ಗ್ರಾಮದಲ್ಲಿ ಒಬ್ಬಿಬ್ಬರು ಸಾವಯವ ಬೇಸಾಯ ಮಾಡುವುದು ರೂಢಿ, ಅದರಲ್ಲಿಯೂ ತೋಟವಿರುವವರೇ ಹೆಚ್ಚು. ಆದರೆ ಇಡೀ ಗ್ರಾಮವೇ ಒಗ್ಗೂಡಿ ಆ ಚಿಂತನೆ ಮಾಡುತ್ತಾ ತೋಟದ ಬೆಳೆ ಮಾತ್ರವಲ್ಲದೆ ಆಹಾರ ಬೆಳೆಗಳಲ್ಲಿಯೂ ಸಾವಯವದತ್ತ ಹೊರಳಿರುವುದು ಅಪರೂಪ. ತುಮಕೂರು ಜಿಲ್ಲೆಯಲ್ಲಿನ ಹಳ್ಳಿಯೊಂದರ ಅನುಭವ ಇದು. ಹೆದ್ದಾರಿಯಲ್ಲಿ ಹೋಗುತ್ತಿದ್ದವರು ಸಡನ್ನಾಗಿ ವಿರುದ್ಧ ದಿಕ್ಕಿನ ಮಣ್ಣು ರಸ್ತೆಗೆ ತಿರುಗಿ ನಡೆಯುತ್ತಿದ್ದಾರೆ.

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಚಿಕ್ಕಗೊರಘಟ್ಟ ೯೦ ಕುಟುಂಬಗಳ ಗ್ರಾಮ. ಊರಿನ ಹಿರಿ ತಲೆಗಳ ಪ್ರಕಾರ ‘ಗೊರಘಟ್ಟ’ ಎಂದರೆ ಕಠಿಣವಾದ ಪ್ರದೇಶ ಅಥವಾ ಗಡುಸು ಭೂಮಿ. ಹಿರಿಯರ ನೆನಪಿನಂತೆ ಈ ಗ್ರಾಮಕ್ಕೆ ಮೊಟ್ಟಮೊದಲು ೧೯೬೮ ರಲ್ಲಿ ‘ಸೂಪರ್’ ಹೆಸರಿನ ರಸಾಯನಿಕ ಗೊಬ್ಬರ ಬಂದಿತು. ಆಗ ಚೀಲವೊಂದಕ್ಕೆ ಕೇವಲ ೨೫ ರುಪಾಯಿ. ನಂತರ ಕಾಂಪ್ಲೆಕ್ಸ್ ಗೊಬ್ಬರ, ಒಂದೆರಡು ವರ್ಷಗಳ ನಂತರ ಜಯ iತ್ತು ಐ.ಆರ್.೮ ಸುಧಾರಿತ ಭತ್ತದ ತಳಿಗಳ ಪ್ರವೇಶವಾಯಿತು. ಅದರ ಹಿಂದೆಯೇ ಮೆಟಾಸಿಡ್, ರೋಗರ್ ಔಷಧಿಗಳು ಬಂದವು. ಇದು ಗ್ರಾಮದ ರಾಸಾಯನಿಕ ಕೃಷಿ ಇತಿಹಾಸ.

೨೦೦೭ ರಿಂದ ಗ್ರಾಮದಲ್ಲಿ ಸಾವಯವ ಕೃಷಿಗೆ ಚಾಲನೆ ದೊರೆಯಿತು. ರಾಸಾಯನಿಕ ಕೃಷಿಯಲ್ಲಿ ನಷ್ಟ ಹೊಂದುತ್ತಾ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದ ಗ್ರಾಮಸ್ಥರಿಗೆ ಇದು ವರದಾನದಂತೆ ಕಂಡು ಬಂದಿತು.  ಸಾವಯವ ಕೃಷಿಯಲ್ಲಿ ಪ್ರೀತಿಯುಳ್ಳವರು ಸೇರಿ ಶ್ರೀರಂಗ ಸಾವಯವ ಕೃಷಿ ಸಮಿತಿಯನ್ನು ರಚಿಸಿಕೊಂಡಿದ್ದು, ಗ್ರಾಮದ ಎಲ್ಲರೂ ಸಾವಯವ ಕೃಷಿ ಮಾಡಲು ಉತ್ತೇಜನ ನೀಡುತ್ತಿದೆ. ಅಲ್ಪ ಕಾಲದಲ್ಲಿಯೇ ಯಶಸ್ವಿಯೂ ಆಗಿದೆ.

