‌ಲ ರಾಯ್‌ಹೇಳುವುದನ್ನು ಕೇಳಿ :

“ಅಂದು ಮಹಾಸಂಭ್ರಮೋತ್ಸವದ ದಿನ. ಅಲಂಕೃತ ಅಂಬಾರಿಯ ಆನೆ ಚಾಂದಿನೀ ಚೌಕಕ್ಕೆ ಬಂತು. ಅದೇ ಚೌಕದ ಮನೆಯ ಮೇಲೊಂದರಿಂದ ವಸ್ತ್ರಾಲಂಕಾರ ಭೂಷಿತಳಾಧ ಸುಂದರಿಯೊಬ್ಬಳು ಬಾಂಬನ್ನು ಎಸೆದಳು.  ಆ ಸುಂದರಿ ಮತ್ತೆ ಯಾರು ಅಲ್ಲ ; ವಸಂತಕುಮಾರ ವಿಶ್ವಾಸ! ಈ ವೇಷಧಾರಿಯ ಹೆಸರು ಲಕ್ಷ್ಮೀಬಾಯಿ! ಬಾಂಬನ್ನೆಸೆದ ಕೂಡಲೇ ವಿಶ್ವಾಸ ವೇಷದ ಬಟ್ಟೆಬರೆಗಳನ್ನೆಲ್ಲ ಕಳಚಿದ, ಎಸೆದ, ಮಾಳಿಗೆಯಿಂದಿಳಿದ, ಗುಂಪಿನಲ್ಲಿ ಬೆರೆತ. ನಿಮಿಷದಲ್ಲಿ ಮಾಯವಾದ.”

ರಾಸಬಿಹಾರಿ- ಪೊಲೀಸರ ಗೆಳೆಯ !

ವಸಂತಕುಮಾರ ವಿಶ್ವಾಸ ನದಿಯ ಕಡೆ ಹೊರಟ! ರಾಸಬಿಹಾರಿ ಬೋಸ್‌ಡೆಹರಾಡೂನ್ ಕಡೆ ಹೊರಟ! ತಾನು ಕೆಲಸ ಮಾಡುತ್ತಿದ್ದ ಕಚೇರಿಯವರನ್ಲೆಲ್ಲ ಸಭೆ ಸೇರಿಸಿದ. ದೆಹಲಿಯ ಬಾಂಬ್‌ಘೋರ ಕೃತ್ಯ ಕುರಿತು ತಾನೇ ಅಸಾಧ್ಯವಾಗಿ ಖಂಡಿಸಿ ಮಾತನಾಡಿದ. ಸಾರ್ವಜನಿಕ ಸಭೆಗಳಲ್ಲೂ ಭಾಗವಹಿಸಿ ವೇಕೆಕೆಯನ್ನೇರಿ, ವೈಸರಾಯರ ಮೇಲೆ ನಡೆಸಿದ ಪಾಶವೀಕೃತ್ಯವನ್ನು ಖಂಡಿಸಿದ. ಎಲ್ಲ ಅಧಿಕಾರಿಗಳ ಕಣ್ಣಿಗೂ ಮಣ್ಣೆಸೆದ! ಇವನೆಂತಹ ರಾಜಭಕ್ತ’ ಎಂದು ಅವರ ಬಯಲ್ಲೇ ಹೊಗಳಿಸಿಕೊಂಡ! ಈ ಹೀನ ಕೃತ್ಯವನ್ನು ಖಂಡಿಸಿ ರಾಸಬಿಹಾರಿ ಬೋಶ್ ಮಾಡಿದ ಭಾಷಣಗಳನ್ನು ಕೇಳಿ, ಸಂಯುಕ್ತ ಪ್ರಾಂತ, ಪಂಜಾಬ್ ಪೊಲೀಸ ಅಧಿಕಾರಿಗಳ ಆನಂದಕ್ಕೆ ಪಾರವೇ ಇಲ್ಲ. ಅವರಲ್ಲೊಬ್ಬ ಅಧಿಕಾರಿ ಸುಶೀಲಚಂದ್ರ ಘೋಷ್ ಎಂಬುವವನು ರಾಸಬಿಹಾರಿಯ ಸ್ನೇಹ ಬಯಸಿದ . ಚಂದ್ರನಾಗೂರಿನ ಅನುಮಾನದ ಅಸಾಮಿ ಶ್ರೀಶಚಂದ್ರ ಬೋಸನ ವಿಚಾರ ತಿಳಿದುಕೊಳ್ಳಲು ಪ್ರಯತ್ನ ಮಾಡಿದ. ರಾಸಬಹಾರಿಯಾದರೋ ಪೊಲೀಸಿನವರ ಸ್ನೇಹ-ಸಲಿಗೆಗಳನ್ನು ತನ್ನ ಪ್ರಯೋಜನಕ್ಕಾಘಿ ಉಪಯೋಗ ಮಾಡಿಕೊಳ್ಳುವುದಲ್ಲಿ ನಿಪುಣ. ಅವರಿಗೆಲ್ಲ ಚಳ್ಳೆಕಾಯಿ ತಿನ್ನಿಸುತ್ತ ಬಂದ. ಡೆಹರಾಡೂನಿನಲ್ಲಿದ್ದ. ಬಂಗಾಳದ ಪೊಲೀಸ ಗೂಢಾಚಾರಿ ಅಧಿಕಾರಿಯೇ “ಇಲ್ಲಿರುವ ಬಂಗಾಳಿ ಪಂಗಡದವರೆಲ್ಲ ಅಭಿಪ್ರಾಯದಲ್ಲಿ ರಾಸಬಿಹಾರಿ ಪೊಲೀಸರಿಗೆ ಸುದ್ದಿ ಕೊಡುವ ಗೂಢಚಾರಿ’ ಎಂದು ವರದಿ ಮಾಡುವ ಮಟ್ಟಕ್ಕೆ ಅವರನ್ನು ತಪ್ಪು ದಾರಿಗೆಳೆದ! ಯಾರು  ಜಾಣರು ಈ ಕಲೆಯಲ್ಲಿ- ರಾಸ ಬಿಹಾರಿಯೋ, ನಿಪುಣ ಪೊಲೀಸ್‌ಗೂಢಚಾರಿಗಳೋ! ದೆಹಲಿಯ ಬಾಂಬ್ ದುರಂತದ ನಂತರ ಲಾರ್ಡ್‌ಹಾರ್ಡಿಂಜ್‌ಚಿಕಿತ್ಸೆಗಾಗಿ ಡೆಹರಾಡೂನಿನ ‘ಸರ್ಕ್ಯೂಟ್‌ಹೌಸ್‌’ಗೆ ಬಂದ. ಆ ಸ್ಥಳಕ್ಕೆ ರಾಸಬಿಹಾರಿಯನ್ನು ಸಹ ಬಿಟ್ಟರು ಪೊಲೀಸಿನವರು!

‘ಸೋದರರೇ, ಎದ್ದೇಳಿ !

೧೯೧೨ನೇ ಅಕ್ಟೋಬರಿನಲ್ಲಿ, ರಾಸಬಿಹಾರಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಬ್ರಿಟಿಷ್ ಸರ್ಕಾರದ ವಿರುದ್ದ ಪ್ರಚಾರ ಮಾಡಲು, ಜನರಲ್ಲಿ ಅವಿಶ್ವಾಸ ಬೆಳೆಸಲು,‘ಲಿಬರ್ಟಿ’ ಎಂಬ ಆಂಗ್ಲ ಪತ್ರಾವಳಿ ಹೊರಡಿಸುವ ನಿರ್ಣಯವಾಯಿತು. ಆ ಪತ್ರಾವಳಿ ಭಾರತೀಯರಲ್ಲಿ ಮಾಡಿದ ವಿನಂತಿ ಹೀಗಿದೆ:

“ಕ್ರಾಂತಿಯೆಂಬುದು ಸಾಮಾನ್ಯ ಮನುಷ್ಯನ ಕೆಲಸವಲ್ಲ; ಅದು ದೇವ ಇಚ್ಛೆ; ಅವನ ಇಚ್ಛೆ ಇತರ ಸಾಧನಗಳ ಮೂಲಕ ಪ್ರಟಕವಾಗುತ್ತದೆ. ಮಹತ್ಕಾರ್ಯ ಸಾಧಕರು ದೇವಾಂಸ ಪುರುಷರು. ನಿರಂಕುಶಾಧಿಕಾರ ಸರ್ಕಾಋದ ಪ್ರತಿನಿಧಿಗಳ ಮೇಲೆ ಬಾಂಬುಗಳನ್ನೆಸೆಯುವವರು ಯಾರು? ಸರ್ವಶಕ್ತನಾದ ಭಗವಂತ ಬಲಿದಾನ ಮಾಡಿದ ಮಹಾಮಹಿಮರ ಆತ್ಮಗಳಿಗೆ ತೃಪ್ತಿಯಾಗುವುದು ಯಾವಾಗ? ಅವರ ಋಣ ತೀರುವುದು ಯಾವಾಗ? ಭಾರತೀಯ ತರುಣರು ಅಸಂಖ್ಯಾತರಾಗಿ ಮುಂದೆ ಬಂದು ’ದೇಶಕ್ಕಾಗಿ ಬಲಿದಾನ ಮಾಡಿದವರೊಬ್ಬೊಬ್ಬರ ಪ್ರತಿನಿಧಿಗಳು ನಾವು’ ಎಂದು ಸಾರಿದಾಗ, ಕಠೋರ ಕ್ರಾಂತಿಯೊಂದೇ ಈ ಸಮಯದ ಅವಶ್ಯಕತೆ. ಸೋದರರೇ  ! ಎದ್ದೇಳಿ!

ಪೊಲೀಸರ ದೌರ್ಜನ್ಯ ದಿನದಿನಕ್ಕೆ ಹೆಚ್ಚಿತು. ಕೋಪಗೊಂಡ ಕ್ರಾಂತಿಕಾರರು ೧೭-೦೫-೧೯೧೩ ರಂದು ಲಾಹೋರಿನಲ್ಲಿ ಅಸಿಸ್ಟೆಂಟ್ ಕಮೀಷನರ‍್ ಗೋರ್ಡನ್ ಮೇಲೆ ಬಾಂಬೆಸೆದು ಅವನನ್ನು ಕೊಂದರು. ಇದಕ್ಕೆ ಕಾರಣ ರಾಸಬಿಹಾರಿ, ಅವಧಬಿಹಾರಿ ಮತ್ತು ವಸಂತ ವಿರ್ಶವಾಸ. ಈ ಕೊಲೆಯ ಸಂಬಂಧದಲ್ಲಿ ೧೯೧೪ರಲ್ಲಿ ಹನ್ನೊಂದು ಮಂದಿಯನ್ನು ಗಲ್ಲಿಗೇರಿಸಿದರು.

ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ

ಅನಾರೋಗ್ಯದ ಕಾರಣಕೊಟ್ಟು ರಾಸಬಿಹಾರಿ ದೀರ್ಘಕಾಲ ರಜೆ ಪಡೆದ. ಚಂದ್ರನಾಗೂರಿಗೆ ಬಂದ. ಅವನೂ ಗೆಳೆಯರೂ ಸೇರಿ ಕಲ್ಕತ್ತೆಯ ಕಾಲೇಜ ಚೌಕದಲ್ಲಿ  ರಿವಾಲ್ವರ್‌ಹಾರಿಸಿ ಹೆಡ್‌ಕಾನಸ್ಟೇಬಲನನ್ನು ಕೊಂದರು. ಆಗ ರಾಸಬಿಹಾರಿಯ ಎಡಗೈ ಮೂರನೆ ಬೆರಳಿಗೆ ಗಾಯವಾಯಿತು.

೧೯೦೮ರಿಂದಲೇ ಶಚೀಂದ್ರನಾಥ ಸನ್ಯಾಲ್‌ವಾರಣಾಸಿಯಲ್ಲಿ ‘ಅನುಶೀಲನ ಸಮಿತಿ’ ರಚಿಸಿದ್ದ. ೧೯೧೩ರಲ್ಲಿಬಂಗಾಳದ ಕ್ರಾಂತಿಕಾರರೊಂದಿಗೆ ಸಂಪರ್ಕ ಕಲ್ಪಿಸಿಕೊಂಡು ಮದ್ದುಗುಂಡು, ಶಸ್ತ್ರಸಂಗ್ರಹ ಮಾಡಲಾರಂಬಿಸಿದ. ಬಾಂಬುಗಳ ನಿರ್ಮಾಣ, ರಾಜದ್ರೋಹಾತ್ಮಕ ಸಾಹಿತ್ಯ ಪ್ರಚಾರ, ಯೋಧರ ರಾಜಭಕ್ತಿಯ ಬೇರುಗಳನ್ನು ಕೀಳುವುದು- ಇವೇ ಅವರು ಸ್ಥಾಪಿಸಿದ ‘ತರುಣರ ಸಂಘದ’ ಕೆಲಸ. ೧೯೧೩-೧೪ ಸುಮಾರಿನಲ್ಲಿ ಶಚೀಂದ್ರ, ರಸಬಿಹಾರಿ, ಅಮರೇಂದ್ರನಾಥ ಚಟರ್ಜಿ ಮೂವರೂ” ೧೮೫೭ರಲ್ಲಿ ನಡೆದಂತಹ ಹೋರಾಟಕ್ಕೆ ದಾರಿ ಮಾಡಬೇಕು. ಇದಕ್ಕೆ ಬ್ರಿಟಿಷ್‌ಇಂಡಿಯ ಸೈನ್ಯದ ಭಾರತೀಯ ಯೋಧರನ್ನೇ ಉಪಯೋಗಿಸಿಕೊಳ್ಳಬೇಕು” ಎಂಬುದಾಗಿ ವಿಚಾರ ಮಾಡಿದರು. ರಾಸಬಿಹಾರಿ ಮಿಲಿಯಂ ಕೋಟೆಗೆ ಹೋಗಿಸಿ ಸಿಪಾಯಿಗಳು, ಹವಾಲ್ದರರೊಂದಿಗೆ ಮಾತನಾಡಿದ. “ಬಂಗಾಳದ ಕ್ರಾಂತಿಕಾರರ ನಾಯಕತ್ವನ್ನು ನೀನೇ ವಹಿಸಿಕೊಳ್ಳಬೇಕು” ಎಂದು ಜ್ಯೋತೀಂದ್ರನಾಥನಿಗೆ ಹೇಳಿದ.

ರಾಸಬಿಹಾರಿ ಮತ್ತು ಅವನ ಗೆಳೆಯರು ವಾರಾಣಿಸಿ, ದೆಹಲಿ, ಲಾಹೋರ್‌ಗಳಿಗೆ ಹೋಗಿ ಛಿದ್ರವಾಗಿದ್ದ ಕ್ರಾಂತಿಕಾರಕ ಕಾರ್ಯಶಕ್ತಿಗಳನ್ನೆಲ್ಲ ಒಂದುಗೂಡಿಸುವ ಪ್ರಯತ್ನ ಮಾಡಿದರು.

ಪೊಲೀಸರ ಬೇಟೆ

ಆದರೆ ೧೯೧೪ನೆಯ ಫೆಬ್ರವರಿಯಲ್ಲಾದ ದೆಹಲಿ ಗೃಹಶೋಧನೆಗಳ ಫಲವಾಗಿ ರಾಸಬಿಹಾರಿ ಬೋಸ್‌ಬಂಧನಕ್ಕೂ ಆಜ್ಞೆ ಹೊರಟಿತು. ಕುಡಲೆ ರಾಸಬಿಹಾರಿ ಚಂದ್ರನಾಗೂರಿಗೆ ಓಡಿದ. ಶ್ರೀಶಚಂದ್ರ ಘೋಷನಾದರೋ ರಾಸಬಿಹಾರಿ ರಕ್ಷಣೆಗಾಗಿ ಹಗಲಿರುಳೂ ಕಾದಿದ. ಅವನ ಮನೆಯಲ್ಲೊಂದು ಕೋಣೆ; ಅದಕ್ಕೆ ಯವಾಗಲೂ ಬೀಗ. ಒಳಗೆ ರಾಸಬಿಹಾರಿ! ನಿತ್ಯ ಜೀವನದ ಎಲ್ಲ ವ್ಯವಹಾರಗಳೂ ಕೋಣೆಯಲ್ಲೇ. ೧೯೧೪ರ ಮಾರ್ಚ ಎಂಟರಂದು ಇದ್ದಕ್ಕಿದ್ದ ಹಾಗೆಯೇ ಪೊಲೀಸರ ಡೆನ್‌ಹ್ಯಾಂ ತೆಗಾರ್ಟರ ನಾಯಕತ್ವದಲ್ಲಿ ಒಂದು ರಾತ್ರಿ ಗೃಹಶೋಧನೆಗೆ ಬಂದರು. ಹುಡುಕಿ ಹುಡುಕಿ ಬೇಸತ್ತರು : ರಸಬಿಹಾರಿ ಸಿಕ್ಕಲಿಲ್ಲ, ರಶಬಿಹಾರಿಯಾದರೋ ದೂರದ ಮಾವಿನ ಮರದ ಹಿಂದೆ ನಿಂತು ಪೊಲೀಸರ ಶೋಧನೆ ನೋಡುತ್ತಿದ್ದ! ಇದಾದ ಮೇಲೆ ರಾಸಬಿಹಾರಿ ಮನೆ ಬದಲಾಯಿಸಿದ. ಪಂಜಾಬ ಸರ್ಕಾರ ರಾಸಬಿಹಾರಿಯನ್ನು ಹಿಡಿಯಲು ಸುಳಿವು ಕೊಟ್ಟವರಿಗೆ ಐದು ಸಾವಿರ ರೂಪಯಿಗಳ ಬಹುಮಾನ ಕೊಡವುದಾಗಿ ಪ್ರಕಟಿಸಿತು. ಆಮೇಲೆ ಆ ಬಹುಮಾನ ದ್ರವ್ಯವನ್ನು ೧೨,೦೦ ರೂಪಯಿಗಳೆಗೇರಿಸಿತು; ಪ್ರಯೋಜನವಾಗಲಿಲ್ಲ.

 

ರಾಸಬಿಹಾರಿ ದೂರದಲ್ಲಿ ನಿಂತು ಪೋಲಿಸರ ಶೋಧನೆ ನೋಡುತ್ತಿದ್ದ

ಅವಿತುಕೊಂಡು ಜೀವಿಸುವುದು ರಾಸಬಿಹಾರಿಗೆ ಸಾಕಾಯಿತು; ಬಂಗಾಳ ಬಿಟ್ಟು ವಾರಣಸಿಗೆ ಬಂದ. ೧೯೧೪ನೆ ಏಪ್ರೀಲನಿಂದ ೧೯೧೫ನೆ ಜನವರಿವರೆಗೆ  ರಹಸ್ಯವಾಗಿಯೇ ಕ್ರಾಂತಿಕಾರ್ಯ ನಡೆಸಿದ. ಅವನ ಸಂಚಾರವೆಲ್ಲ ರಾತ್ರಿ, ಕತ್ತಲಲ್ಲಿ, ತನ್ನ ಸಂಗಾತಿಗಳ ಭೇಟಿ ಗಂಗಾ ಘಾಟಗಳಲ್ಲೋ, ಮರಳು ದಿಬ್ಬಳ ಮೆಲೋ. ಈ ಮನುಷ್ಯನು ಪೊಲೀಸ್ ಸಹಸ್ರಾಕ್ಷರ ಕಣ್ಣುಗಳಿಗೆ ಎಂತಹ ಮಂಕುಬೂದಿ ಎರಚುತ್ತಿದ್ದನೋ ದೇವರೇ ಬಲ್ಲ! ವಾರಣಾಸಿಯಲ್ಲೇ ಬೋಸ್‌ಒಂದು ವರ್ಷವಿದ್ದ. ಪೊಲೀಸರ ಕಣ್ಣಿಗೆ ಬೀಳಲಿಲ್ಲ!

ನಾಯಕ ರಾಸಬಿಹಾರಿ

ರಾಸಬಿಹಾರಿ ಶಚೀಂದ್ರನಾಥ ಸನ್ಯಾಲನಿಂದ ನಾಯಕತ್ವ ವಹಿಸಿಕೊಂಡ. ಉತ್ತರ ಭಾರತದ ನಾನಾ ಪ್ರಾಂತಗಳ ಕ್ರಾಂತಿಕಾರರನ್ನೆಲ್ಲ ಒಂದುಗೂಡಿಸಿ, ಭಾರತೀಯ ಸಿಪಾಯಿಗಳ ಸಹಾಯದಿಂದ ಸಶಸ್ತ್ರ ದಂಗೆ ಎಬ್ಬಿಸದೆಂಬುದು ರಾಸಬಿಹಾರಿ ಆಪೇಕ್ಷೆ. ರಾಸಬಿಹಾರಿ ತನ್ನ ಆಪ್ತ ಸ್ನೇಹಿತರಿಗೆಲ್ಲ ಬಾಂಬುಗಳನ್ನು ಮಾಡುವುದು ಹೇಗೆ, ರಿವಾಲ್ವರುಗಳನ್ನು ಉಪಯೋಗಿಸುವುದು ಹೇಗೆ ಎಂಬುದನ್ನೆಲ್ಲ ವಿವರಿಸುತ್ತಿದ್ದ.

