ಹಲವು ತಲೆಮಾರುಗಳ ಸಂಗೀತ ಪರಂಪರೆಯನ್ನು ಹೊಂದಿರುವ ಮನೆತನದಲ್ಲಿ ವಿದ್ವಾನ್‌ ಬಿ. ರಾಮಯ್ಯ ಮತ್ತು ವಿದುಷಿ ವರಲಕ್ಷ್ಮೀಯವರ ಜ್ಯೇಷ್ಠ ಪುತ್ರರಾಗಿ ೧೯೧೫ ರಲ್ಲಿ ಜನಿಸಿದ ಚಂದ್ರಶೇಖರಯ್ಯನವರು ಬಿ.ಕೆ. ಪದ್ಮನಾಭರಾಯರು ಹಾಗೂ ಎಂ.ವಿ. ವೆಂಕಟರಾಮಯ್ಯ ಅವರಿಂದ ಶಿಕ್ಷಣ ಪಡೆದು ಸಂಗೀತದ ಲಕ್ಷ್ಯ-ಲಕ್ಷಣಗಳೆರಡರಲ್ಲೂ ಅಧಿಕಾರಯುತವಾದ ಜ್ಞಾನ ಸಂಪಾದಿಸಿಕೊಂಡರು.

‘ಮೈಸೂರು ಸೋದರ’ರೆಂದೇ ವಿಖ್ಯಾತರಾಗಿದ್ದ ಚಂದ್ರಶೇಖರಯ್ಯ ಮತ್ತು ಅವರ ಸಹೋದರರ ಯುಗಳ ಗಾಯನ ದೇಶದ ಹಲವೆಡೆ ನಡೆಯಿತು. ‘ಶ್ರೀ ವರಲಕ್ಷ್ಮೀ ಅಕಾಡೆಮಿ ಆಫ್‌ಫೈನ್‌ ಆರ್ಟ್ಸ್‌’ನ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿದರು. ಇಂಗ್ಲೆಂಡ್‌, ಯೂರೋಪ್‌ ದೇಶಗಳಲ್ಲೂ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟಿದ್ದರು.

ವಾಣಿಜ್ಯಶಾಸ್ತ್ರದಲ್ಲಿ ಪದವೀಧರರಾಗಿದ್ದ ಇವರು ತಾಯಿಯಿಂದಲೇ ಉಪದೇಶ ಪಡೆದು ‘ಶ್ರೀ ವಿದ್ಯೋಪಾಸಕ’ರೂ ಆಗಿದ್ದರು. ತ್ರಿಭಾಷಾ ಪಂಡಿತರಾಗಿ ಮೂನ್ನೂರಕ್ಕೂ ಹೆಚ್ಚು ಕೃತಿ-ಕೀರ್ತನೆಗಳನ್ನು ರಚಿಸಿದ ವಾಗ್ಗೇಯಕಾರರು. ವಿಶೇಷ ಪಲ್ಲವಿಗಳ ಪ್ರಸ್ತುತಿಯಲ್ಲಿ ಅತಿ ಹೆಚ್ಚಿನ ಪರಿಣತಿ ಪಡೆದಿದ್ದರು. ಜ್ಯೋತಿಶಾಸ್ತ್ರಜ್ಞರೂ ಆಗಿದ್ದುದು ಇವರ ಇನ್ನೊಂದು ಮುಖ. ಸರಳ ಸಜ್ಜನಿಕಲೆಯ ಸಾತ್ವಿಕ ಮೂರ್ತಿಯಂತಿದ್ದ ಇವರ ಮಿತ್ರತ ಬಳಗ ಬಹಳ ದೊಡ್ಡದು. ಅನೇಕ ಗ್ರಂಥಗಳನ್ನು ಸಂಗೀತ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ಇವರಿಗೆ ದೊರೆತ ಗೌರವ ಸನ್ಮಾನಗಳೂ ಅಸಂಖ್ಯಾತ.

‘ನಾಟ್ಯಶಾಸ್ತ್ರ ಕೋವಿದ’, ‘ಭರತಶಾಸ್ತ್ರ ಪ್ರವೀಣ’, ‘ವಾಗ್ಗೇಯಗಾನ ಭಾರತಿ’, ‘ಸಂಗೀತ ರತ್ನಾಕರ’, ‘ಸಂಗೀತ ಕಲಾರತ್ನ’, ‘ಗಾನ ರತ್ನಾಕರ’, ‘ವಾಗ್ಗೇಯ ವಿದ್ಯಾವಾರಿಧಿ’, ‘ಕರ್ನಾಟಕ ಕಲಾತಿಲಕ’ ಇತ್ಯಾದಿ ನಾನಾ ಬಿರುದುಗಳಿಂದ ಅಲಂಕೃತರಾಗಿದ್ದ ಚಂದ್ರಶೇಖರಯ್ಯನವರ ಸಾರ್ಥಕ ಜೀವನಯಾತ್ರೆ ೧೭-೧೧-೯೯ ರಲ್ಲಿ ಅಂತ್ಯವಾಯಿತು.