ಮನೋಭಾವದಲ್ಲಿ ಬದಲಾವಣೆ

ಗ್ರಾಮದ ಜನರ ಜೊತೆ  ಒಡನಾಡಿದಾಗ ಕಂಡುಬಂದ ಪ್ರಮುಖ ಅಂಶ ಅವರ ಮನೋಭಾವದಲ್ಲಾಗಿರುವ ಬದಲಾವಣೆ. ಯಾವುದೋ ಒಂದು ಯೋಜನೆ ಬಂದಿದೆ, ಅದು ಇರುವಷ್ಟು ದಿನ ಮಾಡೋಣ ಎಂಬ ಉದಾಸೀನ ಯಾರಲ್ಲೂ ಕಂಡು ಬರುವುದಿಲ್ಲ.  ಸಾವಯವ ಕೃಷಿ ವಿಧಾನಗಳನ್ನು ಕಾಟಾಚಾರಕ್ಕೆ ಮಾಡದೇ ಆತ್ಮಪೂರ್ವಕವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಕೆಲವು ಉದಾಹರಣೆಗಳನ್ನು ನೋಡುವುದಾದರೆ;

ಸಾವಯವ ಕೃಷಿಯಲ್ಲಿ ಇಳುವರಿ ಕಡಿಮೆ ಎನ್ನುವುದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಅದೊಂದು ನಂಬಿಕೆಯಾಗಿಯೇ ಬೆಳೆದಿದೆ. ಆದರೆ ಚಿಕ್ಕಗೊರಾಘಟ್ಟದ ಹಲವಾರು ರೈತರು ಸಾವಯವದಲ್ಲೂ ಉತ್ತಮ ಇಳುವರಿ ಪಡೆಯಬಹುದೆಂದು ಸಾಧಿಸಿ ತೋರಿಸಿದ್ದಾರೆ. ಗ್ರಾಮದ ಚನ್ನಬಸವಯ್ಯ  ಮುಂಚೆಯಿಂದಲೂ ಅರ್ಧ ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಹಲವಾರು ವರ್ಷಗಳಿಂದ ರಸಗೊಬ್ಬರ ಬಳಸುವುದು ರೂಢಿ. ಆರಂಭದಲ್ಲಿ ಚೆನ್ನಾಗಿ ಇಳುವರಿ ಬರುತ್ತಿದ್ದುದು ೨೦೦೫ ಮತ್ತು ೨೦೦೬ ರಲ್ಲಿ ಅರ್ಧ ಎಕರೆಗೆ ೪ ರಿಂದ ೫ ಚೀಲ ರಸಗೊಬ್ಬರ ಬಳಸಿದರೂ ಬೆಳೆ ರೋಗಕ್ಕೆ ತುತ್ತಾಗಿ ಸಂಪೂರ್ಣ ಫ಼ೇಲಾಗುತ್ತದೆ.

೨೦೦೭ ರಲ್ಲಿ ಪೂರ್ತಿ ಸಾವಯವ ವಿಧಾನದಲ್ಲೇ ಭತ್ತ ಬೆಳೆಯುತ್ತಾರೆ. ಪೋಷಕಾಂಶವಾಗಿ ಅವರು ಕೊಡುವುದು ೪ ಡ್ರಂ ಜೀವಾಮೃತ ಮಾತ್ರ. ಆಶ್ಚರ್ಯವೆಂಬಂತೆ ಸಾವಯವದಲ್ಲಿ ಉತ್ತಮ ಬೆಳೆ ಬಂದು ಅರ್ಧ ಎಕರೆಗೆ ೧೦ ಚೀಲ (೭೦ ಕೆ.ಜಿ. ತೂಕ) ಇಳುವರಿ ಬರುತ್ತದೆ. ಅಕ್ಕಿಯ ತೂಕವೂ ಸಹ ಉತ್ತಮವಾಗಿತ್ತು ಎನ್ನುವ ಚನ್ನಬಸವಯ್ಯ ನಾನಿನ್ಯಾವತ್ತೂ ಸೀಮೆ ಗೊಬ್ರದ ಸುದ್ದಿಗೇ ಹೋಗಲ್ಲ ಎನ್ನುತ್ತಾರೆ.