ಪಿಂಗಳೆ ಎಂಬ ಮರಾಠಾ ತರುಣ ಅಮೆರಿಕಕ್ಕೆ ಹೋಗಿ ಅಲ್ಲಿ ಗದರ್‌ಪಕ್ಕಕ್ಕೆ ಸೇರಿ, ೧೯೧೪ರಲ್ಲಿ ಭಾರತಕ್ಕೆ ಬಂದ. ರಾಸಬಿಹಾರಿಯನ್ನು ಕಂಡ. ಪಂಜಾಬಿನಿಂದ ಸಾವಿರಾರು ಮಂದಿ ಗದರ‍್ ಪಕ್ಷದವರು ಕ್ರಾಂತಿಕಾರ್ಯಕ್ಕೆ ಸಿದ್ಧರಾಗಿದ್ದಾರೆಂದು ಪಿಂಗಳೆ ತಿಳಿಸಿದ. 

ಪೂರ್ವ ಏಷ್ಯಾದಲ್ಲಿ ಭಾರತದ ಸ್ವಾತಂತ್ರ ಚಳುವಳಿಯ ಪಿತಾಮಹರು

ಆಗ ರಾಸಬಿಹಾರಿ ಪಂಜಾಬಿನ ಪರಿಸ್ಥಿತಿ ತಿಳಿದು ಬರಲು ಪಿಂಗಳೆಯೊಂದಿಗೆ ಶಚೀಂದ್ರನಾಥ ಸನ್ಯಾಲನನ್ನೂ ಕಳುಹಿಸಿದ. ಅಮೇರಿಕದಿಂದ  ಸಾವಿರಾರು ಮಂದಿ ಸಿಖ್ಖರು ಬಂದಿದ್ದರು. ಆದರೆ ಅವರಲ್ಲಿ ನಾಯಕತ್ವಿಲ್ಲ. ಶಸ್ತ್ರಗಳಿಲ್ಲ. ೩೦-೧೨-೧೯೧೪ನೆ ದಿನ ಪಿಂಗಳೆ ಅಮೃರ್ತ ಸರದಲ್ಲಿ ಸಿಖ್‌ಮುಂದಾಳುಗಳನ್ನೆಲ್ಲ ಸಭೆ ಸೇರಿಸಿದ. ಸಭೆಯಲ್ಲಿ ಕ್ರಾಂತಿಯ ವಿಚಾರ ಚರ್ಚೆಯಾಯಿತು; ಖಜಾನೆಗಳ ಲೂಟಿ ಸೂಚನೆ ಬಂತು; ಸಿಪಾಯಿಗಳ ರಾಜಭಕ್ತಿ ಸಡಿಲಿಸುವ ವಿಚಾರ ವಿಮರ್ಶೆಯಾಯಿತು. ಶಸ್ತ್ರಾಸ್ತ್ರಗಳ ಸಂಗ್ರಹದ ಮಾತು ಬಂತು. ಡಕಾಯಿತಿಗಳನ್ನು ನಡೆಸಿ ಹಣ ಕೂಡಿಸುವ ಆಲೋಚನೆಯೂ ಆಯಿತು. ಬಾಂಬು ಮಾಡುವ ಪ್ರಯೋಗವೂ ಒಂದು ಕಡೆ  ನಡಯಿತು. ರಾಸಬಿಹಾರಿಯ ಸ್ನೇಹಿತರೂ ಪಂಜಾಬಿನಲ್ಲಿ ಕ್ರಾಂತಿಕಾರರನ್ನು ಕಂಡು ಬಾಂಬ್ ಮಾಡುವ ವಿಚಾರ ಮಾಡಿದರು. ವಾರಣಾಸಿಯಿಂದ ರಾಸಬಿಹಾರಿಯು ಅಮೃತಸರಕ್ಕೆ ಬರಲು ೫೦೦ರೂ.ಗಳನ್ನು ಕೊಟ್ಟು ಬಾಂಬ್‌ತಯಾರಿಗಾಗಿ ಅಮೃತಸರಲ್ಲೇ ಒಂದು ಮನೆ ಪಡೆದರು. ಬಾಂಬ್‌ತಯಾರಿಸಲು ವಸ್ತು ಸಂಗ್ರಹಕ್ಕಾರಂಭಿಸಿದರು.

೧೯೧೫ನೆ ಜನವರಿ ಸುಮಾರಿನಲ್ಲಿ ಪಿಂಗಳೆ, ಶಚೀಂದ್ರನಾಥ, ಕರಾಸಬಿಹಾರಿ ಮನೆಯಲ್ಲಿ (ವಾರಣಾಸಿ, ಹರಿರ್ಶಚಂದ್ರ ಘಾಟ್‌) ಸೇರಿದರು. ಅಲ್ಲಿ ರಾಸಬಿಹಾರಿ, ‘ಮುಂದಿನ ತಿಂಗಳು ಭಾರತದಲ್ಲೆಲ್ಲ ಕ್ರಾಂತಿಯನ್ನೆಬ್ಬಿಸುವ ಸಮಯ ಬಂದಿದೆ. ನೀವೆಲ್ಲ ಪ್ರಾಣಗಳನ್ನರ್ಪಿಸಲು ಸಿದ್ಧರಾಗಬೆಕು” ಎಂದು ಹೇಳಿದ. ವಾರಣಾಸಿ, ಅಲಹಾಬಾದ್‌, ಜಬ್ಬಲಪುರ್‌ಮೊದಲು ಬೇರೆ ಬೇರೆ ಸ್ಥಳಗಳಲ್ಲಿ ಕ್ರಾಂತಿಯ ನಿರ್ವಹಣೆಗೆ ನಾಯಕರನ್ನು ನೇಮಿಸಿದ. ಶಸ್ತ್ರಗಳನ್ನು ತರುವವರು ಯಾರು, ಅದನ್ನು ಸಾಗಿಸುವುದು ಯಾರ ಹೊಣೆ- ಹೀಗೆ ಎಲ್ಲ ವಿವರಗಳನ್ನೂ ಸ್ಪಷ್ಟವಾಗಿ ಯೋಚಿಸಿ ಗೊತ್ತು ಮಾಡಿದ.

ಆ ಸಮಯದಲ್ಲಿ ಸೇತುವೆಗಳನ್ನು ನಾಢಪಡಿಸುವುದು ಹೇಗೆ, ಟೆಲಿಗ್ರಾಪ್‌ತಂತಿಗಳನ್ನು ಕತ್ತರಿಸುವುದು ಹೇಗೆ, ಬ್ಯಾಂಕುಗಳ ದ್ರವ್ಯ ದೋಚುವುದು ಹೇಗೆ – ಇವುಗಳನ್ನೆಲ್ಲ ವಿವರಿಸಿದ. ಪಂಜಾಬಿಗೆ ಹೋಗಿ,ಗದರ‍್ ಪಕ್ಷದವರೊಂದಿಗೆ ಮಾತನಾಡಿ, ಕ್ರಾಂತಿಯ ವ್ಯವಸ್ಥೆ ವಿವರಿಸಿದ, ಹೋರಾಅದ ಆರಂಭ ದಿನ ತಿಳಿಸುವುದಾಗಿ ಹೇಳಿದ.

ಪಂಜಾಬ್‌, ದೆಹಲಿ, ವಾರಣಾಸಿ, ಚಂದ್ರನಾಗೂರ್‌, ಢಾಕಾ, ಎಲ್ಲ ಕ್ಷೇತ್ರಗಳಲ್ಲೂ ಕ್ರಾಂತಿಕಾರರು ಏಕಮುಖವಾಗಿ ಕೆಲಸ ಮಾಡುವಂತಾಯಿತು. ಭಾರತ ಸೈನ್ಯದ  ಸಿಪಾಯಿಗಳ ಸಹಾಯ ಖಂಡಿತವಾಯಿತು. ಶಸ್ತ್ರಾಸ್ತ್ರಗಳ ಸಂಗ್ರಹಕ್ಕರಂಬವಾಯಿತು. ಬಂಗಾಳದಲ್ಲೆಲ್ಲ ಏಕಕಾಲದಲ್ಲಿ ಬಾಂಬ್‌ಸ್ಫೋಟನವಾಗತಕ್ಕದ್ದು. ಒಬ್ಬೊಬ್ಬ ನಾಯಕರೂ ಒಂದೊಂದು ಕಡೆಗೆ ಹೊರಟರು. ರಾಸಬಿಹಾರಿ ಅಮೃತಸರಕ್ಕೆ ಬಂದು ರಸಹ್ಯವಾಗಿ ಬಾಂಬುಗಳನ್ನು ಮಾಡಲಾರಂಬಿಸಿದ. ಲಾಹೋರಿಗೆ ಹೋಗಿ  ಯೋಧರ ‘ರಾಜಭಕ್ತಿಯ’ಯನ್ನು ’ದೇಶಭಕ್ತಿ’ಯನ್ನಾಗಿ ಪರಿವರ್ತಿಸಿದ. ಈ ಕಾರ್ಯ ಸಾಧನೆಗಾಗಿ ತನ್ನವರನ್ನು ಕೋಹತ್‌, ರಾವಲ್ಪಿಂಡಿ, ಪೆಷಾವರ‍್, ಝೀಲಂ, ಇಪುರ್ತಲಾ, ಫಿರೋಜ್‌ಪುರ, ಮೀರತ್, ಅಂಬಾಲಾಗಳಿಗೆ ಕಳುಹಿಸಿದ. “೨೧-೦೨-೧೯೧೫ನೆಯ ದಿನ ಪೆಶಾವರಿನಿಂದ ಬಂಗಾಳದವರೆಗೂ ದಂಗೆ ಆರಂಭವಾಗುತ್ತದೆ’ ಎಂದು ಅಂದು ತ್ರಿವರ್ಣಧ್ವಜ ಎಲ್ಲೆಲ್ಲೂ ಹಾರಿಸಬೇಕೆಂದೂ ಎಲ್ಲ ಕ್ಷೇತ್ರಗಳಿಗೂ ಸುದ್ದಿ ಕಳಿಸಿದ.