ಮನೋಭಾವದಲ್ಲಾಗಿರುವ ಬದಲಾವಣೆಗೆ ಮತ್ತೊಂದು ಉದಾಹರಣೆ ಎಂದರೆ ಪ್ಲಾಸ್ಟಿಕ್ ಹಾಗೂ ಕೃಷಿ ತ್ಯಾಜ್ಯಗಳದ್ದು. ಯೋಜನೆಗೆ ಮುಂಚೆ ರೈತರು ತಮ್ಮ-ತಮ್ಮ ಹೊಲಗಳಲ್ಲಿನ ಕಸ-ಕಡ್ಡಿ, ಗರಿ, ಸೋಗೆ ಮುಂತಾದವನ್ನು ಗುಡ್ಡೆ ಹಾಕಿ ಸುಡುತ್ತಿದ್ದರು. ಆದರೆ ಈಗ ಗೊಬ್ಬರದ ಗುಂಡಿಗೆ ಹಾಕುತ್ತಾರೆ ಮತ್ತು ತೋಟದಲ್ಲಿ ಮುಚ್ಚಿಗೆಯಾಗಿ ಬಳಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಮಲ್ಲಿಕಯ್ಯ ಹೇಳುತ್ತಾರೆ, ಪ್ಲಾಸ್ಟಿಕ್ ಕವರ್ರುಗಳು ಕೊಳೀತಾವೆ ಅಂದ್ಕೊಂಡು ತೋಟಕ್ಕೆ ಹಾಕ್ತಾ ಇದ್ವಿ, ತರಬೇತಿ ಕೊಟ್ಟಮೇಲೇನೆ ನಮಗೆ ಅದು ಕೊಳೆಯುವುದಿಲ್ಲ ಅಂತ ಗೊತ್ತಾಗಿ ಎಲ್ಲಾ ಎತ್ತಿ ಬಿಸಾಕಿದ್ವಿ, ಅದೂ ಅಲ್ದೆ  ನಮ್ಮ ಹೊಲದ ಬದುಗಳಲ್ಲಿದ್ದ ಗ್ಲಿರಿಸೀಡಿಯಾ ಗಿಡಗಳನ್ನು ಕಡಿದು ಎಸೆಯುತ್ತಿದ್ದೆವು, ಈಗ ಕಡಿಯುವುದು ಬಿಟ್ಟಿದ್ದೇವೆ. ಗ್ರಾಮದ ಬಹುತೇಕ ರೈತರ ಅಭಿಪ್ರಾಯವೂ ಸಹ ಇದೇ ಆಗಿದೆ.

ಎಲ್ಲೆಲ್ಲೂ ಎರೆಗೊಬ್ಬರ

೪೫ಕ್ಕೂ ಅಧಿಕ ಮನೆಗಳವರು ಎರೆಹುಳು ತೊಟ್ಟಿ ಕಟ್ಟಿಕೊಂಡಿದ್ದಾರೆ. ಶಿವಣ್ಣ, ಭಾಗ್ಯಮ್ಮ, ಮಲ್ಲಿಕಣ್ಣ, ಬಸವರಾಜು, ಪ್ಯರುಷೋತ್ತಮ್, ಗಿರಿಜಮ್ಮ, ಚನ್ನಬಸವಯ್ಯ ಮುಂತಾದ ಹಲವಾರು ರೈತರು ಕ್ವಿಂಟಾಲ್‌ಗಟ್ಟಲೆ ಗೊಬ್ಬರ ತೆಗೆದು ಬಳಸುತ್ತಿದ್ದಾರೆ. ಅದರಲ್ಲಿ ತುಂಬಾ ಯಶಸ್ವಿಯಾದ ಇಬ್ಬರು ರೈತರೆಂದರೆ ಆರ್,ಶಿವಲಿಂಗಯ್ಯ ಮತ್ತು  ಮಲ್ಲಿಕಯ್ಯ.