ಆದರೆ ಕೃಪಾಳುಸಿಂಗ ದೇಶದ್ರೋಹಿಯಾಗಿ, ಪೊಲೀಸರಿಗೆ ವರ್ತಮಾನ ಕೊಟ್ಟ. ಇದರಿಂದ ದಂಗೆ ನಡೆಯಲಿಲ್ಲ. ಅಂದೇ ಲಾಹೋರಿನಲ್ಲಿ ರಾಸಬಿಹಾರಿ ಮನೆ ಶೋಧಿಸಿದರು. ಅನೇಕ ಕ್ರಾಂತಿಕರರನ್ನು ಬಂಧಿಸಿದರು. ಪಿಂಗಳೆ, ರಾಸಬಿಹಾರಿ ಇಬ್ಬರೂ ವಾರಣಾಸಿಗೋಡಿದರು. ಪೊಲೀಸರೊಡ್ಡಿದ ಬಲೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವಾಯಿತು. ಪೊಲೀಸರು ರಾಸಬಿಹಾರಿಯನ್ನು ಹಿಡಿಯಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಆದರೂ ರಾಸಬಿಹಾರಿ ವಾರಣಾಸಿಯಲ್ಲೇ ಒಂದು ತಿಂಗಳಿದ್ದು ಕ್ರಾಂತಿಕಾರರ ರಕ್ಷಣೆಗೆ ವ್ಯವಸ್ಥೆ ಮಾಡಿದ.

‘‘ಪ್ರಿಯನಾಥ ಠಾಕೂರ’’

ಭಾರತದಲ್ಲಿ ರಾಸಬಿಹಾರಿ ಇರುವುದು ಸಿರಯಲ್ಲ. ಪರ ದೇಶಕ್ಕೆ ಹೋಗುವುದೇ ಸರಿಯೆಂದು ಮಿತ್ರರೆಲ್ಲ ನಿಶ್ಚಯಕ್ಕೆ ಬಂದರು. ರಾಸಬಿಹಾರಿ ಜಪಾನಿಗೆ ಹೋಗುವ  ನಿಶ್ಚಯ ಮಾಡಿದ. ಜಪಾನಿಗೆ ಹೋಗುವುದಕ್ಕೆ ಒಂದು ಉಪಾಯ ತೋರಿತು. ಭಾರತದ ಪ್ರಸಿದ್ಧ ಕವಿ ರವೀಂದ್ರನಾಥ ಠಾಕೂರರ ಜಪಾನ್ ಪ್ರವಾಸದ ಏರ್ಪಾಟಾಗುತ್ತಿತ್ತು. ರಾಸಬಿಹಾರಿ ಠಾಕೂರರ ಪರಿವಾರ ವರ್ಗದವರಲ್ಲೊಬ್ಬನಾದ; ‘ಪ್ರಿಯಾನಾಥ ಠಾಕೂರ’ನೆಂದು ಹೆಸರಿಟ್ಟುಕೊಂಡ; ವೇಷ ಬದಲಾಯಿಸಿದ; ರಹದಾರಿ ಪಡೆದ; ಟಿಕೆಟ ಕೊಂಡದ್ದೂ ಆಯಿತು. ೧೨-೦೫-೧೯೧೫ನೆ ದಿನ ’ಸನೂಕಿಮರು’ ಎಂಬ ಜಹಜು ಹತ್ತಿದ ! ಜೂನ ಐದರಂದು ರಾಸಬಿಹಾರಿ ಕ್ಷೇಮವಾಗಿ ಜಪಾನ್‌ಸೇರಿದ!

ಭಾರತದಲ್ಲಿದ್ದಷ್ಟು ಕಾಲವನ್ನು ಪೊಲೀಸರ ಕೈಗೆ ಸಿಕ್ಕಲಿಲ್ಲ ! ಒಂದು ದಿನವೂ ಸೆರೆಮೆನೆಯಲ್ಲಿ ಇರಲಿಲ್ಲ! ರಾಸಬಿಹಾರಿಗೆ ಸಮಯಸ್ಪೂರ್ತಿ ಅಪರ. ವೇಷ ಬದಲಾಯಿಸಿ ಸ್ವರ ಬದಲಾಯಿಸಿ, ಎಂತಹವರ ಕಣ್ಣಿಗಾದರೂ ಮಣ್ಣರಚುವುದರಲ್‌ಇ ನಿಪುಣ! ದಿನಕ್ಕೊಂದು ಹೆಸರು, ಸಂದರ್ಭಕ್ಕೊಂದು ವೇಷ್ ಪೊಲೀಸ್‌ಅಧಿಕಾರಿಗಳ ಮಧ್ಯೆಯೇ ಇದ್ದರೂ ಯಾರೂ ಅವನ್ನನು ಗುರುತಿಸರು! ವಾರಣಾಸಿಯಲ್ಲಿ ಒಮ್ಮೆ ಸ್ತ್ರೀ ವೇಷ ಧರಿಸಿದ;  ಸುಭದ್ರ ಪೊಲೀಸ ರಕ್ಷಾ ಪ್ರಾಕಾರದಿಂದ ಹೊರಬಿದ್ದ! ಬ್ರಾಹ್ಮಣ ಭಟ್ಟನಾಗಿ ಪೊಲೀಸ್ ಗೂಢಚಾರರಿಂದಲೇ ದೀರ್ಘ ದಂಡ ಪ್ರಣಾಮ ಮಾಡಿಸಿಕೊಂಡಿದ್ದಾನೆ! ಮುಸಲ್ಮಾನ್‌ವೇಷ ಧರಿಸಿ ಮೌಲ್ವಿಗಳೊಂದಿಗೆ ಸೇರಿದ್ಧನೆ! ಜಪಾನಿಗೆ ಹೊರಡುವ ಮೊದಲು ಪ್ರಿಯನಾಥ ಠಾಕೂರನಾಗಿ ವೇಷ ಧರಿಸಿ, ಕಲ್ಕತ್ತ  ಪೊಲೀಸ ಕಮೀಷನರರ ಕಚೇರಿಗೇ ಹೋಗಿ ಗುರುತಿನ ಚೀಟಿ (ಐಡೆಂಟಿಫಿಕೇಷನ್‌ಕಾರ್ಡ) ತಂದಿದ್ದಾನೆ !

ಮತ್ತೆ ಪ್ರಯತ್ನ ಮತ್ತೆ ಸೋಲು

ಜರ್ಮನಿಯಹಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಪಡೆದು ‘ಮೆವರಿಕ್‌’, ‘ಹೆನ್ರಿ’ ಜಹಜುಗಳ ಮೂಲಕ ಅವುಗಳನ್ನು ತರುವ ಪ್ರಯತ್ನ ವ್ಯರ್ಥವಾಯಿತು. ರಾಸಬಿಹಾರಿ ಷಾಂಘೈಯಲ್ಲಿ ಜರ್ಮನಿಯ ರಾಯಭಾರಿಯೊಂದಿಗೆ ಸಂಪರ್ಕವಿಟ್ಟುಕೊಂಡ ನೀಲ್ಸನ್‌ಎಂಬುವನನ್ನು  ಏಜೆಂಟನನ್ನಾಗಿ ಮಾಡಿಕೊಂಡ. ಅವನು ಶಸ್ತ್ರಾಸ್ತ್ರಗಳನ್ನು ಬಾಂಬ್‌ಮಾಡಲು ಬೇಕಾದ ರಾಸಾಯನಿಕ ವಸ್ತುಗಳನ್ನು ಷಾಂಘೈ ಅಂತರರಾಷ್ಟ್ರೀಯ ವಸಾಹತಿನ ನಾಲ್ಕು ಮಳಿಗೆಗಳಲ್ಲಿ ತುಂಬದ. ಇವುಗಳನ್ನೆಲ್ಲ ಸಯಾಂ ಬರ್ಮಾ ಮಾರ್ಗವಾಗಿ ಸಣ್ಣ ಪ್ರಮಾಣದಲ್ಲಿ ಭಾರತಕ್ಕೆ ಸಾಗಿಸುವ ಯೋಚನೆ ಮಾಡಿದ-ಇಬ್ಬರು ಚೀನೀಯರ ಮೂಲಕ ಬಂಗಾಳಕ್ಕೆ ಖಲಿಸಿ, ಅಮರೇಂದ್ರನಾಥನ ಕೈ ಸೇರುವಂತೆ ವ್ಯವಸ್ಥೆ ಮಾಡಿದ. ಷಾಂಘೈ ಪೊಲೀಸರು ಆ ಚಿನೀಯರಿಬ್ಬರನ್ನು ಹಿಡಿದರು; ಅವರಿಂದ ೧೨೯ ಪಿಸ್ತೂಲುಗಳನ್ನು ೧೨,೦೦೦ ಸುತ್ತು ಮದ್ದುಗುಂಡುಗಳನ್ನೂ ವಶಪಡಿಸಿಕೊಂಡರು.

ಇಷ್ಟಾದರೂ ರಾಸಬಿಹರಿ ನಿರಾಶನಾಗಲಿಲ್ಲ. ಜಪಾನಿನಲ್ಲಿ ಬಹಳ ಕಾಲದಿಂದ ನೆಲೆಸಿದ್ದ ಅಬನಿನಾಥ ಮುಖರ್ಜಿಯನ್ನಾರಿಸಿ, ಅವನಿಗೆ ಅವಶ್ಯಕತ ಸೂಚನೆಗಳನ್ನು ಕೊಟ್ಟು, ಅವನು ಭಾರತದಲ್ಲಿ ನೋಡಬೇಕಾದವರ ಹೆಸರುಗಳನ್ನೆಲ್ಲ ಅವನ ದಿನಚರಿ ಪುಸ್ತಕದಲ್ಲಿ ಬರೆದುಕೊಟ್ಟ ಎರಡು ಹಡಗುಗಳ ತುಂಬ ಶಸ್ತ್ರಗಳನ್ನು ಕಳಹಿಸಿದ. ಆದರೇನು? ಸಿಂಗಪೂರದಲ್ಲಿ ೧೯೧೫ನೆ ಸೆಪ್ಟಂಬರಿನಲ್ಲಿ ಅಬನಿನಾಥನನ್ನು ಬಂಧಿಸಿದರು; ಹಡಗುಗಳೆರಡನ್ನು ಮುಟ್ಟುಗೋಲು ಹಾಕಿಕೊಂಡರು!