ಆರ್.ಶಿವಲಿಂಗಯ್ಯನಿಗೆ ೮ ಎಕರೆ ಜಮೀನಿದೆ. ಅಲ್ಲಿರುವ ಪುಟ್ಟ ಮನೆಯ ಪಕ್ಕದಲ್ಲೇ ಎರೆಹುಳು ತೊಟ್ಟಿ, ಅಜ಼ೋಲಾ ಗುಂಡಿ, ಕಾಂಪೋಸ್ಟ್ ತೊಟ್ಟಿ ಹಾಗೂ  ಕೃಷಿ ಹೊಂಡ ಮಾಡಿಕೊಂಡಿದ್ದಾರೆ. ಸದಾ ಹೊಲದಲ್ಲಿಯೇ ಇದ್ದು ಬೇಸಾಯ ಮಾಡುವ ಇವರು ತರಕಾರಿ ಮತ್ತು ಬಾಳೆ ಬೆಳೆಯುವುದರಲ್ಲಿ ನಿಸ್ಸೀಮರು. ಬಾಳೆ ತೋಟದಲ್ಲಿ ಪೋಷಕಾಂಶ ನಿರ್ವಹಿಸಲು ಹುರುಳಿ ಮತ್ತು ಅಲಸಂದೆ ಚೆಲ್ಲಿದ್ದು ಅದು ಇಡೀ ತೋಟವನ್ನು ನೆಲ ಕಾಣದಂತೆ ಮುಚ್ಚಿ ಬೆಳೆದಿದೆ. ಇದರಿಂದ ಬಾಳೆಯ ಫಸಲೂ ಸಹ ಉತ್ತಮವಾಗಿದ್ದು ಅಧಿಕ ಗಾತ್ರದ ಗೊನೆಗಳು ಸಿಗುತ್ತಿವೆ ಎನ್ನುತ್ತಾರೆ ಶಿವಲಿಂಗಯ್ಯ.

ಸಂಪೂರ್ಣ ಸಾವಯವದಲ್ಲೇ ರಾಗಿ ಬೆಳೆದು ಯಶಸ್ವಿಯಾಗಿರುವುದು ಇವರ ಮತ್ತೊಂದು ಸಾಧನೆ. ಅರ್ಧ ಎಕರೆಯಲ್ಲಿ ಕೇವಲ ಜೀವಾಮೃತ ಮತ್ತು ಎರೆಹುಳು ಗೊಬ್ಬರ ಬಳಸಿ ರಾಗಿ ಬೆಳೆದಿದ್ದು ಉತ್ಕೃಷ್ಟ ಇಳುವರಿ ಬಂದಿದೆ. ರಾಗಿಗೆ ೩ ಸಲ ದ್ರವರೂಪದ ಜೀವಾಮೃತ ಕೊಟ್ಟಿದ್ದಾರೆ. ಆರಂಭದಲ್ಲಿ ಎರೆಹುಳು ಸಾಕಲು ಮುಂದಾದಾಗ ಎಲ್ಲರೂ ಆಡಿಕೊಂಡಿದ್ದರಂತೆ, ಆದರೆ ಈಗ ಅವರು ತಮ್ಮ ೧೨ ಅಡಿ ಉದ್ದ ಮತ್ತು ೬ ಅಡಿ ಅಗಲದ ಎರೆ ಹುಳು ಗುಂಡಿಯಲ್ಲಿ ೧೫ ಕ್ವಿಂಟಾಲ್‌ಗೂ ಅಧಿಕ ಗೊಬ್ಬರ ತೆಗೆದಿದ್ದು ಅದರಲ್ಲಿ ೧೦ ಕ್ವಿಂಟಾಲ್ ನ್ನು ತಮ್ಮ ತೆಂಗು ಮತ್ತು ಅಡಿಕೆ ಮರಗಳಿಗೆ ಹಾಕಿದ್ದಾರೆ.

ಗಂಜಲಕ್ಕೆ ಕಾಯಕಲ್ಪ!

ನಮ್ ತಂದೆಯವರ ಕಾಲದಲ್ಲಿ ಗಂಜಲ ಕೂಡಾಕಿ ಅದುನ್ನ ತಿಪ್ಪೆಗೆ ಹಾಕ್ತಾ ಇದ್ವಿ, ಅದ್ರಿಂದ ತಿಪ್ಪೆ ಗೊಬ್ರ ಬಲೆ ಚೆನ್ನಾಗಿರದು, ಆದ್ರೆ ನಮ್ ಕಾಲ್ದಲ್ಲಿ ಗಂಜಲ ಕೂಡಾಕದನ್ನೆ ಬಿಟ್ ಬಿಟ್ಟಿದ್ವಿ, ಈ ಯೋಜನೆ ಬಂದ್ ಮೇಲೆ ಎಲ್ಲಾ ಕೊಟ್ಟಿಗೆಗಳಿಗೂ ಗಂಜಲದ ಗುಂಡಿ ಬಂದವೆ, ವಾರಕ್ಕೊಂದ್ ಸಲ ಗಂಜಲ ಎತ್ತಿ ಅಡಿಕೆ, ತೆಂಗು, ಬಾಳೆ ಗಿಡದ ಬುಡಕ್ಕೆ ಹಾಕ್ತಾ ಇದ್ದಿವಿ, ತಿರಗ ನಮ್ ತಂದೆ ಕಾಲದ ಪದ್ಧತಿ ವಾಪಸ್ ಬಂದಿದ್ದು ನಮಗೆ ಖುಶಿಯಾಗಿದೆ. ಮಹದೇವಯ್ಯ, ಬಸವರಾಜು, ಸದಾನಂದ, ಗಿರಿಜಮ್ಮ ಮುಂತಾದ ಹಲವರು ಹೇಳಿದ ಮಾತುಗಳಿವು.