ಷಾಂಘೈಯಿಂದ ಹಿಂತಿರುಗಿದ ಮೇಲೆ ರಾಸ ಬಿಹಾರಿ ಟೋಕಿಯೊ ಹೋಟೆಲೊಂದರಲ್ಲಿ ಒಂದು ಸಭೆ ನಡೆಸಿದ. ಲಾಲಾ ಲಜಪತರಾಯ್‌ಭಾರತದಲ್ಲಿ  ಬ್ರಿಟಿಷರ ಆಡಳಿತ ಕುರಿತು ಕಠೋರವಾಗಿ ಟೀಕೆ ಮಾಡಿದರು. ಇದರಿಂದ ಬ್ರಿಟಿಷ್ ರಾಯಭಾರಿಯ ಕೋಪ ಉಕ್ಕಿತು. ಆಗ ಜಪಾನ ಬ್ರಿಟನ್ನಿನೊಂದಿಗೆ ಸ್ನೇಹ ಸಹಕಾರ ಒಪ್ಪಂದ ಮಾಡಿಕೊಂಡಿತತು. ಬ್ರಿಟಿಷರು ಜಪಾನ್‌ಸರ್ಕಾರದ ಮೇಲೆ ಒತ್ತರ ತಂದರು. ರಾಸಬಿಹಾರಿಯನ್ನು ಬಂಧಿಸಿ ಬ್ರಿಟಿಷರಿಗೆ ಒಪ್ಪಿಸುವಂತೆ ಹೇಳಿದರು.

ಬಂದಿತು ವಿಪತ್ತು !

“ಐದು ದಿನಗಳ ಒಳಗಾಗಿ ರಾಸಬಿಹಾರಿಯನ್ನು ಬಂದಿಸಿ ನಮ್ಮ ಕೈಗೆ ಒಪ್ಪಿಸಬೇಕೆ” ಎಂದು ೨೮-೧೧-೧೯೧೫ ರಂದು ಬ್ರಿಟಿಷ್‌ಸರ್ಕಾರದ ಒತ್ತಾಯ ಬಂತು ಜಪಾನ್ ಸರ್ಕಾರಕ್ಕೆ ಸಾಮುರೈ ನಾಯಕ ತೋಯೆಮಾ. ಆತನ ಮಹಲಿನಲ್ಲಿ ರಾಸಬಿಹಾರಿ, ಗುಪ್ತ ಇಬ್ಬರೂ ಇದ್ದಾರೆ. ಪೊಲೀಸ ಅಧಿಕಾರಿಗಳಾದರೋ ಮಹಲ ಮುಂದೆ, ಸುತ್ತಮುತ್ತ ಕಾವಲುಕೋಟೆ ಕಟ್ಟಿದ್ದಾರೆ. ತೊಯೆಮಾ ಮತ್ತು ಅವರ ಮಿತ್ರರು ರಾಸಬಿಹಾರಿಯ ಸಂರಕ್ಷಣೆ ಮಾಡಲು ಸಂಕಲ್ಪ ಮಾಡಿದ್ದಾರೆ.

ಹಿತ್ತಲ ಬಾಗಿಲಿನಿಂದ, ತೋಟದ ಮೂಲಕ ರಾಸಬಿಹಾರಿ ತೋಯೆಮಾರವರ ಕಿಮೊನೋ ತೊಟ್ಟು. ಆತನ ಟೋಪಿ ಧರಿಸಿ ಹೊರಟ! ಅವನ ಸ್ನೇಹಿತ ಗುಪ್ತ ತುಕಾಡ ಬಟ್ಟೆಬರೆ ಹಾಕಿಕೊಂಡ. ಬಾಗಿಲಲ್ಲಿ ಡಾ. ಸುಗಿಯಾಮಾ ‘ಮಹಾವೇಗ’ ಎಂಬ ಕಾರು ತಂದು ಸಿದ್ಧವಾಗಿದ್ದ. ಇಬ್ಬರು ವೇಷಧಾರಿಗಳೂ ಕಾರಿಗೆ ಹಾರಿ ಕೂತರು; ವೇಗವಾಹಿನಿ ಹೊರಟಿತು!  ಸಶಸ್ತ್ರ ಪೊಲೀಸರು, ಅಧಿಕಾರಿಗಳು  ಬೀದಿಗಳಲ್ಲಿಕಾದಿದ್ದಾರೆ !

ಬೋಸ್‌ಗುಪ್ತ, ಇಬ್ಬರು ಜಪಾನರು ತೋಷಿಕೋ ಸೋಮಾ ಎಂಬಾತನ ರೊಟ್ಟಿ ಅಂಗಡಿಗೆ ಬಂದರು. ಮಾರನೆ ದಿನ ತೋಷಿಕೋ ತನ್ನ ಕೈಕೆಳಗಿನ ಕೆಲಸಗಾರರನ್ನೆಲ್ಲ ಕರೆಸಿ ಹೀಗೆ ಹೇಳಿದ :

 

ಬೋಸ್ ದಂಪತಿಗಳು

ವಿಪತ್ತನ್ನು ನಾನು ಮಡಿಲಲ್ಲಿ ಹಾಕಿಕೊಳ್ಳುತ್ತಿದ್ದೇನೆ. ಇಬ್ಬರು ಭಾರತೀಯ ಕ್ರಾಂತಿಕಾರರನ್ನು ಈ ದೇಶದಿಂದ ಹೊರಡಿಸುವ ಪ್ರಯತ್ನದಲ್ಲಿದೆ ನಮ್ಮ ಸರ್ಕಾರ. ನಾನು ಇವರನ್ನು ನನ್ನ ನೆಲಮಾಳಿಗೆಯಲ್ಲಿಟ್ಟುಕೊಂಡು ಕಾಪಾಡುತ್ತೇನೆ. ದೇಶಭ್ರಷ್ಟರಾದ  ಈ ಭಾರತೀಯರನ್ನು ನಾವು ಕಾಪಾಡಬೆಕು. ಅವರೆಲ್ಲಾದರೂ ಹಾಳಾಗಿಹೋಗಲೆಂದು ನಾವು ಸುಮ್ಮನಿರಲಾಗದು”

ಕಾಪಾಡಬೇಕೆಂದು ಎಲ್ಲರೂ ಒಪ್ಪಿದರು. ತೋಷಕೋ ಬೋಸ್‌ಗುಪ್ತರ ನಿತ್ಯಜೀವನಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿದ. ಇಷ್ಟಾದರೂ ಗೂಢಚಾರರ ಬಾಧೆ ಕ್ಷಣಕ್ಷಣಕ್ಕೂ ಹೆಚ್ಚಿತು. ಯಾವ ಕ್ಷಣದಲ್ಲಿ ರಾಸಬಿಹಾರಿಯನ್ನು ಕದ್ದೊಯ್ಯುವರೋ, ಎಲ್ಲಿ ಕೊಲ್ಲುವರೋ ಎಂಬ ನಿತ್ಯ ಚಿಂತೆ ತೊಯೆಮಾ ದಂಪತಿಗಳಿಗೆ.

ಕಡೆಗೆ ತೋಯೆಮಾ ತೋಷಿಕೋಗೆ,  “ನಿನ್ನ ಮಗಳನ್ನು ರಾಸಬಿಹಾರಿಗೆ ಕೊಟ್ಟು ಮದುವೆ ಮಾಡು, ರಾಸಬಿಹಾರಿ ಜಪಾನಿನ ಪ್ರಜೆಯಾಗಲಿ” ಎಂದ. ತಾಯಿ ಮಗಳಿಬ್ಬರೂ ಒಪ್ಪಿದರು ಇಬ್ಬರ ವಿವಾಹವಾಯಿತು.

ಬ್ರಿಟಷರ ಹದ್ದು ಕಣ್ಣು

೧೯೧೬ನೆ ಏಪ್ರೀಲ್‌ಸುಮಾರಿನಲ್ಲಿ ಜಪಾನ್‌ಸರ್ಕಾರ ತಾನು ಮಾಡಿದ ಆಜ್ಞೆಯನ್ನು ಹಿಂದಕ್ಕೆ ತೆಗೆದುಕೊಂಡಿತು. ಆದರೂ ಬ್ರಿಟಿಷ್ ರಾಯಭಾರದವರ ಬಾದೆ, ನಿರ್ಬಂಧ, ಹಿಂಸೆ ಬಹಳವಾಗಿತ್ತು. ೧೯೧೬ ರಿಂದ ೧೯೨೩ರವೆಗೆ ರಾಸಬಿಹಾರಿ ಬೋಸ್ ತಾನು ವಾಸ ಮಾಡುತ್ತಿದ್ದ ಮನೆಯನ್ನು ಹದಿನೇಳು ಸಲ ಬದಲಾಯಿಸಬೇಕಾಗಿ ಬಂತು ! ಎಂಟು ವರ್ಷಗಳ ಅಜ್ಞಾತವಾಸದಲ್ಲೂ ರಾಸಬಿಹಾರಿ ತನ್ನ ಕಾರುಬಾರನ್ನು ಬಿಡಲಿಲ್ಲ; ಭಾರತದ ಕ್ರಾಂತಿಕಾರರೊಂದಿಗೆ ಪತ್ರ ವ್ಯವಹಾರ, ಅಮೆರಿಕದ ತಾರಕನಾಥ ದಾಸರೊಂದಿಗೆ ಪತ್ರ ವ್ಯವಹಾರ ಜರ್ಮನಿ- ಭಾರತ ಸಹಕಾರ ನಾಯಕರೊಂದಿಗೆ ಪತ್ರ ವ್ಯವಹಾರ ?