ಸಾವಯವ ಕೃಷಿಗೆ ಮೂಲಭೂತ ಅಂಶ ಮಣ್ಣು-ನೀರಿನ ಸಂರಕ್ಷಣೆ. ದಶಕಗಳಿಂದ ರಾಸಾಯನಿಕಗಳನ್ನು ಬಳಸಿ ಬರಡಾಗಿರುವ ಮಣ್ಣನ್ನು ಹದ ಮಾಡಲು ಮೊದಲು ಆಗಬೇಕಾದ ಕೆಲಸ ಇದು. ಇದನ್ನು ಮನಗಂಡು ಕೃಷಿ ಹೊಂಡ ಮತ್ತು ಉದಿ-ಬದು ಹಾಕಲು ಅವಕಾಶ ಕಲ್ಪಿಸಲಾಗಿದೆ. ಸಿ.ಕೆ.ಬಸವರಾಜು, ಶಿವಣ್ಣ, ಮಲ್ಲಿಕಯ್ಯ ಮುಂತಾದ ಹಲವರು ಇದರ ಪ್ರಯೋಜನ ಪಡೆದಿದ್ದಾರೆ. ಅದರಲ್ಲಿ ಮಲ್ಲಿಕಯ್ಯನ ಕೃಷಿಹೊಂಡ ಈ ಸಲ ಅವರ ತೋಟಕ್ಕೆ ಜೀವ ನೀಡಿದೆ. ಅವರ ಪಂಪ್‌ಸೆಟ್ಟಿನ ಮೋಟಾರ್ ಸುಟ್ಟುಹೋಗಿ ಎರಡು ತಿಂಗಳ ಕಾಲ ನೀರಿಗೆ ಪರದಾಟವಾದಾಗ ಕೃಷಿ ಹೊಂಡದಲ್ಲಿದ್ದ ನೀರಿನ ಜೌಗು ತೋಟವನ್ನು ಕಾಪಾಡಿದೆ.

ಯುವಕರಿಗೊಲಿದ ಸಾವಯವ

ಸಾಮಾನ್ಯವಾಗಿ ಯುವಕರು ಸಾವಯವ ಕೃಷಿಯನ್ನು ಅನುಮಾನದಿಂದ ನೋಡುವುದೇ ಹೆಚ್ಚು. ಇಲ್ಲಿ ಪರಿಸ್ತಿತಿ ಇದಕ್ಕೆ ವಿರುದ್ದ, ಯುವಕರೇ ಮುಂದಾಗಿ ಸಾವಯವ ಕೃಷಿಗೆ ಕೈಹಾಕಿದ್ದಾರೆ. ಅದಕ್ಕೆ ಉದಾಹರಣೆ ಪುರುಷೋತ್ತಮ್. ತಮ್ಮ ೫೦೦ ಗಿಡ ಬಾಳೆಗೆ ಹಸಿರೆಲೆ ಕಾಂಪೋಸ್ಟ್, ಎರೆಹುಳುತೊಟ್ಟಿ ಮುಂತಾದುವುಗಳ ಜೈವಿಕ ಗೊಬ್ಬರ ಬಳಕೆ ಮಾಡುವುದಲ್ಲದೆ ರೋಗ ನಿವಾರಣೆಗಾಗಿ ತಮ್ಮದೇ ಆದ ಪದ್ಧತಿಯೊಂದನ್ನು ಕಂಡುಹಿಡಿದಿದ್ದಾರೆ. ಬಾಳೆಗೆ ಅಲ್ಲಲ್ಲಿ ಬೆಂಕಿರೋಗ ಕಾಣಿಸಿಕೊಂಡಿತು. ರಾಸಾಯನಿಕ ಕೀಟನಾಶಕ ಸಿಂಪಡಿಸಿದರೂ ಸಹ ಯಾವುದೇ ಪರಿಣಾಮ ಕಂಡುಬರಲಿಲ್ಲ. ಆದರೆ ಇವರೇ ತಯಾರಿಸಿದ ದೇಸೀ ಔಷಧದಿಂದ ರೋಗ ಕಡಿಮೆಯಾಗುತ್ತಿದೆ. ಅದರ ತಯಾರಿಕಾ ವಿಧಾನ ಹೀಗಿದೆ.

೫ ಬಿಂದಿಗೆ ಗಂಜಲ, ೪ ಕೆ.ಜಿ. ಕಂಡುಬೆಲ್ಲ, ೧೦ ಲೀಟರ್ ನಷ್ಟು ಬೇವಿನ ರಸ, ೧ ಸೇರು ಸುಣ್ಣದ ನೀರು – ಇವುಗಳನ್ನೆಲ್ಲಾ ಒಂದು ದೊಡ್ಡ ಗುಡಾಣಕ್ಕೆ ಮಿಶ್ರ ಮಾಡಿ ಹಾಕಿ ೧೦ ದಿವಸ ಹಾಗೇ ಕೊಳೆಯಲು ಬಿಡಬೇಕು. ನಂತರ ಆ ಕಷಾಯವನ್ನು ಕುಂಚುಮಟ್ಟೆಯಿಂದ ಬಾಳೆಗೆ ಸಿಂಪಡಿಸಿದ್ದಾರೆ. ಇದರಿಂದ ಬಾಳೆಯ ಬೆಂಕಿ ರೋಗ ಹತೋಟಿಗೆ ಬಂದಿದೆ ಎನ್ನುತ್ತಾರೆ ಪುರುಷೋತ್ತಮ್. ಇದರ ಸಿಂಪರಣೆಯ ನಂತರ ಜೇನುಹುಳುಗಳು ಬರಲು ಆರಂಭಿಸಿರುವುದನ್ನು ಗಮನಿಸಿದ್ದಾರೆ.

ಸಿ.ಕೆ.ಬಸವರಾಜು ೮೦ ರ ದಶಕದಲ್ಲಿಯೇ ಅಡಿಕೆ ಮತ್ತು ತೆಂಗಿನ ಗಿಡಗಳಿಗೂ ರಾಸಾಯನಿಕ ಗೊಬ್ಬರ ಬಳಸಲು ಶುರು ಮಾಡುತ್ತಾರೆ. ಆರಂಭದಲ್ಲಿ ಉತ್ತಮ ಫಸಲು ಸಿಕ್ಕರೂ ೮-೧೦ ವರ್ಷಗಳ ನಂತರ ಇಳುವರಿ ಕಡಿಮೆಯಾಯಿತು.  ವಿಪರೀತ ರಾಸಾಯನಿಕಗಳ ಬಳಕೆಯಿಂದಾಗಿ ತೆಂಗಿನ ಮರಗಳಲ್ಲಿ ಕಾಂಡ ಸೋರುವಿಕೆ ಮತ್ತು ಅಡಿಕೆ ಮರಗಳಲ್ಲಿ ಬೇರುಕೊಳೆಯುವಿಕೆ ಪ್ರಾರಂಭವಾಯಿತು. ಹಲವಾರು ವಿಧಾನ ಅನುಸರಿಸಿದರೂ ಸಹ ಪ್ರಯೋಜನ ಕಾಣಲಿಲ್ಲ. ತರಬೇತಿಯಲ್ಲಿ ಭಾಗವಹಿಸಿದ ನಂತರ ತೆಂಗು ಮತ್ತು ಅಡಿಕೆಗೆ ಜೀವಾಮೃತ ಕೊಡಲು ಆರಂಭಿಸಿದರು. ಜೊತೆಗೆ ಟ್ರೈಕೊಡರ್ಮ ಸಹ ಬಳಸಲು ಆರಂಭಿಸಿದರು. ಆಶ್ಚರ್ಯಂಬಂತೆ ಇದರಿಂದ ರೋಗ ಹತೋಟಿಗೆ ಬರುತ್ತಿದೆ. ಇವರ ಮಾವಿನ ತೋಟ ಸಂಪೂರ್ಣ ಸಾವಯವ. ಹಣ್ಣುಗಳ ಗಾತ್ರ, ರುಚಿ ಎರಡೂ ಉತ್ಕೃಷ್ಟ.