ಗೂಢಚಾರ ಶಾಖೆಯ ಅಧಿಕಾಋಇಯನ್ನು ಭಾರತ ಸರ್ಕಾರದವರು ದೂರಪೂರ್ವ ದೇಶಗಳಿಗೆ ೧೯೧೬ರಲ್ಲಿ ಕಳುಹಿಸಿದರು. ಆ ಅಧಿಕಾರಿ ಕ್ರಾಂತಿಕಾರಿಗಳ ಕಾರು ಬಾರುಗಳನ್ನು ಕುರಿತು ವರದಿಗಳನ್ನು ಕಳುಹಿಸುತ್ತಿದ್ದ :

“ಕೈಗೆ ಸಿಕ್ಕದೆ. ಪಿ.ಎನ್. ಠಾಕೂರನೆಂದು ಹೆಸರನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವವರಲ್ಲಿ ಮುಖ್ಯ ರಾಸಬಿಹಾರಿ ಬೋಸ್‌. ಇವನಿಗೆ ಜಪಾನ್ ಸರ್ಕಾರದ ಆಶ್ರಯವಿದೆ ಅವನ ಚರ್ಯೆಗಳನ್ನು ಹದ್ದಿನಲ್ಲಿರಿಸಲು ಹತ್ತಾರು ನಿರ್ಬಂಧ-ನಿಷೇಧ,ಆಜ್ಞೆಗಳಿವೆ, ಆದರೂ ಅವನು ಸುಮ್ಮನೆ ಇಲ್ಲ. ಒಂದು ಮಟ್ಟಿಗೆ ನಿಜ, ಅವನಿಂದ ಪಕ್ಷಕ್ಕೆ ಪ್ರತ್ಯಕ್ಷವಾಗಿ ಏನೋ ಪ್ರಯೋಜನವಾಗುತ್ತಿಲ್ಲ.”

ಇದು ವರದಿ. ಆದರೆ ಹಯಾಷಿ ಇಚಿರೋ ಎಂದು ಹೆಸರಿಟ್ಟುಕೊಂಡು ಪೂರ್ವ ಸಮುದ್ರತೀರದ ಒಕಿತ್ತು ಎಂಬಲ್ಲಿದ್ದ ರಾಸಬಿಹಾರಿ ! ಬ್ರಿಟಿಷ್ ರಾಯಭಾರದವರ  ಕಣ್ಣಿಗೆ ಬಿದ್ದ. ಕೂಡಲೆ ರಾಸಬಿಹಾರಿ ಆ ಹಳ್ಳಿ ಬಿಟ್ಟು ಟೋಕಿಯೊಗೆ ಬಂದ. ಜಪಾನಿನ ಮಹಾಮಂತ್ರಿಗಳೊಬ್ಬರ ಮಹಲಿನ ಆವರಣದಲ್ಲೇ ಇದ್ದುಕೊಂಡು ಬ್ರಿಟಿಷ್ ಗೂಢಚಾರರ ಕಣ್ಣಿಗೆ ಮಂಕುಬೂದಿ ಎಸೆದ! ಶಾಸನ ಬದ್ದವಾಗಿ ಜಪಾನಿನ ಪ್ರಜೆಯಾಗುವವರೆಗೆ ರಾಸಬಿಹಾರಿ ಕತ್ತಲಲೋಕದಲ್ಲೇ ಜೀವನ ನೂಕ ಬೇಕಾಯಿತು. ಎಂಟು ವರ್ಷಗಳ ಅವನ ಅಜ್ಞಾತವಾಸದ ಕಥೆ ಪ್ರಪಂಚದ ಇತಿಹಾಸದಲ್ಲೇ ಒಂದು ಅಪೂರ್ವ ಸಾಹಿತ್ಯ.

ಜಪಾನಿನ ಪ್ರಜೆಯಾಗಿ ಭಾರತಕ್ಕಾಗಿ ಹೋರಾಟ

ತನ್ನ ಮಿತ್ರ ಶ್ರೀಶಚಂದ್ರನಿಗೊಂದು ಪತ್ರವನ್ನು ಬರೆಯುತ್ತಾ ಅದರಲ್ಲಿ ಹೀಗೆಂದ:

“ನನಗೀ ಸುದ್ಧಿ ಕೇಳಿ ಸಂತೋಷವಾದಿತು. ನಾನು ಶಾಸನಬದ್ದವಾಗಿ ಜಪಾನಿನ ಪ್ರಜೆಯಾದೆ. ಇದರ ಅರ್ಥವೇನು ಗೊತ್ತೆ? ನಾನೀಗ ಪ್ರಪಂಚದ ಯಾವ ಭಾಗಕ್ಕಾದರೂ ಯಾವ ನಿರ್ಬಂದವೂ ಇಲ್ಲದೆ ಹೋಗಬಹುದು. ಆದರೆ ಬ್ರಿಟಿಷರಿಗೆ ಸೇರಿದ ಅಥವಾ ಅವರ ಆಡಳಿತದಲ್ಲಿರುವ ಯಾವ ದೇಶಕ್ಕೂ ಕಾಲಿಡಲಾಗದು”.

ರಾಶಬಿಹಾರಿ ಅಂದಿನಿಂದ ಜಪಾನಿನ ಸಾರ್ವಜನಿಕ ಜೀವನದಲ್ಲಿ ಭಾಗವಹಿಸಿದ ಟೋಕಿಯೊ ನಗರವನ್ನು ತನ್ನ ಮುಖ್ಯ ಕಾರ್ಯಸ್ಥಾನ ಮಾಡಿಕೊಂಡ. ಮಾತೃಭೂಮಿ ಭಾರತವನ್ನು ಬ್ರಿಟಿಷ್ ಸಾಮ್ರಜ್ಯದ ಸಹಸ್ರ ಬಾಹುಗಳಿಂದ ಮುಕ್ತಗೊಳಿಸಲು ಆತ ಹಿಡಿದ ಮಾರ್ಗಗಳಿಗೆ. ಉಪಯೋಗಿಸಿದ ಸಾಧನಗಳಿಗೆ ಲೆಕ್ಕವೇ ಇಲ್ಲ.

ಜಪಾನಿನ ವಿಶ್ವವಿದ್ಯಾನಿಲಯಗಳೊಂದಿಗೆ, ಸಾಂಸ್ಕೃತಿಕ ಸಂಸ್ಥೆಗಳೊಂದಿಗೆ, ಸಂಪರ್ಕವಿಟ್ಟುಕೊಂಡ, ಜಪಾನಿ ಭಾಷೆಯಲ್ಲೇ ಭಾರತ ದೇಶ, ಭಾರತ ಧರ್ಮ, ಭಾರತ ದರ್ಶನ, ಭಾರತದ ಕಲೆ, ಇತಿಹಾಸ, ಸಂಸ್ಕೃತಿ ಕುರಿತು  ಪುಸ್ತಕಗಳನ್ನು ಬರೆದ; ಸಣ್ಣ ಸಣ್ಣ ಲೇಖನಗಳನ್ನು ಬರೆದು ಪ್ರಕಟಿಸಿ, ಭಾರತದ ಹೃದಯ, ಜಪಾನಿನ  ಹೃದಯಗಳೆರಡನ್ನೂ ಹತ್ತಿರ ಹತ್ತಿರಕ್ಕೆ ತಂದ.

ತಾನಾದರೋ ಜಪಾನಿನ ಸಂಸ್ಕೃತಿ, ಜೀವನ ಧರ್ಮ, ಆಚಾರ-ವಿಚಾರಗಳಲ್ಲಿ ನಿಷ್ಣಾತನಾದ. ಜಪಾನಿನ ಪ್ರಸಿದ್ಧ ಚಿತ್ರಸಂಗ್ರಹಕಾಋ ಕ್ವಾಬತ್‌ಕೋ ಶಾಂತಿ ನಿಕೇತನದ ಶ್ರೀ ವಿನೋದಬಿಹಾರಿ ಮುಖರ್ಜಿಗೆ ಹೀಗೆ ಹೇಳಿದ: “ಜಪಾನಿನ ಸಂಸ್ಕೃತಿ, ನಡೆ-ನುಡಿ, ಹೆಚ್ಚೆನು, ಜಪಾನ್‌ಜನಾಂಗದ ಒಳಗಿನ-ಹೊರಗಿನಜೀವನ ವೈಭವ-ವೈಲಕ್ಷಣ್ಯ ತಿಳಿದುಕೊಳ್ಳಬೇಕಾದರೆ ರಾಸಬಿಹಾರಿಯನ್ನು ನೋಡಿ”.

ಜಪಾನ್-ಭಾರತಗಳ ನಡುವೆ ಜೀವಂತ ಸೇತುವೆಯಾದ ರಾಸಬಿಹಾರಿ.

ಕಾರ್ಯಶೀಲ ದೇಶಪ್ರೇಮ

ರಾಸಬಿಹಾರಿಗೆ ಭಾರತದ ಬಿಡುಗಡೆಯ ಯೋಚನೆಯೊಂದೇ ತಲೆಯ ತುಂಬ, ಹೃದಯದ ತುಂಬ, ಅಗ್ನೇಯ ಏಷ್ಯದ ಜನರಲ್ಲಿ ಸ್ವಾತಂತ್ರ್ಯದಾಹ ಹುಟ್ಟಿಸಲು. ಅವರ ಐಕ್ಯಮತದಿಂದ ಭಾರತದ ಸ್ವಾತಂತ್ರ್ಯ ಸಾಧನೆಗೆ ಸಹಾಯ ಪಡೆಯಲು ೧೯೨೪ರಲ್ಲಿ ‘ಇಂಡಿಯನ್ನ ಇಂಡಿಪೆಂಡೆನ್ಸ  ಲಿಗ್‌’ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಭಾರತದ ಬಿಡುಗಡೆಗಾಗಿ ಹದಿನೇಳು ವರ್ಷಕಾಲ ಹೊಡೆದಾಡಿದರು. ಭಾರತ-ಜಪಾನ್‌ಬಾಂಧವ್ಯವನ್ನು ಭದ್ರಗೊಳಿಸಲು ಆಸ್ತಿಭಾರ ಹಾಕಿದರು. ೨೮-೦೩-೧೯೩೭ರಂದು ಟೋಕಿಯೋದಲ್ಲಿ ಏಷ್ಯಾ ಖಂಡದ ತರುಣರ ಸಮ್ಮೇಳನ ನಡೆಸಿ “ಏಷ್ಯಾ ಏಷ್ಯಾದವರಿಗೆ “, “ಬಿಳಿಯವರೆ ! ಗಂಟು ಮೂಟೆ ಕಟ್ಟಿ ಹೊರಡಿ” ಇತ್ಯಾದಿ ಘೋಷಣೆಗಳನ್ನೆಬ್ಬಿಸದರು.