ಊರಿನಾದ್ಯಂತ ಸಾವಯವ ಕೃಷಿಗೆ ಸಂಬಂಧಿಸಿದ ಗೋಡೆ ಬರಹಗಳನ್ನು ನೋಡಬಹುದು. ಕಾಂಪೋಸ್ಟ್ ತಯಾರಿಕೆ, ಎರೆಗೊಬ್ಬರದ ಮಹತ್ವ, ನಾಟಿಬೀಜಗಳ ಬಗ್ಗೆ, ಗಂಜಲದ ಗುಟ್ಟು ಹೀಗೆ ಸಾವಯವಕ್ಕೆ ಸಂಬಂಧಿಸಿದ ಮಾಹಿತಿ ಬರೆಯಲಾಗಿದೆ. ಇದು ಊರಿನಲ್ಲಿ ಸಾವಯವ ವಾತಾವರಣ ಬೆಳೆಯಲು ಸಹಕಾರಿ.

ಸಾವಯದಲ್ಲಿ ಬೆಳೆದ ವಸ್ತುಗಳಿಗೆ ತಾವೇ ಸ್ವತಃ ಮಾರುಕಟ್ಟೆ ವ್ಯವಸ್ತೆ ಮಾಡಿಕೊಳ್ಳಬೇಕು, ಮೌಲ್ಯವರ್ಧನೆ ಮಾಡಬೇಕು, ಇನ್ನೆರಡು ವರ್ಷದಲ್ಲಿ  ಶೇಕಡ ೧೦೦ ರಷ್ಟು ಸಾವಯವ ಗ್ರಾಮವನ್ನಾಗಿ ಪರಿವರ್ತಿಸಬೇಕು, ಸಾವಯವ ಸರ್ಟಿಫ಼ಿಕೇಶನ್ ಪಡೆದುಕೊಳ್ಳಬೇಕು ಮುಂತಾದ ಅನೇಕ ಕನಸುಗಳನ್ನು ಸಮಿತಿಯು ಇಟ್ಟುಕೊಂಡಿದೆ. ಕೃಷಿ ಸಹಾಯಕ ಶ್ರೀ ಮಹಮದ್ ಹನೀಫ಼್‌ರವರು ಇಲ್ಲಿ ಜನರ ಯುನಿಟಿ ಚೆನ್ನಾಗಿದೆ, ಅಂದುಕೊಂಡಿದ್ದನ್ನು ಸಾಧಿಸುತ್ತಾರೆ, ಪ್ರಸ್ತುತ ರಾಜ್ಯದಲ್ಲಿ ರಾಸಾಯನಿಕ ಗೊಬ್ಬರದ ಗಲಾಟೆಯನ್ನು ನೋಡುತ್ತಿದ್ದರೆ ಜನರು ಬೇಗ ಸಾವಯವ ಕೃಷಿ ಅಳವಡಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಎಂದು ಅಭಿಪ್ರಾಯಪಡುತ್ತಾರೆ. ಸಾವಯವ ಬೇಸಾಯವೂ ಸಹ ಲಾಭದಾಯಕ ಎಂಬುದು ಒಂದು ಸಾರಿ ರೈತರಿಗೆ ಮನವರಿಕೆಯಾದರೆ ಯೋಜನೆ ಮುಕ್ಕಾಲು ಪಾಲು ಯಶಸ್ವಿಯಾದಂತೆ, ಇದನ್ನು ಗೊರಘಟ್ಟದ ರೈತರು ಬೇಗ  ಅರ್ಥಮಾಡಿಕೊಂಡಿದ್ದಾರೆ ಎಂಬುದು ಸಾವಯವ ಗ್ರಾಮ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಆರ್ಡರ್ ಸಂಸ್ಥೆಯ ಯೋಜನಾ ನಿರ್ದೇಶಕ ಜಿ.ವಿ.ರಘುರವರ ಅಭಿಪ್ರಾಯ.