೧೯೩೮ನೆ ನವೆಂಬರಿನಲ್ಲಿ ಒಂದು ದೀರ್ಘ ಹೇಳಿಕೆ ಕೊಟ್ಟು ಭಾರತದ ಪರರಾಷ್ಟ್ರಗಳೊಂದಿಗಿನ ನೀತಿಯಲ್ಲಿ ಬದಲಾಗಬೇಕೆಂದು ಹೇಳಿದರು. ಜಗತ್ತಿನಲ್ಲೆಲ್ಲ ಸ್ನೇಹಿತರನ್ನು ಸಂಪಾದಿಸಬೇಕು; ಯಾರನ್ನೂ ಶತ್ರುಗಳನ್ನಾಗಿ ಮಾಡಿಕೊಳ್ಳಬಾರದು. ಭಾರತದ ರಾಷ್ಟ್ರನಾಯಕರಾದರೋ, ‘ಬ್ರಿಟನ್ನಿನ ಶತ್ರುಗಳು ನಮ್ಮಮಿತ್ರರು” ಎಂದು ನಡೆಯಬೇಕು ಎಂದು ಸಾರಿದರು.

’ಇದೇ ನಮ್ಮ ಸದವಕಾಶ”

೦೭-೧೨-೧೯೪೧ನೆಯ ದಿನ ಜಪಾನ್‌ಬ್ರಿಟನ್ನಿನ ಮೇಲೆ ಯುದ್ಧ ಸಾರಿತು: ಪರ್ಲ್‌ಹಾರ್ಬರ ಮೆಲೆ ಬಾಂಬಿನ ದಾಳಿ ನಡೆಸಿತು. ಏಷ್ಯಾ ಖಂಡವೆಲ್ಲಾ ಕಣ್ತೆರೆಯಿತು. ಸ್ವತಂತ್ರವಾಗಲು ಸಂಕಲ್ಪ ಮಾಡಿತು. ‘ಇದೇ ನಮ್ಮ ಸದವಕಾಶ’ ಅಂದರು ರಾಸಬಿಹಾರಿ. ಮಾರನೆಯ ದಿನವೇ (೮-೧೨-೪೦) ಟೋಕಿಯೊದಲ್ಲೊಂದು ಕಡೆ ಭಾರತೀಯರೆಲ್ಲ ಸೇರಿದರು; ಒಂದು ಸಮಿತಿ ರಚಿಸಿದರು. ರಾಸಬಿಹಾರಿಗಳೇ ನಾಯಕರು. ಭಾರತದ ಬಿಡುಗಡೆಗಾಗಿ  ಭಾರತದ ಹೊರಗೆ ಹೋರಾಟಡುವ ಸಲುವಾಗಿ ಜಪಾನಿನ ನಾನಾ ಕಡೆ  ಸಭೆಗಳನ್ನು ಸೇರಿಸಿದರು. ೨೬-೧೨-೧೯೪೧ನೆ ದಿನ ಕೊಬೆ, ಒಸಾಕಾ, ಯೊಕೊಹಾಮ, ಟೋಕಿಯೊಗಳಿಂದ ೫೦ ಮಂದಿ ಭಾರತೀಯ ಪ್ರತಿನಿಧಿಗಳು ಸೇರಿದರು ! ಇದೊಂದು ಇತಿಹಾಸ ಪ್ರಸಿದ್ಧ ಪ್ರಸಂಗ ೨೬-೦೧-೧೯೪೨ ರಂದು ಷಾಂಘೈಯಲ್ಲಿ ಸಭೆ! ಅಲ್ಲೂ ಟೋಕಿಯೊ ಸಭೆಯಲ್ಲಾದ ನಿರ್ಣಯಗಳೆ.

ಬ್ಯಾಕಾಂಕ ಸಮ್ಮೇಳನದಲ್ಲಿ ರಾಸಬಿಹಾರಿಗಳು ಮಾಡಿದ ಭಾಷಣದ ಈ ಭಾಗವನ್ನೆಲ್ಲರೂ ಓದಬೇಕು.

“ಜಪಾನಿನ ಆಡಳಿತ ಅಧಿಕಾರಿಗಳು, ಸೈನ್ಯಾಧಿಕಾರಿಗಳು ಮೊದಲಾದೆಲ್ಲ ಮೇಲ್ಮಟ್ಟದವರೊಂದಿಗೂ ನಾವು ಸಂಪರ್ಕ ಕಲ್ಪಿಸಿಕೊಂಡೆವು. ಭಾರತದ ಸ್ವಾತಂತ್ರ್ಯ ಸಾಧನೆಗೆ ಜಪನಿನ ಸಹಾಯ ಅಗತ್ಯವೆಂದು ಅವರಿಗೆಲ್ಲ ಮನಗಾಣಿಸಿದೆವು. ಜಪಾನ್, ಬ್ರಿಟನ್‌ಅಮೇರಿಕಗಳ ಮೇಲೆ ಯುದ್ಧ ಹೂಡಿದ್ದೇಕೆ? ಸ್ವಾತಂತ್ರ್ಯ ಸಾಧನೆಗಾಗಿಯೇ ಅಲ್ಲವೇ? ಭಾರತದಲ್ಲಿ ಬ್ರಿಟಿಷ ಸಾಮ್ರಾಜ್ಯ ಬೇರೂರಿರುವವರೆಗೆ ಈ ಸಂಗ್ರಾಮದಲ್ಲಿ  ವಿಜಯ ಸಾಧಯವಿಲ್ಲವೆಂದು ಸ್ಪಷ್ಟಪಡಿಸಿದೆವು. ಅವರನ್ನೆಲ್ಲ ಒಪ್ಪಿಸಿದದೆವು. ದಂಡನಾಯಕ ಟೊಜೋ, ಜಪಾನಿನ ಮಹಾ ಪ್ರಧಾನತ್ಯ ‘ಸರ್ಕಾರ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಭಾರತೀಯರಿಗೆ ಎಲ್ಲ ಬಗೆಯ ಸಹಾಯ ನೀಡಲು ಸಿದ್ಧವಾಗಿದೆ’ ಎಂದು ಪ್ರಕಟಿಸಿ ಭರವಸೆ ನೀಡಿದರು.

‘ಆಜಾದ ಹಿಂದ್ ಫೌಜ್‌’

ಈ ಭರವಸೆಯಿಂದ ಪ್ರೋತ್ಸಾಹಿತರಾಗಿ ರಾಸಬಿಹಾರಿಗಳು ಟೋಕಿಯೊ (೧೯೪೨-ಮಾರ್ಚ). ಬ್ಯಾಕಾಂಕ ( ೧೯೪೨-ಜೂನ್‌)ಗಳಲ್ಲಿ ಸಮ್ಮೇಳನಗಳನ್ನು ನಡೆಸಿದರು. ಅಗ್ನೇಯ ಏಷ್ಯಾದ ಭಾರತ ಪ್ರತಿನಿಧಿಗಳೆಲ್ಲ ಸಭೆ ಸೇರಿದರು.ಕಾರ್ಯ ಸಮಿತಿಯೊಂದನ್ನು ರಚಿಸಿದರು. ರಸಬಿಹಾರಿಗಳೇ ಅದರ ಅಧ್ಯಕ್ಷರು. ೧೯೪೧ನೇ ಡಿಸೆಂಬರನಲ್ಲಿ ರೂಪುಗೊಂಡ ’ಆಜಾದ ಹಿಂದ್ ಫೌಜ್‌’ ಬೆಳೆಯಿತು. ಸೈನಿಕ ಶಿಕ್ಷಣ ವ್ಯವಸ್ಥೆಯಾಯಿತು. ಭಾರತೀಯ ದೇಶಭಕ್ತರೊಂದಿಗೆ ಮೇಜರ್‌ಪೂಜಿವಾರಾ ಸಹಕಾರ ಮಾಡತಕ್ಕದ್ದು ಎಂದಾಯಿತು. ಸರದಾರ ಪ್ರಿಯತಮ ಸಿಂಗ್‌ರ ಪಾತ್ರವಿದರಲ್ಲಿ ಅಪಾಯ. ಅವರೊಂದಿಗೆ ಕ್ಯಾಪ್ಟನ್‌ಮೋಹನ ಸಿಂಗ್‌ಸಹಕಾರವಿತ್ತ. ಅವನೇ ’ಆಜಾದ ಹಿಂದ್ ಫೌಜ್‌’ ದಂಡನಾಯಕನಾದ.

ರಾಸಬಿಹಾರಿಗಳಿಗೆ ಅಹಿಂಸೆಯಲ್ಲಿ ನಂಬಿಕೆ ಇಲ್ಲ. ಭಾರತವು ಸ್ವಶಕ್ತಿಯಿಂದಲೇ ಸ್ವಾತಂತ್ರ್ಯ ಗಳಿಸಬಲ್ಲದೆಂಬ ವಾದವನ್ನು ಒಪ್ಪಲಿಲ್ಲ. ವಿಶ್ವ ವ್ಯವಹಾರಗಳ ಅನುಕೂಲ ಸಮಯ-ಶಕ್ತಿಗಳನ್ನೆಲ್ಲ ಭಾರತ ಬಳಸಿಕೊಳ್ಳಬೇಕೆಂಬುವವರ ಅಭಿಪ್ರಾಯ. ಜಪಾನ್ ಆಗ ಜರ್ಮನಿ, ಇಟಲಿಗಳ ಸ್ನೇಹ ಬಾಂಧವ್ಯ ಕಲ್ಪಿಸಿಕೊಂಡಿತು. ಇಟಲಿ-ಜರ್ಮನಿಗಳೆರಡೂ ಬ್ರಿಟಿನ್-ಅಮೆರಿಕಗಳ ಪರಮ ವೈರಿಗಳು. ಬ್ರಿಟನಿನ್ನ ವೈರಿಗಳು ಭಾರತದ ಮಿತ್ರರು ! ಈ ಸಿದ್ದಾಂತಕ್ಕೆ ಅನುಸಾರವಾಗಿ ರಾಸಬಿಹಾರಿಗಳು ತಮ್ಮ ಕಾರುಬಾರು ನಡೆಸಿದರು.

ನಮ್ಮ ಪ್ರಿಯ ನಾಯಕ ಸುಭಾಷ್‌ಚಂದ್ರ ಬೋಸ್ !