ಹಗಲು ನಿದ್ದೆ ಬಿಟ್ಟ’ ಭಾಗ್ಯಮ್ಮ
ಸಾವಯವ ಕೃಷಿ ಆರಂಭಿಸಿದ ಮೇಲೆ ನಿಮ್ಮಲ್ಲಿ ಏನು ಬದಲಾವಣೆ ಆಗಿದೆ? ಎಂದು ಪ್ರಶ್ನಿಸಿದಾಗ ಗ್ರಾಮದ ಭಾಗ್ಯಮ್ಮ ಥಟ್ಟನೆ ಕೊಟ್ಟ ಉತ್ತರ,  ಹಗಲು ನಿದ್ದೆ ಮಾಡೋದು ಬಿಟ್ಟಿದ್ದೇನೆ ಅದಕ್ಕವರು ನೀಡುವ ವಿವರಣೆ;  ಮುಂಚೆ ಕೆಲಸ ಕಡಿಮೆ ಇತ್ತು. ಮದ್ಯಾಹ್ನಕ್ಕೆಲ್ಲಾ ಮನೆ ಕೆಲಸ ಮುಗಿಯುತ್ತಿದ್ದುದರಿಂದ ಸಹಜವಾಗಿಯೇ ನಿದ್ದೆ ಮಾಡುತ್ತಿದ್ದೆ, ಈಗ ಪುರುಸೊತ್ತೇ ಸಿಗುವುದಿಲ್ಲ, ಎರೆಗೊಬ್ಬರದ ಗುಂಡಿಗೆ ಸೊಪ್ಪು-ಸೆದೆ ಹಾಕುವುದು, ಅದನ್ನು ನಿಗಾ ಮಡುವುದು, ಅಜ಼ೊಲ್ಲಾ ಗುಂಡಿ ಸರಿಮಾಡುವುದು, ಕಾಂಪೋಸ್ಟ್ ಗುಂಡಿಗೆ ಕಸ-ಕಡ್ಡಿ ಹಾಕಿ ಮುಚ್ಚುವುದು, ಗಂಜಲದ ಗುಂಡಿಯಿಂದ ಗಂಜಲ ತೆಗೆದು ಗಿಡಗಳಿಗೆ ಹಾಕುವುದು ಮುಂತಾದ ಅನೇಕ ಕೆಲಸಗಳಿರುತ್ತವೆ. ಜೊತೆಗೆ ಕಾಳಿನ ಹಪ್ಪಳಕ್ಕೆ ಸ್ವಲ್ಪಮಟ್ಟಿಗೆ ಮಾರುಕಟ್ಟೆ ಸಿಕ್ಕಿರುವುದರಿಂದ ಬಿಡುವಾದಾಗಲೆಲ್ಲಾ ಹಪ್ಪಳ ಮಾಡುತ್ತೇನೆ, ಸಂಜೆಯಾದರೆ ಎಮ್ಮೆ ಹಾಲು ಕರೆಯುವುದು, ಡೈರಿಗೆ ಹಾಕುವುದು ಇದ್ದೇ ಇರುತ್ತದೆ. ಹೀಗೆ  ಹಲವಾರು ಕೆಲಸಗಳನ್ನು ಪಟ್ಟಿ ಮಾಡುತ್ತಾರೆ. ಹಾಗಾಗಿಯೇ ಅವರಿಗೆ ನಿದ್ದೆ ಮಾಡಲು ಸಮಯ ಸಿಕ್ಕುವುದಿಲ್ಲ. ನಿದ್ದೆ ಬಿಟ್ಟಿರುವುದರ ಬಗ್ಗೆ ಅವರಿಗೆ ಖುಷಿ ಆಗಿದೆಯೇ ಹೊರತು ದುಃಖವೇನೂ ಇಲ್ಲ. 

ಅಜ಼ೋಲ್ಲಾವನ್ನು ಎಮ್ಮೆಗೆ ತಿನ್ನಿಸಿ ಅರ್ಧ ಲೀಟರ್ ಹಾಲು ಹೆಚ್ಚಿಗೆ ಕರೆಯುವಂತೆ ಮಾಡಿರುವುದು ಇವರ ವಿಶೇಷ ಸಾಧನೆ. ತರಬೇತಿಯೊಂದರಲ್ಲಿ ಅಜ಼ೊಲ್ಲಾವನ್ನು ಕರೆಯುವ ಎಮ್ಮೆ-ಹಸುಗಳಿಗೆ ತಿನ್ನಿಸಿದರೆ ಹಾಲು ಹೆಚ್ಚುತ್ತದೆ ಎಂದು ತಿಳಿದ ಮೇಲೆ, ಕೂಡಲೇ ತಮ್ಮ ಎಮ್ಮೆಗೆ ಅದನ್ನು ಭತ್ತದ ತೌಡಿನ ಜೊತೆ ತಿನ್ನಲು ಕೊಡುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಸುಮಾರು ಒಂದು ಕೆ.ಜಿ.ಯಷ್ಟು ಅಜ಼ೊಲ್ಲಾ ಕೊಡುತ್ತಾರೆ. ಇದು ಭಾಗ್ಯಮ್ಮನವರ ಪ್ರಯೋಗಶೀಲತೆಗೆ ಉತ್ತಮ ಉದಾಹರಣೆ. ಇವರು ಸಾವಯವ ಕೃಷಿ ಸಮಿತಿಯ ಸದಸ್ಯರೂ ಹೌದು.