ಇಷ್ಟೆಲ್ಲ ಆಗುವ ವೇಳೆಗೆ ರಾಸಬಿಹಾರಿಗಳ ಆರೋಗ್ಯ ಕೆಟ್ಟಿತು. ಆದಷ್ಟುಬೇಗ ಜರ್ಮನಿಯಿಂದ ನೇತಾಜಿ ಸುಭಾಷಚಂದ್ರರನ್ನು ಕರೆಸಿ ಅವರಿಗೆ ನಾಯಕತ್ವ ವಹಿಸಿಕೊಡುವ ಸಿದ್ಧತೆಯಲ್ಲಿದ್ದರು. ಜಪಾನ್ ಸರ್ಕರವು ಜರ್ಮನ್‌ಸರ್ಕಾರಕ್ಕೆ ಬರೆದು.  ಬ್ಯಾಂಕಾಕ ಸಮ್ಮೇಳನಕ್ಕೆ ನೇತಾಜಿ ಬರುವಂತೆ ಆಹ್ವಾನ  ಕಳುಹಿಸುವಂತೆ ಮಡಿದರು. ರಾಸಬಿಹಾರಿಗಳು! ಬೋಸರು ೧೯೪೩ನೆಯ ಜೂನತಿಂಗಳಲ್ಲಿ ಟೋಕಿಯೋಕ್ಕೆ ಬಂದರು. ರಾಸಬಿಹಾರಿಗಳಿಗಾದ ಆನಂದಕ್ಕೆ ಪಾರವೇ ಇಲ್ಲ! ಸಂತೋಷದಿಂದ ಸುಭಾಷ್‌ಚಂದ್ರ ಬೋಸರಿಗೆ ನಾಯಕಪಟ್ಟ ವಹಿಸಿಕೊಟ್ಟರು. “ಇಂಡಿಯನ್ ಇಂಡಿಪೆಂಡೆನ್ಸ್‌ಲೀಗ್‌’ ಅಧ್ಯಕ್ಷ ಪದವನ್ನೂ ಅವರಿಗೆ ಕಟ್ಟಿದರು. ೪-೭-೧೯೪೩ನೆ ದಿನ ಸಿಂಗಪುರದ  ಸಾರ್ವಜನಿಕ ಸಭೆಯಲ್ಲಿ ರಾಸಬಿಹಾರಿಗಳು ಮಾಡಿದ ಭಾಷಣದ ತಿರುಳಿದು:

“ಯುಗಯುಗಳು ಭಾರತ ನಡೆಸಿದ ಉತ್ತಮ ಜೀವನ ಸಂಸ್ಕಾರದ ಎಲ್ಲ ಸಲ್ಲಕ್ಷಣಗಳ ಸಂಕೇತ ನಮ್ಮ ಪ್ರಿಯ ನಾಯಕ ಸುಭಾಷ್‌ಚಂದ್ರ ಬೋಸ್‌.”

ಹೀಗೆಂದಾಗ ಕೇಳಿಬಂದ ಜಯಘೋಷ ಎಂಟು ದಿಕ್ಕುಗಳನ್ನೂ ಅಲ್ಲಾಡಿಸಿಬಿಟ್ಟಿತು !

ಮಾತೃಭೂಮಿಯ ಸೇವೆಗಾಗಿ ನಾನು ವಿನಯದಿಂದ ಸರ್ವಾರ್ಪಣ ಮಡಿಕೊಂಡಿದ್ದೇನೆ. ಈ ದೇಹದೊಳಗೆ ಜೀವ ಇರುವವರೆಗೆ ನಾನು ಯೋಧನಂತೆ ಭಾರತ ಮಾತೆಯ ಬಂಧವಿಮೋಚನೆಗಾಗಿ ದುಡಿಯುತ್ತೇನೆ. ನಮ್ಮ ನಾಯಕನಿಗೆ ಪೂರ್ಣ ಸಹಕಾರ ಕೊಡುತ್ತೇನೆ’ ಎಂದು ಕುತರು. ಸುಭಾಷ್‌ಚಂದ್ರ ಬೋಸರೆದ್ದು ರಾಸಬಿಹಾರಿಗಳಿಗೆ ಮಣಿದು, ‘ಪೂರ್ವ ಏಷ್ಯಾದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯ ಪಿತಾಮಹರು ಈ ರಾಸಬಿಹಾರಿಗಳು. ಅವರು ನನಗೆ ವಹಿಸಿರುವ ಜವಾಬ್ದಾರಿಯನ್ನು ಅರಿತು, ಸ್ವೀಕರಿಸಿದ್ದೇನೆ” ಎಂದರು

೨೧-೧೦-೧೯೪೩ ರಂದು ‘ಆಜಾದ್ ಹಿಂದ್ ಸರ್ಕಾರ ಸ್ಥಾಪನೆ ಆಯಿತು. ರಾಸಬಿಹಾರಿಗಳಿಗೆ ಸಂತೋಷವಾಯಿತು.

ಈ ಸ್ವಾತಂತ್ರ್ಯ ವೀರ ವಿಪತ್ತಿನಲ್ಲಿ ಸಿಕ್ಕಿದ್ದಾಗ ತೋಷಿಕೋ ರಾಸಬಿಹಾರಿಯವರ ಕೈಹಿಡಿದಳು. ಅವರು ಜಪಾನಿನ ಪ್ರಜೆ ಎಂದು ಸರ್ಕಾರ ಒಪ್ಪುವವರೆಗೆ, ಎಂಟು ವರ್ಷ ಕಾಲ ದಂಪತಿಗಳು ರಹಸ್ಯವಾಗಿ ಸಂಸಾರ ಮಾಡಿದರು. ಅವರಿಗೆ ಇಬ್ಬರು ಮಕ್ಕಳು. ಚಿಕ್ಕ ವಯಸ್ಸಿನಲ್ಲೆ, ಇಪ್ಪತ್ತೆಂಟನೆಯ ವರ್ಷದಲ್ಲಿ ತೋಷಿಕೋ ಬೋಸ್ ತೀರಿಕೊಂಡಳು.

ತೋಷಿಕೋ ತಾಯಿ ಕೊಕ್ಕೊ ಹೌ ಸೋಮಾ ರಾಸಬಿಹಾರಿಯವರಿಗೆ ಹೇಳಿದಳು-ಮಕ್ಕಳಿಬ್ಬರನ್ನೂ ನಾನು ಲಾಲಿಸಿ, ಪಾಲಿಸುತ್ತೇನೆ. ನೀವು ನಿಮ್ಮ ಕಾಲ, ಸಾಮರ್ಥ್ಯವನ್ನೆಲ್ಲ ನಿಮಮ ಮಾತೃಭೂಮಿಯ ಬಿಡುಗಡೆಗಾಗಿ ವಿನಿಯೋಗಿಸಿ.

ರಾ- ಸಂತೋಷ : ನನಗೆ ಮಾತ್ರವಲ್ಲ, ನನ್ನ ಮಕ್ಕಳಿಗೂ ನೀವೇ ತಂದೆತಾಯಿಗಳು

ಕೊ-ಎಷ್ಟು ಕಾಲ ನೀವು ಒಂಟಿಯಾಗಿ ಜೀವನ ನಡೆಸಲಾದೀತು? ನಿಮ್ಮ ಕೈ ಹಿಡಿಯಲು ಜಪಾನಿನ ಹೆಣ್ಣು ಮಕ್ಕಳು ಎಷ್ಟೋ ಮಂದಿ ಇದ್ದಾರೆ, ಸಿದ್ಧವಾಗಿದ್ದಾರೆ, ನಿಮ್ಮ ಘನ ಉದ್ದೇಶ ಸಾಧನೆಗೆ ಸಹಾಯಕರಾಗಲು ಕಾತುರರಾಗಿದ್ದಾರೆ.

ರಾ- (ನಗುತ್ತ) ತಾಯಿ ! ತೋಷಿಕೋ ಸಮಾನರು ಮತ್ತೊಬ್ಬರು ಉಂಟ ? ಇನ್ನೊಮ್ಮೆ ಮದುವೆಯೆ ? ಆ ಮಾತೇ ನನಗೆ ಮಹಾ ಯಾತನೆಯನ್ನು ಉಂಟು ಮಾಡುತ್ತದೆ. ನಿಮ್ಮಲ್ಲಿ ನನಗೆ ತಂದೆ ತಾಯಿಗಳಿದ್ದಾರೆ. ಇನ್ನೇನು ಬೇಕು ? ಕತ್ತಲ ಗವಿಯಲ್ಲಿ ಮಾನವ ಸಂಪರ್ಕವೇ ಇಲ್ಲದ ಪಾತಾಳ ಲೋಕದಲ್ಲಿ, ನನ್ನೊಡನೆ ತೋಷಿಕೋ ಸಂಸಾರ ಮಾಡಿ, ಪ್ರೇಮ ಪುಣ್ಯೋದಕದಿಂದ ನನ್ನನ್ನು ಪುನೀತನನ್ನಾಗಿ ಮಾಡಿದಳು ! ಇನ್ನೊಂದು ಮದುವೆಯೆ? ಎಂಟು ವರ್ಷಗಳ ನಮ್ಮ ದಾಂಪತ್ಯ ಜೀವನ ಅಮೃತಮಯವಾಗಿತ್ತು ! ಸಾಕು.

ಕೊಕ್ಕೊ ಹೌ ಸೋಮಾ ಮೌನದಿಂದ ಕಣ್ಣಿರಿಟ್ಟಳು ರಾಸಬಿಹಾರಿಯನ್ನು ಕೊಂಡಾಡಿದಳು.

ಸಾಹಸದ ಜ್ಯೋತಿ ನಂದಿತು

೨೧-೦೧-೧೯೪೫ನೆ ದಿನ ಮಹಾವಿಪ್ಲವಿ ರಾಸಬಿಹಾರಿ ಬೋಸರು ಇಹಲೋಕವನ್ನು ತ್ಯಜಿಸಿ ವೀರ ಸ್ವರ್ಗ ಸೇರಿದರು. ಆ ಸಮಯದಲ್ಲಿ ’ವಂದೇ ಮಾತರಂ’ ಹಾಡಲಾಯಿತು. ಜಪಾನ್‌ರೇಡಿಯೋದಲ್ಲಿ ಚಕ್ರವರ್ತಿಗಳ ರಾಜ ಪ್ರಕಟಣೆ ಕೇಳಿಬಂತು. ಬೋಸರ ಪಾರ್ಥಿವ ಶರೀರವನ್ನು ಯೊಜೋಜಿ ದೇವಾಲಯಕ್ಕೆ ಒಯ್ಯಲಾಯಿತು. ಅದನ್ನೊಯ್ದುದಾದರೂ  ಸಾಮ್ರಾಟರ ಅರಮನೆಯಿಂದ ಕಳುಹಿಸಿದ ಅಲಂಕೃತವಾದ ವಾಹನದಲ್ಲಿ  !

ಸ್ವತಂತ್ರ ಭಾರತ ಇಂತಹ ವೀರರ ನೆನಪನ್ನು ಕೃತಜ್ಞತೆಯಿಂದ ಹೃದಯದಲ್ಲಿಟ್ಟು ಗೌರವಿಸುತ್ತದೆ.